Friday, March 12, 2010

ನಿಮ್ಮೊಳಗಿದ್ದೂ ನಿಮ್ಮಂತಾಗದೇ

ಕೆಲವು ದಿನಗಳ ಹಿಂದೆ ಗೆಳತಿಯೊಬ್ಬಾಕೆ ಕರ್ನಾಟಕದ ಒಂದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರಿಗೆ ‘ಕನ್ನಡಸಾಹಿತ್ಯಕ್ಕೆ ಅಮೆರಿಕನ್ನಡಿಗರ ಕೊಡುಗೆ’ ಎನ್ನುವ ವಿಷಯದ ಬಗ್ಗೆ ಒಂದು ಮಹಾಪ್ರಬಂಧವನ್ನು ಬರೆದು ಪಿ ಎಚ್ ಡಿ ಗೆ ಪ್ರಯತ್ನ ಮಾಡಬೇಕೆಂದಿದ್ದೇನೆ. ನನಗೆ ಅಡ್ವೈಸರ್ ಆಗಲು ಸಾಧ್ಯವಾ? ಎಂದು ಕೇಳಿದಾಗ ಆತ ಸುಮ್ಮನೆ ನಕ್ಕು ‘ಕಾಗೆ, ಗುಬ್ಬಿಗಳ ಮೇಲೆ ಪಿ ಎಚ್ ಡಿ ಮಾಡಲಿಕ್ಕಾಗುತ್ತದೇನಮ್ಮಾ?’ ಎಂದರಂತೆ. ಖಿನ್ನಳಾಗಿ ಹೇಳಿಕೊಂಡಳಾಕೆ. ತಾನು ಬಹಳ ವಿಷಯಗಳನ್ನೂ ಮತ್ತು ಅಂಕಿ ಅಂಶಗಳನ್ನೂ ಸಂಗ್ರಹಿಸಿಕೊಂಡಿರುವುದಾಗಿಯೂ ಆದರೆ ಏನೂ ಮಾಡಲಿಕ್ಕಾಗದೆಂದು ಪೇಚಾಡಿಕೊಂಡಳು.

ಮತ್ತೆ ಮತ್ತೆ ಈ ವಿಷಯದ ಬಗ್ಗೆ ಮಾತಾಡಬಾರದೆಂದರೂ ಈ ವಿಷಯ ಬಹಳ ಕಾಡುತ್ತೆ. ಆ ಪ್ರೊಫ಼ೆಸರರ ಹೇಳಿಕೆಯಲ್ಲಿ ಇರುವ ಸತ್ಯಾಂಶವನ್ನು ತೆಗೆದುಹಾಕುವಂತಿಲ್ಲ. ಇಲ್ಲಿ ಬರೀ ಅಮೆರಿಕನ್ನಡಿಗರ ಕೊಡುಗೆ,ಪ್ರಯತ್ನ ಅನ್ನುವುದರ ಬಗ್ಗೆ ಒಂದು ಮಹಾಪ್ರಬಂಧವನ್ನು ಬರೆದು ಪಿ ಎಚ್ ಡಿ ತೆಗೆದುಕೊಳ್ಳುತ್ತೇನೆ ಅನ್ನುವುದು ಮಹತ್ವಾಕಾಂಕ್ಷೆ ಮತ್ತು ದುಸ್ಸಾಧ್ಯ ಅನ್ನಿಸಬಹುದಾದರೂ, ಈ ಹೊರನಾಡ ಕನ್ನಡಿಗರ ಬರವಣಿಗೆ, ಆ ಬರವಣಿಗೆಗೆ ಮಾತ್ರ ಸಾಧ್ಯವಾಗಬಲ್ಲ ಚರ್ಚೆ, ಪ್ರತಿಕ್ರಿಯೆ ಮತ್ತು ವಿಮರ್ಶೆಗಳು ಬಂದಿವೆಯಾ, ಬರಬೇಕಾ ಎನ್ನುವುದನ್ನು ಕೊಂಚ ನೋಡಬೇಕಾಗಿದೆ.

ಈ ಹೊರನಾಡ ಕನ್ನಡಿಗರ ಬರವಣಿಗೆ ಎಂದು ಅದನ್ನು ಪ್ರತ್ಯೇಕಿಸಿ ನೋಡಬೇಕಾದ ಅವಶ್ಯಕತೆಯೇನಿದೆ? ಹೊರನಾಡ ಕನ್ನಡಿಗರದ್ದೇನು ನವ್ಯ, ನವೋದಯ ಅಥವಾ ಪ್ರಗತಿಶೀಲ ಎನ್ನುವಂತೆ ಸಿದ್ಧಾಂತಗಳನ್ನಿಟ್ಟುಕೊಂಡು ಬರೆಯುವ ಪಂಥವೇ? ಬರವಣಿಗೆಗೆ ಸಿದ್ಧಾಂತಗಳಿರಬೇಕಾ? ಇದರಿಂದ ಯಾವ ಸಾಮಾಜಿಕ ಬದಲಾವಣೆ ಸಾಧ್ಯ? ಇದನ್ನು ಓದುವವರ್ಯಾರು? ಓದದೇ ಇದ್ದರೆ ಆಗುವ ನಷ್ಟವೇನು?

ಈ ಪ್ರಶ್ನೆಗಳಿಗೆ ನಾನು ಖಂಡಿತಾ ಉತ್ತರಿಸಲಾರೆ..

ಯಾವುದೇ ವಲಸೆ ಸಾಹಿತ್ಯವನ್ನು ನೋಡಿದರೆ ಅದಕ್ಕೆ ಒಂದು ನಿರ್ದಿಷ್ಟ ಗುಣಗಳಿರುತ್ತವೆ. ( ವಲಸೆ ಎಂದ ತಕ್ಷಣ ಅದು ಪಶ್ಚಿಮಕ್ಕೆ ಎನ್ನುವುದು ಡೀಫ಼ಾಲ್ಟ್) ಒಬ್ಬ ಪಯಣಿಗನ ಹುಡುಕಾಟ, ನಾನ್ಯಾರು, ಎಲ್ಲಿಯವನು ಎಂಬ ಅಸ್ಮಿತೆಯ ಪ್ರಶ್ನೆ, ಇದ್ದ ಮತ್ತು ಇರುವ ನಾಡಿನ ‘ಒಳ’ ಮತ್ತು ಹೊರನೋಟಗಳು ಪಶ್ಚಿಮದ ಓದುಗರಿಗೆ ಒಂದು ಹುಲುಸಾದ ಓದನ್ನು ಒದಗಿಸಿಕೊಡುವುದಂತೂ ಗ್ಯಾರಂಟಿ. ಜಂಪಾ ಲಹಿರಿಯ ‘ನೇಮ್‌ಸೇಕ್’ ನಲ್ಲಿನ ನಾಯಕ ಗೋಗೋಲ್ ಬಾಸ್ಟನ್‌ನಲ್ಲಿ ಹುಟ್ಟಿದರೂ, ಹುಟ್ಟಾ ಆತ ಭಾರತೀಯನಲ್ಲ, ಬೆಳೆಯುತ್ತಾ ಅಮೆರಿಕನ್ ಕೂಡ ಆಗುವುದಿಲ್ಲ, ಅವನ ಹೆಸರು ಭಾರತೀಯವೂ ಅಲ್ಲ, ಅಮೆರಿಕನ್ನೂ ಅಲ್ಲದ ಎಡಬಿಡಂಗಿ ‘ಗೊಗೊಲ್’. ಅಫ಼್ಗಾನಿ ಸಂಜಾತ ಖಾಲಿದ್ ಹೊಸೀನೀಯ ‘ದ ಕೈಟ್ ರನ್ನರ್’ ನಲ್ಲಿನ ನಾಯಕ ತಾಲಿಬಾನ್ ಪೂರ್ವ ಅಫ಼್ಗಾನಿಸ್ತಾನದಲ್ಲಿ ಖರ್ಜೂರ, ಹಿಂದೂಖುಷ್‌ಗಳ ನಡುವೆ ಪ್ರಕೃತಿ, ಕುಟುಂಬವನ್ನು ಪ್ರೀತಿಸುತ್ತಾ ಬೆಳೆದರೂ ಅದನ್ನು ನೆನೆಸುತ್ತಾ, ನೆನೆಸುತ್ತಾ ಅಮೆರಿಕಾಕ್ಕೆ ಬಂದು ಬೆಳೆದು, ಯಾವುದೋ ಸಣ್ಣ ಕಾರಣಕ್ಕಾಗಿ ಮತ್ತೆ ಅಫ಼್ಗಾನಿಸ್ತಾನಕ್ಕೆ ಹೋಗಬೇಕಾದಾಗ ಆತನಿಗೆ ಕಾಣುವುದು ತಾನು ಬೆಳೆದ ಅಫ಼್ಗಾನಿಸ್ತಾನವಲ್ಲ- ತಾಲೀಬಾನರಿಂದ ಜರ್ಝರಿತವಾದ ಒಂದು ನಾಡು. ಕುಂಕುಮ, ಅರಿಶಿನ ತೊಟ್ಟು, ವಿಧವಿಧವಾದ ಮಸಾಲೆಗಳ ಅಂಗಡಿಯಲ್ಲಿ ಮಾಂತ್ರಿಕತೆಯನ್ನು ಸೂಸುವ ಚಿತ್ರಾ ದಿವಾಕರುಣಿಯ ‘ಮಿಸ್ಟ್ರೆಸ್ ಆಫ಼್ ಸ್ಪೈಸಸ್’, ‘ನಾನು ನನ್ನ ಹೆಂಡತಿಯನ್ನು ಮೊದಲು ಭೇಟಿಮಾಡಿದ್ದು ಅನಿವಾಸಿಗಳ ಭೇಟಿಗೆ ಮೆಟಫ಼ರ್ ಅನ್ನಿಸಬಹುದಾದ ಏರ್ ಇಂಡಿಯಾ ವಿಮಾನದಲ್ಲಿ’ ಎನ್ನುವ ಸುಖೇತು ಮೆಹತಾ- ಇವರೆಲ್ಲರಲ್ಲಿ ಇರುವ ಸಾಮಾನ್ಯ ಗುಣ- ಪಶ್ಚಿಮಕ್ಕೆ ಬೇಕಾದ ‘ಹೊರಗಿನವನ ಒಳನೋಟ.’

ಆದರೆ, ಇಲ್ಲಿ ಇನ್ನೊಂದು ಗುಣವನ್ನು ನಾವು ಗಮನಿಸಬಹುದು. ಈ ರೀತಿಯ ‘ಹೊಸ ಅಲೆ’ಯ ಬರಹಗಾರರ್ಯಾರೂ ರಾಮಾಯಣ, ಮಹಾಭಾರತಗಳಿಂದ ಪ್ರೇರಿತಗೊಂಡಿಲ್ಲ. ಗಾಂಧೀವಾದವಾಗಲೀ, ಪೆರಿಯಾರ್ ಆಗಲೀ, ವಿವೇಕಾನಂದರ, ಪರಮಹಂಸರ ವಿಚಾರಸರಣಿಗಳನ್ನು ಓದಿ ತಮ್ಮ ಚಿಂತನ ಕ್ರಮವನ್ನು ಬೆಳೆಸಿಕೊಂಡಿಲ್ಲ. ನಿಜ ಹೇಳಬೇಕೆಂದರೆ, ಬಹಳ ಜನಕ್ಕೆ ಭಾರತೀಯತೆಯೆನ್ನುವ ರಾಷ್ಟ್ರೀಯತೆಯ ಯಾವ ಸೂಕ್ಷ್ಮಗಳೂ ಗೊತ್ತಿಲ್ಲ್ಲ. ಕೆಲವರು ಭಾರತದಲ್ಲಿ ಹುಟ್ಟಿಯೂ ಇಲ್ಲ. (ನೈಪಾಲ ಮತ್ತು ಜಂಪಾ ಲಹಿರಿಗಳು ಭಾರತದ ಬಗ್ಗೆ ಬರೆದಾಗ ಅದು ಹೊರಗಿನ ನೋಟವೋ ಅಥವಾ ಒಳನೋಟವೋ? )ಇವರು ಬೆಳೆಯಬೇಕಾದಾಗ ಕಥಾಸರಿತ್ಸಾಗರ ಓದಿಲ್ಲ. ಬೇತಾಳ ಕಥೆಗಳೂ, ಪಂಚತಂತ್ರ ಇವರಿಗೆ ಗೊತ್ತಿಲ್ಲ‘ಹಕಲ್ಬೆರಿ ಫ಼ಿನ್’ ‘ಜೇನ್ ಐರ್’ ಅಥವಾ ‘ಓ ಹೆನ್ರಿ’ ಯನ್ನು ಓದಿಕೊಂಡೇ ಬೆಳೆದವರು. ಆದರೆ, ಇವರು ಬರೆಯುವುದು ಭಾರತೀಯರ ಬಗ್ಗೆ. ಇವರಿಗಿರುವ ಹಣೆಪಟ್ಟಿ ‘ ಭಾರತೀಯ ಇಂಗ್ಲಿಷ್ ಬರವಣಿಗೆ’ ಅಥವಾ ‘ವಲಸೆ ಬರವಣಿಗೆ’

ಈ ವಲಸೆಗಾರರ ಬರವಣಿಗೆ ಪಶ್ಚಿಮದಲ್ಲಿ ಬಹಳ ಜನಪ್ರಿಯ. ಪ್ರತಿಬಾರಿ ಬೂಕರ್ ಪ್ರಶಸ್ತಿಗೆ ಕೆಲವಾದರೂ ಇಂತಹ ಬರಹಗಾರರ ಕೃತಿಗಳು ಸೂಚಿತವಾಗಿರುತ್ತವೆ. ಬಹಳಬಾರಿ, ಇಂತಹ ಪ್ರಶಸ್ತಿಗಳನ್ನು ಗೆದ್ದುಗೊಂಡೂ ಇರುತ್ತವೆ. ಕೊಂಚ ಯೋಚಿಸಿದರೆ ಹೇಳಬಹುದು- ಈ ಬರಹಗಳು ಮುಖ್ಯವಾಗಿ ಪಶ್ಚಿಮ ಪ್ರಣೀತವಾದದ್ದು, ಬೇಕಾದ ವೇದಿಕೆ ಮತ್ತು ಸಂಸ್ಕೃತಿ ಭಾರತೀಯವಾಗಿರಬಹುದು, ಭಾಷೆ, ಮೆಟಫ಼ರ‍್ಗಳು, ತಂತ್ರ ಮತ್ತು ಬರಹದ ಸಾಧನಗಳೂ ಕೂಡ ಪಶ್ಚಿಮದ್ದೇ. ಕೊನೆಗೆ, ಎಲ್ಲವೂ ಕೊನೆಗೊಳ್ಳುವುದು ಅರಸಿಬಂದ ಆಶಯಗಳನ್ನು ಪೂರೈಸುವ, ಕನಸನ್ನು ನನಸಾಗಿಸುವ ‘ಅಪೂರ್ವ ಪಶ್ಚಿಮ’ ದಿಂದಲೇ. ಪಶ್ಚಿಮವನ್ನು ಅಪೂರ್ವವಾಗಿಸುವ ಇಂತಹ ಕೃತಿಗಳು ‘ಪೊಲಿಟಿಕಲಿ ಕರೆಕ್ಟ್’ ಆದ ‘ಫ಼ೀಲ್ ಗುಡ್’ ಅಂಶವನ್ನು ತನ್ನಂತಾನೇ ಕೊಟ್ಟಿರುತ್ತವೆ. ಆ ‘ಫ಼ೀಲ್ ಗುಡ್’ ಕನಸುಗಳ ಪೂರೈಕೆಯ ಹವಣಿಕೆಯಲ್ಲಿ ಆಗುವ ಸಂಸ್ಕೃತಿಗಳ ಜಟಾಪಟಿ ಯಾವಾಗಲೂ ಬರಹಗಾರರಿಗೂ ಓದುಗರಿಗೂ ಒಂದು ಕಾಡುವ ವಸ್ತುವಾಗಿರುತ್ತದೆ.

ಇದು ಯಾಕೆ ಮುಖ್ಯ ಎಂದು ಒಂದು ಉದಾಹರಣೆ ಕೊಡುತ್ತೇನೆ. ಈ ಬಾರಿಯ ಬೂಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಪಾಕಿಸ್ತಾನಿ ಬರಹಗಾರ ಮೊಹ್ಸಿನ್ ಹಮೀದ್‌ರ ‘ದ ರಿಲಕ್ಟಂಟ್ ಫ಼ಂಡಮೆಂಟಲಿಸ್ಟ್’ ನಲ್ಲಿ ಒಂದು ಸನ್ನಿವೇಶವಿದೆ. ನಾಯಕ ಚಂಗೇಜ಼್ ಇಪ್ಪತ್ತೆರಡರ ಪಾಕಿಸ್ತಾನಿ. ನ್ಯೂಯಾರ್ಕಿನ ಒಂದು ಕಂಪೆನಿಯಲ್ಲಿ ಆತನಿಗೆ ಒಂದು ಉತ್ತಮ ಕೆಲಸವಿದೆ. ಅಲ್ಲಿ ಅವನಿಗೆ ಒಬ್ಬ ಬಿಳಿಯ ಗೆಳತಿಯೂ ಇದ್ದಾಳೆ. ಜೀವನ ಸುಗಮವಾಗಿ ನಡೆಯಿತ್ತಿದೆ. ಅಷ್ಟರಲ್ಲಿ ನ್ಯೂಯಾರ್ಕ್‌ನಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಕುಸಿಯುತ್ತದೆ. ಯಾವುದೋ ಕೆಲಸಕ್ಕೆಂದು ಬೇರೆ ದೇಶದಲ್ಲಿದ್ದ ಆತ ತನ್ನೂರಿನ ಈ ಕಟ್ಟಡಗಳು ಕುಸಿಯುತ್ತಿರುವುದನ್ನು ಟೀವಿಯಲ್ಲಿ ನೋಡುತ್ತಾನೆ. ಆತನಿಗೆ ಗೊತ್ತಿಲ್ಲದಂತೆ ಆತನ ತುಟಿಯ ಮೇಲೆ ಒಂದು ಮುಗುಳ್ನಗೆ ಹಾದುಹೋಗಿರುತ್ತದೆ. ‘ಈಗಾದರೂ ಅಮೆರಿಕಾ, ನಿನ್ನನ್ನು ನಿನ್ನ ಮಂಡಿಬಗ್ಗಿಸಿ ಮಲಗಿಸಿದರಲ್ಲ’ ಎಂದು ಆತನಿಗನಿಸುತ್ತದೆ. ಈ ಪುಸ್ತಕಕ್ಕೆ ಬೂಕರ್ ಬರದೇ ಹೋದದ್ದು ಕೇವಲ ಆಕಸ್ಮಿಕವೇ ಅಥವಾ ಇಲ್ಲಿನ ಬರಹಗಾರನಿಗೆ ಪಶ್ಚಿಮ ಅಪೂರ್ವವಲ್ಲವಾದದ್ದಕ್ಕೇ?

ಕನ್ನಡದ ಸಂದರ್ಭದಲ್ಲಿ ಈ ರೀತಿಯ ಹೊರನಾಡ ಬರವಣಿಗೆ ಎನ್ನುವ ಒಂದು ಪ್ರಕಾರದಡಿ ಬರೆಯಲು ಸಾಧ್ಯವೇ ಎಂದು ನಾನು ಬಹಳವಾಗಿ ಯೋಚಿಸಿದ್ದೇನೆ. ಒಂದು ಕಾಲವಿತ್ತು- ದೇಶದ ಹೊರಗೆ ಕೂತು ಬರೆಯುವುದೇ ದೊಡ್ಡದ್ದು ಅನ್ನುವ ಒಂದು ಮನೋಭಾವನೆ ಬಹುಮಂದಿ ಬರಹಗಾರರಿಗಿತ್ತು. ಅದನ್ನೇ ದೊಡ್ಡ ಟ್ರಂಪ್‌ಕಾರ್ಡ್ ಮಾಡಿಟ್ಟುಕೊಂಡು ಇದನ್ನು ಒಂದು ಕನ್ನಡದ ಸೇವೆ ಎಂದು ಅನೇಕ ಮಂದಿ ತಿಳಿದರು. ಬರೆಯುತ್ತಾ ಹೋದರು. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಾ ಹೋಯಿತು. ದೇಶದಿಂದ ಹೊರಗೆ ಕೂತು ಕನ್ನಡದಲ್ಲಿ ಬರೆಯುವುದು ಒಂದು ಭಾವನಾತ್ಮಕವಾದ ಕ್ರಿಯೆಯಾಗಿ ಶುರುವಾಯಿತು ( ಯಾವುದೇ ವಲಸೆ ಬರಹಗಳು ಆರಂಭವಾಗುವುದು ಪ್ರಾಯಶಃ ಹೀಗೇ ಇರಬಹುದು). ಪ್ರಕಟಣಾ ಮಾಧ್ಯಮಗಳು ಜಾಸ್ತಿಯಾದ ಹಾಗೆ, ಮಹತ್ವಾಕಾಂಕ್ಷೀ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಾ ಹೋದಾಗ, ಓದುಗರಿಂದ ಮತ್ತು ವಿಮರ್ಶಕರಿಂದ ಬರುತ್ತಿದ್ದ ‘ಬೆಚ್ಚಗಿನ’ ಪ್ರತಿಕ್ರಿಯೆಗಳಿಗೆ ಹೊರನಾಡ ಕನ್ನಡಿಗರು ಕೊಟ್ಟುಕೊಂಡ ಸಮಜಾಯಿಷಿ ‘ನಾವಿಲ್ಲಿದ್ದುಕೊಂಡು ಇಷ್ಟು ಬರೆಯುತ್ತಿರುವುದೇ ಹೆಚ್ಚು. ನಾವೇನೂ ಅಲ್ಲಿರುವವರ ಹಾಗೆ ಬರೆಯಬೇಕಾಗಿಲ್ಲ’ ಎಂದರು. ಇದನ್ನೊಪ್ಪದ ಇನ್ನೂ ಕೆಲವರು, ನಾವು ಯಾರಿಗೇನು ಕಡಿಮೆ ಎಂದುಕೊಂಡು ‘ನಮಗೆ ಹೊರನಾಡ ಕನ್ನಡಿಗರು’ ಅನ್ನುವ ಹಣೆಪಟ್ಟಿ ಹಾಕಬೇಡಿ ಎಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೇಳಿಕೊಂಡರು. ಕರ್ನಾಟಕದ ಸಾಹಿತಿಗಳು ‘ನಾವು ನಿಮ್ಮನ್ನು ಹಾಗೆ ಭಾವಿಸುತ್ತಲೇ ಇಲ್ಲವಲ್ಲ. ಹಾಗೆ, ನಿಮ್ಮನ್ನು ನೀವು ಕರಕೊಳ್ಳುವುದಕ್ಕೆ ನಿಮಗೇ ಇಷ್ಟ. ಅದೇ ನಿಮಗೆ ಒಂದು ಐಡೆಂಟಿಟಿಯನ್ನು ಕೊಡುವುದು.’ ಎಂದರು. ಆದರೂ, ಪುಸ್ತಕದ ಬಗ್ಗೆ ಮಾತಾಡುವಾಗ, ಮುನ್ನುಡಿ, ಬೆನ್ನುಡಿ ಬರೆಯುವಾಗ ‘ಅಮೆರಿಕಾದಲ್ಲಿದ್ದೂ ಕನ್ನಡದಲ್ಲಿ ಬರೆಯುವ’ ‘ಸಾಗರೋತ್ತರ ಕನ್ನಡ ಕ್ರಿಯಾಶೀಲ ಮನಸ್ಸು’ ಎಂದೆಲ್ಲಾ ಬರೆದರು.

ಆದರೆ, ನಿಜವಾದ ಸಂಗತಿಯೇನೆಂದರೆ. ಈ ರೀತಿಯ ಪ್ರತ್ಯೇಕತೆ ಇಬ್ಬರಿಗೂ ಇಷ್ಟವೇನೋ ಅನ್ನಿಸುತ್ತದೆ. ಇದೇ ಇಬ್ಬರನ್ನೂ ಏಕಕಾಲದಲ್ಲಿ ಹತ್ತಿರವಿಡುವ ಹಾಗೂ ದೂರವಿಡುವ ಅಸ್ಮಿತೆಯೇನೋ ಎಂದನಿಸುತ್ತದೆ.

ಇಲ್ಲಿ ಎರಡು ರೀತಿಯ disconnect ಎದ್ದು ಕಾಣುತ್ತದೆ. ಕನ್ನಡನಾಡಿನಿಂದ ಹೊರಗಿರುವವರು ಕನ್ನಡದ ಸಂಸ್ಕೃತಿಯನ್ನು ವರ್ತಮಾನದಲ್ಲಿ ಜೀವಂತವಾಗಿ ಅನುಭವಿಸಿತ್ತಾ ಇಲ್ಲ. ಹಾಗೆಯೇ ಅವರು ಬರೆಯುವುದನ್ನು ಓದುತ್ತಿರುವ ಓದುಗ ಅವರಿರುವ ಸಂಸ್ಕೃತಿಯನ್ನು, ಪ್ರಪಂಚವನ್ನು ನೇರವಾಗಿ ಅನುಭವಿಸಿಲ್ಲ. ಹೊರಗಿನ ವಾಸ್ತವ್ದದ ನೆಲ, ಸಂಸ್ಕೃತಿ ಬರವಣಿಗೆಯ ವಸ್ತುವಿನ ಹೊರತಾಗಿಯೂ ಭಾಷೆಯಲ್ಲಿ, ತಂತ್ರದಲ್ಲಿ ಒಂದು ಖಂಡಾಂತರವನ್ನು ರೂಢಿಗೊಳಿಸಿಕೊಂಡುಬಿಟ್ಟಿರುತ್ತದೆ. ಇದರ ಜೀವಂತ ಪರಿಚಯವಿರದ ಕನ್ನಡದ ಓದುಗರಿಗೆ, ಹೊರಗಿನಿಂದ ಬರುವ ಸಾಹಿತ್ಯ ‘ಹೊರಗಿನ ಬೆರಗ’ನ್ನು ತೋರಿಸುವುದಕ್ಕಷ್ಟೇ ಸೀಮಿತವಾಗಿಬಿಡುತ್ತದೆ. ಆದರೆ, ಓದುಗನಿಗೆ ಅರ್ಥವಾಗಿರದ ಅಂಶವೇನೆಂದರೆ, ಆತ ಓದುತ್ತಿರುವ ಈ ಬೆರಗು ‘ಬರಹಗಾರನ ಬೆರಗು’ ಕೂಡ. ಯಾಕೆಂದರೆ, ಇಲ್ಲಿ ಕೆಲಸ ಮಾಡುತ್ತಿರುವ ಮೂಲ ಮನಸ್ಸು ಕನ್ನಡದ್ದೇ. ಆದರೆ, ಇಲ್ಲಿ ಸಾಮಾನ್ಯ ಕನ್ನಡ ಓದುಗ ಬಂiiಸುವ ಕನ್ನಡದ ‘ಫ಼ೀಲ್ ಗುಡ್’ ಅಂಶಗಳು ಕಡಿಮೆ.

ಈ ಹೊರಗಿನ ಬರಹಗಾರನ ಬಹುದೊಡ್ಡ ಮಿತಿಯೆಂದರೆ, ಕನ್ನಡದ ವರ್ತಮಾನದ ಸಾಹಿತ್ಯ, ಸಂಸ್ಕೃತಿ, ಸಿನೆಮಾಗಳ ಬಗ್ಗೆ ಇರುವ ಅಜ್ಞಾನ,ಅವಜ್ಞೆ. ಪರಸ್ಪರರ ವರ್ತಮಾನದ ಪರಿಚಯದ ಬಗೆಗಿನ ಮಿತಿ ಒಬ್ಬರ ಓದನ್ನು ಕುವೆಂಪು, ಕಾರಂತ, ಪುತಿನರಿಗೆ ನಿಲ್ಲಿಸಿದರೆ, ಇನ್ನೊಬ್ಬರನ್ನು ಕಾಫ಼್ಕಾ, ಕಾಮು, ಹೆಮಿಂಗ್ವೇ, ಎಡ್ವರ್ಡ್ ಸೈದ್, ಎರಿಕ್ ಫ಼್ರಾಂ ಗಳಿಗೆ ನಿಲ್ಲಿಸುತ್ತದೆ. ಪರಸ್ಪರರಿಗೆ ಮೊಗಳ್ಳಿ, ಅಮರೇಶ, ಜಯಂತ, ವಿವೇಕ, ಸುನಂದಾ, ಸುಮಂಗಲಾ, ವಸುಧೇಂದ್ರ ಅಥವಾ ಕಿರಣ್ ದೇಸಾಯಿ, ಹರಿ ಕಂಜ಼್ರು, ಸುಕೇತು ಮೆಹತಾ, ರಶ್ದೀ, ಚಿತ್ರಾ, ಜಂಪಾ ಲಹಿರಿ ಯಾರೂ ಪ್ರಸ್ತುತ ಎಂದೇ ಅನ್ನಿಸುವುದಿಲ್ಲ.

ಒಂದು ಸತ್ಯವೇನೆಂದರೆ, ಕನ್ನಡ ಸಾಹಿತ್ಯದಿಂದ ‘ಸಾಗರೋತ್ತರ’ರಿಗೆ ನಿಜವಾಗಿಯೂ ಸಿಕ್ಕಿರುವುದು ಒಂದಿಷ್ಟು ಕರುಣೆ, ಪ್ರೀತಿ, ಅಯ್ಯೋಪಾಪ, ರಿಯಾಯಿತಿ ಮತ್ತು ಋಣಸಂದಾಯ. ‘ಅಕ್ಕ’ ಸಮ್ಮೇಳನಕ್ಕೆ ಬಂದ ನಿಸಾರರು ‘ನಿಮ್ಮೊಳಗಿದ್ದೂ ನಿಮ್ಮಂತಾಗದೇ’ ಪದ್ಯ ಓದಿದಾಗ ಅನೇಕ ಅಮೆರಿಕನ್ನಡಿಗರು ಅದು ತಮ್ಮ ಸಂದರ್ಭಕ್ಕೆ ಬಹಳ ಪ್ರಸ್ತುತವೆಂದು ತಲೆದೂಗಿದರು. ಬರಗೂರರು ‘ಕರ್ನಾಟಕ ನಿಮ್ಮ ಚರಿತ್ರೆ, ಅಮೆರಿಕ ನಿಮ್ಮ ಭೂಗೋಳ’ ಎಂದಾಗ ಚಪ್ಪಾಳೆ ಹೊಡೆದರು. ಇನ್ನು ಗಂಭೀರ ಸಾಹಿತ್ಯಿಕ ಚಟುವಟಿಕೆಗಳಿಗಾಗಿಯೇ ಇರುವ ಒಂದೆರಡು ಸಂಘಟನೆಗಳ ಸಮಾರಂಭಗಳಿಗೆ ಬಂದ ಕನ್ನಡದ ಸಾಹಿತಿಗಳೇನಕರು ಈ ಬಗ್ಗೆ ಕೆಲವು ‘ಒಳನೋಟ’ ಗಳನ್ನು ಬಹಳ ಸೂಕ್ಷ್ಮವಾಗಿ, ಸೂಚ್ಯವಾಗಿ ಸೂಚಿಸಿದರೂ ‘ಆನ್ ದ ರೆಕಾರ್ಡ್’ ಏನೂ ಆಗಿಲ್ಲ. ಈ ಅಸಾಹಿತ್ಯಿಕ ಭಾವನಾತ್ಮಕ ಪದರುಗಳನ್ನು, ತಂತುಗಳನ್ನು ಬಿಟ್ಟು ‘ಹೊರಗಿನ’ ಕೃತಿಯ ಒಳವಿಮರ್ಶೆಯಾದರೆ ಆಗ ಅದನ್ನು ಹೊರನಾಡ ಬರವಣಿಗೆ ಎಂದು ಹೇಳಬಹುದು. ಅಲ್ಲಿಯತನಕ, ನಾವು ಹೊರಗೆ ಕೂತು ಬರೆಯುತ್ತಿದ್ದೇವೆ ಎಂದು ಹೇಳಿಕೊಳ್ಳುವುದಕ್ಕೆ ಯಾವ ಅರ್ಥವೂ ಇಲ್ಲ.

ಇಲ್ಲಿ ಕನ್ನಡದ ಓದುಗನಿಗೆ ನೀನು ಕಿರಣ್ ದೇಸಾಯಿಯ The inheritance of Loss ಓದಿದ್ದರೆ ಹೊರನಾಡ ಬರಹ ಅಥವಾ ಅವರು ಬರೆಯುತ್ತಿರುವ ಪ್ರಪಂಚದ ಅರಿವು ಇನ್ನೂ ಚೆನ್ನಾಗಿ ಆಗುತ್ತಿತ್ತು ಎಂದು ಹೇಳುವುದು ಮೂರ್ಖತನವಾಗುತ್ತದೆ. ಕನ್ನಡದಲ್ಲದ್ದ ಪ್ರಪಂಚವನ್ನು ಕನ್ನಡಕ್ಕೆ ತರುವಾಗ (ಅದು ನೇರ ಅನುವಾದವಾಗಿಲ್ಲದಿರುವಾಗ), ನ್ಯೂಯಾರ್ಕಿನಲ್ಲಿ ಆಗುತ್ತಿರುವ ಡೇ ಟ್ರೇಡಿಂಗ್ ಕಥೆಯನ್ನು ಸಿದ್ದಾಪುರದ ಸಂತೆಯಲ್ಲಿ ಆಗುತ್ತಿರುವ ದನದ ವ್ಯಾಪಾರದ ವಿವರದಂತೆ ಹೇಳಬೇಕಾದಾಗ, ಬರಹಗಾರ ಎದುರಿಸುವ ಸವಾಲು ಕೇವಲ ಇಂಗ್ಲಿಶಿನಲ್ಲಿ ಯೋಚಿಸಿ ಕನ್ನಡದಲ್ಲಿ ಬರೆಯುವುದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದು ಬಹಳ ಜಟಿಲವಾದದ್ದು ಮತ್ತು ಕೇವಲ ದೇಶಭಾಷೆಗಳಿಗಿರುವ ಸವಾಲು.

ಸುಖೇತು ಮೆಹತಾ ತನ್ನ ‘ ಮ್ಯಾಕ್ಸಿಮಮ್ ಸಿಟಿ’ ಯಲ್ಲಿ ಹೇಳುತ್ತಾನೆ. ‘ನನಗೆ ದೇಶಭಕ್ತಿ, ರಾಷ್ಟ್ರೀಯತೆ ಮತ್ತು ಈ ಎನ್ ಆರ್ ಐ ಗಳೆಂಬ ಪದಗಳ ಮೇಲೆಯೇ ವಿಶ್ವಾಸವಿಲ್ಲ. ನ್ಯೂಯಾರ್ಕಿನ ನನ್ನ ಅಪಾರ್ಟ್‌ಮೆಂಟಿನ ಎದುರಿಗಿರುವ ಪಾಕಿಸ್ತಾನಿ, ಗುಜರಾತಿನಲ್ಲಿರುವ ನನ್ನ ದೊಡ್ಡಪ್ಪನ ಮಕ್ಕಳಿಗಿಂತಾ ನನಗೆ ಹೆಚ್ಚು ಆಪ್ತನಾಗುತ್ತಾನೆ. ಈ ದೇಶ, ಕಾಲದಲ್ಲಿ ವಾರಾಂತ್ಯದಲ್ಲಿ ಪ್ಯಾರಿಸ್ಸಿನಲ್ಲಿ ನಡೆಯುವ ನನ್ನ ಚಿಕ್ಕಪ್ಪನ ಮಗಳ ಮದುವೆ ಮುಗಿಸಿಕೊಂಡು, ಭಾನುವಾರ ರಾತ್ರಿ ಪಿಕಡಿಲಿಯಲ್ಲಿ ಊಟಮಾಡಿಕೊಂಡು ಸೋiವಾರ ಬೆಳಿಗ್ಗೆ ಮತ್ತೆ ನನ್ನ ಮಗನ ಶಾಲೆಯಲ್ಲಿರುವ ಮೀಟಿಂಗಿಗೆ ಹೋಗುತ್ತೇನೆ. ಇದು ಕಷ್ಟವೇ ಅಲ್ಲ’ ಈತನದೊಂದು ಬಹಳ ವರ್ಣರಂಜಿತ ವ್ಯಕ್ತಿತ್ವ. ಈತ ಹುಟ್ಟಿದ್ದು ಬಾಂಬೆಯಲ್ಲಿ ( ಮುಂಬಯಿ ಎಂದು ಈಗಲೂ ಆತ ಕರೆಯುವುದಿಲ್ಲ). ತನ್ನ ಹದಿನಾನೆಯ ವಯಸ್ಸಿನಲ್ಲಿ ಈತ ನ್ಯೂಯಾರ್ಕಿಗೆ ವಲಸೆ ಹೋದ. ಅವರ ಕುಟುಂಬದ್ದು ದೊಡ್ಡ ವಜ್ರದ ವಹಿವಾಟು. ಆದರೆ, ಈತನನ್ನು ಆಕರ್ಷಿಸಿದ್ದು, ಜರ್ನಲಿಸಮ್. ಬಾಂಬೆ ಸ್ಫೋಟಿಸಿದಾಗ ಬಾಂಬೆಗೆ ಬಂದು ನ್ಯೂಯಾರ್ಕ್ ಟೈಮ್ಸಿಗೆ ಒಂದು ಲೇಖನ ರೆದ. ನಂತರ ಯಾರೋ ಈತನನ್ನು ಬಾಂಬೆಯ ಬಗ್ಗೆ ಒಂದು ಪುಸ್ತಕ ಬರೆಯಲು ಪ್ರಾಯೋಜಿಸಲು ಸಿದ್ಧವಾದರು. ಈ ಪುಸ್ತಕವೇ ‘ಮ್ಯಾಕ್ಸಿಮಮ್ ಸಿಟಿ’ ನಾನು ಓದಿರುವುದಲ್ಲೆಲ್ಲಾ ಒಂದು ನಗರದ ಬಗ್ಗೆ ಬರೆದ ಒಂದು ಉತ್ತಮ್ಮ ಪುಸ್ತಕವಿದು. ಅದರಲ್ಲಿ ಆತ ಬರೆದುಕೊಳ್ಳುತ್ತಾನೆ. ‘ ಬಾಂಬೆ ಬಿಟ್ಟಮೇಲೆ, ನ್ಯೂಯಾರ್ಕಿನಿಂದ ಬಾಂಬೆಗೆ ವಾಪಸ್ಸಾಗುವುದು ನನಗೆ ಎಷ್ಟು ಮುಖ್ಯವೋ, ನ್ಯೂಯಾರ್ಕಿಗೆ ವಾಪಸ್ಸು ಹೋಗುವುದೂ ನನಗೆ ಅಷ್ಟೇ ಮುಖ.. ಈ ಮಾನವ ನಿರ್ಮಿತ ಭೌಗೋಲಿಕ ಬೇಲಿಗಳ ಬಗ್ಗೆ ನನಗೆ ನಂಬಿಕೆಯಿಲ್ಲ. ನಾನೊಬ್ಬ ಜಾಗತಿಕ ಪ್ರಜೆ.’ ಇದೊಂದು ಉತ್ತಮ ಕಲ್ಪನೆ. ಆದರೆ, ಇದು ಸ್ವತಃ ಆತನಿಗೂ ಸಾಧ್ಯವಿಲ್ಲ.

ನನ್ನನ್ನು ಸದಾ ಕಾಡುವ ಪ್ರಶ್ನೆ ಒಂದು. ಹನೇಹಳ್ಳಿಯಲ್ಲಿ, ಅಗ್ರಹಾರದಲ್ಲಿ, ಅಂಕೋಲದಲ್ಲಿ, ಸಂಡೂರಿನಲ್ಲಿ, ಗೋಕರ್ಣದಲ್ಲಿ ಬೆಂಗಳೂರಿನಲ್ಲಿ ಅಥವಾ ಮುಂಬಯಿಯಲ್ಲಿ ಘಟಿಸುವ ಕ್ರಿಯೆಗಳನ್ನು ಕಲೆಯಾಗಿ ಮಾರ್ಪಡಿಸುವ ಸೃಜನಶೀಲ ಮನಸ್ಸಿಗಿಂತ ಅಮೆರಿಕಾದಲ್ಲಿನ ಗ್ರಹೀತಗಳಿಗೆ ಸ್ಪಂದಿಸುವ ಕ್ರಿಯೆ ಹೇಗೆ ಭಿನ್ನ? ಯಾಕೆ ಭಿನ್ನ? ಮನುಷ್ಯಸಂಬಂಧದ ಮೂಲಭೂತ ಹುಡುಕಾಟ ಕಲೆಯ ಗುರಿಯಾದಲ್ಲಿ ಅದು ಎಲ್ಲಿ ನಡೆದರೆ ಏನು? ಆ ಮಟ್ಟಿಗೆ ನಾವು ಗ್ಲೋಬಲ್ ಆಗಬಹುದೇ?

ಮೊದಲು ಹೇಳಿದ ಆ ನನ್ನ ಗೆಳತಿಯ ದುಗುಡಕ್ಕೆ ವಸ್ತುನಿಷ್ಠವಾಗಿ ಹೇಳಬೇಕೆಂದರೆ, ಕಾಗೆ ಗುಬ್ಬಿಗಳ ಮೇಲೆ ಪಿ ಎಚ್ ಡಿ ಮಾಡುವುದು ಸಾಧ್ಯವಿಲ್ಲ ನಿಜ. ಆದರೆ, ಕಾಗೆ, ಗುಬ್ಬಿಗಳೂ ಪಕ್ಷಿಸಂಕುಲದ ಬಳಗವೇ ಎಂದು ಭಾವಿಸಿದ್ದಲ್ಲಿ - ‘ಎ ಕೆ ರಾಮಾನುಜನ್ ಮತ್ತು ಗಿರಿಯವರನ್ನು ಬಿಟ್ಟು ಅಮೆರಿಕನ್ನಡಿಗರ ಕೃತಿಗಳನ್ನು ನೋಡುವುದಾದರೆ..... ಎಂಬ ಪೀಠಿಕೆಗಳು, ವ್ಯಾಖ್ಯೆಗಳು ಬರುವುದು ಕಮ್ಮಿಯಾಗಬಹುದೇನೋ.

(ವಿಜಯಕರ್ನಾಟಕ ಸಾಪ್ತಾಹಿಕದಲ್ಲಿ ಎರಡು ವರ್ಷಗಳ ಹಿಂದೆ ಪ್ರಕಟಿತವಾದ ಬರಹ)