Saturday, January 2, 2010

ಕವಬಾಟನ ‘ಸಾವಿರ ಪಕ್ಷಿಗಳು’


ಯಸುನಾರಿ ಕವಬಾಟ- ಜಪಾನೀ ಸಾಹಿತ್ಯದಲ್ಲಿ ಅತಿ ವಿಶಿಷ್ಟವಾದ ಧ್ವನಿ. ಮೊಟ್ಟ ಮೊದಲ ಬಾರಿಗೆ ಜಪಾನಿನ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ಈತನದು. ತನ್ನ ಸರಳವಾದ ಗದ್ಯದಿಂದಲೇ ಮಹತ್ತರವಾದ, ಜೀವನದ ಅನೇಕ ಸಂಕೀರ್ಣಗಳ ಅರ್ಥವನ್ನು ಹುಡುಕಹೊರಟು ಅದರಲ್ಲಿ ಯಶಸ್ಸನ್ನು ಪಡೆದಾತ. ಭಾಷೆ ಸರಳವಾಗುತ್ತಾ ಹೋದಲ್ಲಿ ಅಪ್ರಯತ್ನಪೂರ್ವಕವಾಗಿ ಹೇಳುವ ಕಥನವೂ, ಆಯ್ದುಕೊಳ್ಳುವ ವಿಷಯಗಳೂ ಸರಳವಾಗುತ್ತವೆ ಎಂಬ ನಂಬಿಕೆಗೆ ತದ್ವಿರುದ್ಧವಾದ ಚಿಂತನಕ್ರಮ ಈತನದು. ಭಾಷೆಯನ್ನು ಮೇಣದಂತೆ ತನಗೆ ಬೇಕಾದ ಅಭಿವ್ಯಕ್ತಿಗೆ ರೂಡಿಸಿಕೊಂಡದ್ದು ಈತನ ಸಾಧನೆ. ಎಲ್ಲಿಯೂ ಈತ ಝಳಪಿಸುವುದಿಲ್ಲ, ಬೊಬ್ಬೆ ಹಾಕುವುದಿಲ್ಲ ಅಥವಾ ಗರ್ಜಿಸುವುದಿಲ್ಲ. ತನ್ನ ಮೃದುವಾದ ಧ್ವನಿಯಲ್ಲಿಯೇ ಮೆದುವಾದ, ಆಪ್ತವಾದ ಆದರೆ ಅಷ್ಟೇ ಗರಿಮುರಿಯಾದ ಗದ್ಯವನ್ನು ಉಣಬಡಿಸುವುದು ಈತನ ವೈಶಿಷ್ಟ್ಯ. ಭಾಷೆ ಸರಳವಾದಷ್ಟೂ ಸಂಕೀರ್ಣ ಸಂಗತಿಗಳು ಓದುಗರಿಗೆ ಹೆಚ್ಚು ಆಪ್ತವಾಗುತ್ತವೆ ಎಂತಲೇ ಈತ ಕೊನೆತನಕ ನಂಬಿದ್ದ. ಈತನ ಕಥನದ ಶೈಲಿ ಹೈಕುಗಳಿದ್ದಂತೆ, ಮೂರೇ ಸಾಲಿನಲ್ಲಿ ಹೇಳಬೇಕಾದ್ದು ಹೇಳಿ ಇನ್ನೂ ಏನೋ ಇದೆ ಎನಿಸುವ, ಮತ್ತಿನ್ನಷ್ಟು ಓದಬೇಕು ಎನಿಸುವ ಹೃದ್ಯ ಶೈಲಿ ಈತನದು.

ಕವಬಾಟನ ಒಟ್ಟು ಕಥನದ ಥೀಮ್-ಸ್ಥೂಲವಾಗಿ ಹೇಳಬೇಕೆಂದರೆ ‘ತೀವ್ರವಾದ ಹಂಬಲ’. ಈ ತೀವ್ರವಾದ ತೀರದ ಹಂಬಲ ಅವನ ಮಹತ್ವದ ಕಾದಂಬರಿಗಳಾದ ‘ಸ್ನೋ ಕಂಟ್ರಿ’ ‘ಥೌಸೆಂಡ್ ಕ್ರೇನ್ಸ್’ ಮುಂತಾದುವುಗಳಲ್ಲಿ ಪುನರಾವರ್ತಿತವಾಗಿವೆ, ಈ ಹಂಬಲವೇ ನಮ್ಮ ಜೀವನದ ಉಸಿರು ಎಂದು ತಿಳಿದಾತ. ಈ ಹಂಬಲ ಎಷ್ಟು ತೀವ್ರವಾಗಿರಬೇಕೆಂದರೆ ಅದರ ಸಾಧನೆಯ ಹಾದಿಯಲ್ಲಿ ನಾವು ಮುಕ್ತಿಹೊಂದಬೇಕೇ ಹೊರತು ಸಾಧಿಸಿಬಿಟ್ಟರೆ ಈ ಹಂಬಲಕ್ಕೇ ಅರ್ಥವಿರುವುದಿಲ್ಲ ಎನ್ನುವುಷ್ಟು ಅಚಲವಾಗಿತ್ತು ಆತನ ನಂಬಿಕೆ. ಹಾಗಾಗಿಯೇ ಯಶಸ್ಸಿನ ಬಗ್ಗೆಯೂ ಆತನಿಗೆ ನಂಬಿಕೆಯಿರಲಿಲ್ಲ. ಈ ರೀತಿಯ ತೀರದ ಹಂಬಲವನ್ನು ಆತನೇ ಕೆಲವುಕಡೆ ‘ವ್ಯರ್ಥ ಪ್ರಯತ್ನ’(Wasted efforts)ಗಳೆಂದು ಕರಕೊಂಡಿದ್ದಾನೆ. ಇಂಥ ಪ್ರಯತ್ನದಲ್ಲಿ ಕೂಡ ಬದುಕನ್ನು ತೀವ್ರವಾಗಿ ಅನುಭವಿಸುವ ಹಂಬಲವಿದ್ದಾಗ ಅದು ವ್ಯರ್ಥವಲ್ಲ ಎಂದು ಈತನ ನಂಬಿಕೆ.

ಈತ ನಿತ್ಯನಗರಿಯ ತಾಕಲಾಟವನ್ನು ಬರೆಯುವ ವಾಸ್ತವವಾದಿ ಬರಹಗಾರರನ್ನು ದ್ವೇಷಿಸುತ್ತಿದ್ದ. ಆತನಿಗೆ ಸೌಂದರ್ಯದ ಅಸ್ತಿತ್ವದ ಬಗ್ಗೆ ಬಹಳವಾದ ನಂಬಿಕೆಯಿದ್ದಿದ್ದಷ್ಟೇ ಅಲ್ಲ, ಈ ಸೌಂದರ್ಯವನ್ನು ಅರಸುವುದು ಮತ್ತು ಅದನ್ನು ಅದನ್ನು ತೀರ ಶುದ್ಧವಾಗಿ ತನ್ನ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರ ಪ್ರಯತ್ನದಲ್ಲಿ ಯಾವತ್ತೂ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ.. ‘ಈ ಬದುಕೆಂಬುದು ಸತ್ಯ- ಮಿಥ್ಯಗಳ, ಶುದ್ಧ- ಅಶುದ್ಧಗಳ, ಪ್ರಾಮಾಣಿಕತೆ- ಕೃತ್ರಿಮಗಳ ಸಂಗಮ. ಒಬ್ಬ ಕಾದಂಬರಿಕಾರ ಸತ್ಯ, ಶುದ್ಧ, ಪ್ರಾಮಾಣಿಕವಾದವುಗಳನ್ನು ಹೆಕ್ಕಿ, ಜೋಡಿಸಿ ದೈನಿಕವನ್ನು ಮೀರಿದ ಸುಂದರ ವಾಸ್ತವವನ್ನು ಸೃಷ್ಟಿಸಬೇಕು. ಇಂಥ ಶೋಧದಲ್ಲಿ ಮಾತ್ರ ನನಗೆ ಸುಖ ಸಿಗುವುದು’ ಎಂದು ಆತ ಬಹಳ ಬಾರಿ ಹೇಳಿದ್ದ. ಒಂದು ಉದಾಹರಣೆ ನೋಡಿ. ಆತನ ‘ಸ್ನೋ ಕಂಟ್ರಿ’ ಎಂಬ ಅದ್ಭುತ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ನಾಯಕ ಶಿಮಮುರ ಜಪಾನಿನ ಉತ್ತರಭಾಗದಲ್ಲಿರುವ ಹಿಮಾಚ್ಛಾಧಿತ ಪ್ರದೇಶಕ್ಕೆ ಒಂದು ರೈಲಿನಲ್ಲಿ ಹೋಗುತ್ತಿರುತ್ತಾನೆ. ರೈಲಿನ ಇನ್ನೊಂದು ಮೂಲೆಯಲ್ಲಿ ಯೋಕೋ ಎಂಬ ಒಬ್ಬ ಸುಂದರ ಹುಡುಗಿ ತನ್ನ ರೋಗಿಷ್ಠ ಪ್ರಿಯತಮನ ಜತೆ ಕೂತಿದ್ದಾಳೆ. ಹೊರಗೆ ನಿಧಾನಕ್ಕೆ ಕತ್ತಲಾಗುತ್ತಿದೆ. ರೈಲು ನಿಧಾನವಾಗಿ ಈ ಹಿಮದ ಮಧ್ಯೆ ಹೋಗುತ್ತಾ ಇದೆ. ಆಗ ಆ ಪರ್ವತದ ಮೇಲಿನಿಂದ ಪ್ರತಿಫಲಿಸಿದ ಬೆಳಕಿನ ಕಿರಣದ ಹೊಳಪನ್ನು ಆ ಸುಂದರ ಹುಡುಗಿಯ ಕಣ್ಣಿನಲ್ಲಿ ಶಿಮಮುರ ರೈಲಿನ ಮಬ್ಬು ಗಾಜಿನ ಕಿಟಕಿಯಲ್ಲಿನ ಆ ಹುಡುಗಿಯ ಪ್ರತಿಬಿಂಬದಲ್ಲಿ ಕಾಣುತ್ತಾನೆ. ಇದು ಶಿಮಮುರನಿಗೆ ಅತ್ಯಂತ ಸುಂದರವಾದ ಅನುಭವ. ಹೊರಗೆ ಕೊರೆಗಟ್ಟುವ ಚಳಿ, ಎಲ್ಲೆಲ್ಲೂ ಹಿಮ, ಇದಲ್ಲದೆ ಈ ಸುಂದರ ಹುಡುಗಿ ಆರೈಸುತ್ತಿರುವುದು ಅಕೆಯ ರೋಗಗ್ರಸ್ತ ಗೆಳೆಯನನ್ನು. ಆತ ಅಲ್ಲಿಯೇ ತಳ್ಳುಕುರ್ಛಿಯಲ್ಲಿದ್ದಾನೆ. ಹೊರಗೆ ಕತ್ತಲಾಗುತ್ತಿದೆ, ಪ್ರಯಾಣದಿಂದ ಎಲ್ಲರೂ ಬಳಲಿದ್ದಾರೆ. ಕಿಟಕಿಯ ಗಾಜು ಕನ್ನಡಿಯಂತಲ್ಲ ಅದು ಯಾವ ಬಿಂಬವನ್ನೂ ಪೂರ್ತಾ ಪ್ರತಿಬಿಂಬಿಸಲಾರದು. ಮತ್ತೆ ಕತ್ತಲಿನ ಮಬ್ಬು ಬೆಳಕಿನಲ್ಲಿ ಈ ಹೊರಗಿನ ಕಿರಣ ಪರ್ವತದ ಮೇಲಿಂದ ಪ್ರತಿಫಲಿಸಿ, ಹುಡುಗಿಯ ಕಣ್ಣಲ್ಲಿ ಮಿಂಚುತ್ತಿದ್ದನ್ನು ನಾಯಕ ಶಿಮಮೂರ ಆಕೆಯ ಮಬ್ಬು ಬಿಂಬದಲ್ಲಿ ಕಾಣುತ್ತಾನೆ.- ಇಂಥ ಪ್ರತಿಮೆಗಳನ್ನು ಮರೆಯುವುದು ಕಷ್ಟ. ಕವಬಾಟನ ಸೌಂದರ್ಯದ ಶೋಧವೂ ಹೀಗೇ. ಶಿಮಮೂರನ ಇಡೀ ರೈಲಿನ ವ್ಯರ್ಥ ಪ್ರಯಾಣಕ್ಕೆ ಈ ಒಂದು ಬೆಳಕಿನ ಕಿರಣದ ಪ್ರತಿಫಲನದ ಸೌಂದರ್ಯ ಗೊತ್ತಿಲ್ಲದ ಸಾರ್ಥಕ್ಯವನ್ನು ಒದಗಿಸುತ್ತದೆ. ಇಂಥ ಸೌಂದರ್ಯವನ್ನು ಹುಡುಕುವುದು, ದಾಖಲಿಸುವುದು ಒಬ್ಬ ಕಾದಂಬರಿಕಾರನ ಗುರಿಯಾಗಬೇಕೆಂದು ಆತ ಯಾವತ್ತೂ ಪ್ರತಿಪಾzಸುತ್ತಿದ್ದ,

ಬದುಕನ್ನು ತೀವ್ರವಾಗಿ ಅನುಭವಿಸಬೇಕಾದಲ್ಲಿ ಅದಕ್ಕೆ ಬೇಕಾದದ್ದು ಮುಗ್ಧತೆ ಮತ್ತು ಮುಕ್ತತೆ ಎಂದು ಕವಬಾಟ ಎಂದಿಗೂ ನಂಬಿದ್ದ. ಇದು ಆತನ ಯಾವತ್ತೂ ಆಶಯ ಕೂಡ. ಈ ಮುಗ್ಧತೆಯನ್ನು ಆತ ಸಣ್ನ ಮಕ್ಕಳಲ್ಲಿ, ಎಳೆಯ ಪ್ರಾಯದ ತರುಣಿಯರಲ್ಲಿ ಮತ್ತು ಸಾಯುತ್ತಿರುವ ಗಂಡಸರಲ್ಲಿ ಕಂಡಿದ್ದ. ಹಾಗಾಗಿ ಆತನ ಪ್ರಸಿದ್ಧ ಕಾದಂಬರಿಗಳಲ್ಲಿ ಈ ಬಗೆಯ ಪಾತ್ರಗಳು ಪುನರಾವರ್ತಿತವಾಗುತ್ತವೆ. ಮಕ್ಕಳ ಮುಗ್ಧತೆಗೆ ಯಾರೂ ಕಾರಣ ಕೇಳುವುದಿಲ್ಲ. ಆದರೆ, ಎಳೆಯ ತರುಣಿಯರು ಮತ್ತು ಸಾಯುತ್ತಿರುವ ಗಂಡಸರಲ್ಲಿ ಇಂಥ ಮುಗ್ಧತೆಯನ್ನು ಆತ ಮತ್ತೆಮತ್ತೆ ಕಂಡಿದ್ದು ಕುತೂಹಲಕರವಾದ ವಿಷಯ. ಅಷ್ಟೇ ಅಲ್ಲ, ಈ ಮುಗ್ಧತೆಯಿಲ್ಲದ ಬರಹಗಾರರನ್ನಾಗಲೀ ಅಥವಾ ಅಂತಹ ಯಾವುದೇ ಬರವಣಿಗೆಯನ್ನೂ ಕವಬಾಟ ಒಪ್ಪಿಕೊಳ್ಳುತ್ತಿರಲಿಲ್ಲ. ಇದನ್ನು ಆತ ತನ್ನ ಸಾಹಿತ್ಯಿಕ ಜೀವನದಲ್ಲಿಯೂ ಯಾವತ್ತೂ ಒಂದು ವ್ರತದಂತೆ ಪಾಲಿಸಿದ. ವೃತ್ತಿಪರ ಬರಹಗಾರರನ್ನು ಆತ ಯಾವತ್ತೂ ಇಷ್ಟಪಟ್ಟಿರಲಿಲ್ಲ. ಹಾಗೆಯೇ ಏನೂ ಹೆಸರು ಮಾಡಿರದ ಹೊಸಬರಹಗಾರರನ್ನು ಆತ ಕೊಂಚ ಹೆಚ್ಚಾಗಿಯೇ ಓಲೈಸುತ್ತಿದ್ದ ಎಂಬ ಅಪವಾದವೂ ಇದೆ. ಆದರೆ, ಮಗುವಿನ ಮುಗ್ಶತೆಯಿಂದ ನೋಡಲಾಗದ ಜಗತ್ತನ್ನು ಆತ ಎಂದೂ ನಿರಾಕರಿಸಿದ್ದ. ಆತನ ಪ್ರಕಾರ ಮುಗ್ಧತೆಯೆಂದರೆ ಯಾರಿಗೂ ದಕ್ಕದ, ಯಾರಿಗೂ ದಕ್ಕಿರದ ಪ್ರೀತಿ.

ತನ್ನ ಸಾಹಿತ್ಯ ಮತ್ತು ಅದರ ಆಶಯದ ಬಗ್ಗೆ ಕವಬಾಟ ಯಾವತ್ತೂ ಸ್ಪಷ್ಟವಾಗಿದ್ದ. ಅದರ ಬಗ್ಗೆ ಆತನಿಗೆ ಕೊಂಚವೂ ಅನುಮಾನವಿರಲಿಲ್ಲ. ಪ್ರತಿಯೊಂದು ಕ್ರಿಯೆಯೂ ಕೇವಲ ಸಾಂದರ್ಭಿಕ ಮಾತ್ರ ಎಂದು ಆತ ಬಹಳವಾಗಿ ನಂಬಿದ್ದ. ಒಳ್ಳೆಯದಕ್ಕೆ ಅರ್ಥ ಬರಬೇಕಾದರೆ ಈ ಒಳ್ಳೆಯತನವನ್ನು ಸುತ್ತುವರಿಯುವ ಸಂದರ್ಭ ಮಾತ್ರ ಮುಖ್ಯ, ಹಾಗೆಯೇ ಕೆಟ್ಟದೆನ್ನುವುದು ಕೆಟ್ಟದಾಗುವುದು ಕೂಡ ಆ ಸಂದರ್ಭಾನುಸಾರ ಮಾತ್ರ. ಯಾವುದೇ ಕ್ರಿಯೆಯನ್ನು ಆ ಕ್ರಿಯೆಯ ಸಾಂದರ್ಭಿಕ ಅರ್ಥದಿಂದ ಹೊರತುಪಡಿಸಿ ಆತ ನೋಡಲು ಇಷ್ಟಪಡುತ್ತಿರಲಿಲ್ಲ.ಒಂದು ಸಣ್ನ ಉದಾಹರಣೆ ಕೊಡಬೇಕೆಂದರೆ ಜಪಾನಿನ ಒಬ್ಬ ದೂರದ ಓಟಗಾರ ೧೯೬೮ರಲ್ಲಿ ಒಂದು ಹೋಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆತ ತನ್ನ ಆತ್ಮಹತ್ಯಾ ಒಕ್ಕಣೆಯಲ್ಲಿ ‘ನನ್ನ ಪ್ರೀತಿಯ ಅಪ್ಪ, ಅಮ್ಮ- ನೀವು ಬಡಿಸಿದ ಟ್ಯೊರೊರೋ ಅನ್ನವನ್ನು ನಾನು ಬಹಳ ಖುಷಿಯಿಂದ ಉಂಡಿದ್ದೇನೆ’ ಎಂದು ಆರಂಭಿಸಿ ತನ್ನ ಇಡೀ ಪರಿವಾರವನ್ನು ಉದ್ದೇಶಿಸಿ ಧನ್ಯವಾದವನ್ನು ಹೇಳಿ ಕೊನೆಗೆ ಎಲ್ಲರ ಕ್ಷಮೆ ಕೇಳಿ ಸಾಯುತ್ತಾನೆ. ಈ ಆತ್ಮಹತ್ಯಾ ಪತ್ರ ಕವಬಾಟನನ್ನು ಬಹಳ ಕಾಡಿತ್ತು. ‘ಈ ಅತಿಭಾವುಕ ಅನ್ನುವ ಪತ್ರದಲ್ಲಿ ಈತ ತೀರ ಸರಳವಾಗಿ ನಾನು ಖುಷಿಪಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಈ ಪದಗಳು ಆತ ಬದುಕಿದ ಅಪ್ಪಟ ಬದುಕನ್ನು ಉಸಿರಿಸುತ್ತದೆ. ಆತ್ಮಹತ್ಯಾ ಒಕ್ಕಣೆಯ ಅರ್ಥವನ್ನು ಮೀರಿಸುವ ಒಂದು ತಾಳ ಈ ಪದಗಳಿಗಿವೆ. ಎಷ್ಟು ಸುಂದರ, ಗಾಢ ಮತ್ತು ವಿಷಾದಕರ.’ ಎಂದು ಕವಬಾಟ ಹೇಳಿದ್ದ. ಈ ರೀತಿಯ ಸೌಂದರ್ಯ ಮತ್ತು ವಿಷಾದ ತುಂಬಿದ ಬರವಣಿಗೆಗೆ ಕವಬಾಟ ಹಾತೊರೆಯುತ್ತಿದ್ದ ಎನ್ನುವುದು ಅವನ ಕಾದಂಬರಿಗಳನ್ನು ಓದಿದವರಿಗೆ ಸ್ಪಷ್ಟವಾಗುತ್ತದೆ.

ಈತನ ಸಾವೂ ಒಂದು ವಿಚಿತ್ರಕರವಾಗಿಯೇ ಆಯಿತೆಂದು ಹೇಳಲಾಗುತ್ತದೆ. ಈತನ ಆತ್ಮ ಸ್ನೇಹಿತ ಯುಕಿಯೋ ಮಿಶಿಮಾ ಎಂಬ ಲೇಖಕ ೧೯೭೦ರಲ್ಲಿ ವಿಧಿವತ್ತಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ. ೧೯೭೨ರಲ್ಲಿ ಯಾವ ಸೂಚನೆಯನ್ನೂ ಕೊಡದೆ ಮನೆಯಿಂದ ಹೊರಹೋದ ಕವಬಾಟ ಒಂದು ಗ್ಯಾಸ್ ನಳಿಕೆಯನ್ನು ಬಾಯಲ್ಲಿಟ್ಟುಕೊಂಡು ಸತ್ತ. ಆತ ಯಾಕೆ ಸತ್ತ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ನೋಬೆಲ್ ಸಮಿತಿಯ ವೆಬ್‌ಸೈಟಿನಲ್ಲಿ ಈತನ ಮರಣ ಆತ್ಮಹತ್ಯೆಯಿಂದಲೇ ಆಯಿತು ಎಂದು ಬರೆಯಲಾಗಿದೆ.

ಕವಬಾಟ ಅನೇಕ ಕಾದಂಬರಿಗಳನ್ನು, ಕಥೆಗಳನ್ನು ಮತ್ತು ಅನೇಕ ಸಣ್ಣ ಸಣ್ಣ ಕತೆಗಳನ್ನೂ ಕೂಡ ಅಪೂರ್ಣವಾಗಿಯೇ ಉಳಿಸಿದ್ದ. ‘ಕಲೆ ಅದಾಗಿಯೇ ಪರಿಪೂರ್ಣವಾಗಬೇಕು’ ಎಂಬುದು ಆತನ ನಂಬಿಕೆ. ಅದಕ್ಕೆ ಒಂದು ಸಮಯದ ಪರಿಧಿಯನ್ನು ಹಾಕಿಟ್ಟುಕೊಂಡು ಇಷ್ಟುದಿನದೊಳಗೆ ಒಂದು ಕಾದಂಬರಿಯನ್ನು ಮುಗಿಸುತ್ತೇನೆ ಎಂಬುದರ ಬಗ್ಗೆ ಆತನಿಗೆ ನಂಬಿಕೆಯಿರಲಿಲ್ಲ. ಆತನ ಬಹು ಮುಖ್ಯ ಕಾದಂಬರಿಗಳೆಂದು ಗುರುತಿಸಲಾಗುವ ‘ಸ್ನೋ ಕಂಟ್ರಿ’ ಮತ್ತು ‘ಥೌಸೆಂಡ್ ಕ್ರೇನ್ಸ್’ ಅನ್ನು ಆತ ವರ್ಷಾನುಗಟ್ಟಲೆ ಬರೆದ.

ಈತನ ಒಂದು ಬಹುಮುಖ್ಯ ಕಾದಂಬರಿ ‘ಥೌಸೆಂಡ್ ಕ್ರೇನ್ಸ್’ ಅನ್ನು ಕನ್ನಡಕ್ಕೆ ‘ಸಾವಿರ ಪಕ್ಷಿಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ, ಕೃಷ್ಣರಾಜುರವರು. ಕವಬಾಟನ ಈ ಅತ್ಯಂತ ಸೋಪಜ್ಞ ಕೃತಿಯನ್ನು ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿ ನಮಗೆಲ್ಲ ಈತನ ಬರವಣಿಗೆಯ, ಭಾಷೆಯ ಮತ್ತು ಈತ ಬದುಕುತ್ತಿದ್ದ ಪ್ರಪಂಚವನ್ನು ನಮಗೆ ಪರಿಚಯಿಸಿದ್ದಾರೆ ಕೃಷ್ಣರಾಜುರವರು. ಎಷ್ಟು ಓದಿದರೂ ಇನ್ನೂ ಓದಬೇಕೆನ್ನಿಸುವ ಈ ಮಹಾಕಾದಂಬರಿಕಾರನನ್ನು ಕನ್ನಡಕ್ಕೆ ಪರಿಚಯಮಾಡಿಸಿದ್ದಕ್ಕಾಗಿ ನಾನು ಕೃಷ್ಣರಾಜುರವರಿಗೆ ಧನ್ಯವಾದವನ್ನು ಹೇಳುತ್ತೇನೆ.
ಕಾದಂಬರಿಯ ಕಥನವಸ್ತುವನ್ನು, ಭಾಷೆಯನ್ನು ನಾನು ಚರ್ಚಿಸಲು ಹೋದರೆ ಕಾದಂಬರಿಕಾರನಿಗೆ ಮತ್ತು ಅನುವಾದಕರ ಪ್ರಯತ್ನಕ್ಕೆ ಯಾವರೀತಿಯಲ್ಲಿಯೂ ನ್ಯಾಯ ಒದಗಿಸಲಾರೆ. ಅನುವಾದಕನ ಜಾಣ್ಮೆ ಮತ್ತು ಮೂಲಕೃತಿಯ ಬಗೆಗಿನ ನಿಷ್ಟೆ, ಕಾಳಜಿಗಳು ಅನುವಾದದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಒಂದು ಸಣ್ಣ ಉದಹರಣೆಯನ್ನು ನೋಡಿ.
ಕಾದಂಬರಿಯ ಮೊದಲಲ್ಲಿಯೇ ನಾಯಕ ಕಿಕುಜಿಯ ತಂದೆಯ ಪ್ರೇಯಸಿ ಚಿಕಕೋಳ ಮೊಲೆಯ ಮೇಲಿನ ಮಚ್ಚೆಯೊಂದರ ವಿವರಣೆ ಬರುತ್ತದೆ. ಅದರ ಅನುವಾದ ಹೀಗಿದೆ.
‘ಅದನ್ನು ಓದುತ್ತಾ ಕಿಕುಜಿಗೆ ಚಿಕಕೊಳ ಮೊಲೆಯ ಮೇಲಿನ ಮಚ್ಚೆ ನೆನಪಿಗೆ ಬಂತು.
ಅವನಿಗಾಗ ಎಂಟೋ ಒಂಬತ್ತೋ ವರ್ಷ. ಅಪ್ಪನೊಟ್ಟಿಗೆ ಅವಳ ಮನೆಗೆ ಹೋಗಿದ್ದ. ಅಡಿಗೆಮನೆಯಲ್ಲಿ ಮಂಡಿಯೂರಿ ಕುಳಿತಿದ್ದಳು. ಎದುರಿಗೆ ಹರಡಿದ ನ್ಯೂಸ್ ಪೇಪರ್. ಕಿಮೋನೋ ಸರಿದು ಬತ್ತಲೆ ಮೊಲೆ ಮುಂದೆ ಜೋತಿದೆ. ಎಡ ಮೊಲೆಯ ಮೇಲಿಂದ ನಡುವಿನ ಕಣಿವೆಯವರೆಗೆ ಹಬ್ಬಿದ ಕೈ-ಅಗಲದ ಕೆನ್ನೀಲಿ ಮಚ್ಚೆ. ಅದರ ಮೇಲೆ ತೆಳುವಾಗಿ ಬೆಳೆದಿದ್ದ ಕೂದಲುಗಳನ್ನು ಸಣ್ಣ ಕತ್ತರಿಯಿಂದ ಕತ್ತರಿಸುತ್ತಿದ್ದಾಳೆ...
...ಅವಳ ಮಂಡಿಯ ಮುಂದಿನ ಪೇಪರಿನ ಮೇಲೆ ಬಿದ್ದಿದ್ದ ಗರಿ ಗರಿ, ನಿಮಿರು ನಿಮಿರಿನ ಕೂದಲನ್ನು ಕಿಕುಜಿ ದುರುಗುಟ್ಟಿ ನೋಡಿದ.’
...ಆ ಮಗು ತನ್ನ ಜೀವನದಲ್ಲಿ ಮೊಟ್ಟ ಮೊದಲು ನೋಡೋದು ಅಮ್ಮನ ಮಚ್ಚೆ ಹರಡಿದ ಮೊಲೆ. ಅದರ ಮೂಲಕಾನೇ ಮಗುಗೆ ಅದರಮ್ಮನ ನೆನಪು. ಜನ್ಮದುದ್ದಕ್ಕೂ ಆ ಕುರೂಪಿ ಮೊಲೇನ ಮರೆಯೋಕಾಗಲ್ಲ,
ಚಿಕಕೊಳ ಮೊಲೆಯ ಮೇಲಿನ ಮಚ್ಚೆಯ ಈ ಪ್ರತಿಮೆಯನ್ನು ಕಣ್ಣಿನಿಂದ ಅಳಿಸಲು ಪ್ರಯತ್ನ ಮಾಡಿನೋಡಿ. ಅಷ್ಟೇ ಅಲ್ಲ, ಕಣ್ಣು ಬಿಟ್ಟ ತಕ್ಷಣ ಮೊಲೆಯ ಮೇಲಿನ ಮಚ್ಚೆಯನ್ನು ನೋಡುವ ಮಗುವಿನ ಪ್ರತಿಮೆ. ಎರಡೂ ಕೊನೆಯವರೆಗೂ ಏನು, ಕಾದಂಬರಿಯೋದಿಯಾದ ಮೇಲೆಯೂ ಕಣ್ಣಮುಂದೆ ದಟ್ಟವಾಗಿ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ.

* * *

ಈ ಅನುವಾದಕ್ಕೆ ಕೃಷ್ಣರಾಜುರವರು ಉಪಯೋಗಿಸಿರುವ ಭಾಷೆ ಸಮಕಾಲೀನ ಕನ್ನಡದ ಓದುಗ ಆಡುನುಡಿಯಲ್ಲಿ ಬಳಸುವಂಥದ್ದು. ಯಾವುದೇ ಗ್ರಾಂಥಿಕ ನುಡಿಗಟ್ಟನ್ನಾಗಲೀ ಅಥವಾ ಪಾಂಡಿತ್ಯಪೂರ್ಣತೆಗಾಗಲೀ ಅವರು ತಲೆಕೆಡಿಸಿಕೊಂಡಿಲ್ಲ. ನಡುವೆ ಬೇಕಾಗಿಯೇ ಕೆಲವು ಇಂಗ್ಲಿಷ್ ಪದಗಳನ್ನೂ ಉಪಯೋಗಿಸುತ್ತಾರೆ॒

ಸರಳತೆ ಅವಶ್ಯವಾಗಿದ್ದಾಗ ಈ ರೀತಿಯ ಅನುವಾದದ ಅಗತ್ಯ ಎಷ್ಟಿದೆ ಅಂದು ನನಗೆ ಅರ್ಥವಾದದ್ದು ಒ ಎಲ್ ನಾಗಭೂಷಣಸ್ವಾಮಿಯವರ ಟಾಲ್‌ಸ್ಟಾಯ್ ಕಥೆಗಳು, ವಾರ್ ಅಂಡ್ ಪೀಸ್‌ನ ಕೆಲವು ಅಧ್ಯಾಯಗಳು ಮತ್ತು ರಿಲ್ಕೆಯ ಪತ್ರಗಳ ಅನುವಾದಗಳನ್ನು ಓದಿದಾಗ. ಟಾಲ್‌ಸ್ಟಾಯ್ ಕತೆಗಳಲ್ಲಿ ಹಾರಿಬಲ್, ಈಡಿಯಟ್ಟು, ಇಂಥ ಪದಗಳನ್ನು ಬಳಸಿದಾಗ ಒಂದು ರೀತಿ ಪುಳಕವಾಗಿ ಟಾಲ್‌ಸ್ಟಾಯ್‌ನ ಇನ್ನೊಂದು ಮುಖದ ಪರಿಚಯವಾದಂತೆ ಆಗಿ, ಟಾಲ್‌ಸ್ಟಾಯ್ ಅನ್ನು ಹೀಗೂ ಓದಿಕೊಳ್ಳಬಹುದು ಎಂದನಿಸಿತ್ತು. ಈ ಮಹಾಕಾದಂಬರಿಗಳು ತಮ್ಮನ್ನು ತಮ್ಮ ಲೋಕಕ್ಕೆ ಬೇರೆಯೇ ಬಾಗಿಲಿನ ಮೂಲಕ ಪ್ರವೇಶ ದೊರಕಿಸಿಕೊಳ್ಳುತ್ತವೆ. ಇದು ಅನುವಾದಕನ ಓದು, ಎರಡೂ ಭಾಶೆಗಳ ಮೇಲೆ ಇರುವ ಪರಿಣಿತಿ ಮತ್ತು ಈ ರೀತಿಯ ಅನುವಾದ ಮುಟ್ಟಬೇಕಾಗಿರುವ ‘ಟಾರ್ಗೆಟ್’ ಓದುಗರು- ಎಲ್ಲದರ ಬಗೆಗಿನ ಕಾಳಜಿಯನ್ನೂ ತೋರುತ್ತದೆ. ಈ ‘ಅನುವು ಆಗುವ’ ಕ್ರಿಯೆಯಲ್ಲಿ ನಮ್ಮ ಕಾಲದ ಕಾಳಜಿಗಳು ನಮಗೆ ಗೊತ್ತಿಲ್ಲದೇ ಕೆಲಸ ಮಾಡಿರುತ್ತವೆ.

ನನಗೆ ತಿಳಿದ ಮಟ್ಟಿಗೆ ಕನ್ನಡ ಕಾದಂಬರಿ ಲೋಕಕ್ಕೆ ಇದು ಮೊಟ್ಟ ಮೊದಲ ಜಪಾನೀ ಭಾಷೆಯ ಕಾದಂಬರಿಯ ಅನುವಾದ. ತಪ್ಪದೇ ಓದಲೇಬೇಕಾದ ಕೃತಿ.
(ಮುನ್ನುಡಿಯಿಂದ)

5 comments:

 1. ಪರಿಚಯ ಚೆನ್ನಾಗಿದೆ. ಪುಸ್ತಕ ಓದಬೇಕೆನಿಸುತ್ತದೆ.
  ಜಪಾನೀ ಸಾಹಿತ್ಯವನ್ನು ನಾನು ಒದಿಕೊಂಡಿಲ್ಲ, ಆದರೆ ಅವರ ಸಿನಿಮಾ ಇತ್ಯಾದಿ ದೃಶ್ಯಮಾಧ್ಯಮವನ್ನು ನೋಡುತ್ತಿರುತ್ತೇನೆ. ನನಗೆ ಬಹಳಷ್ಟು ಇಷ್ಟವಾಗಿವೆ. ನಿಸರ್ಗದೊಡನೆ ಅವರ ನಂಟು ಗಮನಿಸಬೇಕಾದದ್ದೇ. ಒಂದೆರಡು ಜಪಾನೀ ಕಥೆಗಳನ್ನು ಕನ್ನಡಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ನಾನೂ ಮಾಡಿದ್ದೇನೆ. ಸಾಧ್ಯವಾದಲ್ಲಿ ಓದಿ.

  ReplyDelete
 2. ಅಮೆರಿಕಾಲ್ಲಿ ಈ ಪುಸ್ತಕವನ್ನು ಪಡೆಯುವ ಬಗೆ ಏನೆಂದು ತಿಳಿದಿದ್ದರೆ ಖಂಡಿತ ತಿಳಿಸಿ.

  ReplyDelete
 3. Please send me your contact details. I will refer you to the transltaor/author.

  Guruprasad

  ReplyDelete
 4. ಖಂಡಿತಾ ಓದುತ್ತೇನೆ. ಓದಿ ಹೇಳುತ್ತೇನೆ.

  ಗುರು

  ReplyDelete