Sunday, January 10, 2010

ಸ್ವಪ್ನ ಸಾರಸ್ವತ

ಒಬ್ಬ ಬರಹಗಾರ ಒಂದು ಚರಿತ್ರೆಯನ್ನು ಕಲ್ಪಿತ ಬರಹಕ್ಕೆ ಅದರಲಿಯೂ ಕಾದಂಬರಿಯಂತಹ ಪ್ರಕಾರಕ್ಕೆ ಹೇಗೆ ಉಪಯೋಗಿಸಿಕೊಳ್ಳಬಲ್ಲ? ಅದೂ ನಾನೂರು ವರ್ಷಗಳಿಗೂ ಮೀರಿದ ಒಂದು ಸಮುದಾಯದ ಚರಿತ್ರೆಯನ್ನು ಅಧ್ಯಯನ ಮಾಡಿ ಅದನ್ನು ಆಧರಿಸಿ ಕಾದಂಬರಿ ಬರೆದಾಗ ಅದರಿಂದ ನಾವು ಏನನ್ನು ನಿರೀಕ್ಷಿಸಬಹುದು? ಕಾದಂಬರಿಕಾರನ ಸವಾಲುಗಳೇನು? ಬರೇ ಕಾಲಘಟ್ಟದ ಪಲ್ಲಟವನ್ನು ಸೆರೆಹಿಡಿಯುವುದೇ ಇಲ್ಲಿ ಮುಖ್ಯವಾಗುತ್ತದೆಯೇ? ಲೇಖಕ ಚರಿತ್ರೆಗೆ ಎಷ್ಟು ನಿಷ್ಟನಾಗಬಲ್ಲ? ಬರೇ ಶಾಸನಗಳಿಂದ ಅಥವಾ ಯಾರೋ ಚರಿತ್ರಕಾರರು ಬರೆದ ಪುಸ್ತಕಗಳಿಂದ, ಸ್ಥಳಪುರಾಣದಿಂದ ಅಥವಾ ಇನ್ಯಾವುದೇ ಆಕರಗಳಿಂದ ಸಿಕ್ಕ ಚರಿತ್ರೆಯನ್ನು ಆಧರಿಸಿ ಅಂದಂದಿನ ಸಾಮಾನ್ಯ ಜನಗಳ ಜೀವನವನ್ನು ಪುನರ್ರ್ರಚಿಸುವುದು ಸಾಧ್ಯವೇ?

ಇಲ್ಲಿ ಕಲೆ ಮತ್ತು ವಾಸ್ತವಗಳೆರಡೂ ಪೂರಕವಾಗಿ ಕೆಲಸ ಮಾಡಬಹುದು, ಕೆಲವೊಮ್ಮೆ ಮಾರಕವಾಗಿಯೂ ಬಹುದು. ಕಲೆ ಚರಿತ್ರೆಯ ದಾಖಲಾತಿ ಅಲ್ಲ. ಹಾಗಾಗಿ ‘ಕಲ್ಪಿತ’ ದ ನೆವದಲ್ಲಿ ಕೆಲವೊಂದು ಚಾರಿತ್ರಿಕ ಘಟನೆಗಳು ಮಸುಕಾಗಬಹುದು. ಕೆಲವೊಂದು ಘಟನೆಗಳನ್ನು ದಾಖಲಿಸದೇ ಇರುವ ಅನುಕೂಲವನ್ನೂ ಬರಹಗಾರ ಪಡೆಯಬಹುದು. ಆದರೆ, ಕಾದಂಬರಿಯ ವಸ್ತುವೇ ಈ ಕಾಲಘಟ್ಟದ ಪಲ್ಲಟಗಳನ್ನು ಒಂದುಮಟ್ಟದಲ್ಲಿ ದಾಖಲಿಸುವುದಾಗಿರುವುದರಿಂದ ಸತ್ಯ, ವಾಸ್ತವವೆಂದು ಯಾವ ಆಕರಗ್ರಂಥಗಳಲ್ಲಿ ನಿರೂಪಿತವಾಗಿರುವ ಚಾರಿತ್ರಿಕ ಘಟನೆಯಿದೆಯೋ ಅದನ್ನು ಉಪೇಕ್ಷಿಸುವುದೂ ಕಷ್ಟ.

ಇಂತ ಒಂದು ಸಾಹಸಕ್ಕೆ ಗೋಪಾಲಕೃಷ್ಣಪೈಯವರು ಕೈಹಾಕಿದ್ದಾರೆ ತಮ್ಮ ಚೊಚ್ಚಲ ಕಾದಂಬರಿ ‘ಸ್ವಪ್ನ ಸಾರಸ್ವತ’ ದಲ್ಲಿ. ಗೋವಾದಲ್ಲಿ ಸಮಾಧಾನವಾಗಿ ಜೀವನ ನಡೆಸುತ್ತಿದ್ದ ಸಾರಸ್ವತ ಬ್ರಾಹ್ಮಣರ ಒಂದು ಸಮುದಾಯ ತಮ್ಮ ಧರ್ಮ ಹಾಗೂ ನಂಬಿದ್ದ ಜೀವನ ಶೈಲಿಯನ್ನು ಉಳಿಸಿಕೊಳ್ಳಲು ದಕ್ಷಿಣಕ್ಕೆ ವಲಸೆ ಬರುತ್ತಾರೆ. ಹೀಗೆ ಶುರುವಾದ ವಲಸೆ ಕೊನೆಗೆ ನೆಲೆಸೇರುವುದು ಕಾಸರಗೋಡಿನ ಸಮೀಪದ ಬಳ್ಳಂಬೆಟ್ಟಿನಲ್ಲಿ. ಇದ್ದ ಜಾಗವನ್ನು ಬಿಟ್ಟು ಬರುವುದು, ನಂತರದ ವಲಸೆಯ ಕ್ರಿಯೆ ಮತ್ತು ಅದರ ಜತೆಗೇ ಹಾಸುಹೊಕ್ಕಾಗಿ ಇರುವ ಮಾನವ ಸಹಜ ತಲ್ಲಣಗಳು ಮೊದಲ ಭಾಗಗಳಲ್ಲಿ, ಈ ಹೊಸಾ ನಾಡಿನಲ್ಲಿ ಇರಬೇಕಾದ ಅನಿವಾರ್ಯತೆ, ಜೀವನೋಪಾಯಕ್ಕೆ ಬೇಕಾದ ದುಡ್ಡು, ಭೂಮಿ ಮತ್ತು ಅದನ್ನು ಬೆಳೆಸುವ ಕ್ರಿಯೆ- ಅನಿವಾರ್ಯವಾಗುವ ಅವಶ್ಯಕತೆಗಳು ಮತ್ತು ಸಂಸಾರ ಬೆಳೆದಂತೆ ಅದರ ಜತೆಗೇ ಹುಟ್ಟುವ ರಾಗದ್ವೇಷಗಳು ನಂತರದ ಭಾಗಗಳಲ್ಲಿ ಅಸಂಖ್ಯಾತ ಪಾತ್ರಗಳಿಂದ ನಿರೂಪಿತವಾಗಿವೆ.

ವೆರಣೆಯ ನರಸಪ್ಪಯ್ಯನವರಿಂದ ಶುರುವಾದ ಈ ವಂಶದ ಕಥಾನಕ ರಾಮಚಂದ್ರಪೈಯ ಮೊಮ್ಮಗ ವೆಂಕಟೇಶ ಪೈನ ಜನನದವರೆಗೆ ಮತ್ತು ನಾಗ್ಡೊ ಬೇತಾಳ ಅವನನ್ನು ಎತ್ತಿಕೊಂಡು ಕಾಪಾಡುತ್ತಾನೆ ಎನ್ನುವ ಸದಾಶಯದೊಂದಿಗೆ ಮತ್ತು ಆತನ ಸಂತತಿ ಇಪ್ಪತ್ತೆರಡು ತಲೆಮಾರಿನ ತನಕ ಬದುಕುವ ಜವಾಬುದಾರಿಯನ್ನು ದೈವಕ್ಕೆ ಬಿಟ್ಟು ರಾಮಚಂದ್ರ ಪೈ ಸಾಯುವವರೆಗೆ ಈ ಕಥೆ ಬರೆಯಲ್ಪಟ್ಟಿದೆ ಎಂದು ಕಥೆಯನ್ನು ಸರಳೀಕರಿಸಿ ಹೇಳಿಬಿಟ್ಟರೆ ಕಾದಂಬರಿಕಾರನ ಶ್ರಮಕ್ಕೇ ಅನುಮಾನ ಮಾಡಿದ ಹಾಗಾಗುತ್ತದೆ. ಒಂದು ಕಾಲದ ವಾಸ್ತವ ಚರಿತ್ರೆಯಾಗುತ್ತಾ ಹಾಗೇ ಪುರಾಣವಾಗುವುದನ್ನು ಪೈರವರು ವಾಸ್ತವ, ಫ಼್ಯಾಂಟಸಿಗಳನ್ನು ಸೇರಿಸಿ ಬಹಳ ಆಪ್ತ ಶೈಲಿಯಲ್ಲಿ ಕಟ್ಟುಕೊಡುತ್ತಾರೆ. ಈ ಶೈಲಿ ಹೃದ್ಯವಾಗಿದೆ, ವೇದ್ಯವಾಗುತ್ತದೆ. ಓದಿಸಿಕೊಳ್ಳುತ್ತದೆ, ಖುಷಿಕೊಡುತ್ತದೆ. ಅಷ್ಟೇ ಅಲ್ಲ, ಕಾದಂಬರಿಯ ಪಾತ್ರವೊಂದಾದ ಜಾಹ್ನವಿ ತನ್ನ ಜತೆಗಿದ್ದವಳನ್ನೇ ಹರಿದು ತಿನ್ನುವುದೂ, ನಾಗ್ಡೊ ಬೇತಾಳ ಕಾಲಪುರುಷನಂತೆ ಮತ್ತೆ ಮತ್ತೆ ಹುಟ್ಟುಬರುವುದೂ ವರ್ತಮಾನಕ್ಕೆ ಭೂತದ ಕಥೆಗಳನ್ನೂ ಮತ್ತು ಭವಿಷ್ಯದಲ್ಲಿ ಹೀಗೇ ಆಗುತ್ತದೆ ಎಂದು ಹೇಳುವ ಅತಿವಾಸ್ತವಗಳನ್ನೂ ಪ್ರಶ್ನಾತೀತವನ್ನಾಗಿಸುತ್ತದೆ.

ಇದು ಸುಮಾರು ನಾಲ್ಕುನೂರುವರ್ಷಗಳ ಕಾಲ ಏಳು ತಲೆಮಾರುಗಳ ಅವಧಿಯಲ್ಲಿ ನಡೆಯುವ ಕಥೆ. ಕಾಲವನ್ನು ಅಕ್ಷರಗಳಲ್ಲಿ ಹಿಡಿದಿಡಬೇಕಾದಾಗ ಬರಹಗಾರನು ಎದುರಿಸುವ ಸವಾಲುಗಳು ಹಲವು. ನಮ್ಮ ಸಂಸ್ಖ್ರುತಿಯ ಮತ್ತು ಕಾಲದ ಪಲ್ಲಟಗಳು ಇತಿಹಾಸದಲ್ಲಿ ದಾಖಲಾಗಿರುವುದು ರಾಜಮಹಾರಾಜರುಗಳ ಕಥನದಲ್ಲಿ,ಮಹಾಯುದ್ಧಗಳ ದಾಖಲಾತಿಯಲ್ಲಿ. ಕಾಲೆರಾ, ಪ್ಲೇಗು ಮುಂತಾದ ಮಹಾಮಾರಿಗಳು ಸೃಷ್ಟಿಸಿದ ಮೃತ್ಯುಕೂಪದಲ್ಲಿ. ಆದರೆ ಈ ಶತಮಾನಗಳ ಸ್ಥಿತ್ಯಂತರಗಳನ್ನು ಹೇಳಲು ಪೈರವರು ಆರಿಸಿಕೊಂಡಿರುವುದು ಒಂದು ಕುಟುಂಬದ ಕತೆಯನ್ನು ಹೇಳುವುದರ ಮೂಲಕ. ಯಾವ ಕಾರಣಕ್ಕೂ ತಂತಮ್ಮ ಕುಟುಂಬದ ಹೊರತಾದ ಯಾವ ವಿದ್ಯಮಾನಗಳಿಗೂ ತನ್ನನ್ನು ಒಡ್ಡಿಕೊಳ್ಳದಿರುವ ಒಂದು ಸಾಮಾನ್ಯ ಸಾರಸ್ವತ ಕುಟುಂಬ ಕೇವಲ ತನ್ನ ದೈವವನ್ನು ಉಳಿಸಿಕೊಳ್ಳುವುದಕ್ಕಾಗಿ ಇದ್ದ ಊರನ್ನೇ ಸಂಸಾರ ಸಮೇತ ಬಿಟ್ಟು ಹೋಗುವ ಈ ಕಾಯಕ ದೈವ, ಧರ್ಮ ಮತ್ತು ನಂಬಿಕೆಗಳು ಜೀವನದ ಮೇಲೆ ಪ್ರಬಾವಿಸುವ ರೀತಿಯನ್ನು ಪ್ರಸ್ತಾಪಿಸುತ್ತದೆ .

ದಶಕಗಳ ಕಾಲ ತಮ್ಮ ಹರಹನ್ನು ವಿಸ್ತರಿಸಿಕೊಂಡಿರುವ ಯಾವ ಕಥೆಯೂ, ಒಂದು ವ್ಯಕ್ತಿಯ ಅಥವಾ ಸಂಸಾರದ ಕಥೆಯಾಗಿರುವುದಿಲ್ಲ. ಸುತ್ತಣ ಸಮಾಜದಲ್ಲಿಯಾಗುವ ಪಲ್ಲಟಗಳಿಂದ ಪ್ರಭಾವಿತವಾಗಿಲ್ಲದೇ ಇರಲು ಸಾಧ್ಯವೇ ಇಲ್ಲ. ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯ ಕರಾವಳಿಯ ಜನಜೀವನದ ವಿವರಗಳಿರಲಿ, ಮಲೆಗಳಲ್ಲಿ ಮದುಮಗಳು ವಿನ ೧೯ನೆಯ ಶತಮಾನದ ಅಂತ್ಯದ ಮಲೆನಾಡಿನ ಕಥನವಿರಲಿ, ಹೊರಗಿನ ಪ್ರಪಂಚದ ಅರಿವನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುವ ಎಂಥ ಸಾಮಾನ್ಯ ಮನುಷ್ಯನ ಜೀವನವೂ ಆ ಪಲ್ಲಟಗಳಿಂದ, ಸ್ಥಿತ್ಯಂತರಗಳಿಂದ ಪ್ರಭಾವಿತವಾಗದೇ ಇರಲು ಸಾಧ್ಯವೇ ಇಲ್ಲ ಎಂದೇ ಪ್ರತಿಪಾದಿಸುತ್ತದೆ. ಸಲ್ಮಾನ್ ರಶ್ದೀಯಂತೂ ತನ್ನ ಮಿಡ್‌ನೈಟ್ಸ್ ಚಿಲ್ಡ್ರನ್ ನಲ್ಲಿ ಕಾದಂಬರಿಯ ನಾಯಕನ ಜೀವನದ ಪ್ರತಿ ಮುಖ್ಯ ಘಟನೆಯೂ ಇಂಡಿಯಾ ದೇಶದ ಚಾರಿತ್ರಿಕ ಘಟನೆಗಳೊಂದಿಗೆ ಹೇಗೆ ಥಳುಕುಹಾಕಿಕೊಂಡಿತ್ತು ಎನ್ನುವುದನ್ನು ಫ಼್ಯಾಂಟಸಿಯಂತೆ ವರ್ಣಿಸುತ್ತಾನೆ.

ಅಂದರೆ ಒಟ್ಟು, ಮನುಷ್ಯ ‘ತಂಪಾಡಿಗೆ’ ತಾನು ಇರುವುದಕ್ಕೆ ಸಾಧ್ಯವೇ ಇಲ್ಲ. ಅದೇ ರೀತಿ ‘ಸ್ವಪ್ನ ಸಾರಸ್ವತ’ದಲ್ಲಿಯೂ ಗೋವಾದಲ್ಲಿಯಾದ ಪೋರ್ಚುಗೀಸರ ದಾಳಿ ನಂತರದ ಕಾಲವನ್ನು ಮತ್ತು ಒಂದು ಸಮುದಾಯವನ್ನು ನೇರವಾಗಿ ತಟ್ಟಿದ್ದಲ್ಲದೇ ಅವರ ಜೀವನದ ಗತಿಯನ್ನೇ ಪೂರಕ್ಕೆ ಪೂರ ಬದಲಿಸಿಬಿಡುತ್ತದೆ. ಸೆಪ್ಟೆಂಬರ್ ೧೧, ನಮ್ಮ ಕಾಲದ ಒಂದು ಮುಖ್ಯ ಪಲ್ಲಟಕ್ಕೆ ಮತ್ತು ನಂತರದ ಘಟನೆಗಳಿಗೆ ಹೇಗೆ ಕಾರಣವಾಗಿದೆಯೋ ಮತ್ತು ಅದಿಲ್ಲದೇ ನ್ಯೂ ಯಾರ್ಕ್ ನಗರವನ್ನಾಗಲೀ ಅಥವಾ ಪ್ರಪಂಚದ ವಿದ್ಯಮಾನಗಳನ್ನಾಗಲೀ ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಹಾಗೇ ಈ ಪೋರ್ಚುಗೀಸರ ಆಕ್ರಮಣವಿಲ್ಲದ ಗೋವೆಯನ್ನೂ ನಾವು ಕಲ್ಪಿಸಿಕೊಳ್ಳಲಾಗದು. ಅಫ಼್ಗಾನಿಸ್ತಾನವೆಂದರೆ ಎಲ್ಲಿದೆಯೆಂದು ಗೊತ್ತಿಲ್ಲದ ಅಮೆರಿಕನ್ನರಿಗೂ ಮನೆಯಬಾಗಿಲಿನಲ್ಲಿಯೇ ವಿಮಾನಗಳು ಕಟ್ಟಡಗಳನ್ನು ಹೊಡೆದು ಕೆಡವಿದಾಗ ತಮ್ಮ ಅರಿವಿನ ವಿಸ್ತಾರ ಅನಿವಾರ್ಯವಾಗಿತ್ತು. ಹಾಗೆಯೇ ಮತ್ತುತಮ್ಮ ಸಂಸಾರದ ಉಸಾಬರಿಯನ್ನು ಬಿಟ್ಟು ಬೇರೇ ಯಾವ ರಾಜಕೀಯ ಆಸಕ್ತಿಯೂ ಇಲ್ಲದ ಗೋವೆಯ ಸಾರಸ್ವತ ಬ್ರಾಹ್ಮಣರು ಇಂಥಾ ಒಂದು ಸನ್ನಿವೇಶವನ್ನು ಎದುರಿಸಿದಾಗ ವಲಸೆ ಅನಿವಾರ್ಯವಾಯಿತು.

ಚರಿತ್ರೆಯಲ್ಲಿ ಇಂಥ ದುರಂತಗಳು ಮತ್ತು ನಂತರದ ವಲಸೆಗಳೂ ಹಲವಾರು ಬಾರಿ ನಡೆದಿದೆ. ಉದಾಹರಣೆಗೆ ಹಿಟ್ಲರನ ಮಾರಣಹೋಮದ ನಂತರದ ಯಹೂದಿಗಳ ವಲಸೆ. ಇಡೀ ಪ್ರಪಂಚದಾದ್ಯಂತ ಯಹೂದಿಗಳು ವಲಸೆಹೋದರು. ಹೋದರಷ್ಟೇ ಅಲ್ಲ, ತಮ್ಮ ನಂಬಿಕೆಗಳನ್ನು, ಧರ್ಮವನ್ನು ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಈ ಯಹೂದಿಗಳ ವಲಸೆಗೂ ಮತ್ತು ಪೈಗಳ ಸಾರಸ್ವತ ವಲಸೆಯಲ್ಲಿಯೂ ಕೆಲವು ಸಾಮ್ಯತೆಗಳಿವೆ. ಎರಡಕ್ಕೂ ಈ ಸಾವುನೋವುಗಳ ಮತ್ತು ಹಿಂಸೆಯ ಮಟ್ಟದಲ್ಲಿ ಕೆಲವು ವ್ಯತ್ಯಾಸಗಳಿರಬಹುದು. ಆದರೆ, ಒಂದು ವ್ಯಕ್ತಿಯ ಮಟ್ಟದಲ್ಲಿ ಅಥವಾ ಒಂದು ಕುಟುಂಬದ ಮಟ್ಟದಲ್ಲಿ ಈ ಆಘಾತ ಒಂದೇ ಎಂದು ನನ್ನ ಭಾವನೆ. ಒಂದು, ಇಬ್ಬರೂ ತಮ್ಮ ದೈವವನ್ನು, ನಂಬಿಕೆಯನ್ನು ನಂಬಿಯೇ ಅದರ ಬುಡಕ್ಕೇ ಪೆಟ್ಟುಬಿದ್ದಾಗ ವಲಸೆ ಹೊರಡಲು ನಿರ್ಧರಿಸಿದ್ದು, ಎರಡನೆಯದು ಈ ವಲಸೆಯೆಂಬ ಕ್ರಿಯೆಯ ಅನೇಕ ಏಳುಬೀಳುಗಳನ್ನು ಅನುಭವಿಸಿದ್ದು. ಮೂರನೆಯದಾಗಿ ವಲಸೆಹೋದ ನಾಡಲ್ಲಿ ಬೀಡು ಬಿಟ್ಟರೂ ತಮ್ಮ ದೈವದ ಬಗ್ಗೆ ಪೀಳಿಗೆಗಳ ನಂತರವೂ ಅಪಾರ ನಂಬುಗೆಯನ್ನು ಉಳಿಸಿಕೊಳ್ಳುವುದು. ಈಗಲೂ ಜಗತ್ತಿನ ಅನೇಕ ಜಗತ್ತಿನ ಮಹಾನಗರಗಳಲ್ಲಿ ಅನೇಕ ದೊಡ್ಡದೊಡ್ಡ ವ್ಯವಹಾರಗಳ ಸ್ವಾಮ್ಯವನ್ನು ಈ ಯಹೂದಿಗಳು ಹೊಂದಿದ್ದಾರೆ, ಅಷ್ಟೇ ಅಲ್ಲ ಈಗಲೂ ತಮ್ಮ ವೇಷಭೂಷಣಗಳಿಂದ ಹಿಡಿದು ಸಂಪ್ರದಾಯಗಳಲ್ಲಿಯೂ ಹೇಗೆ ತಮ್ಮತನವನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ತಾವೆಲಿ ನೆಲೆಸಿದ್ದಾರೋ ಆ ಸಮಾಜದ ಜನಜೀವನವನ್ನು ಕೂಡ ಒಂದು ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಸದರ್ನ್ ಬ್ಯಾಪ್ಟಿಸ್ಟ್, ಲ್ಯುಥೆರನ್ ಇತ್ಯಾದಿ ಕ್ರಿಶ್ಚಿಯನ್ ಪಂಗಡಗಳಂತೆ ಈ ಯಹೂದಿಗಳದ್ದೂ ಇನ್ನೊಂದು ಪಂಗಡವೆಂಬಂತೆ ಕಾಣುತ್ತದೆ. ಯಾವುದೇ ವಲಸೆಯಲ್ಲಿ ಇದು ಅನಿವಾರ್ಯ ಕೂಡ..

ಬಳ್ಳಂಬೆಟ್ಟುವಿನಲ್ಲಿ ರಾಮಚಂದ್ರಪೈ ನೆಲೆಯಿಡುವುದು ಮತ್ತು ಆ ಕ್ರಿಯೆಯಲ್ಲಿ ಆತನ ಅನುಭವ ವ್ಯಕ್ತಿಯ ಮಟ್ಟದಲ್ಲಿ ಇದಕ್ಕಿಂತಾ ಹೊರತಾದುದೇನಲ್ಲ. ಒಂದು ಕುಟುಂಬದ ಅನುಭವ ಸಮಷ್ಟಿಗೆ ಸಮೀಕೃತವಾಗುವುದು ಹೀಗಲ್ಲವೇ?

* * *

ಆದರೆ, ಪೈರವರ ಆಸಕ್ತಿ ಬರೇ ವಲಸೆಗೆ ಮಾತ್ರ ಸೀಮಿತವಾದುದಲ್ಲ. ನಂತರದ ಕಥನ ಮಹಾಭಾರತದಂತೆ ವಿರಾಟ ಸ್ವರೂಪವನ್ನು ಪಡೆಯುತ್ತದೆ. ರಾಮಚಂದ್ರ ಪೈನ ತಾತ ವಿಟ್ಟುಪೈ ನ ಕಥನ ಮುಕ್ಕಾಲುವಾಸಿ ವಲಸೆ ಮತ್ತು ಆ ಕ್ರಿಯೆಯಲ್ಲಿನ ಸಂಕೀರ್ಣತೆಯನ್ನು ಹೇಳುತ್ತಾ ಹೋಗುತ್ತದೆ. ಒಂದಿಷ್ಟು ಸಾವು, ಕಳ್ಳತನ, ನಾಗೇಶಹೆಗಡೆಯ ಹುಚ್ಚು ಇತರೇ ಸಂಗತಿಗಳ ಮೂಲಕ ಪ್ರಯಾಣ ಮತ್ತು ವಲಸೆ ರುದ್ರಭೀಕರವಾಗಿ ಮುಂದುವರೆಯುತ್ತದೆ. ಲೇಖಕರು ಕಾಲವನ್ನು ಜತೆಜತೆಗೂ ಬೆಳೆಸುವುದಕ್ಕೆ ಆಯಾಕಾಲದ ಚಾರಿತ್ರಿಕ ಘಟನೆ ಮತ್ತು ವ್ಯಕ್ತಿಗಳನ್ನು ಸೂಕ್ತವಾಗಿ ಹೆಸರಿಸುತ್ತಾ ಹೋಗುತ್ತಾರೆ,..

ಇಲ್ಲಿ ಮತ್ತೆ ಮತ್ತೆ ಗಮನಿಸಬೇಕಾದ ವಿಷಯವೆಂದರೆ ಪೈರವರ ಶೈಲಿ. ಗೋವಾದಲ್ಲಿ ಆಲ್ಬುಕೇರ್ಕನ ಕಥೆಯನ್ನು ಹೇಳುತ್ತಿರಲಿ, ಮಂಜೇಶ್ವರದ ಸ್ವಾಮಿಗಳು ಚಾತುರ್ಮಾಸಕ್ಕೆ ಕೂತಿರಲಿ, ವಿಟ್ಟು ಪೈ ಭಿಕ್ಷೆ ಬೇಡಲಿ ಅಥವಾ ರಾಮಚಂದ್ರ ಪೈ ನಾಗ್ಡೋ ಬೇತಾಳನ ಜತೆ ತೀವ್ರವಾಗಿ ಸಂಭಾಷಿಸುತ್ತಿರಲಿ, ಒಂದೊಂದೇ ಭಾಗವನ್ನು ಬಿಡಿಡಿಯಾಗಿ ಓದಿದರೆ ಅದು ವರ್ತಮಾನದಲ್ಲಿ ನಡೆದಂತೇ ಕಾಣುತ್ತದೆ. ಉದಾಹರಣೆಗೆ ಕಾದಂಬರಿಯ ಮೊದಲ ಭಾಗದಲ್ಲಿ ಪೋರ್ಚುಗೀಸ ಆಲ್ಬುಕೇರ್ಕನ ನ ಕಥೆಯಿದೆ, ಕೊನೆಗೆ ಸಿದ್ದು ಪೈ ಹಾವು ಕಚ್ಚಿ ಸಾಯುವ ಘಟನೆಯಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪುಟ ತಿರುಗಿಸಿ ಓದಿದಾಗ ಯಾವುದೋ ಬೇರೆ ಕಾಲದಲ್ಲಿ ನಡೆದಂತೆ ಅನಿಸುವುದಿಲ್ಲ. ಮಧ್ಯೆ ನಾನೂರು ವರ್ಷಗಳ ಅಂತರವಿದೆ ಎನ್ನುವುದನ್ನು ನಾವು ಗಮನಿಸಬೇಕು. ಇದು ಅಕ್ಷರಗಳ ಸೌಂದರ್ಯ. ಇದನ್ನೇ ದೃಶ್ಯ ಮಾಧ್ಯಮದಲ್ಲಿ ಸೆರೆಹಿಡಿಯಲು ನೋಡಿದ್ದಲ್ಲಿ ನಾನೂರು ವರ್ಷಗಳ ಹಿಂದಿನ ಕಾಲವನ್ನು ಪುನರ್ನಿರ್ಮಿಸಲು ನಮ್ಮ ಪ್ರಸಾಧನಕಾರರು, ಮತ್ತು ಸೆಟ್ ಹಾಕುವವರು ಮಾಡುವ ಸರ್ಕಸ್ಸನ್ನು ಕಲ್ಪಿಸಿಕೊಳ್ಳಬಹುದು. (ಕೆಲವೊಂದು ಪಿರಿಯಡ್ ಸಿನೆಮಾಗಳನ್ನು ನೋಡಿದಲ್ಲಿ ಈ ಘಟನೆ ಸ್ಪಷ್ಟವಾದೀತು.) ಆದರೆ, ದೃಶ್ಯಗಳಲ್ಲಿ ಕಾಲವನ್ನು ಪರಿಣಾಮಕಾರಿಯಾಗಿ ಪುನರ್ನಿರ್ಮಿಸಿದಂತೆ ಅಕ್ಷರಗಳಲ್ಲಿ ನಿರ್ಮಿಸಲು ಸಾಧ್ಯವಾಗದು. ನಾವೇನೇ ಬರೆದರೂ ವರ್ತಮಾನದ ಓದುಗನನ್ನು ಗಮನದಲ್ಲಿಟ್ಟುಕೊಂದೇ ಬರೆಯುವುದರಿಂದ, ಅವನಿಗೆ ನನ್ನ ಈ ಕಥೆ ಹೇಗೆ ಕನೆಕ್ಟ್ ಆಗುತ್ತದೆ ಎನ್ನುವುದು ಮುಖ್ಯವಾದಾಗ ಅಲ್ವೀರಾಳ ಕಥನವಾಗಲೀ, ನರಸಪ್ಪನವರ ಸಾವಾಗಲೀ, ರಾಮಚಂದ್ರ ಪೈ ಹೊಂದಿಸುವ ಸಂಬಂಧಗಳಾಗಲೀ ಎಲ್ಲವೂ ಅವು ನಡೆಯುವ ಕಾಲದ ಹಂಗಿಲ್ಲದೇ ಇದೀಗ ನಮ್ಮ ಕಣ್ಣಮುಂದೆಯೇ ನಡೆಯುತ್ತಿದೆ ಎಂದು ಓದಿಕೊಳ್ಳುವುದು ಸಾಧ್ಯ. ಕಾದಂಬರಿಯ ಪ್ರಕಾರದಲ್ಲಿ ಈ ಕಾಲವನ್ನು ಒಂದು ಎಳೆಯಿಂದ ಒಂದುಗೂಡಿಸುವ ಕಾರ್ಯ ಸುಲಭಸಾಧ್ಯವಲ್ಲ. ಅದಕ್ಕೆ ತಪಸ್ಸಿನಂತಹ ಧ್ಯಾನ ಮತ್ತು ಏಕಾಗ್ರತೆಯ ಅವಶ್ಯಕತೆಯಿದೆ. ನಾಲ್ಕೇ ದಿನಗಳಲ್ಲಿ ನಡೆಯುವ ಕಥೆಯನ್ನೂ ಬರೆದಾಗ ಈ ಏಕಾಗ್ರತೆಯಿಲ್ಲದಿದ್ದರೆ ಹಳಿತಪ್ಪುವ ಸಾಧ್ಯತೆಗಳಿರುತ್ತವೆ. ಇದರಲ್ಲಿ ಪೈಯವರ ಯಶಸ್ಸಿದೆ.

ಒಬ್ಬ ಕಾದಂಬರಿಕಾರನಿಗೆ ಇಂಥ ಬೃಹತ್ ಕಾದಂಬರಿಯನ್ನು ಬರೆಯಬೇಕಾದರೆ ಅದಕ್ಕೆ ಬೇಕಾದ ಸಿದ್ಧತೆ ಮತ್ತು ಶ್ರಮ ಎಷ್ಟಿದೆಯೆಂಬ ಕಲ್ಪನೆಯೇ ನನ್ನನ್ನು ವಿನಮ್ರನನ್ನಾಗಿಸಿದೆ. ನಾನೂರು ವರ್ಷದ ಚರಿತ್ರೆಯನ್ನು ಓದಿದರೆ ಸಾಲದು, ರಾಜರುಗಳ ಚರಿತ್ರೆಯನ್ನು ಓದಿ ಆ ಕಾಲದಲ್ಲಿ ಜನಜೀವನ ಹೇಗಿತ್ತು ಎಂದು ಕಲ್ಪಿಸಿಕೊಂಡು ಅದನ್ನು ಮುಂದುವರೆಸುತ್ತ ಹೋಗುವುದು ಒಂದು ಸವಾಲಾದರೆ, ಬರೇ ಕಾದಂಬರಿಯ ವ್ಯಾಪ್ತಿಗಾಗಿಯೇ ಸೃಷ್ಟಿಸಿಕೊಂಡ ಅನೇಕ ಪಾತ್ರಗಳನ್ನು ಮುಂದುವರೆಸುವುದಲ್ಲದೇ ಅನೇಕ ಸಡಿಲ ಎಳೆಗಳನ್ನು ತಾಂತ್ರಿಕ ಕಾರಣಗಳಿಗಾಗಿಯಾದರೂ ಒಂದು ಗೂಡಿಸಬೇಕಾಗುತ್ತದೆ. ನಾಲ್ಕುನೂರು ವರ್ಷಗಳ ಅವಧಿಯಲ್ಲಿ ಸಹಜವಾದ ಹುಟ್ಟುಸಾವುಗಳು ಕಾದಂಬರಿಯಲ್ಲಿ ಸತತವಾಗಿ ಬರತೊಡಗಿದಾಗ ಕೆಲವೊಮ್ಮೆ ಬೋರುಹೊಡೆಸಬಹುದು. ಕೆಲವೊಮ್ಮೆ ಕಥೆಗಾರರು ಕಥಾನುಕೂಲಕ್ಕೆ ಪಾತ್ರಗಳನ್ನು ಸೃಷ್ಟಿಸಿದರು ಮತ್ತು ಸಾಯಿಸಿದರು ಎಂದು ಅನಿಸಬಹುದು. ಎಷ್ಟೋ ಪಾತ್ರಗಳ ಅವಶ್ಯಕತೆಯ ಬಗ್ಗೆಯೇ ಅನುಮಾನ ಬರಬಹುದು.

ಸ್ಪೇನಿನ ಕಾದಂಬರಿಕಾರ ‘ಮರಿಯೋ ವಾರ್ಗಸ್ ಲೋಸ’ ನ ಒಂದು ಮಾತು ನೆನಪಿಗೆ ಬರುತ್ತದೆ. ಒಂದು ಮಹತ್ವದ ಕಾದಂಬರಿ ಏನೂ ಮಹತ್ವವಾದದ್ದನ್ನು ಹೇಳುತ್ತಿದೆ ಎಂದು ಹೇಳಿಕೊಂಡು ಬರೆಯಲ್ಪಡುವುದಿಲ್ಲ. ಹೀಗೆ ಮಹತ್ತರವಾದುದನ್ನು ಮಹತ್ತರವಾದ ಘಟನೆಗಳ ಮೂಲಕ ವರ್ಣಿಸದೇ ಪ್ರತಿ ಸಾಮಾನ್ಯ ಘಟನೆಗಳನ್ನೂ ಸಾಮಾನ್ಯವಾಗಿಯೇ ಸೆರೆಹಿಡಿಯುವುದರಿಂದ ಅದು ಮಹತ್ತರವಾಗುತ್ತದೆ.’ ನಮ್ಮ ಜೀವನವನ್ನೇ ಉದಾಹರಣೆಗೆ ತೆಗೆದುಕೊಂಡರೆ ಒಂದು ವರ್ಷದಲ್ಲಿ ನಮ್ಮ ಲೆಕ್ಕದಿಂದ ಮಹತ್ವವಾದ ಘಟನೆಗಳು ನಡೆಯುವುದು ಪಾಯಶಃ ಕೇಲವೇ ಕೆಲವು ದಿನಗಳಲ್ಲಿ- ಮಕ್ಕಳ ಹುಟ್ಟುಹಬ್ಬ, ಒಂದು ಪ್ರೊಮೋಶನ್, ಒಂದಿಷ್ಟು ಪಾರ್ಟಿಗಳು, ನಾಲ್ಕು ಮದುವೆ, ಓದಿದ ಪುಸ್ತಕಗಳು, ನೋಡಿದ ಸಿನೆಮಾ, ಹುಟ್ಟು ಮತ್ತು ಸಾವು. ಹುಟ್ಟು ಸಾವುಗಳು ಯಾವಾಗಲೂ ಬರುವುದಿಲ್ಲ. ಪರಿಚಿತರ, ಬಂಧುಗಳ ಹುಟ್ಟು ಸಾವುಗಳು ಅನಿರೀಕ್ಶಿತವಾಗಿದ್ದರೆ ಮಾತ್ರ ಮುಖ್ಯವಾಗುತ್ತದೆ, ಮಕ್ಕಳ ಹುಟ್ಟುಹಬ್ಬಗಳು, ವಿವಾಹದ ವಾರ್ಷಿಕೋತ್ಸವ್ವ ಎಲ್ಲವೂ ಕೊಂಚ ಕಾಲದನಂತರ ಪೇಲವವಾಗಿಯಾದರೂ ಮುಖ್ಯವಾಗಿ ನೆನಪಿನಲ್ಲಿ ನಿಂತುಕೊಳ್ಳುತ್ತವೆ.

ಒಬ್ಬ ಕಾದಂಬರಿಕಾರನೂ ಮನುಷ್ಯನಾದ್ದರಿಂದ ಆತ ಏನೇ ಓದಿ ಬರೆದರೂ ಅಥವಾ ತನ್ನ ಅನುಭವದ ಮೇಲೆ ಕಾದಂಬರಿ ಬರೆದರೂ ಈ ನೆನಪಿರುವ ಮಹತ್ವದ ಘಟನೆಗಳ ರೋಚಕತೆಗೆ ಮತ್ತು ಅವುಗಳನ್ನು ದಾಖಲಿಸುವ ಆಮಿಷದಿಂದ ದೂರವಿರುವುದು ಕೊಂಚ ಕಷ್ಟ. ಅದು ಬಿಟ್ಟು ದೈನಿಕವನ್ನು, ಋತುವನ್ನು, ಎಂದೋ ನಡೆದ ಚಾತುರ್ಮಾಸ ಪೂಜೆಯನ್ನು, ಮದುವೆ ಸಂಬಂಧದ ಮಾತುಕತೆಗಳನ್ನು, ಹುಟ್ಟು ಸಾವುಗಳನ್ನು ದೈನಿಕದ ವಿವರಗಳಂತೆ ಬರೆಯುವುದು ಅಷ್ಟು ಸುಲಭವಲ್ಲ. ಇದು ವಿಶೇಷವಾದದ್ದೇನೂ ನಡೆಯದ ನಮ್ಮ ದಿನವೊಂದರ ಬಗ್ಗೆ ಬರೆದಂತೆ. ಇಂಥ ವಿಷಯ ಬಂದಾಗ ನಾಲ್ಕುನೂರಕೂ ಹೆಚ್ಚುವರ್ಷಗಳ ಕಾಲದ ದೈನಿಕವನ್ನು ದೈನಿಕವಾಗಿಯೇ ಚಿತ್ರಿಸಿರುವುದರಲ್ಲಿ ಪೈರವರ ಯಶಸ್ಸಿದೆ. ಹಾಗಾಗಿ ಪೋರ್ಚುUಗಿಸರಿಂದಾದ ಮುಸ್ಲಿಮರ ನರಮೇಧ, ನಂತರವಾದ ಕ್ರೈಸ್ತಮತದ ಮತಾಂತರ, ಅವರ ವಲಸೆ, ಬಳ್ಳಂಬೆಟ್ಟುವಿನಲ್ಲಿ ರಾಮಚಂದ್ರಪೈ ನೆಲೆಸಿದ್ದು ಮತ್ತು ಅವನ ಜೀವನ ಇವೆಲ್ಲ ಇಲ್ಲಿನ ಅಸಂಖ್ಯ ಪಾತ್ರಗಳ ದೈನಿಕರೇಖೆಯನ್ನು ಸೇರಿಸುವ ಚುಕ್ಕಿಗಳಾಗಿ ಮಾತ್ರ ಕಾಣುತ್ತವೆ. ಆ ರೇಖೆಯ ಅಂದ ಚುಕ್ಕಿಗಳಿಂದ ಮಾಸಿಲ್ಲ.

ರೇಖೆಯೊಂದು ಅನೇಕ ಚುಕ್ಕಿಗಳ ಗಣವೇ ಆದರೂ ರೇಖೆ ರೇಖೆಯಂತೆ ಕಾಣಲು ಚುಕ್ಕಿಗಳು ಮಸುಕಾಗಲೇಬೇಕು. ಇಂಥ ಒಂದು ರೇಖೆಯ ಸೃಷ್ಟಿಯಲ್ಲಿ ಪೈರವರು ಯಶಸ್ವಿಯಾಗಿದ್ದಾರೆ.

1 comment:

  1. "
    ರೇಖೆಯೊಂದು ಅನೇಕ ಚುಕ್ಕಿಗಳ ಗಣವೇ ಆದರೂ ರೇಖೆ ರೇಖೆಯಂತೆ ಕಾಣಲು ಚುಕ್ಕಿಗಳು ಮಸುಕಾಗಲೇಬೇಕು."

    --Well said!! You must be good at the concept of geometry. :)

    ReplyDelete