Saturday, March 21, 2009

ಒಬಾಮಾ ಎಂಬ ದೊಡ್ಡ ಬಜೆಟ್ ಚಿತ್ರ.

ನವೆಂಬರ್ ಆರು, ೨೦೦೮ರಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ಹಿಂದಿನ ದಿನವಷ್ಟೇ ಅಮೆರಿಕಾದ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು. ಬರಾಕ್ ಹುಸೇನ್ ಒಬಾಮ ತನ್ನ ಪ್ರತಿಸ್ಪರ್ಧಿ ಮೆಕೇನನ್ನು ಭಾರಿ ಅಂತರದಿಂದ ಸೋಲಿಸಿದ್ದ. ಶಿಕಾಗೋದ ಗ್ರಾಂಟ್ ಪಾರ್ಕಿನಲ್ಲಿ ಎರಡೂವರೆಲಕ್ಷ ಜನರ ಮುಂದೆ ತನ್ನ ವಿಜಯವನ್ನು ಸಂಭ್ರಮಿಸಿದ್ದ. ಹೆಂಡತಿ ಮಿಶೇಲ್ ಮತ್ತು ಮಕ್ಕಳಾದ ಮಲಿಯ ಮತ್ತು ತಾಶಾರ ಜತೆಗೆ ವೇದಿಕೆಯಮೇಲೆ ಓಡಿಯಾಡಿ ಖುಷಿಪಟ್ಟಿದ್ದ. ಅತ್ತ ಫೀನಿಕ್ಸಿನಲ್ಲಿ ಜಾನ್ ಮಕೇನ್ ವೀರೋಚಿತವಾಗಿ ತನ್ನ ಸೋಲನ್ನೊಪ್ಪಿಕೊಂಡಿದ್ದ.

ಅಮೆರಿಕಾ ಬದಲಾವಣೆಗೆ ಸಿದ್ಧವಿದೆ ಎಂದು ಪ್ರಪಂಚಕ್ಕೆ ತೋರಿಸಿತ್ತು

ಮಾರನೆಯ ದಿನ ಆಸ್ಪತ್ರೆಗೆ ಕೆಲಸಕ್ಕೆ ಬಂದಾಗ ಒಂದು ರೀತಿಯ ದಿವ್ಯ ಮೌನ. ಯಾರೂ ಮಾತಾಡುತ್ತಿಲ್ಲ. ಒಬಾಮಾ ಗೆದ್ದ ಸಂಭ್ರಮವನ್ನು ವಾಟರ್ ಕೂಲರ್ ಮಾತುಕತೆಯಾಗಿಯಾದರೂ ಸಿಕ್ಕವರೊಂದಿಗೆ ಗಾಸಿಪ್ ಮಾಡುವುದರ ‘ಪೊಲಿಟಿಕಲ್ ಕರೆಕ್ಡೆಡ್‌ನೆಸ್’ ಬಗ್ಗೆ ಯೋಚಿಸುತ್ತಿದ್ದೆ. ಬರೇ ಕಕೇಶಿಯನ್ನರ ನಡುವೆ ಒಬ್ಬನೇ ನನ್ನಂತವನು ಸೇರಿಕೊಂಡುಬಿಟ್ಟಾಗ ಇಂತಹ ಕೆಟ್ಟ ಪಿರಿಪಿರಿಯನ್ನು ನಾನು ಅನುಭವಿಸಿದ್ದೇನೆ. ಇಂಗ್ಲಿಷ್ ಅರ್ಥವಾಗದ ಗುಜರಾತಿಗಳೋ ಮೆಕ್ಸಿಕನ್ನರೋ ರೋಗಿಗಳು ಬಂದಾಗ ದುಭಾಶಿಗಳನ್ನು ಆಸ್ಪತ್ರೆಗೆ ಕರೆಸುವ ಕಿರಿಕಿರಿಯನ್ನು ತಡೆಯದೆ ಎಷ್ಟೋ ಜನ ನನ್ನ ಸಹಕೆಲಸಗಾರರು ನನ್ನ ಮುಂದೆಯೇ ‘ಈ ಜನಕ್ಕೆ ಇಂಗ್ಲಿಶ್ ಕಲಿಯಲು ಏನು ಬಂದಿರುವುದು, ರೋಗ?’ ಎಂದು ಗೊಣಗಿ, ನನ್ನನ್ನು ನೋಡಿ ತಕ್ಷಣ ಎಚ್ಚತ್ತುಕೊಂಡು ‘ಸಾರಿ’ ಎಂದು ತುಟಿಕಡಿದುಕೊಳ್ಳುತ್ತಾರೆ. ಇಂತಹ ರೇಸಿಸ್ಟ್ ಕಮೆಂಟುಗಳಿಂದ ನನಗಾದ ಅಸಹನೆಯನ್ನು ನಾನು ಕೊಂಚ ತೋರಿಸಿಕೊಂಡಲ್ಲಿ ‘ಹೇ ನಾವಿಲ್ಲಿ ರೇಸ್ ಬಗ್ಗೆ ಮಾತಾಡುತ್ತಿಲ್ಲ, ಡಾಕ್ಟರ್. ಇಂಗ್ಲಿಶನ್ನು ಕಲಿಯದೇ ಇರುವ ಕಾರಣ ಆಗುವ ಅನನುಕೂಲ ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಮತ್ತು ದುಭಾಷಿಗಳಿಗೆ ಕೊಡಬೇಕಾದ ಸಂಬಳದಿಂದ ಆಸ್ಪತ್ರೆಗೆ ಹಾಗೂ ತೆರಿಗೆದಾರನಿಗಾಗುವ ಖರ್ಚನ್ನಷ್ಟೇ ಗಮನದಲ್ಲಿಟ್ಟುಕೊಂಡರೂ ಇದು ಸರಿ ಅನ್ನಿಸುವುದಿಲ್ಲ ಅಲ್ಲವೇ ಅಂದು ‘You do not worry doc, You are pretty much white’ ಎಂದು ನನ್ನನ್ನು ಸಮಾಧಾನಪಡಿಸಿಯೂ ಇದ್ದಾರೆ. ನಾನು ನಕ್ಕು ನನ್ನ ಕೆಲಸವನ್ನು ಮುಂದುವರೆಸುತ್ತಾ, ನನ್ನ ವೃತ್ತಿಯ ವತಿಯಿಂದ ನನ್ನ ಬಣ್ಣಕ್ಕೆ ದೊರೆತಿರುವ ‘ಟೂ ಶೇಡ್ ಲೈಟ್’ ಅನ್ನು ಕೊಂಚ ಖುಷಿಯಿಂದಲೇ ಸ್ವೀಕರಿಸಿದ್ದೇನೆ.

ಆದರೆ, ಅಂದು ಮಧ್ಯಾಹ್ನ ಹನ್ನೆರಡಾದರೂ ಇಡೀ ಜಗತ್ತೇ ಮಾತಾಡುತ್ತಿರುವ ಈ ಚಾರಿತ್ರಿಕ ವಿಜಯದ ಬಗ್ಗೆ ಹಾಹೂ ಎಂದೂ ಅನ್ನದಿದ್ದಾಗ ನಾನು ಕೆಲಸ ಮಾಡುತ್ತಿರುವುದು ಇಂತಾ ರೆಡ್‌ನೆಕ್‌ಗಳ ಜತೆಗಾ ಅನ್ನುವ ಅನುಮಾನ ಜಾಸ್ತಿಯಾಗುತ್ತಾ ಹೋಗಿತ್ತು. ಇಡೀ ಜಗತ್ತೇ ಸಂಭ್ರಮಿಸುತ್ತಿದೆ ಅನ್ನುವ ಮತ್ತು ಟೀವಿ ಚಾನೆಲ್‌ಗಳ ಬಿತ್ತರಿಕೆ ಬರೀ ಭ್ರಮೆಯಾ ಅನ್ನಿಸಿತ್ತು.

ಸಂಜೆ ಏಳುಗಂಟೆಗೆ ಪಾಳಿಬದಲಿಸುವ ಸಮಯ. ಆಗತಾನೇ ಬಂದ ನರ್ಸೊಬ್ಬಳು ತನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತಲೇ ಇದ್ದಳು. ಆದರೆ, ನನ್ನನ್ನು ಕಾಡಿದಂತೆ ಅವಳಿಗೂ ಈ ಸೂತಕದ ವಾತಾವರಣ ಕಾಡಿತೇ ಗೊತ್ತಿಲ್ಲ-ಒಂದೈದು ನಿಮಿಷ ತಡೆಯುವಷ್ಟು ತಡೆದು- ‘ವೆಲ್, ನಾನು ಬಂದಂದಿನಿಂದ ನೋಡುತ್ತಲೇ ಇದ್ದೇನೆ. ಯಾರೂ ಏನೂ ಮಾತಾಡುತ್ತಿಲ್ಲ. ನಾನೇ ಮಾತಾಡುತ್ತೇನೆ. ನಾನು ಶಿಕಾಗೋದವಳು. ಒಬಾಮ ಗೆದ್ದಿದ್ದಾನೆ. ಅಷ್ಟಕ್ಕಾದರೂ ಖುಷಿಪಡಲೇಬೇಕು ಅಂದವಳೇ ‘ಒಬಾಮ, ಒಬಾಮ..’ ಎಂದು ತನ್ನ ವಿಜಯದ ಸೂಚಕದಂತೆ ಒಂದು ಸಣ್ಣ ಟ್ವಿಸ್ಟ್ ಅನ್ನು ಮಾಡಿ, ‘ಹುರ್ರೇ’ ಅಂದು ನನಗೆ ಹೈಫೈ ಮಾಡಿ ಮತ್ತೆ ತನ್ನ ಕೆಲಸದಲ್ಲಿ ನಿರತಳಾದಳು.

ನಾನು ನೋಡಿದ ಈ ಒಂದು ಪ್ರಹಸನ ಇಡೀ ಅಮೆರಿಕಾವನ್ನು ಪ್ರತಿನಿಧಿಸುತ್ತದೆ ಎಂದು ಹೇಳುವುದು ಸರಿಯಲ್ಲವೇನೋ? ಹೀಗೇಕೆ? ಎಂದು ಒದ್ದಾಡುತ್ತಿದ್ದ ನನ್ನ ತಳಮಳವನ್ನರಿತುಕೊಂಡಂತೆ ಆ ಸಂಜೆ ಆ ನರ್ಸು ಹೇಳಿದಳು. ‘ಒಬಾಮಾ ಗೆದ್ದುದಕ್ಕೆ ಬಹಳ ಮಂದಿ ನಿಜವಾಗಿಯೂ ಖುಷಿಪಟ್ಟಿದ್ದಾರೆ. ಒಬಾಮಾ ಅನ್ನುವುದು ಒಂದು ಶಕ್ತಿಯಾಗಿ ಈ ಚುನಾವಣೆಯಲ್ಲಿ ಹೊರಬಂದಿದೆ. ಈ ದೇಶ ಕರಿ ಮತ್ತು ಬಿಳಿ ಎಂದು ಧ್ರುವೀಕೃತವಾದಷ್ಟು ಬೇರೆ ಎಲ್ಲಿಯೂ ಆಗಿಲ್ಲ. ಜೆಸ್ಸಿ ಜ್ಯಾಕ್‌ಸನ್ ನೋಡು. ತನ್ನ ಕರಿಯ ಓಟುಗಳ ಬೆಂಬಲದಿಂದಲೇ ಗೆಲ್ಲುತ್ತೇನೆ ಎಂದು ತಿಳಿದು ಅದನ್ನೇ ತನ್ನ ಪ್ರಚಾರದ ಅಸ್ತ್ರವಾಗಿ ಮಾಡಿಕೊಂಡಿದ್ದ. ಹ್ಯಾಲಿ ಬೆರ್ರಿಗೆ ಆಸ್ಕರ್ ಬಂದರೆ ‘ಬಣ್ಣದ ಹುಡುಗಿ’ಯ ಯಶಸ್ಸಿದು ಎಂದು ಎಲ್ಲರೂ ಬೀಗುತ್ತಾರೆ. ಆದರೆ, ಒಬಾಮ ಹಾಗೆ ಮಾಡಲಿಲ್ಲ, ಎಂದೂ ತನ್ನ ಮೈಬಣ್ಣವನ್ನು ಚುನಾವಣಾ ಪ್ರಣಾಳಿಕೆಯಾಗಿ ಬಳಸಿಕೊಳ್ಳಲಿಲ್ಲ. ಹವಾಯಿಮೂಲದ ಅಮ್ಮ, ಕೀನ್ಯಾದ ಮೂಲದ ಅಪ್ಪ, ಅಪ್ಪ ಸತ್ತಾಗ ಅಮ್ಮ ಮದುವೆಯಾದದ್ದು ಇಂಡೊನೇಷ್ಯಾದ ಮೂಲದ ವಿದ್ಯಾರ್ಥಿಯೊಬ್ಬನನ್ನು. ‘ನಮ್ಮ ಮನೆಯ ಹಬ್ಬದೂಟಗಳು ವಿಶ್ವಸಂಸ್ಥೆಯ ಊಟದಮನೆಯನ್ನು ನೆನಪು ಮಾಡುತ್ತದೆ’ ಎಂದು ತನ್ನ ವೈವಿಧ್ಯ ‘ವರ್ಣರಂಜಿತ’ ಭೂತದ ಒಬಾಮಾನನ್ನು ಕಂಡು ಕರಿಯ ಪ್ರಜೆಗಳೂ ಈತ ತಮ್ಮ ಜನಾಂಗವನ್ನು ಪ್ರತಿನಿಧಿಸುವಷ್ಟು ಕರಿಯನೇ? (Is he black enough?)ಎಂದು ಅನುಮಾನ ಪಟ್ಟಿದ್ದೂ ನಿಜ. ಈಗ ಒಬಾಮಾನನ್ನು ಇಷ್ಟಪಡುವ ನಮಗೂ ಇವನ ಗೆಲುವಿನ ಬಗ್ಗೆ ಒಂದು ಚೂರೂ ಅನುಮಾನವಿಲ್ಲದವರಿಗೂ ಈಗ ದೇಶದ ಮೊದಲ ಕುಟುಂಬವಾಗಿ ಒಬ್ಬ ಕರಿಯಮನುಷ್ಯನನ್ನು ಒಪ್ಪಿಕೊಳ್ಳಲು ಕಣ್ಣುಗಳು ಏಕ್‌ದಂ ನಿರಾಕರಿಸುತ್ತವೆ. ಅವನ ಗಟ್ಟಿ ಉಚ್ಚಾರವನ್ನು ಕೇಳಲು ಕಿವಿಗಳು ನಿರಾಕರಿಸುತ್ತವೆ. ಬಯಸಿ, ಬಯಸಿ ಮನೆ ಬದಲಾಯಿಸಿದರೂ, ಮನೆಯನ್ನು ನಿನಗೆ ಬೇಕಾದ ಹಾಗೆ ಕಟ್ಟಿದ್ದರೂ ಮತ್ತು ಆ ಮನೆ ಕಟ್ಟುವುದು ಈಗ ತೀರ ಅವಶ್ಯಕ ಅನ್ನಿಸಿದ್ದರೂ ಆ ಮನೆಯಲ್ಲಿ ಇರುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ನೋಡು, ಹಾಗೆಯೇ, ಇದೂ ಕೂಡ. ಎಲ್ಲ ಸರಿಹೋಗುತ್ತದೆ, ನೋಡು’ ಎಂದಳು.

ಚುನಾವಣೆಯ ಮುಂಚಿದ್ದುದು ಈ ಚುನಾವಣೆಯನ್ನು ಒಬಾಮಾ ಗೆದ್ದಲ್ಲಿ ಇದೊಂದು ಚಾರಿತ್ರಿಕ ವಿಜಯವಾಗುತ್ತದೆ ಅನ್ನುವ ದೊಡ್ಡ ಕನಸು, ಹಂಬಲ. ರಿಪಬ್ಲಿಕನ್ನರ ಯುದ್ಧನೀತಿ ಮತ್ತು ಸೋತು ಸುಣ್ಣವಾಗಿದ್ದ ಅಮೆರಿಕಾದ ಆರ್ಥಿಕ ನೀತಿ ಬಯಸಿದ್ದು ಬದಲಾವಣೆಯನ್ನು. ಈ ಬದಲಾವಣೆಗೆ ಒಬಾಮಾ ಮಾದರಿಯಾಗಿ ಕಂಡದ್ದು ಆಶ್ಚರ್ಯವೇನೂ ಅಲ್ಲ. ಯಾವುದೇ ರೀತಿ ನೋಡಿದರೂ ಮೆಕೇನ್ ಒಬಾಮಾನಿಗಿಂತಲೂ ಮುತ್ಸದ್ದಿ ರಾಜಕಾರಣಿ ಅನ್ನುವುದರಲ್ಲಿ ಸಂಶಯವಿರಲಿಲ್ಲ. ಆದರೆ, ತನ್ನ ಅಸ್ಖಲಿತ ವಾಕ್ಚಾತುರ್ಯದಿಂದ ಮತ್ತು ಜನ ಬಯಸುತ್ತಿರುವ ‘ಬದಲಾವಣೆ’ಯ ಪ್ರತಿನಿಧಿಯಾಗಿ ತನ್ನ ಚುನಾವಣಾ ಪ್ರಣಾಳಿಕೆಗಳ ಅನನ್ಯತೆಯಿಂದ ಒಬಾಮಾ ಗೆದ್ದ.

ಒಬಾಮಾ ಚುನಾವಣೆಯಲ್ಲಿ ಗೆದ್ದಿದ್ದು ಒಂದು ದೊಡ್ಡ ಬಜೆಟ್ ಸಿನೆಮಾ ತನ್ನೆಲ್ಲ ಪ್ರಚಾರತಂತ್ರಗಳನ್ನುಳಿಸಿಕೊಂಡು ಬಿಡುಗಡೆಗೆ ಸಿದ್ಧವಾದಂತೆ ಇತ್ತು. ರಾಜಕೀಯ ಪಂಡಿತರ ಪ್ರಕಾರ ಈತನ ಈವರೆಗಿನ ರಾಜಕೀಯ ಸಾಧನೆಗಳು ಹೇಳಿಕೊಳ್ಳುವಂತದ್ದೇನೂ ಇಲ್ಲದಿದ್ದರೂ, ಚುನಾವಣೆಯನ್ನು ಗೆಲ್ಲಲು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದ. ಈತನ ಚುನಾವಣಾಪ್ರಣಾಳಿಕೆಗಳು ಮತ್ತು ಚುನಾವಣೆಯನ್ನು ಗೆಲ್ಲುವ ಪ್ರಚಾರಕ್ರಿಯೆ ಗೆದ್ದಿದೆ. ಬರೇ ಗೆಲ್ಲುವುದಷ್ಟೇ ಸಾಧನೆಯಾಗಿದ್ದ ಕಾಲ ಮುಗಿದಿದೆ. ಒಂದು ಚರಿತ್ರೆಯನ್ನು ಮಾಡಿಯಾಗಿದೆ. ಚುನಾವಣೆ ಗೆದ್ದನಂತರದ ತನ್ನ ಶಿಕಾಗೋದಾ ಭಾಷಣದಲ್ಲಿ ‘ತನ್ನ ಗುರಿ ಮುಟ್ಟಲು ಒಂದು ವರ್ಷ ಆಗಬಹುದು, ತನ್ನ ಆಡಳಿವತಾವಧಿ ಪೂರಾ ಬೇಕಾದರೂ ಬೇಕಾಗಬಹುದು, ಅಥವಾ ಇನ್ನೊಂದು ಬಾರಿ ಅಧಿಕಾರಕ್ಕೆ ಬರಬೇಕಾದರೂ ಪರವಾಗಿಲ್ಲ. ಆದರೆ, ಗುರಿ ಸಾಧಿಸುವುದು ಮಾತ್ರ ಗ್ಯಾರಂಟಿ’ ಎಂದಿದ್ದ ಒಬಾಮಾ. ಅಧಿಕಾರಕ್ಕೆ ಬಂದ ಹದಿನಾರು ತಿಂಗಳಲ್ಲಿ ಇರಾಕಿನಿಂದ ಅಮೆರಿಕಾದ ಸೇನೆಯನ್ನು ವಾಪಸ್ಸು ಕರೆಸಿಬಿಡುತ್ತೇನೆ ಅಂದಿದ್ದಾತ ಈಗ ‘ಆ ಪ್ರಕ್ರಿಯೆಯನ್ನು ಸ್ವಲ್ಪ ರೀಫೈನ್ ಮಾಡಬೇಕಾಗಿದೆ’ ಎಂದು ಜಾಣತನದಿಂದ ಫೀಲ್ಡಿಗಿಳಿದ ರಾಜಕಾರಣಿಯಂತೆ ಮಾತಾಡಿದ್ದ.

ಒಬಾಮಾನ ಮುಂದಿರುವ ಸವಾಲು ಕಠಿಣವಾದದ್ದು ಅನ್ನುವುದರಲ್ಲಿ ಅನುಮಾನವೇನಿಲ್ಲ. ದೊಡ್ಡ ದೊಡ್ಡ ಬ್ಯಾಂಕುಗಳ ಕುಸಿತ, ರಿಯಲ್ ಎಸ್ಟೇಟ್ ಸೋಲು, ಸತ್ತ ಕುದುರೆಗೆ ಛಡಿ ಬಡಿದಂತೆ ಬಡಿದು ಉದ್ದೀಪಿಸಲು ಉತ್ತೇಜನಾ ಪ್ಯಾಕೇಜ್ ಅನ್ನು ಉಪಯೋಗಿಸಲು ಪ್ರಯತ್ನ ಪಡುತ್ತಿರುವ ಕಾರ್ ಕಂಪೆನಿಗಳು, ದಿನೇದಿನೇ ಹೆಚ್ಚಾಗುತ್ತಿರುವ ನಿರುದ್ಯೋಗ, ಈ ಉತ್ತೇಜನಾ ಪ್ಯಾಕೇಜಿನ ದುರುಪಯೋಗ ಮುಂತಾದುವುಗಳಿಂದ ಅಮೆರಿಕಾ ಬಸವಳಿದಿದೆ.

ಆದರೆ, ಈಗ ಸಿನೆಮಾ ಬಿಡುಗಡೆಯಾಗಿದೆಯಷ್ಟೇ. ಇದು ಅಂತಿಂತ ಸಿನೆಮಾ ಅಲ್ಲ. ವರ್ಣರಂಜಿತ ದೊಡ್ಡ ಬಜೆಟ್ ಸಿನೆಮಾ. ಸಿನೆಮಾದ ಯಶಸ್ಸನ್ನು ಕಾದುನೋದಬೇಕಷ್ಟೇ. ಈಗ ಈ ಒಬಾಮಾನ ‘ಉತ್ತೇಜನಾ ಪ್ಯಾಕೆಜ್’ಗೆ ಸಿಕ್ಕಿರುವ ಪ್ರತಿಕ್ರಿಯೆ ನಮ್ಮ ಗಾಂಧಿನಗರದ ನಿರ್ಮಾಪಕರು ‘ಅಮೋಘ ಎರಡನೇ ವಾರ’ ಎಂದು ಹೇಳಿಕೊಳ್ಳುವ ಸಿನೆಮಾದ ಯಶಸ್ಸಿನ ಮಾಪಕದಂತೆಯೇ ಇದೆ. ಯಾರಿಗೂ ಯಾವುದೂ ಸ್ಪಷ್ಟವಿಲ್ಲ.

ಒಬಾಮ ಎಂತಹ ಆಡಳಿತಗಾರ ಅನ್ನುವುದು ಅಷ್ಟು ಸ್ಪಷ್ಟವಾಗಿಲ್ಲದಿರಬಹುದು. ಆದರೆ ಆತ ಚಾಣಾಕ್ಷ ರಾಜಕಾರಣಿಯೆನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲದಿದ್ದರೆ ಸ್ಟೇಟ್ ಸೆನೆಟರ್ ಆದ ಕೆಲವೇ ವರ್ಷಗಳಲ್ಲಿ ಅಮೆರಿಕಾದಂತ ದೇಶದ ಅಧ್ಯಕ್ಷನಾಗುವುದು ಅಷ್ಟು ಸುಲಭವಲ್ಲ. ಆದರೆ, ಅವನ ಗೆಲುವು ಸೋಲುಗಳು ಅವನ ಬಣ್ಣದಿಂದ ನಿರ್ಧರಿತವಾಗದಿರುವುದರ ಮೇಲೆ ಅಮೆರಿಕದ ಪ್ರಜಾತಂತ್ರದ ಮತ್ತು ವರ್ಣಸಹಿಷ್ಣುತೆಯ ಗೆಲುವಿದೆ.

ಸಿನೆಮಾ ಬಿಡುಗಡೆಯಾದಾಗ ಯಶಸ್ಸಿನ ಬಗ್ಗೆ ಅನುಮಾನವಿದ್ದರೂ ಬಿಡುಗಡೆಯಾದ ದಿನದ ಸಂಭ್ರಮಕ್ಕೆ, ಖುಷಿಗೆ ಬರವೇ?

Sunday, March 8, 2009

ಹೆರೊಯಿನ್, ಗೇಮ್ ಶೋ ಮತ್ತು ಪ್ರಶಸ್ತಿ.

ಮಾದಕವಸ್ತುಗಳ ವ್ಯಸನಿಯಾತ. ಆತನೇನು, ಅದೊಂದು ರೀತಿಯ ಕಲ್ಟ್. ತೊಂಭತ್ತರ ದಶಕದಲ್ಲಿ ಹೆರೊಯಿನ್ ಅನ್ನುವ ‘ವಸ್ತು’ವಿಗೆ ವ್ಯಸನಿಗಳಾದವರು ಎಷ್ಟು ಮಂದಿಯೋ. ಇದಕ್ಕಾಗಿ ಅವರು ತಮ್ಮ ಮನೆ ಮಠ ಕಳಕೊಳ್ಳುತ್ತಾರೆ, ಅತಿ ಹೀನವಾದ ಕಳ್ಳತನಗಳನ್ನು ಮಾಡುತ್ತಾರೆ. ಕಾನೂನನ್ನು ಮುರಿಯುವುದು ಚಟವಾಗುತ್ತದೆ. ವ್ಯಸನವೆಂಬುದೇ ವ್ಯಸನವಾಗುತ್ತದೆ. ಕೊನೆಗೆ, ಒಂದು ದಿನ ತನ್ನ ವ್ಯಸನದಿಂದ ‘ಕೋಲ್ಡ್ ಟರ್ಕಿ’ ಮುಕ್ತವಾಗಲು ಆತ ಪ್ರಯತ್ನಿಸುತ್ತಾನೆ. ಆದರೆ ಅಷ್ಟು ದಿನ ಈ ವಸ್ತುಗಳಿಗೆ ಒಗ್ಗಿದ್ದ ಆ ದೇಹಕ್ಕೆ ಮತ್ತೆ ಮತ್ತೆ ಹೆರೊಯಿನ್ ಬೇಕೆನಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಅವನ ಕೂದಲು ನಿಮಿರುತ್ತದೆ, ಆಕಳಿಕೆ, ಹೊಟ್ಟೆಯಲ್ಲಿ ಸಂಕಟ, ಕಣ್ಣಲ್ಲಿ ನೀರು, ಮೈಕೈ ನೋವು.. ಮತ್ತು ಬೇಧಿ. ಆಗ ಅವನ ಇನ್ನೊಬ್ಬ ಗೆಳೆಯ ಈತನ ಕಷ್ಟ ನೋಡಲಾರದೇ ಓಪಿಯಮ್‌ನ ಎರಡು ಸಪಾಸಿಟರಿ (ಮಲದ್ವಾರದ ಮೂಲಕ ಇಟ್ಟುಕೊಳ್ಳುವ ಔಷಧಿ) ಯನ್ನು ಕೊಡುತ್ತಾನೆ. ಈತ ಅದನ್ನು ಸಮರ್ಪಕವಾಗಿ ಉಪಯೋಗಿಸುತ್ತಾನೆ, ಕೂಡ. ಆದರೆ ಬೇಧಿಯನ್ನು ತಡಕೊಳ್ಳಲಾರದೇ ಅಲ್ಲಿಯೇ ಇದ್ದ ಟಾಯ್ಲೆಟ್ಟೊಂದಕ್ಕೆ ನುಗ್ಗುತ್ತಾನೆ. ಅದು ಇಡೀ ಎಡಿನ್‌ಬರೋ ಪ್ರಾಂತ್ಯದಲ್ಲಿಯೇ ಇರುವ ಅತೀ ಹೊಲಸು ಟಾಯ್ಲೆಟ್ಟು. ಗೋಡೆ, ನೆಲವೆಲ್ಲಾ ಮಲದಿಂದ ಗಲೀಜು. ಒಳಗೆ ಹೋದರೆ ವಾಕರಿಕೆ ಬರುವಷ್ಟು ಅಸಹ್ಯ. ಅಲ್ಲಿ ತನ್ನ ಕೆಲಸ ಪೂರೈಸಿದ ಮೇಲೆ ಗೊತ್ತಾಗುತ್ತದೆ, ಆತನಿಗೆ ತಾನು ಬೇಧಿಯೊಂದಿಗೆ ಕಳಕೊಂಡದ್ದು ತನ್ನ ಸಪಾಸಿಟರಿಗಳನ್ನು ಕೂಡ ಎಂದು. ತಕ್ಷಣ ಏನೂ ಯೋಚಿಸದೇ ಆ ಮಲದಿಂದ ತುಂಬಿರುವ ಆ ಟಯ್ಲೆಟ್ ಬೌಲಿನಲ್ಲಿ ಇಳಿದು ಈಜುತ್ತಾ ತನ್ನ ಸಪಾಸಿಟರಿಯನ್ನು ತೆಗೆದುಕೊಂಡು ನಿಧಿ ಸಿಕ್ಕಷ್ಟೇ ಖುಷಿಯಿಂದ ‘ನೌ ಐ ಅಮ್ ರೆಡಿ’ ಅನ್ನುತ್ತಾನೆ. ಆತನ ಅಂಗಾಂಗವೆಲ್ಲವೂ ‘ಶೈಟ್ಸ್’

ಇದು ೧೯೯೬ರಲ್ಲಿ ಬಿಡುಗಡೆಯಾದ ‘ಟ್ರೈನ್‌ಸ್ಪಾಟಿಂಗ್’ ಎನ್ನುವ ಈ ಚಿತ್ರದ ಒಂದು ದೃಶ್ಯ. ಇವಾನ್ ಮೆಕ್‌ಗ್ರಿಗರ್ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕ ಸ್ಲಮ್‌ಡಾಗ್ ಖ್ಯಾತಿಯ ಡ್ಯಾನಿ ಬೊಯ್ಲ್. ಈ ಚಿತ್ರ ಬ್ರಿಟಿಶ್ ಫಿಲ್ಮ್ ಸೊಸೈಟಿಯಿಂದ ಸಾರ್ವಕಾಲಿಕ ಶ್ರೇಷ್ಠ ೧೦೦ ಬ್ರಿಟಿಶ್ ಸಿನೆಮಾಗಳಲ್ಲಿ ಒಂದು ಎಂದು ದಾಖಲೆಯಾಗಿದೆ.

ಇದೇ ಡ್ಯಾನಿ ಬೊಯ್ಲ್‌ನ ಸ್ಲಮ್ ಡಾಗ್ ಮಿಲಿಯೇನರ್ ಚಿತ್ರದಲ್ಲಿ ಒಬ್ಬ ಕೊಳೆಗೇರಿಯ ಹುಡುಗ ಅಮಿತಾಬ್ ಬಚ್ಚನ್‌ನನ್ನು ನೋಡುವ ಮತ್ತು ಆತನ ಒಂದು ಹಸ್ತಾಕ್ಷರವನ್ನು ಪಡೆಯುವ ಸಲುವಾಗಿ ತಾನು ಕೂತಿದ್ದ ಮಲದ ಗುಂಡಿಯ ಹೊಲಸಲ್ಲಿ ಹಾರಿ ಮೈಯೆಲ್ಲಾ ಮಲವಾದರೂ ಅದನ್ನು ಲೆಕ್ಕಿಸದೇ ಸೀದಾ ಹಾಗೆಯೇ ಹೋಗಿ ಅಮಿತಾಬನ ಹಸ್ತಾಕ್ಷರವನ್ನು ಪಡೆದು ಧನ್ಯೋಸ್ಮಿ ಅನ್ನುತ್ತಾನೆ.

ಇಂಥ ಚಿತ್ರಕ ದೃಶ್ಯಗಳು ಕಲೆಗೆ, ಚಿತ್ರದ ಆಶಯಕ್ಕೆ ಪೂರಕವಾಗಿದೆ ಅನ್ನಿಸದೇ ಬಲವಂತವಾಗಿ ತುರುಕಲಾಗಿದೆ ಅನ್ನಿಸಿದರೆ ಅಲ್ಲಿಗೆ ನಿರ್ದೇಶಕ ಸೋಲುತ್ತಾನೆ. ಟ್ರೈನ್‌ಸ್ಪಾಟಿಂಗ್‌ನ ಹಸಿಹಸಿ ಕಾಮಕೇಳಿಗಳೂ, ಅಲ್ಲಿಯ ಪಾತ್ರಗಳ ಭಾಷೆ, ಮಾದಕ ವಸ್ತುಗಳನ್ನು ನೇರ ನಾಡಿಗೇ ಶೂಟ್ ಮಾಡಿಕೊಳ್ಳುವ ಈ ಜಂಕಿಗಳ ಕೊಳಕು ಸಿರಿಂಜು ಮತ್ತು ಸೂಜಿಗಳು, ಅವರ ಅಜಾಕರೂಕತೆಯಿಂದ ಸಾಯುವ ಅವರದೇ ಯಾರದೋ ಒಂದು ಮಗು -ಇವೆಲ್ಲ ಅವರ ಬದುಕಿನ ಒಂದು ಭಾಗ. ವ್ಯಸನವೇ ಮುಖ್ಯವಾದವನಿಗೆ ದಿನಾ ಬೆಳಿಗ್ಗೆ ಯಾಕೆ ಏಳಬೇಕು ಅಂದರೆ ಮತ್ತೊಂದು ಶಾಟ್ ಹೆರೊಯಿನ್‌ಗೆ ಅನ್ನುವುದೇ ಸತ್ಯ. ಸಾಮಾನ್ಯ ಮನುಷ್ಯನಿಗೆ ಅಸಹ್ಯ ತರುವ ಈ ದೃಶ್ಯಗಳು ಆ ಜಂಕಿಗಳ ಜಗತ್ತಿನ ದೈನಿಕ. ನಿರ್ದೇಶಕ ಆದಷ್ಟೂ ವಾಸ್ತವಕ್ಕೆ ಬದ್ಧನಾಗಲು ಪ್ರಯತ್ನಿಸಿದ್ದಾನೆ.

ಟ್ರೈನ್‌ಸ್ಪಾಟಿಂಗ್ ಪ್ರಾಯಶಃ ಸ್ಲಮ್‌ಡಾಗಿಗಿಂತ ಉತ್ತಮ ಚಿತ್ರ, ಆದರೆ ಅದನ್ನು ನೋಡುವುದಕ್ಕೆ ಬೇರೆಯೇ ಮನಸ್ಥಿತಿ ಬೇಕು. ಸ್ಲಮ್‌ಡಾಗ್ ಚಿತ್ರದಲ್ಲಿ ಮಲದಲ್ಲಿ ಬಿದ್ದ ಹುಡುಗನ ನೋಡಿದಾಗ ಒಂದು ಕ್ಷಣ ‘ಶೀ’ ಅನಿಸಿದರೂ ನಂತರವೇ ಇಡೀ ಸನ್ನಿವೇಶದ ಮುಗ್ಧತೆ ಮನಸ್ಸಿಗೆ ಪರಿಣಾಮಕಾರಿಯಾಗಿ ತಟ್ಟುತ್ತದೆ. ಅದೇ ಟ್ರೈನ್‌ಸ್ಪಾಟಿಂಗ್‌ನಲ್ಲಿ ಮಲದಲ್ಲಿ ಬಿದ್ದ ವ್ಯಸನಿಯನ್ನು ನೋಡಿ ಅಸಹ್ಯವಾಗುತ್ತದೆ. ಆದರೆ ಆ ವ್ಯಸನಿಗೆ ಅದು ಅನಿವಾರ್ಯ. ಹೆಚ್ಚು ಕಮ್ಮಿ ಒಂದೇ ಸನ್ನಿವೇಶವನ್ನು ಬೇರೆಬೇರೆ ರೀತಿಯಲ್ಲಿ ಆತ್ಯಂತಿಕವಾಗಿ ಉಪಯೋಗಿಸಿಕೊಂಡಿರುವುದು ನಿರ್ದೇಶಕನ ಜಾಣತನವನ್ನು ತೋರುತ್ತದೆ. ಇಲ್ಲಿ ಇಂಗ್ಲೆಂಡ್ ಭಾರತಗಳು ಸಾಂದರ್ಭಿಕ ಅಷ್ಟೇ.

ಈಗ ಸ್ಲಮ್ ಡಾಗ್ ಎಂಟು ಆಸ್ಕರ್‍ಗಳನ್ನು ಪಡೆದು ಈ ವರ್ಷದ ಅತ್ಯುತ್ತಮ ಚಿತ್ರ ಎಂದು ಹೇಳಲ್ಪಟ್ಟಿದೆ. ಪಶ್ಚಿಮದ ಮಾಧ್ಯಮಗಳು ಈ ಚಿತ್ರವನ್ನು ಹಾಡಿ ಹೊಗಳಿವೆ. ಡ್ಯಾನಿ ಬಾಯ್ಲ್, ಅನಿಲ್ ಕಪೂರ್, ದೇವ್ ಪಟೇಲ್ ಮತ್ತು ಫ್ರೀಡಾರಿಗೆ ಸಂದರ್ಶನ ಕೊಟ್ಟು ಸಾಕಾಗಿದೆ. ಕೊಳೆಗೇರಿಯ ಮಕ್ಕಳು ಲಾಸ್ ಏಂಜಲೀಸ್‌ಗೆ ಹೋಗಿ ರೆಡ್ ಕಾರ್ಪೆಟ್ ಮೇಲೆ ನಡೆದಾಗಿದೆ. ರಹಮಾನ್ ‘ಜೈ ಹೋ’ ಎಂದಿದ್ದಾನೆ.

ಇಂಡಿಯಾದ ಮಾಧ್ಯಮಗಳು ಅಷ್ಟೊಂದೇನೂ ಉದಾರವಾಗಿಲ್ಲ, ಕೊಳೆಗೇರಿಯ ಜೀವನವನ್ನು ವೈಭವೀಕರಿಸಿ ಭಾರತದ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ ಎಂದು ಆಕ್ಷೇಪಣೆ ತೆರೆಯಲಾಗಿದೆ. ರಾಷ್ಟ್ರಿಯಾತಾವಾದಿಗಳು ಇದು ಅಪ್ಪಟ ದೇಶದ್ರೋಹ ಎಂದಿದ್ದಾರೆ. ಶ್ಯಾಮ್ ಬೆನೆಗಲ್ ಕೂಡ ‘ನಾನು ಗಾಂಧಿಯನ್ನು ಕುರಿತು ಚಿತ್ರ ಮಾಡಿದ್ದೆ. ನನಗೆ ಒಂದೂ ಆಸ್ಕರ್ ಸಿಗಲಿಲ್ಲ. ಗಾಂಧಿಯ ಬಗ್ಗೆ ಚಿತ್ರ ಮಾಡಿದ ಆಟೆನ್‌ಬರೋಗೆ ಸಿಕ್ಕ ಆಸ್ಕರ್‍ಗಳನ್ನು ನೋಡಿ’ ಎಂಬಂತ ಹೇಳಿಕೆಗಳನ್ನು ಇದೇ ಸಂದರ್ಭದಲ್ಲಿ ಕೊಟ್ಟಿದ್ದಾನೆ.

ಇದು ಹೊರಗಿನವರ ಚಿತ್ರ. ಡ್ಯಾನಿ ಬೊಯ್ಲ್ ಮತ್ತು ದೇವ್ ಪಟೇಲ್ ಇಬ್ಬರೂ ಬ್ರಿಟಿಷ್ ಪ್ರಜೆಗಳು. ಬರೆದ ವಿಕಾಸ್ ಸ್ವರೂಪ್ ಪ್ರೆಟೋರಿಯಾದಲ್ಲಿರುವ ಭಾರತೀಯ ಹೈ ಕಮಿಷನರ್. ಇಲ್ಲಿನ ತಂತ್ರಜ್ಞರೂ ಹೊರಗಿನವರೇ. ನಮ್ಮ ರಹಮಾನ್ ಮತ್ತು ಇತರೇ ತಂತ್ರಜ್ಞರು ಇನ್ನೂ ಒಳ್ಳೆ ಕೆಲಸವನ್ನು ಬೇರೆ ಚಿತ್ರಗಳಲ್ಲಿ ಮಾಡಿದ್ದಾರೆ. ಆದರೆ, ಬೇರೆಯೇ ಕಾರಣಗಳಿಂದ ಅವರುಗಳಿಗೆ ಈ ಜಾಗತಿಕ ಪ್ರಶಸ್ತಿ ಸಿಕ್ಕಿದೆ. ಹೊರಗಿನ ನೋಟ ಹೊರಗಿನವರಿಗೆ ಇಷ್ಟವಾಗಿದೆ ಆದ್ದರಿಂದ ಹೊರಗಿನವರು ಕೊಡುವ ಆಸ್ಕರ್ ಪ್ರಶಸ್ತಿಯೂ ಇದಕ್ಕೆ ಸಿಕ್ಕಿದೆ ಅನ್ನುವುದೂ ಒಂದು ವಾದ.

ಆದರೆ, ಟ್ರೈನ್‌ಸ್ಪಾಟಿಂಗ್‌ಗೆ ಯಾಕೆ ಇಂಥ ಪ್ರಶಸ್ತಿಗಳು ಬರಲಿಲ್ಲ, ಬರುವುದೂ ಇಲ್ಲ. ಯಾಕೆಂದರೆ, ಸ್ಲಮ್‌ಡಾಗಿನಲ್ಲಿರುವ ಜೋಪಡಿಯ ಹುಡುಗನೊಬ್ಬ ಕೋಟ್ಯಾಧಿಪತಿಯಾಗುವ ಫೀಲ್‌ಗುಡ್ ಅಂಶ ಇಲ್ಲಿಲ್ಲ. ಟ್ರೈನ್‌ಸ್ಪಾಟಿಂಗ್ ಕಟು ವಾಸ್ತವವಾದಿ ಚಿತ್ರ.
ಈ ಹೊತ್ತಿನಲ್ಲಿ ನನಗೆ ನೆನಪಿಗೆ ಬರುವುದು ಲಂಕೇಶರ ‘ಅಕ್ಕ’ ಇದು ಕ್ಯಾತ ಅಥವಾ ಕೃಷ್ಣ ಅನ್ನುವ ಕೊಳೆಗೇರಿಯ ಹುಡುಗ ಮುಂದೊಂದು ದಿನ ಹೇಳಿಕೊಳ್ಳುವ ತನ್ನದೇ ಕತೆ. ಲಂಕೇಶರ ಕಾದಂಬರಿಯ ಪಾತ್ರಗಳಾದ ದೇವೀರಿ, ಪದ್ದಿ, ಖಡವಾ, ನಾಗ್ಯಾಗಳಿಗೆ ಸ್ಲಮ್‌ಡಾಗ್‌ನ ಜಮಾಲನಂತೆ ಮಹತ್ತರವಾದ ಆಕಾಂಕ್ಷೆಗಳಿದ್ದರೂ ಇಲ್ಲಿಂದ ಮುಕ್ತಿಯೇ ಇಲ್ಲ. ಅದಕ್ಕೆ ದಾರಿಗಳೂ ಇಲ್ಲ. ಹಾಗೆಯೇ ಕೊಳೆಗೇರಿಯ ಇನ್ನೊಂದು ಚಿತ್ರಣ ಕನ್ನಡದ ‘ಸ್ಲಮ್ ಬಾಲ’ ಅನ್ನುವ ಚಿತ್ರದಲ್ಲಿ ಯಥೋಚಿತವಾಗಿ ನಿರೂಪಣೆಯಾಗಿದೆ. ಅಗ್ನಿ ಶ್ರೀಧರರ ‘ದಾದಾಗಿರಿಯ ದಿನಗಳು’ ಪುಸ್ತಕದ ಕೆಲವು ಭಾಗಗಳನ್ನು ಆಧರಿಸಿ ನಿರ್ಮಿಸಿರುವ ಈ ಚಿತ್ರ ೨೦೦೮ರ ಬೆಂಗಳೂರಿನ ಕೊಳೆಗೇರಿಗಳ ಭೂಗತ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಕೊಳೆಗೇರಿಯಲ್ಲಿರುವ ರೌಡಿಗಳ ಬಗ್ಗೆ ಮತ್ತು ಅಲ್ಲಿಂದ ಹೊರಗೆ ಬರುವುದು ಎಷ್ಟು ದುಸ್ಸಾಧ್ಯ ಅನ್ನುವ ಬಗ್ಗೆ ಅಥವಾ ಅಲ್ಲಿನ ಕೂಪ ಎಷ್ಟು ಬಲವಾಗಿದೆ ಎಂತಲೇ ಹೇಳುತ್ತಾ‌ಇಂದಿನ ಕೊಳೆಗೇರಿಗಳೂ ಸಹ ಹೇಗೆ ಚದರಡಿಗೆ ಬೆಲೆ ಕೇಳುತ್ತಾ ಬೆಳೆದಿವೆ ಅನ್ನುವ ವಾಸ್ತವ ಚಿತ್ರಣ ಕೊಡುತ್ತದೆ. ಇವೂ ಕೂಡ ಟ್ರೈನ್‌ಸ್ಪಾಟಿಂಗ್‌ನಷ್ಟೇ ವಾಸ್ತವ. (ಸಿನೆಮ್ಯಾಟಿಕ್ ಅಂಶಗಳನ್ನು ನಾನು ಹೋಲಿಸುತ್ತಿಲ್ಲ)

ಸ್ಲಮ್‌ಡಾಗ್‌ನ ಕಲಾವಂತಿಕೆಯ ಬಗ್ಗೆ ಯಾವ ಸಂದೇಹ ಇಲ್ಲದಿದ್ದರೂ ಇದು ಮುಂದಿಡುವ ಒಬ್ಬ ಕೊಳೆಗೇರಿಯ ಹುಡುಗ ತನ್ನ ಬದುಕಿನಿಂದಲೇ ಈ ಸ್ಪರ್ಧೆಯನ್ನು ಯನ್ನು ಗೆಲ್ಲುವ ಪ್ರಶ್ನೆಗಳಿಗೆ ಉತ್ತರ ಹೇಳುವಷ್ಟು ವಿವೇಕವನ್ನು ಪಡೆದಿರುವ ಅಂಶ ಒಂದು ಧನಾತ್ಮಕ ಫ್ಯಾಂಟಸಿಯ ರೂಪಕವಾಗಬಹುದೇ ಹೊರತು ವಾಸ್ತವದಲ್ಲಿ ಅಲ್ಲ. ಇಂಥಾ ರೂಪಕಗಳ ಬಗ್ಗೆಯೂ ನಂಬಿಕೆ ಲಂಕೇಶರಿಗಾಗಲೀ ಅಗ್ನಿ ಶ್ರೀಧರ್‌ರಿಗಾಗಲೀ ಇಲ್ಲ. ಹಾಗಾಗಿ ಕೊಳೆಗೇರಿಗಳ ನೈತಿಕ ಸಾಮಾಜಿಕ ಅಥವಾ ದೈನಿಕದ ಉದ್ಧಾರದ ಕೆಲಸವನ್ನು ತಮ್ಮ ಕೃತಿಗಳು ಮಾಡುತ್ತವೆ ಅನ್ನುವ ನಂಬಿಕೆಯೂ ಅವರಿಗಿಲ್ಲ. ಟ್ರೈನ್‌ಸ್ಪಾಟಿಂಗ್ ಚಿತ್ರಿಸುವಾಗ ಪ್ರಾಯಶಃ ಡ್ಯಾನಿ ಬಾಯ್ಲ್‌ಗೂ ಇರಲಿಲ್ಲವೇನೋ. ಅವರ ಬದುಕನ್ನು ನಮ್ಮ ಮುಂದೆ ಇಡುವುದಷ್ಟೇ ಇವರ ಕೆಲಸ.

ಅನುಭವಜನ್ಯವಾಗಿ ಬರಲೀ ಅಥವಾ ಅದೊಂದು ಕಲ್ಪಿತ ಕಥೆಯಾಗಲೀ, ವಾಸ್ತವವಾದೀ ಲೇಖಕರುಗಳ/ನಿರ್ದೇಶಕರುಗಳ ಈ ಕ್ರೀಟಿಕಲ್ ಇನ್‌ಸೈಡರ್ ಗುಣ ಸ್ಲಮ್‌ಡಾಗ್ ಗಿರುವ ಒಂದು ಸಾಧ್ಯತೆಯನ್ನೇ ಅನುಮಾನದಿಂದ ನೋಡುತ್ತದೆ. ಇಲ್ಲಿ ಯಾವ ರೀತಿಯ ಸಿನೆಮ್ಯಾಟಿಕ್ ಜಸ್ಟೀಸ್‌ಗೆ ಜಾಗವಿಲ್ಲ. ಅಕ್ಕ ಕಾದಂಬರಿಯಲ್ಲಿ ಕ್ಯಾತ ಅನಾಥಾಶ್ರಮದ ಲೆಕ್ಕದ ಪುಸ್ತಕ ಮಾತ್ರ ಬರೆಯುತ್ತಾನೆ, ದೇವೀರಿ ಸೂಳೆಯಾಗುತ್ತಾಳೆ. ಪದ್ದಿ ಮೇಕಪ್ ಮಾಡಿಕೊಂಡು ಹೊಸಾ ಸಿನೆಮಾದ ಅವಕಾಶಕ್ಕಾಗಿ ಕಾಯುತ್ತಿದ್ದಾಳೆ. ಸ್ಲಮ್‌ಬಾಲ ತಾನು ನಂಬಿದ ಪೋಲೀಸ್ ಅಧಿಕಾರಿಯಿಂದಲೇ ಹತನಾಗುತ್ತಾನೆ. ಇಲ್ಲಿ ಕ್ಯಾತ ದೇವೀರಿಯರಿಗೆ ಕಾಮನೆಗಳು, ಆಕಾಂಕ್ಷೆಗಳು ಇವೆಯೇ ಹೊರತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯಾವುದೇ ಮಾರ್ಗವಿಲ್ಲ. ಪ್ರಾಯಶಃ ಅದು ವಾಸ್ತವ ಕೂಡ,

ಈಗ ನಾವು ಸ್ಲಂಡಾಗ್ ಮಿಲಿಯನೇರ್ ಅನ್ನು ನೋಡುತ್ತಿರುವುದೂ, ಕೊಂಡಾಡುತ್ತಿರುವುದೂ ಕೂಡ ಇಂಥದೇ ಒಂದು willing suspension of disbelief ನಲ್ಲಿಯೇ ಅಲ್ಲವಾ? ಅಥವಾ ಈ ಚಿತ್ರ ನಮ್ಮ ಮುಂದಿಡುವ ಇಚ್ಛಾಶಕ್ತಿ ಅಥವಾ ಹೋಪ್‌ಗೆ ನಿರ್ದೇಶಕನ ಅಥವಾ ಚಿತ್ರದ ಇತರೇ ಅವಗುಣಗಳನ್ನು ಮರೆಸಿಬಿಡುವ ಶಕ್ತಿ ಇದೆಯಾ?

ಅಥವಾ ಡ್ಯಾನಿ ಸರಿಯಾದ ಸಮಯದಲ್ಲಿ ಸರಿಯಾದ ಕಡೆ ಸರಿಯಾದ ಸಿನೆಮಾ ನಿರ್ಮಿಸುವ ಜಾಣನಾ?