Tuesday, June 2, 2009

ನೈಸ್ ಕತೆಗಾರರ ತಳಿ

ಸಾಹಿತ್ಯವನ್ನು ಅಕೆಡಿಮಿಕ್ ಆಗಿ ಓದದ, ಆದರೆ ಕೇವಲ ಆಸಕ್ತಿಯಿಂದ ಮಾತ್ರ ಸಾಹಿತ್ಯವನ್ನು ಓದಿ ಕತೆಗಳನ್ನು ಬರೀತಿರೋರ ಗುಂಪು ಅಧಿಕವಾಗುತ್ತಾ ಇರುವ ಈ ಕಾಲದಲ್ಲಿ ಕತೆಗಾರನಿಗೆ ಸಾಹಿತ್ಯವನ್ನು ಮತ್ತು ತನ್ನ ಪರಂಪರೆಯನ್ನು ಓದುವ ಜವಾಬ್ದಾರಿ ಎಷ್ಟಿರಬೇಕು? ನಮ್ಮನ್ನು ಯಾರ ಪರಂಪರೆಗೂ ಸೇರಿಸಬೇಡಿ ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಪರಿಪರಿಯಾಗಿ ಎಷ್ಟೇ ಕೇಳಿಕೊಂಡರೂ ಈ ಕನ್ನಡದಲ್ಲಿ ಬರೆಯುವ ಕ್ರಿಯೆಯೇ ಇವರನ್ನು ಒಂದು ಪರಂಪರೆಗೆ ಸೇರಿಸಿಬಿಟ್ಟಿದೆ. ಈ ಪರಂಪರೆ ಇಲ್ಲಿಂದಲೇ ಸುರುವಾಯಿತು ಎಂದು ಹೇಳಿಕೊಳ್ಳುವುದು ಹುಂಬತನವಾಗುತ್ತದೆಯಾದ್ದರಿಂದ ಒಂದು ಜೀನ್‌ಪೂಲ್‌ಗೆ ಸೇರಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಆದರೆ, ಕಾಲಕಾಲಕ್ಕೆ ತಕ್ಕಂತೆ ಈ ಜೀನ್‌ಪೂಲ್‌ನಲ್ಲಿ ಕಾಲಸಹಜವಾದ ಮ್ಯುಟೇಶನ್‌ಗಳಾಗುತ್ತಿವೆ ಎಂದು ಮಾತ್ರ ನಾವು ಹೇಳಿಕೊಳ್ಳಬಹುದು. ಇದು ಈಗ ಸೃಷ್ಟಿಯಾದ ಪರಂಪರೆ ಖಂಡಿತಾ ಅಲ್ಲ.

ಈ ಮ್ಯುಟೇಶನ್‌ನ ಹೊಸತಳಿಯೆಂದರೆ ಕುಂವೀಯವರ ಭಾಷೆಯಲ್ಲಿ ಹೇಳಬೇಕಾದರೆ ‘ನೈಸ್ ಕತೆಗಾರರು’ ಕೊಂಚ ಅತಿರೇಕದಲ್ಲಿ ಈ ತಳಿಯನ್ನು ವಿವರಿಸುವುದೆಂದರೆ ಡಿಸೈನರ್ ಪ್ಯಾಂಟು ಶರಟು ಹಾಕಿಕೊಂಡು, ಮಲ್ಟಿನ್ಯಾಷನಲ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ, ದೇಶ ವಿದೇಶ ಪ್ರವಾಸಮಾಡುತ್ತಾ, ಏರ್‍ಪೋರ್ಟಿನ ಲೌಂಜಿನಲ್ಲಿ, ಕೆಲವೊಮ್ಮೆ ವಿಮಾನದ ಪ್ರಯಾಣದ ನಡುವೆ ಇವರು ಕತೆ ಬರೆಯುವವರು. ವಿಮರ್ಶಕರ ಪರಿಭಾಷೆಯಲ್ಲಿ ಹೇಳಬೇಕೆಂದರೂ ‘ನಗರ ಕೇಂದ್ರಿತ’ಕತೆಗಾರರು ಅನ್ನುವ ಪದಪುಂಜವೂ ಇವರುಗಳನ್ನು ವಿವರಿಸಲು ಸಾಧ್ಯವಿಲ್ಲ. ಇವರ ರೂಪಕಗಳೂ ಭಾಷೆಗಳೂ ಹೊಸದು, ಕಥಾ ವಸ್ತುವಿನ ಆಯ್ಕೆ ಪ್ರಾಯಶಃ ಸಾಂಪ್ರದಾಯಿಕ ಅನ್ನೋ ಕನ್ನಡ ಕತೆಗಳಿಗಿಂತ ಬೇರೆ. ಧ್ಯಾನಸ್ಥ ಸ್ಥಿತಿ ಅಥವಾ ಬೌದ್ಧಿಕತೆ ಇಂತ ಪದಗಳ ಬಗ್ಗೆಯೇ ಬಹಳ ಜನಕ್ಕೆ ನಂಬಿಕೆಯಿಲ್ಲ.

ಇದೇ ಕಾರಣಕ್ಕೋ ಏನೋ,ಬೇರೆ ಯಾರಿಗೂ ಯಾವಕಾಲದಲ್ಲಿಯೂ ಇಲ್ಲದ ಒಂದು ಎಚ್ಚರಿಕೆ ಅವರಿಗೆ ಬೇಕಾಗುತ್ತದೇನೋ ಅಂತ ನನಗೆ ಅನುಮಾನ. ಸಾರಾಸಗಟಾಗಿ ಜನಪದ ಹಿನ್ನೆಲೆಯಲ್ಲಿರೋ ಅಥವಾ ಸಾಂಪ್ರದಾಯಿಕವಾಗಿ ಡಿಫೈನ್ ಆದ ಕನ್ನಡದ ಲೋಕದಲ್ಲಿ ನಡೆಯೋ ಕಥೆಗಳಿಗಿಂತ ಇವು ರೂಪಕಶಕ್ತಿಯಲ್ಲಿ, ಭಾಷೆಯಲ್ಲಿ ಮತ್ತು ವಿನ್ಯಾಸ, ನೇಯ್ಗೆಯಲ್ಲಿ ಬೇರೆಯಾದರೂ ಕೆಲಸ ಮಾಡುತ್ತಾ ಇರೋ ಮನಸ್ಸು ಮಾತ್ರ ಕನ್ನಡದ್ದು. ಆದರೆ ನಮ್ಮ ಮನಸ್ಸು ಕನ್ನಡದ್ದು ಅನ್ನುವುದನ್ನು ಅಗಾಗ ಇವರುಗಳು ಈ ಗೋಚಾರಗಳಲ್ಲಿ ಪುರಾವೆಗಳನ್ನೊದಗಿಸಿ ತೋರಿಸಬೆಕಾಗಿದೆ.

ನಮ್ಮಲ್ಲಿರೋ ಈ ನೈಸ್ ಕತೆಗಾರರ ಕೆಲವು ಸಾಮಾನ್ಯ ಗುಣಗಳನ್ನು ಗಮನಿಸಬಹುದು. ಅವರು ಎಲ್ಲೇ ಈಗ ಇರಲಿ, ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಓದಿರುತ್ತಾರೆ. ಕನ್ನಡ ಪುಸ್ತಕಗಳನ್ನು ಓದಿಯೋ, ಅಥವಾ ಕನ್ನಡದ ನಾಟಕಗಳನ್ನು ನೋಡಿಯೋ ಶಾಲಾದಿನಗಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಕತೆ ಬರೆಯಲು ರೂಢಿಸಿಕೊಂಡವರು ಬಹಳಷ್ಟು ತಮ್ಮ ಹಿರಿಯ ಲೇಖಕರನ್ನು ನೋಡಿ ಅವರ ಶೈಲಿಗೆ ಮನಸೋತು ಅವರ ಹಾಗೆ ಬರೆಯಬೇಕು ಅಂತ ಒಂದು ಮಟ್ಟದಲ್ಲಾದರೂ ಅಂದುಕೊಂಡು ಬರವಣಿಗೆಯನ್ನು ಶುರುಮಾಡಿ ನಂತರ ಬರೆಯುತ್ತಾ ಹೋಗಿ ಅವರದೇ ಶೈಲಿಯನ್ನು ರೂಢಿಸಿಕೊಂಡವರು. ಮುಖ್ಯವಾಗಿ ಇಲ್ಲಿ ಕತೆ ಅಥವಾ ಬರವಣಿಗೆ ಇಲ್ಲಿ ಬಹಳಷ್ಟು ಜನರ ವೃತ್ತಿಯಲ್ಲ. (ಕೆಲವೊಬ್ಬರನ್ನು ಬಿಟ್ಟು) ಬಹಳಷ್ಟು ಜನ ಯಾವ ಯುನಿವರ್ಸಿಟಿಯಲ್ಲಿಯೂ ಇಲ್ಲ. ಅವರ ಕಥೆಗೆ ಬೇಕಾದ ವಸ್ತುವನ್ನು ತಮ್ಮ ಬಾಲ್ಯದಿಂದ ಅಥವಾ ತಾವು ಈಗ ಆಯ್ದುಕೊಂಡ ವೃತ್ತಿಬದುಕು ಅಥವಾ ಇಂದಿನ ಅವರ ಲೋಕದಿಂದ ಹೆಕ್ಕಿಕೊಂಡವರು.

ಇಲ್ಲಿನ ಈ ಮೆಟಮಾರ್ಫಸಿಸ್ ಕ್ರಿಯೆಯಲ್ಲಿ ಮೂರು ಗುಣಗಳನ್ನು ಗಮನಿಸಬಹುದು. ಒಂದು ಹೊಸಲೋಕದ ಕುರಿತು ಬೆರಗು- ಅಂದರೆ ಉತ್ತರಕನ್ನಡದ ಯಾವುದೋ ಸಣ್ಣ ಊರಲ್ಲಿಯೋ ಬೆಳೆದ ವ್ಯಕ್ತಿ ಬೆಂಗಳೂರು, ಬಾಂಬೆ, ಡೆಲ್ಲಿ, ಅಮೆರಿಕಾ, ಇಂಗ್ಲೆಂಡು ಮತ್ತು ಬೇರೆಕಡೆ ಹೋದಾಗ ಯಾವುದೇ ವ್ಯಕ್ತಿ ಎದುರಿಸೋ ಸಾಮಾನ್ಯ ಬೆರಗು, ಆ ಬೆರಗು ಹುಟ್ಟಿಸೋ ಕತೆಗಳು ಬಹಳ ಇಂಪ್ರೆಶನಿಸ್ಟಿಕ್. ಇವು ನಿಜವಾದ ಭಾವನೆಗಳಲ್ಲ. ಹೊಸಲೋಕದ ಬೆರಗನ್ನು ಮಾತ್ರ ಅಕ್ಷರಗಳಲ್ಲಿ ಹಿಡಿದಿಡೋ ಆಸೆಯಿಂದ ಕೆಲವು ಕತೆಗಳು ಬರೆಯಲ್ಪಡುತ್ತವೆ. ಅದೂ ನಾವು ಕೆಲಸ ಮಾಡೋ ಪ್ರಪಂಚ ನಾವು ಬೆಳೆದ ಪ್ರಪಂಚಕ್ಕಿಂತಾ ಸಂಪೂರ್ಣವಾಗಿ ಬೇರೆಯಾಗಿದ್ದಾಗ ( ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ) ಆಗ ಈ ಬೆರಗಿನಿಂದ ಹೊರಗೆ ಬರಲು ಬಹಳಷ್ಟ ಕಾಲವೇ ಬೇಕಾಗುತ್ತದೆ. ನಂತರದ ಘಟ್ಟ, ಎರಡೂ ಪ್ರಪಂಚವನ್ನು ತುಲನಾತ್ಮಕವಾಗಿನೋಡೋದು. ಈ ಕಳೆದೆರಡು ದಶಕಗಳ ಪಲ್ಲಟ ನಮ್ಮಲ್ಲಿ ಸೃಷ್ಟಿಸಿರೋ ಒಂದು ಸಾಂಸ್ಕೃತಿಕ ಮತ್ತು ಸೋಷಿಯಾಲಜಕಿಲ್ ಗ್ಯಾಪ್ ಒದಗಿಸಿರೋ ತುಲನಾತ್ಮಕ ಶಕ್ತಿ ಅಸಾಧ್ಯವಾದದ್ದು. ನಾವು ಊಟ ಮಾಡೋದರಿಂದ ಹಿಡಿದು ಮಾತನಾಡುವ, ನಿಂತುಕೊಳ್ಳುವ ಬಾಡಿ ಲಾಂಗ್ವೇಜುಗಳು ಕೂಡ ಇಪ್ಪತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತ ಬಹಳ ಬೇರೆಯಾಗಿವೆ. ಬೇಕಾದರೆ ಈಗ ನಲವತ್ತರ ಸುಮಾರಿನಲ್ಲಿರೋರು ಹದಿನೈದು ವರ್ಷದ ಹಿಂದಿನ ಮದುವೆಯ ಫೋಟೋವನ್ನು ಒಮ್ಮೆ ನೋಡಿಕೊಂಡರೆ ನಾನು ಹೇಳುತ್ತಾ ಇರೋ ಈ ಪಲ್ಲಟ ಅಂದರೆ ಏನು ಎಂದು ಕೊಂಚ ಸ್ಪಷ್ಟವಾಗಬಹುದು. ಈ ನಮ್ಮಲ್ಲಾಗಿರುವ ವ್ಯಕ್ತಿತ್ವದ ಬದಲಾವಣೆ ನೈಜವಾಗಿ ಆಗಿದೆಯೋ ಅಥವಾ ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ನಾವು ನಮ್ಮ ಮೇಲೆ ಆರೋಪಿಸಿಕೊಳ್ಳುತ್ತಾ ಇದೀವಾ ಅನ್ನೋದು ಒಂದು ದೊಡ್ಡ ಪ್ರಶ್ನೆ. ಅಂದರೆ, ನಮ್ಮ ಸಮಾಜದ ಈ ಪಲ್ಲಟ ಅಥವಾ ಸಾಂಸ್ಕೃತಿಕ ಬದಲಾವಣೆ ವ್ಯಕ್ತಿಯಿಂದ ಆಗುತ್ತಾ ಇದೆಯೋ ಅಥವಾ ವೈಸ್ ವರ್ಸಾ ನೋ ಅನ್ನೋದು ಒಂದು ದೊಡ್ದ ಪ್ರಶ್ನೆ.

ಕೆಲವು ತಿಂಗಳ ಯಾರದೋ ಒಂದು ಮದುವೇಗೆ ಹೋಗಿದ್ದೆ. ಧಾರೆ ಇತರೇ ಕಾರ್ಯಕ್ರಮಗಳು ಮುಗಿದಮೇಲೆ ಹೆಣ್ಣು ಒಪ್ಪಿಸೋ ಕಾಯುಕ್ರಮದ ಸಂದರ್ಭಕ್ಕೂ ಒಂದಿಷ್ಟು ಜನ ರೆಡಿಯಾಗ್ತಾ ಇದ್ದರು. ನಾನು ಹೇಳೋದು ಸಿನಿಕವಾಗಿ ಕಾಣಬಹುದು ಆದರೆ ಆ ಕಾರ್ಯಕ್ರಮಕ್ಕೆ ಅಂತಲೇ ಜನ ಸಿದ್ಧರಾಗುತ್ತಿದ್ದರು. ಅಂದರೆ, ಒಂದಿಷ್ಟು ಜನ ಹೆಂಗಸರು ತಮ್ಮ ಮೇಕಪ್ ಅನ್ನು ಬಿಚ್ಚಿಟ್ಟು “ಈಗ ಅಳೋ ಕಾರ್ಯಕ್ರಮ’ ಎಂದಂದು ಹೆಣ್ಣು ಒಪ್ಪಿಸಿ ಅರ್ಧಗಂಟೆ ಅತ್ತು ನಂತರ ರಿಸೆಪಷನ್‌ಗೆ ರೆಡಿಯಾದರು. ಒಂದಿಷ್ಟು ಜನ ಹುಡುಗರು ಬೆಟ್ ಕಟ್ತಾ ನಿಂತಿದ್ದರು ‘ ನಾನು ಈಗ ಹೇಳ್ತೀನಿ ನೋಡು ಈ ಆಂಟಿ ಅಳ್ತಾರೆ’ ಎಂತ. ಅಲ್ಲದೆ ಇಂತಿಂಥ ಗಂಡಸರೂ ಅಳ್ತಾರೆ ಅನ್ನೋದನ್ನು ಹುಡುಗರು ಮುಂಚೇನೇ ಊಹಿಸಿಕೊಳ್ಳುತ್ತಾ ನಿಂತಿದ್ದರು. ಯಾರೋ ಬೆಟ್ ಕೂಡ ಕಟ್ಟಿದ್ದರಂತೆ. ಹೀಗೆ ಅಳೋ ಕ್ರಿಯೇನೂ ಪ್ರೋಗ್ರಾಮ್ಡ್ ಆದಾಗ ನಮ್ಮ ಸಂವೇದನೆಗಳು ನಮ್ಮದಾ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಈ ರೀತಿ ನಾವೇ ಬೆಳೆಸಿಕೊಂಡ ವ್ಯಕ್ತಿತ್ವದ ಆಚೆ ನಿಂತು ನಮ್ಮನ್ನೇ ನೋಡಿಕೊಳ್ಳುವುದು ಮತ್ತು ಆ ವ್ಯಕ್ತಿತ್ವದ ಪರಿಧಿಯ ಒಳಗೆ ನಿಂತುಕೊಂಡು ಅದೇ ಜಗತ್ತನ್ನು ನೋಡೋದು ಮತ್ತೆ ಹೊರಗಿನ ಜಗತ್ತನ್ನು ಮತ್ತೆ ಬಾಲ್ಯವನ್ನು ನೋಡೋದು ಪ್ರಾಯಶಃ ಮುಂದಿನ ಘಟ್ಟ. ಆಗ ಬಾಲ್ಯ ಬಹಳ ಸುಂದರವಾಗಿ ಕಾಣುತ್ತಾ ಹೋಗುತ್ತೆ. ನಾವು ನಿಂತಿರೋ ಜಗತ್ತು ನಮ್ಮದಲ್ಲ ಅಥವಾ ನಮ್ಮದಲ್ಲದ ಜಗತ್ತಿನಲ್ಲಿ ನಾವು ಸೇರಿಕೊಂಡಿದ್ದೇವೆ ಅನ್ನೋ ಅನುಮಾನ ಬಂದಾಗ ಇವು ನಮ್ಮ ಸದ್ಯದ ಬದುಕಿನ ಬಗ್ಗೆ ಸಿನಿಕತನ ಮತ್ತು ನಿರಾಕರಣೆ, ಬಾಲ್ಯದ ಬಗ್ಗೆ ಅತಿಯಾದ ಪ್ರೀತಿ, ಬಾಲ್ಯದಲ್ಲಿ ನಾವು ಕಂಡ ಪಾತ್ರಗಳನ್ನು ತೀರ ನಾಟಕೀಯ ಮಾಡೋದು, ಪ್ರಾಮಾಣಿಕತೆಯ ಅಂಚಿನವರೆಗೂ ಹೋಗಿ ನಿಂತು ಫಿಕ್ಶನಲ್ ಯಾವುದು ಯಾವುದಲ್ಲ ಅನ್ನೋದನ್ನು ನೋಡೋದು ಶುರುವಾಗುತ್ತೆ. ಈ ಎಲ್ಲಾ ಭಾವನೆಗಳ ಮಿಶ್ರಣ ಒಂದು ರೀತಿಯ ಹೊಸಾ ಸಂವೇದನೆಯನ್ನು ನಮ್ಮ ಈ ನೈಸ್ ಕತೆಗಾರರಲ್ಲಿ ಸೃಷ್ರಿಸಿದೆ. ಕೆಲವರು ಏನು ಮಾಡಿದರೂ ಬಾಲ್ಯ ಬಿಟ್ಟು ಹೊರಗೆ ಬರೋಲ್ಲ ಅಂತ ಹಟ ಮಾಡ್ತಾ ಅಲ್ಲಿಯೇ ನಿಂತಿದ್ದಾರೆ. ಇನ್ನು ಕೆಲವರು ನಾನು ನೋಡ್ತಾ ಇರೋ ಈ ವರ್ತಮಾನವೇ ಸತ್ಯ ಎಂದು ತಿಳಕೊಂಡು ವರ್ತಮಾನವನ್ನು ಮಾತ್ರ ಬರೆಯೋದು. ಒಟ್ಟು ಎಲ್ಲರೂ ತಮ್ಮ ತಮ್ಮ ಸಣ್ಣ ಕೀ ಹೋಲ್ ಗಳ ಮೂಲಕ ಪ್ರಪಂಚವನ್ನು ನೋಡಿದಾಗ ಒಂದು ವಿಭಿನ್ನ ಕಥಾಲೋಕ ಸೃಷ್ಟಿಯಾಗುತ್ತದೆ.

ಈ ನೈಸ್ ಕತೆಗಾರರನ್ನು ಕನ್ನಡ ವಿಮರ್ಶಾವಲಯ ನೋಡುತ್ತಾ ಇರುವ ದೃಷ್ಟಿ ಕೂಡ ಬಹಳ ಕುತೂಹಲಕರವಾಗಿದೆ. ನಮ್ಮ ಪಲ್ಲಟಗಳು ನೈಸ್ ಕತೆಗಾರರನ್ನು ಸೃಷ್ಟಿಸಿದಂತೆ ನೈಸ್ ವಿಮರ್ಶಕರ ತಳಿ ಇನ್ನೂ ಸೃಷ್ಟಿಯಾಗಿಲ್ಲ. ಅಥವಾ ಈ ಪಲ್ಲಟ, ಬೆರಗುಗಳು ನೇರವಾಗಿ ವಿಮರ್ಶಕರನ್ನು ತಟ್ಟಿಲ್ಲ. ಹಾಗಾಗಿ ವಿಮರ್ಶಕರು ಒಂದು ತಳಿ ಹಿಂದೆ ಉಳಿದುಬಿಟ್ಟಿದ್ದಾರೆ. ನಮ್ಮ ವಿಮರ್ಶಕರಿಗಿರುವ ವಿಮರ್ಶೆಯ ಪಾಂಡಿತ್ಯದ ಬಗ್ಗೆ ನಾನು ಬಹಳ ಗೌರವವನ್ನಿಟ್ಟುಕೊಂಡೇ ನಾನು ಈ ಮಾತು ಹೇಳುತ್ತಿದ್ದೇನೆ. ಆದರೆ, ನನಗೆ ಪ್ರಾಮಾಣಿಕವಾಗಿ ಅನ್ನಿಸಿರುವುದೇನೆಂದರೆ ಹೊಸ ಭಾಷೆ, ಹೊಸ ಕಥಾವಸ್ತು, ಹೊಸ ನೇಯ್ಗೆ ಮತ್ತು ಈ ಹೊಸ ವೇಗ ಎಲ್ಲವೂ ವಿಮರ್ಶಕರಿಗೂ ಕೂಡ ಹೊಸದು. ಸಾಂಪ್ರದಾಯಿಕ ಥೀಮುಗಳನ್ನು ಭಾಷೆಯಲ್ಲಿ ಮತ್ತು ವಸ್ತುವಿನಲ್ಲಿ ಮುರಿದಾಗ ವಿಮರ್ಶಕರಿಗೆ ಈ ತಳಿಯಜತೆ ಒಂದು ರೀತಿ ‘ಲವ್ ಹೇಟ್’ ಸಂಬಂಧ ಶುರುವಾಗಿದೆ. ಕೆಲವೊಮ್ಮೆ ಅವುಗಳ ಪರಿಯನ್ನು ಸುಖಿಸುತ್ತಾ, ಸ್ವಾದಿಸುತ್ತಾ ಕೆಲವೊಮ್ಮೆ ಆರಾಧಿಸುತ್ತ ಒಂದು ರೀತಿ ‘ಸ್ಟಾಕ್‌ಹೋಮ್ ಸಿಂಡ್ರೋಮ್’ ಗೆ ಬಲಿಯಾಗಿದ್ದಾರೆ, (Preacher becoming the choir)ಇಲ್ಲವೇ ಈ ಭಾಷೆಯ ಒಗರನ್ನು, ಒರಟುತನವನ್ನು ಮತ್ತು ಕಥಾವಸ್ತುವಿನ ನಿರ್ಭಿಡೆಯನ್ನು ಪೋಸ್ಟ್ ಮಾಡ್ರನ್ ಫೋಸಿನ ಡೋಂಗೀ ವಿನ್ಯಾಸಗಳು ಎಂದು ರಿಜೆಕ್ಟ್ ಮಾಡುತ್ತಾರೆ. ಎರಡೂ ತುದಿಗಳು ಈ ಬರಹಗಾರರಿಗೆ ನ್ಯಾಯವನ್ನೊದಗಿಸುವುದಿಲ್ಲ. ಇದಕ್ಕೆ ಕಾರಣ ಕೊಡುವುದು ಬಹಳ ಕಷ್ಟ. ವಿಮರ್ಶೆ ಅಕೆಡಿಮಿಕ್ ಆಗಿ, ಮಾಸ್ತರುಗಳಿಂದಲೇ ಮಾಡಲ್ಪಡಬೇಕು ಎಂದು ಈ ನೈಸ್ ಮಂದಿ ಕೈಕಟ್ಟಿ ಕೂತಿರುವುದೂ ಒಂದು ಮುಖ್ಯ ಕಾರಣವಿರಬಹುದು.

ಈ ಗೋಚಾರಫಲ ಎಂದರೆ ಏನು ಎಂದು ನನಗೆ ಇಂದು ಸರಿಯಾಗಿ ಅರ್ಥವಾಗಿಲ್ಲ. ಕೆಲವೊಂದು ಸಭೆಗಳಲ್ಲಿ ಕತೆಗಾರರ ಗುಂಪುಗಾರಿಕೆ ಮತ್ತು ಕೆಲವರನ್ನು ಮಾತ್ರ ಸಾಹಿತಿಗಳೆಂದು ಬಿಂಬಿಸಲು ವ್ಯವಸ್ಥಿತವಾದ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪವನ್ನು ನಾವು ಕೇಳುತ್ತೇವೆ. ಇದನ್ನು ಹೆಚ್ಚು ಗಿಂಜದೇ ಹೇಳುವುದೆಂದರೆ, ಬರೇ ಸಾಹಿತ್ಯಕ್ಷೇತ್ರದಲ್ಲಲ್ಲ, ಯಾವತ್ತೂ ಎಲ್ಲ ಕ್ಷೇತ್ರದಲ್ಲಿಯೂ ಸಮಾನಮನಸ್ಕರ ಒಂದು ಗುಂಪಿದ್ದೇ ಇರುತ್ತದೆ. ಇದು ಯಾವಾಗ ಗುಂಪುಗಾರಿಕೆಯಾಗುತ್ತದೆಯೋ ಆಗ ಗುಂಪಿನ ಶಕ್ತಿ ಅರ್ಥಹೀನವಾಗುತ್ತದೆ.

ಮತ್ತೆ ಮೊದಲ ಪ್ರಶ್ನೆಗೆ ಬಂದರೆ, ನಮ್ಮನ್ನು ಪರಂಪರೆಗೆ ಸೇರಿಸಬೇಡಿ ಎಂದು ನಾವು ಕೇಳುವುದು ಪ್ರಾಯಶಃ ಪರಂಪರೆಯ ಬಗೆಗಿರುವ ಅಜ್ಞಾನದಿಂದಲೇ ಇರಬಹುದು. ಹೆಚ್ಚು ಓದಿಕೊಂಡಿರದ ಕನ್ನಡದ ಹಿಂದಿನ ಲೇಖಕರ ಜತೆ ನಿಲ್ಲಿಸಿದಾಗ ಅಥವಾ ಇವರ ಪರಂಪರೆಯ ಲೇಖಕ ಎಂದು ಯಾರಾದರೂ ಹೇಳಿದಾಗ ‘ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟಿಬಿಡಿ’ ಎಂದು ಹೇಳುವುದು ನಮ್ಮ ದೌರ್ಬಲ್ಯವನ್ನು ಸಮರ್ಥಿಸಿಕೊಳ್ಳಲು ಮಾತ್ರವೇ ಇದ್ದಿರಬಹುದು. ಆದರೆ, ಕನ್ನಡದಲ್ಲಿ ಬರೆಯುತ್ತಿರುವುದರಿಂದ ನಾವೆಲ್ಲರೂ ಒಂದು ಪರಂಪರೆಗೆ ಸೇರಿದ್ದೇವೆ, ಅನ್ನಿಸುತ್ತದೆ. ಅದರಲ್ಲಿ ಉಡಾಳನಾಗಿ ಉಳಿಯುತ್ತೇವೋ ಅಥವಾ ವಂಶವೃಕ್ಷದೊಳಗೆ ಹಸನಾದ ಚಿಗುರಾಗುತ್ತೇವೋ ಅನ್ನುವುದು ಮಾತ್ರ ನಮ್ಮ ಕೈಯಲ್ಲಿ ಇದೆ.

5 comments:

 1. ನಿಮ್ಮ ಬ್ಲಾಗ್ ಇರೋದು ಗೊತ್ತೇ ಇರ್ಲಿಲ್ಲ.. :( ಈಗ ನೋಡ್ತಿದೀನಿ..

  ReplyDelete
 2. ಥ್ಯಾಂಕ್ಸ್. ಬಂದದ್ದಕ್ಕೆ. ಆಗಾಗ್ಗೆ ಬರುತ್ತಿರಿ

  ಗುರು

  ReplyDelete
 3. ಇಲ್ಲಿಯೇ ಓದ್ತಿದ್ದೇನೆ!ಬರಹ ಬಹಳ ಚೊಕ್ಕವಾಗಿದೆ.

  ReplyDelete
 4. ಗುರು,

  ನಿಮ್ಮ ಉದಯವಾಣಿ ಅಂಕಣದ ಮೊದಲ ಈಮೇಲ್ ಬಂದ ಮೇಲೆ ಮತ್ತೆ ಬರಲಿಲ್ಲ. ಆದರೆ ಅದರ ಬ್ಲಾಗ್ ಶುರುವಾದದ್ದು ಗೊತ್ತಾದದ್ದು "ಅವಧಿ"ಯಿಂದ. ಈಗ ನಿಮ್ಮ ಈ ಬ್ಲಾಗ್ ನನ್ನ ಗೂಗಲ್ ರೀಡರಿನಲ್ಲಿದೆ, ತಪ್ಪಿಸಿಕೊಳ್ಳುವ ಪ್ರಮೇಯವೇ ಇಲ್ಲ.

  ಈ ಅಂಕಣ ಬರಹಕ್ಕೆ ನನ್ನ ಕೆಲ ಅನಿಸಿಕೆಗಳು:

  ೧. ಸೃಜನಶೀಲ ಸಾಹಿತ್ಯಕ್ಕೆ ಅಕಾಡೆಮಿಕ್ ಬರಹಗಾರರು ಎಷ್ಟು ಮುಖ್ಯವೋ ಅಷ್ಟೇ ನಾನ್-ಅಕಾಡೆಮಿಕ್ ಬರಹಗಾರರೂ ಅಷ್ಟೇ ಮುಖ್ಯವೆಂದು ನಂಬಿದವನು ನಾನು. ಅದಕ್ಕೆಂದೇ ಲಂಕೇಶ್, ಅನಂತಮೂರ್ತಿಯವರಷ್ಟೇ ಪ್ರೀತಿಯಿಂದ ಬರೆದ ಇಂಜಿನಿಯರ್ ಚಿತ್ತಾಲರು ಕನ್ನಡಿಗರಿಗೆ ಮುಖ್ಯವಾಗುತ್ತಾರೆ. ಒಂದು ದಶಕದ ಹಿಂದೆ ಹೊರನಾಡ ಕನ್ನಡ ಸಾಹಿತ್ಯವೆಲ್ಲ ಮುಂಬೈ ಕನ್ನಡಿಗರಿಂದ ಬಂದಿದ್ದು - ಚಿತ್ತಾಲ, ಕಾಯ್ಕಿಣಿ ಇತ್ಯಾದಿ. ಈಗ ಪರದೇಸೀ ಕನ್ನಡಿಗರೂ ಸೃಜನಶೀಲ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ನೀವೇ ಸಾಕ್ಷಿ, ನೀವು ಹೊದತಂದ "ಆಚೀಚಿನ ಕತೆಗಳೇ" ನಿದರ್ಶನ. ಹೊರದೇಶದಲ್ಲಿರುವ ಕಾಣ್ಕೆಗಳು ಹೊರನಾಡ ಕನ್ನಡಿಗರಿಗಿಂತ ತುಂಬ ಭಿನ್ನ. ಅದಕ್ಕೆಂದೇ ಹೊಸ ಪರಿಭಾಷೆಯ ಅವಶ್ಯಕತೆ ಇದೆ, ಅದನ್ನು ನಿಮ್ಮ ಕತೆಗಳಲ್ಲಿ, ಕಾದಂಬರಿಯಲ್ಲಿ ನೀವು ಯಶಸ್ವಿಯಾಗಿ ಪ್ರಯೋಗಿಸಿದ್ದೀರಿ ಕೂಡ, ಹಾಗೆಂದು ಅನಂತಮೂರ್ತಿಯವರೂ ಶ್ರೀರಾಮರೂ ಬರೆದಿದ್ದಾರೆ. ಅದು ಬರೀ ನಿಮ್ಮ ಮೇಲಿನ ಪ್ರೀತಿಯಿಂದ ಬರೆದಿದ್ದಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಪರದೇಸೀ ಕನ್ನಡ ಸಾಹಿತಿಗಳಿಗೆ "ನೈಸ್ ಸಾಹಿತಿಗಳು" ಎಂದಾದರೂ ಹೇಳಲಿ, "ನಗರ ಕೇಂದ್ರಿತ ಸಾಹಿತಿಗಳು" ಎಂದಾದರೂ ಹೇಳಲಿ. ನೀವು "ಪರದೇಸೀ ಸಾಹಿತಿಗಳ" ಕಾಮನ್ ಗುಣಗಳನ್ನು ಸರಿಯಾಗಿ ಗುರುತಿಸಿದ್ದೀರಿ.

  ೨. ಕನ್ನಡದ ಸೃಜನಶೀಲ ಸಾಹಿತ್ಯದ ಓದು ಅಕಾಡೆಮಿಕ್ ಒಲಯದಿಂದ ಹೊರಬರದೇ ಒದ್ದಾಡುತಿದ್ದಾಗ, ಅದನ್ನು ಜನರಿಗೆ ತಲುಪುವ ಕೆಲಸ ಮಾಡಿದವರು "ಜೋಗಿ" ಅಥವಾ "ಜಾನಕಿ" ಗಿರೀಶ್ ರಾವ್. ಆದರೆ ಅವರಂಥ ಇನ್ನೂ ಹೆಚ್ಚಿನ ಬರಹಗಾರರು ಕನ್ನಡದಲ್ಲಿ ಇಲ್ಲದಿರುವುದು ನಮ್ಮ ದುರದೃಷ್ಟ. ನಾನ್-ಅಕಾಡೆಮಿಕ್ ಜನರಿಗೆ ಅರ್ಥವಾಗದ ಪರಿಭಾಷೆ ಬಳಸಿ, ಸಾಹಿತ್ಯವನ್ನು ಯಾರೂ ಓದದಂತೆ ಮಾಡುವವರು ಅಕಾಡೆಮಿಕ್ ವಿಮರ್ಶಕರು. ಬಹುಷಃ ಅಂಥವರಿಂದ ದೂರವಿರುವುದೇ ಒಳ್ಳೆಯದೇನೋ!

  - ಕೇಶವ

  ReplyDelete
 5. ಸರ್,
  ನಿಮ್ಮ ಬರಹಗಳನ್ನು ಓದುತ್ತಿರುತ್ತೇನೆ. ಆದರೆ ಕಾಮೆಂಟ್ ಬರೆಯುವಷ್ಟು ಪ್ರೌಡಿಮೆ ಇಲ್ಲದ್ದರಿಂದ ಸುಮ್ಮನಾಗುವೆ. ಸಾಹಿತಿಗಳ ಫೋಟೋ ತೆಗೆಯುವುದರ ಬಗ್ಗೆ ಇನ್ನೂ ಚಿಂತನ ಮಂಥನ ನಡೆಯುತ್ತಿದೆ!

  ReplyDelete