Friday, November 13, 2009

ಐ ಲವ್ ಯು, ಮ್ಯಾನ್

ಕೆಲವು ದಿನಗಳ ಹಿಂದೆ ವಿಮಾನದಲ್ಲಿ ಪ್ರಯಾಣಮಾಡುತ್ತಿದ್ದಾಗ ಒಂದು ಸಿನೆಮಾ ನೋಡಿದೆ. ಹೆಸರು ‘ಐ ಲವ್ ಯು, ಮ್ಯಾನ್.’ ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿಯೆಂದು ಕರೆಸಿಕೊಳ್ಳುವ ಈ ಸಿನೆಮಾದ ಪಾತ್ರಗಳು, ಅವುಗಳ ನಟನೆ ಮತ್ತು ಇಡೀ ಚಿತ್ರದ ಪ್ಲಾಟ್ ಕೂಡ ಬರೇ ಹಸಿಹಸಿಯಾಗಿತ್ತೆಂದು ಹೇಳಿ ಆ ಚಿತ್ರವನ್ನು ಬದಿಗಿಡಬಹುದಾಗಿತ್ತು. ಆದರೆ, ನಾಗರಿಕತೆಯ ಹೊಡೆತಕ್ಕೆ ಸಿಕ್ಕಿ ಗೊಂದಲದ ಗೂಡಾಗಿರುವ ನಮ್ಮ ಸಂಬಂಧಗಳ ಮತ್ತೊಂದು ಆಯಾಮವನ್ನು ಇಂಥ ಬಿ ಗ್ರೇಡ್ ಹಾಲಿವುಡ್ ಚಿತ್ರವೂ ಹೇಗೆ ಒರೆಗೆ ಹಚ್ಚುತ್ತದೆ ಎಂದು ಚಿತ್ರವನ್ನು ನೋಡಿದ ಮಲೆ ಕೊಂಚ ಸೋಜಿಗವಾಯಿತು.

ಮೊದಲೇ ಹೇಳಿದ ಹಾಗ ಇದೊಂದು ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿ. ವಿಮಾನದಲ್ಲಿ ಕಾಲಿರಿಕಿಸಿಕೊಂಡು ಕೂರಲಾಗದ ಕುರ್ಚಿಯಲ್ಲಿ ಕೂತು, ಐಫೋನಿನ ಸ್ಕ್ರೀನಿಗಿಂತಾ ಕೆಲವೊಂದು ಇಂಚು ದೊಡ್ದದಾಗಿರುವ ಮಾನಿಟರ‍್ನಲ್ಲಿ, ಇಯರ‍್ಫೋನುಗಳ ಮೂಲಕ ಯಾವ ಚಿತ್ರವನ್ನು ಆಸ್ವಾದಿಸುವುದಕ್ಕಂತೂ ಸಾಧ್ಯವಿಲ್ಲ. ನೋಡಬಹುದಷ್ಟೆ. ಹಾಗೆ ನೋಡಿದಾಗಲೂ ಈ ಚಿತ್ರ ಗಮನ ಸೆಳೆಯಲು ಕಾರಣವೇನು? ಗಮನಸೆಳೆಯುವುದು ಅನ್ನುವುದಕ್ಕಿಂತಾ ಹೀಗೆ ಒಂದು ಲೇಖನ ಬರೆಯುವುದಕ್ಕೆ ವಸ್ತುವನ್ನು ಕೊಡುವಂತಹ ಚಿತ್ರವಾ ಇದು ಎಂದು ಹಲವು ಅನುಮಾನಗಳ ನಡುವೆಯೇ ಬರೆಯುತ್ತಿದ್ದೇನೆ.

ಚಿತ್ರದ ಕತೆ ಬಹಳ ಸರಳ. ನಾಯಕ, ನಾಯಕಿಗೆ ಮದುವೆ ನಿಶ್ಚಯವಾಗಿರುತ್ತದೆ. ನಾಯಕಿ ತನ್ನ ಸಂತೋಷವನ್ನು ತನ್ನ ಗೆಳತಿಯರೊಡನೆ ಹೇಳಿಕೊಂಡು ತಿರುಗುತ್ತಾಳೆ ಮದುವೆಯಲ್ಲಿ, ಬ್ರೈಡ್ಸ್‌ಮೈಡ್ ಯಾರು, ರಿಂಗ್ ಬೇರರ್ ಯಾರು, ಮತ್ತಿನ್ಯಾರ‍್ಯಾರು ಇನ್ನೇನು ಕೆಲಸ ಮಾಡಬೇಕೆಂದು ಎಲ್ಲ ವಹಿಸಿಕೊಟ್ಟು ಸಂಭ್ರಮಿಸುತ್ತಾ ಇರುತ್ತಾಳೆ.

ಆದರೆ ಸಮಸ್ಯೆಯಿರುವುದು ನಮ್ಮ ನಾಯಕನಿಗೆ. ಆತನಿಗೆ ಒಬ್ಬನೇ ಒಬ್ಬನೂ ಸ್ನೇಹಿತನಿಲ್ಲ. ತನ್ನ ಮದುವೆಯ ಸಂಭ್ರಮವನ್ನು ಹೇಳಿಕೊಂಡು ಖುಷಿಪಡಲು ಯಾರೂ ಜತೆಗಿಲ್ಲ. ಕಡೆಯಪಕ್ಷ ತನ್ನ ಮದುವೆಗೆ ಬೆಸ್ಟ್‌ಮ್ಯಾನ್ ಆಗಲೂ ಆತನಿಗೆ ಯಾರೂ ಗೆಳೆಯರಿಲ್ಲ. ಆದರೆ ತನಗೆ ಯಾರೂ ಸ್ನೇಹಿತರೇ ಇಲ್ಲವೆಂಬ ಅರಿವು ಕೂಡ ಆಗುವುದು ಅವನ ಮದುವೆ ಗೊತ್ತಾದ ಮೇಲೆಯೇ. ಮದುವೆಯ ದಿನದ ಮುಂಚೆ ಯಾರಾದರೂ ಒಬ್ಬನನ್ನಾದರೂ ಗಂಡಸನ್ನು ಸ್ನೇಹಿತನನ್ನಾಗಿ ಜತೆಮಾಡಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದು ತನ್ನ ತಮ್ಮನ ಸಹಾಯ ಪಡಕೊಂಡು ತನಗೆ ಸ್ನೇಹಿತನೊಬ್ಬನನ್ನು ಹುಡುಕುತ್ತಾ ಹೋಗುತ್ತಾನೆ.

ಹೀಗೆ ಒಬ್ಬ ಗಂಡು ಇನ್ನೊಬ್ಬ ಗಂಡನ್ನು ಬರೇ ಸ್ನೇಹಿತನಾಗಿ ಪಡೆಯುವುದು ಈ ನಾಗರಿಕ ಸಮಾಜದಲ್ಲಿ ಎಷ್ಟು ಕಷ್ಟ ಎಂಬುದೇ ಚಿತ್ರದ ಕಥೆ. ನಾಯಕಿಯೂ ನಾಯಕನಿಗೆ ಹೋಗಿ ಒಬ್ಬ ಗಂಡು ಗೆಳೆಯನನ್ನು ಗುರುತುಮಾಡಿಕೊ ಎಂದು ದುಂಬಾಲುಬಿದ್ದನಂತರ ಮುಂದೆ ನಡೆಯುವುದೆಲ್ಲ ಪ್ರಹಸನಗಳು. ಮೊದಲು ಈತ ಯಾರೋ ಒಬ್ಬನನ್ನು ಭೇಟಿಮಾಡಿ ಆತನನ್ನು ರಾತ್ರಿ ಡಿನ್ನರಿಗೆಂದು ಕರಕೊಂಡು ಹೋಗುತ್ತಾನೆ. ವೈನು, ಡೈನಿನ ನಂತರ ಆ ಹೊಸ ಗೆಳೆಯ ಈ ತಮ್ಮ ಗೆಳೆತನಕ್ಕೆ ಬೇರೇನೋ ಆಯಾಮವನ್ನೇ ಹುಡುಕುತ್ತಾನೆ. ಗೆಳೆಯ ಪ್ರಿಯತಮನಾಗುತ್ತಾನೆ. ಮ್ಯಾನ್ ಡೇಟ್ ಅಲ್ಲಿಗೆ ಮುರಿದುಬೀಳುತ್ತದೆ.

ನಂತರ ಕೆಲವೊಂದು ಕ್ಲೀಶೆ ಎನ್ನುವ ನಿಯಮಗಳನ್ನು ಹಾಕಿಕೊಂಡು ತನ್ನ ಮೇಲೆ ಯಾವ ಲೈಂಗಿಕಾಕರ್ಷಣೆಯಿಲ್ಲದೇ ಬರೇ ಗೆಳೆಯನಾಗಿ ಉಳಿಯಬಲ್ಲ ಗೆಳೆಯನನ್ನು ಮಾತ್ರ ಹುಡುಕಲೆಂದು ಆತ ಪ್ರಯತ್ನ ಮಾಡುತ್ತಾನೆ. ಹಾಗೆ ಹುಡಕೊಂಡ ಗೆಳೆಯನನ್ನು ‘ಐ ಲವ್ ಯು, ಮ್ಯಾನ್’ ಎಂದು ಸಂಭೋದಿಸುವ ಧೈರ್ಯ ಮಾಡುತ್ತಾನೆ.

* * *

ನನ್ನ ಕೆಲಸದಲ್ಲಿ ನಾನು ಹೆಣ್ಣು ಗಂಡಿನ ಬೇಧವಿಲ್ಲದೇ ವೈದ್ಯಕೀಯ ಕಾರಣಕ್ಕಾಗಿ ರೋಗಿಗಳನ್ನು ಮೇಲಿಂದ ಕೆಳಗೆ ಬಟ್ಟೆ ಬಿಚ್ಚಿಸಿ ಪರೀಕ್ಷೆ ಮಾಡುತ್ತೇವೆ. ಹತ್ತುವರ್ಷಗಳ ಹಿಂದೆ ನಾನು ರೆಸಿಡೆನ್ಸಿ ಮಾಡುತ್ತಿರಬೇಕಾದರೆ ‘ಒಬ್ಬ ಗಂಡು ಡಾಕ್ಟರು ಹೆಣ್ಣು ರೋಗಿಯನ್ನು ಪರೀಕ್ಷೆ ಮಾಡಬೇಕಾದರೆ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ಹೆಂಗಸು ಇರುವುದು ಆ ಹೆಣ್ಣು ರೋಗಿಗೆ ಸಾಂತ್ವನವನ್ನು ಕೊಡುತ್ತದೆ ಮತ್ತೆ ಪರೀಕ್ಷೆ ಮಾಡುವ ಗಂಡು ವೈದ್ಯನಿಗೂ ಕೊಂಚ ಮುಜುಗರ ಕಡಿಮೆಯಾಗುತ್ತದೆ’ ಎಂಬ ನಂಬಿಕೆಯಿಂದ ಹೆಣ್ಣು ರೋಗಿಗಳಿಗೆ ಹೆಣ್ಣು ನರ್ಸನ್ನು ಶ್ಯಾಪರೋನ್ ಆಗಿ ಬಳಸುತ್ತಿದ್ದೆವು. ಇದು ಒಂದು ರೀತಿಯ ವೈದ್ಯಕೀಯ ರಂಗದಲ್ಲಿ ಇನ್ನೂ ನಡೆದುಬಂದಿರುವ ಸಂಪ್ರದಾಯ. ಆದರೆ, ಈಗ ಕಳೆದ ಒಂದೈದು ವರ್ಷಗಳಲ್ಲಿ ನನಗೆ ಗೊತ್ತಿಲ್ಲದೇ ಆಗಿರುವ ಬೆಳವಣಿಗೆಯೆಂದರೆ ಗಂಡಸರು ರೋಗಿಗಳಿಗೂ ನಾನು ಹರ್ನಿಯಾ ಪರೀಕ್ಷೆ ಮಾಡಬೇಕಾದರೆ ಅಥವಾ ಯಾವುದೇ ಗುಪ್ತಾಂಗಗಳ ಪರೀಕ್ಷೆ ಮಾಡಬೇಕಾದರೂ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದೇ ಇರುತ್ತದೆ. ಈ ವ್ಯಕ್ತಿ ಗಂಡಸೂ ಆಗಿರಬಹುದು, ಹೆಂಗಸೂ ಆಗಿರಬಹುದು. ಸಂಕೋಚ ಅಥವಾ ಖಾಸಗೀತನಗಳು ಲಿಂಗ ಪರಿಧಿಗಳನ್ನು ಮೀರಿದೆ. ಗಂಡು ಗಂಡನ್ನು ಪರೀಕ್ಷೆ ಮಾಡಲಿ, ಹೆಣ್ಣು ಹೆಣ್ಣನ್ನು ಪರೀಕ್ಷೆ ಮಾಡಲಿ ಯಾವಾಗ ಪ್ರೈವೆಸಿಯ ಲಗ್ಗೆ ಮೀರುತ್ತದೋ ಅಲ್ಲಿ ಇನ್ನೊಬ್ಬ ವ್ಯಕ್ತಿ- ರೋಗಿಗೂ ವೈದ್ಯನಿಗೂ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ.

ಆದರೆ, ಇಲ್ಲಿ ನಾವು ನಮಗೆ ಸಾಕ್ಷಿಗಳನ್ನು, ಶ್ಯಾಪರೋನ್‌ಗಳನ್ನು ಬಳಸುವುದು ಯಾರು ಯಾರಿಗೂ ಸಾಂತ್ವನ ಕೊಡಬೇಕಾಗುವ ಕಾರಣಕ್ಕಲ್ಲ ಎನ್ನುವುದು ವಿಷಾದದ ಸಂಗತಿ. ಇಲ್ಲಿ ಈ ವ್ಯಕ್ತಿ ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೀನಾ ಇಲ್ಲವಾ ಎನ್ನುವುದನು ಗಮನಿಸಲು ಮಾತ್ರ ಕಾವಲು ನಿಂತಿರುತ್ತಾನೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ನಾನು ಪರೀಕ್ಷೆ ಮಾಡುವ ರೋಗಿ ನಾಳೆ ಈ ವೈದ್ಯ ಅನವಶ್ಯಕವಾಗಿ ನನ್ನ ಮೇಲೆ ಕೈಯಾಡಿಸಿದ ಎಂದು ಕೋರ್ಟಿನಲ್ಲಿ ಕೇಸುಹಾಕಿದಲ್ಲಿ ‘ಅದು ಹಾಗಲ್ಲ. ಈ ವೈದ್ಯ ಮಾಡಿದ್ದು ಎಲ್ಲವೂ ವೈದ್ಯಕೀಯ ಪರೀಕ್ಷೆಯ ಪರಿಮಿತಿಯಿಒಳಗೇ ಇತ್ತು ಎಂದು ನನ್ನನ್ನು ಕೆಲವೊಂದು ಪುಂಡ ರೋಗಿಗಳಿಂದ ಕಾಪಾಡಲು ಮಾತ್ರ ನಿಂತಿರುತ್ತಾರೆ. ಇದು ವೈಸವರ್ಸಾ ಕೂಡ. ಕೆಲ ಪುಂಡ ಡಾಕ್ಟರುಗಳೂ ಇರುತ್ತಾರಲ್ಲವಾ?

ಹೆಂಗಸರು ‘ನನಗೆ ಲೇಡಿ ಡಾಕ್ಟರು ಬೇಕು’ ಎಂದು ಕೇಳಿದರೆ, ಆ ವಾಕ್ಯ ಅರ್ಥವನ್ನೇ ಕಳಕೊಂಡಿದೆ.

* * *

ಈ ಬಾರಿಯ ನೀನಾಸಮ್ ಶಿಬಿರದಲ್ಲಿ ತಿರುಗಾಟದ ನಾಟಕ ‘ವೆನಿಸಿನ ವ್ಯಾಪಾರ’ ದಲ್ಲಿ ಮುಖ್ಯಪಾತ್ರಗಳಾದ ಆಂಟೋನಿಯೋ ಮತ್ತು ಬೆಸಿನಿಯೋ ಮಧ್ಯೆ ಸಲಿಂಗ ಸಂಬಂಧ ಇರಬಹುದು ಎಂಬ ಒಂದು ಅಂಶವನ್ನು ನಾಟಕದಲ್ಲಿ ಸೂಚ್ಯವಾಗಿ ತೋರಿಸಿದ್ದು ಮಾರನೆಯ ದಿನ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶೇಕ್ಸ್‌ಪಿಯರನ ಕಾಲದಲ್ಲಿ ಸಲಿಂಗ ಸ್ನೇಹ, ಕಾಮ ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಶೇಕ್ಸ್‌ಪಿಯರಿನ ನಾಟಕದ ಪಠ್ಯವನ್ನು ಈ ರೀತಿ ಅರ್ಥೈಸುವುದು,ವಿರೂಪಗೊಳಿಸುವುದು ತಪ್ಪು ಎಂಬ ಅಭಿಪ್ರಾಯವೂ ಅಲ್ಲಿ ಬಂತು. ಇದೇ ನಾಟಕವನ್ನು ಆಧರಿಸಿ ೨೦೦೬ರಲ್ಲಿ ಬಂದ ‘ಮರ್ಚಂಟ್ ಆಫ್ ವೆನಿಸ್’ ಚಲನಚಿತ್ರದಲ್ಲಿಯೂ ಈ ಸಲಿಂಗಿ ಸಂಬಂಧದ ಎಳೆ ಇನ್ನೂ ಗಾಢವಾಗಿಯೇ ಇದೆ. (ಶೇಕ್ಸ್ಪಿಯರನ ಕಾಲದಲ್ಲಿ ಪ್ಲೆಟೊನಿಕ್ ಗಂಡು, ಗಂಡಿನ ಸಂಬಂಧ (ಲೈಂಗಿಕಾರ್ಷಣೆಯಿಲ್ಲದ) ಬೇರೆಲ್ಲ ಸಂಬಂಧಗಳಿಗಿಂತ ಪವಿತ್ರವಾದದ್ದು. ಪಾತ್ರಗಳ ಹೊರಗಡೆಯ ನಡುವಳಿಕೆಯಿಂದ ನಾವು ಏನೇನೋ ಅರ್ಥೈಸಲಿಕ್ಕೆ ಹೋಗಬಾರದು ಎಂದು ಆ ಚಿತ್ರದ ನಿರ್ದೇಶಕ ಹೇಳಿಕೊಂಡಿದ್ದ.) ಆ ವಿಷಯ ಇರಲಿ, ನೀನಾಸಮ್‌ನ ಆ ಚರ್ಚೆಯಲ್ಲಿ ಭಾಗವಹಿಸಿದ್ದ ಹಿರಿಯರೊಬ್ಬರು ‘ಈ ಪಾತ್ರಗಳ ಸಲಿಂಗ ಸಂಬಂಧದ ಬಗ್ಗೆ ಅನವಶ್ಯಕವಾದ ಚರ್ಚೆ ಆಗುತ್ತಾ ಇದೆ ಎಂದು ಕಾಣಿಸುತ್ತದೆ. ನಾವೆಲ್ಲ ಹಳಿಯಲ್ಲಿ ಬೆಳೆದವರು. ನಮ್ಮ ಗೆಳೆಯರನ್ನು ಒಬ್ಬರನ್ನೊಬ್ಬರು ಮುಟ್ಟುತ್ತಿದ್ದೆವು, ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಕೈ ಹಾಕುತ್ತಿದ್ದೆವು. ಅಷ್ಟಕ್ಕೆಲ್ಲ ಸಲಿಂಗ ಸಂಬಂಧ ಎಂದು ತಿಳಕೊಂಡರೆ ಹೇಗೆ?’ ಎಂದು ಹೇಳಿದರು.

ಆ ಹಿರಿಯರ ಮಾತಿಗೆ ಗೌರವಯುತವಾಗಿಯೇ ಅಸಮ್ಮತಿಯನ್ನು ಸೂಚಿಸುವ ಕಾಲವಿದು.

ನಾಗರಿಕತೆಯ ಪರಿಣಾಮವೋ, ಅಥವಾ ಇನ್ನೇನೋ ‘ಕೇವಲ ಸ್ನೇಹ’ ಎನ್ನುವುದು ಬರೇ ಇದ್ದು ತೋರಿಸಲಾಗದು, ಅದನ್ನು ಪುರಾವೆ ಸಮೇತ ತೋರಿಸಬೇಕಾದ ಸಂದರ್ಭ ನಮ್ಮ ಮುಂದೆ ಇದೆ. ಕಾಲೇಜಿನಲ್ಲಿದ್ದಾಗ ಒಂದೇ ಮಂಚದಲ್ಲಿ ಮಲಗಿಯೂ ಉಳಕೊಳ್ಳುತ್ತಿದ್ದ ‘ಕೇವಲ ಸ್ನೇಹ’ ಈಗ ಅಷ್ಟು ಸುಭವಾಗಿ ದೊರೆಯುವುದಿಲ್ಲ. ಎಲ್ಲ ಸಂಬಂಧಗಳಿಗೂ ಲೈಂಗಿಕ ಲಗತ್ತಿತ್ತು ಈ ನಾಗರೀಕತೆ ಅಪ್ಪಟ ಗೆಳೆತನವನ್ನು ಹಾಳುಮಾಡಿಹಾಕಿದೆ. ಅದಕ್ಕೆ ಲಿಂಗ ಪರಿಧಿಯಿಲ್ಲ ಎನ್ನುವುದನ್ನು ನಾವು ಜಾಗರೂಕರಾಗಿ ಗಮನಿಸಬೇಕಾಗಿದೆ. ನಾಲ್ವರು ಒಂದೇ ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಬಹುದೇನೋ, ಇಬ್ಬರು ಮಾತ್ರ ಒಂದು ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಲಾಗದ (ಒಂದೇ ಲಿಂಗದ ಅಥವಾ ವಿರುದ್ಧಲಿಂಗದ) ಕಾಲ ಬಂದಿದೆ.

* * *

ಕೆಲವು ವರ್ಷಗಳ ಹಿಂದೆ ನನ್ನ ಜತೆಗೆ ಕೆಲಸ ಮಾಡುತ್ತಿದ್ದ ನನ್ನ ಜತೆಕೆಲಸಗಾರರೊಬ್ಬರು ಕೆಲಸ ಬಿಟ್ಟು ಬೇರೊಂದು ಕೆಲಸಕ್ಕೆ ಹೋದಾಗ ನಾನು ಅವರನ್ನು ಡ್ರಿಂಕಿಗೆಂದು ಆಹ್ವಾನಿಸಿದ್ದೆ. ಬಹಳ ಮುಜುಗರದಿಂದ ಬರಲು ಒಪ್ಪಿಕೊಂಡಿದ್ದರು. ಬರೇ ಜೋಡಿಗಳಿದ್ದ ರೆಸ್ಟುರೆಂಟಿನಲ್ಲಿ ನಾವಿಬ್ಬರೇ ಗಂಡಸರು. ಎರಡು ಡ್ರಿಂಕು, ಊಟವಾದ ನಂತರ ಮನೆಗೆ ಹೋಗುವ ಮೊದಲು ಆತ ‘ತಪ್ಪು ತಿಳಿಯಬೇಡ ಗುರು, this pretty much amounts to date.’ ಎಂದು ಹೇಳಿ ಹೋಗಿದ್ದರು.

ಪೇಯ, ಊಟ ಮತ್ತು ಮೂವಿ ಯೆಂದರೆ ಅದೊಂದು ಡೇಟ್ ಎನ್ನುವ ಕ್ಲೀಶೆಯ ಕಲ್ಪನೆಯನ್ನು ನಾಗರಿಕತೆ ನಮಗೆ ಕಲಿಸಿದೆ. ಪಕ್ಕಪಕ್ಕದಲ್ಲಿ ದರ್ಶಿನಿಯಲ್ಲಿ ಕೂತು ತಿಂಡಿ ತಿನ್ನುವ ಕಾಲ ಹೊರಟು ಹೋಗುತ್ತಾ ಇದೆ. ಮೂರು ವರ್ಷದ ಗಂಡು ಮಗು ಬೊಂಬೆಯ ಜತೆ ಆಟ ಆಡಿದರೆ, ಪಿಂಕುಪಿಂಕಾದ ಬಟ್ಟೆ ಹಾಕಿದರೆ ಹೌಹಾರಿಹೋಗುವ ಅಮ್ಮಂದಿರುಗಳನ್ನು ಈ ಕಾಲ ತಯ್ಯಾರು ಮಾಡುತ್ತಲಿದೆ. ‘ಬ್ರೇವ್ ಎನಫ್ ಟು ವೇರ್ ಪಿಂಕ್’ ಎನ್ನುವ ಟಿ ಶರ್ಟುಗಳು ಲೈಂಗಿಕ ಲಿಬರೇಷನ್ನಿನ ಚಿಹ್ನೆಗಳಾಗಿ ಕಾಣುತ್ತಲಿವೆ.

ಇಲ್ಲಿ ಹೆಂಗಸರೇ ಇನ್ನೂ ಕೊಂಚ ಅದೃಷ್ಟವಂತರು. ಮದುವೆ ಮನೆಯಲ್ಲಿ ಜತೆಗೆ ಕೂತು ಮೆಹಂದಿ ಮಾಡಿಕೊಳ್ಳಬಹುದು, ಪರಸ್ಪರರ ಉಗುರಿಗೆ ಬಣ್ನ ಹಚ್ಚಿಕೊಳ್ಳಬಹುದು, ಲಿಪ್‌ಸ್ಟಿಕ್ ಶೇಡನ್ನು ಬದಲಿಸಿಕೊಳ್ಳಬದು, ಕಿಟ್ಟಿಪಾರ್ಟಿಗಳಲ್ಲಿ ಮಾರ್ಟಿನಿಯ ಗ್ಲಾಸುಗಳನ್ನು ಲಿಪ್‌ಸ್ಟಿಕ್ ಗುರುತನ್ನು ಒರೆಸಿ ಬದಲಿಸಿಕೊಳ್ಳಬಹುದು. ಈಗಲೂ ಅವೆಲ್ಲ ಸಲ್ಲುತ್ತದೆ. ಹೆಣ್ಣು ನನ್ನ ಗರ್ಲ್‌ಫ್ರೆಂಡಿನ ಜತೆ ಶಾಪಿಂಗ್ ಹೋಗಿದ್ದೆ ಎಂದು ಹೇಳಿದರೆ ಅಲ್ಲಿ ಇನ್ನೂ ಆಕೆ ಸ್ನೇಹಿತಳಿದ್ದರೂ ಇರಬಹುದು ಎಂಬ ಅನುಮಾನ ಕೊಂಚವಾದರೂ ಉಳಕೊಳ್ಳುತ್ತದೆ, ಆದರೆ ಒಬ್ಬ ಗಂಡು ಯಾರನ್ನಾದರೂ ತೋರಿಸಿ ‘ಈತ ನನ್ನ ಬಾಯ್‌ಫ್ರೆಂಡ್ ‘ ಎಂದಲ್ಲಿ ಅಲ್ಲಿ ಲೈಂಗಿಕವಲ್ಲದ ಬೇರೆ ಯಾವ ಸಂಬಂಧಕ್ಕೂ ಆಸ್ಪದವೇ ಕೊಡದೇ ಇರುವ ಕಾಲ ಬಂದಿದೆ.

ನಾಲ್ಕು ಜನ ಗಂಡಸರು ಸೇರಿದ ತಕ್ಷಣ ಬಿಯರು ಕುಡಕೊಂಡು, ಇಲ್ಲವೇ ಎಲೆಯಡಿಕೆ ಹಾಕಿಕೊಂಡು ಡರ್ರಂತ ತೇಗಿಯೋ ಹೂಸಿಯೋ ಇರದೆ, ಇಸ್ಪೀಟಾಟದ ಕಾರ್ಡುಗಳನ್ನು ತೆಗೆಯದಿದ್ದರೆ ಅದು ಗಂಡು ಪ್ರಪಂಚದ ಬಾಂಡಿಂಗೇ ಅಲ್ಲ. ಹಾಗಿರುವಾಗ ಯಾರೇ ಒಬ್ಬ ತನ್ನ ಇನ್ನೊಬ್ಬ ಗೆಳೆಯನನ್ನು ಕಂಡು ‘ಐ ಲವ್ ಯು, ಮ್ಯಾನ್’ ಎಂದು ಯಾವ ಲೈಂಗಿಕ ಲೇಬಲ್ಲಿಲ್ಲದೇ ಹೇಳುವುದು ನಿಜಕ್ಕೂ ಧಾಡಸೀ ಕೆಲಸವೇ,

3 comments:

  1. ನಮಸ್ತೆ,

    ಇಲ್ಲಿ ನೀವು ಹೇಳಿರುವುದು(ಆತಂಕ ಪಟ್ಟಿರುವುದು?) ಅತಿರಂಜಿತವೆನಿಸುತ್ತಿದೆ. ನಮ್ಮ ಸಾಮಾನ್ಯ ಸಮಾಜದಲ್ಲಿ ಇವ್ಯಾವುದೂ ಈ ಮಟ್ಟಿಗೆ ಇಲ್ಲ. ಯಾವುದೋ ಒಂದು ವರ್ಗದ ಕೆಲವು ಜನರನ್ನಿಟ್ಟುಕೊಂಡು, ಪತ್ರಿಕೆಗಳ/ಮಾಧ್ಯಮಗಳು ಅನಗತ್ಯ ಪ್ರಾಮುಖ್ಯತೆ ಕೊಡುತ್ತಿರುವಂತೆ ಹೀಗೆಲ್ಲಾ ಆತಂಕ ಪಡುವಂತಹ ಪರಿಸ್ಥಿತಿ ಭಾರತದ ಸಮಾಜದಲ್ಲಿ ಇಲ್ಲ. ಎಲ್ಲ ಸಂಬಂಧಗಳಿಗೂ ಲೈಂಗಿಕ ಲಗತ್ತಿತ್ತು ಈ ನಾಗರೀಕತೆ ಅಪ್ಪಟ ಗೆಳೆತನವನ್ನು ಹಾಳುಮಾಡಿಹಾಕಿದೆ ಎನ್ನುವುದು ಅತಿಶಯೋಕ್ತಿ. ತೀರಾ ವೈಯಕ್ತಿಕ ಮಟ್ಟದಲ್ಲಿ ಬಿಟ್ಟು ಬೇರೆ ಇನ್ಯಾವುದೆ ರೀತಿಯ ಗೆಳೆತನದಲ್ಲಿ ಯಾವುದೇ ಮುಜುಗರವಿಲ್ಲದೇ ಇಲ್ಲಿ ಒಂದೇ ಲಿಂಗದವರು ಸೇರುತ್ತಾರೆ. ಯಾವ ಅನುಮಾನವಿಲ್ಲ, ಆತಂಕವಿಲ್ಲ. ಅದೆಲ್ಲಾ ಹಾಸ್ಯದ ವಿಷಯವಷ್ಟೆ.

    ಪೇಯ, ಊಟ ಮತ್ತು ಮೂವಿ ಯೆಂದರೆ ಅದೊಂದು ಡೇಟ್ ಎನ್ನುವ ಕ್ಲೀಶೆಯ ಕಲ್ಪನೆಯನ್ನು ನಾಗರಿಕತೆ ನಮಗೆ ಕಲಿಸಿದೆ. ಪಕ್ಕಪಕ್ಕದಲ್ಲಿ ದರ್ಶಿನಿಯಲ್ಲಿ ಕೂತು ತಿಂಡಿ ತಿನ್ನುವ ಕಾಲ ಹೊರಟು ಹೋಗುತ್ತಾ ಇದೆ.

    ಇದೆಲ್ಲಾ ಎಲ್ಲಿ, ಯಾವದೇಶದಲ್ಲಿ, ಯಾವ ಸಮಾಜದಲ್ಲಿ ನೆಡೆಯುತ್ತಿದೆ ಎಂದು ಹೇಳುತ್ತಿದ್ದೀರೋ ತಿಳಿಯುತ್ತಿಲ್ಲ. ನೀವು ಏನೇ ಸಮರ್ಥನೆ ಕೊಟ್ಟರೂ ಈ ವಿಷಯ ಸಭ್ಯ ಸಮಾಜದಲ್ಲಿ ಖಡಾಖಂಡಿತವಾಗಿ ನಿರಾಕರಣೆಗೊಳಗಾಗುತ್ತದೆ.

    ReplyDelete
  2. ನಾಲ್ವರು ಕೂಡ ಒಂದೇ ಕೋಣೆಯಲ್ಲಿ ಲೈಂಗಿಕ ಭಯವಿಲ್ಲದೇ ಈ ಪಾಶ್ಚಾತ್ಯ ದೇಶಗಳಲ್ಲಿ ಮಲಗುವುದೂ ದುಸ್ಸಾಹಸವೇ! ಆದರೆ ಭಾರತದಲ್ಲಿ ಪರಿಸ್ಥಿತಿ ಇಲ್ಲಿಯಷ್ಟು ಹದೆಗೆಟ್ಟಿಲ್ಲ ಎಂದು ಮಾತ್ರ ಪ್ರಮಾಣ ಮಾಡಿ ಹೇಳಬಲ್ಲೆ. ಆದರೆ ಭಾರತದ ಇಂಗ್ಲೀಷ್ ಮೀದಿಯಾಗಳು, ಹಿಂದಿ ಚಿತ್ರಗಳು ಇಲ್ಲದ ರೋಮ್ಯಾಟಿಸಂ ಅನ್ನು ಬಿತ್ತಿ ಭಾರತೀಯರ ತಲೆಯನ್ನೂ ಪಾಶ್ಚಾತ್ಯ್ರರ ತಲೆಯಾಗಿಸಲು ಹೊರಟಿದ್ದಾರೆ, ಲೈಂಗಿಕತೆಯಲ್ಲೂ. ಇದರಿಂದ ಬಿಡುಗಡೆ ಇಲ್ಲ ಬಿಡಿ. "ಶೊಲೆ" ಚಿತ್ರದ ಜಯ್-ವೀರೂ ಗೆಳತನಕ್ಕೂ "ಗೇ"ಯ ಲೈಂಗಿಕತೆಯಾಗಿಸಿ ಬರೆದ ಲೇಖನವನ್ನು ಇತ್ತೀಚೆ ಭಾರತದ ಒಂದು ಆಂಗ್ಲ ಮೀಡಿಯಾದಲ್ಲಿ ಓದಿದೆ.

    ReplyDelete
  3. ನಮಸ್ತೆ
    ಪ್ರತಿಕ್ರಿಯೆಗೆ, ಲೇಖನ ತಪ್ಪಾಗಿ ಅರ್ಥೈಸಿಕೊಂಡಿದೆಯೇನೋ ಎಂಬ ಭಯದಿಂದ ಮಾತ್ರ ಪ್ರತಿಕ್ರಿಯಿಸುತ್ತಿದ್ದೇನೆ.
    ನಾನು ಹೇಳುತ್ತಿರುವುದು "ನಾಗರಿಕ ಸಮಾಜದಲ್ಲಿ" ಎಂದು. ಈ "ನಾಗರಿಕತೆ" ಯ ವಿವರಣೆ ದೇಶ-ಕಾಲದ ಮಟ್ಟಿಗೆ ಬದಲಾದರೂ ಅತ್ಯಂತ ಕ್ಲೀಶಾತ್ಮಕವಾಗಿ ನೋಡಿದರೂ ನಗರೀಕರಣವೂ ನಾಗರಿಕತೆಯೂ ಒಂದಕ್ಕೊಂದು ಥಳುಕು ಹಾಕಿಕೊಂಡೇ ಇವೆ. ಆದ್ದರಿಂದ ಹೆಚ್ಚು ಹೆಚ್ಚು ನಗರೀಕೃತವಾಗುತ್ತಿರುವ ನಮ್ಮ ಸಮಾಜದಲ್ಲಿ ಈ ಬದಲಾವಣೆ ಕಾಣುತ್ತಲಿದೆ. ಅದನ್ನು ನಾವು ಗಮನಿಸುತ್ತಿಲ್ಲವಾದ್ದರಿಂದ "ಒಂದು ವರ್ಗ"ಕ್ಕೆ ಮಾತ್ರ ಸೀಮಿತವಾಗಿರುವ ವಿಷಯವಿದು ಎಂದು ಅವಜ್ಞೆಗೊಳಗಾಗುತ್ತದೆ. ಹಾಗೆಯೇ ಇದು "ಹಾಸ್ಯದ" ವಿಷಯವೂ ಆಗುತ್ತದೆ.
    ಸಭ್ಯ ಸಮಾಜ ಇದನ್ನು ನಿರಾಕರಿಸುತ್ತದೆ ಎಂಬುದು ಸಭ್ಯತೆಯ ಡೆಫಿನಿಶನ್ ನ ಮೇಲೆ ನಿಂತಿದೆ.
    ಇದು ಭಾರತೀಯತೆ ಅಥವಾ ಪಾಶ್ಚಾತ್ಯೀಕರಣದ ನಡುವಿನ ವ್ಯತ್ಯಾಸವಲ್ಲ, ಮನುಷ್ಯನ ಮೂಲ ಇನ್‍ಸ್ಟಿಂಕ್ಟ್ ಎಂದೇ ನನ್ನ ಭಾವನೆ.
    "ಅಪ್ಪಟ ಗೆಳೆತನವನ್ನು ಹಾಳುಮಾಡಿದೆ" ಎಂಬ ನನ್ನ ಪದಪ್ರಯೋಗ ಈ ಗೊಂದಲಕ್ಕೆ ಕಾರಣವಾಗಿರಬಹುದು. ಹಾಳುಮಾಡಿದೆ ಎನ್ನುವುದು ಪ್ರಾಯಶಃ ಸಮಂಜಸವಲ್ಲ. ಬದಲಾಯಿಸಿದೆ ಎಂದಿದ್ದರೆ ಸರಿಯೇನೋ.
    ನಾನು ಏನನ್ನೂ ಅತಿರಂಜಿಸುತ್ತಿಲ್ಲ. ಇದು ಆತಂಕದ ವಿಷಯವೂ ಅಲ್ಲ. ವಸ್ತುಸ್ಠಿತಿ ಎಂದೇ ನನ್ನ ಭಾವನೆ.
    ಗುರು

    ReplyDelete