Monday, May 4, 2009

ಎಬಿಸಿಡಿ ಮತ್ತು ಎನ್ನಾರೈ

೧. ಆತ ಅಮೆರಿಕಾದಲ್ಲಿಯೇ ಹುಟ್ಟಿದ್ದು ಮತ್ತು ಬೆಳೆದಿರುವುದು, ಹುಟ್ಟಿದಂದಿನಿಂದ ಭಾರತಕ್ಕೆ ಬಂದಿಲ್ಲ. ಅಜ್ಜಿ ಕೂಡ ಅಮೆರಿಕಾದಲ್ಲಿ ಇವನ ಕುಟುಂಬದ ಜತೆಗೇ ಇದ್ದಾಳೆ. ಆಕೆಗೆ ಮಾರಣಾಂತಿಕ ಕಾಯಿಲೆ. ಆದರೆ, ಅವಳು ಅಮೆರಿಕಾದಲ್ಲಿ ಸಾಯಲು ಸಿದ್ಧಳಿಲ್ಲ. ಅವಳನ್ನು ಮತ್ತೆ ವಾಪಸ್ಸು ಭಾರತಕ್ಕೆ ಬಿಟ್ಟುರುವ ನೆವದಲ್ಲಿ ಭಾರತಕ್ಕೆ ಹೋಗುತ್ತಾನೆ. ಅಲ್ಲಿ ಆತ ಬಂದಿಳಿಯುವುದು ದೆಹಲಿ-೬ (ಚಾಂದನೀ ಚೌಕ)ಕ್ಕೆ. ಅಲ್ಲಿ ಆತ ‘ಚಾಳ್’ ನ ಜನಗಳ ಸಂಬಂಧ, ಪ್ರೀತಿ, ದ್ವೇಷ, ರಗಳೆಗಳನ್ನು ನೋಡಿ ಪುಳಕಗೊಳ್ಳುತ್ತಾನೆ. ಅವರ ಮುಗ್ಧತೆ ನೋಡಿ ಆಶ್ಚರ್ಯಪಡುತ್ತಾನೆ, ರಾಮಲೀಲಾ ಉತ್ಸವದಲ್ಲಿ ದೇವರುಗಳೂ ರಾಜಕಾರಣಿಗಳಿಗೆ ಕೈಮುಗಿದು ನಮಸ್ಕರಿಸುವುದನ್ನು ನೋಡಿ ಬೆರಗಾಗುತ್ತಾನೆ. ಅಲ್ಲಿನ ಅಣ್ಣತಮ್ಮಂದಿರ ಜಗಳ, ಮನೆಯ ಮಧ್ಯದಲ್ಲಿರುವ ಗೋಡೆ, ಓರಗಿತ್ತಿಯರ ಪ್ರೀತಿ, ಹೆಗಲಮೇಲೆ ‘ಮಸಕ್ಕಲಿ’ಯನ್ನು ಕೂರಿಸಿಕೊಂಡು ತಾರಸಿಯ ಮೇಲೆ ಹಾಡುವ ಬಿಟ್ಟೂ ಎಲ್ಲವೂ ಒಂದು ಸ್ತರದಲ್ಲಿ ಅವನನ್ನು ಮುಟ್ಟುತ್ತದೆ.

ಆದರೆ, ಇವು ಯಾವುವೂ ಪೂರಕ್ಕೆ ಪೂರ ಆತನ ಮನಸ್ಸಿನ ಒಳಪದರಗಳನ್ನು ಮುಟ್ಟಿ ತೀರ ಭಾವುಕನೂ ಆಗುವುದಿಲ್ಲ. ಹಾಗಿದ್ದರೂ ಯಾವುದೋ ಒಂದು ತುಡಿತ ಇದು ತನ್ನದು ಎಂದು ಹೇಳುತ್ತಿರುತ್ತದೆ. ಆದರೆ ಎಲ್ಲವನ್ನೂ ಮೂವತ್ತುಸಾವಿರ ಅಡಿಗಳ ಮೇಲಿಂದ ಮುಟ್ಟಿದಂತೆ, ಕೋಲಿನ ಈ ತುದಿಯ ಸ್ಪರ್ಶ ಮಾತ್ರ ಆತನ ಅನುಭವಕ್ಕೆ ಬರುತ್ತದೆ. ಹೀಗಿದ್ದಾಗ ಆತ ಇದ್ದಕಿದ್ದ ಹಾಗೆ ಈ ಸ್ಥಳೀಯ ರಾಜಕಾರಣದಲ್ಲಿ ಮತ್ತು ದೆಹಲಿಯಲ್ಲಿ ಚಲಾವಿನಲಿದ್ದ ಕಾಲಾ ಬಂದರ್ ನ ಪ್ರಕರಣದಲ್ಲಿ ತನ್ನನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗುತ್ತದೆ. ಇದ್ದಕ್ಕಿದ್ದಂತೆ ಇದು ಅವನಿಗೆ ತನ್ನ ಸಮಸ್ಯೆಯಾಗುತ್ತದೆ.

೨. ಆತ ನಾಸಾದಲ್ಲಿ ದೊಡ್ಡ ಇಂಜಿನಿಯರ್. ಆತನಿಗೆ ಅಲ್ಲಿ ಒಳ್ಳೆ ಗೌರವ, ಸಂಬಳ ತರುವ ಕೆಲಸವಿದೆ. ಅವನೂ ಹದಿನಾಲ್ಕು ವರ್ಷದ ನಂತರ ಒಮ್ಮೆ ಇದ್ದಕ್ಕಿದ್ದ ಹಾಗೆ ತನ್ನ ಬಾಲ್ಯದ ಅಮ್ಮ ‘ಕಾವೇರಿಯಮ್ಮ’ ನನ್ನು ನೋಡಲು ಭಾರತಕ್ಕೆ ಬರುತ್ತಾನೆ. ಉತ್ತರಪ್ರದೇಶದ ಒಂದು ಕುಗ್ರಾಮದಲ್ಲಿಯ ಜನಕ್ಕೆ ಅಲ್ಲಿನ ಸಮಸ್ಯೆಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಅವರೆಲ್ಲರ ಸಂತೋಷವನ್ನೂ, ದುಃಖವನ್ನೂ ಅನುಭವಿಸುವ ಸಂದರ್ಭ ಬರುತ್ತದೆ. ನಂತರ ಅವನಿಗೆ ತನ್ನ ನಾಸಾದ ಈ ಕೆಲಸವನ್ನು ಬಿಟ್ಟು ವಾಪಸ್ಸು ಇಂಡಿಯಾಕ್ಕೆ ಬರುವುದೋ ಅಥವಾ ತಾನು ಅಮೆರಿಕಾದಲ್ಲಿಯೇ ಇರುವುದೋ ಅನ್ನುವ ಜಿಜ್ಞಾಸೆಯಲ್ಲಿ ಒದ್ದಾಡಿ ನಂತರ ಹುಟ್ಟಿದ ಭೂಮಿಯ ಸಲುವಾಗಿ ಹುಟ್ಟಿದ ಊರಿನಲ್ಲಿ ಒಂದು ಬಲ್ಬನ್ನು ಹತ್ತಿಸುವ ಸಣ್ಣ ಕೆಲಸವಾದರೂ ಸರಿ ಅದರಲ್ಲಿ ಸಾರ್ಥಕ್ಯ ಪಡೆಯುತ್ತೇನೆಂದು ವಾಪಸ್ಸು ಭಾರತಕ್ಕೆ ಬರುತ್ತಾನೆ.

ಚಿತ್ರಪ್ರೇಮಿಗಳಿಗೆ ಮೊದಲನೆಯ ಕತೆ ಇತ್ತೀಚೆಗೆ ಬಿಡುಗಡೆಯಾದ ರಾಕೇಶ್ ಓಮ್‌ಪ್ರಕಾಶ್ ಶರ್ಮಾನ ಡೆಲ್ಲಿ-೬ ಅನ್ನುವ ಚಿತ್ರದ ಕಥೆಯ ಸ್ಥೂಲಹಂದರ ಎಂದು ಗೊತ್ತಾಗದೇ ಇರದು, ಹಾಗೆಯೇ ಎರಡನೆಯದು ಕೆಲವುವರ್ಷ ಹಿಂದೆ ಬಿಡುಗಡೆಯಾಗಿದ್ದ ಅಶುತೋಶ್ ಗೌರೀಕರನ ‘ಸ್ವದೇಸ್’ ಚಿತ್ರದ ಕತೆ. ಇಲ್ಲಿ ಗಮನಿಸಬೇಕಾಗಿರುವುದೇನೆಂದರೆ ಎರಡೂ ಚಿತ್ರಗಳು ನಮ್ಮ ಸದ್ಯದ ಕಾಳಜಿಗಳಾದ ಜಾಗತೀಕರಣ ಮತ್ತು ಅದರ ಟ್ರಿಕಲ್ ಡೌನ್ ಪರಿಣಾಮ, ರಾಜಕಾರಣ, ಪೋಲೀಸು ವ್ಯವಸ್ಥೆ ಮತ್ತು ಎಲ್ಲದರ ನಡುವೆ ಕಲಷದಂತಿರುವ ಧರ್ಮದಂತ ವಸ್ತುಗಳನ್ನು ಕೇಂದ್ರದಲ್ಲಿಟ್ಟು ನೋಡುವುದರ ಜತೆಗೆ ಆ ಸಮಸ್ಯೆಗಳಿಗೆ ಕೊಂಚಮಟ್ಟಿಗಾದರೂ ಏಲಿಯನ್ ಅನ್ನಿಸುವ ಈ ಭಾರತದಿಂದ ಆಚೆ ವಾಸಿಸುತ್ತಿರುವ ಎರಡು ಮನಸ್ಸುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸಿವೆ.

ಇಲ್ಲಿ ಎಬಿಸಿಡಿ ಎನ್ನುವ ಪ್ರತ್ಯಯ ಕ್ಲೀಶೆಯಾದದ್ದು. ಅಮೆರಿಕಾದಲ್ಲಿಯೇ ಹುಟ್ಟಿ ಬೆಳೆಯುವ ಆದರೆ ಭಾರತೀಯ ಸಂಜಾತ ಅಪ್ಪ ಅಮ್ಮಂದಿರ ಮಕ್ಕಳಾದ ಎರಡನೇ ಜನಾಂಗವನ್ನು ಅಮೆರಿಕನ್ ಬಾರ್ನ್ ಕನ್‌ಫ್ಯೂಸ್ಡ್ ದೇಸಿಗಳು ಎಂದು ಕರೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಹುಡುಗರಿಗೆ ಭಾರತವೆಂದರೆ ಅಪ್ಪ, ಅಮ್ಮನ ತೆಳು ಗ್ರಹೀತಗಳ ಆಗರ. ಅಪ್ಪ, ಅಮ್ಮಂದಿರುಗಳು ಮನೆಯಲ್ಲಿಟ್ಟುಕೊಂಡು ಪೂಜಿಸುವ ಎಲ್ಲ ದೇವರುಗಳಿಗೂ ಇವರೂ ಕೈಮುಗಿಯುತ್ತಾರೆ. ದೇವಸ್ಥಾನಗಳಲ್ಲಿ ಅಗಾಗ್ಗೆ ಆಗಾಗ್ಗೆ ನಡೆಯುವ ಪೂಜೆ,ಪಾರ್ಟಿಗಳಲ್ಲಿ ತಾವೂ ಗಾಗ್ರಾ ಚೋಲಿಯನು ಹಾಕಿಕೊಂಡು ಅಥವಾ ಕುರ್ತ ಶರ್ವಾನಿ ಹಾಕಿಕೊಂಡು ಐಪಾಡಿನಲ್ಲಿ ಕಿವಿ ಹುದುಗಿಸಿಕೊಂಡು ಕೂತಿರುತ್ತಾರೆ, ಅಥವಾ ‘ನಧೀಂಧೀಂತನಾ’ ಗೆ ಹೆಜ್ಜೆ ಹಾಕುತ್ತಾರೆ. ಅಜ್ಜಿ, ಅಜ್ಜಂದಿರ ಜತೆ ‘ಹೌ ಆರ್ ಯು ಅಜ್ಜಾ’ ಎಂದು ಮಾತಾಡಲು ಬರುತ್ತೆ. ‘ಐ ಡೋಂಟ್ ಲೈಕ್ ಪಾಯಸಾ, ಇಟ್ ಟೇಸ್ಟ್‌ಸ್ ಲೈಕ್ ರೈಸ್ ಪುಡ್ಡಿಂಗ್. ಬಟ್ ಐ ಲವ್ ದಟ್ ಚಿರೋಟಿ ಸ್ಟಫ್’ ಎನ್ನುವಷ್ಟು ಕನ್ನಡ ಮಾತಾಡುತ್ತಾರೆ. ಅವರುಗಳಿಗೆ ಇಂಡಿಯಾವೆಂದರೆ, ಟೀವಿಯ ಸಾರೆಗಮಪ ಅಥವಾ ಬೂಗಿ ವೂಗಿ ಕಾರ್ಯಕ್ರಮಗಳು, ಇಂಗ್ಲಿಶ್ ಸಬ್‌ಟೈಟಲ್ಲುಗಳಿರುವ ಬಾಲಿವುಡ್ ಸಿನೆಮಾಗಳು, ಸಮೋಸ ಮತ್ತು ಹಿತ್ತಾಳೆಯ ನಟರಾಜನ ವಿಗ್ರಹ. ಇಂಡಿಯಾಕ್ಕೆ ಬಂದರೆ ಬಾಟಲಿ ನೀರು ಮತ್ತು ಏಸಿಕಾರುಗಳಲ್ಲಿ ಹೋಗಿಬರುವ ದೇವಸ್ಥಾನಗಳು, ಹೆಚ್ಚೆಂದರೆ ತಾಜ್‌ಮಹಲ್, ತಂದೂರಿ ಚಿಕನ್ನು. ಈ ನಡುವೆ ಹೆಚ್ಚೆಂದರೆ ಕೆಲವರು ಸ್ಯಟಿಲೈಟ್ ಟೆಲಿವಿಷನ್ ನೋಡಿ ಕ್ರಿಕೆಟ್ ಆಡಬಹುದು.

ಇಂಥ ಹುಡುಗನೊಬ್ಬ ಇದ್ದಕ್ಕಿದ್ದಂತೆ ಚಾಂದಿನಿ ಚೌಕಕ್ಕೆ ಬಂದು ಅಲ್ಲಿನ ದೈನಿಕದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಹೇಗಾಗಬಹುದು. ಇವನಿಗೆ ಈ ಹಿಂದೂ, ಮುಸ್ಲಿಮ್ ಸಂಬಂಧದ ಅಥವಾ ವೈಷಮ್ಯದ ಸೂಕ್ಷ್ಮಗಳಿರಲಿ, ಅಲ್ಲಿನ ಕುಟುಂಬದ ಇನ್ನಿತರ ಸಂಬಂಧಗಳು ಮತ್ತು ಹುಡುಗಿಯೊಂದಿಗಿನ ಸಂಬಂಧ ಮತ್ತು ಪ್ರೀತಿಯೂ ದಕ್ಕುವುದು ಒಂದು ಪದರದಲ್ಲಿ ಮಾತ್ರ. ಅವನಿಗೆ ಈ ಬ್ಲಾಕ್ ಮಂಕಿಯ ( ಈ ಕರಿಮಂಗ ನಮ್ಮಲ್ಲೇ ಇದ್ದಾನೆ ಅನ್ನುವ ಅಮೂರ್ತ ಸಿದ್ಧಾಂತವನ್ನು ಬಿಟ್ಟರೂ) ಪ್ರಕರಣ ಅಷ್ಟು ಸಂಗತವಾಗಿ ಆಗಿ ಆತ ಭಾರತದಲ್ಲಿ ಉಳಕೊಂಡು ಈ ಸಮಸ್ಯೆಗೆ ಸ್ಪಂದಿಸುತ್ತಾನೆಂಬುದನ್ನು ಗ್ರಹಿಸಲು ಕೊಂಚ ಕಷ್ಟ. ಇಂದಿರಾನಗರದಲ್ಲಿಯೇ ಹುಟ್ಟಿ ಬೆಳೆದು, ಬಿಷಪ್ ಕಾಟನ್‌ನಲ್ಲಿ ಓದಿದ ಹುಡುಗನೊಬ್ಬ ಯಾವುದೋ ಎನ್‌ಜೀ‌ಓ ಮೂಲಕ ಬಿಜಾಪುರದ ಒಂದು ಹಳ್ಳಿಯ ಜೀರ್ಣೋದ್ದಾರಕ್ಕೆ ಹೋದಷ್ಟೇ ಪ್ರಸ್ತುತ. ಅವನಿಗೆ ಸಮಸ್ಯೆಯ ಮೂಲವೇ ಅರಿವಿಲ್ಲದಿರುವಾಗ ಅದನ್ನು ಸರಿಪಡಿಸಲು ಆತ ಹುಡುಕುವುದು ಈ ಸಮಸ್ಯೆಯಿಂದಾಗುವ ಕೈಮೈತಟ್ಟುವ ಭೌತಿಕ ಪರಿಣಾಮಗಳನ್ನು ಮಾತ್ರ. ಇದನ್ನು ರಾಕೇಶ್ ಓಂಪ್ರಕಾಶ್ ಮೆಹ್ರ ಬ್ಲಾಕ್ ಮಂಕಿಯ ರೂಪಕದಲ್ಲಿ ತೋರಿಸಿದ್ದರೂ,ಇದು ಎಷ್ಟೇ ಕ್ಲೀಶೆಯ ಕಲ್ಪನೆಗೂ ಸಿಕ್ಕದೇ ನಂಬಲಿಕಾಗದೇ ಹೋಗುತ್ತದೆ. ಕೊನೆಗೆ ಅಭಿಷೇಕನನ್ನು ಜನ ಹೊಡೆದು ಹಣ್ಣುಗಾಯಿ, ನೀರುಗಾಯಿ ಮಾಡುತ್ತಿದ್ದಾಗ ‘ಓ ಕಮಾನ್’ ಎನಿಸುತ್ತದೆ. ಇಲ್ಲಿ ಈ ಸುಧಾರಕ ಈ ವೈಷಮ್ಯದ ವಿಕ್ಟಿಮ್ ಅನಿಸದೇ ಸಮಸ್ಯೆಯನ್ನು ಅರಿಯಲಾಗದ ಮುಗ್ಧ ಅಥವಾ ಪೆದ್ದ ಅನ್ನಿಸಿದರೂ ಅನಿಸಬಹುದು.

ರಾಕೇಶ್ ತಪ್ಪಿರುವುದೇ ಇಲ್ಲಿ. ಈತನಿಗೆ ಕತೆ ಹೇಳುವ ಕಲೆಯಿದೆ. ದೃಶ್ಯಗಳನ್ನು ಚಿತ್ರಿಕರಿಸುವುದರಲ್ಲಿ, ಅದನ್ನು ಎಡಿಟ್ ಮಾಡುವುದರಲ್ಲಿ ಆತ ನಿಷ್ಣಾತ. ಸಮಕಾಲೀನ ಇಂಡಿಯಾದ ಬೇರೆಬೇರೆ ಮುಖಗಳ ಸಂಕೀರ್ಣತೆಯ ಪರಿಚಯವೂ ಆತನಿಗಿದೆ. ಈ ಬ್ಲಾಕ್ ಮಂಕಿ ಅನ್ನುವುದು ಇಲ್ಲವೇ ಇಲ್ಲ ಅದು ನಮ್ಮೆಲ್ಲರಲ್ಲಿಯೂ ಇದೆ ಅನ್ನುವ ಉದಾತ್ತ ಆದರೆ ಸಾಮಾನ್ಯ ಪ್ರೇಕ್ಷಕನಿಗೆ ದಕ್ಕದಿರುವ ಒಂದು ಅಮೂರ್ತ ಸಿದ್ಧಾಂತವನ್ನು ಆತ ಮನರಂಜನೆಯ ಮೂಲ ಅಂಶಗಳನ್ನು ಬಿಡದೇ ಹೇಳಬೇಕು ಅನ್ನುವ ಸವಾಲನ್ನು ತನಗೆ ತಾನೇ ಹಾಕಿಕೊಳ್ಳುತ್ತಾನೆ. ಇದನ್ನು ಆತ ಹೇಳಿಸುವುದು ಒಬ್ಬ ಎಬಿಸಿಡಿಯಿಂದ. ಭಾರತಕ್ಕೆ ಹುಟ್ಟಿದಾಗಿನಿಂದ ಒಮ್ಮೆಯೂ ಬರದೇ ಈಗ ಬಂದ ಕೆಲವೇ ದಿನಗಳಲ್ಲಿ ಇಲ್ಲಿರುವ ಜನಗಳಿಗೆ ಅರ್ಥವಾಗದ ಈ ಸತ್ಯವನ್ನು ಈತ ಅರಿತುಕೊಂಡ ಅಂದರೆ ಅದನ್ನು ನಂಬುವುದು ಹೇಗೆ?

ರಾಕೇಶ್ ಬೆಳೆದದ್ದು ಈ ನೆರೆಹೊರೆಯಲ್ಲಿ. ತಾನು ಬೆಳೆದ ದೆಹಲಿ-೬ ಅನ್ನು ಎಲ್ಲರೂ ಅನುಭವಿಸುತ್ತಾರೆ, ಅಲ್ಲಿನ ಜಿಲೇಬಿಯ ಸವಿ ಉಣ್ಣುತಾರೆ, ರಾಮಲೀಲಾದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ ಅನುವ ಒಂದು ಸಾರ್ವತ್ರಿಕ ನಂಬಿಕೆಯಲ್ಲಿ ಆತ ಚಿತ್ರ ಮಾಡಿದ್ದಾನೆ, ನಿರ್ದೇಶಕ ತನ್ನನ್ನು ತನ್ನ ನಂಬಿಕೆಯನ್ನು ಒಬ್ಬ ಹೊರಗಿನವನ ಕಣ್ಣಲ್ಲಿ ಕಾಣಿಸುವ ಮೂಲಕ ತನ್ನ ನಂಬಿಕೆಗಳು ಸಾರ್ವತ್ರಿಕ ಅಷ್ಟೇ ಏಕೆ ಜಾಗತಿಕ ಅನ್ನುವುದನ್ನು ಪ್ರೂವ್ ಮಾಡಲು ಪ್ರಯತ್ನಿಸುತ್ತಾನೆ, ಆದರೆ, ಇದರಲ್ಲಿ ದಯನೀಯವಾಗಿ ಸೋತು, ಚಿತ್ರ ಇತ್ತ ಭಾರತೀಯರಿಗೂ, ಅತ್ತ ಎನ್ನಾರೈಗಳಿಗೂ ಮತ್ತೆ ಎಬಿಸಿಡಿಗಳಿಗೂ ದಕ್ಕದೇ ಹೋಗುತ್ತದೆ. ಬಿಡಿಬಿಡಿಯಾಗಿ ಸಂಗೀತ, ದೃಶ್ಯವೈಭವ, ನಟನೆ ಎಲ್ಲದರಲ್ಲಿಯೂ ಚೆನ್ನಾಗಿ ಕಾಣುವ ಈ ಚಿತ್ರ ಒಟ್ಟು ಏನನ್ನೂ ಮೆಸೇಜನ್ನೂ ಕೊಡದೇ ಹೋಗುತ್ತದೆ. ಕೊನೆಗೆ ಉಳಿಯುವುದು ‘ವಾಟ್ ಅ ವೇಸ್ಟ್’ ಎನ್ನುವ ಒಂದು ಭಾವನೆ.

ಅದೇ ಸ್ವದೇಸ್‌ನಲ್ಲಿನ ನಾಯಕನ ಬೇರುಗಳು ಬಲವಾದದ್ದು. ಕಾರಣಾಂತರಗಳಿಂದ ಊರೂರುಗಳಲ್ಲಿ, ದೇಶವಿದೇಶಗಳಲ್ಲಿ ಹಂಚಿಹೋಗಿರುವ ನಾವೆಲ್ಲರೂ ಬಿಟ್ಟುಬಂದ ನಮ್ಮ ಸಣ್ಣ ಹಳ್ಳಿಗಳನ್ನು, ತಾಲೂಕುಗಳನ್ನು, ಅಥವಾ ಸಣ್ಣ ಊರುಗಳನ್ನು ನೆನೆಸುತ್ತಲೇ ಇರುತ್ತೇವೆ. ಈಗ ಪ್ರಪಂಚ ಸಣ್ಣದಾಗಿದೆ, ಬೆಂಗಳೂರಿಗೂ ಅಮೆರಿಕಾಕ್ಕೂ ನಡುವೆ ಏನೂ ವ್ಯತ್ಯಾಸವೇ ಇಲ್ಲ ಎಂದು ಹೇಳುವವರಿಗೂ ಒಮ್ಮೆ ದೇಶ ಬಿಟ್ಟು ಹೊರಗೆ ಬಂದು ಜೀವಿಸತೊಡಗಿದಲ್ಲಿ ಈ ಖಂಡಾಂತರ ದ ವ್ಯತ್ಯಾಸದ ಅರಿವಿದ್ದೇ ಇದೆ. ಈ ಡಯಾಸ್ಪೊರವನ್ನು ಪ್ರತಿನಿತ್ಯ ಕಾಡುವ, ಕಾಯುವ ಭಾವನೆ ಈ ಮನೆಯ ನೆನಪು. ಎಷ್ಟೇ ಬಿಡಿಸಿಕೊಳ್ಳುತ್ತೇನೆ ಎಂದರೂ ಬಿಡದ ಈ ಮಾಯೆ ಎಲ್ಲರ ಹೃದಯದಲ್ಲೂ ಸಣ್ಣದಾಗಿ ಉರಿಯುತ್ತಲೇ ಇರುತ್ತದೆ. ಸ್ವಲ್ಪ ಭಾವುಕ ಅನ್ನುವಂತ ಮಾತಿರಬಹುದು, ಇದು- ಎಂಥ ಕಾರಣದಿಂದ ಊರನ್ನು ಬಿಟ್ಟುಬಂದವನೂ ಒಂದಲ್ಲ ಒಂದು ದಿನ ನಾನು ವಾಪಸ್ಸು ಊರಿಗೆ ವಾಪಸಾಗುತ್ತೇನೆ ಅನ್ನುವ ಭಾವನೆಯಲ್ಲಿ ಇದ್ದೇ ಇರುತ್ತಾನೆ. ಬಹಳ ಜನರಿಗೆ ಈ ವಾಪಸಾಗುವಿಕೆ ಕನಸೇ ಇರಬಹುದು. ಇದರಿಂದ ತಪ್ಪಿಸಿಕೊಳ್ಳಲು ಅವರು ಕಂಡುಕೊಳ್ಳುವ ಒಂದು ಉಪಾಯವೆಂದರೆ ಈ ಸಮಸ್ಯೆಯತ್ತ ಮುಖವನ್ನೇ ಮಾಡದಿರುವುದು. ಅಂದರೆ, ಊರುಬಿಟ್ಟವರು ವಾಪಸ್ಸು ಎಷ್ಟೋ ವರ್ಷಗಟ್ಟಲೇ ಊರಿಗೇ ಹೋಗದಿದ್ದರೆ, ಆಗ ಇರುವ ಊರಲ್ಲೇ ಬಿಳಲು ಬಿಟುಕೊಂಡು ಅಲ್ಲಿಯೇ ಸ್ವಸ್ಥವಾಗಿ ನೆಲಸಿಬಿಡಬಹುಸು ಅನ್ನುವ ವಿಶ್‌ಫುಲ್ ಆಲೋಚನೆಯೂ ಇರಬಹುದು. ಗೌರೀಕರನ ಸ್ವದೇಸ್‌ನಲ್ಲಿ ಆಗುವುದೂ ಹೀಗೆಯೇ. ಈ ನಾಯಕ ಸುಮಾರು ವರ್ಷಗಳಿಂದ ಭಾರತಕ್ಕೆ ಹೋಗದೇ ಇದ್ದರೂ ಈಗ ಯಾವುದೋ ಕಾರಣದಿಂದ ಹೋದಾಗ, ಅತನಿಗೆ ದೇಜಾವೂ ರೀತಿ ಅಲ್ಲಿನ ಸಮಸ್ಯೆಗಳೆಲ್ಲವೂ ತನ್ನ ಸಮಸ್ಯೆಗಳಾಗಿ ಕಾಣತೊಡಗುತ್ತದೆ. ನಾಸಾದ ವಿಜ್ಞಾನಿಯೊಬ್ಬ ಒಂದು ಸಣ್ಣ ಹಳ್ಳಿಗೆ ಕರೆಂಟು ಕೊಡಿಸಲು ಬಂದ ಅನ್ನುವ ತೀರ ಬಾಲಿಶ ರೂಪಕವೂ ನಿಜವೇನೋ ಅನ್ನಿಸುತ್ತದೆ. ಅದನ್ನು ನಾವ್ಯಾರೂ ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇವೆ. ಏಕೆಂದರೆ, ಅಶುತೋಶನ ಶಾರೂಕಿನಲ್ಲಿ ಇಂದಿನ ನಮ್ಮೆಲ್ಲರನ್ನೂ, ಊರು ಬಿಟ್ಟ ನಮ್ಮನ್ನು, ಬೇರುಗಳನ್ನು ಕಳಕೊಂಡ ನಮ್ಮನ್ನು, ಮುಖ್ಯವಾಗಿ ವಾಪಸ್ಸು ಹೋಗುವ ದೈರ್ಯವಿರುವ ಮತ್ತು ಭಾರತದಲ್ಲಿ ಮತ್ತೆ ಬದುಕಬಹುದಾದ ನಮ್ಮನ್ನು ನಾವು ಕಂಡು ಖುಷಿಪಡುತ್ತೇವೆ. ಹಾಗೆಯೇ, ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೇ ಹೊಡೆತ ತಿಂದು ಒದ್ದಾಡುವ ಅಭಿಷೇಕ ನಮ್ಮ ಮುಂದಿನ ಜನಾಂಗದ ಪ್ರತಿನಿಧಿಯಾಗಿ ಕಂಡು ನಿರಾಶೆಯನ್ನು ಹುಟ್ಟಿಸುತ್ತಾನೆ.

ರಾಕೇಶ್ ಓಮ್‌ಪ್ರಕಾಶ್ ಶರ್ಮಾನ ಸಮಸ್ಯೆಯ ಗ್ರಹೀತ ಮತ್ತು ಅದರ ಮಂಡನವನ್ನು ಕೊಂಚ ಗಮನಿಸಿದರೆ, ಈತ ಈ ಏಬಿಸಿಡಿಯ ಏಲಿಯನ್ ಭಾವನೆಯನ್ನು ಗ್ರಹಿಸಿಯೇ ಇಲ್ಲ ಅಂತ ಹೇಳುವುದು ತಪ್ಪಾಗಬಹುದೇನೋ.. ಎಬಿಸಿಡಿ ಅಂದರೆ ಬರೇ ಇಂಡಿಯಾಕ್ಕೆ ಬಂದರೆ ಕಕ್ಕಸ್ಸಿಗೆ ಹೋಗದೇ, ಬಾಟಲಿಯ ನೀರನ್ನು ಕುಡಿಯುವ ಹೊರರೂಪವನ್ನಷ್ಟೇ ಆತ ಚಿತ್ರಿಸಿಲ್ಲ. ಅಭಿಷೇಕನ ಈ ಅಂಡರ್‍ಪ್ಲೇಡ್ ನಟನೆಯಲ್ಲಿ ಅವನ ವ್ಯಕ್ತಿತ್ವ ಮತ್ತು ಅದರ ಹೊರಪದರದ ಸುಳಿಯಲ್ಲಿ ಮಾತ್ರ ಆತನಿಗೆ ದಕ್ಕುವ ಇಂಡಿಯಾದ ಚಿತ್ರಣವಿದೆ. ಚಿತ್ರದಲ್ಲಿ ಒಂದು ದೃಶ್ಯವಿದೆ. ಅಭಿಷೇಕ ತನ್ನ ಅಜ್ಜಿಗೆ ಸೀರಿಯಸ್ ಎಂದು ಸೈಕಲ್ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದಾರೆ. ಕರೆದಿದ್ದಾನೆ. ಆದರೆ ದೆಹಲಿಯ ಟ್ರಾಫಿಕ್ಕಿನಲ್ಲಿ ಈ ಸೈಕಲ್ ರಿಕ್ಷಾ ಸಿಕ್ಕಿದೆ. ರಸ್ತೆಯ ಮಧ್ಯೆ ಒಂದು ಹಸು ಕರುವನ್ನು ಹಾಕುತ್ತಿದೆ. ಈ ಪವಿತ್ರ ದೃಶ್ಯವನ್ನು ನೋಡಲು ಇಡೀ ಜನಸ್ತೋಮ ಕಿಕ್ಕಿರಿದು ನಿಂತಿದ್ದು ಟ್ರಾಫಿಕ್ ಜ್ಯಾಮ್ ಆಗಿದೆ. ಇದನ್ನು ಕಂದು ಸಿಟ್ಟಿಗೆದ್ದ ಈ ಅಭಿಷೇಕ ಬಚ್ಚನ್ ಹೋಗಿ ತನ್ನ ತುರ್ತನ್ನು ಎಲ್ಲರಿಗೂ ವಿವರಿಸಿ ಹೇಳಿ ಸಫಲವಾಗದೇ ಎಲ್ಲರ ಮೇಲೆ ಕೂಗಾಡಲು ತೊಡಗುತ್ತಾನೆ. ಆಗ ಇವನಿಗಾಶ್ಚರ್ಯವಾಗುವಂತೆ ಅವನಜ್ಜಿಯೇ ವಾಹನದಿಂದ ಎದ್ದುಬಂದು ಆ ಹಸುವನ್ನು ಪೂಜಿಸುತ್ತಾ ನಿಂತಿರುತ್ತಾಳೆ. ಈ ವಿಷಯ ವೈಪರೀತ್ಯಕ್ಕ ತರ್ಕಾತೀತವಾದ ಈ ಸಂಗತಿಗಳಿಗೆ ಒಂದು ವಿಸ್ಮಯದ ನಗುವನ್ನು ಬಿಟ್ಟು ಅಥವಾ ‘ಅಮೇಜಿಂಗ್ ಅಥವಾ ಹಾರಿಬಲ್’ ಎಂಬ ವಿವರಣೆಯೊಂದಿಗೆ ಮಾತ್ರ ಈ ಘಟನೆಯ ಜತೆಗಿನ ಅವನ ಪ್ರಸ್ತುತತೆ ಮುಕ್ತಾಯವಾಗುತ್ತದೆ.

ಈ ಜಾಗತೀಕರಣದ ಉಪೋತ್ಪನ್ನವಾದ ವಲಸೆಯಿಂದ ನಮಗೆ ದಕ್ಕಿರುವ ಎರಡು ಪಡಿಕಟ್ಟುಗಳಾದ ಈ ಮೊದಲ ಮತ್ತು ಎರಡನೇ ಜನಾಂಗದ ನಡುವಿನ ಅಂತರ ಅಮೇಜಿಂಗ್ ಮತ್ತು ಹಾರಿಬಲ್ ನಡುವಿನ ಅಂತರ ಮಾತ್ರ ಅಲ್ಲ. ಇಲ್ಲಿ ತಾನು ಬೆಳೆದ ಊರನ್ನು ನೆನೆಸಿಕೊಂಡು ಹಪಾಪಿಗೊಳ್ಳುವ ಜೀವಗಳಿದ್ದಾವೆ, ಮಕ್ಕಳನ್ನು ಬೇರೊಂದು ಸಂಸ್ಕೃತಿಗೆ ಬಿಟ್ಟುಕೊಡದೇ ತಮ್ಮದರಲ್ಲಿಯೂ ಉಳಿಸಿಕೊಳ್ಳದೇ ತಮಗಿಂತ ಹೆಚ್ಚು ಗೊಂದಲಪಡುತ್ತಿರುವ ಅವರನ್ನು ನೋಡುವ ಮೊದಲ ಜನಾಂಗವೂ ಇದೆ. ಇವು ಬೆಂಗಳೂರಿನ ಟ್ರಾಫಿಕ್ ಜಾಮನ್ನು ನೋಡಿ, ತಾನು ಇಪ್ಪತ್ತುವರ್ಷದ ಹಿಂದೆ ಓಡಿಯಾಡಿದ, ಕುಂಟೋಬಿಲ್ಲೆಯಾಡಿದ ರಸ್ತೆಯನ್ನು ಇಂದು ದಾಟಲು ಪರದಾಡುತ್ತವೆ. ಮತ್ತು ಈ ಪರದಾಟವನ್ನು ವಿಚಿತ್ರವಾಗಿ ನೋಡಿ, ‘ಅಮೇಜಿಂಗ್ ದಟ್ ಯು ಡು ದಿಸ್ ನೌ. ಯು ಡಿಡ್ ಗ್ರೋ ಅಪ್ ಹಿಯರ್’ ಅನ್ನುವ ಮಗಳ ವಿಸ್ಮಯಕ್ಕೆ ಅಥವಾ ಕುಚೇಷ್ಟೆಗೆ ಉತ್ತರ ಕೊಡಲಾಗದ ಸಂಕಟವಿದೆ.

ಬೇರೆ ದೇಶದಲ್ಲಿ ಹುಟ್ಟಿ ಬೆಳದವರು ಭಾರತಕ್ಕೆ ಬಂದು ನಮ್ಮ ಸಮಸ್ಯೆಗಳಿಗೆ ಪ್ರಸ್ತುತವಾಗಿಯೇ ಇಲ್ಲವೇ ಅನ್ನುವ ಪ್ರಶೆ ಬರಬಹುದು (ಸೋನಿಯಾ ಗಾಂಧಿಯಿಂದ ಹಿಡಿದು ಕಿಟೆಲ್ ಅಥವಾ ಹಿಗಿನ್ಸ್‌ರ ಉದಾಹರಣೆಯು ನಮಗೆ ಸಿಗಬಹುದು) ಇವರಿಗೆ ವಲಸೆ ಅಥವಾ ಇಂಡಿಯಾ ಕೇವಲ ಹೊಟ್ಟೆಪಾಡಿಗಿಂತ, ಮಧ್ಯಮವರ್ಗದ ಜೀವನಶೈಲಿಗಿಂತ ಹೆಚ್ಚಿನ ಕಾರಣಕ್ಕೆ ದಕ್ಕಿದೆ. ಆದ್ದರಿಂದಲೇ ಜಾಕೀರ್ ಹುಸೇನ್ ಅಥವಾ ಪಂಡಿತ್ ರವಿಶಂಕರ್‌ಗೆ ಕ್ಯಾಲೊಫೋರ್ನಿಯಾ ಆಗಲೀ ಬಾಂಬೆಯಾಗಲೀ ಬೇರೆಯಾಗುವುದಿಲ್ಲ. ನೋರಾ ಜೋನ್ಸ್ ಮತ್ತು ಅನೂಷ್ಕಾ ಇಬ್ಬರೂ ಬೇರೆ ಅನ್ನಿಸುವುದಿಲ್ಲ.

1 comment:

 1. Hi Guruprasad - It was pleasure meeting you at Chicago Comedy Night. I am sorry I couldn't say bye to you. The drama was boring :( so left as soon as it started.

  Please keep in touch, ravihanj@gmail.com

  BTW, blog title is beautiful!

  Best,
  Ravi Hanj.

  ReplyDelete