Friday, March 12, 2010

ನಿಮ್ಮೊಳಗಿದ್ದೂ ನಿಮ್ಮಂತಾಗದೇ

ಕೆಲವು ದಿನಗಳ ಹಿಂದೆ ಗೆಳತಿಯೊಬ್ಬಾಕೆ ಕರ್ನಾಟಕದ ಒಂದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರಿಗೆ ‘ಕನ್ನಡಸಾಹಿತ್ಯಕ್ಕೆ ಅಮೆರಿಕನ್ನಡಿಗರ ಕೊಡುಗೆ’ ಎನ್ನುವ ವಿಷಯದ ಬಗ್ಗೆ ಒಂದು ಮಹಾಪ್ರಬಂಧವನ್ನು ಬರೆದು ಪಿ ಎಚ್ ಡಿ ಗೆ ಪ್ರಯತ್ನ ಮಾಡಬೇಕೆಂದಿದ್ದೇನೆ. ನನಗೆ ಅಡ್ವೈಸರ್ ಆಗಲು ಸಾಧ್ಯವಾ? ಎಂದು ಕೇಳಿದಾಗ ಆತ ಸುಮ್ಮನೆ ನಕ್ಕು ‘ಕಾಗೆ, ಗುಬ್ಬಿಗಳ ಮೇಲೆ ಪಿ ಎಚ್ ಡಿ ಮಾಡಲಿಕ್ಕಾಗುತ್ತದೇನಮ್ಮಾ?’ ಎಂದರಂತೆ. ಖಿನ್ನಳಾಗಿ ಹೇಳಿಕೊಂಡಳಾಕೆ. ತಾನು ಬಹಳ ವಿಷಯಗಳನ್ನೂ ಮತ್ತು ಅಂಕಿ ಅಂಶಗಳನ್ನೂ ಸಂಗ್ರಹಿಸಿಕೊಂಡಿರುವುದಾಗಿಯೂ ಆದರೆ ಏನೂ ಮಾಡಲಿಕ್ಕಾಗದೆಂದು ಪೇಚಾಡಿಕೊಂಡಳು.

ಮತ್ತೆ ಮತ್ತೆ ಈ ವಿಷಯದ ಬಗ್ಗೆ ಮಾತಾಡಬಾರದೆಂದರೂ ಈ ವಿಷಯ ಬಹಳ ಕಾಡುತ್ತೆ. ಆ ಪ್ರೊಫ಼ೆಸರರ ಹೇಳಿಕೆಯಲ್ಲಿ ಇರುವ ಸತ್ಯಾಂಶವನ್ನು ತೆಗೆದುಹಾಕುವಂತಿಲ್ಲ. ಇಲ್ಲಿ ಬರೀ ಅಮೆರಿಕನ್ನಡಿಗರ ಕೊಡುಗೆ,ಪ್ರಯತ್ನ ಅನ್ನುವುದರ ಬಗ್ಗೆ ಒಂದು ಮಹಾಪ್ರಬಂಧವನ್ನು ಬರೆದು ಪಿ ಎಚ್ ಡಿ ತೆಗೆದುಕೊಳ್ಳುತ್ತೇನೆ ಅನ್ನುವುದು ಮಹತ್ವಾಕಾಂಕ್ಷೆ ಮತ್ತು ದುಸ್ಸಾಧ್ಯ ಅನ್ನಿಸಬಹುದಾದರೂ, ಈ ಹೊರನಾಡ ಕನ್ನಡಿಗರ ಬರವಣಿಗೆ, ಆ ಬರವಣಿಗೆಗೆ ಮಾತ್ರ ಸಾಧ್ಯವಾಗಬಲ್ಲ ಚರ್ಚೆ, ಪ್ರತಿಕ್ರಿಯೆ ಮತ್ತು ವಿಮರ್ಶೆಗಳು ಬಂದಿವೆಯಾ, ಬರಬೇಕಾ ಎನ್ನುವುದನ್ನು ಕೊಂಚ ನೋಡಬೇಕಾಗಿದೆ.

ಈ ಹೊರನಾಡ ಕನ್ನಡಿಗರ ಬರವಣಿಗೆ ಎಂದು ಅದನ್ನು ಪ್ರತ್ಯೇಕಿಸಿ ನೋಡಬೇಕಾದ ಅವಶ್ಯಕತೆಯೇನಿದೆ? ಹೊರನಾಡ ಕನ್ನಡಿಗರದ್ದೇನು ನವ್ಯ, ನವೋದಯ ಅಥವಾ ಪ್ರಗತಿಶೀಲ ಎನ್ನುವಂತೆ ಸಿದ್ಧಾಂತಗಳನ್ನಿಟ್ಟುಕೊಂಡು ಬರೆಯುವ ಪಂಥವೇ? ಬರವಣಿಗೆಗೆ ಸಿದ್ಧಾಂತಗಳಿರಬೇಕಾ? ಇದರಿಂದ ಯಾವ ಸಾಮಾಜಿಕ ಬದಲಾವಣೆ ಸಾಧ್ಯ? ಇದನ್ನು ಓದುವವರ್ಯಾರು? ಓದದೇ ಇದ್ದರೆ ಆಗುವ ನಷ್ಟವೇನು?

ಈ ಪ್ರಶ್ನೆಗಳಿಗೆ ನಾನು ಖಂಡಿತಾ ಉತ್ತರಿಸಲಾರೆ..

ಯಾವುದೇ ವಲಸೆ ಸಾಹಿತ್ಯವನ್ನು ನೋಡಿದರೆ ಅದಕ್ಕೆ ಒಂದು ನಿರ್ದಿಷ್ಟ ಗುಣಗಳಿರುತ್ತವೆ. ( ವಲಸೆ ಎಂದ ತಕ್ಷಣ ಅದು ಪಶ್ಚಿಮಕ್ಕೆ ಎನ್ನುವುದು ಡೀಫ಼ಾಲ್ಟ್) ಒಬ್ಬ ಪಯಣಿಗನ ಹುಡುಕಾಟ, ನಾನ್ಯಾರು, ಎಲ್ಲಿಯವನು ಎಂಬ ಅಸ್ಮಿತೆಯ ಪ್ರಶ್ನೆ, ಇದ್ದ ಮತ್ತು ಇರುವ ನಾಡಿನ ‘ಒಳ’ ಮತ್ತು ಹೊರನೋಟಗಳು ಪಶ್ಚಿಮದ ಓದುಗರಿಗೆ ಒಂದು ಹುಲುಸಾದ ಓದನ್ನು ಒದಗಿಸಿಕೊಡುವುದಂತೂ ಗ್ಯಾರಂಟಿ. ಜಂಪಾ ಲಹಿರಿಯ ‘ನೇಮ್‌ಸೇಕ್’ ನಲ್ಲಿನ ನಾಯಕ ಗೋಗೋಲ್ ಬಾಸ್ಟನ್‌ನಲ್ಲಿ ಹುಟ್ಟಿದರೂ, ಹುಟ್ಟಾ ಆತ ಭಾರತೀಯನಲ್ಲ, ಬೆಳೆಯುತ್ತಾ ಅಮೆರಿಕನ್ ಕೂಡ ಆಗುವುದಿಲ್ಲ, ಅವನ ಹೆಸರು ಭಾರತೀಯವೂ ಅಲ್ಲ, ಅಮೆರಿಕನ್ನೂ ಅಲ್ಲದ ಎಡಬಿಡಂಗಿ ‘ಗೊಗೊಲ್’. ಅಫ಼್ಗಾನಿ ಸಂಜಾತ ಖಾಲಿದ್ ಹೊಸೀನೀಯ ‘ದ ಕೈಟ್ ರನ್ನರ್’ ನಲ್ಲಿನ ನಾಯಕ ತಾಲಿಬಾನ್ ಪೂರ್ವ ಅಫ಼್ಗಾನಿಸ್ತಾನದಲ್ಲಿ ಖರ್ಜೂರ, ಹಿಂದೂಖುಷ್‌ಗಳ ನಡುವೆ ಪ್ರಕೃತಿ, ಕುಟುಂಬವನ್ನು ಪ್ರೀತಿಸುತ್ತಾ ಬೆಳೆದರೂ ಅದನ್ನು ನೆನೆಸುತ್ತಾ, ನೆನೆಸುತ್ತಾ ಅಮೆರಿಕಾಕ್ಕೆ ಬಂದು ಬೆಳೆದು, ಯಾವುದೋ ಸಣ್ಣ ಕಾರಣಕ್ಕಾಗಿ ಮತ್ತೆ ಅಫ಼್ಗಾನಿಸ್ತಾನಕ್ಕೆ ಹೋಗಬೇಕಾದಾಗ ಆತನಿಗೆ ಕಾಣುವುದು ತಾನು ಬೆಳೆದ ಅಫ಼್ಗಾನಿಸ್ತಾನವಲ್ಲ- ತಾಲೀಬಾನರಿಂದ ಜರ್ಝರಿತವಾದ ಒಂದು ನಾಡು. ಕುಂಕುಮ, ಅರಿಶಿನ ತೊಟ್ಟು, ವಿಧವಿಧವಾದ ಮಸಾಲೆಗಳ ಅಂಗಡಿಯಲ್ಲಿ ಮಾಂತ್ರಿಕತೆಯನ್ನು ಸೂಸುವ ಚಿತ್ರಾ ದಿವಾಕರುಣಿಯ ‘ಮಿಸ್ಟ್ರೆಸ್ ಆಫ಼್ ಸ್ಪೈಸಸ್’, ‘ನಾನು ನನ್ನ ಹೆಂಡತಿಯನ್ನು ಮೊದಲು ಭೇಟಿಮಾಡಿದ್ದು ಅನಿವಾಸಿಗಳ ಭೇಟಿಗೆ ಮೆಟಫ಼ರ್ ಅನ್ನಿಸಬಹುದಾದ ಏರ್ ಇಂಡಿಯಾ ವಿಮಾನದಲ್ಲಿ’ ಎನ್ನುವ ಸುಖೇತು ಮೆಹತಾ- ಇವರೆಲ್ಲರಲ್ಲಿ ಇರುವ ಸಾಮಾನ್ಯ ಗುಣ- ಪಶ್ಚಿಮಕ್ಕೆ ಬೇಕಾದ ‘ಹೊರಗಿನವನ ಒಳನೋಟ.’

ಆದರೆ, ಇಲ್ಲಿ ಇನ್ನೊಂದು ಗುಣವನ್ನು ನಾವು ಗಮನಿಸಬಹುದು. ಈ ರೀತಿಯ ‘ಹೊಸ ಅಲೆ’ಯ ಬರಹಗಾರರ್ಯಾರೂ ರಾಮಾಯಣ, ಮಹಾಭಾರತಗಳಿಂದ ಪ್ರೇರಿತಗೊಂಡಿಲ್ಲ. ಗಾಂಧೀವಾದವಾಗಲೀ, ಪೆರಿಯಾರ್ ಆಗಲೀ, ವಿವೇಕಾನಂದರ, ಪರಮಹಂಸರ ವಿಚಾರಸರಣಿಗಳನ್ನು ಓದಿ ತಮ್ಮ ಚಿಂತನ ಕ್ರಮವನ್ನು ಬೆಳೆಸಿಕೊಂಡಿಲ್ಲ. ನಿಜ ಹೇಳಬೇಕೆಂದರೆ, ಬಹಳ ಜನಕ್ಕೆ ಭಾರತೀಯತೆಯೆನ್ನುವ ರಾಷ್ಟ್ರೀಯತೆಯ ಯಾವ ಸೂಕ್ಷ್ಮಗಳೂ ಗೊತ್ತಿಲ್ಲ್ಲ. ಕೆಲವರು ಭಾರತದಲ್ಲಿ ಹುಟ್ಟಿಯೂ ಇಲ್ಲ. (ನೈಪಾಲ ಮತ್ತು ಜಂಪಾ ಲಹಿರಿಗಳು ಭಾರತದ ಬಗ್ಗೆ ಬರೆದಾಗ ಅದು ಹೊರಗಿನ ನೋಟವೋ ಅಥವಾ ಒಳನೋಟವೋ? )ಇವರು ಬೆಳೆಯಬೇಕಾದಾಗ ಕಥಾಸರಿತ್ಸಾಗರ ಓದಿಲ್ಲ. ಬೇತಾಳ ಕಥೆಗಳೂ, ಪಂಚತಂತ್ರ ಇವರಿಗೆ ಗೊತ್ತಿಲ್ಲ‘ಹಕಲ್ಬೆರಿ ಫ಼ಿನ್’ ‘ಜೇನ್ ಐರ್’ ಅಥವಾ ‘ಓ ಹೆನ್ರಿ’ ಯನ್ನು ಓದಿಕೊಂಡೇ ಬೆಳೆದವರು. ಆದರೆ, ಇವರು ಬರೆಯುವುದು ಭಾರತೀಯರ ಬಗ್ಗೆ. ಇವರಿಗಿರುವ ಹಣೆಪಟ್ಟಿ ‘ ಭಾರತೀಯ ಇಂಗ್ಲಿಷ್ ಬರವಣಿಗೆ’ ಅಥವಾ ‘ವಲಸೆ ಬರವಣಿಗೆ’

ಈ ವಲಸೆಗಾರರ ಬರವಣಿಗೆ ಪಶ್ಚಿಮದಲ್ಲಿ ಬಹಳ ಜನಪ್ರಿಯ. ಪ್ರತಿಬಾರಿ ಬೂಕರ್ ಪ್ರಶಸ್ತಿಗೆ ಕೆಲವಾದರೂ ಇಂತಹ ಬರಹಗಾರರ ಕೃತಿಗಳು ಸೂಚಿತವಾಗಿರುತ್ತವೆ. ಬಹಳಬಾರಿ, ಇಂತಹ ಪ್ರಶಸ್ತಿಗಳನ್ನು ಗೆದ್ದುಗೊಂಡೂ ಇರುತ್ತವೆ. ಕೊಂಚ ಯೋಚಿಸಿದರೆ ಹೇಳಬಹುದು- ಈ ಬರಹಗಳು ಮುಖ್ಯವಾಗಿ ಪಶ್ಚಿಮ ಪ್ರಣೀತವಾದದ್ದು, ಬೇಕಾದ ವೇದಿಕೆ ಮತ್ತು ಸಂಸ್ಕೃತಿ ಭಾರತೀಯವಾಗಿರಬಹುದು, ಭಾಷೆ, ಮೆಟಫ಼ರ‍್ಗಳು, ತಂತ್ರ ಮತ್ತು ಬರಹದ ಸಾಧನಗಳೂ ಕೂಡ ಪಶ್ಚಿಮದ್ದೇ. ಕೊನೆಗೆ, ಎಲ್ಲವೂ ಕೊನೆಗೊಳ್ಳುವುದು ಅರಸಿಬಂದ ಆಶಯಗಳನ್ನು ಪೂರೈಸುವ, ಕನಸನ್ನು ನನಸಾಗಿಸುವ ‘ಅಪೂರ್ವ ಪಶ್ಚಿಮ’ ದಿಂದಲೇ. ಪಶ್ಚಿಮವನ್ನು ಅಪೂರ್ವವಾಗಿಸುವ ಇಂತಹ ಕೃತಿಗಳು ‘ಪೊಲಿಟಿಕಲಿ ಕರೆಕ್ಟ್’ ಆದ ‘ಫ಼ೀಲ್ ಗುಡ್’ ಅಂಶವನ್ನು ತನ್ನಂತಾನೇ ಕೊಟ್ಟಿರುತ್ತವೆ. ಆ ‘ಫ಼ೀಲ್ ಗುಡ್’ ಕನಸುಗಳ ಪೂರೈಕೆಯ ಹವಣಿಕೆಯಲ್ಲಿ ಆಗುವ ಸಂಸ್ಕೃತಿಗಳ ಜಟಾಪಟಿ ಯಾವಾಗಲೂ ಬರಹಗಾರರಿಗೂ ಓದುಗರಿಗೂ ಒಂದು ಕಾಡುವ ವಸ್ತುವಾಗಿರುತ್ತದೆ.

ಇದು ಯಾಕೆ ಮುಖ್ಯ ಎಂದು ಒಂದು ಉದಾಹರಣೆ ಕೊಡುತ್ತೇನೆ. ಈ ಬಾರಿಯ ಬೂಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಪಾಕಿಸ್ತಾನಿ ಬರಹಗಾರ ಮೊಹ್ಸಿನ್ ಹಮೀದ್‌ರ ‘ದ ರಿಲಕ್ಟಂಟ್ ಫ಼ಂಡಮೆಂಟಲಿಸ್ಟ್’ ನಲ್ಲಿ ಒಂದು ಸನ್ನಿವೇಶವಿದೆ. ನಾಯಕ ಚಂಗೇಜ಼್ ಇಪ್ಪತ್ತೆರಡರ ಪಾಕಿಸ್ತಾನಿ. ನ್ಯೂಯಾರ್ಕಿನ ಒಂದು ಕಂಪೆನಿಯಲ್ಲಿ ಆತನಿಗೆ ಒಂದು ಉತ್ತಮ ಕೆಲಸವಿದೆ. ಅಲ್ಲಿ ಅವನಿಗೆ ಒಬ್ಬ ಬಿಳಿಯ ಗೆಳತಿಯೂ ಇದ್ದಾಳೆ. ಜೀವನ ಸುಗಮವಾಗಿ ನಡೆಯಿತ್ತಿದೆ. ಅಷ್ಟರಲ್ಲಿ ನ್ಯೂಯಾರ್ಕ್‌ನಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಕುಸಿಯುತ್ತದೆ. ಯಾವುದೋ ಕೆಲಸಕ್ಕೆಂದು ಬೇರೆ ದೇಶದಲ್ಲಿದ್ದ ಆತ ತನ್ನೂರಿನ ಈ ಕಟ್ಟಡಗಳು ಕುಸಿಯುತ್ತಿರುವುದನ್ನು ಟೀವಿಯಲ್ಲಿ ನೋಡುತ್ತಾನೆ. ಆತನಿಗೆ ಗೊತ್ತಿಲ್ಲದಂತೆ ಆತನ ತುಟಿಯ ಮೇಲೆ ಒಂದು ಮುಗುಳ್ನಗೆ ಹಾದುಹೋಗಿರುತ್ತದೆ. ‘ಈಗಾದರೂ ಅಮೆರಿಕಾ, ನಿನ್ನನ್ನು ನಿನ್ನ ಮಂಡಿಬಗ್ಗಿಸಿ ಮಲಗಿಸಿದರಲ್ಲ’ ಎಂದು ಆತನಿಗನಿಸುತ್ತದೆ. ಈ ಪುಸ್ತಕಕ್ಕೆ ಬೂಕರ್ ಬರದೇ ಹೋದದ್ದು ಕೇವಲ ಆಕಸ್ಮಿಕವೇ ಅಥವಾ ಇಲ್ಲಿನ ಬರಹಗಾರನಿಗೆ ಪಶ್ಚಿಮ ಅಪೂರ್ವವಲ್ಲವಾದದ್ದಕ್ಕೇ?

ಕನ್ನಡದ ಸಂದರ್ಭದಲ್ಲಿ ಈ ರೀತಿಯ ಹೊರನಾಡ ಬರವಣಿಗೆ ಎನ್ನುವ ಒಂದು ಪ್ರಕಾರದಡಿ ಬರೆಯಲು ಸಾಧ್ಯವೇ ಎಂದು ನಾನು ಬಹಳವಾಗಿ ಯೋಚಿಸಿದ್ದೇನೆ. ಒಂದು ಕಾಲವಿತ್ತು- ದೇಶದ ಹೊರಗೆ ಕೂತು ಬರೆಯುವುದೇ ದೊಡ್ಡದ್ದು ಅನ್ನುವ ಒಂದು ಮನೋಭಾವನೆ ಬಹುಮಂದಿ ಬರಹಗಾರರಿಗಿತ್ತು. ಅದನ್ನೇ ದೊಡ್ಡ ಟ್ರಂಪ್‌ಕಾರ್ಡ್ ಮಾಡಿಟ್ಟುಕೊಂಡು ಇದನ್ನು ಒಂದು ಕನ್ನಡದ ಸೇವೆ ಎಂದು ಅನೇಕ ಮಂದಿ ತಿಳಿದರು. ಬರೆಯುತ್ತಾ ಹೋದರು. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಾ ಹೋಯಿತು. ದೇಶದಿಂದ ಹೊರಗೆ ಕೂತು ಕನ್ನಡದಲ್ಲಿ ಬರೆಯುವುದು ಒಂದು ಭಾವನಾತ್ಮಕವಾದ ಕ್ರಿಯೆಯಾಗಿ ಶುರುವಾಯಿತು ( ಯಾವುದೇ ವಲಸೆ ಬರಹಗಳು ಆರಂಭವಾಗುವುದು ಪ್ರಾಯಶಃ ಹೀಗೇ ಇರಬಹುದು). ಪ್ರಕಟಣಾ ಮಾಧ್ಯಮಗಳು ಜಾಸ್ತಿಯಾದ ಹಾಗೆ, ಮಹತ್ವಾಕಾಂಕ್ಷೀ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಾ ಹೋದಾಗ, ಓದುಗರಿಂದ ಮತ್ತು ವಿಮರ್ಶಕರಿಂದ ಬರುತ್ತಿದ್ದ ‘ಬೆಚ್ಚಗಿನ’ ಪ್ರತಿಕ್ರಿಯೆಗಳಿಗೆ ಹೊರನಾಡ ಕನ್ನಡಿಗರು ಕೊಟ್ಟುಕೊಂಡ ಸಮಜಾಯಿಷಿ ‘ನಾವಿಲ್ಲಿದ್ದುಕೊಂಡು ಇಷ್ಟು ಬರೆಯುತ್ತಿರುವುದೇ ಹೆಚ್ಚು. ನಾವೇನೂ ಅಲ್ಲಿರುವವರ ಹಾಗೆ ಬರೆಯಬೇಕಾಗಿಲ್ಲ’ ಎಂದರು. ಇದನ್ನೊಪ್ಪದ ಇನ್ನೂ ಕೆಲವರು, ನಾವು ಯಾರಿಗೇನು ಕಡಿಮೆ ಎಂದುಕೊಂಡು ‘ನಮಗೆ ಹೊರನಾಡ ಕನ್ನಡಿಗರು’ ಅನ್ನುವ ಹಣೆಪಟ್ಟಿ ಹಾಕಬೇಡಿ ಎಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೇಳಿಕೊಂಡರು. ಕರ್ನಾಟಕದ ಸಾಹಿತಿಗಳು ‘ನಾವು ನಿಮ್ಮನ್ನು ಹಾಗೆ ಭಾವಿಸುತ್ತಲೇ ಇಲ್ಲವಲ್ಲ. ಹಾಗೆ, ನಿಮ್ಮನ್ನು ನೀವು ಕರಕೊಳ್ಳುವುದಕ್ಕೆ ನಿಮಗೇ ಇಷ್ಟ. ಅದೇ ನಿಮಗೆ ಒಂದು ಐಡೆಂಟಿಟಿಯನ್ನು ಕೊಡುವುದು.’ ಎಂದರು. ಆದರೂ, ಪುಸ್ತಕದ ಬಗ್ಗೆ ಮಾತಾಡುವಾಗ, ಮುನ್ನುಡಿ, ಬೆನ್ನುಡಿ ಬರೆಯುವಾಗ ‘ಅಮೆರಿಕಾದಲ್ಲಿದ್ದೂ ಕನ್ನಡದಲ್ಲಿ ಬರೆಯುವ’ ‘ಸಾಗರೋತ್ತರ ಕನ್ನಡ ಕ್ರಿಯಾಶೀಲ ಮನಸ್ಸು’ ಎಂದೆಲ್ಲಾ ಬರೆದರು.

ಆದರೆ, ನಿಜವಾದ ಸಂಗತಿಯೇನೆಂದರೆ. ಈ ರೀತಿಯ ಪ್ರತ್ಯೇಕತೆ ಇಬ್ಬರಿಗೂ ಇಷ್ಟವೇನೋ ಅನ್ನಿಸುತ್ತದೆ. ಇದೇ ಇಬ್ಬರನ್ನೂ ಏಕಕಾಲದಲ್ಲಿ ಹತ್ತಿರವಿಡುವ ಹಾಗೂ ದೂರವಿಡುವ ಅಸ್ಮಿತೆಯೇನೋ ಎಂದನಿಸುತ್ತದೆ.

ಇಲ್ಲಿ ಎರಡು ರೀತಿಯ disconnect ಎದ್ದು ಕಾಣುತ್ತದೆ. ಕನ್ನಡನಾಡಿನಿಂದ ಹೊರಗಿರುವವರು ಕನ್ನಡದ ಸಂಸ್ಕೃತಿಯನ್ನು ವರ್ತಮಾನದಲ್ಲಿ ಜೀವಂತವಾಗಿ ಅನುಭವಿಸಿತ್ತಾ ಇಲ್ಲ. ಹಾಗೆಯೇ ಅವರು ಬರೆಯುವುದನ್ನು ಓದುತ್ತಿರುವ ಓದುಗ ಅವರಿರುವ ಸಂಸ್ಕೃತಿಯನ್ನು, ಪ್ರಪಂಚವನ್ನು ನೇರವಾಗಿ ಅನುಭವಿಸಿಲ್ಲ. ಹೊರಗಿನ ವಾಸ್ತವ್ದದ ನೆಲ, ಸಂಸ್ಕೃತಿ ಬರವಣಿಗೆಯ ವಸ್ತುವಿನ ಹೊರತಾಗಿಯೂ ಭಾಷೆಯಲ್ಲಿ, ತಂತ್ರದಲ್ಲಿ ಒಂದು ಖಂಡಾಂತರವನ್ನು ರೂಢಿಗೊಳಿಸಿಕೊಂಡುಬಿಟ್ಟಿರುತ್ತದೆ. ಇದರ ಜೀವಂತ ಪರಿಚಯವಿರದ ಕನ್ನಡದ ಓದುಗರಿಗೆ, ಹೊರಗಿನಿಂದ ಬರುವ ಸಾಹಿತ್ಯ ‘ಹೊರಗಿನ ಬೆರಗ’ನ್ನು ತೋರಿಸುವುದಕ್ಕಷ್ಟೇ ಸೀಮಿತವಾಗಿಬಿಡುತ್ತದೆ. ಆದರೆ, ಓದುಗನಿಗೆ ಅರ್ಥವಾಗಿರದ ಅಂಶವೇನೆಂದರೆ, ಆತ ಓದುತ್ತಿರುವ ಈ ಬೆರಗು ‘ಬರಹಗಾರನ ಬೆರಗು’ ಕೂಡ. ಯಾಕೆಂದರೆ, ಇಲ್ಲಿ ಕೆಲಸ ಮಾಡುತ್ತಿರುವ ಮೂಲ ಮನಸ್ಸು ಕನ್ನಡದ್ದೇ. ಆದರೆ, ಇಲ್ಲಿ ಸಾಮಾನ್ಯ ಕನ್ನಡ ಓದುಗ ಬಂiiಸುವ ಕನ್ನಡದ ‘ಫ಼ೀಲ್ ಗುಡ್’ ಅಂಶಗಳು ಕಡಿಮೆ.

ಈ ಹೊರಗಿನ ಬರಹಗಾರನ ಬಹುದೊಡ್ಡ ಮಿತಿಯೆಂದರೆ, ಕನ್ನಡದ ವರ್ತಮಾನದ ಸಾಹಿತ್ಯ, ಸಂಸ್ಕೃತಿ, ಸಿನೆಮಾಗಳ ಬಗ್ಗೆ ಇರುವ ಅಜ್ಞಾನ,ಅವಜ್ಞೆ. ಪರಸ್ಪರರ ವರ್ತಮಾನದ ಪರಿಚಯದ ಬಗೆಗಿನ ಮಿತಿ ಒಬ್ಬರ ಓದನ್ನು ಕುವೆಂಪು, ಕಾರಂತ, ಪುತಿನರಿಗೆ ನಿಲ್ಲಿಸಿದರೆ, ಇನ್ನೊಬ್ಬರನ್ನು ಕಾಫ಼್ಕಾ, ಕಾಮು, ಹೆಮಿಂಗ್ವೇ, ಎಡ್ವರ್ಡ್ ಸೈದ್, ಎರಿಕ್ ಫ಼್ರಾಂ ಗಳಿಗೆ ನಿಲ್ಲಿಸುತ್ತದೆ. ಪರಸ್ಪರರಿಗೆ ಮೊಗಳ್ಳಿ, ಅಮರೇಶ, ಜಯಂತ, ವಿವೇಕ, ಸುನಂದಾ, ಸುಮಂಗಲಾ, ವಸುಧೇಂದ್ರ ಅಥವಾ ಕಿರಣ್ ದೇಸಾಯಿ, ಹರಿ ಕಂಜ಼್ರು, ಸುಕೇತು ಮೆಹತಾ, ರಶ್ದೀ, ಚಿತ್ರಾ, ಜಂಪಾ ಲಹಿರಿ ಯಾರೂ ಪ್ರಸ್ತುತ ಎಂದೇ ಅನ್ನಿಸುವುದಿಲ್ಲ.

ಒಂದು ಸತ್ಯವೇನೆಂದರೆ, ಕನ್ನಡ ಸಾಹಿತ್ಯದಿಂದ ‘ಸಾಗರೋತ್ತರ’ರಿಗೆ ನಿಜವಾಗಿಯೂ ಸಿಕ್ಕಿರುವುದು ಒಂದಿಷ್ಟು ಕರುಣೆ, ಪ್ರೀತಿ, ಅಯ್ಯೋಪಾಪ, ರಿಯಾಯಿತಿ ಮತ್ತು ಋಣಸಂದಾಯ. ‘ಅಕ್ಕ’ ಸಮ್ಮೇಳನಕ್ಕೆ ಬಂದ ನಿಸಾರರು ‘ನಿಮ್ಮೊಳಗಿದ್ದೂ ನಿಮ್ಮಂತಾಗದೇ’ ಪದ್ಯ ಓದಿದಾಗ ಅನೇಕ ಅಮೆರಿಕನ್ನಡಿಗರು ಅದು ತಮ್ಮ ಸಂದರ್ಭಕ್ಕೆ ಬಹಳ ಪ್ರಸ್ತುತವೆಂದು ತಲೆದೂಗಿದರು. ಬರಗೂರರು ‘ಕರ್ನಾಟಕ ನಿಮ್ಮ ಚರಿತ್ರೆ, ಅಮೆರಿಕ ನಿಮ್ಮ ಭೂಗೋಳ’ ಎಂದಾಗ ಚಪ್ಪಾಳೆ ಹೊಡೆದರು. ಇನ್ನು ಗಂಭೀರ ಸಾಹಿತ್ಯಿಕ ಚಟುವಟಿಕೆಗಳಿಗಾಗಿಯೇ ಇರುವ ಒಂದೆರಡು ಸಂಘಟನೆಗಳ ಸಮಾರಂಭಗಳಿಗೆ ಬಂದ ಕನ್ನಡದ ಸಾಹಿತಿಗಳೇನಕರು ಈ ಬಗ್ಗೆ ಕೆಲವು ‘ಒಳನೋಟ’ ಗಳನ್ನು ಬಹಳ ಸೂಕ್ಷ್ಮವಾಗಿ, ಸೂಚ್ಯವಾಗಿ ಸೂಚಿಸಿದರೂ ‘ಆನ್ ದ ರೆಕಾರ್ಡ್’ ಏನೂ ಆಗಿಲ್ಲ. ಈ ಅಸಾಹಿತ್ಯಿಕ ಭಾವನಾತ್ಮಕ ಪದರುಗಳನ್ನು, ತಂತುಗಳನ್ನು ಬಿಟ್ಟು ‘ಹೊರಗಿನ’ ಕೃತಿಯ ಒಳವಿಮರ್ಶೆಯಾದರೆ ಆಗ ಅದನ್ನು ಹೊರನಾಡ ಬರವಣಿಗೆ ಎಂದು ಹೇಳಬಹುದು. ಅಲ್ಲಿಯತನಕ, ನಾವು ಹೊರಗೆ ಕೂತು ಬರೆಯುತ್ತಿದ್ದೇವೆ ಎಂದು ಹೇಳಿಕೊಳ್ಳುವುದಕ್ಕೆ ಯಾವ ಅರ್ಥವೂ ಇಲ್ಲ.

ಇಲ್ಲಿ ಕನ್ನಡದ ಓದುಗನಿಗೆ ನೀನು ಕಿರಣ್ ದೇಸಾಯಿಯ The inheritance of Loss ಓದಿದ್ದರೆ ಹೊರನಾಡ ಬರಹ ಅಥವಾ ಅವರು ಬರೆಯುತ್ತಿರುವ ಪ್ರಪಂಚದ ಅರಿವು ಇನ್ನೂ ಚೆನ್ನಾಗಿ ಆಗುತ್ತಿತ್ತು ಎಂದು ಹೇಳುವುದು ಮೂರ್ಖತನವಾಗುತ್ತದೆ. ಕನ್ನಡದಲ್ಲದ್ದ ಪ್ರಪಂಚವನ್ನು ಕನ್ನಡಕ್ಕೆ ತರುವಾಗ (ಅದು ನೇರ ಅನುವಾದವಾಗಿಲ್ಲದಿರುವಾಗ), ನ್ಯೂಯಾರ್ಕಿನಲ್ಲಿ ಆಗುತ್ತಿರುವ ಡೇ ಟ್ರೇಡಿಂಗ್ ಕಥೆಯನ್ನು ಸಿದ್ದಾಪುರದ ಸಂತೆಯಲ್ಲಿ ಆಗುತ್ತಿರುವ ದನದ ವ್ಯಾಪಾರದ ವಿವರದಂತೆ ಹೇಳಬೇಕಾದಾಗ, ಬರಹಗಾರ ಎದುರಿಸುವ ಸವಾಲು ಕೇವಲ ಇಂಗ್ಲಿಶಿನಲ್ಲಿ ಯೋಚಿಸಿ ಕನ್ನಡದಲ್ಲಿ ಬರೆಯುವುದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದು ಬಹಳ ಜಟಿಲವಾದದ್ದು ಮತ್ತು ಕೇವಲ ದೇಶಭಾಷೆಗಳಿಗಿರುವ ಸವಾಲು.

ಸುಖೇತು ಮೆಹತಾ ತನ್ನ ‘ ಮ್ಯಾಕ್ಸಿಮಮ್ ಸಿಟಿ’ ಯಲ್ಲಿ ಹೇಳುತ್ತಾನೆ. ‘ನನಗೆ ದೇಶಭಕ್ತಿ, ರಾಷ್ಟ್ರೀಯತೆ ಮತ್ತು ಈ ಎನ್ ಆರ್ ಐ ಗಳೆಂಬ ಪದಗಳ ಮೇಲೆಯೇ ವಿಶ್ವಾಸವಿಲ್ಲ. ನ್ಯೂಯಾರ್ಕಿನ ನನ್ನ ಅಪಾರ್ಟ್‌ಮೆಂಟಿನ ಎದುರಿಗಿರುವ ಪಾಕಿಸ್ತಾನಿ, ಗುಜರಾತಿನಲ್ಲಿರುವ ನನ್ನ ದೊಡ್ಡಪ್ಪನ ಮಕ್ಕಳಿಗಿಂತಾ ನನಗೆ ಹೆಚ್ಚು ಆಪ್ತನಾಗುತ್ತಾನೆ. ಈ ದೇಶ, ಕಾಲದಲ್ಲಿ ವಾರಾಂತ್ಯದಲ್ಲಿ ಪ್ಯಾರಿಸ್ಸಿನಲ್ಲಿ ನಡೆಯುವ ನನ್ನ ಚಿಕ್ಕಪ್ಪನ ಮಗಳ ಮದುವೆ ಮುಗಿಸಿಕೊಂಡು, ಭಾನುವಾರ ರಾತ್ರಿ ಪಿಕಡಿಲಿಯಲ್ಲಿ ಊಟಮಾಡಿಕೊಂಡು ಸೋiವಾರ ಬೆಳಿಗ್ಗೆ ಮತ್ತೆ ನನ್ನ ಮಗನ ಶಾಲೆಯಲ್ಲಿರುವ ಮೀಟಿಂಗಿಗೆ ಹೋಗುತ್ತೇನೆ. ಇದು ಕಷ್ಟವೇ ಅಲ್ಲ’ ಈತನದೊಂದು ಬಹಳ ವರ್ಣರಂಜಿತ ವ್ಯಕ್ತಿತ್ವ. ಈತ ಹುಟ್ಟಿದ್ದು ಬಾಂಬೆಯಲ್ಲಿ ( ಮುಂಬಯಿ ಎಂದು ಈಗಲೂ ಆತ ಕರೆಯುವುದಿಲ್ಲ). ತನ್ನ ಹದಿನಾನೆಯ ವಯಸ್ಸಿನಲ್ಲಿ ಈತ ನ್ಯೂಯಾರ್ಕಿಗೆ ವಲಸೆ ಹೋದ. ಅವರ ಕುಟುಂಬದ್ದು ದೊಡ್ಡ ವಜ್ರದ ವಹಿವಾಟು. ಆದರೆ, ಈತನನ್ನು ಆಕರ್ಷಿಸಿದ್ದು, ಜರ್ನಲಿಸಮ್. ಬಾಂಬೆ ಸ್ಫೋಟಿಸಿದಾಗ ಬಾಂಬೆಗೆ ಬಂದು ನ್ಯೂಯಾರ್ಕ್ ಟೈಮ್ಸಿಗೆ ಒಂದು ಲೇಖನ ರೆದ. ನಂತರ ಯಾರೋ ಈತನನ್ನು ಬಾಂಬೆಯ ಬಗ್ಗೆ ಒಂದು ಪುಸ್ತಕ ಬರೆಯಲು ಪ್ರಾಯೋಜಿಸಲು ಸಿದ್ಧವಾದರು. ಈ ಪುಸ್ತಕವೇ ‘ಮ್ಯಾಕ್ಸಿಮಮ್ ಸಿಟಿ’ ನಾನು ಓದಿರುವುದಲ್ಲೆಲ್ಲಾ ಒಂದು ನಗರದ ಬಗ್ಗೆ ಬರೆದ ಒಂದು ಉತ್ತಮ್ಮ ಪುಸ್ತಕವಿದು. ಅದರಲ್ಲಿ ಆತ ಬರೆದುಕೊಳ್ಳುತ್ತಾನೆ. ‘ ಬಾಂಬೆ ಬಿಟ್ಟಮೇಲೆ, ನ್ಯೂಯಾರ್ಕಿನಿಂದ ಬಾಂಬೆಗೆ ವಾಪಸ್ಸಾಗುವುದು ನನಗೆ ಎಷ್ಟು ಮುಖ್ಯವೋ, ನ್ಯೂಯಾರ್ಕಿಗೆ ವಾಪಸ್ಸು ಹೋಗುವುದೂ ನನಗೆ ಅಷ್ಟೇ ಮುಖ.. ಈ ಮಾನವ ನಿರ್ಮಿತ ಭೌಗೋಲಿಕ ಬೇಲಿಗಳ ಬಗ್ಗೆ ನನಗೆ ನಂಬಿಕೆಯಿಲ್ಲ. ನಾನೊಬ್ಬ ಜಾಗತಿಕ ಪ್ರಜೆ.’ ಇದೊಂದು ಉತ್ತಮ ಕಲ್ಪನೆ. ಆದರೆ, ಇದು ಸ್ವತಃ ಆತನಿಗೂ ಸಾಧ್ಯವಿಲ್ಲ.

ನನ್ನನ್ನು ಸದಾ ಕಾಡುವ ಪ್ರಶ್ನೆ ಒಂದು. ಹನೇಹಳ್ಳಿಯಲ್ಲಿ, ಅಗ್ರಹಾರದಲ್ಲಿ, ಅಂಕೋಲದಲ್ಲಿ, ಸಂಡೂರಿನಲ್ಲಿ, ಗೋಕರ್ಣದಲ್ಲಿ ಬೆಂಗಳೂರಿನಲ್ಲಿ ಅಥವಾ ಮುಂಬಯಿಯಲ್ಲಿ ಘಟಿಸುವ ಕ್ರಿಯೆಗಳನ್ನು ಕಲೆಯಾಗಿ ಮಾರ್ಪಡಿಸುವ ಸೃಜನಶೀಲ ಮನಸ್ಸಿಗಿಂತ ಅಮೆರಿಕಾದಲ್ಲಿನ ಗ್ರಹೀತಗಳಿಗೆ ಸ್ಪಂದಿಸುವ ಕ್ರಿಯೆ ಹೇಗೆ ಭಿನ್ನ? ಯಾಕೆ ಭಿನ್ನ? ಮನುಷ್ಯಸಂಬಂಧದ ಮೂಲಭೂತ ಹುಡುಕಾಟ ಕಲೆಯ ಗುರಿಯಾದಲ್ಲಿ ಅದು ಎಲ್ಲಿ ನಡೆದರೆ ಏನು? ಆ ಮಟ್ಟಿಗೆ ನಾವು ಗ್ಲೋಬಲ್ ಆಗಬಹುದೇ?

ಮೊದಲು ಹೇಳಿದ ಆ ನನ್ನ ಗೆಳತಿಯ ದುಗುಡಕ್ಕೆ ವಸ್ತುನಿಷ್ಠವಾಗಿ ಹೇಳಬೇಕೆಂದರೆ, ಕಾಗೆ ಗುಬ್ಬಿಗಳ ಮೇಲೆ ಪಿ ಎಚ್ ಡಿ ಮಾಡುವುದು ಸಾಧ್ಯವಿಲ್ಲ ನಿಜ. ಆದರೆ, ಕಾಗೆ, ಗುಬ್ಬಿಗಳೂ ಪಕ್ಷಿಸಂಕುಲದ ಬಳಗವೇ ಎಂದು ಭಾವಿಸಿದ್ದಲ್ಲಿ - ‘ಎ ಕೆ ರಾಮಾನುಜನ್ ಮತ್ತು ಗಿರಿಯವರನ್ನು ಬಿಟ್ಟು ಅಮೆರಿಕನ್ನಡಿಗರ ಕೃತಿಗಳನ್ನು ನೋಡುವುದಾದರೆ..... ಎಂಬ ಪೀಠಿಕೆಗಳು, ವ್ಯಾಖ್ಯೆಗಳು ಬರುವುದು ಕಮ್ಮಿಯಾಗಬಹುದೇನೋ.

(ವಿಜಯಕರ್ನಾಟಕ ಸಾಪ್ತಾಹಿಕದಲ್ಲಿ ಎರಡು ವರ್ಷಗಳ ಹಿಂದೆ ಪ್ರಕಟಿತವಾದ ಬರಹ)

Monday, February 22, 2010

ಮಾಸ್ತಿ ಎಂಬ ಕೆಟಲಿಸ್ಟ್.

ಮಾಸ್ತಿಯವರ ಕಥಾಸಾಹಿತ್ಯ ನನಗೆ ಮತ್ತು ನನ್ನ ಪೀಳಿಗೆಯವರಿಗೆ ಎಷ್ಟು ಸಂಗತವಾಗುತ್ತದೆ ಎನ್ನುವುದನ್ನು ಅರ್ಥೈಸುವುದು ಅಷ್ಟು ಸುಲಭದ ಕೆಲಸವಲ್ಲ. ಮೌಖಿಕ-ಶ್ರವ್ಯ ಪರಂಪರೆಯ ಕಥನಕ್ರಮ ಎಂದು ಲಿಖಿತ ಕ್ರಿಯೆಯಾಯಿತೋ ಅಲ್ಲಿಗೆ ಮಾಸ್ತಿ ಪರಂಪರೆ ಬೇರೆ ಒಂದು ಮಗ್ಗುಲನ್ನು ಪಡೆದುಕೊಂಡಿತು ಎಂದು ನನಗನಿಸುತ್ತದೆ. ವೈಶಂಪಾಯನನು ಜನಮೇಜನರಾಯನಿಗೆ ಹೇಳಿರಲಿ, ಟಾಂಗಾ ಹುಸೇನ್ ಸಾಬಿ ಮಾಸ್ತಿಯವರಿಗೆ ನಲವತ್ತೈದು ವರ್ಷದ ಹಿಂದೆ ಹೇಳಿದ ಕಥೆಯಿರಲಿ, ಸೌದೆ ಅಂಗಡಿ ಸುಬ್ಬಯ್ಯನವರಾಗಲೀ ಅಥವಾ ಅವರ ಮಿತ್ರ ಲಾಯರೊಬ್ಬರಾಗಲೀ ಹೇಳಿದ ಕಥೆಯನ್ನು ನಮಗೆ ಮುಟ್ಟಿಸುವುದು ಪುಣ್ಯದ ಕೆಲಸ ಎಂದು ಮಾಸ್ತಿಯವರು ಎಂದಿಗೂ ಭಾವಿಸಿದ್ದರು. ಮತ್ತು ಅದನ್ನೇ ಅವರು ಮಾಡಿದ್ದರು, ಕೂಡ.

ಮಾಸ್ತಿಯವರ ಬಾದಶಹನ ನ್ಯಾಯ, ಶ್ರೀಕೃಷ್ಣನ ಅಂತಿಮ ದರ್ಶನ, ಕುಚೇಲನ ಮರಿಮಗ ಅಥವಾ ಅರ್ವಾಚೀನ ಆಂಗ್ಲಶಕುಂತಲೆ ಇಂತಹ ಕತೆಗಳನ್ನು ಮೊಟ್ಟಮೊದಲ ಬಾರಿಗೆ ಓದಿದಾಗ ಪ್ರಾಮಾಣಿಕವಾಗಿ ಬಂದ ನೆನೆಪೆಂದರೆ ನಮ್ಮಜ್ಜ ತಾವು ಕೇಳಿದ, ತಾವು ಓದಿದ ಅಥವಾ ಯಾವುದೋ ವರ್ತಮಾನಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಕೂಡ ಚಿಕ್ಕಮಕ್ಕಳಿಗೂ ಅರ್ಥವಾಗುವಂತೆ ಸೊಗಸಾಗಿ ಹೇಳುತ್ತಿದ್ದುದು. ಅಜ್ಜ ಹೇಳಿದ ಮಹಾಭಾರತದ ಪ್ರಸಂಗಗಳಾಗಲೀ, ಮಾಸ್ಟರ್ ಹಾಚಿಕಾರನ್ ಆಗಲೀ, ಸ್ಯಾಂಕೊ ಪ್ಯಾಂಜ಼ನ ಕತೆಯಾಗಲೀ ‘ನೀರೊಳಗಿರ್ದುಂ ಬೆಮರ್ದಂ’ ಅಥವಾ ‘ದ ಮೋಸ್ಟ್ ಅನ್‌ಕೈಂಡೆಸ್ಟ್ ಕಟ್ ಆಫ಼್ ಅಲ್’ ಆಗಲೀ ನನ್ನ ತಲೆಯೊಳಗೆ ಮೂರುದಶಕಗಳ ನಂತರವೂ ಅಳಿಯದೇ ಕೂತಿರುವುದು ಪ್ರಾಯಶಃ ಆ ಕತೆಗಳು, ಆ ವಾಕ್ಯಸರಣಿಗಳು ನನ್ನೊಳಗೇ ಅನುರಣಿಸುವ ಗುಣವನ್ನು ಹೊಂದಿರುವುದರಿಂದ ಅಥವಾ ಅದೇ ಕತೆಗಳನ್ನು ನಾನು ನನ್ನ ಸ್ನೇಹಿತರಿಗೂ ನನ್ನ ಮಕ್ಕಳಿಗೂ ಮತ್ತೆ ಮತ್ತೆ ಹೇಳಬಹುದಾಗಿರುವುದರಿಂದ. ಅಲ್ಲಿಇಂಥದ್ದು ಕತೆಯಾಗಬಲ್ಲದು, ಇಂಥದ್ದು ಕತೆಯಾಗಬಾರದು ಎನ್ನುವ ಒಂದು ಹೊರೆಯಿರುತ್ತಿರಲಿಲ್ಲ. ಕತೆ ಹೇಳುವಾತನಿಗೆ ತನ್ನ ಅನುಭವವನ್ನು ಅಥವಾ ತಾನು ಕಂಡ ಅಥವಾ ಕೇಳಿದ ಘಟನೆಯನ್ನು ಇನ್ನೊಬ್ಬರಿಗೆ ಹಂಚಿಕೊಂಡು ಅದನ್ನು ಮುಂದಕ್ಕೆ ದಾಟಿಸುವುದಷ್ಟೇ ಮುಖ್ಯವಾಗಿತ್ತು.

ಮಾಸ್ತಿಯವರು ಮಾಡಿದ್ದೂ ಇದೇ. ಅವರೇ ಹೇಳಿದಂತೆ ‘ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯ’ ಆಶಯ ಅವರ ಕಥಾಪ್ರಪಂಚದುದ್ದಕ್ಕೂ ಕೆಲಸಮಾಡಿದೆ. ಇದು ಬಹಳ ಪುಣ್ಯದ ಕೆಲಸ. ಅಂದರೆ ಜತೆಯ ಜೀವವನ್ನು ಸಹಾನುಭೂತಿಯಿಂದ ನೋಡುವುದಷ್ಟೇ ಅಲ್ಲ ಅದನ್ನು ಅಷ್ಟೇ ಸಹಾನುಭೂತಿಯಿಂದ ಮತ್ತೊಬ್ಬರಿಗೆ ತಲುಪಿಸುವುದನ್ನು ಒಂದು ಪುಣ್ಯದ ಕೆಲಸ ಎಂದು ಅವರು ನಂಬಿದ್ದರು. ಮಾಸ್ತಿಯವರು ಇಲ್ಲಿ ಒಂದು ರಾಸಾಯನಿಕ ಕ್ರಿಯೆಯಲ್ಲಿಯ ಕೆಟಲಿಸ್ಟಿನ ಹಾಗೆ ಕ್ರಿಯೆಯ ಅಂದಗೆಡದಂತೆ, ಬಣ್ಣಗೆಡದಂತೆ ಆದರೆ ಕೇಳುಗನನ್ನೂ ಮನಸಿನಲ್ಲಿ ಇಟ್ಟುಕೊಂಡು ಕತೆ ಹೇಳುತ್ತಿದ್ದರು. ಕತೆ ಹೇಳುವುದೇ ಕೇಳುವುದಕ್ಕೋಸ್ಕರ ಎನ್ನುವ ಎಚ್ಚರ ಅವರಲ್ಲಿ ಎಂದಿಗೂ ಜೀವಂತವಾಗಿರುತ್ತಿತ್ತು. ಅವರಲ್ಲಿನ ಕಲಾವಿದ ಕೆಟಲಿಸ್ಟ್‌ನ ಕೆಲಸವನ್ನು ಮಾತ್ರ ಮಾಡುತ್ತಿದ್ದ.

ಒಂದು ಉದಾಹರಣೆಯ ಮೂಲಕ ನೋಡಿದರೆ, ತತ್‌ಕ್ಷಣಕ್ಕೆ ಆಚಾರ್ಯವಂತ ಅಯ್ಯಂಗಾರ್ರು ಕತೆ ನೆನಪಿಗೆ ಬರುತ್ತದೆ. ಒಬ್ಬ ಸಂಪ್ರದಾಯಸ್ಥ ಅಯ್ಯಂಗಾರರು ಒಬ್ಬ ಕ್ರಿಶ್ಚಿಯನ್ ನರ್ಸೊಬ್ಬಳ ಜತೆ ಮದುವೆ ಇತ್ಯಾದಿ ಬಂದನಗಳಿಲ್ಲದೆ ಒಂದೇ ಸೂರಿನಡಿ ಗಂಡಹೆಂಡಿರಂತೆಯೇ ಬದುಕುತ್ತಿದ್ದುದನ್ನು ಮಾಸ್ತಿಯವರು ಇದೊಂದು ದೊಡ್ಡವಿಷಯವೇ ಅಲ್ಲವೇನೋ ಅನ್ನುವಂತೆ ಬರೆಯುತ್ತಾರೆ. ಅಂತದೇ ವಸ್ತುವನ್ನೊಳಗೊಂಡ ನಂತರದ ಪೀಳಿಗೆಯ ಕತೆಗಾರರ ಕತೆಗಳು ಸುಮ್ಮಸುಮ್ಮನೆ ಸಂಕೀರ್ಣವಾಗಿಬಿಟ್ಟವಾ ಎಂದೆನಿಸಬಹುದು. ಆದರೆ, ಈ ಕೆಟಲಿಸ್ಟನ ಮಾದರಿ, ರೂಪಕ, ಅರ್ಥವನ್ನು ಇನ್ನೂ ಒಂದಿಷ್ಟು ಹಿಂಜಿದಲ್ಲಿ ಕೆಟಲಿಸ್ಟು ರಾಸಾಯನಿಕ ಕ್ರಿಯೆಯಲ್ಲಿ ಪಾಲುಗೊಳ್ಳದೇ ಕ್ರಿಯೆಯ ಉತ್ಕರ್ಷವನ್ನು ಹೆಚ್ಚಿಸುತ್ತದೆ ಎಂದೂ ಭಾವಿಸಬಹುದು. ಆಗ ಮಾಸ್ತಿಯವರ ಈ ಜತೆಯಲ್ಲ್ಲಿನ ಜೀವವನ್ನು ಸಹಾನುಭೂತಿಯಿಂದ ನೋಡುವ ಕ್ರಿಯೆ ಆ ಸಹಾನುಭೂತಿಯೊಂದನ್ನು ಬಿಟ್ಟು ಆ ಜೀವಿಯ ಬೇರೆ ಯಾವ ಮಗ್ಗುಲನ್ನೂ ನೋಡದ, ಸೆರೆಹಿಡಿಯದ ಕೆಲವೊಮ್ಮೆ ಮನುಷ್ಯಭಾವನೆಗಳ ಸುಲಭೀಕೃತ ಪರಿಜು ಮಾತ್ರವೇನೋ ಎಂದನಿಸಬಹುದು. ಮಾಸ್ತಿಯವರಿಗೆ ಕೇಳುಗ ಬಹಳ ಮುಖ್ಯವಾಗಿರುವುದರಿಂದ ವಿವಾಹೇತರ ಸಂಬಂಧಗಳು, ಹಾದರ, ಇನ್‌ಸೆಸ್ಟ್ ಇಂಥವುಗಳನ್ನು ಹೇಳುವಾಗ ಕೂಡ ಅವುಗಳನ್ನು ಅನುಭವಿಸುತ್ತಿರುವ ಜತೆಜೀವಿಗಳ ಮೇಲಿನ ಕಂಪ್ಯಾಶನ್ ಮಾತ್ರ ಮುಖ್ಯವಾಗುತ್ತದೆ. ಇದರಿಂದ ಮಾಸ್ತಿ ಅನ್ನುವ ಜೀವಕ್ಕೆ ಆದ ಅನುಭವವೇನು, ಆ ಜೀವ ಈ ಜತೆಜೀವಿಗಳನ್ನು ಸಹಾನುಭೂತಿಯಿಂದ ನೋಡುವುದು, ಬರೆಯುವುದು ಬಿಟ್ಟರೆ ಇನ್ನೇನೂ ಮಾಡಲಾರದೇ ಹೋಯಿತೇ ಎಂದು ಅನುಮಾನ ಬರಬಹುದು.

ನಮ್ಮ ಪೀಳಿಗೆಯವರನ್ನು ಹಿಡಿದು ನಂತರ ಬರೆದ ಅನೇಕ ಕತೆಗಾರರು ಮಾಡಿದ್ದೇನೆಂದರೆ ಈ ರಾಸಾಯನಿಕ ಕ್ರಿಯೆಯನ್ನೇ ಬಹಳ ಸಂಕೀರ್ಣಗೊಳಿಸಿದ್ದು. ಕತೆಯನ್ನು ಹೇಳದೇ ಬರೇ ಬರೆಯತೊಡಗಿದ್ದು. ಈ ಲೇಖನಿ, ಕಾಗದಗಳು ಒಂದು ರೀತಿ ಕತೆಗಾರ ನೇರವಾಗಿ ಕೇಳುಗನನ್ನು ಮುಂದೆ ಕೂರಿಸಿಕೊಂಡು ಕತೆಹೇಳಬೇಕಾದಾಗ ಇರಬೇಕಾದ ಮಾಡೆಸ್ಟಿ ಮತ್ತು ಇನ್‌ಹಿಬಿಷನ್‌ಗಳನ್ನು ತೆಗೆದುಹಾಕಿಬಿಡುತ್ತದೆ. ಎಂದು ಈ ಕ್ರಿಯೆ ಸಂವಾದಿಯಾಗುವುದಿಲ್ಲವೋ ಅಂದು ಕತೆಗಾರನಿಗೆ ನಾನು ನನ್ನ ಓದುಗನಿಗೆ ಬರೆದದ್ದಕ್ಕೆಲ್ಲಾ ಅಕೌಂಟಬಲ್ ಆಗಬೇಕಿಲ್ಲ ಅನ್ನುವ ತುಂಟತನವೊಂದು ತಿಳಿದೋ, ತಿಳಿಯದೋ ಕೆಲಸ ಮಾಡಲು ಶುರುಮಾಡುತ್ತದೆ. ಆಗಾಗ ಅಮೂರ್ತವಾಗುತ್ತೇವೆ, ಪೋಲಿಯಾಗುತ್ತೇವೆ, ಸ್ವಗತವೆಲ್ಲವೂ ಮಾತಾಗುತ್ತದೆ. ಕೇಳಲಾರದ್ದನ್ನು ಓದಿ ತಿಳಿಯುತ್ತಾನೆ ಎನ್ನುವುದು ಅರಿವಾದ ತಕ್ಷಣ ಹೇಳಲಾರದ್ದು ಬರೆಯಲ್ಪಡುತ್ತದೆ. ಮಾಸ್ತಿಯವರ ಜತೆಯಲ್ಲಿನ ಜೀವಿಗಳೇ ನಾವಾಗಿದ್ದೇವೆ, ಹಾಗಾಗಿ ಈ ಜತೆಯ ಜೀವಿ ತನ್ನ ಕತೆಯನ್ನು ತಾನೇ ಹೇಳಿಕೊಂಡಾಗ ಏನಾಗಬಹುದು ಎನ್ನುವುದಕ್ಕೆ ನಂತರದ ಕತೆಗಳು ಸಾಕ್ಷಿಯಾಗಿ ನಿಂತಿವೆ.

ಇಲ್ಲಿ ಏನಾಗಿದೆ ಎಂದರೆ ಕೆಟಲಿಸ್ಟ್ ರಾಸಾಯನಿಕ ಕ್ರಿಯೆಯ ವೇಗವನ್ನು ಉತ್ಕರ್ಷಿಸುವುದಷ್ಟೇ ಅಲ್ಲ ಒಂದು ಹತೋಟಿಯಲ್ಲಿಟ್ತಿರುತ್ತಿತ್ತು. ಈ ಕ್ರಿಯೆಯ ಅಂತ್ಯದ ಬಗ್ಗೆ ಒಂದು ಜವಾಬ್ದಾರಿಯಿರುತ್ತಿತ್ತು, ಹೆಚ್ಚುಕಮ್ಮಿಯಾದರೆ ಆಸ್ಫೋಟವಾಗುತ್ತದೇನೋ ಅನ್ನುವ ಹೆದರಿಕೆಯಿರುತ್ತಿತ್ತೇನೋ.

ಇನ್ನೊಂದು ಮುಖ್ಯವಾದ ಬದಲಾವಣೆಯೆಂದರೆ ಮಾಸ್ತಿಯವರಿಗೆ ಎಂಥವನ್ನೂ ಕತೆಮಾಡುವ ಬಗ್ಗೆ ನಂಬಿಕೆಯಿದ್ದದ್ದು. ಬೇಬಿಲೋನನ ಕುಮಾರಿಯಾಗಲೀ, ಕಿಂಗ್ ಲಿಯರ್ ಆಗಲೀ ಅಥವಾ ಇಂಗ್ಲೆಂಡಿನ ಯಾವುದೋ ಪತ್ರಿಕೆಯಲ್ಲಿ ಬಂದ ಸುದ್ದಿಯಾಗಲೀ ಅದನ್ನು ಕತೆಯಾಗಿ ಮಾಸ್ತಿಯವರು ಹೇಳುತ್ತಿದ್ದರು. ವ್ಯಕ್ತಿಚಿತ್ರಗಳು, ಲಲಿತಪ್ರಬಂದಗಳು, ನುಡಿಚಿತ್ರಗಳು ಅಥವಾ ಹರಟೆಗಳೆಂದು ಈಗಿನ ಪರಿಭಾಶೆಯಲ್ಲಿ ವರ್ಗೀಕರಿಸಬಲ್ಲುವುದೆಲ್ಲಾ ಮಾಸ್ತಿಯವರ ಕೈಯಲ್ಲಿ ಕತೆಯಾಗಿರುವುದು ನಂತರ ಬರೆದವರಿಗೆ ಅದು ಸಾಧ್ಯವಾಗದಿರುವುದು ಒಂದು ವಿಶೇಷ. ಇದಕ್ಕೆ ಕಾರಣ ಮತ್ತೆ ಕತೆಗೆ ಸ್ವ- ಸ್ವರೂಪವನ್ನು ನಾವು ಕತೆಗಾರರು ಅವಲಂಬಿಸಿರುವುದು. ಅಂದರೆ, ನನ್ನ ಜೀವನದಲ್ಲಿ ನನಗೆ ಗಾಡವಾಗಿ ತಟ್ಟದೇ ಇರದಿದ್ದನ್ನು ನಾನು ಕತೆಮಾಡಲಾಗುವುದಿಲ್ಲ ಎನ್ನುವ ಪರಿಕಲ್ಪನೆಯಲ್ಲಿ ನಾವಿರುವುದು. ಈ ಗಾಢವಾಗಿ ತಟ್ಟುವ ಕ್ರಿಯೆಯಲ್ಲಿ ಭೌತಿಕವಾಗಿ ನಾವಿಲ್ಲದೇ ಹೋದರೆ ಅದು ಅನುಭವಶೂನ್ಯವಾದದ್ದು ಎನ್ನುವ ಪೂರ್ವಗ್ರಹವನ್ನು ಮತ್ತು ನಂಬಿಕೆಯನ್ನು ನಾವು ಬೆಳೆಸಿಕೊಂಡಿರುವುದು. ಕೆಲವೊಮ್ಮೆ ನಮ್ಮ ಗಟ್ಟಿ ಚರ್ಮಕ್ಕೆ ಬಹಳಷ್ಟು ಗಾಢವಾಗಿ ತಟ್ಟುವುದೇ ಇಲ್ಲ. ಈ ತಟ್ಟುವ ಕ್ರಿಯೆಗೆ ದೇಶ-ಕಾಲದ ಸಾಮೀಪ್ಯವನ್ನು ನಾವು ಬಯಸುವುದರಿಂದ ಕುಚೇಲನಾಗಲೀ, ಕಿಂಗ್ ಲಿಯರ್ ಅಗಲೀ, ಬೆಬಿಲೋನಿಯವಾಗಲೀ ಇಂಗ್ಲೆಂಡ್ ಆಗಲೀ ಇಂದು ಕಥಾವಸ್ತುವಾದರೆ ಹೆಚ್ಚುಕಮ್ಮಿ ಬಾಲಿಶವೆನಿಸಿಕೊಳ್ಳುವಷ್ಟು ಸತ್ಯವಾಗಿದೆ.

Tuesday, February 9, 2010

ಇಲ್ಲಿ ಸಾವಧಾನವೂ ಅವಸರವೇ

ಶಾಂತಿನಾಥ ದೇಸಾಯಿಯವರು ತಮ್ಮ ಕೊನೆಯ ಕಾದಂಬರಿ ‘ಓಂ ಣಮೋ’ ವನ್ನು ಮೂಗಿನ ನಾಳದಲ್ಲಿ ಆಕ್ಸಿಜನನ್ನು ಇಟ್ತುಕೊಂಡೇ ಬರೆದರಂತೆ. ಅನೇಕ ವರ್ಷಗಳೇ ಬರೆದರೂ ಕೊನೆಯ ಪರಿಜನ್ನು ಪೂರಕ್ಕೆ ಪೂರ ಯಾವಾಗ ಏನಾಗಿಬಿಡುತ್ತದೆಯೋ ಎಂಬ ಅನಿಶ್ಚತತೆಯಲ್ಲಿಯೇ ಬರೆಯಬೇಕಾಗಿ ಬಂತಂತೆ. ಹಾಗೆಯೇ ಎ ಎನ್ ಮೂರ್ತಿರಾಯರು ಚಿಕ್ಕಂದಿನಲ್ಲಿದ್ದಾಗ ಯಾವುದಾದರೂ ಪುಸ್ತಕ ದೊರೆತರೆ ಪುಸ್ತಕ ಓದಿ ಮುಗಿಸುವ ತನಕ ಸಮಾಧನವಿರುತ್ತಿರಲಿಲ್ಲವಂತೆ. ಕಾರಣ ಆ ಪುಸ್ತಕ ಇನ್ನೊಮ್ಮೆ ಸಿಗುವುದಿಲ್ಲವೆಂಬ ಹೆದರಿಕೆ. ಪುಸ್ತಕವನ್ನು ದುಡ್ಡು ಕೊಳ್ಳುವ ತಾಕತ್ತಿರಲಿಲ್ಲ.

ಓದು, ಬರೆಹ ಅನಿವಾರ್ಯವಾಗಿತ್ತು,

* * *

ಕಲೆಯೆಂಬುದು ಒಂದು ಕಾಲದಲ್ಲಿ ಸಾವಧಾನದ ಕ್ರಿಯೆಯಾಗಿತ್ತು. ಹವ್ಯಾಸವಾಗಿತ್ತು. ನಮ್ಮ ವಿರಾಮದ ಸಮಯವನ್ನು ಅದು ತುಂಬುತ್ತಿತ್ತು. ದೈನಿಕಕ್ಕೆ ಜಡ್ಡುಗಟ್ಟಿದ ಮನಸ್ಸು ಒಂದು ಪುಸ್ತಕ ಓದುವುದರಿಂದಲೋ, ಸಿನೆಮಾ ನೋಡುವುದರಿಂದಲೋ ಅಥವಾ ಒಂದು ನಾಟಕ ನೋಡುವುದರಿಂದಲೋ ಮುದಗೊಳ್ಳುತ್ತಿತ್ತು. ಸಿನೆಮಾ ನೋಡುವ ಕ್ರಿಯೆ ಒಂದು ಕುಟುಂಬದ ಇವೆಂಟ್ ಆಗುತ್ತಿತ್ತು. ಮೇಲಾಗಿ ಕಲೆಗೆ, ಸಂಸ್ಕೃತಿಗೆ ಒಂದು ಪ್ರಾದೇಶಿಕತೆ ಇತ್ತು. ಬರೇ ರಾಜಕುಮಾರನ ಸಿನೆಮಾ ಮಾತ್ರ ನೋಡಿ, ಕಾರಂತರ ಅಥವಾ ತ್ರಿವೇಣಿಯವರುಗಳ ಕಾದಂಬರಿಗಳನ್ನು ಓದಿ ಸಂತಸ ಪಡುವ ಕಾಲವಿತ್ತು. ಅಜ್ಞಾನ ವರವಂತೆ.

ನಾವು ಎಂದು ನಮ್ಮನ್ನು ನಾವು ಇಡೀ ಜಗತ್ತಿಗೆ, ಅನೇಕ ಸೃಜನಶೀಲ ಸಾಧ್ಯತೆಗಳಿಗೆಗೆ ತೆರೆದಿಟ್ಟುಕೊಂಡೆವೋ ಅಂದಿನಿಂದ ಶುರುವಾಯಿತು, ಈ ಸಾವಧಾನದಲ್ಲಿ ನಡೆಯಬೇಕಾದ ಕ್ರಿಯೆಗಳು ಒಂದು ರೀತಿ ತಹತಹದ ವಿಷಯವಾಗಿಬಿಟ್ಟವು.

ಈಗ ಮನರಂಜನೆಯೆನ್ನಿ, ವಿರಾಮದ ಓದೆನ್ನಿ, ಸಿನೆಮಾ ಎನ್ನಿ ಪ್ರತಿಯೊಂದರಲ್ಲೂ ವೈವಿದ್ಯಕ್ಕೇ ಪ್ರಾಧಾನ್ಯ. ಈತ ಬೇರೆ ರೀತಿ ಬರೆಯುತ್ತಾನೆ, ಹೊಸಾ ತರಾ ಚಿತ್ರಿಸಿದ್ದೇವೆ, ಎನ್ನುವ ಮಾತುಗಳನ್ನು ನಾವು ಬಹಳ ಕೇಳುತ್ತೇವೆ. ಮುದ್ರಣ ಕ್ರಾಂತಿಯಿಂದ ಪುಸ್ತಕಗಳ ಹಿಂಡುಹಿಂಡೇ ದೊರಕುತ್ತಿವೆ. ಪತ್ರಿಕ ಕಛೇರಿಯ ಸಾದರ-ಸ್ವೀಕಾರ ವಿಭಾಗಕ್ಕೆ ಬಂದುಬೀಳುವ ಪುಸ್ತಕಗಳ ಹೊರೆಯನ್ನು ಸುಮ್ಮನೇ ಕಣ್ಣಾಡಿಸಲೂ ಯಾರಿಗೂ ಸಮಯವಿಲ್ಲ. ಹಾಗಾಗಿ ‘ಒಳ್ಳೆಯ’ ಓದಿನ ಪ್ರಿಸ್ಕ್ರಿಪ್ಷನ್‌ಗೆಂದು ಓದುಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕದಂಗಡಿಯವರು ಒದಗಿಸುವ ಟಾಪ್-೧೦ ಅಥವಾ ಅಚ್ಚುಮೆಚ್ಚು ವಿಭಾಗಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಅಲ್ಲಿನ ಬೆಸ್ಟ್‌ಸೆಲ್ಲರ್‌ಗಳಿಗೆ ಮಾಪಕ ಯಾವುದು ಎನ್ನುವುದು ಬ್ರಹ್ಮರಹಸ್ಯ.

ಹವ್ಯಾಸವಾಗಿದ್ದ ಓದು ಅವಶ್ಯಕತೆ ಮತ್ತು ಅನಿವಾರ್ಯತೆ ಮತ್ತು ಚಟ ಹೇಗಾಗಿದೆ ಎನ್ನುವುದನ್ನು ನಾವು ಒಮ್ಮೆ ನೋಡಬೇಕಾಗಿದೆ. ಇದು ದೇಸಾಯರ ಅಥವಾ ಮೂರ್ತಿರಾಯರ ಅನಿವಾರ್ಯತೆಗಿಂತ ಭಿನ್ನವಾದದ್ದು ಎಂಬುದನ್ನೂ ನಾವು ಅರಿಯಬೇಕಾಗಿದೆ.

* * *

ಒಂದೇ ನಿಟ್ಟಿನ ಓದು, ಸಾವಧಾನದ ಓದು, ಧ್ಯಾನ ಇರಲಿ, ಓದಿಗೆ ಪುಸ್ತಕ ಬೇಕು ಎನ್ನುವ ನಮ್ಮ ನಂಬಿಕೆಯನ್ನೇ ನಾವು ಮತ್ತೆ ಪರಿಶೀಲಿಸಿ ನೋಡಬೇಕಾಗಿದೆ. ನಾನು ಡ್ರೈವ್ ಮಾಡುತ್ತಿದ್ದಾಗ ಆದಷ್ಟು ಈ ‘ಕೇಳು ಪುಸ್ತಕ’ ಗಳಿಗೆ ಶರಣಾಗುತ್ತೇನೆ. ದುರದೃಷ್ಟವಾತ್, ಕನ್ನಡ ಪುಸ್ತಕಗಳು ಇನ್ನೂ ಆಡಿಯೋ ರೂಪದಲ್ಲಿ ಸಿಗುತ್ತಿಲ್ಲ. ಕಾರಿನಲ್ಲಿ ಸಲ್ಮಾನ್ ರಶ್ದಿ, ಹೆಮಿಂಗ್ವೇ, ಓರ್ವೆಲ್, ಡಾಕ್ಟೊರೋ, ಓಶೊ, ಪಮುಕ್ ಗಳ ಜತೆ ಒನ್ ಆನ್ ಒನ್ ಆಗಲು ಪ್ರಯತ್ನ ಮಾಡುತ್ತೇನೆ. ಈ ನನ್ನ ಸಾಹಿತ್ಯಸಮಯ ಮೊಬೈಲಿನ ಮಿತ್ರರ ಸಂಭಾಷಣೆಯಿಂದ ತುಂಡಾಗುತ್ತದೆ. (ಯಾವುದೋ ಒಬ್ಬ ಕಮೆಡಿಯನ್ ಹೇಳಿದ್ದ. ಕಾರಿನಲ್ಲಿ ಹೋಗುತ್ತಾ ಮೊಬೈಲಿನಿಂದ ಮಾಡುವ ಫೋನಿನ ಸಂಭಾಷಣೆ ಸಂವಹನದ ಅತ್ಯಂತ ಕೀಳುರೂಪವೆಂದು. ಕಾರಿನಿಂದ ಯಾರಿಗಾದರೂ ಫೋನು ಮಾಡಿದರೆ, ‘ನನಗೆ ಮನೆಯಲ್ಲಿ ಮಾತಾಡಲು ಸಮಯವಿಲ್ಲ, ಆದ್ದರಿಂದ ಡ್ರೈವ್ ಮಾಡುತ್ತಾ ನಿನ್ನ ಜತೆಗೆ ಸಂಭಾಷಿಸುತ್ತೇನೆ’ ಎಂದರ್ಥವಂತೆ. ಆದರೆ, ಇದು ಎಷ್ಟು ಅನಿವಾರ್ಯವಾಗಿದೆಯೆಂದರೆ ಇದು ತಪ್ಪೆಂದು ಯಾರಿಗೂ ಅನಿಸುವುದಿಲ್ಲವೇನೋ?) ಎಲ್ಲರೂ ಮಲಗಿರುವ ಕಾಲದಲ್ಲಿ ನಾನು ಕೆಲಸ ಮಾಡುವುದರಿಂದ (ಮತ್ತು ಡ್ರೈವ್ ಮಾಡುವುದರಿಂದ) ಕೆಲವೊಮ್ಮೆ ಕತ್ತಲ ನೀರವದಲ್ಲಿ ಈ ಆಡಿಯೋ ಪುಸ್ತಕಗಳ ಜತೆಗೆ ಏಕಾಂತ ಸಿಗುತ್ತದೆ.

ಆದರೆ, ಈ ಓದು ಕೂಡ ಕಾಲನಿರ್ಣಯಿತ. ಅಂದರೆ, ನಾನೆಷ್ಟು ಕಾಲ ಡ್ರೈವ್ ಮಾಡುತ್ತೇನೋ ಅಷ್ಟು ಕಾಲ ಮಾತ್ರ ನಾನೀ ಪುಸ್ತಕ ಕೇಳಬಹುದು. ಸಂಸಾರಸ್ಥನಾದ ನಾನು ಮನೆಯಲ್ಲಿ ಮಕ್ಕಳೊಂದಿಗೆ ಒಂದಿಷ್ಟು ಸಮಯ ಕಳೆಯಬೇಕಲ್ಲವೇ? ಹಾಗಾಗಿ ಮನೆಯ ಗರಾಜಿನ ಬಾಗಿಲು ತೆಗೆದ ತಕ್ಷಣ ಈ ನನ್ನ ಇಂಗ್ಲಿಶ್ ಗೆಳೆಯರು ಪಾಸ್ ಮೋಡಿನಲ್ಲಿ ಮಾರನೆಯ ದಿನದ ತನಕ ಸ್ವಸ್ತವಾಗಿ ಗ್ಲವ್ ಬಾಕ್ಸ್ ಸೇರುತ್ತಾರೆ.

ನಂತರದ ಮನೆಯ ಓದಿಗೆ, ಮಕ್ಕಳೊಂದಿಗಿರಲು ಬಲವಂತವಾಗಿ ಸಮಯವನ್ನು ‘ಮಾಡಿಕೊಳ್ಳಬೇಕು’. ವಿರಾಮದ, ಸಾವಧಾನದ ಓದಿಗೆ ಸಮಯವನ್ನು ‘ಮಾಡಿಕೊಳ್ಳಬೇಕು’ ಎನ್ನುವುದೇ ಒಂದು ದೊಡ್ಡ ವಿರೋಧಾಭಾಸವಲ್ಲವೇ. ಅದರೆ ಇಲ್ಲಿ ನಾನು ಮಹಾತ್ಮಾ ಗಾಂಧಿಯವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತೇನೆ. ಅವರು ಹೇಳಿದ್ದರು ‘ಮಾಡುತ್ತಿರುವ ಕೆಲಸ ಬಿಟ್ಟು ಇನ್ನೊಂದು ಕೆಲಸ ಮಾಡಿದರೆ ಅದೇ ವಿರಾಮ’ ಎಂದು. ನಾನೂ ಹಾಗೇ, ಡ್ರೈವ್ ಮಾಡುತ್ತಿರುವಾಗ ಕೇಳುತ್ತಿದ್ದ ಕಾಫ್ಕಾ ಹುಳುವಾಗುವುದಕ್ಕೆ ಬಿಟ್ಟು ಮನೆಗೆ ಬಂದು ಮಗನ ಹೋಮ್‌ವರ್ಕಿನಲ್ಲಿ ನೆರವಾಗುತ್ತೇನೆ. ಹನ್ನೆರಡಕ್ಕೆ ಎರಡು ಸೇರಿಸಿದರೆ ಎಷ್ಟು ಎನ್ನುವುದನ್ನು ಮಗ ಮಾಡಬಲ್ಲ ಎಂಬ ನಂಬಿಕೆಯಿಂದ ಅವನ ಪಕ್ಕದಲ್ಲಿಯೇ ಶ್ರೀಧರ ಬಳಗಾರರನ್ನೋ, ಹುಳಿಯಾರರನ್ನೋ ಓದುತ್ತಾ ಕೂರುತ್ತೇನೆ. ಮಗಳು ಡ್ಯಾನ್ಸ್ ಕ್ಲಾಸಿಗೆ ಡ್ರಾಪ್ ಕೇಳುತ್ತಾಳೆ. ಮಗ ನಾನೂ ಬರುತ್ತೇನೆಂದು ಹಟ ಮಾಡುತ್ತಾನೆ. ಸರಿ ಎಂದು ಇಬ್ಬರಿಗೂ ಕೂಡಿಸಿ ಕಾಫ್ಕಾನನ್ನು ಮತ್ತೆ ಆನ್ ಮಾಡುತ್ತೇನೆ. ಮಕ್ಕಳಿಬ್ಬರೂ ‘ಓ’ ಎಂದು ಮುಖ ಮಾಡುತ್ತಾರೆ. ಮೂರೂ ಜನಕ್ಕೆ ಮೂಡಿದ್ದರೆ ಯಾವುದೋ ಹಾಡನ್ನು ಕೇಳುತ್ತೇವೆ. ಇಲ್ಲದಿದ್ದರೆ ಒಂದೇ ಐಪಾಡಿನ ಎರಡು ಕಿವಿಗಳನ್ನು ತಮ್ಮ ಒಂದೊಂದು ಕಿವಿಗಳಿಗೆ ಸಿಕ್ಕಿಸಿಕೊಂಡು ‘ಐ-ಶೇರ್’ ಪದವನ್ನು ಸಾರ್ಥಕಗೊಳಿಸುತ್ತಾವೆ, ಮಕ್ಕಳು. ಮಕ್ಕಳಿಬ್ಬರೂ ಕ್ಲಾಸಿನೊಳಗೆ ಹೋದಾಗ ಪಾರ್ಕಿಂಗ್ ಲಾಟಿನಲ್ಲಿ ಕಾಫ್ಕನನ್ನು ಆರಿಸಿ ಮತ್ತೆ ಹುಳಿಯಾರರಿಗೆ ವರ್ಗವಾಗುತ್ತೇನೆ. ಡೇವಿಡ್ ಸಾಹೇಬರಿಗೂ ಕಾಫ್ಕಾನ ಅಪ್ಪನಿಗೂ ಕೊಂಚ ಕನ್‌ಫ್ಯೂಸ್ ಆಗಿ ಮತ್ತೆ ಕತೆಯನ್ನು ಮೊದಲಿಂದ ಓದಲು ಶುರುಮಾಡುತ್ತೇನೆ.

ಮನೆಗೆ ಬಂದರೆ ಮತ್ತೆ ಸಾವಧಾನವಾಗಿ ಊಟ ಮಾಡಬೇಕು. ಆದರೆ, ನನ್ನ ಈ ಸಾವಧಾನಕ್ಕಿರುವ ಸಮಯ ಹದಿನೈದು ನಿಮಿಷ. ಮಕ್ಕಳಿಗೆ ಕನಿಷ್ಠ ಎಂಟರಿಂದ ಹತ್ತು ಗಂಟೆ ನಿದ್ದೆ ಬೇಕು. ಮಲಗುವುದಕ್ಕೆ ಕನಿಷ್ಠ ಒಂದು ಗಂಟೆ ಮುಂಚೆ ಊಟ ಮಾಡಬೇಕು. ಕೊಂಚವಾದರೂ ಟೀವಿ ನೋದಬೇಕು. ಹೆಂಡತಿಯ ಆಫೀಸಿನ ಲ್ಯಾಪ್‌ಟಾಪಿನಲ್ಲಿ ಬೆಂಗಳೂರಿನ ಆಫೀಸಿಗೆ ಆಗ ಬಂದ ಸುಧೀರ ಪಾಪ್ ಅಪ್ ಆಗಿ ‘ಒಂದ್ನಿಮಿಷ ಬಂದೆ.ನೀವುಗಳು ಶುರುಮಾಡಿ’ ಎಂದು ಹೇಳಿಸಿದ್ದಾನೆ.

ಪಾಳಿಗಳನ್ನು ಬದಲಿಸಿ ಕೆಲಸ ಮಾಡುವ ನನಗೆ ಕುಟುಂಬದ ಜತೆಗೆ ಊಟಮಾಡಲು ಸಮಯ ಸಿಗುವುದು ವಾರದಲ್ಲಿ ಒಂದೋ ಎರಡೋ ದಿನ ಮಾತ್ರ. ಟೀವಿಯಲ್ಲಿ ಸಾರೆಗಮ ಪ ಲಿಟಲ್ ಚ್ಯಾಂಪ್ಸ್ ಶುರುವಾಗುವ ಮುನ್ನ ಊಟ ಮಾಡಿಬಿಡಬೇಕು. ಇಲ್ಲವಾದರೆ ಯಥಾರ್ಥ್ ರಸ್ತೋಗಿಯ ಹಾಡು ಕೇಳಲು ನನ್ನ ಐದು ವರ್ಷದ ಮಗನೂ ಊಟ ಬಿಟ್ಟು ನೇರ ಟೀವಿಯ ಮುಂದೆ ಹೋಗಿ ಬಿಡುತ್ತಾನೆ. ಈ ಟೀವಿಯ ಮಕ್ಕಳು ಯಾವುದಕ್ಕೆ ಲಿಪ್ ಸಿಂಕಿಸುತ್ತವೆ ಯಾವುದನ್ನು ಹಾಡಿವೆ ಎಂಬ ಬಾಲಿವುಡ್ಡಿನ ಧುನ್‌ಗಳ ಚರ್ಚೆಯೇ ನಮ್ಮ ಕುಟುಂಬವನ್ನು ಒಂದೆಡೆ ಒಂದು ಗಂಟೆ ಒಟ್ಟಿಗೆ ಕೂಡಿಸುವುದು ಎನ್ನುವುದು ಹದಿನಾರಾಣೆ ಸತ್ಯ.

ಊಟ ಮುಗಿಸಿ ಹೆಂಡತಿಯ ಅಡುಗೆಮನೆಯ ಕೆಲಸದಲ್ಲಿ ಕೊಂಚ ಸಹಾಯ ಮಾಡಿದ ನಂತರ ನನ್ನ ಸ್ಟಡಿಯಲ್ಲಿ ಮಗಳು ಡೆಸ್ಕ್‌ಟಾಪಿನ ಮುಂದೆ ಹೋಮ್‌ವರ್ಕಿಗೆಂದು ಪ್ರತಿಷ್ಟಾಪಿಸಿರುತ್ತಾಳೆ. ಒಬಾಮಾನ ಕಾಸ್ಟ್ ಕಟಿಂಗ್ ನಲ್ಲಿ ಪುಸ್ತಕಗಳೆಲ್ಲ ಪೇಪರ್ಲೆಸ್ ಆಗಿ ಮನೆಯಲ್ಲಿ ಎಷ್ಟು ಜನ ಇದ್ದೇವೋ ಅಷ್ಟಕ್ಕೂ ಜಾಸ್ತಿ ಕಂಪ್ಯೂಟರುಗಳು ಬೇಕಾಗಿವೆ. ಪಿಡಿಎಫ್ ನಲ್ಲಿ ಕಂಟ್ರೊಲ್ ಅಲ್ಟ್ ಎಫ್ ಒತ್ತುತ್ತಾ ಬೇಕಾದ್ದನ್ನು ಮಾತ್ರ ಓದುತ್ತಾ ಓದುವ ಕ್ರಿಯೆಯೇ ಹ್ರಸ್ವವಾಗಿದೆ. ಇದೇ ಈಗಿನ ಶೈಲಿ ಎಂದುಕೊಂಡು ಸುಮ್ಮನಾಗುತ್ತೇನೆ.

ಐದು ವರ್ಷದ ಮಗ ಮಲಗಲಿಕ್ಕೆ ಮುಂಚೆ ಕತೆ ಹೇಳೆಂದು ಪೀಡಿಸುತ್ತಾನೆ. ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಲು ಮಹಾಭಾರತದ ಅಮರ ಚಿತ್ರಕತೆಯ ಪುಸ್ತಕವನ್ನು ತೆಗೆಯುತ್ತೇನೆ. ಭೀಮನ ಚಿತ್ರವನ್ನು ನೋಡಿ ‘ಡ್ಯಾಡಿ, ಭೀಮನಿಗೂ ಘಜನಿಯ ತರ ಸಿಕ್ಸ್ ಪ್ಯಾಕ್ ಇತ್ತಾ’ ಎಂದು ಕೇಳುವ ಮಗನಿಗೆ ‘ಹೌದು ಪುಟ್ಟಾ’ ಎಂದು ಹೇಳದೇ ವಿಧಿಯಿಲ್ಲ. ‘ಅಶ್ವತ್ಥಾಮೋ ಹತಃ ಕುಂಜರಃ’ ಎನ್ನುವುದನ್ನು ಅವನಿಗೆ ಅರ್ಥ ಮಾಡಿಸಲು ‘’An elephant named Ashvathama is dead’ ಎಂದು ನಾನು ಕೂಗಿ ವಾಕ್ಯದ ಮೊದಲ ಭಾಗಕ್ಕೆ ಟೀವಿಯ ಧ್ವನಿಯನ್ನು ಜಾಸ್ತಿ ಮಾಡಿ ದ್ರೋಣನನ್ನು ಸಾಯಿಸುವ ಮೂಲಕ ಅವತ್ತಿನ ಅಧ್ಯಾಯವನ್ನು ಮುಗಿಸುತ್ತೇನೆ.

ನಾನು ಒಬ್ಬನೇ ನೋಡುವ ಸಿನೆಮಾಗಳೆಂದು ನಾನೇ ಪ್ರತ್ಯೇಕಿಸಿಕೊಂಡ ಒಂದಿಷ್ಟು ಇರಾನೀ, ಫ್ರೆಂಚ್ ಸಿನೆಮಾಗಳ ಡಿವಿಡಿಗಳನ್ನು ಇವತ್ತು ನೋಡಲೇ ಬೇಕೆಂದು ಕೂರುತ್ತೇನೆ. ಕಿಯರೊಸ್ತಾಮಿ, ರೇ, ಕುರಸೋವ, ಟರಂಟಿನೋ, ಎಲ್ಲರೂ ಇಂಟರ್ನೆಟ್ಟಿನ ಡಿವಿಡಿ ಬಾಡಿಗೆಯ ಅಂಗಡಿಯಲ್ಲಿ ನನ್ನನ್ನು ನೋಡು ಎಂದು ದುಂಬಾಲು ಬಿದ್ದಿದ್ದಾರೆ. ಮುಗಿಸಲೇ ಬೇಕು ಎಂದು ಕೂತು ಒಂದು ಸಿನೆಮಾವನ್ನು ಪೂರ್ತಿ ನೋಡುತ್ತೇನೆ. ಮುಗಿಸಿದ ತಕ್ಷಣ ಡಿವಿಡಿಯನ್ನು ಪೋಸ್ಟ್ ಮಾಡಿದರೆ ಮಾರನೆಯ ದಿನವೇ ‘ರನ್ ಲೋಲ್ ರನ್’ ಬರುತ್ತಾಳೆ. ಶ್ಯಾಮ್ ಬೆನೆಗಲ್‌ರ ಹೊಸ ಚಿತ್ರ ನೋಡೆಂದು ಹೇಳಿದ ಗೆಳೆಯನಿಗೆ ಫೋನು ಮಾಡಿದಾಗ ಮಾತಾಡಲೆಂದಾದರೂ ಅ ಸಿನೆಮಾವನ್ನು ನೋಡಲೇ ಬೇಕಾಗಿದೆ. ಆಮೀರ್ ಖಾನನ ೩ ಈಡಿಯಟ್ಸ್ ನೋಡದೇ ಇದ್ದರೆ ಸಿನೆಮಾ ಬಫ್ ಆಗುವುದು ಸಾಧ್ಯವಿಲ್ಲವಾದ್ದರಿಂದ ಅದನ್ನೂ ಥಿಯೇಟರಿನಲ್ಲಿ ನೋಡುತ್ತೇನೆ. ಇದನ್ನು ಚೇತನ್ ಭಗತ್ ಬರೆದನಾ ಎಂದು ಅವನನ್ನೂ ಓದುತ್ತೇನೆ.

ಹೋದ ತಿಂಗಳು ಕಾನ್‌ಫರೆನ್ಸಿಗೆಂದು ಮೂರು ಗಂಟೆಯ ವಿಮಾನದಲ್ಲಿ ಮಯಾಮಿ ಬೀಚಿಗೆ ಹೋಗಿದ್ದೆ. ಎಂದೋ ಓದಿದ್ದ ಕಾರಂತರ ಚೋಮನ ದುಡಿ ಯನ್ನು ಒಂದೇ ಏಟಿಗೆ ವಿಮಾನದಲ್ಲಿ, ಹೋಟೆಲಿನ ರೂಮಿನಲ್ಲಿ ಓದಿದ್ದೆ. ಸತ್ತ ಎಮ್ಮೆಯನ್ನು ಹರಿದು ತಿನ್ನುವ ಚೋಮನ ಕುಟುಂಬದ ಕತೆಯನ್ನು ಓದಲು ನನಗೆ ಪ್ರಶಸ್ತವಾದ ಸ್ಥಳ ಮೂವತ್ತು ಸಾವಿರದಡಿಗಳ ಮೇಲಿನ ಏಕಾಂತ. ಬಹಳವಾಗಿ ಮನಕ್ಕೆ ತಾಕಿದ್ದ ಈ ಕಾದಂಬರಿ ಈಗ ಬಹು ರೊಮ್ಯಾಂಟಿಕ್ ಅನಿಸುತ್ತದೆ. ಅದಕ್ಕೆ ಮಯಾಮಿಯನ್ನು ನಿಂದಿಸುತ್ತೇನೆ.

ಇಲ್ಲಿ ಓದು ಸಿನೆಮಾ ಹವ್ಯಾಸವೇ, ಅವಶ್ಯಕತೆಯೇ ಅಥವಾ ಅನಿವಾರ್ಯವೇ ಎಂದು ನನಗೆ ನಾನೇ ಕೇಳಿಕೊಳ್ಳುತ್ತೇನೆ. ಎಷ್ಟೇ ಇಲ್ಲವೆಂದು ಹೇಳಿಕೊಳ್ಲಬೇಕೆಂದರೂ ಮೊದಲು ಹವ್ಯಾಸವಾಗಿದ್ದ ಸಿನೆಮಾ, ಓದು ಈಗ ಅನಿವಾರ್ಯವಾಗಿದೆ. ನಾನೆಂದೂ ವೃತ್ತಿಪರ ಬರಹಗಾರನಾಗಲಾರೆ ಎಂಬ ಅರಿವು ನನಗಿದ್ದರೂ ಈ ಓದು ನನ್ನ ಜೀವನದ ಪ್ರಮುಖ ಅವಶ್ಯಕತೆಯಾಗಿ ನಂತರ ಕಾಲಕ್ರಮೇಣವಾಗಿ ಅನಿವಾರ್ಯವಾಗಿರುವುದಕ್ಕೆ ಕಾರಣಗಳೇನು ಎಂದು ಯೋಚಿಸಬೇಕಾಗಿದೆ? ಹೀಗೆ ಅನಿವಾರ್ಯವಾಗುವುದರ ಅವಶ್ಯಕತೆ ಎಷ್ಟಿದೆಯೆನ್ನುವುದೂ ಪ್ರಶ್ನಾತ್ಮಕ.

ನಾನೇ ಅವಶ್ಯಕ, ಅನಿವಾರ್ಯ ಎಂದಂದುಕೊಂಡು ಓದಿದ ಎಷ್ಟು ಪುಸ್ತಕಗಳನ್ನು ಓದಿ ಪ್ರಾಮಾಣಿಕವಾಗಿ ಆನಂದ ಪಟ್ಟಿದ್ದೇನೆ ಎಂದು ನಾನೇ ಪ್ರಶ್ನಿಸಿಕೊಳ್ಳುತ್ತೇನೆ? ಮೊದಲು ನನಗೆ ಬೇಕಾದ್ದು ಓದುವ ಸ್ವಾತಂತ್ರ್ಯವಿತ್ತು. ಈಗ ಆ ಸ್ವಾತಂತ್ರ್ಯ ನನಗಿದೆಯೇ? ಲೈಬ್ರರಿಯ ಬುಕ್‌ಕ್ಲಬ್ಬಿನ ಚರ್ಚೆಗೆಂದು ಕೆಲವೊಂದು ಪುಸ್ತಕ ಓದಬೇಕಾಗಿದೆ, ಪತ್ರಿಕೆಗೆ ಬರೆಯಬೇಕೆಂದು ಯಾವುದೋ ಪುಸ್ತಕವನ್ನೂ ಓದಬೇಕಾಗಿದೆ, ಸ್ನೇಹಿತನ ಜತೆ ಸಂಭಾಶಿಸಲು ಇಷ್ಟವೋ ಇಲ್ಲವೋ ಯಾವುದೋ ಪೊಲಿಶ್ ಸಿನೆಮಾ ನೋಡಬೇಕಾಗಿದೆ. ಸಂಸಾರದ ಸ್ವಾಸ್ಥ್ಯಕ್ಕೆ ಇನ್ನೊಂದು ಸಿನೆಮಾ ನೋಡಬೇಕಾಗಿದೆ.

ಅನಿವಾರ್ಯವೆಂದು ಅನಿಸಿದ್ದರಿಂದ ಯಾವುದನ್ನೂ ಬಿಡದೇ ಮಾಡಲೇಬೇಕಾಗಿದೆ ಎಂಬ ಒಂದು ಒತ್ತಡವನ್ನು ನಮಗೆ ನಾವೇ ವಿಧಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಜೀವನ ಫಾಸ್ಟ್ ಫಾರ್ವರ್ಡ್ ಮೋಡಿನಲ್ಲಿದ್ದಂತೆ ಅಥವಾ ಹೈವೇಯಲ್ಲಿ ಒಂದು ಲೇನಿನಲ್ಲಿಯೇ ಹೋಗದ ಕಾರು ತನ್ನ ಪಕ್ಕದ ಕಾರುಗಳನ್ನು ದಾಟಲು ಲೇನಿನಿಂದ ಲೇನಿಗೆ ಹಾರುತ್ತಿದ್ದಂತೆ ಭಾಸವಾಗಿದೆ.

ಇದಕ್ಕೆ ಸಮಾಧಾನವೆಂದರೆ ದೀರ್ಘ ಓದು ಅಥವಾ ಮರು ಓದು. ಒಂದು ‘ಮರಳಿ ಮಣ್ಣಿಗೆ’ ಅಥವಾ ಒಂದು ‘ಮಲೆಗಳಲ್ಲಿ ಮದುಮಗಳು’ ಓದಿಗೆ ಎಂಥ ಡಿಕಂಡಿಷನಿಂಗ್ ಶಕ್ತಿಯಿದೆಯೆಂದರೆ ಓದು ಚಟವಲ್ಲ, ಅದು ಅನಿವಾರ್ಯವೂ ಅಲ್ಲ ಅದೊಂದು ಯಾವತ್ತೂ ಆನಂದಿಸಬಲ್ಲ ಅನುಭೂತಿ ಎನ್ನುವ ಭಾವವನ್ನು ಕೊಡುತ್ತದೆ. ಮತ್ತೆ ಮತ್ತೆ ಈ ಪುಸ್ತಕಗಳನ್ನು ಓದುವುದರಿಂದ ಓದು ಯಾವತ್ತೂ ಚಟವಲ್ಲ ಎಂದೆಸುತ್ತದೆ.

ಒಳ್ಲೆಯ ಬರವಣಿಗೆ ಎನ್ನುವುದರ ಒಳ್ಳೆಯತನವನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕಾಗಿದೆ.

Friday, January 29, 2010

ಫೈನಲ್ ಕಟ್
ಅರವಿಂದ ಅಡಿಗ ‘ದ ವೈಟ್ ಟೈಗರ್’ ಬರೆದು ಸುಮಾರು ದಿನ ಅದನ್ನು ಪ್ರಕಟಮಾಡುವ ಉದ್ದೇಶವನ್ನೆ ಹೊಂದಿರಲಿಲ್ಲ. ನಂತರ ಅದನ್ನು ಮತ್ತೆ ಪರಿಷ್ಕರಿಸಿ ರೆದಾದ ಮೇಲೆ ಅದನ್ನು ತನ್ನ ಏಜೆಂಟಿಗೆ ಕಳಿಸಿದಾಗ ಆ ಏಜೆಂಟು ಅದನ್ನು ಓದಿದ ನಂತರ ಸಂಪಾದಕ ಮಂಡಳಿಗೆ ಕೊಟ್ಟ. ಅದನ್ನು ಓದಿದ ಸಂಪಾದಕರೊಬ್ಬರು ಇಡೀ ಕಾದಂಬರಿಯನ್ನು ಉತ್ತಮ ಪುರುಷದಲ್ಲಿ ಬರೆದುಕೊಟ್ಟರೆ ಇದನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದಿದ್ದರು. ಕಾದಂಬರಿ ಪ್ರಕಟಣೆಯಾಗಲು ಬೇರೆ ದಾರಿಯೇ ಇವೆಂದು ಗೊತ್ತಾದ ಮೇಲೆ ಅಡಿಗ ಕಾದಂಬರಿಯನ್ನು ಕೇವಲ ಒಂದು ತಿಂಗಳಲ್ಲಿ ಉತ್ತಮ ಪುರುಷದಲ್ಲಿ ಬರೆದುಕೊಟ್ಟನಂತೆ. ಈ ಉತ್ತಮ ಪುರುಷದ ನಿರೂಪಣೆ ಇಡೀ ಕಾದಂಬರಿಗೆ ಒಂದು ಅಧಿಕೃತತೆಯನ್ನು ಕೊಡುತ್ತದೆ ಎಂದು ಪರಿಷ್ಕರಣ ಮಂಡಲಿಯ ಒಮ್ಮತದ ಅಭಿಪ್ರಾಯವಾಗಿತ್ತು. ಅದನ್ನು ‘ಲೇಖಕನ ಸ್ವಾತಂತ್ರ್ಯ’ ಎಂಬ ಹಟಕ್ಕೆ ಬಿದ್ದು ಅಡಿಗ ಪರಿಷ್ಕರಿಸದೇ ಹೋಗಿದ್ದರೆ ಕಾದಂಬರಿ ಪ್ರಕಟವಾಗಿಯೂ ಇರುತ್ತಿರಲಿಲ್ಲ. ನಂತರದ ಬೂಕರ್ ಇತ್ಯಾದಿಗಳು ಕನಸಾಗಿಯೇ ಉಳಿಯುತ್ತಿದ್ದವು.

ಇಂಗ್ಲಿಶ್ ಕಾದಂಬರಿಗಳ ಮಾರ್ಕೆಟಿಂಗ್ ಜಾಲವೇ ಬಹಳ ದೊಡ್ಡದು. ಈ ಹಸ್ತಪ್ರತಿಯನ್ನು ಓದುವ, ತಿದ್ದುವ, ಪೂರಾ ಬದಲಿಸುವ ಅಥವಾ ತಿರಸ್ಕರಿಸುವ ಒಂದು ದೊಡ್ಡ ಗುಂಪೇ ಪುಸ್ತಕದ ಪ್ರಕಟಣೆಯನ್ನು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ಎಲ್ಲದರ ಮುಖ್ಯವಾದ ಉಸಿರಿರುವುದು ಮಾರುಕಟ್ಟೆಯ ನಾಡಿಬಡಿತ. ಇಂಥ ಪುಸ್ತಕವನ್ನು ಬರೆದರೆ ಪ್ರಾಯಶಃ ಓದುಗರು ಓದುತ್ತಾರೆ ಎನ್ನುವ ನಂಬಿಕೆ. ಅಂದರೆ ಈ ಪ್ರಕಾಶಕ ಮಂಡಲಿಗೆ ಕೃತಿಯ ವಸ್ತು, ಸಮಕಾಲೀನತೆ ಮತ್ತು ಬರೆಯುವ ಶೈಲಿ ಎಲ್ಲವೂ ಆ ಕೃತಿಯನ್ನು ಮಾರುತ್ತದಾ ಅನ್ನುವುದು ಬಹಳ ಮುಖ್ಯವಾಗುತ್ತದೆ. ಒಂದು ಜಗತ್ತು ‘ಇಂಡಿಯಾ ಈಸ್ ಶೈನಿಂಗ್’ ಎಂದು ಹೇಳಿ ಮೆರೆಯುತ್ತಿರಬೇಕಾದರೆ, ಪಾನು ಜಗಿಯುವ ಕೀಳು ಜಾತಿಯ ಬಿಹಾರಿಮೂಲದ ಬಲರಾಮ ಹಲವಾಯಿಯ ಕಥನ ಉತ್ತಮಪುರುಷದಲ್ಲಿರುವುದು ಇನ್ನೊಂದು ಇಂಡಿಯಾದ ಅಧಿಕೃತ ಚಿತ್ರಣ ಎಂದು ಈ ಸಂಪಾದಕ ಮಂಡಳಿಗೆ ಅನಿಸಿದ್ದಿರಬಹುದು. ಇನ್ನೂ ಹೆಚ್ಚಾಗಿ ಇಂಥ ಇಂಡಿಯಾದ ಬಗ್ಗೆಯೇ ಇಂಗ್ಲಿಶ್ ಓದುಗರಿಗೆ ಆಸಕ್ತಿಯಿರುವುದು ಹೊರತು ಅಮಿತವ್ ಘೋಷನ ‘ಸೀ ಆಫ಼್ ಪಾಪೀಸ್’ ನ ತ್ರಿವಳಿಯಲ್ಲ ಎಂಬ ಮಾರುಕಟ್ಟೆಯ ಅಂಶವೂ ಈ ಕೃತಿಯ ಆಯ್ಕೆ, ಪರಿಷ್ಕರಣ ಮತ್ತು ಪ್ರಕಾಶನದಲ್ಲಿ ಕೆಲಸ ಮಾಡಿರುತ್ತದೆ.

ಕಾದಂಬರಿಯನ್ನೋ, ಕತೆಯನ್ನೋ ಬರೆದಾದಮೇಲೆ ಅದರ ಪರಿಷ್ಕರಣದ ಕಾರ್ಯವನ್ನು ಯಾರು ಮಾಡಬೇಕು? ಕನ್ನಡದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಮಟ್ಟಿಗೆ ಕೃತಿಕಾರನೇ ಕೃತಿಯ ಪರಿಷ್ಕರಣವನ್ನೂ ಮಾಡಿರುತ್ತಾನೆ. ಕನ್ನಡದ ಸೀಮಿತ ಮಾರುಕಟ್ಟೆಯಲ್ಲಿ ಈ ಪರಿಷ್ಕರಣ ಕಾರ್ಯಕ್ಕೆ ವೃತ್ತಿಪರತೆ ತರಲಿಕ್ಕಾಗುತ್ತದೆಯಾ? ಅಂದರೆ ಅಡಿಗನ ಕಾದಂಬರಿಯಂತೆ ಮಾರುಕಟ್ಟೆ ಪ್ರಣೀತ ಪರಿಶ್ಕರಣವಲ್ಲದಿದ್ದರೂ ಕಾದಂಬರಿಯ ಕೊನೆಯ ಪರಿಜನ್ನು ವೃತ್ತಿಪರವಾಗಿ ಪರಿಷ್ಕಾರ ಮಾಡಲು ಸಾಧ್ಯವಿದೆಯಾ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಎಂದರೆ ಹೀಗೆ ಬೇರೊಬ್ಬರಿಂದ ಪರಿಷ್ಕೃತವಾದ ತಮ್ಮ ಕೃತಿಯನ್ನು ಪ್ರಕಟಿಸಲು ನಮ್ಮ ಕಾದಂಬರಿಕಾರರು ಸಿದ್ಧರಿದ್ದಾರಾ?

ಕತೆ, ಕಾದಂಬರಿ ಬರೆಯುವ ಕ್ರಿಯೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಒಲಿದಿರುತ್ತದೆ. ಒಮ್ಮೆಲೇ ಮೂರುಮೂರು ಕತೆಗಳನ್ನು ಒಟ್ಟೊಟ್ಟಿಗೇ ಬರೆಯುವವರಿದ್ದಾರೆ. ಒಂದು ಕತೆಯನ್ನು ಬರೆಂiiಲು ಕೂತರೆ ಮುಗಿಯುವ ತನಕ ಅದನ್ನು ಬಿಡದೆ ಮುಗಿಸದೇ ಇರುವವರೂ ನಮ್ಮಲ್ಲಿದ್ದಾರೆ. ಬಹಳಷ್ಟು ಜನ ಒಂದು ಕಾಲದಲ್ಲಿ ಒಂದು ಕತೆಯನ್ನೋ ಕಾದಂಬರಿಯನ್ನೋ ಮಾತ್ರ ಬರೆಯುತ್ತಿರುತ್ತಾರೆ. ದೀರ್ಘ ಕಾಲದ ಬರವಣಿಗೆಗೆ ಪರಿಷ್ಕರಣ ಕಾರ್ಯ ಬಹಳ ಮುಖ್ಯ. ಅದೊಂದು ಮನೆ ಕಟ್ಟಿಯಾದ ಮೇಲೆ ಕೊನೆಯ ಕೊಂಕುಗಳನ್ನು ತಿದ್ದಿ ಒಪ್ಪ ಮಾಡಿದಂತೆ. ಈ ಕಾದಂಬರಿ ಬರೆಯುವ ಕ್ರಿಯೆಯನ್ನು ಈ ರೀತಿ ಒಡೆದು, ಕೆಡವಿ ಕೊನೆಗೆ ಒಪ್ಪ ಮಾಡುವ ಕ್ರಿಯೆಯ ಮೇಲೆ ನಂಬಿಕೆಯಿರದೆ ಮೊದಲ ಪರಿಜೇ ಕೊನೆಯ ಪರಿಜು ಎಂದು ತಿಳಕೊಂಡ ಲೇಖಕರಿಗೆ ಇವೆಲ್ಲ ಮುಖ್ಯವಾಗುವುದೇ ಇಲ್ಲ.

ಕನ್ನಡದ ಬೇರೆಬೇರೆ ಲೇಖಕರು ಬರೆಯುವ ಕ್ರಿಯೆಯನ್ನು ನೋಡಿದರೆ ಈ ಪರಿಷ್ಕರಣ ಕ್ರಿಯೆ ಬೇರೆಬೇರೆಯವರಿಗೆ ಬೇರೆಬೇರೆ ರೀತಿಯಲ್ಲಿ ಒದಗಿಬಂದಿರುವಂತೆ ಕಾಣುತ್ತದೆ. ಶಿವರಾಮಕಾರಂತರಂತರವರು ಬರೆಯುವ ಸಂದರ್ಭದಲ್ಲಿ ಎಲ್ಲಾದರೂ ಹೋಗಿ ಯಾರದೋ ಮನೆಯಲ್ಲಿ ಕೂತು ಒಂದೇ ಏಟಿಗೆ ಬರೆದು ಮುಗಿಸುತ್ತಿದ್ದರಂತೆ. ಅವರ ಅತ್ಯುತ್ತಮ ಕಾದಂಬರಿಗಳಾದ ಬೆಟ್ಟದ ಜೀವ, ಅಳಿದ ಮೇಲೆ ನಂತಹ ಕಾದಂಬರಿಗಳು ಕೇವಲ ಒಂದು ವಾರವೋ ಹದಿನೈದು ದಿನಗಳಲ್ಲಿಯೋ ಬರೆಸಿಕೊಂಡಿವೆ. ಸರಸಮ್ಮನ ಸಮಾಧಿಯ ಭಾಷೆ, ತಂತ್ರ ಇಂದಿಗೂ ಆಕರ್ಷಕವೆನ್ನಿಸುತ್ತದೆ. ಕಾರಂತರು ತಮ್ಮ ಕಾದಂಬರಿಯನ್ನು ಬರೆಯುವುದೂ ಪರಿಷ್ಕರಿಸುವುದೂ ಒಟ್ಟಿಗೆ ಮಾಡುತ್ತಿದ್ದರಂತೆ. ಒಮ್ಮೆ ಬರೆದು ಮುಗಿಸಿದೆ ಎಂದಾದ ಮೇಲೆ ಈ ಪರಿಷ್ಕರಣ ಕಾರ್ಯ ನಂತರ ಅವರಿಗೆ ಯಾವತ್ತೂ ಸಮಸ್ಯೆಯಾಗಿರಲೇ ಇಲ್ಲ.

ಈ ಪರಿಷ್ಕರಣ ಕಾರ್ಯಕ್ಕೆ ವೃvತಿಪರತೆ ತರುವ ವಿಚಾರ ಗೋಪಾಲಕೃಷ್ಣಪೈರವರ ‘ಸ್ವಪ್ನ ಸಾರಸ್ವತ’ ಕಾದಂಬರಿಯನ್ನು ಓದುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಮೂಡಿ ಬಂದಿತು. ಏಳು ತಲೆಮಾರಿನ ಕಥನವನ್ನು ಹೇಳುವ ಈ ಕಾದಂಬರಿ ತನ್ನ ಹರಹನ್ನು ಸುಮಾರು ನಾಲ್ಕುನೂರು ವರ್ಷದವರೆವಿಗೂ ವಿಸ್ತರಿಸಿಕೊಂಡಿದೆ. ಇಲ್ಲಿ ಯಾರೂ ನಾಯಕರಿಲ್ಲ. ಕೇಳು ಜನಮೇಜಯ ಎನ್ನುವ ರೀತಿಯಲ್ಲಿ ಮೊಮ್ಮಗನಿಗೆ ತಾತ ಹೇಳುವ ಕತೆ ಮುಂದುವರೆದುಕೊಂಡು ಹೋಗುತ್ತದೆ. ಕಾದಂಬರಿಯ ಪ್ರತಿಪುಟದಲ್ಲಿಯೂ ಅದರ ಹಿಂದಿನ ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಒಂದೊಂದು ಕಾಲಘಟ್ಟ ಜಿಗಿದಾಗಲೂ ಅದರಲ್ಲಿ ಆಗುವ ಪಲ್ಲಟಗಳು, ಪಾತ್ರಗಳ ಬದಲಾಗುವ ಆಶಯಗಳು ಅಪರೂಪವೆನ್ನುವಂತೆ ವ್ಯಕ್ತವಾಗುತ್ತಾ ಹೋಗಿವೆ. ಆದರೆ, ನನಗೆ ಅನಿಸಿದ್ದು ಈ ಕಾದಂಬರಿಯನ್ನು ಇನ್ನೂ ಪರಿಷ್ಕರಿಸಲು ಸಾಧ್ಯವಿತ್ತಾ, ಎಂದು. ಕಾದಂಬರಿಯನ್ನು ಬರೆದ ಪೈ ಯವರ ಪರಿಶ್ರಮದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಪ್ರಾಯಶಃ ಇತ್ತೀಚಿನ ದಿನಗಳಲ್ಲಿ ನಾನೋದಿದ ಒಂದು ಅತ್ಯುತ್ತಮ ಪುಸ್ತಕವೂ ಇದು ಹೌದು. ಆದರೂ ಹೀಗೆ ನನಗನಿಸಿದ್ದೇಕೆ ಎಂದು ನಾನೇ ಕೇಳಿಕೊಳ್ಳುತ್ತೇನೆ.

ದೀರ್ಘ ಬರವಣಿಗೆಯ ಮುಖ್ಯ ಸವಾಲೆಂದರೆ ಕಾದಂಬರಿ ಶುರುವಾದ ಟೆಂಪೋವನ್ನು ಕೊನೆಯತನಕ ಉಳಿಸಿಕೊಂಡು ಹೋಗುವುದು. ಸುಮಾರು ಏಳೆಂಟು ವರ್ಷಗಳ ಕಾಲ ಬರೆಸಿಕೊಂಡ ಬರವಣಿಗೆ ಲೇಖಕನ ಜತೆಗೂ ಬೆಳೆದಿರುತ್ತದೆ. ಕೃತಿಕಾರ ಒಂದು ಕಂಪ್ಯೂಟರ್ ಅಲ್ಲ. ಬೇಕಾದ ಅಧ್ಯಯನ ಸಾಮಗ್ರಿಯನ್ನು ಫ಼ೀಡ್ ಮಾಡಿಬಿಟ್ಟರೆ ಒಂದು ಕಾದಂಬರಿಯನ್ನು ಒಗೆಯುವುದಕ್ಕೆ. ಆತನ ಮೈ, ಮನಗಳಲ್ಲಿ ಆಗುವ ಪಲ್ಲಟಗಳು ಕೃತಿಯಲ್ಲಿಯೂ ಕಾಣಸಿಗುತ್ತದೆ. ವಿಮರ್ಶಕರು ಯಾವಾಗಲೂ ಹೇಳುತ್ತಿರುತ್ತಾರೆ, ಕೃತಿಕಾರನಿಗೆ ಕೃತಿಯ ಕೇಂದ್ರದಿಂದ ಹೊರನಿಂತು ನೋಡುವ ಸಾಕ್ಷೀಪ್ರಜ್ಞೆ ಬಹಳ ಮುಖ್ಯ. ಯಾವ ಪಾತ್ರದ ಮೇಲೆಯೂ ಕೃತಿಕಾರ ತನ್ನ ನಂಬಿಕೆಗಳನ್ನು ಹೇರಿಸಬಾರದು, ಪಾತ್ರಗಳನ್ನು ತಂಪಾಡಿಗೆ ತಾವು ಬೆಳೆಯಲು ಬಿಡಬೇಕು ಎಂದು. ಆದರೂ ಯಾವುದೇ ಕೃತಿಯಲ್ಲಿ ಕೃತಿಕಾರನ ಪೂರ್ವಗ್ರಹಗಳು ಎಲ್ಲಿಯಾದರೂ ಒಂದು ಮಟ್ತದಲ್ಲಿ ಕೆಲಸ ಮಾಡಿಯೇ ಇರುತ್ತದೆ. ಕೃತಿಕಾರನಿಗೆ ಈ ದೀರ್ಘಕಾಲಘಟ್ಟದಲ್ಲಿ ಕೆಲವು ಪಾತ್ರಗಳ ಮೇಲೆಯೋ, ಕಾಲದ ಮೇಲೆಯೋ, ಘಟನೆಯ ಮೇಲೆಯೋ ಇನ್ನಿಲ್ಲದ ಪ್ರೀತಿಬೆಳೆದಿರುತ್ತದೆ. ಹಾಗಾಗಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಪಾತ್ರಗಳು, ಘಟನೆಗಳು ಅಗತ್ಯಕ್ಕಿಂತಾ ಹೆಚ್ಚಾಗಿಯೇ ಬರೆಸಿಕೊಂಡಿರುತ್ತವೆ. ಯಾಕೆಂದರೆ ಕೃತಿಕಾರ ಈ ಕಾದಂಬರಿ ಬರೆಯುವ ಜತೆಜತೆಗೂ ತಾನೂ ಬದುಕುತ್ತಾ ಹೋಗಿರುತ್ತಾನೆ.

ಇದಕ್ಕೆ ಇರುವ ಒಂದೇ ಒಂದು ಪರಿಹಾರವೆಂದರೆ ವೃತ್ತಿಪರ ಪರಿಷ್ಕರಣ. ನಮ್ಮ ಎಲ್ಲ ಲೇಖಕರಿಗೆ ತಮ್ಮ ಕೃತಿಯ ಬಗ್ಗೆ, ತಮ್ಮ ಸೃಜನಶೀಲತೆಯ ಬಗ್ಗೆ ಅಪಾರವಾದ ಮೋಹವಿರುತ್ತದೆ, ಅಷ್ಟೇ ಈ ಕಾದಂಬರಿ ಅಥವಾ ಈ ಕಥೆ ನನ್ನ ಕೂಸು. ಈ ಕತೆಯನ್ನು ನನಗಿಂತ ಚೆನ್ನಾಗಿ ಬೇರೆ ಯಾರೂ ಬರೆಯುವುದು ಸಾಧ್ಯವಿಲ್ಲ ಎಂಬ ನಂಬಿಕೆಯಿರುತ್ತದೆ. ಹೀಗಿದ್ದಾಗ ಒಬ್ಬ ಲೇಖಕ ಒಂದು ಕಾದಂಬರಿ ಬರೆದಾದ ಮೇಲೆ ಏನು ಮಾಡಬಹುದು? ತನ್ನ ಸಹ ಲೇಖಕರ ಬಳಗಕ್ಕೆ ಮೊದಲ ಓದಿಗೆ ಕೊಡುತ್ತಾನೆ. ಈ ಬಳಗದಲ್ಲಿ ಹೆಚ್ಚಿನವರು ಲೇಖಕರು ಇಲ್ಲವೇ ವಿಮರ್ಶಕರು. ಓದಿದವರು ಯಾರೂ ಕಾದಂಬರಿ ಕೆಟ್ಟದಾಗಿದೆ ಎಂದು ಹೇಳುವುದಿಲ್ಲ, ಯಾವುದೋ ಭಾಗವನ್ನು ಕೊಂಚ ಪರಿಷ್ಕರಿಸಿದ್ದರೆ ಚೆನ್ನಾಗಿತ್ತು ಅಂತಲೋ, ಅಥವಾ ಈ ಪಾತ್ರಕ್ಕೆ ಒತ್ತು ಹೆಚ್ಚಾಯಿತು ಎಂತಲೋ ಹೇಳುತ್ತಾರೆ.

ಈ ಲೇಖಕ ಅಥವಾ ವಿಮರ್ಶಕ ಮಿತ್ರರನ್ನು ಹಸ್ತಪ್ರತಿಯನ್ನು ಓದಿ ಅಭಿಪ್ರಾಯ ಕೇಳುವುದು ಲೇಖಕನಿಗೆ ಒಂದು ಲಿಟ್‌ಮಸ್ ಟೆಸ್ಟ್ ಇದ್ದಹಾಗೆ. ಇಲ್ಲಿ ಆತನ ಟೆಸ್ಟ್ ಓದುಗರು ಸಾಮಾನ್ಯ ಓದುಗರಲ್ಲ. ಪಂಡಿತರು. ಅವರ ಹೇಳಿಕೆಯ ಮೇಲೆ ಕೃತಿಯನ್ನು ಪರಿಷ್ಕರಿಸುವುದು ಅವರ ಅಭಿಪ್ರಾಯವನ್ನು ಮನ್ನಿಸಿದ ಹಾಗೆ ಮಾತ್ರ. ಓದುಗ ಏನನ್ನು ಅಪೇಕ್ಷಿಸುತ್ತಾನೆ ಎನ್ನುವ ಲಕ್ಷ್ಯ ಇಲ್ಲಿ ಬರಹಗಾರನ ಗಮನದಲ್ಲಿಯೇ ಇಲ್ಲ ಎನ್ನುವುದನ್ನು ಗಮನಿಸಿ

ಒಂದು ಸಾವಿರ ಪ್ರತಿಯನ್ನು ಪ್ರಕಟಿಸಿ ಅದರಲ್ಲಿ ಬಿಡುಗಡೆಯ ದಿನ ಇನ್ನೂರು ಪ್ರತಿಗಳನ್ನು ಮಾರಾಟ ಮಾಡಿ, ಇನ್ನೊಂದಿನ್ನೂರು ಪ್ರತಿಗಳನ್ನು ಮಿತ್ರರಿಗೆ ಸಹಿಹಾಕಿ ಕೊಟ್ಟು, ಇನ್ನೊಂದಿಷ್ಟನ್ನು ಟಾಪ್ ಟೆನ್ ಪಟ್ಟಿಯ ಆಧಾರದ ಮೇಲೆ ಮಾರಿ ಉಳಿದದ್ದನ್ನು ಲೈಬ್ರರಿಗೆ ತಳ್ಳಿಬಿಡುವ ನಮ್ಮ ಪುಸ್ತಕೋದ್ಯಮದ ಮಾರುಕಟ್ಟೆಯ ವ್ಯವಹಾರ ತೀರ ವಿಚಿತ್ರವಾದದ್ದು. ಇಲ್ಲಿ ಓದುಗ ಒಂದು ರೀತಿಯಲ್ಲಿ ಗೌಣನಾಗಿದ್ದಾನೆ. ಮಾರುಕಟ್ಟೆಯನ್ನು ನೋಡಿ ಕಾದಂಬರಿ ಬರೆಯಬೇಕೆಂದು ನಾನು ಹೇಳುತ್ತಿಲ್ಲ. ಆದರೆ, ಬರಹಗಾರನಿಗೆ ಕೂಡ ಓದುಗ ಮುಖ್ಯನಾಗುತ್ತಿಲ್ಲ. ಆತನ ಕಾದಂಬರಿ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಎಲ್ಲಿ ಸಲ್ಲುತ್ತದೆ ಎನ್ನುವುದನ್ನು ನಿರ್ಧರಿಸುವುದು ಓದುಗನನ್ನು ಹೊರತಾದ ಅನೇಕ ವೇರಿಯಬಲ್‌ಗಳು. ಮಾರುಕಟ್ಟೆ ಒಂದು ಪುಸ್ತಕವನ್ನು ಪುರಸ್ಕರಿಸಿದಾಗಲೀ ಅಥವಾ ನಿರಾಕರಿಸಿದಾಗಲೀ ಲೇಖಕನಿಗೆ ಯಾವ ಲಾಭವೂ, ನಷ್ಟವೂ ಆಗದೇ ಇದ್ದಾಗ ಕೇವಲ ಕೆಲವು ಓದುಗರಿಗೆ ಮಾತ್ರ ತಟ್ಟುವ ಬರವಣಿಗೆಯ ಶೈಲಿಯನ್ನು ಆಯ್ಕೆಮಾಡಿಕೊಳ್ಳುವ ಅನಿವಾರ್ಯತೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಲೇಖಕನಿಗಾಗಿರುತ್ತದೆ.

ಈ ಪರಿಷ್ಕರಣ ಕ್ರಿಯೆಯೂ ಅಷ್ಟೇ, ಜತೆಯ ಬರಹಗಾರರೂ ಮತ್ತು ಕೆಲವು ಪಂಡಿತ ವಿಮರ್ಶಕರೂ ಓದಿ ಕತೆಯನ್ನು ಕಾದಂಬರಿಯನ್ನು ಹೀಗೆ ಪರಿಷ್ಕರಿಸಿ ಪ್ರಕಟಮಾಡು ಎಂಬ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಕೃತಿಕಾರನೇ ಕೂತು ಪರಿಷ್ಕರಿಸುತ್ತಾನೆ. ಆದರೆ, ಕೃತಿಕಾರ ಮಾಡುವ ಪರಿಷ್ಕರಣ ಕೃತಿಕಾರನ ಪೂರ್ವಗ್ರಹಗಳಿಂದ ಬಚಾವಾಗುವುದು ಅಷೃ ಸುಲಭವಲ್ಲ. ಕೃತಿಕಾರನಿಗೆ ಬಹಳ ಇಷ್ಟವಾದ ಭಾಗಗಳು, ಅತವಾ ಬಹಳ ಸಂಶೋಧನೆ ಮಾಡಿ ಕಷ್ಟಪಟ್ಟು ಬರೆದ ಭಾಗಗಳನ್ನು ಕೃತಿಯಿಂದ ಕಿತ್ತಿಹಾಕಿಬಿಡುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಪರಿಷ್ಕೃತ ಪಠ್ಯ ಯಾವತ್ತೂ ಪರಿಪೂರ್ಣವಾಗುವುದಿಲ್ಲ.

ಕಾದಂಬರಿಯ ಮೊದಲ ಓದುಗ ಯಾರಾಗಿರಬೇಕು? ನನ್ನ ಪ್ರಕಾರ ಆತ ಬರಹಗಾರನಾಗಿರಬಾರದು. ಆತ ಓದಿನಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವನಾಗಿರಬೇಕು. ಓದುತ್ತಾ ಓದುತ್ತಾ ಇಲ್ಲಿ ಇಂತದ್ದು ಬೇಕು, ಬೇಡ ಎನ್ನುವ ಅಭಿಪ್ರಾಯವನ್ನು ಖಂಡತುಂಡವಾಗಿ ಹೇಳುವ ಹಾಗಿರಬೇಕು. ಮುಖ್ಯವಾಗಿ ಆತನಿಗೆ ಇದೊಂದು ಕೆಲಸವಾಗಬೇಕು. (ಕನ್ನಡದ ಮಟ್ಟಿಗೆ ಇದು ಕಷ್ಟ ಎಂಬ ಅರಿವು ನನಗಿದೆ) ಅಂದರೆ, ಬರೇ ಹಸ್ತಪ್ರತಿಗಳನ್ನು ಓದಿ ಅದರ ಕರಡುರೂಪವನ್ನು ತಿದ್ದಿ ಅದಕ್ಕೆ ಒಂದು ರೂಪುಗೊಳಿಸುವ ಕೆಲಸ ಅವನದಾಗಬೇಕು. ಪ್ರಕಾಶಕರು ಹೀಗೆ ಈ ಕಾದಂಬರಿಯ ‘ಸಂಪಾದಕರ’ನ್ನು ಕೆಲಸಕ್ಕಿಟ್ಟುಕೊಂಡು ಯಾವ ಲೇಖಕರೇ ಬರೆದ ಕೃತಿಗಳಾಗಲೀ ಅವರಿಂದ ಪರಿಷ್ಖ್ರುತವಾಗಿ ಬಂದರೆ ಮಾತ್ರ ಪ್ರಕಟಿಸಿವುದು ಎಂಬ ನಿಯಮವನ್ನು ಹಾಕಿಕೊಳ್ಳಬೇಕು. ಬೇರೆ ಬೇರೆ ಪ್ರಕಾರದ ಕಾದಂಬರಿಗಳಿಗೆ ಬೇರೆ ಬೇರೆ ರೀತಿಯ ಸಂಪಾದಕರು, ಪರಿಷ್ಕರಣಗಾರರು ಇರಬೇಕು

ಆದರೆ, ಒಮ್ಮೆಗೆ ಸಾವಿರ ಪ್ರತಿಗಳನ್ನು ಮಾತ್ರ ಮುದ್ರಿಸುವ ಮತ್ತು ಅದರಿಂದ ಬರುವ ಲಾಭ ಮತ್ತು ಲೈಬ್ರರಿಗಳಿಗೆ ವ್ಯಾಪಾರವಾಗುವ ಪುಸ್ತಕಗಳಿಂದ ನಿರ್ಧರಿತವಾಗುವ ಕನ್ನಡ ಪುಸ್ತಕೋದ್ಯಮ ಲೇಖಕರಿಗೇ ಒಂದು ಕೈಯೆಣಿಕೆಯಲ್ಲಿ ಸಂಭಾವನೆಯನ್ನು ಕೊಡುತ್ತಿರುವಾಗ, ಬರಹ ಒಂದು ಪ್ಯಾಶನ್ ಅಥವಾ ಹವ್ಯಾಸವಾಗಿ ಮಾತ್ರ ಉಳಕೊಳ್ಳುತ್ತಿರುವ ಈ ದಿನಗಳಲ್ಲಿ ಈ ಪುಸ್ತಕದ ಪರಿಷ್ಕಾರವನ್ನು ಯಾವುದೇ ಸಂಭಾವನೆಯಿಲ್ಲದೇ ವೃತ್ತಿಪರವಾಗಿ ಮಾಡಿಸಲು ಹೇಗೆ ಸಾಧ್ಯ?ಪ್ರತಿ ಬರಹಗಾರರಿಗೆ ಒಂದು ಕೃತಿಯ ಸ್ವಾಮ್ಯವಿರುತ್ತದೆ. ಆ ಸ್ವಾಮ್ಯದ ಜತೆಗೇ ಕೃತಿ ಕೊಡಿಸಿಕೊಂಡು ಬರುವ ಅನೇಕ ಧನ ಋಣಗಳಿಗೆ ಆತ ಹೊಣೆಗಾರಿಕೆಯನ್ನು ಹೊತ್ತಿರುತ್ತಾನೆ. ಆದರೆ, ಯಾವುದೇ ಸಂಭಾವನೆಯಿಲ್ಲದೆ ಈ ಕೃತಿಯನ್ನು ಪರಿಷ್ಕಾರ ಮಾಡಿಕೊಡು ನಂತರದ ಕ್ರೆಡಿಟ್ ಎಲ್ಲ ಲೀಖಕನಿಗೇ ಎಂದು ಹೇಳಿದಲ್ಲಿ ಯಾವ ವ್ಯಕ್ತಿಯೂ ಇದಕ್ಕೆ ಸಿದ್ಧನಾಗಲಾರನೇನೋ.

ಪುಸ್ತಕದ ವಿನ್ಯಾಸಕ್ಕೆ, ಮುಖಪುಟಕ್ಕೆ, ಒಳರೇಖಾಚಿತ್ರಗಳಿಗೆ ನಾಲ್ಕಾರು ಸಾವಿರ ರೂಪಾಯಿಗಳನ್ನು ಖರ್ಚುಮಾಡುವ ಪ್ರಕಾಶಕರು ಕೃತಿಯನ್ನು ಪರಿಷ್ಕರಿಸುವವರಿಗೆ ಇನ್ನೊಂದೆರಡು ಸಾವಿರ ರೂಪಾಯಿಗಳನ್ನು ಖರ್ಚುಮಾಡುವುದು ಸಾಧ್ಯವಿಲ್ಲವೇ?

ಪ್ರತಿಯೊಬ್ಬ ಲೇಖಕರಿಗೂ ಕಾದಂಬರಿಯ ಮೊದಲ ಓದುಗ ಒಬ್ಬ ಇರಬೇಕು. ಆತ ಬರೇ ಓದುಗನಲ್ಲದೆ ಕಾದಂಬರಿಯ ಪರಿಷ್ಕಾರವನ್ನೂ ಮಾಡತಕ್ಕವನಾಗಬೇಕು. ಮತ್ತು ಹೀಗೆ ಮಾಡುವುದು ಕಾದಂಬರಿಯ ಒಟ್ಟಾರೆ ಗುಣಮಟ್ತಕ್ಕಾಗಿ ಎನ್ನುವ ನಂಬಿಕೆ ಕಾದಂಬರಿಕಾರನಿಗೂ ಇದ್ದರೆ ನಾವು ಕೊಂಚ ವೃತ್ತಿಪರತೆಯನ್ನು ನಮ್ಮ ಸಾಹಿತ್ಯಕ್ಕೆ ತರಬಹುದು.

Sunday, January 10, 2010

ಸ್ವಪ್ನ ಸಾರಸ್ವತ

ಒಬ್ಬ ಬರಹಗಾರ ಒಂದು ಚರಿತ್ರೆಯನ್ನು ಕಲ್ಪಿತ ಬರಹಕ್ಕೆ ಅದರಲಿಯೂ ಕಾದಂಬರಿಯಂತಹ ಪ್ರಕಾರಕ್ಕೆ ಹೇಗೆ ಉಪಯೋಗಿಸಿಕೊಳ್ಳಬಲ್ಲ? ಅದೂ ನಾನೂರು ವರ್ಷಗಳಿಗೂ ಮೀರಿದ ಒಂದು ಸಮುದಾಯದ ಚರಿತ್ರೆಯನ್ನು ಅಧ್ಯಯನ ಮಾಡಿ ಅದನ್ನು ಆಧರಿಸಿ ಕಾದಂಬರಿ ಬರೆದಾಗ ಅದರಿಂದ ನಾವು ಏನನ್ನು ನಿರೀಕ್ಷಿಸಬಹುದು? ಕಾದಂಬರಿಕಾರನ ಸವಾಲುಗಳೇನು? ಬರೇ ಕಾಲಘಟ್ಟದ ಪಲ್ಲಟವನ್ನು ಸೆರೆಹಿಡಿಯುವುದೇ ಇಲ್ಲಿ ಮುಖ್ಯವಾಗುತ್ತದೆಯೇ? ಲೇಖಕ ಚರಿತ್ರೆಗೆ ಎಷ್ಟು ನಿಷ್ಟನಾಗಬಲ್ಲ? ಬರೇ ಶಾಸನಗಳಿಂದ ಅಥವಾ ಯಾರೋ ಚರಿತ್ರಕಾರರು ಬರೆದ ಪುಸ್ತಕಗಳಿಂದ, ಸ್ಥಳಪುರಾಣದಿಂದ ಅಥವಾ ಇನ್ಯಾವುದೇ ಆಕರಗಳಿಂದ ಸಿಕ್ಕ ಚರಿತ್ರೆಯನ್ನು ಆಧರಿಸಿ ಅಂದಂದಿನ ಸಾಮಾನ್ಯ ಜನಗಳ ಜೀವನವನ್ನು ಪುನರ್ರ್ರಚಿಸುವುದು ಸಾಧ್ಯವೇ?

ಇಲ್ಲಿ ಕಲೆ ಮತ್ತು ವಾಸ್ತವಗಳೆರಡೂ ಪೂರಕವಾಗಿ ಕೆಲಸ ಮಾಡಬಹುದು, ಕೆಲವೊಮ್ಮೆ ಮಾರಕವಾಗಿಯೂ ಬಹುದು. ಕಲೆ ಚರಿತ್ರೆಯ ದಾಖಲಾತಿ ಅಲ್ಲ. ಹಾಗಾಗಿ ‘ಕಲ್ಪಿತ’ ದ ನೆವದಲ್ಲಿ ಕೆಲವೊಂದು ಚಾರಿತ್ರಿಕ ಘಟನೆಗಳು ಮಸುಕಾಗಬಹುದು. ಕೆಲವೊಂದು ಘಟನೆಗಳನ್ನು ದಾಖಲಿಸದೇ ಇರುವ ಅನುಕೂಲವನ್ನೂ ಬರಹಗಾರ ಪಡೆಯಬಹುದು. ಆದರೆ, ಕಾದಂಬರಿಯ ವಸ್ತುವೇ ಈ ಕಾಲಘಟ್ಟದ ಪಲ್ಲಟಗಳನ್ನು ಒಂದುಮಟ್ಟದಲ್ಲಿ ದಾಖಲಿಸುವುದಾಗಿರುವುದರಿಂದ ಸತ್ಯ, ವಾಸ್ತವವೆಂದು ಯಾವ ಆಕರಗ್ರಂಥಗಳಲ್ಲಿ ನಿರೂಪಿತವಾಗಿರುವ ಚಾರಿತ್ರಿಕ ಘಟನೆಯಿದೆಯೋ ಅದನ್ನು ಉಪೇಕ್ಷಿಸುವುದೂ ಕಷ್ಟ.

ಇಂತ ಒಂದು ಸಾಹಸಕ್ಕೆ ಗೋಪಾಲಕೃಷ್ಣಪೈಯವರು ಕೈಹಾಕಿದ್ದಾರೆ ತಮ್ಮ ಚೊಚ್ಚಲ ಕಾದಂಬರಿ ‘ಸ್ವಪ್ನ ಸಾರಸ್ವತ’ ದಲ್ಲಿ. ಗೋವಾದಲ್ಲಿ ಸಮಾಧಾನವಾಗಿ ಜೀವನ ನಡೆಸುತ್ತಿದ್ದ ಸಾರಸ್ವತ ಬ್ರಾಹ್ಮಣರ ಒಂದು ಸಮುದಾಯ ತಮ್ಮ ಧರ್ಮ ಹಾಗೂ ನಂಬಿದ್ದ ಜೀವನ ಶೈಲಿಯನ್ನು ಉಳಿಸಿಕೊಳ್ಳಲು ದಕ್ಷಿಣಕ್ಕೆ ವಲಸೆ ಬರುತ್ತಾರೆ. ಹೀಗೆ ಶುರುವಾದ ವಲಸೆ ಕೊನೆಗೆ ನೆಲೆಸೇರುವುದು ಕಾಸರಗೋಡಿನ ಸಮೀಪದ ಬಳ್ಳಂಬೆಟ್ಟಿನಲ್ಲಿ. ಇದ್ದ ಜಾಗವನ್ನು ಬಿಟ್ಟು ಬರುವುದು, ನಂತರದ ವಲಸೆಯ ಕ್ರಿಯೆ ಮತ್ತು ಅದರ ಜತೆಗೇ ಹಾಸುಹೊಕ್ಕಾಗಿ ಇರುವ ಮಾನವ ಸಹಜ ತಲ್ಲಣಗಳು ಮೊದಲ ಭಾಗಗಳಲ್ಲಿ, ಈ ಹೊಸಾ ನಾಡಿನಲ್ಲಿ ಇರಬೇಕಾದ ಅನಿವಾರ್ಯತೆ, ಜೀವನೋಪಾಯಕ್ಕೆ ಬೇಕಾದ ದುಡ್ಡು, ಭೂಮಿ ಮತ್ತು ಅದನ್ನು ಬೆಳೆಸುವ ಕ್ರಿಯೆ- ಅನಿವಾರ್ಯವಾಗುವ ಅವಶ್ಯಕತೆಗಳು ಮತ್ತು ಸಂಸಾರ ಬೆಳೆದಂತೆ ಅದರ ಜತೆಗೇ ಹುಟ್ಟುವ ರಾಗದ್ವೇಷಗಳು ನಂತರದ ಭಾಗಗಳಲ್ಲಿ ಅಸಂಖ್ಯಾತ ಪಾತ್ರಗಳಿಂದ ನಿರೂಪಿತವಾಗಿವೆ.

ವೆರಣೆಯ ನರಸಪ್ಪಯ್ಯನವರಿಂದ ಶುರುವಾದ ಈ ವಂಶದ ಕಥಾನಕ ರಾಮಚಂದ್ರಪೈಯ ಮೊಮ್ಮಗ ವೆಂಕಟೇಶ ಪೈನ ಜನನದವರೆಗೆ ಮತ್ತು ನಾಗ್ಡೊ ಬೇತಾಳ ಅವನನ್ನು ಎತ್ತಿಕೊಂಡು ಕಾಪಾಡುತ್ತಾನೆ ಎನ್ನುವ ಸದಾಶಯದೊಂದಿಗೆ ಮತ್ತು ಆತನ ಸಂತತಿ ಇಪ್ಪತ್ತೆರಡು ತಲೆಮಾರಿನ ತನಕ ಬದುಕುವ ಜವಾಬುದಾರಿಯನ್ನು ದೈವಕ್ಕೆ ಬಿಟ್ಟು ರಾಮಚಂದ್ರ ಪೈ ಸಾಯುವವರೆಗೆ ಈ ಕಥೆ ಬರೆಯಲ್ಪಟ್ಟಿದೆ ಎಂದು ಕಥೆಯನ್ನು ಸರಳೀಕರಿಸಿ ಹೇಳಿಬಿಟ್ಟರೆ ಕಾದಂಬರಿಕಾರನ ಶ್ರಮಕ್ಕೇ ಅನುಮಾನ ಮಾಡಿದ ಹಾಗಾಗುತ್ತದೆ. ಒಂದು ಕಾಲದ ವಾಸ್ತವ ಚರಿತ್ರೆಯಾಗುತ್ತಾ ಹಾಗೇ ಪುರಾಣವಾಗುವುದನ್ನು ಪೈರವರು ವಾಸ್ತವ, ಫ಼್ಯಾಂಟಸಿಗಳನ್ನು ಸೇರಿಸಿ ಬಹಳ ಆಪ್ತ ಶೈಲಿಯಲ್ಲಿ ಕಟ್ಟುಕೊಡುತ್ತಾರೆ. ಈ ಶೈಲಿ ಹೃದ್ಯವಾಗಿದೆ, ವೇದ್ಯವಾಗುತ್ತದೆ. ಓದಿಸಿಕೊಳ್ಳುತ್ತದೆ, ಖುಷಿಕೊಡುತ್ತದೆ. ಅಷ್ಟೇ ಅಲ್ಲ, ಕಾದಂಬರಿಯ ಪಾತ್ರವೊಂದಾದ ಜಾಹ್ನವಿ ತನ್ನ ಜತೆಗಿದ್ದವಳನ್ನೇ ಹರಿದು ತಿನ್ನುವುದೂ, ನಾಗ್ಡೊ ಬೇತಾಳ ಕಾಲಪುರುಷನಂತೆ ಮತ್ತೆ ಮತ್ತೆ ಹುಟ್ಟುಬರುವುದೂ ವರ್ತಮಾನಕ್ಕೆ ಭೂತದ ಕಥೆಗಳನ್ನೂ ಮತ್ತು ಭವಿಷ್ಯದಲ್ಲಿ ಹೀಗೇ ಆಗುತ್ತದೆ ಎಂದು ಹೇಳುವ ಅತಿವಾಸ್ತವಗಳನ್ನೂ ಪ್ರಶ್ನಾತೀತವನ್ನಾಗಿಸುತ್ತದೆ.

ಇದು ಸುಮಾರು ನಾಲ್ಕುನೂರುವರ್ಷಗಳ ಕಾಲ ಏಳು ತಲೆಮಾರುಗಳ ಅವಧಿಯಲ್ಲಿ ನಡೆಯುವ ಕಥೆ. ಕಾಲವನ್ನು ಅಕ್ಷರಗಳಲ್ಲಿ ಹಿಡಿದಿಡಬೇಕಾದಾಗ ಬರಹಗಾರನು ಎದುರಿಸುವ ಸವಾಲುಗಳು ಹಲವು. ನಮ್ಮ ಸಂಸ್ಖ್ರುತಿಯ ಮತ್ತು ಕಾಲದ ಪಲ್ಲಟಗಳು ಇತಿಹಾಸದಲ್ಲಿ ದಾಖಲಾಗಿರುವುದು ರಾಜಮಹಾರಾಜರುಗಳ ಕಥನದಲ್ಲಿ,ಮಹಾಯುದ್ಧಗಳ ದಾಖಲಾತಿಯಲ್ಲಿ. ಕಾಲೆರಾ, ಪ್ಲೇಗು ಮುಂತಾದ ಮಹಾಮಾರಿಗಳು ಸೃಷ್ಟಿಸಿದ ಮೃತ್ಯುಕೂಪದಲ್ಲಿ. ಆದರೆ ಈ ಶತಮಾನಗಳ ಸ್ಥಿತ್ಯಂತರಗಳನ್ನು ಹೇಳಲು ಪೈರವರು ಆರಿಸಿಕೊಂಡಿರುವುದು ಒಂದು ಕುಟುಂಬದ ಕತೆಯನ್ನು ಹೇಳುವುದರ ಮೂಲಕ. ಯಾವ ಕಾರಣಕ್ಕೂ ತಂತಮ್ಮ ಕುಟುಂಬದ ಹೊರತಾದ ಯಾವ ವಿದ್ಯಮಾನಗಳಿಗೂ ತನ್ನನ್ನು ಒಡ್ಡಿಕೊಳ್ಳದಿರುವ ಒಂದು ಸಾಮಾನ್ಯ ಸಾರಸ್ವತ ಕುಟುಂಬ ಕೇವಲ ತನ್ನ ದೈವವನ್ನು ಉಳಿಸಿಕೊಳ್ಳುವುದಕ್ಕಾಗಿ ಇದ್ದ ಊರನ್ನೇ ಸಂಸಾರ ಸಮೇತ ಬಿಟ್ಟು ಹೋಗುವ ಈ ಕಾಯಕ ದೈವ, ಧರ್ಮ ಮತ್ತು ನಂಬಿಕೆಗಳು ಜೀವನದ ಮೇಲೆ ಪ್ರಬಾವಿಸುವ ರೀತಿಯನ್ನು ಪ್ರಸ್ತಾಪಿಸುತ್ತದೆ .

ದಶಕಗಳ ಕಾಲ ತಮ್ಮ ಹರಹನ್ನು ವಿಸ್ತರಿಸಿಕೊಂಡಿರುವ ಯಾವ ಕಥೆಯೂ, ಒಂದು ವ್ಯಕ್ತಿಯ ಅಥವಾ ಸಂಸಾರದ ಕಥೆಯಾಗಿರುವುದಿಲ್ಲ. ಸುತ್ತಣ ಸಮಾಜದಲ್ಲಿಯಾಗುವ ಪಲ್ಲಟಗಳಿಂದ ಪ್ರಭಾವಿತವಾಗಿಲ್ಲದೇ ಇರಲು ಸಾಧ್ಯವೇ ಇಲ್ಲ. ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯ ಕರಾವಳಿಯ ಜನಜೀವನದ ವಿವರಗಳಿರಲಿ, ಮಲೆಗಳಲ್ಲಿ ಮದುಮಗಳು ವಿನ ೧೯ನೆಯ ಶತಮಾನದ ಅಂತ್ಯದ ಮಲೆನಾಡಿನ ಕಥನವಿರಲಿ, ಹೊರಗಿನ ಪ್ರಪಂಚದ ಅರಿವನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುವ ಎಂಥ ಸಾಮಾನ್ಯ ಮನುಷ್ಯನ ಜೀವನವೂ ಆ ಪಲ್ಲಟಗಳಿಂದ, ಸ್ಥಿತ್ಯಂತರಗಳಿಂದ ಪ್ರಭಾವಿತವಾಗದೇ ಇರಲು ಸಾಧ್ಯವೇ ಇಲ್ಲ ಎಂದೇ ಪ್ರತಿಪಾದಿಸುತ್ತದೆ. ಸಲ್ಮಾನ್ ರಶ್ದೀಯಂತೂ ತನ್ನ ಮಿಡ್‌ನೈಟ್ಸ್ ಚಿಲ್ಡ್ರನ್ ನಲ್ಲಿ ಕಾದಂಬರಿಯ ನಾಯಕನ ಜೀವನದ ಪ್ರತಿ ಮುಖ್ಯ ಘಟನೆಯೂ ಇಂಡಿಯಾ ದೇಶದ ಚಾರಿತ್ರಿಕ ಘಟನೆಗಳೊಂದಿಗೆ ಹೇಗೆ ಥಳುಕುಹಾಕಿಕೊಂಡಿತ್ತು ಎನ್ನುವುದನ್ನು ಫ಼್ಯಾಂಟಸಿಯಂತೆ ವರ್ಣಿಸುತ್ತಾನೆ.

ಅಂದರೆ ಒಟ್ಟು, ಮನುಷ್ಯ ‘ತಂಪಾಡಿಗೆ’ ತಾನು ಇರುವುದಕ್ಕೆ ಸಾಧ್ಯವೇ ಇಲ್ಲ. ಅದೇ ರೀತಿ ‘ಸ್ವಪ್ನ ಸಾರಸ್ವತ’ದಲ್ಲಿಯೂ ಗೋವಾದಲ್ಲಿಯಾದ ಪೋರ್ಚುಗೀಸರ ದಾಳಿ ನಂತರದ ಕಾಲವನ್ನು ಮತ್ತು ಒಂದು ಸಮುದಾಯವನ್ನು ನೇರವಾಗಿ ತಟ್ಟಿದ್ದಲ್ಲದೇ ಅವರ ಜೀವನದ ಗತಿಯನ್ನೇ ಪೂರಕ್ಕೆ ಪೂರ ಬದಲಿಸಿಬಿಡುತ್ತದೆ. ಸೆಪ್ಟೆಂಬರ್ ೧೧, ನಮ್ಮ ಕಾಲದ ಒಂದು ಮುಖ್ಯ ಪಲ್ಲಟಕ್ಕೆ ಮತ್ತು ನಂತರದ ಘಟನೆಗಳಿಗೆ ಹೇಗೆ ಕಾರಣವಾಗಿದೆಯೋ ಮತ್ತು ಅದಿಲ್ಲದೇ ನ್ಯೂ ಯಾರ್ಕ್ ನಗರವನ್ನಾಗಲೀ ಅಥವಾ ಪ್ರಪಂಚದ ವಿದ್ಯಮಾನಗಳನ್ನಾಗಲೀ ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಹಾಗೇ ಈ ಪೋರ್ಚುಗೀಸರ ಆಕ್ರಮಣವಿಲ್ಲದ ಗೋವೆಯನ್ನೂ ನಾವು ಕಲ್ಪಿಸಿಕೊಳ್ಳಲಾಗದು. ಅಫ಼್ಗಾನಿಸ್ತಾನವೆಂದರೆ ಎಲ್ಲಿದೆಯೆಂದು ಗೊತ್ತಿಲ್ಲದ ಅಮೆರಿಕನ್ನರಿಗೂ ಮನೆಯಬಾಗಿಲಿನಲ್ಲಿಯೇ ವಿಮಾನಗಳು ಕಟ್ಟಡಗಳನ್ನು ಹೊಡೆದು ಕೆಡವಿದಾಗ ತಮ್ಮ ಅರಿವಿನ ವಿಸ್ತಾರ ಅನಿವಾರ್ಯವಾಗಿತ್ತು. ಹಾಗೆಯೇ ಮತ್ತುತಮ್ಮ ಸಂಸಾರದ ಉಸಾಬರಿಯನ್ನು ಬಿಟ್ಟು ಬೇರೇ ಯಾವ ರಾಜಕೀಯ ಆಸಕ್ತಿಯೂ ಇಲ್ಲದ ಗೋವೆಯ ಸಾರಸ್ವತ ಬ್ರಾಹ್ಮಣರು ಇಂಥಾ ಒಂದು ಸನ್ನಿವೇಶವನ್ನು ಎದುರಿಸಿದಾಗ ವಲಸೆ ಅನಿವಾರ್ಯವಾಯಿತು.

ಚರಿತ್ರೆಯಲ್ಲಿ ಇಂಥ ದುರಂತಗಳು ಮತ್ತು ನಂತರದ ವಲಸೆಗಳೂ ಹಲವಾರು ಬಾರಿ ನಡೆದಿದೆ. ಉದಾಹರಣೆಗೆ ಹಿಟ್ಲರನ ಮಾರಣಹೋಮದ ನಂತರದ ಯಹೂದಿಗಳ ವಲಸೆ. ಇಡೀ ಪ್ರಪಂಚದಾದ್ಯಂತ ಯಹೂದಿಗಳು ವಲಸೆಹೋದರು. ಹೋದರಷ್ಟೇ ಅಲ್ಲ, ತಮ್ಮ ನಂಬಿಕೆಗಳನ್ನು, ಧರ್ಮವನ್ನು ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಈ ಯಹೂದಿಗಳ ವಲಸೆಗೂ ಮತ್ತು ಪೈಗಳ ಸಾರಸ್ವತ ವಲಸೆಯಲ್ಲಿಯೂ ಕೆಲವು ಸಾಮ್ಯತೆಗಳಿವೆ. ಎರಡಕ್ಕೂ ಈ ಸಾವುನೋವುಗಳ ಮತ್ತು ಹಿಂಸೆಯ ಮಟ್ಟದಲ್ಲಿ ಕೆಲವು ವ್ಯತ್ಯಾಸಗಳಿರಬಹುದು. ಆದರೆ, ಒಂದು ವ್ಯಕ್ತಿಯ ಮಟ್ಟದಲ್ಲಿ ಅಥವಾ ಒಂದು ಕುಟುಂಬದ ಮಟ್ಟದಲ್ಲಿ ಈ ಆಘಾತ ಒಂದೇ ಎಂದು ನನ್ನ ಭಾವನೆ. ಒಂದು, ಇಬ್ಬರೂ ತಮ್ಮ ದೈವವನ್ನು, ನಂಬಿಕೆಯನ್ನು ನಂಬಿಯೇ ಅದರ ಬುಡಕ್ಕೇ ಪೆಟ್ಟುಬಿದ್ದಾಗ ವಲಸೆ ಹೊರಡಲು ನಿರ್ಧರಿಸಿದ್ದು, ಎರಡನೆಯದು ಈ ವಲಸೆಯೆಂಬ ಕ್ರಿಯೆಯ ಅನೇಕ ಏಳುಬೀಳುಗಳನ್ನು ಅನುಭವಿಸಿದ್ದು. ಮೂರನೆಯದಾಗಿ ವಲಸೆಹೋದ ನಾಡಲ್ಲಿ ಬೀಡು ಬಿಟ್ಟರೂ ತಮ್ಮ ದೈವದ ಬಗ್ಗೆ ಪೀಳಿಗೆಗಳ ನಂತರವೂ ಅಪಾರ ನಂಬುಗೆಯನ್ನು ಉಳಿಸಿಕೊಳ್ಳುವುದು. ಈಗಲೂ ಜಗತ್ತಿನ ಅನೇಕ ಜಗತ್ತಿನ ಮಹಾನಗರಗಳಲ್ಲಿ ಅನೇಕ ದೊಡ್ಡದೊಡ್ಡ ವ್ಯವಹಾರಗಳ ಸ್ವಾಮ್ಯವನ್ನು ಈ ಯಹೂದಿಗಳು ಹೊಂದಿದ್ದಾರೆ, ಅಷ್ಟೇ ಅಲ್ಲ ಈಗಲೂ ತಮ್ಮ ವೇಷಭೂಷಣಗಳಿಂದ ಹಿಡಿದು ಸಂಪ್ರದಾಯಗಳಲ್ಲಿಯೂ ಹೇಗೆ ತಮ್ಮತನವನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ತಾವೆಲಿ ನೆಲೆಸಿದ್ದಾರೋ ಆ ಸಮಾಜದ ಜನಜೀವನವನ್ನು ಕೂಡ ಒಂದು ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಸದರ್ನ್ ಬ್ಯಾಪ್ಟಿಸ್ಟ್, ಲ್ಯುಥೆರನ್ ಇತ್ಯಾದಿ ಕ್ರಿಶ್ಚಿಯನ್ ಪಂಗಡಗಳಂತೆ ಈ ಯಹೂದಿಗಳದ್ದೂ ಇನ್ನೊಂದು ಪಂಗಡವೆಂಬಂತೆ ಕಾಣುತ್ತದೆ. ಯಾವುದೇ ವಲಸೆಯಲ್ಲಿ ಇದು ಅನಿವಾರ್ಯ ಕೂಡ..

ಬಳ್ಳಂಬೆಟ್ಟುವಿನಲ್ಲಿ ರಾಮಚಂದ್ರಪೈ ನೆಲೆಯಿಡುವುದು ಮತ್ತು ಆ ಕ್ರಿಯೆಯಲ್ಲಿ ಆತನ ಅನುಭವ ವ್ಯಕ್ತಿಯ ಮಟ್ಟದಲ್ಲಿ ಇದಕ್ಕಿಂತಾ ಹೊರತಾದುದೇನಲ್ಲ. ಒಂದು ಕುಟುಂಬದ ಅನುಭವ ಸಮಷ್ಟಿಗೆ ಸಮೀಕೃತವಾಗುವುದು ಹೀಗಲ್ಲವೇ?

* * *

ಆದರೆ, ಪೈರವರ ಆಸಕ್ತಿ ಬರೇ ವಲಸೆಗೆ ಮಾತ್ರ ಸೀಮಿತವಾದುದಲ್ಲ. ನಂತರದ ಕಥನ ಮಹಾಭಾರತದಂತೆ ವಿರಾಟ ಸ್ವರೂಪವನ್ನು ಪಡೆಯುತ್ತದೆ. ರಾಮಚಂದ್ರ ಪೈನ ತಾತ ವಿಟ್ಟುಪೈ ನ ಕಥನ ಮುಕ್ಕಾಲುವಾಸಿ ವಲಸೆ ಮತ್ತು ಆ ಕ್ರಿಯೆಯಲ್ಲಿನ ಸಂಕೀರ್ಣತೆಯನ್ನು ಹೇಳುತ್ತಾ ಹೋಗುತ್ತದೆ. ಒಂದಿಷ್ಟು ಸಾವು, ಕಳ್ಳತನ, ನಾಗೇಶಹೆಗಡೆಯ ಹುಚ್ಚು ಇತರೇ ಸಂಗತಿಗಳ ಮೂಲಕ ಪ್ರಯಾಣ ಮತ್ತು ವಲಸೆ ರುದ್ರಭೀಕರವಾಗಿ ಮುಂದುವರೆಯುತ್ತದೆ. ಲೇಖಕರು ಕಾಲವನ್ನು ಜತೆಜತೆಗೂ ಬೆಳೆಸುವುದಕ್ಕೆ ಆಯಾಕಾಲದ ಚಾರಿತ್ರಿಕ ಘಟನೆ ಮತ್ತು ವ್ಯಕ್ತಿಗಳನ್ನು ಸೂಕ್ತವಾಗಿ ಹೆಸರಿಸುತ್ತಾ ಹೋಗುತ್ತಾರೆ,..

ಇಲ್ಲಿ ಮತ್ತೆ ಮತ್ತೆ ಗಮನಿಸಬೇಕಾದ ವಿಷಯವೆಂದರೆ ಪೈರವರ ಶೈಲಿ. ಗೋವಾದಲ್ಲಿ ಆಲ್ಬುಕೇರ್ಕನ ಕಥೆಯನ್ನು ಹೇಳುತ್ತಿರಲಿ, ಮಂಜೇಶ್ವರದ ಸ್ವಾಮಿಗಳು ಚಾತುರ್ಮಾಸಕ್ಕೆ ಕೂತಿರಲಿ, ವಿಟ್ಟು ಪೈ ಭಿಕ್ಷೆ ಬೇಡಲಿ ಅಥವಾ ರಾಮಚಂದ್ರ ಪೈ ನಾಗ್ಡೋ ಬೇತಾಳನ ಜತೆ ತೀವ್ರವಾಗಿ ಸಂಭಾಷಿಸುತ್ತಿರಲಿ, ಒಂದೊಂದೇ ಭಾಗವನ್ನು ಬಿಡಿಡಿಯಾಗಿ ಓದಿದರೆ ಅದು ವರ್ತಮಾನದಲ್ಲಿ ನಡೆದಂತೇ ಕಾಣುತ್ತದೆ. ಉದಾಹರಣೆಗೆ ಕಾದಂಬರಿಯ ಮೊದಲ ಭಾಗದಲ್ಲಿ ಪೋರ್ಚುಗೀಸ ಆಲ್ಬುಕೇರ್ಕನ ನ ಕಥೆಯಿದೆ, ಕೊನೆಗೆ ಸಿದ್ದು ಪೈ ಹಾವು ಕಚ್ಚಿ ಸಾಯುವ ಘಟನೆಯಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪುಟ ತಿರುಗಿಸಿ ಓದಿದಾಗ ಯಾವುದೋ ಬೇರೆ ಕಾಲದಲ್ಲಿ ನಡೆದಂತೆ ಅನಿಸುವುದಿಲ್ಲ. ಮಧ್ಯೆ ನಾನೂರು ವರ್ಷಗಳ ಅಂತರವಿದೆ ಎನ್ನುವುದನ್ನು ನಾವು ಗಮನಿಸಬೇಕು. ಇದು ಅಕ್ಷರಗಳ ಸೌಂದರ್ಯ. ಇದನ್ನೇ ದೃಶ್ಯ ಮಾಧ್ಯಮದಲ್ಲಿ ಸೆರೆಹಿಡಿಯಲು ನೋಡಿದ್ದಲ್ಲಿ ನಾನೂರು ವರ್ಷಗಳ ಹಿಂದಿನ ಕಾಲವನ್ನು ಪುನರ್ನಿರ್ಮಿಸಲು ನಮ್ಮ ಪ್ರಸಾಧನಕಾರರು, ಮತ್ತು ಸೆಟ್ ಹಾಕುವವರು ಮಾಡುವ ಸರ್ಕಸ್ಸನ್ನು ಕಲ್ಪಿಸಿಕೊಳ್ಳಬಹುದು. (ಕೆಲವೊಂದು ಪಿರಿಯಡ್ ಸಿನೆಮಾಗಳನ್ನು ನೋಡಿದಲ್ಲಿ ಈ ಘಟನೆ ಸ್ಪಷ್ಟವಾದೀತು.) ಆದರೆ, ದೃಶ್ಯಗಳಲ್ಲಿ ಕಾಲವನ್ನು ಪರಿಣಾಮಕಾರಿಯಾಗಿ ಪುನರ್ನಿರ್ಮಿಸಿದಂತೆ ಅಕ್ಷರಗಳಲ್ಲಿ ನಿರ್ಮಿಸಲು ಸಾಧ್ಯವಾಗದು. ನಾವೇನೇ ಬರೆದರೂ ವರ್ತಮಾನದ ಓದುಗನನ್ನು ಗಮನದಲ್ಲಿಟ್ಟುಕೊಂದೇ ಬರೆಯುವುದರಿಂದ, ಅವನಿಗೆ ನನ್ನ ಈ ಕಥೆ ಹೇಗೆ ಕನೆಕ್ಟ್ ಆಗುತ್ತದೆ ಎನ್ನುವುದು ಮುಖ್ಯವಾದಾಗ ಅಲ್ವೀರಾಳ ಕಥನವಾಗಲೀ, ನರಸಪ್ಪನವರ ಸಾವಾಗಲೀ, ರಾಮಚಂದ್ರ ಪೈ ಹೊಂದಿಸುವ ಸಂಬಂಧಗಳಾಗಲೀ ಎಲ್ಲವೂ ಅವು ನಡೆಯುವ ಕಾಲದ ಹಂಗಿಲ್ಲದೇ ಇದೀಗ ನಮ್ಮ ಕಣ್ಣಮುಂದೆಯೇ ನಡೆಯುತ್ತಿದೆ ಎಂದು ಓದಿಕೊಳ್ಳುವುದು ಸಾಧ್ಯ. ಕಾದಂಬರಿಯ ಪ್ರಕಾರದಲ್ಲಿ ಈ ಕಾಲವನ್ನು ಒಂದು ಎಳೆಯಿಂದ ಒಂದುಗೂಡಿಸುವ ಕಾರ್ಯ ಸುಲಭಸಾಧ್ಯವಲ್ಲ. ಅದಕ್ಕೆ ತಪಸ್ಸಿನಂತಹ ಧ್ಯಾನ ಮತ್ತು ಏಕಾಗ್ರತೆಯ ಅವಶ್ಯಕತೆಯಿದೆ. ನಾಲ್ಕೇ ದಿನಗಳಲ್ಲಿ ನಡೆಯುವ ಕಥೆಯನ್ನೂ ಬರೆದಾಗ ಈ ಏಕಾಗ್ರತೆಯಿಲ್ಲದಿದ್ದರೆ ಹಳಿತಪ್ಪುವ ಸಾಧ್ಯತೆಗಳಿರುತ್ತವೆ. ಇದರಲ್ಲಿ ಪೈಯವರ ಯಶಸ್ಸಿದೆ.

ಒಬ್ಬ ಕಾದಂಬರಿಕಾರನಿಗೆ ಇಂಥ ಬೃಹತ್ ಕಾದಂಬರಿಯನ್ನು ಬರೆಯಬೇಕಾದರೆ ಅದಕ್ಕೆ ಬೇಕಾದ ಸಿದ್ಧತೆ ಮತ್ತು ಶ್ರಮ ಎಷ್ಟಿದೆಯೆಂಬ ಕಲ್ಪನೆಯೇ ನನ್ನನ್ನು ವಿನಮ್ರನನ್ನಾಗಿಸಿದೆ. ನಾನೂರು ವರ್ಷದ ಚರಿತ್ರೆಯನ್ನು ಓದಿದರೆ ಸಾಲದು, ರಾಜರುಗಳ ಚರಿತ್ರೆಯನ್ನು ಓದಿ ಆ ಕಾಲದಲ್ಲಿ ಜನಜೀವನ ಹೇಗಿತ್ತು ಎಂದು ಕಲ್ಪಿಸಿಕೊಂಡು ಅದನ್ನು ಮುಂದುವರೆಸುತ್ತ ಹೋಗುವುದು ಒಂದು ಸವಾಲಾದರೆ, ಬರೇ ಕಾದಂಬರಿಯ ವ್ಯಾಪ್ತಿಗಾಗಿಯೇ ಸೃಷ್ಟಿಸಿಕೊಂಡ ಅನೇಕ ಪಾತ್ರಗಳನ್ನು ಮುಂದುವರೆಸುವುದಲ್ಲದೇ ಅನೇಕ ಸಡಿಲ ಎಳೆಗಳನ್ನು ತಾಂತ್ರಿಕ ಕಾರಣಗಳಿಗಾಗಿಯಾದರೂ ಒಂದು ಗೂಡಿಸಬೇಕಾಗುತ್ತದೆ. ನಾಲ್ಕುನೂರು ವರ್ಷಗಳ ಅವಧಿಯಲ್ಲಿ ಸಹಜವಾದ ಹುಟ್ಟುಸಾವುಗಳು ಕಾದಂಬರಿಯಲ್ಲಿ ಸತತವಾಗಿ ಬರತೊಡಗಿದಾಗ ಕೆಲವೊಮ್ಮೆ ಬೋರುಹೊಡೆಸಬಹುದು. ಕೆಲವೊಮ್ಮೆ ಕಥೆಗಾರರು ಕಥಾನುಕೂಲಕ್ಕೆ ಪಾತ್ರಗಳನ್ನು ಸೃಷ್ಟಿಸಿದರು ಮತ್ತು ಸಾಯಿಸಿದರು ಎಂದು ಅನಿಸಬಹುದು. ಎಷ್ಟೋ ಪಾತ್ರಗಳ ಅವಶ್ಯಕತೆಯ ಬಗ್ಗೆಯೇ ಅನುಮಾನ ಬರಬಹುದು.

ಸ್ಪೇನಿನ ಕಾದಂಬರಿಕಾರ ‘ಮರಿಯೋ ವಾರ್ಗಸ್ ಲೋಸ’ ನ ಒಂದು ಮಾತು ನೆನಪಿಗೆ ಬರುತ್ತದೆ. ಒಂದು ಮಹತ್ವದ ಕಾದಂಬರಿ ಏನೂ ಮಹತ್ವವಾದದ್ದನ್ನು ಹೇಳುತ್ತಿದೆ ಎಂದು ಹೇಳಿಕೊಂಡು ಬರೆಯಲ್ಪಡುವುದಿಲ್ಲ. ಹೀಗೆ ಮಹತ್ತರವಾದುದನ್ನು ಮಹತ್ತರವಾದ ಘಟನೆಗಳ ಮೂಲಕ ವರ್ಣಿಸದೇ ಪ್ರತಿ ಸಾಮಾನ್ಯ ಘಟನೆಗಳನ್ನೂ ಸಾಮಾನ್ಯವಾಗಿಯೇ ಸೆರೆಹಿಡಿಯುವುದರಿಂದ ಅದು ಮಹತ್ತರವಾಗುತ್ತದೆ.’ ನಮ್ಮ ಜೀವನವನ್ನೇ ಉದಾಹರಣೆಗೆ ತೆಗೆದುಕೊಂಡರೆ ಒಂದು ವರ್ಷದಲ್ಲಿ ನಮ್ಮ ಲೆಕ್ಕದಿಂದ ಮಹತ್ವವಾದ ಘಟನೆಗಳು ನಡೆಯುವುದು ಪಾಯಶಃ ಕೇಲವೇ ಕೆಲವು ದಿನಗಳಲ್ಲಿ- ಮಕ್ಕಳ ಹುಟ್ಟುಹಬ್ಬ, ಒಂದು ಪ್ರೊಮೋಶನ್, ಒಂದಿಷ್ಟು ಪಾರ್ಟಿಗಳು, ನಾಲ್ಕು ಮದುವೆ, ಓದಿದ ಪುಸ್ತಕಗಳು, ನೋಡಿದ ಸಿನೆಮಾ, ಹುಟ್ಟು ಮತ್ತು ಸಾವು. ಹುಟ್ಟು ಸಾವುಗಳು ಯಾವಾಗಲೂ ಬರುವುದಿಲ್ಲ. ಪರಿಚಿತರ, ಬಂಧುಗಳ ಹುಟ್ಟು ಸಾವುಗಳು ಅನಿರೀಕ್ಶಿತವಾಗಿದ್ದರೆ ಮಾತ್ರ ಮುಖ್ಯವಾಗುತ್ತದೆ, ಮಕ್ಕಳ ಹುಟ್ಟುಹಬ್ಬಗಳು, ವಿವಾಹದ ವಾರ್ಷಿಕೋತ್ಸವ್ವ ಎಲ್ಲವೂ ಕೊಂಚ ಕಾಲದನಂತರ ಪೇಲವವಾಗಿಯಾದರೂ ಮುಖ್ಯವಾಗಿ ನೆನಪಿನಲ್ಲಿ ನಿಂತುಕೊಳ್ಳುತ್ತವೆ.

ಒಬ್ಬ ಕಾದಂಬರಿಕಾರನೂ ಮನುಷ್ಯನಾದ್ದರಿಂದ ಆತ ಏನೇ ಓದಿ ಬರೆದರೂ ಅಥವಾ ತನ್ನ ಅನುಭವದ ಮೇಲೆ ಕಾದಂಬರಿ ಬರೆದರೂ ಈ ನೆನಪಿರುವ ಮಹತ್ವದ ಘಟನೆಗಳ ರೋಚಕತೆಗೆ ಮತ್ತು ಅವುಗಳನ್ನು ದಾಖಲಿಸುವ ಆಮಿಷದಿಂದ ದೂರವಿರುವುದು ಕೊಂಚ ಕಷ್ಟ. ಅದು ಬಿಟ್ಟು ದೈನಿಕವನ್ನು, ಋತುವನ್ನು, ಎಂದೋ ನಡೆದ ಚಾತುರ್ಮಾಸ ಪೂಜೆಯನ್ನು, ಮದುವೆ ಸಂಬಂಧದ ಮಾತುಕತೆಗಳನ್ನು, ಹುಟ್ಟು ಸಾವುಗಳನ್ನು ದೈನಿಕದ ವಿವರಗಳಂತೆ ಬರೆಯುವುದು ಅಷ್ಟು ಸುಲಭವಲ್ಲ. ಇದು ವಿಶೇಷವಾದದ್ದೇನೂ ನಡೆಯದ ನಮ್ಮ ದಿನವೊಂದರ ಬಗ್ಗೆ ಬರೆದಂತೆ. ಇಂಥ ವಿಷಯ ಬಂದಾಗ ನಾಲ್ಕುನೂರಕೂ ಹೆಚ್ಚುವರ್ಷಗಳ ಕಾಲದ ದೈನಿಕವನ್ನು ದೈನಿಕವಾಗಿಯೇ ಚಿತ್ರಿಸಿರುವುದರಲ್ಲಿ ಪೈರವರ ಯಶಸ್ಸಿದೆ. ಹಾಗಾಗಿ ಪೋರ್ಚುUಗಿಸರಿಂದಾದ ಮುಸ್ಲಿಮರ ನರಮೇಧ, ನಂತರವಾದ ಕ್ರೈಸ್ತಮತದ ಮತಾಂತರ, ಅವರ ವಲಸೆ, ಬಳ್ಳಂಬೆಟ್ಟುವಿನಲ್ಲಿ ರಾಮಚಂದ್ರಪೈ ನೆಲೆಸಿದ್ದು ಮತ್ತು ಅವನ ಜೀವನ ಇವೆಲ್ಲ ಇಲ್ಲಿನ ಅಸಂಖ್ಯ ಪಾತ್ರಗಳ ದೈನಿಕರೇಖೆಯನ್ನು ಸೇರಿಸುವ ಚುಕ್ಕಿಗಳಾಗಿ ಮಾತ್ರ ಕಾಣುತ್ತವೆ. ಆ ರೇಖೆಯ ಅಂದ ಚುಕ್ಕಿಗಳಿಂದ ಮಾಸಿಲ್ಲ.

ರೇಖೆಯೊಂದು ಅನೇಕ ಚುಕ್ಕಿಗಳ ಗಣವೇ ಆದರೂ ರೇಖೆ ರೇಖೆಯಂತೆ ಕಾಣಲು ಚುಕ್ಕಿಗಳು ಮಸುಕಾಗಲೇಬೇಕು. ಇಂಥ ಒಂದು ರೇಖೆಯ ಸೃಷ್ಟಿಯಲ್ಲಿ ಪೈರವರು ಯಶಸ್ವಿಯಾಗಿದ್ದಾರೆ.

Saturday, January 2, 2010

ವರ್ಧನಾ.. ವಿಷ್ಣುವರ್ಧನಾ..

ಕವಬಾಟನ ‘ಸಾವಿರ ಪಕ್ಷಿಗಳು’


ಯಸುನಾರಿ ಕವಬಾಟ- ಜಪಾನೀ ಸಾಹಿತ್ಯದಲ್ಲಿ ಅತಿ ವಿಶಿಷ್ಟವಾದ ಧ್ವನಿ. ಮೊಟ್ಟ ಮೊದಲ ಬಾರಿಗೆ ಜಪಾನಿನ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ಈತನದು. ತನ್ನ ಸರಳವಾದ ಗದ್ಯದಿಂದಲೇ ಮಹತ್ತರವಾದ, ಜೀವನದ ಅನೇಕ ಸಂಕೀರ್ಣಗಳ ಅರ್ಥವನ್ನು ಹುಡುಕಹೊರಟು ಅದರಲ್ಲಿ ಯಶಸ್ಸನ್ನು ಪಡೆದಾತ. ಭಾಷೆ ಸರಳವಾಗುತ್ತಾ ಹೋದಲ್ಲಿ ಅಪ್ರಯತ್ನಪೂರ್ವಕವಾಗಿ ಹೇಳುವ ಕಥನವೂ, ಆಯ್ದುಕೊಳ್ಳುವ ವಿಷಯಗಳೂ ಸರಳವಾಗುತ್ತವೆ ಎಂಬ ನಂಬಿಕೆಗೆ ತದ್ವಿರುದ್ಧವಾದ ಚಿಂತನಕ್ರಮ ಈತನದು. ಭಾಷೆಯನ್ನು ಮೇಣದಂತೆ ತನಗೆ ಬೇಕಾದ ಅಭಿವ್ಯಕ್ತಿಗೆ ರೂಡಿಸಿಕೊಂಡದ್ದು ಈತನ ಸಾಧನೆ. ಎಲ್ಲಿಯೂ ಈತ ಝಳಪಿಸುವುದಿಲ್ಲ, ಬೊಬ್ಬೆ ಹಾಕುವುದಿಲ್ಲ ಅಥವಾ ಗರ್ಜಿಸುವುದಿಲ್ಲ. ತನ್ನ ಮೃದುವಾದ ಧ್ವನಿಯಲ್ಲಿಯೇ ಮೆದುವಾದ, ಆಪ್ತವಾದ ಆದರೆ ಅಷ್ಟೇ ಗರಿಮುರಿಯಾದ ಗದ್ಯವನ್ನು ಉಣಬಡಿಸುವುದು ಈತನ ವೈಶಿಷ್ಟ್ಯ. ಭಾಷೆ ಸರಳವಾದಷ್ಟೂ ಸಂಕೀರ್ಣ ಸಂಗತಿಗಳು ಓದುಗರಿಗೆ ಹೆಚ್ಚು ಆಪ್ತವಾಗುತ್ತವೆ ಎಂತಲೇ ಈತ ಕೊನೆತನಕ ನಂಬಿದ್ದ. ಈತನ ಕಥನದ ಶೈಲಿ ಹೈಕುಗಳಿದ್ದಂತೆ, ಮೂರೇ ಸಾಲಿನಲ್ಲಿ ಹೇಳಬೇಕಾದ್ದು ಹೇಳಿ ಇನ್ನೂ ಏನೋ ಇದೆ ಎನಿಸುವ, ಮತ್ತಿನ್ನಷ್ಟು ಓದಬೇಕು ಎನಿಸುವ ಹೃದ್ಯ ಶೈಲಿ ಈತನದು.

ಕವಬಾಟನ ಒಟ್ಟು ಕಥನದ ಥೀಮ್-ಸ್ಥೂಲವಾಗಿ ಹೇಳಬೇಕೆಂದರೆ ‘ತೀವ್ರವಾದ ಹಂಬಲ’. ಈ ತೀವ್ರವಾದ ತೀರದ ಹಂಬಲ ಅವನ ಮಹತ್ವದ ಕಾದಂಬರಿಗಳಾದ ‘ಸ್ನೋ ಕಂಟ್ರಿ’ ‘ಥೌಸೆಂಡ್ ಕ್ರೇನ್ಸ್’ ಮುಂತಾದುವುಗಳಲ್ಲಿ ಪುನರಾವರ್ತಿತವಾಗಿವೆ, ಈ ಹಂಬಲವೇ ನಮ್ಮ ಜೀವನದ ಉಸಿರು ಎಂದು ತಿಳಿದಾತ. ಈ ಹಂಬಲ ಎಷ್ಟು ತೀವ್ರವಾಗಿರಬೇಕೆಂದರೆ ಅದರ ಸಾಧನೆಯ ಹಾದಿಯಲ್ಲಿ ನಾವು ಮುಕ್ತಿಹೊಂದಬೇಕೇ ಹೊರತು ಸಾಧಿಸಿಬಿಟ್ಟರೆ ಈ ಹಂಬಲಕ್ಕೇ ಅರ್ಥವಿರುವುದಿಲ್ಲ ಎನ್ನುವುಷ್ಟು ಅಚಲವಾಗಿತ್ತು ಆತನ ನಂಬಿಕೆ. ಹಾಗಾಗಿಯೇ ಯಶಸ್ಸಿನ ಬಗ್ಗೆಯೂ ಆತನಿಗೆ ನಂಬಿಕೆಯಿರಲಿಲ್ಲ. ಈ ರೀತಿಯ ತೀರದ ಹಂಬಲವನ್ನು ಆತನೇ ಕೆಲವುಕಡೆ ‘ವ್ಯರ್ಥ ಪ್ರಯತ್ನ’(Wasted efforts)ಗಳೆಂದು ಕರಕೊಂಡಿದ್ದಾನೆ. ಇಂಥ ಪ್ರಯತ್ನದಲ್ಲಿ ಕೂಡ ಬದುಕನ್ನು ತೀವ್ರವಾಗಿ ಅನುಭವಿಸುವ ಹಂಬಲವಿದ್ದಾಗ ಅದು ವ್ಯರ್ಥವಲ್ಲ ಎಂದು ಈತನ ನಂಬಿಕೆ.

ಈತ ನಿತ್ಯನಗರಿಯ ತಾಕಲಾಟವನ್ನು ಬರೆಯುವ ವಾಸ್ತವವಾದಿ ಬರಹಗಾರರನ್ನು ದ್ವೇಷಿಸುತ್ತಿದ್ದ. ಆತನಿಗೆ ಸೌಂದರ್ಯದ ಅಸ್ತಿತ್ವದ ಬಗ್ಗೆ ಬಹಳವಾದ ನಂಬಿಕೆಯಿದ್ದಿದ್ದಷ್ಟೇ ಅಲ್ಲ, ಈ ಸೌಂದರ್ಯವನ್ನು ಅರಸುವುದು ಮತ್ತು ಅದನ್ನು ಅದನ್ನು ತೀರ ಶುದ್ಧವಾಗಿ ತನ್ನ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರ ಪ್ರಯತ್ನದಲ್ಲಿ ಯಾವತ್ತೂ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ.. ‘ಈ ಬದುಕೆಂಬುದು ಸತ್ಯ- ಮಿಥ್ಯಗಳ, ಶುದ್ಧ- ಅಶುದ್ಧಗಳ, ಪ್ರಾಮಾಣಿಕತೆ- ಕೃತ್ರಿಮಗಳ ಸಂಗಮ. ಒಬ್ಬ ಕಾದಂಬರಿಕಾರ ಸತ್ಯ, ಶುದ್ಧ, ಪ್ರಾಮಾಣಿಕವಾದವುಗಳನ್ನು ಹೆಕ್ಕಿ, ಜೋಡಿಸಿ ದೈನಿಕವನ್ನು ಮೀರಿದ ಸುಂದರ ವಾಸ್ತವವನ್ನು ಸೃಷ್ಟಿಸಬೇಕು. ಇಂಥ ಶೋಧದಲ್ಲಿ ಮಾತ್ರ ನನಗೆ ಸುಖ ಸಿಗುವುದು’ ಎಂದು ಆತ ಬಹಳ ಬಾರಿ ಹೇಳಿದ್ದ. ಒಂದು ಉದಾಹರಣೆ ನೋಡಿ. ಆತನ ‘ಸ್ನೋ ಕಂಟ್ರಿ’ ಎಂಬ ಅದ್ಭುತ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ನಾಯಕ ಶಿಮಮುರ ಜಪಾನಿನ ಉತ್ತರಭಾಗದಲ್ಲಿರುವ ಹಿಮಾಚ್ಛಾಧಿತ ಪ್ರದೇಶಕ್ಕೆ ಒಂದು ರೈಲಿನಲ್ಲಿ ಹೋಗುತ್ತಿರುತ್ತಾನೆ. ರೈಲಿನ ಇನ್ನೊಂದು ಮೂಲೆಯಲ್ಲಿ ಯೋಕೋ ಎಂಬ ಒಬ್ಬ ಸುಂದರ ಹುಡುಗಿ ತನ್ನ ರೋಗಿಷ್ಠ ಪ್ರಿಯತಮನ ಜತೆ ಕೂತಿದ್ದಾಳೆ. ಹೊರಗೆ ನಿಧಾನಕ್ಕೆ ಕತ್ತಲಾಗುತ್ತಿದೆ. ರೈಲು ನಿಧಾನವಾಗಿ ಈ ಹಿಮದ ಮಧ್ಯೆ ಹೋಗುತ್ತಾ ಇದೆ. ಆಗ ಆ ಪರ್ವತದ ಮೇಲಿನಿಂದ ಪ್ರತಿಫಲಿಸಿದ ಬೆಳಕಿನ ಕಿರಣದ ಹೊಳಪನ್ನು ಆ ಸುಂದರ ಹುಡುಗಿಯ ಕಣ್ಣಿನಲ್ಲಿ ಶಿಮಮುರ ರೈಲಿನ ಮಬ್ಬು ಗಾಜಿನ ಕಿಟಕಿಯಲ್ಲಿನ ಆ ಹುಡುಗಿಯ ಪ್ರತಿಬಿಂಬದಲ್ಲಿ ಕಾಣುತ್ತಾನೆ. ಇದು ಶಿಮಮುರನಿಗೆ ಅತ್ಯಂತ ಸುಂದರವಾದ ಅನುಭವ. ಹೊರಗೆ ಕೊರೆಗಟ್ಟುವ ಚಳಿ, ಎಲ್ಲೆಲ್ಲೂ ಹಿಮ, ಇದಲ್ಲದೆ ಈ ಸುಂದರ ಹುಡುಗಿ ಆರೈಸುತ್ತಿರುವುದು ಅಕೆಯ ರೋಗಗ್ರಸ್ತ ಗೆಳೆಯನನ್ನು. ಆತ ಅಲ್ಲಿಯೇ ತಳ್ಳುಕುರ್ಛಿಯಲ್ಲಿದ್ದಾನೆ. ಹೊರಗೆ ಕತ್ತಲಾಗುತ್ತಿದೆ, ಪ್ರಯಾಣದಿಂದ ಎಲ್ಲರೂ ಬಳಲಿದ್ದಾರೆ. ಕಿಟಕಿಯ ಗಾಜು ಕನ್ನಡಿಯಂತಲ್ಲ ಅದು ಯಾವ ಬಿಂಬವನ್ನೂ ಪೂರ್ತಾ ಪ್ರತಿಬಿಂಬಿಸಲಾರದು. ಮತ್ತೆ ಕತ್ತಲಿನ ಮಬ್ಬು ಬೆಳಕಿನಲ್ಲಿ ಈ ಹೊರಗಿನ ಕಿರಣ ಪರ್ವತದ ಮೇಲಿಂದ ಪ್ರತಿಫಲಿಸಿ, ಹುಡುಗಿಯ ಕಣ್ಣಲ್ಲಿ ಮಿಂಚುತ್ತಿದ್ದನ್ನು ನಾಯಕ ಶಿಮಮೂರ ಆಕೆಯ ಮಬ್ಬು ಬಿಂಬದಲ್ಲಿ ಕಾಣುತ್ತಾನೆ.- ಇಂಥ ಪ್ರತಿಮೆಗಳನ್ನು ಮರೆಯುವುದು ಕಷ್ಟ. ಕವಬಾಟನ ಸೌಂದರ್ಯದ ಶೋಧವೂ ಹೀಗೇ. ಶಿಮಮೂರನ ಇಡೀ ರೈಲಿನ ವ್ಯರ್ಥ ಪ್ರಯಾಣಕ್ಕೆ ಈ ಒಂದು ಬೆಳಕಿನ ಕಿರಣದ ಪ್ರತಿಫಲನದ ಸೌಂದರ್ಯ ಗೊತ್ತಿಲ್ಲದ ಸಾರ್ಥಕ್ಯವನ್ನು ಒದಗಿಸುತ್ತದೆ. ಇಂಥ ಸೌಂದರ್ಯವನ್ನು ಹುಡುಕುವುದು, ದಾಖಲಿಸುವುದು ಒಬ್ಬ ಕಾದಂಬರಿಕಾರನ ಗುರಿಯಾಗಬೇಕೆಂದು ಆತ ಯಾವತ್ತೂ ಪ್ರತಿಪಾzಸುತ್ತಿದ್ದ,

ಬದುಕನ್ನು ತೀವ್ರವಾಗಿ ಅನುಭವಿಸಬೇಕಾದಲ್ಲಿ ಅದಕ್ಕೆ ಬೇಕಾದದ್ದು ಮುಗ್ಧತೆ ಮತ್ತು ಮುಕ್ತತೆ ಎಂದು ಕವಬಾಟ ಎಂದಿಗೂ ನಂಬಿದ್ದ. ಇದು ಆತನ ಯಾವತ್ತೂ ಆಶಯ ಕೂಡ. ಈ ಮುಗ್ಧತೆಯನ್ನು ಆತ ಸಣ್ನ ಮಕ್ಕಳಲ್ಲಿ, ಎಳೆಯ ಪ್ರಾಯದ ತರುಣಿಯರಲ್ಲಿ ಮತ್ತು ಸಾಯುತ್ತಿರುವ ಗಂಡಸರಲ್ಲಿ ಕಂಡಿದ್ದ. ಹಾಗಾಗಿ ಆತನ ಪ್ರಸಿದ್ಧ ಕಾದಂಬರಿಗಳಲ್ಲಿ ಈ ಬಗೆಯ ಪಾತ್ರಗಳು ಪುನರಾವರ್ತಿತವಾಗುತ್ತವೆ. ಮಕ್ಕಳ ಮುಗ್ಧತೆಗೆ ಯಾರೂ ಕಾರಣ ಕೇಳುವುದಿಲ್ಲ. ಆದರೆ, ಎಳೆಯ ತರುಣಿಯರು ಮತ್ತು ಸಾಯುತ್ತಿರುವ ಗಂಡಸರಲ್ಲಿ ಇಂಥ ಮುಗ್ಧತೆಯನ್ನು ಆತ ಮತ್ತೆಮತ್ತೆ ಕಂಡಿದ್ದು ಕುತೂಹಲಕರವಾದ ವಿಷಯ. ಅಷ್ಟೇ ಅಲ್ಲ, ಈ ಮುಗ್ಧತೆಯಿಲ್ಲದ ಬರಹಗಾರರನ್ನಾಗಲೀ ಅಥವಾ ಅಂತಹ ಯಾವುದೇ ಬರವಣಿಗೆಯನ್ನೂ ಕವಬಾಟ ಒಪ್ಪಿಕೊಳ್ಳುತ್ತಿರಲಿಲ್ಲ. ಇದನ್ನು ಆತ ತನ್ನ ಸಾಹಿತ್ಯಿಕ ಜೀವನದಲ್ಲಿಯೂ ಯಾವತ್ತೂ ಒಂದು ವ್ರತದಂತೆ ಪಾಲಿಸಿದ. ವೃತ್ತಿಪರ ಬರಹಗಾರರನ್ನು ಆತ ಯಾವತ್ತೂ ಇಷ್ಟಪಟ್ಟಿರಲಿಲ್ಲ. ಹಾಗೆಯೇ ಏನೂ ಹೆಸರು ಮಾಡಿರದ ಹೊಸಬರಹಗಾರರನ್ನು ಆತ ಕೊಂಚ ಹೆಚ್ಚಾಗಿಯೇ ಓಲೈಸುತ್ತಿದ್ದ ಎಂಬ ಅಪವಾದವೂ ಇದೆ. ಆದರೆ, ಮಗುವಿನ ಮುಗ್ಶತೆಯಿಂದ ನೋಡಲಾಗದ ಜಗತ್ತನ್ನು ಆತ ಎಂದೂ ನಿರಾಕರಿಸಿದ್ದ. ಆತನ ಪ್ರಕಾರ ಮುಗ್ಧತೆಯೆಂದರೆ ಯಾರಿಗೂ ದಕ್ಕದ, ಯಾರಿಗೂ ದಕ್ಕಿರದ ಪ್ರೀತಿ.

ತನ್ನ ಸಾಹಿತ್ಯ ಮತ್ತು ಅದರ ಆಶಯದ ಬಗ್ಗೆ ಕವಬಾಟ ಯಾವತ್ತೂ ಸ್ಪಷ್ಟವಾಗಿದ್ದ. ಅದರ ಬಗ್ಗೆ ಆತನಿಗೆ ಕೊಂಚವೂ ಅನುಮಾನವಿರಲಿಲ್ಲ. ಪ್ರತಿಯೊಂದು ಕ್ರಿಯೆಯೂ ಕೇವಲ ಸಾಂದರ್ಭಿಕ ಮಾತ್ರ ಎಂದು ಆತ ಬಹಳವಾಗಿ ನಂಬಿದ್ದ. ಒಳ್ಳೆಯದಕ್ಕೆ ಅರ್ಥ ಬರಬೇಕಾದರೆ ಈ ಒಳ್ಳೆಯತನವನ್ನು ಸುತ್ತುವರಿಯುವ ಸಂದರ್ಭ ಮಾತ್ರ ಮುಖ್ಯ, ಹಾಗೆಯೇ ಕೆಟ್ಟದೆನ್ನುವುದು ಕೆಟ್ಟದಾಗುವುದು ಕೂಡ ಆ ಸಂದರ್ಭಾನುಸಾರ ಮಾತ್ರ. ಯಾವುದೇ ಕ್ರಿಯೆಯನ್ನು ಆ ಕ್ರಿಯೆಯ ಸಾಂದರ್ಭಿಕ ಅರ್ಥದಿಂದ ಹೊರತುಪಡಿಸಿ ಆತ ನೋಡಲು ಇಷ್ಟಪಡುತ್ತಿರಲಿಲ್ಲ.ಒಂದು ಸಣ್ನ ಉದಾಹರಣೆ ಕೊಡಬೇಕೆಂದರೆ ಜಪಾನಿನ ಒಬ್ಬ ದೂರದ ಓಟಗಾರ ೧೯೬೮ರಲ್ಲಿ ಒಂದು ಹೋಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆತ ತನ್ನ ಆತ್ಮಹತ್ಯಾ ಒಕ್ಕಣೆಯಲ್ಲಿ ‘ನನ್ನ ಪ್ರೀತಿಯ ಅಪ್ಪ, ಅಮ್ಮ- ನೀವು ಬಡಿಸಿದ ಟ್ಯೊರೊರೋ ಅನ್ನವನ್ನು ನಾನು ಬಹಳ ಖುಷಿಯಿಂದ ಉಂಡಿದ್ದೇನೆ’ ಎಂದು ಆರಂಭಿಸಿ ತನ್ನ ಇಡೀ ಪರಿವಾರವನ್ನು ಉದ್ದೇಶಿಸಿ ಧನ್ಯವಾದವನ್ನು ಹೇಳಿ ಕೊನೆಗೆ ಎಲ್ಲರ ಕ್ಷಮೆ ಕೇಳಿ ಸಾಯುತ್ತಾನೆ. ಈ ಆತ್ಮಹತ್ಯಾ ಪತ್ರ ಕವಬಾಟನನ್ನು ಬಹಳ ಕಾಡಿತ್ತು. ‘ಈ ಅತಿಭಾವುಕ ಅನ್ನುವ ಪತ್ರದಲ್ಲಿ ಈತ ತೀರ ಸರಳವಾಗಿ ನಾನು ಖುಷಿಪಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಈ ಪದಗಳು ಆತ ಬದುಕಿದ ಅಪ್ಪಟ ಬದುಕನ್ನು ಉಸಿರಿಸುತ್ತದೆ. ಆತ್ಮಹತ್ಯಾ ಒಕ್ಕಣೆಯ ಅರ್ಥವನ್ನು ಮೀರಿಸುವ ಒಂದು ತಾಳ ಈ ಪದಗಳಿಗಿವೆ. ಎಷ್ಟು ಸುಂದರ, ಗಾಢ ಮತ್ತು ವಿಷಾದಕರ.’ ಎಂದು ಕವಬಾಟ ಹೇಳಿದ್ದ. ಈ ರೀತಿಯ ಸೌಂದರ್ಯ ಮತ್ತು ವಿಷಾದ ತುಂಬಿದ ಬರವಣಿಗೆಗೆ ಕವಬಾಟ ಹಾತೊರೆಯುತ್ತಿದ್ದ ಎನ್ನುವುದು ಅವನ ಕಾದಂಬರಿಗಳನ್ನು ಓದಿದವರಿಗೆ ಸ್ಪಷ್ಟವಾಗುತ್ತದೆ.

ಈತನ ಸಾವೂ ಒಂದು ವಿಚಿತ್ರಕರವಾಗಿಯೇ ಆಯಿತೆಂದು ಹೇಳಲಾಗುತ್ತದೆ. ಈತನ ಆತ್ಮ ಸ್ನೇಹಿತ ಯುಕಿಯೋ ಮಿಶಿಮಾ ಎಂಬ ಲೇಖಕ ೧೯೭೦ರಲ್ಲಿ ವಿಧಿವತ್ತಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ. ೧೯೭೨ರಲ್ಲಿ ಯಾವ ಸೂಚನೆಯನ್ನೂ ಕೊಡದೆ ಮನೆಯಿಂದ ಹೊರಹೋದ ಕವಬಾಟ ಒಂದು ಗ್ಯಾಸ್ ನಳಿಕೆಯನ್ನು ಬಾಯಲ್ಲಿಟ್ಟುಕೊಂಡು ಸತ್ತ. ಆತ ಯಾಕೆ ಸತ್ತ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ನೋಬೆಲ್ ಸಮಿತಿಯ ವೆಬ್‌ಸೈಟಿನಲ್ಲಿ ಈತನ ಮರಣ ಆತ್ಮಹತ್ಯೆಯಿಂದಲೇ ಆಯಿತು ಎಂದು ಬರೆಯಲಾಗಿದೆ.

ಕವಬಾಟ ಅನೇಕ ಕಾದಂಬರಿಗಳನ್ನು, ಕಥೆಗಳನ್ನು ಮತ್ತು ಅನೇಕ ಸಣ್ಣ ಸಣ್ಣ ಕತೆಗಳನ್ನೂ ಕೂಡ ಅಪೂರ್ಣವಾಗಿಯೇ ಉಳಿಸಿದ್ದ. ‘ಕಲೆ ಅದಾಗಿಯೇ ಪರಿಪೂರ್ಣವಾಗಬೇಕು’ ಎಂಬುದು ಆತನ ನಂಬಿಕೆ. ಅದಕ್ಕೆ ಒಂದು ಸಮಯದ ಪರಿಧಿಯನ್ನು ಹಾಕಿಟ್ಟುಕೊಂಡು ಇಷ್ಟುದಿನದೊಳಗೆ ಒಂದು ಕಾದಂಬರಿಯನ್ನು ಮುಗಿಸುತ್ತೇನೆ ಎಂಬುದರ ಬಗ್ಗೆ ಆತನಿಗೆ ನಂಬಿಕೆಯಿರಲಿಲ್ಲ. ಆತನ ಬಹು ಮುಖ್ಯ ಕಾದಂಬರಿಗಳೆಂದು ಗುರುತಿಸಲಾಗುವ ‘ಸ್ನೋ ಕಂಟ್ರಿ’ ಮತ್ತು ‘ಥೌಸೆಂಡ್ ಕ್ರೇನ್ಸ್’ ಅನ್ನು ಆತ ವರ್ಷಾನುಗಟ್ಟಲೆ ಬರೆದ.

ಈತನ ಒಂದು ಬಹುಮುಖ್ಯ ಕಾದಂಬರಿ ‘ಥೌಸೆಂಡ್ ಕ್ರೇನ್ಸ್’ ಅನ್ನು ಕನ್ನಡಕ್ಕೆ ‘ಸಾವಿರ ಪಕ್ಷಿಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ, ಕೃಷ್ಣರಾಜುರವರು. ಕವಬಾಟನ ಈ ಅತ್ಯಂತ ಸೋಪಜ್ಞ ಕೃತಿಯನ್ನು ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿ ನಮಗೆಲ್ಲ ಈತನ ಬರವಣಿಗೆಯ, ಭಾಷೆಯ ಮತ್ತು ಈತ ಬದುಕುತ್ತಿದ್ದ ಪ್ರಪಂಚವನ್ನು ನಮಗೆ ಪರಿಚಯಿಸಿದ್ದಾರೆ ಕೃಷ್ಣರಾಜುರವರು. ಎಷ್ಟು ಓದಿದರೂ ಇನ್ನೂ ಓದಬೇಕೆನ್ನಿಸುವ ಈ ಮಹಾಕಾದಂಬರಿಕಾರನನ್ನು ಕನ್ನಡಕ್ಕೆ ಪರಿಚಯಮಾಡಿಸಿದ್ದಕ್ಕಾಗಿ ನಾನು ಕೃಷ್ಣರಾಜುರವರಿಗೆ ಧನ್ಯವಾದವನ್ನು ಹೇಳುತ್ತೇನೆ.
ಕಾದಂಬರಿಯ ಕಥನವಸ್ತುವನ್ನು, ಭಾಷೆಯನ್ನು ನಾನು ಚರ್ಚಿಸಲು ಹೋದರೆ ಕಾದಂಬರಿಕಾರನಿಗೆ ಮತ್ತು ಅನುವಾದಕರ ಪ್ರಯತ್ನಕ್ಕೆ ಯಾವರೀತಿಯಲ್ಲಿಯೂ ನ್ಯಾಯ ಒದಗಿಸಲಾರೆ. ಅನುವಾದಕನ ಜಾಣ್ಮೆ ಮತ್ತು ಮೂಲಕೃತಿಯ ಬಗೆಗಿನ ನಿಷ್ಟೆ, ಕಾಳಜಿಗಳು ಅನುವಾದದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಒಂದು ಸಣ್ಣ ಉದಹರಣೆಯನ್ನು ನೋಡಿ.
ಕಾದಂಬರಿಯ ಮೊದಲಲ್ಲಿಯೇ ನಾಯಕ ಕಿಕುಜಿಯ ತಂದೆಯ ಪ್ರೇಯಸಿ ಚಿಕಕೋಳ ಮೊಲೆಯ ಮೇಲಿನ ಮಚ್ಚೆಯೊಂದರ ವಿವರಣೆ ಬರುತ್ತದೆ. ಅದರ ಅನುವಾದ ಹೀಗಿದೆ.
‘ಅದನ್ನು ಓದುತ್ತಾ ಕಿಕುಜಿಗೆ ಚಿಕಕೊಳ ಮೊಲೆಯ ಮೇಲಿನ ಮಚ್ಚೆ ನೆನಪಿಗೆ ಬಂತು.
ಅವನಿಗಾಗ ಎಂಟೋ ಒಂಬತ್ತೋ ವರ್ಷ. ಅಪ್ಪನೊಟ್ಟಿಗೆ ಅವಳ ಮನೆಗೆ ಹೋಗಿದ್ದ. ಅಡಿಗೆಮನೆಯಲ್ಲಿ ಮಂಡಿಯೂರಿ ಕುಳಿತಿದ್ದಳು. ಎದುರಿಗೆ ಹರಡಿದ ನ್ಯೂಸ್ ಪೇಪರ್. ಕಿಮೋನೋ ಸರಿದು ಬತ್ತಲೆ ಮೊಲೆ ಮುಂದೆ ಜೋತಿದೆ. ಎಡ ಮೊಲೆಯ ಮೇಲಿಂದ ನಡುವಿನ ಕಣಿವೆಯವರೆಗೆ ಹಬ್ಬಿದ ಕೈ-ಅಗಲದ ಕೆನ್ನೀಲಿ ಮಚ್ಚೆ. ಅದರ ಮೇಲೆ ತೆಳುವಾಗಿ ಬೆಳೆದಿದ್ದ ಕೂದಲುಗಳನ್ನು ಸಣ್ಣ ಕತ್ತರಿಯಿಂದ ಕತ್ತರಿಸುತ್ತಿದ್ದಾಳೆ...
...ಅವಳ ಮಂಡಿಯ ಮುಂದಿನ ಪೇಪರಿನ ಮೇಲೆ ಬಿದ್ದಿದ್ದ ಗರಿ ಗರಿ, ನಿಮಿರು ನಿಮಿರಿನ ಕೂದಲನ್ನು ಕಿಕುಜಿ ದುರುಗುಟ್ಟಿ ನೋಡಿದ.’
...ಆ ಮಗು ತನ್ನ ಜೀವನದಲ್ಲಿ ಮೊಟ್ಟ ಮೊದಲು ನೋಡೋದು ಅಮ್ಮನ ಮಚ್ಚೆ ಹರಡಿದ ಮೊಲೆ. ಅದರ ಮೂಲಕಾನೇ ಮಗುಗೆ ಅದರಮ್ಮನ ನೆನಪು. ಜನ್ಮದುದ್ದಕ್ಕೂ ಆ ಕುರೂಪಿ ಮೊಲೇನ ಮರೆಯೋಕಾಗಲ್ಲ,
ಚಿಕಕೊಳ ಮೊಲೆಯ ಮೇಲಿನ ಮಚ್ಚೆಯ ಈ ಪ್ರತಿಮೆಯನ್ನು ಕಣ್ಣಿನಿಂದ ಅಳಿಸಲು ಪ್ರಯತ್ನ ಮಾಡಿನೋಡಿ. ಅಷ್ಟೇ ಅಲ್ಲ, ಕಣ್ಣು ಬಿಟ್ಟ ತಕ್ಷಣ ಮೊಲೆಯ ಮೇಲಿನ ಮಚ್ಚೆಯನ್ನು ನೋಡುವ ಮಗುವಿನ ಪ್ರತಿಮೆ. ಎರಡೂ ಕೊನೆಯವರೆಗೂ ಏನು, ಕಾದಂಬರಿಯೋದಿಯಾದ ಮೇಲೆಯೂ ಕಣ್ಣಮುಂದೆ ದಟ್ಟವಾಗಿ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ.

* * *

ಈ ಅನುವಾದಕ್ಕೆ ಕೃಷ್ಣರಾಜುರವರು ಉಪಯೋಗಿಸಿರುವ ಭಾಷೆ ಸಮಕಾಲೀನ ಕನ್ನಡದ ಓದುಗ ಆಡುನುಡಿಯಲ್ಲಿ ಬಳಸುವಂಥದ್ದು. ಯಾವುದೇ ಗ್ರಾಂಥಿಕ ನುಡಿಗಟ್ಟನ್ನಾಗಲೀ ಅಥವಾ ಪಾಂಡಿತ್ಯಪೂರ್ಣತೆಗಾಗಲೀ ಅವರು ತಲೆಕೆಡಿಸಿಕೊಂಡಿಲ್ಲ. ನಡುವೆ ಬೇಕಾಗಿಯೇ ಕೆಲವು ಇಂಗ್ಲಿಷ್ ಪದಗಳನ್ನೂ ಉಪಯೋಗಿಸುತ್ತಾರೆ॒

ಸರಳತೆ ಅವಶ್ಯವಾಗಿದ್ದಾಗ ಈ ರೀತಿಯ ಅನುವಾದದ ಅಗತ್ಯ ಎಷ್ಟಿದೆ ಅಂದು ನನಗೆ ಅರ್ಥವಾದದ್ದು ಒ ಎಲ್ ನಾಗಭೂಷಣಸ್ವಾಮಿಯವರ ಟಾಲ್‌ಸ್ಟಾಯ್ ಕಥೆಗಳು, ವಾರ್ ಅಂಡ್ ಪೀಸ್‌ನ ಕೆಲವು ಅಧ್ಯಾಯಗಳು ಮತ್ತು ರಿಲ್ಕೆಯ ಪತ್ರಗಳ ಅನುವಾದಗಳನ್ನು ಓದಿದಾಗ. ಟಾಲ್‌ಸ್ಟಾಯ್ ಕತೆಗಳಲ್ಲಿ ಹಾರಿಬಲ್, ಈಡಿಯಟ್ಟು, ಇಂಥ ಪದಗಳನ್ನು ಬಳಸಿದಾಗ ಒಂದು ರೀತಿ ಪುಳಕವಾಗಿ ಟಾಲ್‌ಸ್ಟಾಯ್‌ನ ಇನ್ನೊಂದು ಮುಖದ ಪರಿಚಯವಾದಂತೆ ಆಗಿ, ಟಾಲ್‌ಸ್ಟಾಯ್ ಅನ್ನು ಹೀಗೂ ಓದಿಕೊಳ್ಳಬಹುದು ಎಂದನಿಸಿತ್ತು. ಈ ಮಹಾಕಾದಂಬರಿಗಳು ತಮ್ಮನ್ನು ತಮ್ಮ ಲೋಕಕ್ಕೆ ಬೇರೆಯೇ ಬಾಗಿಲಿನ ಮೂಲಕ ಪ್ರವೇಶ ದೊರಕಿಸಿಕೊಳ್ಳುತ್ತವೆ. ಇದು ಅನುವಾದಕನ ಓದು, ಎರಡೂ ಭಾಶೆಗಳ ಮೇಲೆ ಇರುವ ಪರಿಣಿತಿ ಮತ್ತು ಈ ರೀತಿಯ ಅನುವಾದ ಮುಟ್ಟಬೇಕಾಗಿರುವ ‘ಟಾರ್ಗೆಟ್’ ಓದುಗರು- ಎಲ್ಲದರ ಬಗೆಗಿನ ಕಾಳಜಿಯನ್ನೂ ತೋರುತ್ತದೆ. ಈ ‘ಅನುವು ಆಗುವ’ ಕ್ರಿಯೆಯಲ್ಲಿ ನಮ್ಮ ಕಾಲದ ಕಾಳಜಿಗಳು ನಮಗೆ ಗೊತ್ತಿಲ್ಲದೇ ಕೆಲಸ ಮಾಡಿರುತ್ತವೆ.

ನನಗೆ ತಿಳಿದ ಮಟ್ಟಿಗೆ ಕನ್ನಡ ಕಾದಂಬರಿ ಲೋಕಕ್ಕೆ ಇದು ಮೊಟ್ಟ ಮೊದಲ ಜಪಾನೀ ಭಾಷೆಯ ಕಾದಂಬರಿಯ ಅನುವಾದ. ತಪ್ಪದೇ ಓದಲೇಬೇಕಾದ ಕೃತಿ.
(ಮುನ್ನುಡಿಯಿಂದ)