Saturday, October 31, 2009

ಹಸ್ತಪ್ರತಿ ಓದುವ ಕಷ್ಟ.

ನಿನ್ನ ಫ.ಂಗ್ ಸ್ಕ್ರಿಪ್ಟನ್ನು ನಾನು ಓದೊಲ್ಲ.

ಸಿಂಪಲ್ಲಾಗಿ ಹೇಳ್ತಿದೀನಿ. ನಿನ್ನ ಫ..ಂಗ್ ಕತೇನ ನಾ ಓದೊಲ್ಲ. ಅರ್ಥ ಆಗ್ತಾ ಇದೇ ತಾನೇ? ತಪ್ಪು ತಿಳೀಬೇಡ. ಇದನ್ನು ಪರ್ಸನಲ್ ಆಗಿ ತಗೋಬೇಡ.

ಇದು ಅನ್ಯಾಯ ಅಂತ ಅನ್ನಿಸ್ತಾ ಇದೆಯಾ? ನಿನ್ನ ಕತೆ ಓದಿ ನನ್ನ ಅಭಿಪ್ರಾಯಾ ಹೇಳಿದರೆ ಬದಲಿಗೆ ಏನು ಮಾಡ್ತೀಯಾ? ನನ್ನ ಕಾರ್ ಒರೆಸ್ತೀಯಾ? ನನ್ನದೊಂದು ಒಳ್ಳೇ ಫೋಟೋ ತೆಗೀತೀಯಾ, ನನ್ನ ಪರವಾಗಿ ಕೋರ್ಟಲ್ಲಿ ಲಾಯರಾಗಿ ವಾದ ಮಾಡ್ತೀಯಾ ಅಥವಾ ನನ್ನ ಗಾಲ್‌ಬ್ಲಾಡರ್ ತೆಗೆಯೋ ಡಾಕ್ಟರಾ ನೀನು-ಇಂಥ ಫ..ಂಗ್ ಕೆಲಸಾನೆಲ್ಲ ನಿನ್ನ ಹತ್ರಾನೇ ಇಟ್ಕೋ.

ನೀನೊಬ್ಬ ತುಂಬಾ ಸ್ವೀಟಾದ ಮನುಶ್ಯ. ನಾವಿಬ್ಬರೂ ಒಟ್ಟಿಗೆ ಕೂತು ಸಾಹಿತ್ಯದ ಬಗ್ಗೆ ಹರಟೋದು, ಚರ್ಚಿಸೋದೂ ನನಗೂ ಖುಷಿಯೇ.
ಆದರೆ, ನಿನ್ನ ಈ ಫ..ಂಗ್ ಕತೇನ ಮಾತ್ರ ನಾ ಓದೊಲ್ಲ.

* * *
ಇಷ್ಟು ಹೊತ್ತಿಗೆ ‘ಇವನೊಬ್ಬ ಆ..ಹೋಲ್.’ ಅಂತ ನೀನು ನನ್ನ ರೂಮಿಂದ ಹೊರಗೆ ಹೋಗಿರಬೇಕು. ಆದರೆ, ಒಬ್ಬ ಮನುಷ್ಯನಾಗಿ ಬೆಳೆಯೋಕೆ ನಿನಗೆ ಇಷ್ಟ ಇದ್ದಲ್ಲಿ ಮತ್ತು ನಾನಲ್ಲ ಆ..ಹೋಲ್. ನೀನು’ ಅಂತ ನೀನು ತಿಳಕೋಬೆಕಾದರೆ ಕೆಳಗಿದನ್ನು ಓದು.

ಇತ್ತೀಚೆಗೆ ನನಗೆ ಅಷ್ಟೇನೂ ಪರಿಚಯವಿರದ ಒಬ್ಬಾತ ಎಲ್ಲೋ ತಗಲ್ಹಾಕಿಕೊಂಡ. ಇದಕ್ಕೆ ಮುಂಚೆ ಆತನ ಜತೆ ನಾನು ಅಬ್ಬಬ್ಬಾ ಅಂದರೆ ಒಂದೆರಡು ಸಲ ಮಾತಾಡಿರಬಹುದು. ಆದರೆ, ಆತ ನನಗೆ ಗೊತ್ತಿರೋ ಪೈಕಿ ಯಾವುದೋ ಒಂದು ಹುಡುಗಿಯನ್ನು ಡೇಟ್ ಮಾಡ್ತಾ ಇದಾನೆ. ಒಂತರಾ ರೈಟ್ ಟೈಮ್ ಅಟ್ ದ ರೈಟ್ ಪ್ಲೇಸ್ ಅಂತಾರಲ್ಲ-ಹಂಗೆ ನಾನು ಸಿಗಿಹಾಕಿಕೊಂಡುಬಿಟ್ಟೆ. ಆತ ಕಳೆದ ಒಂದು ವರ್ಷದಿಂದ ಬರೆಯುತ್ತಿದ್ದ ಯಾವುದೋ ಒಂದು ಸ್ಕ್ರಿಪ್ಟಿನ ಎರಡು ಪುಟದ ‘ಸಾರಾಂಶ’ವನ್ನು ಬರಕೊಂಡು ಬಂದಿದ್ದ. ಅದನ್ನು ಆತ ಯಾವುದೋ ಸ್ಪರ್ಧೆಗೋ ಅಥವಾ ಕಾರ್ಯಕ್ರಮಕ್ಕೋ ಕಳಿಸುತ್ತಿದ್ದಾನಂತೆ-ಅದಕ್ಕೆ ಮುಂಚೆ ಅವನಿಗೊಂದು ಪ್ರೊಫೆಶನಲ್ ಅಭಿಪ್ರಾಯ ಬೇಕಿತ್ತು ಅಂತ ಕಾಣಿಸುತ್ತೆ.

ಸಾಮಾನ್ಯವಾಗಿ, ಇಂಥವರಿಗೆಲ್ಲ ನಾನು ಹೇಳೋದು ಒಂದೇ ನೆವ, ಅದು ಸತ್ಯ ಕೂಡ. ನನ್ನ ಆಫೀಸಿನಲ್ಲಿ ಎರಡು ಹೊರೆ ಚಿತ್ರಕತೆಗಳಿದ್ದಾವೆ. ಒಂದು ನನ್ನ ಆತ್ಮೀಯ ಸ್ನೇಹಿತರು ಬರೆದಿರೋ ಕಥೆ, ಚಿತ್ರಕಥೆಗಳು. ಇನ್ನೊಂದು ಹೊರೆ ನಾನು ಮಾಡಬೇಕಾಗಿರೋ ಸಿನೆಮಾಗಳಿಗೆಂದು ನನ್ನ ಏಜೆಂಟುಗಳು ಶಾರ್ಟ್‌ಲಿಸ್ಟ್ ಮಾಡಿಟ್ಟಿರೋ ಹಸ್ತಪ್ರತಿಗಳು ಮತ್ತು ಪುಸ್ತಕಗಳು. ನನ್ನ ಸ್ನೇಹಿತರು ಬರೆದಿರೋದನ್ನು ಓದೋಕೆ ತಗೊಂಡರೆ, ನನ್ನ ಕೆಲಸವನ್ನು ಉದಾಸೀನ ಮಾಡ್ತಾ ಇದೀನಿ ಅನ್ನಿಸುತ್ತೆ, ಹಾಗೇ ನನ್ನ ಏಜೆಂಟುಗಳ ಸ್ಕ್ರಿಪ್ಟ್ ಓದೋಣ ಅಂತ ತಗೊಂಡರೆ ನನ್ನ ಸ್ನೇಹಿತರನ್ನು ಉದಾಸೀನ ಮಾಡ್ತಾ ಇದೀನಿ ಅನ್ನಿಸುತ್ತೆ. ಇವೆರಡೂ ಬಿಟ್ಟು ನಾನು ನಿನ್ನ ಕತೆಯನ್ನು ಹೇಗೆ ಓದಲಿ, ಹೇಳು?

ಬಹಳ ಜನಕ್ಕೆ ಇದು ಅರ್ಥ ಆಗುತ್ತೆ. ಆದರೆ, ಕೆಲವು ಬಾರಿ ಈ ತರ ಗಿಲ್ಟೋ, ಅಥವಾ ಏನೋ ಒಂದು ಕಕ್ಕುಲಾತಿಗೆ ಬಿದ್ದು ತೀರ ಒರಟಾಗಿರೋಕೆ ಆಗದೇ ಈ ಕೆಲಸ ಮಾಡೋಕೆ ಒಪ್ಪಿಕೊಳ್ಳಬೇಕಾಗುತ್ತೆ. ಸರಿ ಓದೋಕೆ ಪ್ರಯತ್ನ ಮಾಡ್ತೇನೆ. ಇಷ್ಟ ಆಗದೇ ಇದ್ದರೆ ಹತ್ತು ಪುಟ ಓದಿ ಕೆಳಗಿಡ್ತೇನೆ, ಅಂತ ಮೊದಲೇ ಹೇಳಿರುತ್ತೇನೆ. ಇದರಿಂದ ಅವರಿಗೆ ಬಹಳ ಉತ್ಸಾಹ ಕಮ್ಮಿ ಏನೂ ಆಗೊಲ್ಲ. ಯಾಕೆಂದರೆ ಯಾರಿಗೂ ತಾವು ಬರೆದ ಕಥೆ ಕೇವಲ ಹತ್ತುಪುಟ ಓದಿಸಿಕೊಳ್ಳ್ಳುವಷ್ಟರಲ್ಲಿ ಬೋರು ಹೊಡೆಸಿಬಿಡಬಹುದು ಎಂದು ಅನಿಸಿರುವುದಿಲ್ಲ.

ಹಾಳಾಗಿಹೋಗಲಿ, ಇದು ಎರಡು ಪುಟದ್ದಲ್ಲವಾ? ಎಂದು ಓದಲು ಶುರುಮಾಡಿದೆ? ಎರಡು ಪುಟ ಓದಕ್ಕೆ ಎಷ್ಟು ಹೊತ್ತು ಬೇಕಾಯ್ತು ಗೊತ್ತಾ? ...ವಾರಗಟ್ಟಲೆ.

ಅದಕ್ಕೇ ಹೇಳೋದು ನಾನು ನಿನ್ನ ಫ..ಂಗ್ ಸ್ಕ್ರಿಪ್ಟನ್ನು ಓದೊಲ್ಲ ಅಂತ.

ಓದುತ್ತಿರುವುದು ಒಳ್ಳೇ ಬರವಣಿಗೆಯಾ ಅಂತ ಹೇಳೋದಕ್ಕೆ ಒಂದು ಪುಟವಾದರೂ ಓದಬೇಕು. ಕೆಟ್ಟದ್ದು ಅಂತ ಹೇಳೋಕೆ ಒಂದೇ ಸಾಲು ಓದಿದರೂ ಸಾಕು. ( ಬೈ ದ ವೇ, ನೀನು ಬರಹಗಾರ ಹೌದೋ ಅಲ್ಲವೋ ಅಂತ ತಿಳಕೊಳ್ಳೋಕೆ ಇದೊಂದೇ ಸಾಲು ಸಾಕು. ಇದನ್ನು ಒಪ್ಪಿಕೊಳ್ಳದಿದ್ದರೆ ನೀನು ಬರಹಗಾರನೇ ಅಲ್ಲ. ಯಾಕೆಂದರೆ ಎಲ್ಲ ಬರಹಗಾರರೂ ಓದುಗರಾಗಿರುತ್ತಾರೆ, ಅಲ್ಲವಾ)

ಹೋಗಲಿ, ಮೊದಲ ಪ್ರಯತ್ನ ಅಂತ ಕೊಂಚ ಗ್ರೇಸ್‌ಮಾರ್ಕು ಕೊಡಬಹುದು, ಆದರೆ ಒಂದೇ ಒಂದು ನೇರವಾದ ವಾಕ್ಯರಚನೆಯಿರದ, ಭಾಷೆ ಮತ್ತು ಕಥನದ ಗಂಧವೂ ಇಲ್ಲದ ಈ ಬರವಣಿಗೆಯನ್ನು ಹೇಗೆ ಸಹಿಸಿಕೊಳ್ಳುವುದು. ಈತನಿಗೆ ಕತೆ ಹೇಳುವುದು ಬಹಳ ಮುಖ್ಯ ನಿಜ. ಆದರೆ, ಅಲ್ಲಿ ಕನಿಷ್ಠ ಒಬ್ಬ ಪ್ರಾಮಾಣಿಕ ಓದುಗ ಅಪೇಕ್ಷಿಸುವ ಸ್ಪಷ್ಟತೆ, ಖಚಿತತೆಗಳೂ ಇಲ್ಲ. ನಾನು ಓದಿದ್ದು ಕೆಲವು ಘಟನೆಗಳಷ್ಟೇ. ಎಲ್ಲೋ ಕೆಲವು ಒಂದಕ್ಕೊಂದು ಪೋಣಿಸಿದಂತಿದ್ದವು, ಪಾತ್ರಗಳು ದಿಕ್ಕುದೆಸೆಯಿಲ್ಲದೇ ಸುಮ್ಮನೇ ಓಡಾಡುತ್ತವೆ, ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತವೆ, ಮತ್ತೆ ಪ್ರತ್ಯಕ್ಷವಾಗುತ್ತವೆ, ಬದುಕಿನ ಗತಿಯೇ ಬದಲಾಗುವ ನಿರ್ಣಯಗಳನ್ನು ಏಕ್‌ದಂ ತೆಗೆದುಕೊಳ್ಳುತ್ತವೆ. ಯಾವುದೋ ತಿನಿಸಿನ ವಾಸನೆ ಮತ್ತು ನವಿರನ್ನು ಇಡೀ ಅರ್ಧ ಪ್ಯಾರಾ ಬರೆದಿದ್ದ, ಆದರೆ ಅಂತ್ಯ ಮಾತ್ರ ಒಂದು ಸಣ್ಣ ವಾಕ್ಯ. ನಾಯಕ ಸಾಯುತ್ತಾನೆಂದು ಎಲ್ಲೂ ಬರೆದುಕೂಡ ಇಲ್ಲ. ಒಂದು ಸೀನಿನಲ್ಲಿ ಆತ ಇದ್ದಾನೆ, ಮುಂದಿನ ವಾಕ್ಯದಲ್ಲಿ ಅವನ ಅಂತ್ಯಕ್ರಿಯೆಯಲ್ಲಿಯ ಜನಗಳ ಬಗ್ಗೆ ಬರೀತಾನೆ. ಅಬ್ಬಬ್ಬಬ್ಬ. ಹಿಂಗೇ ಹೇಳ್ತಾ ಹೋಗಬಹುದು.

ನಮ್ಮ ಸ್ಕ್ರಿಪ್ಟ್ ಬರಿಯೋ ಮಂದಿ ಬಗ್ಗೆ ನೀನು ತಿಳಕೋಬೇಕಾದ ಕಹಿಯಾದ ಸತ್ಯವೊಂದಿದೆ. ಬಹಳ ಜನಕ್ಕೆ ಈ ಸ್ಕ್ರಿಪ್ಟ್ ಬರೆಯೋದು ಬರವಣಿಗೆ ಅಂತ ಅನ್ನಿಸಿಯೇ ಇಲ್ಲ. ಒಂದು ಕೂಲಾಗಿರೋ ಕತೆ ಇದ್ದರೆ ಅಷ್ಟೇ ಕೂಲಾಗಿರೋ ಸಿನೆಮಾ ಆಗುತ್ತೆ ಅಂತ ತಿಳ್ಕೋತಾರೆ. ಚಿತ್ರಕತೆ ಬರೆಯೋದು ಈ ಬಿಸಿನೆಸ್ಸಿಗೆ ಬರೋಕೆ ಅತಿ ಸುಲಭವಾದ ದಾರಿ, ಇದಕ್ಕೆ ಎಂಥ ತರಬೇತಿ, ಅರ್ಹತೆ, ಅಥವಾ ಸಿದ್ಧತೆಗಳೂ ಬೇಡ ಅಂತ ಬಹಳ ಜನ ತಿಳಕೊಂಡಿದಾರೆ. ಯಾರು ಏನು ಬೇಕಾದರೂ ಬರೀಬಹುದಲ್ವಾ? ಅದಕ್ಕೆ ಈಗ ಈ ವೃತ್ತಿಯಲ್ಲಿ ಪಳಗಿರೋರ ಬಗ್ಗೆ ಅವರಿಗೆ ಯಾವ ಮರ್ಯಾದೆಯೂ ಇಲ್ಲ. ಎಂಥದೋ ಒಂದು ಬರೆದು ನಿನ್ನ ಕೈಗಿಡುತ್ತಾರೆ.

ಸರಿ ನಾನು ಬಹಳ ಹಿಂಸೆಯಿಂದ ಓದಿದೆ. ಅದರ ಬಗ್ಗೆ ಏನಾದರೂ ಒಳ್ಳೇದನ್ನು ಹೇಳಬೇಕು ಅಂತ ಬಹಳ ಕಷ್ಟ ಪಟ್ಟೆ, ಆದರೆ ಒಂದು ತಿಳಕೋ ಇಂತ ಬರವಣಿಗೆಗಳ ಬಗ್ಗೆ ಪಾಸಿಟಿವ್ ಆಗಿ ಹೇಳೋದು ಬರೇ ಸುಳ್ಳಷ್ಟೇ ಅಲ್ಲ, ಅತಿ ಪಾಪದ ಕೆಲಸ ಅದು. ಕೆಟ್ಟ ಬರವಣಿಗೆಯನ್ನು ಪ್ರೋತ್ಸಾಹಿಸೋದು ಬಹಳ ಕ್ರೂರವಾದ ಕೆಲಸ, ಇರಲಿ. ಆದರೆ, ಒಬ್ಬ ನಿಜವಾದ ಬರಹಗಾರನಿಗೆ ಬರೆಯಬೇಡ ಎಂದು ಯಾರೂ ತಡೆದು ನಿಲ್ಲಿಸಲಾರರು. ಯಾರೂ ಎಂದೂ ಎದೆಗುಂದಿಸಲಾರರು. ನೀನು ಬರಹಗಾರನಲ್ಲ ಅಂತ ನಾನು ನಿನಗೆ ಕನ್‌ವಿನ್ಸ್ ಮಾಡಬಲ್ಲನಾದರೆ ನೀನು ನಿಜಕ್ಕೂ ಬರಹಗಾರನೇ ಅಲ್ಲ. ನೀನು ನಿಜಕ್ಕೂ ನನ್ನ ಮಾತಿಂದ ಕನ್‌ವಿನ್ಸ್ ಆಗಿ ಬರೆಯುವುದನ್ನು ಬಿಟ್ಟುಬಿಟ್ಟರೆ ನಾನು ನಿನಗೆ ಒಂದು ದೊಡ್ಡ ಉಪಕಾರ ಮಾಡಿದ್ದೀನಿ ಅಂತ ತಿಳಕೋ. ಯಾಕೆಂದರೆ, ಬರವಣಿಗೆ ಬಿಟ್ಟು ನಿನ್ನ ಬೇರೆ ಯಾವ ಪ್ರತಿಭೆ ಇದೆಯೋ ಅದನ್ನು ಹುಡುಕಿಕೊಂಡು ಹೋಗ್ತೀಯ. ಎಲ್ಲರಿಗೂ ಏನಾದರೂ ಒಂದು ವಿಶೇಷವಾದ ಪ್ರತಿಭೆ ಇದ್ದೇ ಇರುತ್ತೆ. ಅದೃಷ್ಟವಂತರಿಗೆ ಅದೇನು ಅಂತ ಬಹಳ ಬೇಗ ಗೊತ್ತಾಗುತ್ತೆ. ನತದೃಷ್ಟರು ಇಂಥ ಹೊಲಸನ್ನು ಬರೆದು, ಬರೆದು ನನ್ನಂಥವರಿಗೆ ಓದು ಅಂತ ತಂದು ಕೊಡ್ತಾ ಇರ್ತಾರೆ.

ಹಾಳಾಗಿಹೋಗಲಿ ಅಂತ ಓದಿದರೆ ಈತ ಇದರ ಬಗ್ಗೆ ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಹೇಳಿ ಅಂತ ಬೇರೆ ಬಲವಂತ ಮಾಡಿದ್ದ. ಅವನ ಸ್ನೇಹಿತರ ಅಭಿಪ್ರಾಯದಿಂದ ಆತನಿಗೆ ಸಮಾಧಾನವಾಗಿರಲಿಲ್ಲ. ಅವರು ಸುಮ್ಮಸುಮ್ಮನೆ ‘ಎಲ್ಲ ಚೆನ್ನಾಗಿದೆ’ ಅಂತ ಹೇಳ್ತಿದಾರೆ ಅಂತ ಅವನಿಗನಿಸಿತ್ತಂತೆ. ಅವನಿಗೆ ಪ್ರಾಮಾಣಿಕ ವಿಮರ್ಶೆ ಬೇಕಿತ್ತಂತೆ. ಯಾರಿಗೂ ಪ್ರಾಮಾಣಿಕ ವಿಮರ್ಶೆ ಬೇಡಪ್ಪ. ಇಂಥವರಿಗೆ ಏನು ಬೇಕು ಅಂದರೆ ‘ಇಲ್ಲಿ ಇನ್ನೊಂದು ಚೂರು ಚೆನ್ನಾಗಿರ್ಬೇಕಾಗಿತ್ತು, ಇದು ನನಗಿಷ್ಯವಾಗಲಿಲ್ಲ’ ಅಂತ ನಯವಾಗಿ ಬಯ್ದಹಾಗೆ ಮಾಡಿ ಆದರೂ ಒಟ್ಟಾರೆ ಚೆನ್ನಾಗಿದೆ ಅಂತ ಬೆನ್ನುತಟ್ಟಿ ಪ್ರಾಮಾಣಿಕತೆಯ ನಾಟಕ ಆಡಬೇಕು. ಇವರಿಗೆ ಯಾವಾಗಲೂ ಏನು ಬೇಕು? ಪ್ರೋತ್ಸಾಹ.

ಇಂಥ ಕೆಟ್ಟ ಬರವಣಿಗೋಸ್ಕರ ನಿನ್ನ ಬದುಕಿನ ಒಂದು ವರ್ಷವನ್ನು ಹಾಳುಮಾಡಿಕೊಂಡೆ ಅಂತ ಯಾರಿಗಾದರೂ ಹೇಳೋದು ಎಷ್ಟು ಕಷ್ಟ ಅಂತ ನಿನಗೆ ಗೊತ್ತಿದೆಯಾ? ಈ ತರ ವಿಮರ್ಶೆ ಬರೆಯೋಕೆ ಅಥವಾ ಹೇಳೋಕೆ ಎಷ್ಟು, ರಕ್ತ ಬೆವರು ಖರ್ಚು ಮಾಡಬೇಕು ಅನ್ನೋ ಐಡಿಯಾ ಆದರೂ ನಿನಗಿದೆಯಾ? ಇಲ್ಲಿ ಸತ್ಯವನ್ನೇ ಹೇಳಬೇಕು. ಆದರೆ ಅದು ಪ್ರಾಮಾಣಿಕವಾಗಿರಬೇಕು, ಕಹಿಯಾಗಿರಬಾರದು. ಅವನಿಗೆ ಬರೆದ ಫ..ಂಗ್ ಇ-ಮೈಲನ್ನು ನಾನು ನನ್ನ ಕಳೆದ ಸಿನೆಮಾದ ಸ್ಕ್ರಿಪ್ಟಿಗಿಂತಾ ಹೆಚ್ಚು ಆಸ್ಥೆಯಿಂದ ತಿದ್ದಿದೆ.

ನನ್ನ ಮೊದಲ ಡ್ರಾಫ್ಟ್ ತೀರ ಹಾಸ್ಯಾಸ್ಪದವಾಗಿತ್ತು. ಪ್ರತಿಯೊಂದಕ್ಕೂ ಸ್ಪಷ್ಟವಾಗಿ ಟಿಪ್ಪಣಿಗಳನ್ನು ಮಾಡಿಕೊಂಡಿದ್ದೆ. ನಂತರ ನೋಡಿದರೆ, ಅವನ ಎರಡು ಪ್ಯಾರಾದ ಬಗ್ಗೆ ನಾನು ಮೂರು ಪುಟ ಬರೆದಿದ್ದೆ. ಅದನ್ನು ಎಸೆದೆ. ಮತ್ತೆ ಮುಗಿಸಿದಾಗ ನೋಡಿದೆ. ಚಿಕ್ಕದಾಗಿ, ಚೊಕ್ಕದಾಗಿ, ಸ್ಪಷ್ಟವಾಗಿ ಬರೆದಿದ್ದೆ ಆದರೆ ನನ್ನ ಉತ್ತರ ನನಗೇ ನಾಚಿಕೆಯಾಗುವಷ್ಟು ಸಪ್ಪೆಯಾಗಿತ್ತು, ಮೆತ್ತಗಿತ್ತು. ನನ್ನ ಪಾಯಿಂಟಿದ್ದಿದ್ದು ಇಷ್ಟೇ. ಎಲ್ಲ ಹೊಸಬರಂತೆ ನಿನಗೂ ನಿನ್ನ ಕತೆ ಹೇಳುವುದೇ, ಬರೆಯುವುದಕ್ಕಿಂತ ಮುಖ್ಯವಾಗಿದೆ. ಇದು ಹೇಗಪ್ಪ ಅಂದರೆ, ಕಾರಿಗೆ ಬೇಕಾದ ಇಂಜಿನ್ನು, ಇತರ ಬಿಡಿಭಾಗಗಳನ್ನು ಕೊಂಡುಕೊಂಡು ಕಾರನ್ನು ನಾನೇ ಜೋಡಿಸಿಬಿಡ್ತೀನಿ ಅಂತ ಹೋಗೋದು. ಮೊದಲು ಕಾರಿನ ಮೆಕ್ಯಾನಿಕ್ಸ್ ಅನ್ನು ಕಲಿಯಬೇಕಲ್ಲವಾ? ಜೋಡಿಸ್ತಾ ಜೋಡಿಸ್ತಾ ಕಲೀತೀನಿ ಅಂತ ಹೋದರೆ ಓಡುವ ಕಾರನ್ನು ಕಟ್ಟೋಕೆ ಆಗುತ್ತಾ.

ನಿನಗೆ ನಿಜವಾಗಿಯೂ ಈ ಕಥೆಯ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದರೆ ಯಾರಾದರೂ ಒಬ್ಬ ಕಥೆಗಾರರಿಗೆ ಇದನು ಕೊಟ್ಟು ಬರೆಸು. ನೀನು ನಿಜವಾಗಿಯೂ ಬರಹಗಾರನಾಗಬೇಕು ಅಂತ ಆಸೆ ಇದ್ದರೆ, ಯಾವುದಾದರೂ ರೈಟಿಂಗ್ ಕೋರ್ಸುಗಳನ್ನು ತೆಗೆದುಕೋ, ಮತ್ತೆ ಸರಿಯಾಗಿ ಏನು ಬೇಕೋ ಅದನ್ನು ಓದು. ಎಂದು ಹೇಳಿ ಮುಗಿಸಿದೆ.

ಒಟ್ಟು ಏನಾಯಿತು ಕಡೆಗೆ? ಈ ಆಸಾಮಿ ಮತ್ತೆ ಅವನ ಗರ್ಲ್‌ಫ್ರ್ರೆಂಡ್‌ಗೆ ನಾನು ನನ್ನನ್ನು ಒಬ್ಬ ತೀರ ನೀಚ, ಆ.. ಹೋಲ್ ಅಂತ ಪ್ರೂವ್ ಮಾಡಿದ್ದಾಯಿತು. ಆತನ ಕಥೆಯನ್ನು ನನ್ನ ಕೈಗೆ ಕೊಟ್ಟಿದ ತಕ್ಷಣ ಅದನ್ನು ಓದದೇ ಸುಮ್ಮನೇ ಹಿಂದಿರುಗಿಸಿಬಿಟ್ಟಿದ್ದರೂ ಅವರು ನನ್ನನ್ನು ಕೊಳಕ, ಜಂಭದ ಕೋಳಿ ಅಂತ್ಲೇ ತಿಳಕೊಳ್ಳುತ್ತಿದ್ದರು. ಒಂದೇ ವ್ಯತ್ಯಾಸವೆಂದರೆ, ಬರೇ ಬೆನ್ನುತಟ್ಟಿಸಿಕೊಳ್ಳುವ ತವಕದಲ್ಲಿ ಮಾತ್ರ ಇರುವ ಒಬ್ಬನಿಗೆ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಹೇಳಿದ ನಂತರವೂ ಅವರುಗಳ ಹತ್ತಿರ ಅನ್ನಿಸಿಕೊಳ್ಳಬೇಕಾಗುತ್ತಿರಲಿಲ್ಲ. ಮುಖ್ಯವಾಗಿ, ಆ ಕೆಟ್ಟ ಸ್ಕ್ರಿಪ್ಟಿನ ಓದುವ ಭಯಂಕರ ಹಿಂಸೆಯಿಂದ ಮುಕ್ತನಾಗುತ್ತಿದ್ದೆ.

ಒಬ್ಬ ವೃತಿಪರ ಬರಹಗಾರನಿಗೆ ಈ ರೀತಿ ಹಸ್ತಪ್ರತಿಯನ್ನು ಕೊಟ್ಟು ಓದಿಸುವುದಕ್ಕೆ ನಿನಗೆ ಯಾವುದೇ ಹಕ್ಕಿಲ್ಲ. ಇದೇನು ಮಹಾ ಕೆಲಸ, ಎರಡು ಪುಟವಷ್ಟೇ ಅಲ್ಲವಾ ಅಂತ ನೀನಂದಕೊಳ್ಳುವುದು ತಪ್ಪು. ಒಂದು ವಿಷಯ ಸ್ಪಷ್ಟವಾಗಿರಲಿ-ಒಬ್ಬ ಸೀನಿಯರ್ ಬರಹಗಾರನಿಗೆ ನೀನು ನಿನ್ನ ಬರಹವನ್ನು ಓದಿ ಅವರ ಅಭಿಪ್ರಾಯ ಕೇಳುತ್ತಿರುವುದರಿಂದ ಬರೇ ಅವರ ಎರಡು ಗಂಟೆಯನ್ನಷ್ಟು ಮಾತ್ರ ನೀನು ಕೇಳುತ್ತಿಲ್ಲ. ಅವರ ವರ್ಷಗಟ್ತಲೆ ಓದಿದ ಅನುಭವ, ಜ್ಞಾನ ಮತ್ತು ಅವರ ಕಲೆಯನ್ನು ಹಂಚಿಕೋ ಅಂತ ಕೇಳ್ತಾ ಇದೀಯ, ಇದು ನಿನ್ನ ತಲೆಯಲ್ಲಿರಲಿ. ನಿನಗೊಬ್ಬ ಪೇಂಟರ್ ಸ್ನೇಹಿತನಿದ್ದರೆ ಅವನ ಬಿಡುವಿನ ಅವಧಿಯಲ್ಲಿ ಬಂದು ನಿನ್ನ ಮನೆಯ ರೂಮೊಂದನ್ನು ಪೇಯಿಂಟ್ ಮಾಡಿಕೊಡುತ್ತೀಯ ಎಂದು ಕೇಳಿದಹಾಗೆ. ಎರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ.

ಪ್ಯಾಬ್ಲೊ ಪಿಕಾಸೋನ ಬಗ್ಗೆ ಒಂದು ಒಳ್ಳೆಯ ಕತೆ ಇದೆ, ಕೇಳಿದ್ದೀಯಾ? ಯಾರೋ ಬಂದು ಪಿಕಾಸೋಗೆ ತನ್ನ ಕರ್ಚೀಫಿನ ಮೇಲೆ ಒಂದು ಸ್ಕೆಚ್ ಬರೆಯಲು ಕೇಳಿದರಂತೆ. ಪಿಕಾಸೋ ಚಕ್ಕಂತ ಒಂದು ಪೆನ್ನನ್ನು ತೆಗೆದವನೇ ಏನೋ ಬರೆದು ‘ಒಂದು ಮಿಲಿಯ ಡಾಲರುಗಳು’ ಎಂದನಂತೆ.
‘ಒಂದು ಮಿಲಿಯ ಡಾಲರ‍್ಗಳಾ? ಬರೆಯೋಕೆ ನಿಮಗೆ ಹಿಡಿದದ್ದು ಕೇವಲ ಮೂವತ್ತು ಸೆಕೆಂಡುಗಳು ಮಾತ್ರ’ ಎಂದನಂತೆ ಆ ವ್ಯಕ್ತಿ.
‘ಹೌದು, ಆದರೆ ಮೂವತ್ತು ಸೆಕೆಂಡುಗಳಲ್ಲಿ ಇದನ್ನು ಬರೆಯೋದನ್ನು ಕಲಿಯೋಕ್ಕೆ ನನಗೆ ಐವತ್ತು ವರ್ಷಗಳು ಬೇಕಾದವು’

ಒಬ್ಬ ಪ್ರೊಫೆಶನಲ್ ಬರಹಗಾರನಿಂದ ಪುಕ್ಕಟೆ ಅಭಿಪ್ರಾಯ ಪಡೆದುಕೊಳ್ಳುವ ನನ್ನ ಈ ಗೆಳೆಯನ ಹಾಗೆ ಈ ಮನುಷ್ಯನಿಗೂ ಪಿಕಾಸೊನಂತ ಕಲಾವಿದನಿಂದ ಏನನ್ನು ಕೇಳುತ್ತಿದ್ದೇನೆ ಎನ್ನುವ ಅರಿವೂ ಇರಲಿಲ್ಲ. ಓದೋದಕ್ಕೆ ಬರೇ ಬಿಡುವಿನ ಸಮಯ ಮಾತ್ರ ಬೇಕು ಅನ್ನೋ ಅಭಿಪ್ರಾಯ ನಿನಗಿದ್ದರೆ, ನಿನ್ನ ಈ ‘ಓದೋ’ ಗೆಳೆಯರನ್ನು ಓದೋದಕ್ಕೆ ಕೇಳಿಕೋ. ಯಾರಿಗ್ಗೊತ್ತು, ಇದನ್ನು ಓದಿ ಅವನಿಗೆ ಖುಷಿಯೂ ಆಗಬಹುದು. ನಿನ್ನ ಬಗ್ಗೆ ಆತನಿಗೆ ತೀರಾ ಗೌರವವೂ ಮೂಡಬಹುದು. ಅವರಿಗ್ಯಾರಾದರೂ ಈ ಸಿನೆಮಾರಂಗದಲಿ ಪರಿಚಯವಿದ್ದರೆ ನಿನ್ನ ಕತೆಯನ್ನಿಟ್ಟುಕೊಂಡು ಸಿನೆಮಾ ಕೂಡ ಮಾಡಬಹುದು. ಆದರೆ, ನನಗೆ ಕಾಟ ಕೊಡ್ಬೇಡ.

ನಿನ್ನ ಫ.ಂಗ್ ಸ್ಕ್ರಿಪ್ಟನ್ನು ನಾ ಓದೋದಿಲ್ಲ.

* * *
ಜಾನ್ ಓಲ್‌ಸನ್ ಎಂಬ ಹಾಲಿವುಡ್ಡಿನ ಚಿತ್ರಕಥೆ ಬರೆಯುವವ ಬರೆದ ಲೇಖನದ ಆಯ್ದ ಭಾಗಗಳಿವು. ಈತ ಬರೆದ ಚಿತ್ರಕಥೆ ‘ದಿ ಹಿಸ್ಟರಿ ಆಫ್ ವಯಲೆನ್ಸ್’ ಎಂಬ ಇತ್ತೀಚಿನ ಚಿತ್ರ ಅನೇಕ ಪ್ರಶಸ್ತಿಗಳನ್ನು ಪಡಕೊಂಡಿದೆ. ಹೊಸಬರಹಗಾರರು ಬರೆದು ಪಾಪವನ್ನೇನೂ ಮಾಡುತ್ತಿಲ್ಲವಲ್ಲ ಎಂದು ಬಹಳಷ್ಟು ಹೊಸಬರವಣಿಗೆಗಳಿಗೆಗಳನ್ನು ಪ್ರೋತ್ಸಾಹಿಸಿದ ಗೌರೀಶ ಕಾಯ್ಕಿಣಿ, ಮತ್ತು ಬರವಣಿಗೆಯನ್ನು ಹಸ್ತಪ್ರತಿಯ ಘಟ್ಟದಲ್ಲಿ ಓದಿ ಮೆಚ್ಚಿಗೆಯಾದಲ್ಲಿ ಕೇಳದೇ ಮುನ್ನುಡಿಯನ್ನೂ ಬರೆದುಕೊಡುತ್ತಿದ್ದ ಕೀರ್ತಿನಾಥ ಕುರ್ತಕೋಟಿಯವರ ಪರಿಚಯವಿರುವ ನಮಗೆ ಇಂಥ ಅಭಿಪ್ರಾಯಗಳು ಹೊಸದು.

ಆದರೆ, ಹಸ್ತಪ್ರತಿಯನ್ನು ಓದುವಾಗ ಇಂಥ ಅಭಿಪ್ರಾಯಗಳು ಬರುವುದಿಲ್ಲ ಎಂದು ಹೇಳುವುದು ಕೊಂಚಮಟ್ಟಿಗಾದರೂ ಅಪ್ರಾಮಾಣಿಕವಲ್ಲವೇ?

Wednesday, October 21, 2009

ಕೆಂಡಸಂಪಿಗೆಯ ಮರಣ

ಅಂತರ್ಜಾಲದ ಕನ್ನಡದ ತಾಣ ಕೆಂಡಸಂಪಿಗೆ ಅಕಾಲಿಕ ಮರಣವನ್ನಪ್ಪಿದೆ. ಇದ್ದಕ್ಕಿದ್ದಂತೆ ಈ ತಿಂಗಳ ಮೊದಲ ದಿನದಂದು ‘ಇನ್ನುಮುಂದೆ ಕೆಂಡಸಂಪಿಗೆ ಯ ಪ್ರಕಟಣೆಯನ್ನು ನಿಲ್ಲಿಸಿದ್ದೇವೆ, ಇದುವರೆವಿಗೂ ನಮ್ಮೊಂದಿಗೆ ಸಹಕರಿಸಿದ ಎಲ್ಲ ಬರಹಗಾರರಿಗೆ ಮತ್ತು ಓದುಗವರ್ಗಕ್ಕೆ ಧನ್ಯವಾದಗಳು’ ಎಂಬ ಒಂದು ಸಾಲಿನ ಓಬಿಚುಯರಿಯೊಂದಿಗೆ ಕೆಂಡಸಂಪಿಗೆ ತನ್ನ ಅಂತರ್ಜಾಲ ತಾಣವನ್ನು ಶಾಶ್ವತವಾಗಿ ಮುಚ್ಚಿದೆ. ಇನ್ನುಮುಂದೆ ದಿನಂಪ್ರತಿ ಈ ತಾಣವನ್ನು ನೋಡಹೋಗುತ್ತಿದ್ದ ಜಾಲತಾಣಿಗರಿಗೆಲ್ಲ ಏನೋ ಕಳಕೊಂಡ ಇರುಸುಮುರುಸು.

ಕನ್ನಡದ ಅಂತರ್ಜಾಲ ಓದುಗರಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದ್ದು ಕೆಂಡಸಂಪಿಗೆ. ವಿನ್ಯಾಸ, ವಸ್ತು, ಭಾಷೆ ಹಾಗೂ ಲಯದ ತಾಜಾತನದಿಂದ ಎಲ್ಲರ ಗಮನ ಸೆಳೆದಿತ್ತು. ಅನೇಕ ಹೊಸಬರಹಗಾರರನ್ನು ಹುಟ್ಟುಹಾಕಿದ್ದಷ್ಟೇ ಅಲ್ಲದೇ, ಅಂತರ್ಜಾಲವೆಂದರೆ ಮೂಗುಮುರಿಯುತ್ತಿದ್ದ ಅನೇಕ ಹಳೇಮಂದಿಯ ಕೈಯಲ್ಲಿಯೂ ಕೀಲಿಮಣೆ ಕೊಟ್ಟು ಕೆಲಸ ಮಾಡಿಸಿತು. ಎರಡು ವರ್ಷಗಳ ಕಾಲ ದಿನ ಬೆಳಗಾದರೆ ಕೆಂಡಸಂಪಿಗೆಯನ್ನು ಎದುರು ನೋಡುತ್ತಿದ್ದವರು ಎಷ್ಟೋ ಮಂದಿ. ಆದರೆ, ಈಗ ಏಕಾಏಕಿ ಮುಚ್ಚಿನಿಂತು ತನ್ನನ್ನು ನಂಬಿದ ಓದುಗ ಬಳಗಕ್ಕೆ ಬಹುದೊಡ್ಡ ನಿರಾಶೆಯನ್ನುಂಟುಮಾಡಿ ಹೊರಟುಹೋಗಿದೆ, ಕೆಂಡಸಂಪಿಗೆ.

ಅಂತರ್ಜಾಲದ ಪತ್ರಿಕೆಗಳ ವ್ಯಾಕರಣವನ್ನು ಚೆನ್ನಾಗಿ ಅರ್ಥಮಾಡಿಕೊಂಡೇ ತನ್ನ ಕೆಲಸವನ್ನು ಮಾಡುತ್ತಿತ್ತಂದಿತ್ತು, ಕೆಂಡಸಂಪಿಗೆಯ ಬಳಗ. ಒಂದಿಷ್ಟು ಸುದ್ದಿ, ಒಂದಷ್ಟು ಕತೆ, ಸುಂದರವಾದ ಕವನಗಳು, ಆತ್ಮಚರಿತ್ರೆ, ಪ್ರವಾಸಕಥಾನಕಗಳು, ಧಾರಾವಾಹಿ, ಕೊಂಚ ವಿಚಾರ, ಅಲ್ಲಲ್ಲಿ ಟಾಂಗುಗೊಡಿಸುವ ಬರಹಗಳು, ಬೇಕಿದ್ದಾಗ ಸುದ್ದಿಗೆ ಗುದ್ದುಕೊಡುವ ವಿವಾದಗಳು, ಚರ್ಚೆ, ಎಲ್ಲವೂ ಹದವಾಗಿ ಬೆರೆತಿದ್ದವು. (ಕೆಲವೊಮ್ಮೆ ಚರ್ಚೆ ಅತಿರೇಕವೆನಿಸಿದರೂ ಅಂತರ್ಜಾಲದ ಜಾಲತಾಣದ ಉಳಿಗಾವಿಗೆ ಇಂಥ ಚರ್ಚೆಗಳು ಅನಿವಾರ್ಯವೆಂಬುದನ್ನು ಇದರ ಸಂಪಾದಕವರ್ಗದವರು ಅರಿvದ್ದರೆಂದೇ ಈ ಮಾತನ್ನು ಹೇಳಬೇಕಾಗಿದೆ)

ಆದರೆ, ಈ ಕೆಂಡಸಂಪಿಗೆ ನಿಂತದ್ದೇಕೆ?

ಅಂತರ್ಜಾಲದಲ್ಲಿ ಕನ್ನಡದ ಇತಿಹಾಸ ಬಹಳ ಹಳೆಯದೇನಲ್ಲ. ನನಗೆ ಗೊತ್ತಿದ್ದಹಾಗೆ ಸಮಾಚಾರಪತ್ರಿಕೆಗಳಲ್ಲಿ ‘ಸಂಜೆವಾಣಿ’ ಮೊಟ್ಟಮೊದಲಬಾರಿಗೆ ತನ್ನ ಅಸ್ಮಿತೆಯನ್ನು ಅಂತರ್ಜಾಲದಲ್ಲಿ ಸ್ಥಾಪಿಸಿದ್ದು ಪ್ರಾಯಶಃ ೧೯೯೫-೧೯೯೬ರ ಸುಮಾರಿಗೆ. ಆ ಸಂದರ್ಭದಲ್ಲಿ ಅಲೊಂದು ಇಲ್ಲೊಂದು ಜಿಯೋಸಿಟಿ ಮತ್ತಿತರ ವೆಬ್‌ಸೈಟುಗಳಿಂದ ಕೊಂಚವೇ ಕೊಂಚ ಎರವಲು ಪಡಕೊಂಡು ನಡೆಸುತ್ತಿದ್ದ ಕೆಲವು ತಾಣಗಳು ತಮ್ಮ ಕೆಲಸವನ್ನು ಕುಂಟಿಕೊಂಡು ನಡೆಸುತ್ತಲೇನೋ ಇದ್ದವು. ನಂತರ ಅನೇಕ ದಿನಪತ್ರಿಕೆಗಳು ತಮ್ಮ ಮುದ್ರಿತ ಪತ್ರಿಕೆಯ ಅಂತರ್ಜಾಲ ಆವೃತ್ತಿಯನ್ನು ಜಾಲದಲ್ಲಿ ಪ್ರಕಟಿಸಿ ತಮ್ಮ ಓದುಗವರ್ಗವನ್ನು ಹಿಗ್ಗಿಸಿಕೊಳ್ಳುತ್ತಿದ್ದವು. ನಂತರ ಬಂದ ಕನ್ನಡಸಾಹಿತ್ಯ.ಕಾಮ್, ವಿಶ್ವಕನ್ನಡ.ಕಾಮ್, ಮುಂತಾದವುಗಳೂ ಆರಂಭದಲ್ಲಿ ವಿಶ್ವಾಸವನ್ನು ಮೂಡಿಸಿದ್ದಾದರೂ ನಂತರ ನೆಲಕಚ್ಚಿದ್ದಾವೆ. ಕನ್ನಡಸಾಹಿತ್ಯ.ಕಾಮ್ ಈಗ ಅಂತರ್ಜಾಲದ ವ್ಯಾಪ್ತಿಯ ಹೊರಗೆ ತನ್ನ ಕೆಲಸವನ್ನು ಮಾಡಿಕೊಂಡು ಬರುತ್ತಿದೆಯಾದರೂ ಅಂತರ್ಜಾಲದಲ್ಲಿ ಕನ್ನಡದ ಬೆಳವಣಿಗೆಗೆ ಲೈಬ್ರರಿಯ ಅಥವಾ ಪ್ರಮುಖ ಲೇಖಕರ ಬರಹಗಳ ಆರ್ಕೈವ್ ಆಗುವುದನ್ನು ಬಿಟ್ಟರೆ ಹೆಚ್ಚಿನ ಕೆಲಸವನ್ನು ಮಾಡಲು ಇಲ್ಲಿ ಸಾಧ್ಯವಾಗಿಲ್ಲ. ನಮ್ಮೆಲ್ಲರನ್ನೂ ಬೆಳೆಸಿದ ದಟ್ಸ್‌ಕನ್ನಡ.ಕಾಮ್‌ನ ಆದ್ಯತೆಗಳು ಈಗ ಸಂಪೂರ್ಣವಾಗಿ ಬೇರೆಯಾಗಿದೆ.

ಒಂದು ಪತ್ರಿಕೆ ನೆಲಕಚ್ಚುವುದರ ವಿಷಯದಲ್ಲಿ ಪತ್ರಿಕೆಯ ಆಡಳಿತವರ್ಗಕ್ಕೆ ಒಂದು ಹೊಣೆಗಾರಿಕೆ ಇರಬೇಕಲ್ಲವೇ? ಇಲ್ಲಿ ಹೊಣೆಗಾರಿಕೆಯೆಂದರೆ ಬರೇ ಆರ್ಥಿಕವಾದದ್ದಷ್ಟೇ ಅಲ್ಲ, ಸಾಂಸ್ಕೃತಿಕ ಜವಾಬ್ದಾರಿ ಎಷ್ಟಿರಬೇಕು? ಬರೇ ಬಾಟಮ್‌ಲೈನ್ ನೋಡುತ್ತಾ ಈ ಪತ್ರಿಕೆಯಿಂದ ನಮಗೆ ಲಾಭವಿಲ್ಲವೆಂದು ಇಡೀ ಪತ್ರಿಕೆಯನ್ನು ನಿಲ್ಲಿಸಿದರೆ ಅದನ್ನು ಓದುವ ವರ್ಗದ ಆಶಯಗಳನ್ನು ಬಲಿಕೊಟ್ಟಂತೆ. ಆದ್ದರಿಂದ ಒಂದು ಪತ್ರಿಕೆಯನ್ನು ಕಟ್ಟಿ ಬೆಳೆಸುತ್ತಿರುವಾಗ ಅದರ ವ್ಯವಸ್ಥಾಪಕ ಮಂಡಳಿ ಅದರ ಸೃಜನಶೀಲ ಸಂಪನ್ಮೂಲಗಳನ್ನು ಬೆಳೆಸುವುದರ ಜತೆಗೆ ಆ ಪತ್ರಿಕೆ ತನ್ನನ್ನು ತಾನು ಪೋಷಿಸಿಕೊಂಡು ಹೇಗೆ ಬೆಳೆಯಬಲ್ಲದೆನ್ನುವುದಕ್ಕೆ ರೂಪುರೇಷೆಗಳನ್ನು ಹಾಕಿಕೊಳ್ಳುವುದು ಬಹಳ ಅವಶ್ಯ. ಇಲ್ಲದಿದ್ದರೆ ಓದುಗವರ್ಗವನ್ನು ಬೆಳೆಸುವುದರ ಖುಷಿಯ ಜತೆಗೆ ಅದನ್ನು ಸಾಯಿಸುವುದರ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ.

ಕೆಂಡಸಂಪಿಗೆಯಂತ ಪತ್ರಿಕೆ ಶುರುವಾಗಿ ಬೆಳೆದಾಗ ಅದೊಂದು ಪತ್ರಿಕೆಯಾಗಿ ಉಳಿಯುವುದಿಲ್ಲ. ಒಂದು ಸಮುದಾಯದ ಆಶಯವಾಗುತ್ತದೆ. ಮುಖವಾಣಿಯಾಗುತ್ತದೆ. ತಾನೇ ಒಂದು ಸಮುದಾಯವಾಗುತ್ತದೆ. ತಾನೂ ಬೆಳೆಯುವುದರ ಜತೆಗೆ ತನ್ನನ್ನು ಬೆಳೆಸುತ್ತಿರುವ ಸಮುದಾಯವನ್ನೂ ಬೆಳೆಸುತ್ತದೆ.

ಹಾಗೆಯೇ ತಾನು ಸಾಯುವುದರ ಜತೆಗೆ ಈ ಸಮುದಾಯವನ್ನೂ ಅದರ ಆಶಯವನ್ನೂ ಸಾಯಿಸುತ್ತದೆ.

ಕನ್ನಡದ ಬಹಳಷ್ಟು ಲಿಟ್ ಮ್ಯಾಗಜೀನುಗಳು ಒಂದು ನಿರ್ದಿಷ್ಟ ಸಮುದಾಯದ ಮುಖವಾಣಿಯೆನ್ನುವುದು ಒಂದು ರೀತಿ ನಿಜ. ಎಲ್ಲವೂ ಸಮಷ್ಟಿಯ ಸಂಸ್ಕೃತಿ, ಸಾಹಿತ್ಯದ ಪೋಷಣೆಯ ಹೆಸರಲ್ಲೇ ಪ್ರಾರಂಭವಾದರೂ ಎಲ್ಲೋ ಒಂದು ಕಡೆ ಅವು ತಮ್ಮದೇ ಆದ ಒಂದು ಓದುಗವರ್ಗವನ್ನು ಸೃಷ್ಟಿಸಿಕೊಳ್ಳುತ್ತವೆ. ಹಾಗೆ ಸೃಷ್ಟಿಮಾಡಿದ ಓದುಗ ವರ್ಗಕ್ಕೆ ತಾನೇ ಬೆಳೆಸಿದ ಸಂವೇದನೆಯಿಂದಲೋ ಅಥವಾ ಅದೇ ಸಂವೇದನೆಯಿರುವ ಓದುಗರು ಮಾತ್ರ ಆ ಪತ್ರಿಕೆಗಳನ್ನು ಓದುತಾರೋ, ಓದುಗರೂ, ಪತ್ರಿಕೆಯೂ ಪರಸ್ಪರರ ಆಶಯಕ್ಕೆ ಧೋರಣೆಗೆ ಪರಸ್ಪರ ಪೂರಕವಾಗಿ ಕೆಲಸ ಮಾಡಿರುತ್ತಾರೆ. ಆ ಆಶಯಗಳು, ನಂಬಿಕೆಗಳು ತನ್ಮೂಲಕ ಒಂದು ಚಳುವಳಿಯೇನಾದರೂ ಸೃಷ್ಟಿಯಾಗಿದ್ದಲ್ಲಿ ಅವುಗಳೆಲ್ಲದರ ನಿರ್ಗಮನದ ಜತೆಗೆ ಆ ಪತ್ರಿಕೆಯ ಆಯಸ್ಸೂ ಮುಗಿದಿರುತ್ತದೆ. ನಂತರ ಪತ್ರಿಕೆ ಇರಬೇಕೆಂದು ಯಾರೂ ಕೇಳುವುದೂ ಇಲ್ಲ. ಮುಚ್ಚಿಹೋಯಿತೆಂದು ಯಾರೂ ದುಃಖಿಸುವುದೂ ಇಲ್ಲ. ಇದೊಂದು ಪತ್ರಿಕೆಯ ಸ್ವಾಭಾವಿಕ ಮರಣ. ಅಂದರೆ ಪ್ರತೀ ಪತ್ರಿಕೆಗೂ ಒಂದು ನಿರ್ದಿಷ್ಟ ಆಶಯವಿದೆ, ಆಯಸ್ಸಿದೆ ಎಂದು ನಂಬಿದ ಸಂಪನ್ಮೂಲ ವ್ಯಕ್ತಿಗಳಿರುವವರೆಗೆ ಅದರ ಸಾವೂ ಕೂಡ ಅರ್ಥಪೂರ್ಣವಾಗುತ್ತದೆ. ಅದರ ಬದುಕು ಮಾತ್ರ ಮುಖ್ಯವಾಗುತ್ತದೆ.

ಹಾಗೆಯೇ ಕೆಂಡಸಂಪಿಗೆಯೂ ಒಂದು ಸಮುದಾಯದ ಮುಖವಾಹಿನಿಯಾಗಿತ್ತೆಂಬುದನ್ನು ನಾವು ಗಮನದಲ್ಲಿದಬೇಕು. ಈ ಸಮುದಾಯ ಬಹುಸಂಖ್ಯಾತವೇನಲ್ಲ. ಬದಲಾದ ಜೀವನ ಶೈಲಿ, ಮೌಲ್ಯಗಳು, ಭೌಗೋಳಿಕ ರೇಖೆಯನ್ನು ಮೀರಿದ ಡಯಾಸ್ಪೊರಕ್ಕೆ ಹಾಗೆಯೇ ಎಲ್ಲದಕ್ಕೂ ಸಾಮಾನ್ಯವಾದ ನಮ್ಮ ಅವಸರ, ಧಾವಂತಕ್ಕೆ ಒಂದು ಅರ್ಥಪೂರ್ಣತೆಯನ್ನು ತಂದಿತ್ತು. ಹಾಗೆ ನೋಡಿದರೆ ಈ ಅಂತರ್ಜಾಲವೆನ್ನುವುದೇ ಒಂದು ಅವಸರದ ಓದಿಗೆ ಪ್ರಶಸ್ತವಾದ ತಾಣ. ಇಲ್ಲಿ ನಾವು ಅಂತರ್ಜಾಲವನ್ನು ಸರ್ಪ್ ಮಾಡುತ್ತೇವೆ, ಬ್ಲಾಗುಗಳನ್ನು ಸ್ಕ್ರೋಲಿಸುತ್ತೇವೆ. ಒಂದು ತಾಣದಿಂದ ಇನ್ನೊಂದು ತಾಣಕ್ಕೆ ಜಿಗಿಯುತ್ತೇವೆ. ನಮ್ಮ ಅಟೆಂಶನ್ ಸ್ಪಾನ್ ಕೇವಲ ಸೆಕೆಂಡುಗಳಲ್ಲಿ ಅಳತೆಮಾಡಲ್ಪಡುವ ಈ ಲೋಕದಲ್ಲಿ ಪ್ರತಿದಿನ ಬೆಳಿಗ್ಗೆ ಹದಿನೈದು ನಿಮಿಷವಾದರೂ ನಮ್ಮನ್ನು ಕೆಂಡಸಂಪಿಗೆ.ಕಾಮ್ ಎಂಬ ತಾಣ ತನ್ನ ಮುಂದೆ ಕೂರಿಸಿಕೊಳ್ಳಲು ಸಫಲವಾಗಿತ್ತು. ಕೆಲವೊಮ್ಮೆ ಸ್ಕ್ರೋಲಿಸುತ್ತಾ, ಮಗದೊಮ್ಮೆ ಓದುತ್ತಾ, ಆಗಾಗ ಕಮೆಂಟಿಸುತ್ತಾ, ಬಹಳಬಾರಿ ಬರೇ ಕಮೆಂಟುಗಳನ್ನು ಮಾತ್ರ ಓದುತ್ತಾ, ಕಮೆಂಟಿಗೊಂದು ಕಮೆಂಟಿಸುತ್ತಾ, ಒಮ್ಮೆ ಓದಲಿಕ್ಕಾಗದನ್ನು ಮತ್ತೆ ಮಧ್ಯಾಹ್ನವೋ, ಸಂಜೆಯೋ ಓದಲಿಕ್ಕೆ ಮತ್ತೆ ಮತ್ತೆ ತನ್ನ ಬಳಿ ಬರುವಂತೆ ಮಾಡಲೂ ಸಫಲವಾಗಿತ್ತು.

ಆದರೆ, ಸೃಜನಶೀಲತೆಯೆನ್ನುವುದು ಬರೇ ಬೌದ್ಧಿಕತೆಯ ಮಟ್ಟದಲ್ಲಿ ನಿಂತುಬಿಟ್ಟರೆ ಆಗುವುದೇ ಹೀಗೆ. ವ್ಯವಹಾರದಲ್ಲಿ ಕ್ರಿಯೇಟಿವ್ ಆಗದಿದ್ದಲ್ಲಿ ಇಂಥ ಅಕಾಲ ಮರಣಗಳು ಬರಬಹುದೇನೋ? ಈ ಅಂತರ್ಜಾಲದ ಜಾಲತಾಣವನ್ನು ನಿರ್ವಹಿಸಿಕೊಂಡು ಹೋಗುವುದರ ಲೊಜಿಸ್ಟಿಕ್ಸ್ ನನಗೆ ಗೊತ್ತಿಲ್ಲ, ಈಗಂತೂ ಕಾಸಿಗೊಂದು ಕೊಸರಿಗೊಂದು ಬ್ಲಾಗುಗಳು ಇರುವ ಈ ಕಾಲದಲ್ಲಿ ಇಂಥ ಒಂದು ಸೈಟು ತನ್ನ ಉಳಿಕೆಯನ್ನು ಸೃಜನಶೀಲವಾಗಿ ಗ್ರಹಿಸಲಿಲ್ಲವಲ್ಲ ಎನ್ನುವ ವ್ಯಥೆಯಿದೆ. ಇದಕ್ಕೆ ಬೇಕಾದ ಜಾಹಿರಾತುಗಳು ಸಿಗಲಿಲ್ಲವೇ? ಹೂಡಿಕೆದಾರರಿಲಿಲ್ಲವೇ? ಎಲ್ಲವೂ ವೇದ್ಯ. ಆದರೆ, ಯಾಕಾಗಲಿಲ್ಲ.

ಅಂತರ್ಜಾಲವೆನ್ನುವುದೇ ಒಂದು ಮಿಥ್ಯಾಪ್ರಪಂಚ. ಇಲ್ಲಿ ಎಲ್ಲವೂ ವರ್ಚುಯಲ್. ಪತ್ರಿಕೆ ಪ್ರಿಂಟಾಗಿದ್ದರೆ ಎಷ್ಟು ಖರ್ಛಾಗಿದೆ ಎನ್ನುವ ಲೆಕ್ಕವಾದರೂ ಸಿಗುತ್ತದೆ. ಆದರೆ, ಬರೇ ಹಿಟ್‌ಗಳನ್ನು ನಂಬಿಕೊಂಡು ಇದರ ಮೇಲೆ ಬಂಡವಾಳ ಹೂಡುವ ಜಾಹಿರಾತು ಹೂಡುವ ಮಂದಿ ಸಿಗಲಿಲ್ಲವೇ?

ಬಲ್ಲವರು ಯಾರೋ ಹೇಳಿದ್ದರು. ನಾವು ಯಾವುದೇ ವೆಬ್‌ತಾಣವನ್ನು ಕ್ಲಿಕ್ಕಿಸಿದರೆ ಸಾಕು ಅದನ್ನು ನಾವು ಓದುತ್ತಿದ್ದೇವೆ ಎಂತಲೇ ಅರ್ಥ. ಇದಕ್ಕೆ ಹತ್ತಿರವಾದ ಹೋಲಿಕೆಯೆಂದರೆ ಅಂಗಡಿಯಿಂದ ಒಂದು ಪುಸ್ತಕವನ್ನು ಖರೀದಿಸಿ ತಂದರೆ ಆಯಿತು, ಅದನ್ನು ಓದಿದಂತೆಯೇ. ಪುಸ್ತಕವ್ಯಾಪಾರಿಗೆ ನೀವು ಆ ಪುಸ್ತಕವನ್ನು ಓದುತ್ತೀರೋ ಇಲ್ಲವೋ ಅನ್ನುವುದು ಮುಖ್ಯವಾಗುವುದೇ ಇಲ್ಲ.

ನಾನೂಹಿಸಿಕೊಳ್ಳುವ ಕಾರಣ ಬಹಳ ಸರಳ. ತಪ್ಪಿರಲೂ ಬಹುದು. ಸಂಪನ್ಮೂಲದ ಕೊರತೆಯಿದ್ದರೂ ಇರಬಹುದು. ಕನ್ನಡದ ಬಹಳಷ್ಟು ಈ ತರದ ಸೃಜನಶೀಲ ಚಟುವಟಿಕೆಗಳು ನಡೆಯುವುದು ಲಾಭವನ್ನು ನೆಚ್ಚಿಕೊಂಡು ಅಲ್ಲ ಎನ್ನುವುದು ಪ್ರಾಯಶಃ ನಮಗೆಲ್ಲ ಗೊತ್ತಿರುವ ವಿಷಯ. ಎಲ್ಲಿಯವರೆಗೆ ಲಾಭ, ನಷ್ಟಗಳ ಮೊಬಲಗು ಸರಿಹೋಗುತ್ತದೆಯೋ ಅಲ್ಲಿಯವರೆಗೆ ಇದು ನಡಕೊಂಡು ಹೋಗಬೇಕು. ಆದರೆ ಈ ಲಾಭ ನಷ್ಟಗಳ ಲೆಕ್ಕಚುಕ್ಕಿಗ ಬೇರೆ ವ್ಯಾಪಾರಿಯಾಗಿ, ಈ ಸೃಜನಶೀಲ ಸಂಪನ್ಮೂಲ ಬೇರೆಯಾಗಿದ್ದಲಿ, ಈ ಎರಡೂ ಶಕ್ತಿಗಳು ಸಮಾನಾಂತರವಾಗಿ ಕೆಲಸ ಮಾಡಲು ಶುರುಮಾಡುತ್ತವೆ. ಕ್ರಿಯೇಟಿವ್ ಟೀಮ್ ಹೆಚ್ಚು ಕ್ರಿಯಾಶೀಲವಾದಲ್ಲಿ ತಾಣದ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಓದುಗವರ್ಗದಲ್ಲಿ ಮೂಡಿಸಲಾಗುತ್ತದೆ. ಆದರೆ, ಯಾವ ಕಾರಣದಿಂದ ಈ ಪತ್ರಿಕೆ ನಿಂತರೂ ಕೆಲವಾದರೂ ಓದುಗರಿಗೆ ‘ಛೆ ಐ ವಾಸ್ ಟೇಕನ್ ಫಾರ್ ಅ ರೈಡ್’ ಎಂಬ ಭಾವನೆ ಬಂದಲ್ಲಿ ಅನುಮಾನವೇನಿಲ್ಲ. ಜಯಂತ ಕಾಯ್ಕಿಣಿಯವರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಭಾವನಾ’ ನಿಂತಾಗ ಕೂಡ ಪತ್ರಿಕೆಯ ಓನರ‍್ಮಂದಿಯ ಬಾಟಮ್‌ಲೈನಿನ ಲೆಕ್ಕವನ್ನು ನೋಡಿ ಓದುಗರಿಗೆ ಮೈ ಉರಿದುಹೋಗಿತ್ತು.

ಆದರೆ, ಯಾರ ಮೈ ಉರಿದುಹೋಗುತ್ತದೆ ಅನ್ನುವುದೂ ಇಲ್ಲಿ ಮುಖ್ಯ. ಬಹಳಷ್ಟು ಮಂದಿ ಕನ್ನಡದ ಓದುಗರು, ಬರಹಗಾರರು ತಂಪಾಡಿಗೆ ತಾವು ಓದಿ ಖುಷಿಪಡುವವರು. ಪತ್ರಿಕೆ ಇದ್ದರೆ ಓದುತ್ತೇವೆ, ಇಲ್ಲವಾ ಇನ್ನೇನಾದರೂ ಓದುತ್ತೇವೆ ಎನ್ನುವ ಧೋರಣೆ ಯಿರುವವರು, ಮತ್ತು ಒಂದು ಪತ್ರಿಕೆ ಬರೆ ಪತ್ರಿಕೆಯಾಗಿ ಉಳಿದು ನಿಮ್ಮ ಜೀವನಶೈಲಿಯ ಯಾವ ಭಾಗವೂ ಆಗದೇ ಇದ್ದಲ್ಲಿ ಅದರ ಉಳಿವು ಅಸಾಧ್ಯ.
ಇದರ ಪರಿಣಾಮವೆಂದರೆ, ಇನ್ನಾರಾದಾರೂ ಕನ್ನಡದಲ್ಲಿ ಒಂದು ವೆಬ್ ಪತ್ರಿಕೆಯನ್ನು ಶುರುಮಾಡುತ್ತೀವೆಂದರೆ ಅದನ್ನು ಹೇಗೆ ನಂಬುವುದು ಎನ್ನುವ ಪರಿಸ್ಥಿತಿ ಬಂದು ಹೋಗಿದೆ. ಅಸಂಖ್ಯಾತ ಬ್ಲಾಗುಗಳು ಮತ್ತು ಮುದ್ರಣದಲ್ಲಿ ಲಭ್ಯವಿರುವ ಪತ್ರಿಕೆಗಳ ಅಂತರ್ಜಾಲ ಆವೃತ್ತಿಗಳನ್ನು ಬಿಟ್ಟರೆ ಅಂತರ್ಜಾಲ ಕ್ಕೇ ಎಕ್ಸ್‌ಕ್ಲ್ಯೂಸಿವ್ ಆದ ಒಂದು ಸದಭಿರುಚಿಯ ಪತ್ರಿಕೆ ಕನ್ನಡದಲ್ಲಿ ಬರುತ್ತದೆ ಎಂದರೆ ಅದರ ಬಗ್ಗೆ ನಂಬುವುದೇ ಅಸಾಧ್ಯವೇನೋ ಎಂಬ ಪರಿಸ್ಥಿತಿ ಬಂದು ಕೂತಿದೆ.

ಇದಕ್ಕೆ ಬರೇ ಕೆಂಡಸಂಪಿಗೆಯ ವ್ಯವಸ್ಠಾಪಕರನ್ನು ದೂರಿದಲ್ಲಿ ತಪ್ಪಾಗುತ್ತದೆ. ಇದರಲ್ಲಿ ನಮ್ಮ ಪಾಲೂ ಇದೆ ಎಂದು ನಂಬಿದಲ್ಲಿ ಮಾತ್ರ ಏನಾದರೂ ಅರ್ಥಪೂರ್ಣವಾಗಿ ಮಾಡಬಹುದು.

Wednesday, October 14, 2009

ಅಧಿಕಾರ- ಅಂತರ ಮಾಪಕ

೧೯೯೦ ರ ಜನವರಿ ತಿಂಗಳಲ್ಲಿ ಕೆರಿಬಿಯನ್‌ನ ‘ಏವಿಯಂಕ ಏರ್‌ಲೈನ್’ನ ವಿಮಾನವೊಂದು ನ್ಯೂಯಾರ್ಕಿನ ಲಾಂಗ್ ಐಲ್ಯಾಂಡಿನ ಬಳಿ ಒಂದು ಎಸ್ಟೇಟಿನ ಬಳಿ ಅಪಘಾತಕ್ಕೀಡಾಗಿತ್ತು. ಕಾರಣ ಬಹಳ ಸರಳವಾಗಿತ್ತು-ವಿಮಾನದಲ್ಲಿ ಇಂಧನ ಮುಗಿದುಹೋಗಿತ್ತಂತೆ. ಅಂದು ನ್ಯೂಯಾರ್ಕಿನ ಜಾನ್ ಎಫ್ ಕೆನಡಿ ವಿಮಾನನಿಲ್ದಾಣದಲ್ಲಿ ಕೆಟ್ಟ ಹವೆ, ವಿಪರೀತ ವಿಮಾನಜಂಗುಳಿ ಮತ್ತು ರನ್‌ವೇ ಅಭಾವದಿಂದ ಬಹಳಷ್ಟು ವಿಮಾನಗಳನ್ನು ಸರಿಯಾದ ಸಮಯದಲ್ಲಿ ಇಳಿಸಲಾಗಲಿಲ್ಲ. ಬಹಳಷ್ಟು ವಿಮಾನಗಳು ಗಾಳಿಯಲ್ಲಿ ಹಾರಾಡುತ್ತಾ ತಮ್ಮ ಸರದಿಗಾಗಿ ಕಾಯುತ್ತಿದ್ದವು. ಆ ಸಮಯದಲ್ಲಿ ಹಾಗೇ ಹಾರಾಡುತ್ತಿದ್ದ ಏವಿಯಂಕ ವಿಮಾನವು ತನ್ನಲ್ಲಿ ಉಳಿದಿದ್ದ ಇಂಧನವನ್ನೆಲ್ಲ ಉರಿಸಿ ಖಾಲಿಯಾಯಿತು. ಪೈಲಟ್ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದ್ದರೆ ಇದೇ ಇಂಧನವನ್ನು ಉಪಯೋಗಿಸಿಕೊಂಡು ಈ ವಿಮಾನ ಹತ್ತಿರವಿದ್ದ ಬಾಸ್ಟನ್ ಅಥವಾ ಫಿಲಡೆಲ್ಫಿಯಾದಲ್ಲಿ ಬಹಳ ಸುಲಭವಾಗಿ ಲ್ಯಾಂಡ್ ಆಗಬಹುದಾಗಿತ್ತು. ಆದರೆ, ಹಾಗೆ ಆಗಲಿಲ್ಲ.

ವಿಮಾನದ ಪೈಲಟ್ ನ್ಯೂಯಾರ್ಕಿನ ಏರ್ ಟ್ರಾಫಿಕ್ ಕಂಟ್ರೋಲರ‍್ಗಳಿಗೆ ತನ್ನ ವಿಮಾನದಲ್ಲಿ ಇಂಧನದ ಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿದೆ ಎಂಬ ವಿಷಯವನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಸುವುದರಲ್ಲಿ ಎಡವಿದ್ದ. ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ಭಾಶೆಯಲ್ಲಿ ಈ ಪೈಲಟ್ ಹೇಳಿದ ‘We are running out of gas’ ಅಂಥಾ ದೊಡ್ದ ವಿಷಯವೇ ಅಲ್ಲ. ಯಾಕೆಂದರೆ, ಎಲ್ಲ ವಿಮಾನಗಳಲ್ಲಿಯೂ ಲ್ಯಾಂಡ್ ಆಗುವ ಮುನ್ನ ಸಾಮಾನ್ಯವಾಗಿ ಇಂಧನ ಮುಗಿಯುವ ಮಟ್ಟಕ್ಕೆ ಬಂದಿರುತ್ತದೆ. ‘ತಾನು ಈಗ ಲ್ಯಾಂಡ್ ಆಗದಿದ್ದರೆ ವಿಮಾನಕ್ಕೆ ತೊಂದರೆಯಾಗುವ ಸಂಭವವಿದೆ. ಈಗ ಕೆಳಗಿಳಿಯಲೇ ಬೇಕು’ ಎಂದು ಅಧಿಕಾರಯುತವಾಗಿ ಆ ಪೈಲಟ್ ಹೇಳಿರಲಿಲ್ಲ. ನಂತರ ಈ ವಿಮಾನಕ್ಕೆ ರನ್‌ವೇ ಸಿಕ್ಕಿ ಅದು ನೆಲಕ್ಕೆ ಮುಟ್ಟುವ ಮುನ್ನ ವಿಮಾನದ ನಾಲ್ಕೂ ಇಂಜಿನ್‌ಗಳೂ ಸ್ಥಗಿತಗೊಂಡಿದ್ದವು. ವಿಮಾನ ನಿಲ್ದಾಣದ ಪಕ್ಕದಲ್ಲಿದ್ದ ಯಾವುದೋ ಒಂದು ಎಸ್ಟೇಟಿನಲ್ಲಿ ಅಪಘಾತಕ್ಕೊಳಗಾಯಿತು. ಎಪ್ಪತ್ಮೂರು ಜನ ಸ್ಥಳದಲ್ಲಿಯೇ ಸತ್ತರು.

ಮಾಲ್ಕಮ್ ಗ್ಲಾಡ್‌ವೆಲ್ ಎಂಬ ಬೆಸ್ಟ್‌ಸೆಲ್ಲರ್ ಸಾಹಿತಿಯೊಬ್ಬ ಬರೆದಿರುವ ‘The Outliers’ ಎನ್ನುವ ಪುಸ್ತಕದಲ್ಲಿ ಇಂಥ ಅಪಘಾತಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋಗುತ್ತಾನೆ. ‘ಮೇಲಣ ಅಧಿಕಾರಿಗಳ ನಿರ್ಣಯವನ್ನು ಕೊಂಚವೂ ಪ್ರಶ್ನಿಸಬಾರದೆಂಬ ಸಂಸ್ಕೃತಿಯಲ್ಲಿ ಬೆಳೆದುಬಂದ ಈ ಕೊಲಂಬಿಯನ್ ಪೈಲಟ್ಟುಗಳು ನ್ಯೂಯಾರ್ಕಿನ ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ನಿರ್ಣಯವನ್ನು ಪ್ರಶ್ನಿಸಲಾಗದೇ ಅಥವಾ ತಮ್ಮ ತುರ್ತನ್ನೂ ಅವರಿಗೆ ಸ್ಪಷ್ಟವಾದ ಪದಗಳಲ್ಲಿ ಸಂವಹಿಸಲಾಗದೇ ಇದ್ದುದೇ ಈ ಅಪಘಾತಕ್ಕೆ ಮೂಲ ಕಾರಣ’ ಎಂದು ನಿರ್ಧರಿಸುತ್ತಾನೆ.

ಇದೇ ನಿಟ್ಟಿನಲ್ಲಿ ಇಂಥ ವಿಮಾನಾಪಘಾತದ ಸಂಸ್ಕೃತಿಯನ್ನು ವಿಶ್ಲೇಷಿಸುತ್ತಾ “ ಕೆಲವೊಂದು ವಿಮಾನಗಳಲ್ಲಿ ಪೈಲಟ್ಟು-ಕೋಪೈಲಟ್ಟುಗಳ ಸಂಬಂಧ ಬಹಳ ಬೇರೆಯಾಗಿರುತ್ತದೆ. ಕೋ ಪೈಲಟ್ಟುಗಳು ಬಹಳಷ್ಟು ಬಾರಿ ಪೈಲಟ್ಟುಗಳಿಗೆ ಊಟ ಬಡಿಸುತ್ತಾರೆ, ಒಂದೇ ಹೋಟೆಲಿನಲ್ಲಿ ಉಳಿದುಕೊಳ್ಳುವುದಿಲ್ಲ. ಕೆಲವೊಮ್ಮೆ ಆತನಿಗೆ ವಿಸ್ಕಿ ಬೇಕಿದ್ದರೆ ಅದನ್ನು ತಂದುಕೊಟ್ಟು ಪೂರೈಸುತ್ತಾನೆ. ತನಗೆ ಕುಡಿಯಬೇಕೆನ್ನಿಸಿದರೆ ಮರೆಯಲ್ಲಿ ಹೋಗಿ ಕೈಮುಚ್ಚಿ ಕುಡಿಯುತ್ತಾನೆ. ಇದು ಧಣಿ-ಆಳಿನ ಸಂಬಂಧ’ ಎನ್ನುತ್ತಾನೆ.

ಏವಿಯಂಕ ವಿಮಾನದ ಕಾಕ್‌ಪಿಟ್‌ನಲ್ಲಿ ಆಡಿರಬಹುದಾದ ಸಂಭಾಷಣೆಯನ್ನು ಆಧರಿಸಿ ಗ್ಲಾಡ್‌ವೆಲ್ ಈ ತೀರ್ಮಾನಕ್ಕೆ ಬರಬಹುದು. ಕಾಕ್‌ಪಿಟ್ನಲ್ಲಿರುವ ಕೊ ಪೈಲಟ್ ಮತ್ತು ಫ್ಲೈಟ್ ಇಂಜಿನಿಯರ್ ಇಬ್ಬರಿಗೂ ತಮ್ಮ ವಿಮಾನ ಅಪಾಯಕಾರಿಯಾಗಿ ಹಾರಾಡುತ್ತಿದೆ ಎಂದು ಗೊತ್ತಿದ್ದರೂ ಪೈಲಟ್ಟಿನ ನಿರ್ಣಯವನ್ನು ಪ್ರಶ್ನಿಸುವ ಹಕ್ಕಿಲ್ಲ, ಎಂದು ತಿಳಿದಿದ್ದರೇ? ಹಾಗೆಯೇ, ಆ ಪೈಲಟ್ಟೂ ಕೂಡ ಅಷ್ಟೇ. ತನಗಿಂತ ಮೇಲಣ ಆಫೀಸರ್ ಎಂದು ಭಾವಿಸಿರುವ ನ್ಯೂಯಾರ್ಕಿನ ಏರ್‌ಟ್ರಾಫಿಕ್ ಕಂಟ್ರೋಲರುಗಳ ನಿರ್ಣಯವನ್ನು ಪ್ರಶ್ನಿಸುವುದಿರಲಿ, ತನ್ನ ತುರ್ತನ್ನೂ ಅವರಿಗೆ ತಲುಪಿಸಲಾಗಲಿಲ್ಲ. ಒಂದು ಘಟ್ಟದಲ್ಲಿ ‘ನನಗೆ ಸ್ಪಾನಿಶ್ ದುಭಾಷಿ ಬೇಕು’ ಎಂದು ಕೇಳಿದ್ದನಂತೆ.

ಆ ಕಾಕ್‌ಪಿಟ್ಟಿನ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳೋಣ. ಸ್ಪಾನಿಶ್ ಭಾಶೆಯನ್ನು ಮಾತಾಡುತ್ತಿರುವ ಇಬ್ಬರು ಪೈಲಟ್ಟುಗಳು, ವಿಮಾನದಲ್ಲಿ ಇಂಧನ ಮುಗಿದಿದೆ ಎಂದು ಎಲ್ಲರಿಗೂ ಗೊತ್ತಿದೆ. ತನ್ನ ವಿಮಾನ ಅಪಾಯದಲ್ಲಿದೆ ಎಂದು ಗೊತ್ತಿದ್ದ ಕ್ಯಾಪ್ಟನ್ ಇದನ್ನು ತನ್ನ ಮೇಲಧಿಕಾರಿಗಳಿಗೆ ಹೇಳಲಾಗದೇ ಇದ್ದುದಕ್ಕೆ ಕಾರಣವೇನಿರಬಹುದು. ಒಂದು, ಪರಿಣಾಮಕಾರಿಯಾಗಿ ಇಂಗ್ಲಿಶ್ ಭಾಷೆಯನ್ನು ಬಳಸುವುದು ಆತನಿಗೆ ಸಾಧ್ಯವಾಗಿಲ್ಲ. ಎರಡನೆಯದು ಅಧಿಕಾರಯುತವಾದ ಅಮೆರಿಕನ್ ಉಚ್ಚಾರದಲ್ಲಿ ‘I am asking you a direct question. Do you consider your situation as emergency or priority? ಎಂದು ಕೇಳಿದಾಗ ತನ್ನ ಜತೆಗಿರುವ ಕೈಕೆಳಗಿನ ಅಧಿಕಾರಿಗಳ ಮುಂದೆ ತನ್ನ ಮ್ಯಾಚಿಸ್ಮೋವನ್ನು ಬಿಡಲಾಗದೆ ‘ಪ್ರಯಾರಿಟಿ’ಎಂದು ಹೇಳಿದ್ದಾನೆ. ಇಡೀ ವಿಮಾನದಲ್ಲಿರುವ ಜೀವಗಳ ಜವಾಬ್ದಾರಿ ತನ್ನದು ಎಂದು ಗೊತ್ತಿದ್ದಾಗಲೂ ತಾನು ಕೊಲಂಬಿಯನ್, ಕಂದು ಬಣ್ಣದವ, ಬಿಳೀ ಬಣ್ಣದ ಇಂಗ್ಲಿಶ್ ಮಾತಾಡುವ ಜಗತ್ತಿನ ಅತಿದೊಡ್ಡ ವಿಮಾನನಿಲ್ದಾಣದ ಏರ‍್ಟ್ರಾಫಿಕ್ ಕಂಟ್ರೊಲರ್ ಜತೆ ಮಾತಾಡುತ್ತಿದ್ದೇನೆ ಎನ್ನುವ ಅಂಶ ಅವನ ಬಾಯನ್ನು ಕಟ್ಟಿಹಾಕಿದೆ. ತನ್ನ ತುರ್ತನ್ನೂ ಸಂವಹಿಸಲಾಗದೇ ಹೋಗಿದ್ದಾನೆ.

* * *

ಇದನ್ನು ಮಾಲ್ಕಮ್ ಗ್ಲಾಡ್‌ವೆಲ್ ‘ಅಧಿಕಾರ-ಅಂತರ- ಮಾಪಕ’ ಎಂದು ಕರೆಯುತ್ತಾನೆ. (Power distance index). ಶ್ರೇಣೀಕೃತ ಸಂಸ್ಕೃತಿಯಲ್ಲಿ ಮೇಲಧಿಕಾರಿಯ ಜತೆ ಕೆಳಗಿನ ಅಧಿಕಾರಿ ಅಥವಾ ಒಂದು ಸಂಸಾರದ ಮುಖ್ಯಸ್ಥನ ಜತೆ ಸಂಸಾರದ ಇನ್ನಿತರರು ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನು ಕೆಳಗಿನಿಂದ ನೋಡುವ ಮಾಪಕ ಇದು. ಈ ಸೂಚಿ ಹೆಚ್ಚಿದ್ದಷ್ಟೂ ಅಧಿಕಾರಗಳ ನಡುವಿನ ಅಂತರವೂ ಹೆಚ್ಚಿರುತ್ತದೆ. ಜರ್ಮನಿಯಲ್ಲಿ ಈ ಮಾಪಕ ೩೫ರಷ್ಟಿದ್ದರೆ, ಕೆಲವೊಂದು ಅರಬ್ ರಾಷ್ಟ್ರಗಳಲ್ಲಿ ಇದು ೮೦ರಷ್ಟು ಇದೆ. ಅಮೆರಿಕಾದಲ್ಲಿ ಇದು ೪೦ರ ಸಮೀಪದಲ್ಲಿದೆ. ಭಾರತ, ಪಾಕಿಸ್ತಾನ, ಕೊರಿಯಾ, ಚೀನಾ ಮುಂತಾದ ಏಷಿಯಾದ ದೇಶಗಳಲ್ಲಿ ಇದು ಹೆಚ್ಚಾಗಿದ್ದರೆ, ಜಪಾನ್, ಸಿಂಗಪೂರ್, ಜರ್ಮನಿ, ಅಮೆರಿಕ, ಇಂಗ್ಲೆಂಡುಗಳಲ್ಲಿ ಇದು ಕಡಿಮೆ ಇದೆ.

ಇದನ್ನು ನಾವು ದಿನನಿತ್ಯದ ವ್ಯವಹಾರದಲ್ಲಿಯೂ ಮತ್ತು ನಾವು ಉಪಯೋಗಿಸುವ ಭಾಷೆಯಲ್ಲಿಯೂ ಕಾಣಬಹುದು. ಇಂಗ್ಲಿಷಿನಲ್ಲಿ ಮರ್ಯಾದಾಸೂಚಕ ಬಹುವಚನವಿಲ್ಲ. ಅಂದರೆ, ಕನ್ನಡದಲ್ಲಿದ್ದಂತೆ ನೀನು, ನೀವು, ತಾವುಗಳ ಅಂತರ ಇಂಗ್ಲಿಶ್ ಭಾಶೆಯಲ್ಲಿಲ್ಲ. ಇಲ್ಲಿ ಮೇಲಧಿಕಾರಿಗಳು ಮತ್ತು ಕೆಳಗಿನ ಅಧಿಕಾರಿಗಳು ಇಬ್ಬರೂ ಒಂದೇ ಪ್ರತ್ಯಯವನ್ನು ಉಪಯೋಗಿಸಿ ಮಾತಡುತ್ತಾರೆ. ಹೆಚ್ಚೆಂದರೆ, ಮಿಸ್ಟರ್, ಡಾಕ್ಟರ್ ಎಂಬ ನಾಮಪೂರ್ವ ವಿಶೇಷಣಗಳನ್ನು ಉಪಯೋಗಿಸಿದರೆ ಅಥವಾ ಕೊನೆಯ ಹೆಸರನ್ನು ಉಪಯೋಗಿಸಿದಾಗ ಅದು ಮರ್ಯಾದೆಯನ್ನು ಸೂಚಿಸುವಂತಾಗುತ್ತದೆ. (ಎ ಕೆ ರಾಮಾನುಜನ್ ರವರ ಸಂಸ್ಕಾರದ ಇಂಗ್ಲಿಶ್ ತರ್ಜುಮೆಯಲ್ಲಿ ‘You have to respect me . Call me in Pleural. (ಮರ್ಯಾದೆ ಕೊಟ್ಟು ಮಾತನಾಡು,ಬಹುವಚನದಲ್ಲಿ ಕರೆ) ಎಂಬ ಉಪಯೋಗ ಅನೇಕ ಇಂಗ್ಲಿಶ್ ಓದುಗರಿಗೆ ಗೊಂದಲವನ್ನುಂಟುಮಾಡಿತ್ತಂತೆ.

ಅಂದರೆ, ಭಾಷೆಯ ಉಪಯೋಗ ಕೂಡ ಈ ಶ್ರೇಣೀಕೃತ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಏ. ಏನೋ, ಏನ್ರೀ, ಏನಪ್ಪಾ, ಏನ್ಸಾರ್ ಹೀಗೆ ಒಬ್ಬ ವ್ಯಕ್ತಿ ತನ್ನ ಅಂತಸ್ತಿಗನುಗುಣವಾಗಿ ಜನರನ್ನು ಸಂಭೋದಿಸುವುದು ಈ ಅಂತರ ಮಾಪಕ ಹೆಚ್ಚಾಗಿರುವ ದೇಶಗಳಲ್ಲಿ ನಾವು ಕಾಣಬಹುದು. ಕನ್ನಡ ಕೂಡ ಇದಕ್ಕೆ ಹೊರತಲ್ಲ.

ಕಾಕ್‌ಪಿಟ್ಟಿನಲ್ಲಿದ್ದ ಇಬ್ಬರೂ ಅಮೆರಿಕನ್ನರಾಗಿದರೆ ಕೊಪೈಲಟ್ ‘Hey.. listen here, buddy. We need to land this flight.. like right now’ ಎಂದು ಹೇಳುತ್ತಿದ್ದನೇ.

ಬಹುಶಃ ಹೌದು

* * *

ನಾನು ಕೆಲಸ ಮಾಡುತ್ತಿರುವ ಕಡೆ ಅನೇಕ ಬೇರೆಬೇರೆ ದೇಶಗಳಿಂದ ಅಮೆರಿಕಾಕ್ಕೆ ವಲಸೆಬಂದಿರುವ ಕುಟುಂಬಗಳಿವೆ. ಮಿನೆಸೊಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೊಮಾಲಿಯಾದಿಂದ ರಾಜಕೀಯ ಸಂತ್ರಸ್ತರ ಕೋಟಾದಡಿಯಲ್ಲಿ ಜನ ವಲಸೆ ಬಂದಿದ್ದಾರೆ. ಅವರಿಗೆ ಒಂದಕ್ಷರವೂ ಇಂಗ್ಲಿಶ್ ಬರುವುದಿಲ್ಲ. ಆದರೆ ಮಿನೆಸೊಟದಲ್ಲಿ ಇವರ ಹಕ್ಕುಗಳನ್ನು ಸರಿಯಾಗಿ ಅವರಿಗೆ ತಿಳಿಯಪಡಿಸುವ ಅನೇಕ ರಾಜಕೀಯ ಅಥವಾ ಎನ್ಜೀಓ ತರದ ಸಂಸ್ಥೆಗಳಿದ್ದಾವೆ. ಯಾವುದೇ ಆರೋಗ್ಯವಿಮೆ ಇವರಿಗಿಲ್ಲವಾದರಿಂದ ಇವರ ಸಣ್ಣಪುಟ್ಟ ಕಾಯಿಲೆಗಳಿಗೂ ಇವರು ಅತಿ ದುಬಾರಿಯಾದ ಎಮೆರ್ಜೆನ್ಸಿ ಡಿಪಾರ್ಟ್‌ಮೆಂಟನ್ನೇ ಅವಲಂಬಿಸಿರುತ್ತಾರೆ. (ಇವರಿಗೆ ಎಲ್ಲ ಆಸ್ಪತ್ರೆಗಳಲ್ಲಿಯೂ ಸೇವೆ ಪುಕ್ಕಟೆ ಎನ್ನುವುದು ಒಂದು ಅಂಶ) ಅಷ್ಟೇ ಅಲ್ಲ, ಮಗುವಿಗೆ ಸಣ್ಣಗೆ ನೂರು ಡಿಗ್ರಿ ಜ್ಚರ ಬಂದರೂ ಇವರು ಆಂಬುಲೆನ್ಸನ್ನು ಕರೆಯುತ್ತಾರೆ. (ಆಸ್ಪತ್ರೆಗೆ ಬರಲು ಇವರ ಬಳಿ ಕಾರಿಲ್ಲದೇ ಇರುವುದೂ ಇದಕ್ಕೆ ಕಾರಣವಾಗಿರಬಹುದು)

ಬರೇ ಬಿಳೀವರ್ಣದ ಪ್ಯಾರಮೆಡಿಕ್‌ಗಳು, ನರ್ಸುಗಳು ತುಂಬಿರುವ ಆಸ್ಪತ್ರೆಗೆ ಮಗುವನ್ನೂ ಅಮ್ಮನನ್ನೂ ಆಂಬುಲೆನ್ಸಿನಲ್ಲಿ ಕರಕೊಂಡು ಬರಲಾಗುತ್ತದೆ. ಆಸ್ಪತ್ರೆಗಾಗಲೀ, ಆಂಬುಲೆನ್ಸಿಗಾಗಲೀ ಇವರು ನಯಾಪೈಸೆ ಕೊಡಲಾರರು ಎಂಬುದು ಎಲ್ಲರಿಗೂ ಗೊತ್ತು. ಮತ್ತು ಇವರೆಲ್ಲರ ಈ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ತಮ್ಮ ತೆರಿಗೆಯ ಹಣದಿಂದ ಎಂಬ ಅಂಶ ಬಿಳಿಯ ಪ್ಯಾರಮೆಡಿಕ್ ಮತ್ತು ನರ್ಸುಗಳನ್ನೂ ಆಗಾಗ್ಗೆ ರೊಚ್ಚಿಗೇಳಿಸುತ್ತದೆ. ‘bloddy, my tax dollars are at works, here’ ಎಂದು ಕೆಲವೊಮ್ಮೆ ಖುಲ್ಲಂಖುಲ್ಲ ಮಾತಾಡುತ್ತಾರೆ. ಆದರೆ, ನನ್ನನ್ನು ನೋಡಿದಾಕ್ಷಣ ಅವರಿಗೆ ಒಮ್ಮೊಮ್ಮೆ ತಬ್ಬಿಬ್ಬಾಗುತ್ತದೆ. ಕೆಲವರಿಗೆ ನನ್ನ ರಾಷ್ಟ್ರೀಯತೆಯೂ ಗೊತ್ತಿಲ್ಲ. ಆದರೂ, ನಾನು ಅವರಿಗಿಂತ ಹೆಚ್ಚು ಸೊಮಲಿಯಾಕ್ಕೆ ಹತ್ತಿರವೆಂದು ತಿಳಿದು ಕೆಲವೊಮ್ಮೆ ಕ್ಷಮೆ ಕೋರಿದ್ದಾರೆ.

ಇಲ್ಲಿ ಬರೇ ಅಧಿಕಾರ-ಅಂತರ ಮಾತ್ರ ಬರುವುದಿಲ್ಲ. ಈ ಅಧಿಕಾರ-ಅಂತರ ಸೂಚಿ ಹೆಚ್ಚಿರುವ ಭಾರತ ಮೂಲದವನಾದ ನಾನು ಮೇಲಿನ ಅಧಿಕಾರಿಗಳಿಗೆ ಮರ್ಯಾದೆಯನ್ನು ಕೊಡುವುದನ್ನೇನೋ ಕಲಿತಿದ್ದೇನೆ. ಆದರೆ, ನನ್ನ ಕೈಕೆಳಗಿರುವ ಕೆಲಸಗಾರರಿಂದ ಅದೇ ಮರ್ಯಾದೆಯನ್ನು ಪಡೆಯುವುದನ್ನು ನನ್ನ ಸಂಸ್ಕೃತಿ, ಪರಂಪರೆ ನನಗೆ ಕಲಿಸಿರಬೇಕು, ಅಲ್ಲವೇ? ಯಾಕೆಂದರೆ, ಆಸ್ಪತ್ರೆಯ ನಮ್ಮ ಡಿಪಾರ್ಟ್‌ಮೆಂಟಿನ ಬಾಸ್ ನಾನು. ಏನಿಲ್ಲದಿದ್ದರೂ ಈ ಪ್ಯಾರಮೆಡಿಕ್ ವೃತ್ತಿಪರವಾಗಿ ನಡಕೊಂಡಿಲ್ಲವೆಂದು ಅವನನ್ನು ಎಚ್ಚರಿಸುವುದು ನನ್ನ ಕರ್ತವ್ಯ ಮತ್ತು ಹೊಣೆಗಾರಿಕೆ ಕೂಡ.

ಆದರೆ, ಈ ಅಧಿಕಾರವೆನ್ನುವುದು ಬರೇ ಓದು ಅಥವಾ ಕೆಲಸದ ಅನುಭವದಿಂದ ಬರುವುದಿಲ್ಲ. ಅದೊಂದು ಮನಸ್ಥಿತಿ. ನನ್ನ ಕಂದು ಬಣ್ಣ, ಇಂಗ್ಲಿಷ್ ಉಚ್ಚಾರ ಮನಸ್ಸಿನ ಯಾವುದೋ ಮೂಲೆಯಲ್ಲಿ ಒಂದು ಕೀಳರಿಮೆಯನ್ನು ನನ್ನಲ್ಲಿ ಮೂಡಿಸಿಟ್ಟಿದೆಯಾ ಎಂದು ಅನುಮಾನವಾಗುತ್ತದೆ. ಅದು ನಾನಾಗೇ ಮೂಡಿಸಿಕೊಂಡಿದ್ದಲ್ಲ. ನಿಜ ಹೇಳಬೇಕೆಂದರೆ ನಾನು ಆ ಪ್ಯಾರಮೆಡಿಕ್‌ಗೆ ‘ನಿನ್ನ ವರ್ತನೆ ಉಚಿತವಾದದ್ದಲ್ಲ’ ಎಂದು ಹೇಳಿದ್ದರೆ ಆತ ಗ್ಯಾರಂಟಿ ‘ಸಾರಿ’ ಕೇಳುತ್ತಿದ್ದ. ಆದರೆ, ಸುತ್ತ ಕೆಲಸಮಾಡುತ್ತಿರುವ ಬಿಳೀ ಮಧ್ಯಮವರ್ಗ ಮತ್ತು ನಾನು ಉತ್ತಮ ಜೀವನ ಶೈಲಿಯನ್ನು ಹುಡಕೊಂಡು ಅಮೆರಿಕೆಗೆ ಬಂದಿದ್ದೇನೆ ಎಂದು ನನ್ನೊಳಗೆ ಇರುವ ಸುಪ್ತವಾದ ಒಂದು ಭಾವನೆ, ಕೀಳರಿಮೆ ನನ್ನ ಅಧಿಕಾರವಾಣಿಯನ್ನು ಕಿತ್ತುಕೊಂಡಿದೆ.

* * *

ಕೆಲವು ದಿನಗಳ ಹಿಂದೆ ಹೀಗೇ ಆಯಿತು. ಮೂರುವರ್ಷದ ಸೊಮಾಲಿ ಮಗುವೊಂದು ವಾಂತಿ ಮಾಡುತ್ತಿದೆಯೆಂದು ಅದರಮ್ಮ ಆಸ್ಪತ್ರೆಗೆ ಕರಕೊಂಡು ಬಂದಿದ್ದಳು. ಪರೀಕ್ಷೆ ಮಾಡಿದ ತಕ್ಷಣ ಮಗುವಿಗೆ ಏನೂ ತೊಂದರೆಯಿಲ್ಲವೆಂದು ನನ್ನ ವೈದ್ಯಬುದ್ಧಿ ಹೇಳಿತು. ನಾನು ಹೋಗಿ ಆಕೆಗೆ ‘ನಿನ್ನ ಮಗುವಿಗೆ ಏನೂ ತೊಂದರೆಯಿಲ್ಲ. ಅರಾಮಾಗಿ ಮನೆಗೆ ಕರಕೊಂಡು ಹೋಗು’ ಎಂದು ಹೇಳಿದೆ. ಆಕೆ, ದುಭಾಶಿಯೊಬ್ಬಳ ಮೂಲಕ ‘ಮಗುವಿಗೆ ನಾನು ಎಕ್ಸ್ ರೇ ಯಾಕೆ ಮಾಡುತ್ತಿಲ್ಲ? ಐವಿ ಯಾಕೆ ಹಾಕುತ್ತಿಲ್ಲ? ರಕ್ತಪರೀಕ್ಷೆ ಯಾಕೆ ಮಾಡುತ್ತಿಲ್ಲ?’ ಹೀಗೇ ಅನೇಕ ಪ್ರಶ್ನೆಗಳನ್ನು ಕೇಳಿದಳು. ನಾನು ರೋಸಿಹೋಗಿ ‘ಮಗುವಿಗೆ ಏನೂ ತೊಂದರೆಯಿಲ್ಲ. ನೀನು ಸುಮ್ಮನೆ ಹೀಗೆ ಸಣ್ಣ್ನಸಣ್ಣದಕ್ಕೆಲ್ಲಾ ಆಸ್ಪತ್ರೆಗೆ ಕರಕೊಂಡು ಬರುವುದನ್ನು ನಿಲ್ಲಿಸು’ ಎಂದು ಕೊಂಚ ಗದರಿದಹಾಗೇ ಹೇಳಿ ಆಕೆಯನ್ನು ಮನೆಗೆ ಕಳಿಸಿದೆ.

ಮನೆಗೆ ಬರುತ್ತಾ ನನಗೆ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಇದೇ ಒಂದು ಬಿಳಿಯ ಮಗು ಇದೇ ಪರಿಸ್ಥಿತಿಯಲ್ಲಿ ಬಂದಿದ್ದರೆ ನಾನು ಇದೇ ರೀತಿ ಮಾಡುತ್ತಿದ್ದೆನಾ ಎಂದು. ಪ್ರಾಯಶಃ ಮಗುವಿನ ಅಮ್ಮ ಏನು ಕೇಳುತ್ತಾಳೋ ಎಲ್ಲವನ್ನೂ ಮಾಡಿ ಕಳಿಸುತ್ತಿದ್ದನೇನೋ? ಸೊಮಾಲಿ ಮಗುವಿನ ಅಮ್ಮನಿಗೆ ಭಾಷೆ ಬರದಿರುವುದು ಮತ್ತು ನಾನು ಮತ್ತು ಆಕೆ ಇಬ್ಬರೂ ಹೊರಗಿನಿಂದ ಅಮೆರಿಕಾಕ್ಕೆ ಬಂದಿರುವುದರಿಂದ ನಾನು ನನ್ನ ಸಹಜ ಅಧಿಕಾರಯುತವಾದ ಭಾಷೆಯಲ್ಲಿ ನನ್ನ ಕೆಲಸವನ್ನು ಮಾಡಿದ್ದೆ. ಬಹುಷಃ ಆಕೆ ಸೊಮಾಲಿ ಎಂದು ನಾನು ನನ್ನ ಅಧಿಕಾರವನ್ನು ಹೆಚ್ಚಾಗಿಯೇ ಉಪಯೋಗಿಸಿದ್ದನೇನೋ.

ಆದರೆ, ಆಕೆಯೂ ನನ್ನ ಹಾಗೆ ಅಮೆರಿಕಾಕ್ಕೆ ಬಂದು ಇಲ್ಲಿಯೇ ನೆಲಸುವ ಪ್ರಯತ್ನದಲ್ಲಿರುವವಳಲ್ಲವೇ? ಆಕೆ ಬಿಡಲಿಲ್ಲ. ಮತ್ತೆ ಮಗುವನ್ನು ಕರಕೊಂಡು ಬಂದಳು. ಬಂದವಳೇ ‘ಮಗು ಒಂದು ತೊಟ್ಟೂ ನೀರು ಕುಡಿಯುತ್ತಿಲ್ಲ. ನೀನು ಐವಿ ಹಾಕಲೇಬೇಕು’ ಎಂದು ಗಲಾಟೆ ಮಾಡಹತ್ತಿದಳು. ಮತ್ತೆ ಮಗುವನ್ನು ಕೂಲಂಕಶವಾಗಿ ಪರೀಕ್ಷೆಮಾಡಿ, ಮಗುವಿಗೆ ಏನೂ ತೊಂದರೆಯಿಲ್ಲದಿದ್ದರೂ- ಒಂದು ಐವಿಹಾಕಿ ಒಂದು ಲೀಟರ್ ಸಲೈನ್ ಕೊಟ್ಟರೆ ನನ್ನ ಗಂಟೇನೂ ಹೋಗುವುದಿಲ್ಲ, ಎಂದು ನಿರ್ಧರಿಸಿ ಮಗುವನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡುವಾ ಎಂದು ಆಸ್ಪತ್ರೆಯಲ್ಲಿ ಈ ಮಗುವನ್ನು ನೋಡಿಕೊಳ್ಳುವ ಡಾಕ್ಟರಿಗೆ ಫ಼ೋನಾಯಿಸಿದೆ.

ಆದರೆ, ಏನು ಮಾಡಿದರೂ ಮೈಕೈ ತುಂಬಿಕೊಂಡು ಗುಂಡುಗುಂಡಾಗಿದ್ದ ಆ ಮಗುವಿಗೆ ಐವಿ ಹಾಕಲು ಆಸ್ಪತ್ರೆಯ ಯಾವ ನರ್ಸಿಂದಲೂ ಸಾಧ್ಯವಾಗಲಿಲ್ಲ. ಮಗುವನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿ ಆ ಆಸ್ಪತ್ರೆಯ ಡಾಕ್ಟರುಗಳಿಗೆ ಫೋನು ಮಾಡಿ ಎಲ್ಲವನ್ನೂ ಸಜ್ಜುಗೊಳಿಸಿ ಅಮ್ಮನ ಜತೆ ಮಾತಾಡಲು ಹೋದೆ.

ಅಷ್ಟರಲ್ಲಿ ಆ ಮಗುವಿನ ಅಪ್ಪ ಬಂದಿದ್ದ. ಆತನಿಗೆ ಕೊಂಚ ಇಂಗ್ಲಿಶ್ ಬರುತ್ತಿತ್ತು. ‘ನಾಳೆ ಬೆಳಗಾದರೆ ನನ್ನದು ಮತ್ತು ನನ್ನ ಹೆಂಡತಿಯದು ಸಿಟಿಜನ್‌ಶಿಪ್ ಸಂದರ್ಶನ ಇದೆ. ಮಗುವನ್ನು ಆಸ್ಪತ್ರೆಗೆ ಯಾಕೆ ಅಡ್ಮಿಟ್ ಮಾಡಬೇಕು? ಮಗು ಆರಾಮಾಗೇ ಇದೆಯಲ್ಲ’ ಎಂದು ಕೇಳಿದಾಗ ನಾನು ಹೆಚ್ಚು ಮಾತಾಡದೇ ಮಗುವಿನ ತಾಯಿಯ ಮುಖನೋಡಿದೆ. ‘ನನ್ನ ಪ್ರಕಾರ ಮಗುವಿಗೆ ವಾಂತಿ ನಿಲ್ಲಲು ಒಂದೆರಡು ಮಾತ್ರೆಕೊಟ್ಟು ಮನೆಗೆ ಕರಕೊಂಡು ಹೋದರೆ ಸಾಕು. ಆದರೆ, ನಿನ್ನ ಹೆಂಡತಿ ನನ್ನ ಮಾತು ಕೇಳಬೇಕಲ್ಲ. ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕಂತೆ. ಇಲ್ಲಿ ಈ ಆಸ್ಪತ್ರೆಯಲ್ಲಿರುವವರೆಲ್ಲ ನಿನ್ನ ಮಗುವಿಗೆ ಐವಿ ಹಾಕಲು ಪ್ರಯತ್ನಪಟ್ಟು ಸೋತಿದ್ದೇವೆ. ನಿನ್ನ ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರಕೊಂಡು ಹೋಗಬೇಕು. ನಾನು ಎಲ್ಲ ಸಜ್ಜುಗೊಳಿಸಿದ್ದೇನೆ’ ಎಂದು ಹೇಳಿದೆ.

ಗಂಡಹೆಂಡತಿ ಸುಮಾರು ಹೊತ್ತು ಮಾತಾಡಿಕೊಂಡು ನಂತರ ಮಗುವನ್ನು ಆ ಆಸ್ಪತ್ರೆಗೆ ಕರಕೊಂಡು ಹೋಗುತ್ತೇನೆಂದು ಹೇಳಿ ಕರಕೊಂಡು ಹೋದರು.

ಮಾರನೆಯ ದಿನ ನಾನು ಆಸ್ಪತ್ರೆಗೆ ಬಂದಾಗ ನನ್ನ ಮೈಲ್‌ಬಾಕ್ಸಿನಲ್ಲೊಂದು ಸಣ್ನ ನೋಟಿತ್ತು’ ನೀನು ಕಳಿಸಿದ ಆ ಮಗು ನಮ್ಮ ಆಸ್ಪತ್ರೆಗೆ ಬರಲಿಲ್ಲ.’

ಆಕೆಯ ಮನೆಗೆ ಫೋನುಮಾಡಿದಾಗ ಮಗುವಿನ ಅಮ್ಮ ಫೋನು ತೆಗೆದುಕೊಂಡಳು. ಹಿಂದೆ ಮಗು ಜೋರಾಗಿ ಕೂಗುತ್ತಾ ಆಟವಾಡುತ್ತಿರುವುದು ಕೇಳಿಸುತ್ತಿತ್ತು. ನನ್ನ ಧ್ವನಿಯನ್ನು ಕೇಳಿದ ಕೂಡಲೇ ಫೋನು ಡಿಸ್‌ಕನೆಕ್ಟ್ ಆಯಿತು.

ಇಲ್ಲಿ ಯಾರ ಯಾರ power distance index ಗಳು ಹೇಗೆ ಕೆಲಸ ಮಾಡಿವೆ ನೋಡೋಣ. ಇಂಗ್ಲೀಷು ಮಾತಾಡಬಲ್ಲ ಗಂಡು ಡಾಕ್ಟರಾದ, ನಾನು ಇಂಗ್ಲಿಷು ಮಾತಾಡಲಾರದ ಸೊಮಾಲಿ ಹೆಣ್ಣು ಮಗಳ ಮೇಲೆ ನನ್ನ ಅಧಿಕಾರವನ್ನು ಉಪಯೋಗಿಸಿದ್ದೇನೆ. ಮಗುವಿನ ಆರೋಗ್ಯ ಇಲ್ಲಿ ಇಶ್ಯೂ ಅಲ್ಲವೇ ಅಲ್ಲ ಅನ್ನುವುದನ್ನು ನಾವೆಲ್ಲರೂ ಗಮನಿಸಬಹುದು. ಮಗು ಆರಾಮಾಗಿಯೇ ಇದೆ. ನಾನು ಮೊದಲು ಅಡ್ಮಿಟ್ ಮಾಡೊಲ್ಲ ಎಂದೆ. ನಂತರ ಮನೆಗೆ ಹೋದ ಆ ಸೊಮಾಲಿ ಹೆಂಗಸು ‘ನಾನೇನು ಬೇರೆಯವರಿಗಿಂತ ಕಡಿಮೆ.’ ಎಂದು ನಿರ್ಧರಿಸಿ ಮತ್ತೆ ಬಂದಳು. ನಾನು ಕೊಂಚ್ವ ಮಣಿದು ಅಡ್ಮಿಟ್ ಮಾಡಲು ನಿರ್ಧರಿಸಿದರೆ ಆ ಮಗುವಿಗೆ ಐವಿ ಹಾಕುವವರು ಯಾರೂ ಇಲ್ಲ, ನಮ್ಮ ಆಸ್ಪತ್ರೆಯಲ್ಲಿ. ಬೇರೆ ಕಡೆ ಹೋಗಬೇಕೆಂದು ನಿರ್ಧರಿಸಿದ್ದನ್ನು ಬಂದು ಪೂರಕ್ಕೆ ಪೂರ ನಿಲ್ಲಿಸಿದ್ದು ಮನೆಯ ಯಜಮಾನ ಮಗುವಿನ ಅಪ್ಪ. ಕೊನೆಗೂ ಗೆದ್ದದ್ದು ಮಗುವಿನ ಕುಟುಂಬದ ಶ್ರೇಣೀಕೃತ ವ್ಯವಸ್ಥೆಯೇ? ಮಗುವಿಗೆ ಐವಿ ಬೇಕಾ ಬೇಡವಾ ಎಂಬುದು ಡಾಕ್ಟರಲ್ಲದ ಆ ಆಪ್ಪನಿಗೆ ಗೊತ್ತಿಲ್ಲ. ಆದರೂ ಆತ ನಿರ್ಧರಿಸಿದ್ದ, ಮಗುವಿಗೆ ಹೀಗೇ ಮಾಡಬೇಕೆಂದು.

ಇದೇ ಒಂದು ಮಧ್ಯಮವರ್ಗದ ಬಿಳಿಯ ಅಮ್ಮ ಬಂದಿದ್ದರೆ ಏನಾಗುತ್ತಿತ್ತು. ಹೊಂಗೂದಲುಗಳ, ಚ್ಯೂಯಿಂಗ್‌ಗಮ್ ಅಗಿದುಕೊಂಡು ಮಾತಾಡುವ ಅಮ್ಮ ಮಗುವನ್ನು ಕರಕೊಂಡು ಬರುತ್ತಿದ್ದಳು. ‘The baby is obviously dehydrated. She hasn’t eaten or drunk in the last two days.’ ಎಂದು ಮೊದಲ ಬಾರಿಗೇ ನನ್ನನ್ನು ಚಿತ್ತುಮಾಡುಬಿಡುತ್ತಿದ್ದಳು. ನಂತರ ನಾನು ಮಾತಾಡುವ ಹೊತಿಗೆ ಆಕೆಯ ಸೆಲ್‌ಫೋನಿಗೆ ಎರಡು ಕಾಲ್‌ಗಳು ಬರುತ್ತಿದ್ದವು. ‘ನಾನು ಡಾಕ್ಟರ ಹತ್ತಿರ ಈಗ ಮಾತಾಡುತ್ತಾ ಇದೀನಿ. ಇಲ್ಲ. ಇಲ್ಲ. ಮಗು ಮನೆಗೆ ಬರುವ ಪರಿಸ್ಥಿತಿಯಲ್ಲಿಲ್ಲ. ಇಲ್ಲೇ ಇರ್ತೇವೆ. ಇವತ್ತು’ ಎಂದು ಅಕೆ ಗಂಡನ ಜತೆ ಮಾತಾಡುತ್ತಾಳೆ. ನಮಗ್ಯಾರಿಗೂ ಐವಿ ಹಾಕಲಾಗದಿದ್ದರೆ, ಆಕೆ ‘ಬೇರೆ ಏನೂ ದಾರಿಯೇ ಇಲ್ಲವಾ, ಆಸ್ಪತ್ರೆ ಯಾಕೆ ನಡೆಸುತ್ತಿದ್ದೀರಿ, ನೀವುಗಳು. ಒಂದು ಮಗುವಿಗೆ ಐವಿ ಹಾಕಲು ಬರದಿದ್ದರೆ’ ಎನ್ನುವ ಅರ್ಥದಲ್ಲಿ ಮಾತಾಡುತ್ತಾಳೆ. ನಾನು ಇನ್ನೂ ಕಷ್ಟಪಟ್ಟೋ ಅಥವಾ ಸರ್ಜನ್ನನ್ನೋ, ಅಥವಾ ಮಕ್ಕಳ ತಜ್ಞರನ್ನೋ ಕಾಡಿಬೇಡಿ ಹೇಗೋ ಮಾಡಿ ಐವಿ ಹಾಕುತ್ತೇವೆ. ಹಾಕಲಾಗದಿದ್ದರೆ ಬೇರೆ ಆಸ್ಪತ್ರೆಗೆ ಆಂಬುಲೆನ್ಸಿನಲ್ಲಿ ಸಾಗಿಸುತ್ತೇವೆ.

ಅಧಿಕಾರ ನಮ್ಮ ನಡುವಣ ಅಂತರವನ್ನು ಉಳಿಸುತ್ತದೆ. ಬಣ್ಣ, ಇಂಗ್ಲಿಷ್ ಭಾಶೆ, ಲಿಂಗ, ವಯಸ್ಸು ಇವೆಲ್ಲ ಯಾರು ಹೆಚ್ಚು ಶಕ್ತಿಶಾಲಿ, ಯಾರಿಗೆ ಏನು ಬೇಕು ಎಂಬುದನ್ನು ನಿರ್ಧರಿಸುತ್ತದೆ.

ಮಗುವಿನ ಆರೋಗ್ಯ ರೋಗಿಗೂ, ಡಾಕ್ಟರಿಗೂ ಮುಖ್ಯವಾಗುವುದೇ ಇಲ್ಲ.