Friday, November 27, 2009

ಬಿದ್ದು ಹೋಗುವ ಮಾತು.

ನನ್ನ ವೃತ್ತಿಯಲ್ಲಿ ಕೆಲವುಬಾರಿ ಇದಕ್ಕೆ ‘ಕರ್ಬ್ ಸೈಡಿಂಗ್’ಎನ್ನುತ್ತೇವೆ. ಒಂದು ಸಣ್ಣ ಉದಾಹರಣೆ ಕೊಡುತ್ತೇನೆ-ಒಬ್ಬಾತ ಬಿದ್ದು ಹಿಮ್ಮಡಿ ನೋವುಮಾಡಿಕೊಂಡು ಬಂದಿದ್ದಾನೆ, ಆತನಿಗೆ ಎಕ್ಸ್‌ರೇ ಮಾಡಿರುತ್ತೇನೆ ಎಂದುಕೊಳ್ಳಿ. ಅಮೆರಿಕಾದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳಲ್ಲಿ ಕೆಲಸ ಮಾಡುವ ಡಾಕ್ಟರುಗಳಿಗೆ ಒಂದು ವಿಚಿತ್ರವಾದ ಸಮಸ್ಯೆಯಿದೆ. ಅದೆಂದರೆ, ಎಲ್ಲ ಬಲ್ಲವರಾಗಿರಬೇಕು, ಜೀವ ಉಳಿಸುವಷ್ಟು, ನೋವು ಶಮನ ಮಾಡುವಷ್ಟು, ಯಾವುದೇ ಶಾಶ್ವತ ಹಾನಿಯಾಗದೇ ಇರುವ ಹಾಗೆ ಕಾಯುವಷ್ಟು. ಅಂದರೆ, ಒಬ್ಬ ರೋಗಿಯ ಎಕ್ಸ್ ರೇ ನೋಡಿ ‘ಅವನಿಗೆ ತುರ್ತಾಗಿ- ಅಂದರೆ ಅವತ್ತಿನ ತುರ್ತು ಭೇಟಿಯ ಸಮಯದಲ್ಲಿ ನಾನು ಸರಿಪಡಿಸಬಹುದಾದಂತಹ ಯಾವ ತೊಂದರೆಯನ್ನೂ ನಾನು ಎಕ್ಸ್‌ರೇಯಲ್ಲಿ ಕಂಡಿಲ್ಲ’ ಎಂದು ಹೇಳುವ ಮಟ್ಟಿಗೆ ನಾನು ಎಕ್ಸ್ ರೇ ನೋಡಿ ಹೇಳುವ ಮಟ್ಟಿನ ಪರಿಣಿತಿಯನ್ನು ಹೊಂದಿರಬೇಕು. ಪ್ರಸ್ತುತ ಸಂದರ್ಭದಲ್ಲಿ ನಾನು ಈ ರೋಗಿಗೆ ಯಾವ ಮೂಳೆಯೂ ಮುರಿದಿಲ್ಲ ಎಂದು ಹೇಳುವ ಮಟ್ಟಿನಲ್ಲಿಯಾದರೂ ನಾನು ಎಕ್ಸ್ ರೇಯನ್ನು ನೋಡಿ ಹೇಳುವ ಪರಿಣಿತಿಯನ್ನು ಹೊಂದಿರಬೇಕು. ಅದು ಚಿಕಿತ್ಸಾ ಕ್ರಮ. ಅಥವಾ ಸ್ಟ್ಯಾಂಡರ್ಡ್ ಆಫ್ ಕೇರ್.

ಇದರಲ್ಲೇನು ಹೆಚ್ಚುಗಾರಿಕೆ ಒಬ್ಬ ಡಾಕ್ಟರಿಗೆ ಅಷ್ಟೂ ಗೊತ್ತಾಗದಿದ್ದರೆ ಹೇಗೆ ಎನ್ನಬಹುದು. ಆದರೆ, ವಿಷಯ ಯಾವಾಗಲೂ ಅಷ್ಟು ಸುಲಭವಾಗಿರುವುದಿಲ್ಲ. ಕೆಲವೊಮ್ಮೆ ಎಕ್ಸ್‌ರೇಯಲ್ಲಿ ಸಣ್ಣ ಗೀಟುಗಳು ಕಾಣುತ್ತವೆ. ಅದು ಮುರಿದಿರುವ ಮೂಳೆಯೋ ಅಥವಾ ಅಲ್ಲವೋ ಎಂದು ನಾನು ಗ್ಯಾರಂಟಿಯಾಗಿ ಹೇಳುವುದು ಸಾಧ್ಯವಿಲ್ಲ, ಇಂತ ಸಂದರ್ಭದಲ್ಲಿ ನಾನೇನು ಮಾಡಬೇಕು? ಆ ಎಕ್ಸ್‌ರೇಯನ್ನು ಡಿಜಿಟೈಜ್ ಮಾಡಿ ರೇಡಿಯಾಲಜಿಸ್ಟಿನ ಮನೆಯ ಕಂಪ್ಯೂಟರಿಗೆ ಕಳಿಸಿ ಅವನ ಅಭಿಪ್ರಾಯವನ್ನು ಪಡೆಯುವುದು. (ಬಹುತೇಕ ಆಸ್ಪತ್ರೆಗಳಲ್ಲಿ ೨೪/೭ ರೇಡಿಯಾಲಜಿ ಸೇವೆ ಇರುವುದಿಲ್ಲ. ಬೇಕಿದ್ದರೆ ರೇಡಿಯಾಲಜಿಸ್ಟಿನ ಮನೆಗೇ ನನ್ನ ರೋಗಿಯ ಎಕ್ಸ್ ರೇಯನ್ನು ಡಿಜಿಟೈಜ್ ಮಾಡಿ ಕಳಿಸಬಹುದು) ರೇಡಿಯಾಲಜಿಸ್ಟ್ ಹಿಮ್ಮಡಿಯ ಎಕ್ಸ್‌ರೇ ಯ ರಿಪೋರ್ಟು ಕೊಡುವುದಕ್ಕೆ ಮಧ್ಯರಾತ್ರಿ ಎಬ್ಬಿಸಿದ್ದಕ್ಕೆ ಗೊಣಗುತ್ತಾನೆ. ‘ಒಂದು ಹಡಬೆ ಹಿಮ್ಮಡೀ ಎಕ್ಸ್ ರೇಯನ್ನು ಸರಿಯಾಗಿ ನೋಡಲು ಬರದೇ ಇದ್ದ ಮೇಲೆ ಯಾಕೆ ಡಾಕ್ಟರಾಗಬೇಕು’ ಎಂದು ಬಯ್ದುಕೊಂಡೇ ಆತ ಮಧ್ಯರಾತ್ರಿ ರಿಪೋರ್ಟನ್ನು ಫ್ಯಾಕ್ಸ್ ಕಳಿಸುತ್ತಾನೆ. ಮಧ್ಯರಾತ್ರಿ ಎದ್ದು ಆತ ನೋಡಿದ್ದಕ್ಕೆ ಆತನ ಫೀಸು ದುಪ್ಪಟ್ಟು. ಮಾರನೆಯ ದಿನ ಆಸ್ಪತ್ರೆಯ ಅಕೌಂಟೆಂಟು ಸುಮ್ಮನೆ ನನಗೆ ಒಂದು ಈ ರೋಗಿಯ ಎಕ್ಸ್‌ರೇಯನ್ನು ನಾನು ನೋಡಿ ರಿಪೋರ್ಟಿಸಲಾಗದೇ ರೇಡಿಯಾಲಜಿಸ್ಟ್ ನೋಡಿ ರಿಪೋರ್ಟನ್ನು ಕೊಟ್ಟಿದ್ದರಿಂದ ಆಸ್ಪತ್ರೆಗೆ ಎಷ್ಟು ಜಾಸ್ತಿ ಖರ್ಚಾಯಿತು ಎಂದು ಒಂದು ರಿಮೈಂಡರನ್ನು ನನಗೆ ‘ಎಫ್ವೈಐ’ ಎಂದು ಇಮೈಲ್ ಮಾಡುತ್ತಾನೆ.

ಅಕಸ್ಮಾತ್ ಆ ಎಕ್ಸ ರೇಯಲ್ಲಿ ಕಂಡ ಆ ಗೀಟು ಮುರಿದ ಮೂಳೆಯಾಗಿದ್ದು ಅದನ್ನು ನಾರ್ಮಲ್ ಎಂದು ತಪ್ಪಾಗಿ ನಾನು ಹೇಳಿ (ರೇಡಿಯಾಲಜಿಸ್ಟ್‌ನ ಅಭಿಪ್ರಾಯ ಪಡೆಯದೇ)ರೋಗಿಗೆ ಏನೂ ಚಿಕಿತ್ಸೆ ಮಾಡದೇ ಮನೆಗೆ ಕಳಿಸಿದೆ ಎಂದುಕೊಳ್ಳಿ. ಮಾರನೆಯ ದಿನ ರೇಡಿಯಾಲಜಿಸ್ಟ್ ಬಂದು ನನಗೆ ‘ನೀನು ನಿನ್ನೆ ನೋಡಿ ಫ್ರಾಕ್ಚರ್ ಇಲ್ಲ ಎಂದು ಹೇಳಿದ ರೋಗಿಗೆ ಕಾಲಿನ ಎಕ್ಸ್‌ರೇಯಲ್ಲಿ ಫ್ರಾಕ್ಚರ್ ಇದೆ’ ಎಂದು ಅಧಿಕೃತವಾಗಿ ಹೇಳುತ್ತಾನೆ, ನಾನು ಆ ರೋಗಿಗೆ ಫೋನು ಮಾಡಿ ‘ನೋಡಪ್ಪ, ನಿನ್ನ ಕಾಲಿನ ಎಕ್ಸ ರೇಯನ್ನು ನಾನು ನಿನ್ನೆ ನೋಡಿ ಫ್ರಾಕ್ಚರ್ ಇಲ್ಲ ಎಂದು ಹೇಳಿದನಲ್ಲ. ಸಾರಿ, ತಪ್ಪಾಗಿದೆ. ಬಹಳ ದೊಡ್ಡ ತಪ್ಪೇನಲ್ಲ. ಆದರೂ ಅದನ್ನು ಹಾಗೇ ಬಿಡುವುದು ಒಳ್ಳೇದಲ್ಲ. ಮತ್ತೆ ಎಮರ್ಜೆನ್ಸಿ ರೂಮಿಗೆ ಬಾ. ಕಾಲಿಗೆ ಒಂದು ಕ್ಯಾಸ್ಟ್ ಹಾಕುತ್ತೇನೆ. ನಂತರ ಎಲುಬು, ಕೀಲು ತಜ್ಞರನ್ನು ಹೋಗಿ ನೋಡು’ ಎಂದು ಹೇಳುತ್ತೇನೆ. ಬಹುತೇಕ ರೋಗಿಗಳು ಬಂದು ಕ್ಯಾಸ್ಟ್ ಹಾಕಿಸಿಕೊಂಡು ಹೋಗುತ್ತಾರೆ. ಆದರೆ, ಒಂದು ಸಣ್ಣ ಕಿರಿಕಿರಿ ಅವರ ಮುಖದ ಮೇಲೆ ಕಂಡೇ ಕಾಣುತ್ತದೆ. ‘ನಿನ್ನೆ ರಾತ್ರಿಯೇ ಬಂದಾಗ ಇವೆಲ್ಲ ಮುಗಿದುಹೋಗಿದ್ದರೆ ಮತ್ತೆ ಇನ್ನೊಂದು ಟ್ರಿಪ್ ಆಸ್ಪತ್ರೆಗೆ ಬರುವುದು ತಪ್ಪುತ್ತಿತ್ತಲ್ಲವೇ?’ ಎಂದು ಮೂಗು ಮುರಿಯುವವರು ಕೆಲವಾದರೆ, ಇನ್ನೂ ಕೆಲವರು ‘ ಡಾಕ್, ಇದು ನಿಮ್ಮ ತಪ್ಪು ತಾನೇ. ನನಗೆ ಮತ್ತೆ ಎರಡನೇ ಬಾರಿ ಎಮರ್ಜೆನ್ಸಿ ರೂಮಿನ ವಿಸಿಟ್‌ಗೆ ಚಾರ್ಜ್ ಮಾಡುವುದಿಲ್ಲ ತಾನೇ.’ ಎಂದು ಉಳಿದವರು ಕೇಳಬಹುದು. ಅಷ್ಟೇ ಅಲ್ಲ- ಇನ್ನೂ ಹೆಚ್ಚಿಗೆಯೆಂದರೆ ಆತ ನನ್ನ ಮೇಲೆ ಆಸ್ಪತ್ರೆಗೆ ಫಿರ್ಯಾದು ಮಾಡಬಹುದು. ಅಥವಾ ನನ್ನ ಮೇಲೆ ಕೋರ್ಟಿನಲ್ಲಿ ಕೇಸು ಹಾಕಬಹುದು.

ಅದೇ ರಾತ್ರಿ ನಾನು ರೇಡಿಯಾಲಜಿಸ್ಟಿನ ಮನೆಗೆ ಈ ಎಕ್ಸ್‌ರೇ ಯ ಕಾಪಿಯನ್ನು ಕಳಿಸಬೇಕೋ ಬೇಡವೋ ಎಂದು ಯೋಚನೆ ಮಾಡುತ್ತಾ ಇರಬೇಕಾದರೆ ಆಸ್ಪತ್ರೆಯ ಕಾರಿಡಾರಿನಲ್ಲಿ ಯಾವುದೋ ಆರ್ಥೊಪೆಡಿಕ್ ಸರ್ಜನ್ ಸುಮ್ಮನೆ ಹೋಗುತ್ತಿರುವುದು ನನ್ನ ಕಣ್ಣಿಗೆ ಬಿದ್ದಲ್ಲಿ ನಾನೇನು ಮಾಡುತ್ತೇನೆ. ‘ಹೇ, ಈ ಎಕ್ಸ್‌ರೇನ ಒಂಚೂರು ನೋಡುತ್ತೀಯ. ಇಲ್ಲಿ ಕಾಣುತ್ತಿದೆಯಲ್ಲ, ಈ ಗೀಟು ಅದು ಸೀಳಿದ ಮೂಳೆಯ ಗುರುತು ಹೌದಾ?’ ಎಂದು ಕೇಳುತ್ತೇನೆ. ಆತ ಈ ಎಕ್ಸ್ ರೇಯನ್ನು ನೋಡಬೇಕೆನ್ನುವ ಯಾವ ಒತ್ತಾಯ ಅಥವಾ ಜವಾಬ್ದಾರಿ ಅವನಿಗೆ ಇಲ್ಲ. ಆತ ಸುಮ್ಮನೆ ನನ್ನ ಮೇಲಿನ ಸ್ನೇಹದಿಂದ ಈ ಎಕ್ಸ್‌ರೇಯನ್ನು ಒಮ್ಮೆ ನೋಡುತ್ತಾನೆ, ನೋಡಿ ‘ಇಲ್ಲ ಗುರು, ಅದು ಸೀಳಲ್ಲ. ಸುಮ್ಮನೆ ಮನೆಗೆ ಕಳಿಸು. ಇನ್ನೂ ಜಾಸ್ತಿ ನೋವಾದರೆ ಆತನನ್ನು ಬಂದು ನನ್ನ ಕ್ಲಿನಿಕ್ಕಿನಲ್ಲಿ ನೋಡಲಿಕ್ಕೆ ಹೇಳು’ ಎಮ್ದು ಹೇಳುತ್ತಾನೆ. ನನ್ನ ಆತ್ಮವಿಶ್ವಾಸ ಹೆಚ್ಚುತ್ತದೆ. ನಾನು ಅವನನ್ನು ‘ಹೀಗೆ ಈ ಎಕ್ಸ್‌ರೇಯನ್ನು ಆರ್ಥೊಪೆಡಿಕ್ ಸರ್ಜನ್ನು ನೋಡಿದ್ದಾನೆ. ಆತನೂ ಇದು ಫ್ರಾಕ್ಚರ್ ಅಲ್ಲ ಎಂತ ಹೇಳಿದ್ದಾನೆ ಎಂದು ಹೇಳಿ ಅವನಿಗೆ ಧೈರ್ಯ ಹೇಳಿ ಮನೆಗೆ ಕಳಿಸುತ್ತೇನೆ. ಈ ಆರ್ತೊಪೆಡಿಕ್ ಸರ್ಜನ್ನಿನ ಮೇಲೆ ನನಗೆ ನಂಬಿಕೆಯಿಲ್ಲದಿದ್ದರೆ ನನ್ನ ಪರಿಣಿತಿಯ ಮೇಲಿರುವ ನನ್ನ ಆತ್ಮವಿಶ್ವಾಸವೇ ನನಗೆ ಶ್ರೀರಕ್ಷೆ.

ಇಲ್ಲಿ ನೋಡಿ. ನಾನು ಮತ್ತು ಆರ್ಥೊಪೆಡಿಕ್ ಸರ್ಜನ್ ಇಬ್ಬರೂ ರೇಡಿಯಾಲಜಿಸ್ಟಗಳಲ್ಲ. ಅಂದರೆ, ಈ ಎಕ್ಸ್ ರೇಗಳನ್ನು ನೋಡುವ ಪರಿಣಿತಿ ಇಬ್ಬರಲ್ಲೂ ಒಂದೇ ಮಟ್ಟದಲ್ಲಿ ಇದೆ. ನಿಜವಾಗಿ ಹೇಳಬೇಕೆಂದರೆ, ಮೂಳೆ ಮತ್ತು ಕೀಲಿನ ಡಾಕ್ಟರು ಮುರಿದ ಮೂಳೆಗಳ ಎಕ್ಸ್‌ರೇಯನ್ನು ಮಾತ್ರ ನೋಡುತ್ತಾನೆ. ನಾನು ಮುರಿದದ್ದು, ಮುರಿಯದೇ ಇರುವುದು ಎಲ್ಲ ತರದ ಎಕ್ಸ್ ರೇಯನ್ನೂ ನೋಡುವುದರಿಂದ ಈ ಸಣ್ಣ ಸಣ್ಣ ಫ್ರಾಕ್ಚರುಗಳನ್ನು ಗುರುತಿಸುವ ಪರಿಣತಿ ನನ್ನಲ್ಲಿ ಹೆಚ್ಚಾಗಿಯೇ ಇರಬೇಕು. ಆದರೂ ಆತ ಮೂಳೆ ಮತ್ತು ಕೀಲಿನ ಸ್ಪೆಷಲಿಸ್ಟಿನ ಪರಿಣಿತಿ ಬರೇ ಮೂಳೆ ಮತ್ತು ಕೀಲಿಗೆ ಮಾತ್ರ ಸ್ಟ್ರೀಂಲೈನ್ ಆಗಿ ಆತ ನನಗಿಂತ ಹೆಚ್ಚಿನ ಪರಿಣಿತನಾಗುತ್ತಾನೆ.

ನಾನು ಮಾಡಿದ್ದು ಕರ್ಬ್ ಸೈಡಿಂಗ್. ಮನೆಯ ಕಾಂಪೌಂಡಿನೊಳಗೇ ನಿಂತು ಪಕ್ಕದ ಮನೆಯ ಕಾಂಪೌಂಡಿನೊಳಗೆ ನಿಂತ ನೆರೆಮನೆಯಾತನನ್ನು ಮಾತಾಡಿಸಿದ ಹಾಗೆ ಲೋಕಾಭಿರಾಮ ಅಷ್ಟೇ. ನಾನೂ ‘ಇರಲಿ’ಒಂದು ಮಾತು ಕೇಳಿದೆ. ಆತನೂ ಇಲ್ಲ ಎನ್ನದೇ ಹೇಳಿದ. ಆದರೆ, ಇಲ್ಲಿ ಫ್ರಾಕ್ಚರೇನಾದರೂ ಇದ್ದಲ್ಲಿ ತಪ್ಪು ನನ್ನದಾಗುತ್ತದೆ. ಆತನ ಹೆಸರು ಚಾರ್ಟಿನಲ್ಲಿ ಎಲ್ಲಿಯೂ ಇರುವುದಿಲ್ಲ. ಆದ್ದರಿಂದ ಅಂತಿಮ ನಿರ್ಣಯ ನನ್ನದೇ ಆಗುತ್ತದೆ.

* * *

ಈ ಕರ್ಬ್‌ಸೈಡಿಂಗ್‌ನ ಇನ್ನೊಂದು ಮುಖ ನನ್ನನ್ನು ನನ್ನ ಸಂಬಂಧಿಕರುಗಳು, ಮಿತ್ರರು ನನ್ನನ್ನು ಅವರ ಕಾಯಿಲೆಗಳ ಬಗ್ಗೆ ವೃತ್ತಿಪರ ಅಭಿಪ್ರಾಯವನ್ನು ಕೇಳುವುದು. ನಲವತ್ತುವರ್ಷದ ನನ್ನ ದೊಡ್ದಪ್ಪನ ಮಗನಿಗೋ, ನನ್ನ ಸ್ನೇಹಿತನಿಗೋ, ರಕ್ತದೊತ್ತಡ ಜಾಸ್ತಿ ಇದೆ ಎಂದು ಆತನ ಡಾಕ್ಟರು ಹೇಳಿ ಮಾತ್ರೆಯನ್ನೂ ಕೊಟ್ಟಿರುತ್ತಾರೆ. ‘ಇದೆಲ್ಲ ಎಂಥ ಬೀಪೀರಿ. ಅದೂ ಈ ವಯಸ್ಸಲ್ಲಿ. ನಿಮಗೆ ಮಾತ್ರೇನೂ ಬೇಡ, ಏನೂ ಬೇಡ. ಸುಮ್ಮನೇ ದಿನಾ ವಾಕಿಂಗ್ ಹೋಗ್ರೀ’ ಎಂದು ಇನ್ನೊಬ್ಬ ಡಾಕ್ಟರು ಅವನಿಗೆ ಹೇಳಿರುತ್ತಾರೆ. ಮಾತ್ರೆಬೇಡ ವಾಕಿಂಗ್ ಹೋಗಿ ಬೀಪಿಯನ್ನು ಕಮ್ಮಿ ಮಾಡಿಕೋತೀನಿ ಎಂದು ನಿರ್ಣಯಿಸಿದ ಈ ನನ್ನ ಬಂಧು ‘ಇರಲಿ, ನಾನು ಏನು ಹೇಳುತ್ತೇನೆ ನೋಡೋಣ’ ಎಂದು ತಿಳಕೊಳ್ಳಲು ನನಗೊಂದು ಇಮೈಲ್ ಅಥವಾ ಫೋನು ಮಾಡುತ್ತಾನೆ.. ಕೆಲವೊಮ್ಮೆ ಇಮೈಲಿನಲ್ಲಿ ಅವರ ಮೆಡಿಕಲ್ ರಿಪೋರ್ಟು ಕೂಡ ಬರುತ್ತದೆ. ನಾನು ಇದುವರೆವಿಗೂ ಇಂಥ ಇಮೈಲ್ ರಿಪೋರ್ಟುಗಳಿಗೆ ನನ್ನ ಅಭಿಪ್ರಾಯ ಕೊಡಲಾರೆ ಎಂದು ಹೇಳಿಲ್ಲ. ನನಗೆ ಗೊತ್ತಿದ್ದನ್ನು ನೇರವಾಗಿ ಹೇಳಿದ್ದೇನೆ. ಗೊತ್ತಿಲ್ಲವಾದದ್ದನ್ನು ನನ್ನ ವೃತ್ತಿಯ ಮಿತ್ರರನ್ನು ಕೇಳಿ ಹೇಳುತ್ತೇನೆ. ಅಥವಾ ಗೊತ್ತಿಲ್ಲ ಎಂದೇ ನೇರವಾಗಿ ಹೇಳಿರುತ್ತೇನೆ. ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ಫೋನು ಬರುತ್ತದೆ. ಇನು ಕೆಲವೊಮ್ಮೆ ಪಾರ್ಟಿಯಲ್ಲಿರುವಾಗ, ಮಕ್ಕಳ ಜತೆ ಸಿನೆಮಾ ನೋಡುತ್ತಿದ್ದಾಗ, ಹೀಗೆ ನನ್ನ ಅನೇಕ ಸ್ವಂತ ಕೆಲಸಗಳನ್ನು ಇಟ್ಟು ನಾನು ಈ ಫೋನುಗಳಿಗೆ ಉತ್ತರ ಕೊಟ್ಟಿದ್ದೇನೆ. ಇದು ನನ್ನ ಕೆಲಸದ ಒಂದು ಭಾಗ ಎಂದು ಬಿಟ್ಟು ಬೇರೇನೂ ತಿಳಿದಿಲ್ಲ. ಅಥವಾ ನಾನು ಹೀಗೆ ಮಾಡಿ ಯಾವುದೋ ಒಂದು ಜೀವವನ್ನು ಉಳಿಸುತ್ತಿದ್ದೇನೆ ಎಂಬ ಹುಂಬ ನಂಬಿಕೆಯೂ ನನಗಿಲ್ಲ.

ಆದರೆ, ಈ ನನ್ನ ಒಪೀನಿಯನ್ ಯಾವ ಮಟ್ಟದಲ್ಲಿ ಸ್ವೀಕೃತವಾಗುತ್ತದೆ ಎನ್ನುವುದು ಕೆಲವೊಮ್ಮೆ ಮುಜುಗರ ಕೊಡುವ ವಿಷಯ. ಬಹಳಷ್ಟು ಬಾರಿ ನನ್ನ ಈ ಪ್ರೊಫೆಷನಲ್ ಅಭಿಪ್ರಾಯ, ಇನ್ನೊಂದು ಒಪೀನಿಯನ್ ಮಾತ್ರ ಆಗುತ್ತದೆ. ಅದರ ಮೇಲೆ ತಮ್ಮ ನಿರ್ಣಯಗಳನ್ನು ಬದಲಿಸಿಕೊಳ್ಳುವವರು ಬಹಳ ಕಮ್ಮಿ ಮಂದಿ. ಮೇಲಿನ ಉದಾಹರಣೆಯಲ್ಲಿ ನನ್ನ ಈ ಮಿತ್ರನಿಗೆ ಮಾತ್ರಗಳ ಅವಶ್ಯಕತೆ ಜರೂರಾಗಿತ್ತು. ಆದರೆ, ಆತ ಮುಂಚೆಯೇ ಮಾತ್ರೆ ತೆಗೆದುಕೊಳ್ಳಬಾರದು ಎಂದು ನಿರ್ಣಯಿಸಿ ಅದನ್ನು ಪುಷ್ಟೀಕರಿಸಲು ನನ್ನ ಪ್ರೊಫೆಷನಲ್ ಅಭಿಪ್ರಾಯ ಕೇಳಿದ್ದ. ನಾನು ಮಾತ್ರೆ ತೆಗೆದುಕೊಳ್ಳಬೇಕು ಎಂದು ಹೇಳಿದಾಗ ಮಾರನೆಯ ದಿನದಿಂದ ನನ್ನ ಜತೆ ಮಾತಾಡುವುದನ್ನೇ ಬಿಟ್ಟುಬಿಟ್ಟ.

ಪ್ರಾಯಶಃ ಆ ಮಿತ್ರ ಇಂದಿಗೂ ಸರಿಯಾಗಿಯೇ ಇರಬಹುದು. ಅಥವಾ ವಾಕಿಂಗ್ ಮಾಡಿ ಬೀಪಿ ಕಮ್ಮಿ ಮಾಡಿಕೊಂಡಿಯೂ ಇರಬಹುದು. ಕೆಲವೊಮ್ಮೆ ವಿಷಯ ಇನ್ನೂ ಗಂಭೀರವಾಗಿರುತ್ತದೆ. ಒಮ್ಮೆ ಯಾರಿಗೋ ಆಂಜಿಯೋಗ್ರಾಮ್ ಮಾಡಿ ತಕ್ಶಣ ಬೈಪಾಸ್ ಮಾಡಬೇಕು ಎಂದು ಬೆಂಗಳೂರಿನ ಡಾಕ್ಟರು ಒಬ್ಬರು ಸರಿಯಾಗಿಯೇ ಹೇಳಿದ್ದರು. ಆ ಆಂಜಿಯೋಗ್ರಾಮಿನ ಸೀಡಿ ನನಗೆ ಕೊರಿಯರ‍್ನಲ್ಲಿ ಬಂತು. ನಾನು ಹೃದಯರೋಗ ತಜ್ಞನಲ್ಲವಾದ್ದರಿಂದ ನಾನು ನನ್ನ ಕಾರ್ಡಿಯಾಲಜಿಸ್ಟ್ ಮಿತ್ರನಿಗೆ ಈ ಸೀಡಿಯನ್ನು ಕೊರಿಯರ್ ಮಾಡಿ ಅಭಿಪ್ರಾಯ ಪಡಕೊಂಡು ‘ಹೌದು ಆ ಬೆಂಗಳೂರು ಡಾಕ್ಟರು ಸರಿಯಾಗಿಯೇ ಹೇಳಿದ್ದಾರೆ. ಬೈಪಾಸ್ ಆಗಬೇಕು.’ ಎಂದು ಹೇಳಿದೆ. ನಂತರ ನನಗೆ ಅವರಿಂದ ಉತ್ತರವೇ ಇಲ್ಲ. ಇದನ್ನು ಹೀಗೆಯೇ ಬಿಟ್ಟಲ್ಲಿ ಇವರಿಗೆ ತೊಂದರೆಯಾಗಬಹುದು ಎಂದು ನನಗೆ ಮನಸಲ್ಲಿ ಕೊರೆಯಹತ್ತಿತ್ತು. ಹೇಗೋ ಮಾಡಿ ಅವರಿಗೆ ಫೋನು ಮಾಡಿ ‘ನೀವು ಖಂಡಿತಾ ಬೈಪಾಸ್ ಮಾಡಿಸಿಕೊಳ್ಳಲೇ ಬೇಕು’ ಎಂದು ಅವರ ಮನವೊಲಿಸಬೇಕಾಗಿ ಬಂತು.

ಹೀಗೆ ಹಲವು ಇಮೈಲ್‌ಗಳು, ಫೋನುಗಳು ಬರುತ್ತಲೇ ಇರುತ್ತವೆ. ನಾನೂ ಉತ್ತರಿಸುತ್ತಲೇ ಇರುತ್ತೇನೆ. ನನಗೆ ನನ್ನ ವೃತ್ತಿಯ ಈ ಘಟ್ಟದಲ್ಲಿರುವ ನನ್ನ ಅಭಿಪ್ರಾಯವನ್ನು ಅವರು ಮನ್ನಿಸುತ್ತಾ ಇಲ್ಲವಲ್ಲ ಎಂದು ಬೇಸರ ಆಗುವುದೂ ನಿಂತುಹೋಗಿದೆ.

* * *

ನಾನು ಆ ಆರ್ಥೊಪೆಡಿಕ್ ಸರ್ಜನ್‌ನನ್ನು ಕರ್ಬ್‌ಸೈಡ್ ಮಾಡಿದ್ದಕ್ಕೂ ಇಲ್ಲಿ ನನ್ನ ಬಂಧುಮಿತ್ರರು ನನ್ನನ್ನು ಕರ್ಬಸೈಡ್ ಮಾಡಿರುವುದಕ್ಕೂ ಏನು ವ್ಯತ್ಯಾಸ. ನನ್ನ ಉದಾಹರಣೆಯಲ್ಲಿ ನಾನು ನನ್ನ ಮಿತ್ರನಾದ ಆರ್ಥೊಪೆಡಿಕ್ ಸರ್ಜನನ್ನು, ರಾತ್ರ್ರಿ ರೇಡಿಯಾಲಜಿಸ್ಟನ್ನು ಎಬ್ಬಿಸುವ ಮುಜುಗರವನ್ನು ತಪ್ಪಿಸಿಕೊಳ್ಳಲು ಅಭಿಪ್ರಾಯ ಕೇಳಿದರೆ, ಎರಡನೆಯ ಉದಾಹರಣೆಯಲ್ಲಿ ಒಬ್ಬ ರೋಗಿ ತನ್ನ ಡಾಕ್ಟರು ತನಗೆ ಮಾಡುತ್ತಿರುವ ಚಿಕಿತ್ಸೆ ಸರಿಯಿದೆಯೇ ಎಂದು ನನ್ನನ್ನು ಕೇಳಿದ್ದಾನೆ. ಇಬ್ಬರೂ ರೋಗಿಯ ಆರೈಕೆಯಲ್ಲಿ ನೇರವಾಗಿ ಪಾತ್ರವಹಿಸಿಲ್ಲ. ನಾನು ಆ ಮೂಳೆ ಮುರಿದಿರಬಹುದಾದ ರೋಗಿಯನ್ನು ಚಿಕಿತ್ಸಿತುತ್ತಿದ್ದರೆ, ನಾನು ಫೋನಿನಲ್ಲಿ ಮಾತಾಡುವ ನನ್ನ ಬಂಧುವಿನ ಡಾಕ್ಟರು ನನ್ನಿಂದ ಬಲು ದೂರವಿರುವ ಈ ನನ್ನ ಬಂಧುವಿನ ವೈದ್ಯಕೀಯ ದೇಖರೇಖಿಯನ್ನು ಮಾಡುತ್ತಿದ್ದಾನೆ. ಇಬ್ಬರೂ ನಮಗೆ ಗೊತ್ತಿದ್ದ ಪ್ರೊಫೆಶನಲ್ ಅಭಿಪ್ರಾಯವನ್ನು ಕೊಡುತ್ತಿದ್ದೇವೆ.

ನಾನು ಡಾಕ್ಟರಾದುದರಿಂದ, ನನಗೆ ಆ ಎಲುಬು ಕೀಲು ಡಾಕ್ಟರು ಕೊಟ್ಟ ಈ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದೂ ಬಿಡುವುದೂ ನನ್ನ ಪರಿಣಿತ ಆಯ್ಕೆ. ರೋಗಿಗಳ ಹಕ್ಕಿನ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ, ನನ್ನನ್ನು ಈ ಕರ್ಬ್‌ಸೈಡ್ ಮಾಡುವ ಅನೇಕ ಬಂದುಮಿತ್ರರು ನನ್ನ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವ ಮಟ್ಟಿನ ಪರಿಣಿತಿ ಹೊಂದಿದ್ದಾರೆ ಎನ್ನುವ ವಿಷಯದ ಬಗ್ಗೆ ನನಗೆ ಅನುಮಾನವಿದೆ. ಅವರ ನಿರ್ಣಯಕ್ಕೆ ಅವರಿಗೆ ಬಂಧುವಾದ ನಾನು,ವೈದ್ಯನಾಗಿಯೂ ಈ ಅವರ ನಿರ್ಣಯಕ್ಕೆ ನನ್ನ ಸಮ್ಮತಿಯಿದೆ ಎಂದು ಹೇಳಿದರೆ ಅವರಿಗೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ‘ಇಲ್ಲ ನಿಮ್ಮ ಡಾಕ್ಟರು ಮಾಡುತ್ತಿರುವುದು ತಪು, ಬೇರೆ ಡಾಕ್ಟರ ಹತ್ತಿರ ಹೋಗು’ ಎಂದು ನಾ ಹೇಳಿದರೆ ಬಹಳಷ್ಟು ಬಾರಿ ನನಗೆ ವಾಪಸ್ಸು ಫೋನ್ ಬರುವುದಿಲ್ಲ.

ಕಾಯಿಲೆಯೆನ್ನುವುದು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ದಿನಾ ರೋಗಿಗಳ ಜತೆಯಲ್ಲಿಯೇ ಇರುವ ನಾನು ಇದನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ. ಈ ಆತ್ಮ ವಿಶ್ವಾಸ ಕಮ್ಮಿಯಾದ ಸಂದರ್ಭದಲ್ಲಿ ಅದನ್ನು ಉತ್ತೇಜಿಸುವುದಕ್ಕಾಗಿ, ರೋಗಿ ಹೀಗೆ ಎಲ್ಲರನ್ನೂ ಅಭಿಪ್ರಾಯ ಕೇಳುತ್ತಲೇ ಇರುತ್ತಾನೆ. ಕ್ಯಾನ್ಸರ್ ಇದೆ. ಇನ್ನಾರು ತಿಂಗಳು ಬದುಕಬಹುದು ಎಂದು ತಿಳಕೊಂಡಾತನಿಗೆ ‘ಇನ್ನೊಬ್ಬ ಡಾಕ್ಟರ ಹತ್ತಿರ ಕೇಳಿಕೊಂಡು ಬಾ ಎಂದೋ ಅಥವಾ ಇನ್ನೊಂದಿಷ್ಟು ಪರೀಕ್ಷೆಗಳಾಗಬೇಕು’ ಎಂದು ಹೇಳಿದರೂ ಆತನಿಗೆ ಏನೋ ನಂಬಿಕೆ ಬರುತ್ತದೆ. ಏನಾದರೂ ಒಳ್ಳೆಯ ಸುದ್ದಿಯಿರಬಹುದಾ ಎಂದು ಯೋಚಿಸತೊಡಗುತ್ತಾನೆ. ಕುಂಡಲಿ ತೆಗೆಸುತ್ತಾನೆ, ಮನೆಯ ವಾಸ್ತುವನ್ನು ಬದಲಿಸುತ್ತಾನೆ. ಅನೇಕೆ ಜನರ ಅಭಿಪ್ರಾಯವನ್ನೂ ಕೇಳುತ್ತಾನೆ. ಹಾಗೆಯೇ ನನ್ನದೂ ಇಲ್ಲಿ ಒಂದು ಅಭಿಪ್ರಾಯ ಮಾತ್ರ.

ಯಾರಿಗೆ ಅಭಿಪ್ರಾಯ ಕೊಡಬೇಕು ಎನ್ನುವುದೂ ಕಷ್ಟವಾಗಿರುವುದರಿಂದ ನಾನು ಅದರ ಆ ಕಡೆಯ ರಿಯಾಕ್ಷನ್‌ಗಳನ್ನು ಯೋಚಿಸುವುದನ್ನು ಎಂದೋ ಬಿಟ್ಟಿಬಿಟ್ಟಿದ್ದೇನೆ. ನನಗೆ ತೀರ ಆಪ್ತರೂ ನನ್ನನ್ನು ಕೇಳಿ ‘ಇಲ್ಲಾ ಸಾರ್, ನಾಳೇನೇ ನೀವು ಹೇಳಿದ ಡಾಕ್ರ ಹತ್ತಿರ ಹೋಗಿ ಬಂದು ಬಿಡುತ್ತೇವೆ’ ಎಂದು ಹೇಳಿದ್ದೂ ಇದೆ. ನಾನೇ ಖುದ್ದಾಗಿ ನಿಂತು ಆ ಡಾಕ್ಟರಿಗೆ ನಮ್ಮ ಗುರುತಿನವರು ಬರುತ್ತಾರೆ ಎಂದೂ ಫೋನುಮಾಡಿ ಹೇಳಿರುತ್ತೇನೆ. ಆದರೂ ಹೋಗದೇ ಇದ್ದಾಗ, ನಾನು ಹೇಳಿದಾತ ಬರಲಿಲ್ಲವೆಂದು ಆ ಡಾಕ್ಟರಿಗೆ ಬೇಜಾರೂ ಇಲ್ಲ. ನನಗೂ ಇಲ್ಲ.

ಏಕೆಂದರೆ ಈ ಅಭಿಪ್ರಾಯಗಳೇ ಹಾಗೆ, ಪುಕ್ಕಟೆ ಸಿಕ್ಕವು, ಬಿದ್ದುಹೋಗುವ ಮಾತು.

2 comments:

  1. ಸರ್ ನಿಮ್ಮ ವೃತ್ತಿ ಜೀವನದ ಸ್ವಾರಸ್ಯ ಆದರೆ ಅಷ್ಟೇ ಕಟುವಾಸ್ತವ ಹೇಳಿದ್ದೀರಿ. ಸಲಹೆ ಕೊಡಬಹುದು ಪಾಲಿಸೋದು ಬಿಡೋದು
    ಅವರವರಿಗೆ ಬಿಟ್ಟಿದ್ದು ಒಂಥರಾ ನಿಷ್ಕಾಮ ಕರ್ಮ ಅನ್ನಬಹುದೇ

    ReplyDelete
  2. ತುಂಬಾ ಚೆನ್ನಾಗಿ ಬರಿತೀರಿ. ಅಭಿನಂದನೆಗಳು.

    ReplyDelete