Tuesday, May 19, 2009

ಸಾಹಿತಿಗಳ ಚಿತ್ರ

ಮನೆಯ ಹಿಂದಿನ ಡೆಕ್ಕಿನ ಮೇಲೆ ನಿಲ್ಲುತ್ತೇನೆ. ಈ ಶರಟು ಸರಿಯಿಲ್ಲ, ಬದಲಿಸಿಕೊಂಡು ಬಾ ಎನ್ನುತ್ತಾಳೆ, ಮಗಳು. ಪುಸ್ತಕದ ಹಿಂಬದಿಯ ಹೊದಿಕೆಯ ಮೇಲೆ ಇರುವ ಚಿತ್ರವಾದರೆ ಅದು ಚೆನ್ನಾಗಿರಬೇಕು. ಯಾವುದೋ ಸಾಪ್ತಾಹಿಕಕ್ಕಲ್ಲವಾ, ಒಂದು ದಿನ ಇರೋದು ತಾನೇ. ಅದಕ್ಕೆ ಇಷ್ಟೊಂದು ಕಷ್ಟಯಾಕೆ?, ಬೇಗ ಮುಗಿಸಿ ಎಂದು ಹೆಂಡತಿ ಅವಸರ ಮಾಡುತ್ತಾಳೆ. ಬಕ್ಕತಲೆಯವರಿಗೆ ಪ್ರೊಫೈಲೇ ಚಂದ ಎಂದು ಮಗಳು ನಿಧಾನವಾಗಿ ಈಕಡೆ ತಿರುಗಿಸಿ ನಿಲ್ಲಿಸುತ್ತಾಳೆ. ಹೊರಗೆ ಬಿಸಿಲು ಚೆನ್ನಾಗಿದೆ. ಒಂದು ನಾಲ್ಕು ಐದು ಬೇರೆಬೇರೆ ಪೋಸಿನಲ್ಲಿ ತೆಗೆದುಬಿಡೋಣ ಎಂದು ಹೇಳಿ, ನಾಲ್ಕು ಫೋಟೋಗಳನ್ನು ತೆಗೆಯುತ್ತಾಳೆ. ಎಸ್ಸೆಲ್ಲಾರ್ ಇದ್ದಿದ್ದರೆ ಅದರ ಮಜಾನೇ ಬೇರೆ, ಏಯ್ಮ್ ಅಂಡ್ ಶೂಟ್‌ನ ಹಣೆಬರಹವೇ ಇಷ್ಟು ಎಂದು ತನಗೆ ಒಳ್ಳೆಯ ಕ್ಯಾಮೆರಾ ಕೊಡೆಸದಿದ್ದಕ್ಕೆ ನನ್ನನ್ನೇ ಮೂದಲಿಸುತ್ತಾಳೆ. ಬಿಸಿಲು ನನ್ನ ಹಣೆಯ ಮೇಲೆ ಬೆವರಹನಿಗಳನ್ನು ಪೋಣಿಸುತ್ತದೆ. ತೆಗೆದ ಫೋಟೋಗಳನ್ನು ತಾನೇ ನೋಡಿ ಸಮಾಧಾನವಾಗದೇ ಒಳಗೆ ಹೋಗಿ ಎರಡು ಜತೆ ಶರಟನ್ನು ತರುತ್ತಾಳೆ. ಬದಲಿಸಿ, ಬದಲಿಸಿ ಮತ್ತೆ ತೆಗೆಯುತ್ತಾಳೆ. ಫೋಟೋ ಸುಮಾರಾಗಿ ಬಂದಿದೆ, ಎಂದನಿಸುತ್ತದೆ, ನನಗೆ. ಮಗಳೇ ‘ಇದು ಸರಿಯಾಗಿದೆ.’ ಎಂದು ನಿರ್ಧರಿಸಿ ಅಪ್‌ಲೋಡ್ ಮಾಡುತ್ತಾಳೆ. ಅದನ್ನು ಕಳಿಸುತ್ತೇನೆ.

ಮಾರನೆಯ ದಿನ ಮ್ಯಾಗಜೀನಿನಿಂದ ಒಂದು ಇಮೈಲ್ ಬರುತ್ತದೆ. ಬಹಳ ವಿನಮ್ರವಾದ ಪತ್ರ ‘ಸರ್, ನೀವು ಅಮೆರಿಕಾದಲ್ಲಿರುವುದೇ ಈ ಫೋಟೋದಿಂದ ಗೊತ್ತಾಗುವುದಿಲ್ಲವಲ್ಲ ಸರ್. ಸ್ವಲ್ಪ ಅಮೆರಿಕಾದ ಬ್ಯಾಕ್‌ಗ್ರೌಂಡಿನಲ್ಲಿರುವ ಒಂದು ಫೋಟೋ ಕಳಿಸಿ’ ಎಂದಿದೆ. ಅಮೆರಿಕಾದ ಬ್ಯಾಕ್‌ಡ್ರಾಪೆಂದರೆ ಏನು ಎಂದು ಯಾವುದೋ ಕನ್ನಡದ ಇಂಟರ್ನೆಟ್ ಪೋರ್ಟಲನ್ನು ತೆಗೆದು ನೋಡುತ್ತೇನೆ. ಎಲ್ಲತರದ ಚಿತ್ರಗಳೂ ಕಾಣಿಸುತ್ತವೆ. ಒಬ್ಬಾತ ಸನ್‌ಗ್ಲಾಸಸ್ ಹಾಕಿಕೊಂಡಿದ್ದಾನೆ. ಇನ್ನೊಬ್ಬಾಕೆ ನಯಾಗಾರ ಜಲಪಾತದ ಮೈಡ್ ಆಫ್ ದ ಮಿಸ್ಟ್ ನಲ್ಲಿ ಒದ್ದೆಯಾಗದಂತೆ ರೈನ್‌ಕೋಟು ಗೌನುಗಳನ್ನು ಹಾಕಿಕೊಂಡು ಕೂತಿದ್ದಾಳೆ. ಅಪ್ಪ, ಅಮ್ಮ ಮಕ್ಕಳು ಮತ್ತು ನಾಯಿಮರಿಯ ಜತೆ ಯುನಿವರ್ಸಲ್ ಸ್ಟುಡಿಯೋದ ಮುಂದಿರುವ ಒಂದು ಫೋಟೋವನ್ನು ಇನ್ನೊಬ್ಬಾಕೆ ಕಳಿಸಿದ್ದಾಳೆ. ಸಿಯರ್ಸ್ ಟವರ್, ಎಂಪೈರ್ ಸ್ಟೇಟ್ ಬಿಲ್ದಿಂಗ್, ಗ್ರಾಂಡ್ ಕೆನ್ಯನ್, ಲಾಸ್ ವೆಗಾಸ್, ಇನ್ನೂ ಇತರೇ ಅಮೆರಿಕಾದ ಸ್ಮಾರಕಗಳು ಇಡೀ ಪೋರ್ಟಲ್ಲಿನಲ್ಲಿ ಕಾಣಿಸಿಕೊಂಡಿವೆ. ಜತೆಗೇ ಅವರು ಬರೆದ ಕವನಗಳು, ಪ್ರವಾಸದ ಅನುಭವಗಳು, ಕತೆ, ಅಂಕಣ ॒ಇತ್ಯಾದಿ.

ಇನ್ನೊಂದಿಷ್ಟು ಕಡೆ ಅಡ್ದಾಡಿದಾಗ ಕುಂವೀಯವರು ನ್ಯೂಯಾರ್ಕಿನ ಬೀದಿಯಲ್ಲಿ ನಿಂತಿರುವ ಫೋಟೋ ಕೂಡ ಕಾಣುತ್ತದೆ. ಜಯಂತ ಅಮೆರಿಕಾಕ್ಕೆ ಬಂದಾಗ ಒಂದು ಜ್ಯಾಕೆಟ್ಟನ್ನು ಹಾಕಿಕೊಂಡು ಅಥಿತಿಯೊಬ್ಬರ ಮನೆಯ ಲಾನಿನ ಮೇಲೆ ಕೂತಿರುವ ಫೋಟೊ ಕಾಣಿಸುತ್ತದೆ. ತಮ್ಮ ಬುಲ್ಗಾನಿನ್ ಗಡ್ಡದಿಂದ ಮಿಂಚುತ್ತಿರುವ ಜೋಗಿ, ಮೊಬೈಲನ್ನು ಕಿವಿಗೆ ಹಿಡಿದು ಯಾರದೋ ಜತೆ ಮಾತಾಡುತ್ತಿರುವ ವಸುಧೇಂದ್ರ, ಅಪರ್ಣಾರೊಂದಿಗೆ ಕುತ್ತಿಗೆಗೆ ಸ್ಕಾರ್ಫ್ ಹಾಕಿಕೊಂಡು ಯಾವುದೋ ಕೆತ್ತನೆಯ ಕಂಭದ ಮುಂದೆ ನಿಂತಿರುವ ವಸ್ತಾರೆ, ಮಂಕಿಕ್ಯಾಪಿನಲ್ಲಿ ಚೆಗುವಾರನ ತರ ಕಾಣುವ ದೇವನೂರು ಮಹದೇವ, ಉದ್ದಕೂದಲಿನ ಶ್ರೀರಾಮ್ ಎಲ್ಲರೂ ಕಾಣುತ್ತಾರೆ. ನನ್ನದೂ ಹೆಸರನ್ನು ಹಾಕಿ ಗೂಗಲ್ ಇಮೇಜಸ್‌ನಲ್ಲಿ ಹುಡುಕುತ್ತೇನೆ. ಒಂದೆರಡು ಫೋಟೋಗಳು ಕಾಣುತ್ತವೆ.

ಮನೆಯೊಳಗೆ ಬಂದು ಲ್ಯಾಪ್‌ಟಾಪಿನಲ್ಲಿ ಹುಡುಕುತ್ತೇನೆ. ಈ ಅಮೆರಿಕೆಯ ಬ್ಯಾಕ್‌ಡ್ರಾಪಿನಲ್ಲಿ ನಾನೊಬ್ಬನೇ ಇರುವ ಒಂದೂ ಫೋಟೋ ಕಾಣಿಸುವುದಿಲ್ಲ. ಯಾವುದೋ ಸಣ್ಣ ದ್ವೀಪಕ್ಕೆ ಹೋದಾಗ ಬರ್ಮ್ಯುಡಾ ಹಾಕಿಕೊಂಡು ಕಾಲಮೇಲೆ ಕಾಲು ಹಾಕಿಕೂತಿದ್ದ ಫೋಟೋವನ್ನು ಕಳಿಸುತ್ತೇನೆ. ಈ ಚಿತ್ರದ ಮುಖವನ್ನು ಮಾತ್ರ ಕತ್ತರಿಸಿ ಹಾಕಿ, ಬರ್ಮ್ಯುಡಾ ಬೇಡ ಎಂದು ರಿಪೋರ್ಟರನಿಗೆ ಬರೆದು ಹೇಳಿದ್ದೇನೆ. ಆದರೆ, ನನ್ನ ಇಡೀ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಬರ್ಮ್ಯುಡಾ ಸಮೇತ ಫೋಟೋ ಪ್ರಕಟವಾದದ್ದಕ್ಕೆ ಅಷ್ಟೇನೂ ಬೇಜಾರಾಗಿಲ್ಲ.

ಆಸ್ಪತ್ರೆಯಲ್ಲಿ ನಾನು ಯಾವುದೋ ಒಂದು ಹೊಸ ಪ್ರೋಟೋಕಾಲನ್ನು ಮೊಟ್ಟಮೊದಲಿಗೆ ಉಪಯೋಗಿಸಿ ಐವತ್ಮೂರರ ಒಬ್ಬ ವ್ಯಕ್ತಿ ಬದುಕಿದ್ದಾನೆ. ಆತನ ಮೇಲೆ ಈ ಪ್ರೋಟೋಕಾಲನ್ನು ಉಪಯೋಗಿಸುವ ಧೈರ್ಯಮಾಡಿದ್ದಕ್ಕೆ ಮತ್ತು ಆತನ ಜೀವ ಉಳಿಸಿದಕ್ಕಾಗಿ ಸ್ಥಳೀಯ ಪತ್ರಿಕೆ ನನ್ನದೊಂದು ಸಣ್ಣ ಸಂದರ್ಶನ ಮಾಡಲು ನಿರ್ಧರಿಸಿದೆ. ‘Doctor’s perseverance saves local plumber’ ಎನ್ನುವ ಹೆಡ್‌ಲೈನಿನಡಿಯಲ್ಲಿ ನನ್ನಿಂದ ಉಳಕೊಂಡ ಆ ವ್ಯಕ್ತಿಯ ಫೋಟೋವನ್ನು ನನ್ನಕೂಡ ಪ್ರಕಟಿಸುವುದಕ್ಕಾಗಿ ಆ ಪತ್ರಿಕೆ ನಿರ್ಧರಿಸಿದೆ. ಆತನನ್ನೂ ಪತ್ರಿಕೆ ಸಂದರ್ಶಿಸುತ್ತದೆ. ಸಂದರ್ಶನದ ಮಧ್ಯೆ ಆತ ‘ಈ ಭಾರತೀಯ ಡಾಕ್ಟರುಗಳೇ ಹಾಗೆ, ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ನನಗೆ ನೆನಪಿದೆ. ನನಗೆ ಹಿಂದೊಮ್ಮೆ ಸರ್ಜರಿಯಾಗಿದ್ದಾಗ ನಾನು ಭಾರತೀಯ ಡಾಕ್ಟರೊಬ್ಬ ನನಗೆ ಕೇರ್ ಮಾಡುತ್ತಾ ಇದ್ದ. ಸಿಕ್ಕಾಪಟ್ಟೆ ಕಾಂಪ್ಲಿಕೇಟ್ ಆದಾಗ ಎಲ್ಲರೂ ಅಂದುಕೊಂಡಿದ್ದರು, ನಾನು ಸತ್ತೇ ಹೋಗುತ್ತೇನೆ ಎಂದು ಆದರೆ ನನ್ನನ್ನು ಆತ ಸಾಯಲಿಕ್ಕೆ ಬಿಡಲಿಲ್ಲ’ ಎನ್ನುತ್ತಾನೆ.

ಇದ್ದಕ್ಕಿದ್ದ ಹಾಗೆ ಆ ಸಂದರ್ಶಕನಿಗೆ ನನ್ನ ಭಾರತೀಯತೆಯನ್ನು ಬಿಂಬಿಸುವುದಕ್ಕೆ ನನ್ನ ಸುತ್ತ ಏನಾದರೂ ಭಾರತೀಯವಾದದ್ದು ಇದ್ದರೆ ಚೆನ್ನಾಗಿರುತ್ತದೆ ಎನಿಸುತ್ತದೆ. ನಾನು ಹೇಳುತ್ತೇನೆ. ‘ನನ್ನ ನೋಡಿದರೆ ಸಾಕು, ಯಾರು ಬೇಕಾದರೂ ಹೇಳಬಹುದು ನಾನು ಭಾರತೀಯ ಎಂದು.’ ಆದರೆ, ಆತ ಬಿಡುವುದಿಲ್ಲ. ‘ಡಾಕ್ಟರ್, ಭಾರತೀಯ, ನೇಪಲೀಸ್, ಪಾಕಿಸ್ತಾನಿ, ಕೆಲವೊಮ್ಮೆ ಮೆಕ್ಸಿಕನ್ನರು ಕೂಡ ಹೀಗೇ ಕಾಣುತ್ತಾರೆ’ ಎನ್ನುತ್ತಾನೆ, ನಮ್ಮ ಆಸ್ಪತ್ರೆಯಲ್ಲಿ ಭಾರತೀಯವಾಗಿರುವುದು ಏನೂ ಇಲ್ಲ. ಆತನಿಗೆ ಒಂದು ಐಡಿಯಾ ಇದ್ದಕ್ಕಿದ್ದ ಹಾಗೆ ಹೊಳೆಯುತ್ತದೆ. ನನ್ನ ಲ್ಯಾಪ್‌ಟಾಪಿನಲ್ಲಿರುವ ನನ್ನ ಫೋಟೋ ಆಲ್ಬಮ್ಮಿನಲ್ಲಿ ನಾನು ಶೆರ್ವಾನಿ ಹಾಕಿಕೊಂಡಿರುವ ನಾನು ಮತ್ತು ಸೀರೆಯುಟ್ಟಿಕೊಂಡಿರುವ ನನ್ನ ಹೆಂಡತಿಯ ಫೋಟೋವನ್ನು ಇಡೀ ಸ್ಕ್ರೀನಿನ ತುಂಬಾ ಹಾಕುತ್ತಾನೆ. ನನ್ನ ಬ್ಯಾಗಿನಲ್ಲಿದ್ದ ‘ಲೈಫ್ ಆಫ್ ಪೈ’ ಮತ್ತು ಕನ್ನಡದ ಇನ್ನೊಂದೆರಡು ಪುಸ್ತಕಗಳನ್ನು ಕಂಪ್ಯೂಟರಿನ ಪಕ್ಕದಲ್ಲಿಟ್ಟು ಫೋಟೋ ತೆಗೆಯುತ್ತಾನೆ. ಏನೋ ಸಮಾಧಾನ ಅವನ ಮುಖದಲ್ಲಿ ಇಣುಕುತ್ತದೆ.

ಸಲ್ಮಾನ್ ರಶ್ದೀ ತನ್ನ ಒಂದು ಪ್ರಬಂಧ ‘ ಆನ್ ಬೀಯಿಂಗ್ ಫೋಟೋಗ್ರಾಫ್‌ಡ್’ ಎನ್ನುವ ಪ್ರಬಂಧದಲ್ಲಿ ಬರೆದಿರುವ ಈ ಸಾಲುಗಳು ಬಹಳ ಮಾರ್ಮಿಕವಾಗಿವೆ. ‘ಈ ಫೋಟೋಗ್ರಫಿ ಅನ್ನುವ ಕಲೆಯಲ್ಲಿಯೇ ಒಂದು ರೀತಿಯ ಬೇಟೆಯ ಛಾಯೆಯಿದೆ. ನನ್ನಜ್ಜಿಗೆ ಯಾರೂ ಕ್ಯಾಮೆರಾ ಹಿಡಿದುಕೊಂಡು ಆಕೆಯ ಬಳಿಬರುವುದು ಇಷ್ಟವಾಗುತ್ತಲೇ ಇರಲಿಲ್ಲ. ಅವಳ ಯಾವುದೋ ಒಂದು ಖಾಸಗೀಭಾಗವನ್ನು ಈ ಪೆಟ್ಟಿಗೆ ಶಾಶ್ವತವಾಗಿ ಕದ್ದುಕೊಂಡಹಾಗೆ ಆಕೆಗೆ ಎಂದೂ ಅನಿಸುತ್ತಿತ್ತು. ಆಕೆ ಕಳಕೊಂಡರೆ ಮಾತ್ರ ಅದು ಫೋಟೋಗ್ರಾಫರಿನಿಗೆ ಸಿಕ್ಕುತ್ತದೆ ಎಂದು ಆಕೆ ಬಲವಾಗಿ ನಂಬಿದ್ದಳು. ನನಗನಿಸುತ್ತದೆ, ಕ್ಯಾಮೆರಾ ಒಂದು ಅಯುಧ, ಚಿತ್ರ ತೆಗೆಯುವ ಕ್ರಿಯೆಯೇ ಬೇಟೆ, ನಾನೇ ಶಿಕಾರಿ. ಫ್ಲಾಶ್ ಹೊಡೆದಾಗ ಗುಂಡು ಹೊಡೆದಂತೆ, ಶಿಕಾರಿ ನಿಶ್ಯಬ್ದವಾಗಿ ಚಲನೆಯಿಲ್ಲದೆ ನಿಂತಿರುತ್ತದೆ. ನಂತರ ಪ್ರಿಂಟಾದ ಪೊರ್ಟ್ರಾಯಿಟ್ ಶಿಕಾರಿಯ ಹುಲ್ಲುಹಸೆ ತುಂಬಿದ ತಲೆಯಿದ್ದಂತೆ. ಅದನ್ನು ನೀಟಾಗಿ ಕ್ಲೀನ್ ಮಾಡಿ ಗೋಡೆಯ ಮೇಲೆ ನೇತುಹಾಕಿಕೊಳ್ಳಬಹುದು.’

ಪೋರ್ಟ್ರಾಯಿಟ್ ತೆಗೆಯುವ ಕಲಾವಿದ ತನ್ನ ಮುಂದಿರುವ ಮುಖವನ್ನು ಹೇಗೆ ಸುಂದರಮಾಡಬೇಕೆಂದು, ಅಥವಾ ಭಿನ್ನಮಾಡಬೇಕೆಂದು ಯೋಚಿಸುತ್ತಲೇ ಇರುತ್ತಾನೆ. ಸಾಹಿತಿಗಳ ಚಿತ್ರವನ್ನು ತೆಗೆಯುವವರಿಗಂತೂ ಇದೊಂದು ಬೇರೆಯೇ ಸವಾಲು. ಸಾಹಿತಿಗಳ ಅಸಾಹಿತ್ಯಿಕ ವಿಶೇಷವಾದ ಮುಖವನ್ನು ಬೇಟೆಯಾಡಲು ಅವರು ಹೊಂಚುಹಾಕುತ್ತಲೇ ಇರುತ್ತಾರೆ. ಹಾಗಾಗಿಯೇ ಯಾವುದೋ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಉಪ್ಪಿಟ್ಟನ್ನು ತಿನ್ನುತ್ತಿರುವವ ಟಿ ಎನ್ ಸೀತಾರಾಮ್‌ರ ಚಿತ್ರ, ಮೂವಿಕ್ಯಾಮೆರಾದ ಮೂಲಕ ನೋಡುತ್ತಿರುವ ಅನಂತಮೂರ್ತಿಯವರು, ನಗುತ್ತಿರುವ ಭೈರಪ್ಪನವರ ಚಿತ್ರ, ಬೀಡಿ ಸೇದುವ ಶಿವರಾಮಕಾರಂತರ ಚಿತ್ರ ಸ್ಟಡಿರೂಮಿನಲ್ಲಿರುವ ಅವರದೇ ಚಿತ್ರಕ್ಕಿಂತ ಮುಖ್ಯವಾಗುತ್ತದೆ. ಅದೇ ಶ್ರೀನಿವಾಸ ವೈದ್ಯರದ್ದಾದರೆ ಅವರು ಲೈಬ್ರರಿಯಲ್ಲಿ ಕೂತಿರುವ ಚಿತ್ರವೇ ಬೇಕಾಗುತ್ತದೆ. ಏಕೆಂದರೆ ಶ್ರೀನಿವಾಸ ವೈದ್ಯರ ಅಸಾಹಿತ್ಯಿಕ ಜೀವನಕ್ಕೆ ಬೇರೆಯವರಿಗಿದ್ದಂತೆ ಗ್ಲಾಮರ್ರೂ, ಮಣ್ಣಿನವಾಸನೆಯೂ ಅಥವಾ ಫೋಟೋಗಳಲ್ಲಿ ಹಿಡಿಯಬಹುದಾದ ಯಾವುದೇ ಫೋಟೋಜೆನಿಕ್ ‘ಭಿನ್ನ’ ಛಾಯೆಯೂ ಇರುವುದಿಲ್ಲ.

ನಾನು ಬೆಳೆಯುತ್ತಿದ್ದಾಗ ಧಾರವಾಡ, ಶಿವಮೊಗ್ಗಾದ ಕಡೆ ಯರ ಮನೆಗೆ ಹೋದರೂ ಸರಿ, ಬೊಚ್ಚುಬಾಯಿಯ ತುಂಬಾ ನಗೆ, ತಲೆಗೊಂದು ಸಣ್ಣ ಟೋಪಿ, ಕಿವಿಯಿಂದ ಹೊರಬಂದ ಕೂದಲು, ಗುಂಡುಫ್ರೇರೇಮಿನ ಸಣ್ಣಕನ್ನಡಕ, ಕುತ್ತಿಗೆಗೊಂದು ಸಣ್ಣ ಮಫ್ಲರು ಮತ್ತು ಒಂದು ಕರೀಕೋಟಿನ ಚಿತ್ರವೊಂದಿರುತ್ತಿತ್ತು. ಕೆಳಗೆ ಅಂಬಿಕಾತನಯದತ್ತ ಎಂಬ ಸಹಿಯೂ ಇರುತ್ತಿತ್ತು. ನಾನು ನೋಡಿರುವ ಸಾಹಿತಿಯ ಅತಿ ಸುಂದರ ಪೋರ್ಟರೈಟ್ ಅದೇ ಅನಿಸುತ್ತದೆ. ಸರಳ ಸುಂದರ ನಗು, ಸಣ್ಣ ತುಂಟಾಟ, ಕಣ್ಣುಗಳಲ್ಲಿನ ಹೊಳಪು ಎಲ್ಲ ಸೇರಿ ಒಂದು ಪ್ರಕಾಂಡ ಕಳೆ ಆ ಚಿತ್ರಕ್ಕಿತ್ತು.

ಈ ಸಾಹಿತಿಗಳ ಫೋಟೋವನ್ನು ತೆಗೆಯಬೇಕಾದರೆ, ಫೋಟೋ ತೆಗೆಯುವವನಿಗೆ ಇವರು ಬರೆಯುತ್ತಾರೆ ಎನ್ನುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲದಿದ್ದಾಗ ಮತ್ತು ಸಾಹಿತಿಗೆ ತಾನು ಆದಷ್ಟು ನೈಜತೆಗೆ ಹತ್ತಿರವಿದ್ದುಕೊಂಡು ಪೋಸುಕೊಡುತ್ತಿದ್ದೇನೆ ಎಂದು ಮನಸ್ಸಿಗೆ ಬಂದುಬಿಟ್ಟಾಗ ಗೊತ್ತಿಲ್ಲದೇ ಒಂದು ಕೃತಕತೆ ಅಲ್ಲಿ ಇಳಿದುಬಿಡುತ್ತದೆ. ಅದರಲ್ಲಿಯೂ ಈ ಫೋಟೋಗಳು ಇಂತಹ ಕೃತಕತೆಯನ್ನು ಎದ್ದುತೋರಿಸುವುದರಲ್ಲಿ ಬಹಳ ಪರಿಣಾಮಕಾರಿಯಾಗಿರುತ್ತದೆ. ಇದು ಫೋಟೋ ತೆಗೆಯುವಾತನ ದುರಾಸೆ ಅಥವಾ ಸಾಹಿತಿಯ ಪ್ರಚಾರಪ್ರಿಯತೆಯನ್ನು ತೋರಿಸುತ್ತದೆ ಎಂದುಬಿಟ್ಟರೆ ವಿಷಯವನ್ನು ತುಂಬಾ ಸರಳೀಕರಿಸಿದ ಹಾಗಾಗುತ್ತದೆ.

ಒಂದು ಸಣ್ಣ ಉದಾಹರಣೆಯನ್ನು ಕೊಡುತ್ತೇನೆ.ಒಂದು ಪುಸ್ತಕಬಿಡುಗಡೆಯ ಸಂದರ್ಭ. ಅಲ್ಲಿ ಸಾಹಿತಿಗಳೆಲ್ಲರೂ ಸೇರಿರುತ್ತಾರೆ. ಅಲ್ಲಿ ಒಬ್ಬ ಫೋಟೋಗ್ರಾಫರನೂ ಇರುತ್ತಾನೆ. ಇಬ್ಬರು ಸಾಹಿತಿಗಳು ನಿಂತು ಮಾತಾಡಹತ್ತಿದಾಗ ಈ ಫೋಟೋಗ್ರಾಫರು ಒಂದು ಚಿತ್ರ ತೆಗೆಯಲು ಪ್ರಯತ್ನಿಸುತ್ತಾನೆ. ಮಾತಾಡುವುದನ್ನು ಬಿಟ್ಟು ಅವರಿಬ್ಬರೂ ಫೋಸು ಕೋಡಲು ಪ್ರಯತ್ನಿಸುತ್ತಾರೆ. ‘ಇರಲಿ ಸಾರ್, ನೀವು ಮಾತಾಡಿ. ಹಾಗೇ ನ್ಯಾಚುರಲ್ ಆಗಿ ಕಾಣುತ್ತೆ’ ಎಂದು ಹೇಳಿ ಒಂದು ಫೋಟೋ ಹೊಡೆಯುತ್ತಾನೆ. ಇವರಿಬ್ಬರಿಗೂ ಗೊತ್ತಿದೆ, ತಮ್ಮ ಫೋಟೋ ತೆಗೆಯಲ್ಪಡುತ್ತಿದೆ ಎಂದು. ಆದರೂ ಮಾತಾಡುವುದನ್ನು ಮುಂದುವರೆಸುತ್ತಾರೆ. ಆ ಸಂಭಾಷಣೆಯ ಕೃತಕತೆ, ಫೋಸಿನ ಕೃತಕತೆ ಎರಡನ್ನೂ ಕ್ಯಾಮೆರಾ ಬಹಳ ಪರಿಣಾಮಕಾರಿಯಾಗಿ ತನ್ನಲ್ಲಿ ಸೆರೆಹಿಡಿದುಕೊಂಡಿರುತ್ತದೆ. ಒಂದು ನಿರಪಾಯಕಾರಿ ಕ್ರಿಯೆ ತನಗೆ ಗೊತ್ತಿಲ್ಲದೇ ಒಂದು ಸಣ್ಣ ಢೋಂಗಿ ಘಟನೆಗೆ ಸಾಕ್ಷಿಯಾಗುತ್ತದೆ.

ಆದರೆ, ಫೋಟೋಕ್ಕೆಂತಲೇ ನಿಂತು ತೆಗೆಸಿಕೊಂಡಿರುವ (ಅದು ಇಂಥ ಸಂದರ್ಭಕ್ಕೆಂದು ತೆಗೆದಿಲ್ಲದೇ ಇದ್ದರೂ, ಉದಾಹರಣೆಗೆ ಒಂದು ಯರ್ಮುಂಜೆ ರಾಮಚಂದ್ರರವರ ಲಭ್ಯವಿರುವ ಒಂದೇ ಪಾಸ್‌ಪೋರ್ಟ್ ಫೋಟೋ) ಫೋಟೋಗಳಲ್ಲಿ ಒಂದು ರೀತಿಯ ನೈಜತೆ ಕಂಡುಬಿಡುತ್ತದೆ. ಆದಷ್ಟು ನೈಜವಾಗಿ ಬರಲಿ ಎಂದು ಫೋಟೋ ತೆಗೆಯುವುದೇ ಗೊತ್ತಿಲ್ಲದೇ ಇದ್ದೂ ತೆಗೆದಾಗಲೂ ಈ ಸಾಹಿತಿಗಳ ಫೋಟೋಗಳಲ್ಲಿ ಕೂಡ ಈ ನೈಜತೆ ಕಾಣದೇ ಇರುವುದು ಒಂದು ಐರನಿ. ಸಾಹಿತಿ, ತನ್ನ ಸಾಹಿತಿಯ ಪಟ್ಟವನ್ನು ಬಿಟ್ಟು ಬೇರೇನೋ ಆಗಿ ಪೋಸುಕೊಡುವುದೂ ಮತ್ತು ಈ ಅಸಾಹಿತ್ಯಿಕ ಆಂಬಿಯೆನ್ಸಿನಿಂದ ಆತನ ಇನ್ನೊಂದು ಮುಖದ ಪರಿಚಯವಾಗುತ್ತದೆ ಎನ್ನುವ ಅನಿಸಿಕೆಯನ್ನು ಮೂಡಿಸಲು ಪ್ರಯತ್ನಿಸುವುದು ಇವುಗಳಿಂದ ಇಡೀ ಕ್ರಿಯೆಯೇ ತನ್ನ ಉದ್ದೇಶವನ್ನು ಕಳಕೊಳ್ಳುತ್ತದೆ.

ಅಂದರೆ ಫೋಟೋಕ್ಕೂ ಒಂದು ಘನತೆಯಿದೆ. ಪ್ರಪಂಚವೆಲ್ಲ ಡಿಜಿಟಲ್ ಆದಮೇಲೆ, ಡಿಜಿಟಲ್ ಕ್ಯಾಮೆರಾದಲ್ಲಿ ಎಷ್ಟು ಬೇಕಾದರೂ ಅಷ್ಟು ಫೋಟೋಗಳನ್ನು ತೆಗೆದು ಬೇಕಾದನ್ನು ಹಾಕಿ ಬೇಡದದ್ದನ್ನು ಅಳಿಸಿಹಾಕುವ ಮತ್ತು ಬ್ಲಾಗಿನಿಂದ ಬ್ಲಾಗಿಗೆ, ಜಾಲದಿಂದ ಜಾಲಕ್ಕೆ ತೆಗೆದುಹಾಕುವ ಸೌಲಭ್ಯವಿರುವ ಈ ಕಾಲದಲ್ಲಿ ಫೋಟೋ ತೆಗೆಸಿಕೊಳ್ಳುವವನಿಗೆ ಅಥವಾ ತನ್ನ ಫೋಟೋವನ್ನು ಎಲ್ಲೆಡೆ ತಾನೇ ಹಾಕಿಕೊಳ್ಳುವನಿಗೆ ತಾನು ತನ್ನ ಇಡೀ ಪ್ರಪಂಚಕ್ಕೆ ತೋರಿಸುವ ಮುಖ ಇದು ಎನ್ನುವ ಒಂದು ಕನಿಷ್ಠ ಜವಾಬ್ದಾರಿ ಇರಬೇಕಾಗುತ್ತದೆ.

ಇಲ್ಲದಿದ್ದರೆ ರಶ್ದೀ ಹೇಳಿದ ಶಿಕಾರಿಯ ತಲೆಯಂತೆ ಎಲ್ಲರ ಚಿತ್ರಗಳೂ ಟ್ರೋಫಿಯಾಗಿ ಗೋಡೆಗಳ ಮೇಲೆ ನಿಲ್ಲಬೇಕಾಗುತ್ತವೆ.

1 comment:

  1. ನಿಜಕ್ಕೂ ಉತ್ತಮವಾದ ಲೇಖನ. ಫೊಟೋ ಐಡೆಂಟಿಟಿಯ ಪ್ರಶ್ನೆಯಾಗಿರುವುದೇ ಈ ಎಲ್ಲ ಸಮಸ್ಯೆಗಳಿಗೆ/ಸರ್ಕಸ್‌‌ಗಳಿಗೆ ಮೂಲ

    ReplyDelete