Wednesday, October 21, 2009

ಕೆಂಡಸಂಪಿಗೆಯ ಮರಣ

ಅಂತರ್ಜಾಲದ ಕನ್ನಡದ ತಾಣ ಕೆಂಡಸಂಪಿಗೆ ಅಕಾಲಿಕ ಮರಣವನ್ನಪ್ಪಿದೆ. ಇದ್ದಕ್ಕಿದ್ದಂತೆ ಈ ತಿಂಗಳ ಮೊದಲ ದಿನದಂದು ‘ಇನ್ನುಮುಂದೆ ಕೆಂಡಸಂಪಿಗೆ ಯ ಪ್ರಕಟಣೆಯನ್ನು ನಿಲ್ಲಿಸಿದ್ದೇವೆ, ಇದುವರೆವಿಗೂ ನಮ್ಮೊಂದಿಗೆ ಸಹಕರಿಸಿದ ಎಲ್ಲ ಬರಹಗಾರರಿಗೆ ಮತ್ತು ಓದುಗವರ್ಗಕ್ಕೆ ಧನ್ಯವಾದಗಳು’ ಎಂಬ ಒಂದು ಸಾಲಿನ ಓಬಿಚುಯರಿಯೊಂದಿಗೆ ಕೆಂಡಸಂಪಿಗೆ ತನ್ನ ಅಂತರ್ಜಾಲ ತಾಣವನ್ನು ಶಾಶ್ವತವಾಗಿ ಮುಚ್ಚಿದೆ. ಇನ್ನುಮುಂದೆ ದಿನಂಪ್ರತಿ ಈ ತಾಣವನ್ನು ನೋಡಹೋಗುತ್ತಿದ್ದ ಜಾಲತಾಣಿಗರಿಗೆಲ್ಲ ಏನೋ ಕಳಕೊಂಡ ಇರುಸುಮುರುಸು.

ಕನ್ನಡದ ಅಂತರ್ಜಾಲ ಓದುಗರಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದ್ದು ಕೆಂಡಸಂಪಿಗೆ. ವಿನ್ಯಾಸ, ವಸ್ತು, ಭಾಷೆ ಹಾಗೂ ಲಯದ ತಾಜಾತನದಿಂದ ಎಲ್ಲರ ಗಮನ ಸೆಳೆದಿತ್ತು. ಅನೇಕ ಹೊಸಬರಹಗಾರರನ್ನು ಹುಟ್ಟುಹಾಕಿದ್ದಷ್ಟೇ ಅಲ್ಲದೇ, ಅಂತರ್ಜಾಲವೆಂದರೆ ಮೂಗುಮುರಿಯುತ್ತಿದ್ದ ಅನೇಕ ಹಳೇಮಂದಿಯ ಕೈಯಲ್ಲಿಯೂ ಕೀಲಿಮಣೆ ಕೊಟ್ಟು ಕೆಲಸ ಮಾಡಿಸಿತು. ಎರಡು ವರ್ಷಗಳ ಕಾಲ ದಿನ ಬೆಳಗಾದರೆ ಕೆಂಡಸಂಪಿಗೆಯನ್ನು ಎದುರು ನೋಡುತ್ತಿದ್ದವರು ಎಷ್ಟೋ ಮಂದಿ. ಆದರೆ, ಈಗ ಏಕಾಏಕಿ ಮುಚ್ಚಿನಿಂತು ತನ್ನನ್ನು ನಂಬಿದ ಓದುಗ ಬಳಗಕ್ಕೆ ಬಹುದೊಡ್ಡ ನಿರಾಶೆಯನ್ನುಂಟುಮಾಡಿ ಹೊರಟುಹೋಗಿದೆ, ಕೆಂಡಸಂಪಿಗೆ.

ಅಂತರ್ಜಾಲದ ಪತ್ರಿಕೆಗಳ ವ್ಯಾಕರಣವನ್ನು ಚೆನ್ನಾಗಿ ಅರ್ಥಮಾಡಿಕೊಂಡೇ ತನ್ನ ಕೆಲಸವನ್ನು ಮಾಡುತ್ತಿತ್ತಂದಿತ್ತು, ಕೆಂಡಸಂಪಿಗೆಯ ಬಳಗ. ಒಂದಿಷ್ಟು ಸುದ್ದಿ, ಒಂದಷ್ಟು ಕತೆ, ಸುಂದರವಾದ ಕವನಗಳು, ಆತ್ಮಚರಿತ್ರೆ, ಪ್ರವಾಸಕಥಾನಕಗಳು, ಧಾರಾವಾಹಿ, ಕೊಂಚ ವಿಚಾರ, ಅಲ್ಲಲ್ಲಿ ಟಾಂಗುಗೊಡಿಸುವ ಬರಹಗಳು, ಬೇಕಿದ್ದಾಗ ಸುದ್ದಿಗೆ ಗುದ್ದುಕೊಡುವ ವಿವಾದಗಳು, ಚರ್ಚೆ, ಎಲ್ಲವೂ ಹದವಾಗಿ ಬೆರೆತಿದ್ದವು. (ಕೆಲವೊಮ್ಮೆ ಚರ್ಚೆ ಅತಿರೇಕವೆನಿಸಿದರೂ ಅಂತರ್ಜಾಲದ ಜಾಲತಾಣದ ಉಳಿಗಾವಿಗೆ ಇಂಥ ಚರ್ಚೆಗಳು ಅನಿವಾರ್ಯವೆಂಬುದನ್ನು ಇದರ ಸಂಪಾದಕವರ್ಗದವರು ಅರಿvದ್ದರೆಂದೇ ಈ ಮಾತನ್ನು ಹೇಳಬೇಕಾಗಿದೆ)

ಆದರೆ, ಈ ಕೆಂಡಸಂಪಿಗೆ ನಿಂತದ್ದೇಕೆ?

ಅಂತರ್ಜಾಲದಲ್ಲಿ ಕನ್ನಡದ ಇತಿಹಾಸ ಬಹಳ ಹಳೆಯದೇನಲ್ಲ. ನನಗೆ ಗೊತ್ತಿದ್ದಹಾಗೆ ಸಮಾಚಾರಪತ್ರಿಕೆಗಳಲ್ಲಿ ‘ಸಂಜೆವಾಣಿ’ ಮೊಟ್ಟಮೊದಲಬಾರಿಗೆ ತನ್ನ ಅಸ್ಮಿತೆಯನ್ನು ಅಂತರ್ಜಾಲದಲ್ಲಿ ಸ್ಥಾಪಿಸಿದ್ದು ಪ್ರಾಯಶಃ ೧೯೯೫-೧೯೯೬ರ ಸುಮಾರಿಗೆ. ಆ ಸಂದರ್ಭದಲ್ಲಿ ಅಲೊಂದು ಇಲ್ಲೊಂದು ಜಿಯೋಸಿಟಿ ಮತ್ತಿತರ ವೆಬ್‌ಸೈಟುಗಳಿಂದ ಕೊಂಚವೇ ಕೊಂಚ ಎರವಲು ಪಡಕೊಂಡು ನಡೆಸುತ್ತಿದ್ದ ಕೆಲವು ತಾಣಗಳು ತಮ್ಮ ಕೆಲಸವನ್ನು ಕುಂಟಿಕೊಂಡು ನಡೆಸುತ್ತಲೇನೋ ಇದ್ದವು. ನಂತರ ಅನೇಕ ದಿನಪತ್ರಿಕೆಗಳು ತಮ್ಮ ಮುದ್ರಿತ ಪತ್ರಿಕೆಯ ಅಂತರ್ಜಾಲ ಆವೃತ್ತಿಯನ್ನು ಜಾಲದಲ್ಲಿ ಪ್ರಕಟಿಸಿ ತಮ್ಮ ಓದುಗವರ್ಗವನ್ನು ಹಿಗ್ಗಿಸಿಕೊಳ್ಳುತ್ತಿದ್ದವು. ನಂತರ ಬಂದ ಕನ್ನಡಸಾಹಿತ್ಯ.ಕಾಮ್, ವಿಶ್ವಕನ್ನಡ.ಕಾಮ್, ಮುಂತಾದವುಗಳೂ ಆರಂಭದಲ್ಲಿ ವಿಶ್ವಾಸವನ್ನು ಮೂಡಿಸಿದ್ದಾದರೂ ನಂತರ ನೆಲಕಚ್ಚಿದ್ದಾವೆ. ಕನ್ನಡಸಾಹಿತ್ಯ.ಕಾಮ್ ಈಗ ಅಂತರ್ಜಾಲದ ವ್ಯಾಪ್ತಿಯ ಹೊರಗೆ ತನ್ನ ಕೆಲಸವನ್ನು ಮಾಡಿಕೊಂಡು ಬರುತ್ತಿದೆಯಾದರೂ ಅಂತರ್ಜಾಲದಲ್ಲಿ ಕನ್ನಡದ ಬೆಳವಣಿಗೆಗೆ ಲೈಬ್ರರಿಯ ಅಥವಾ ಪ್ರಮುಖ ಲೇಖಕರ ಬರಹಗಳ ಆರ್ಕೈವ್ ಆಗುವುದನ್ನು ಬಿಟ್ಟರೆ ಹೆಚ್ಚಿನ ಕೆಲಸವನ್ನು ಮಾಡಲು ಇಲ್ಲಿ ಸಾಧ್ಯವಾಗಿಲ್ಲ. ನಮ್ಮೆಲ್ಲರನ್ನೂ ಬೆಳೆಸಿದ ದಟ್ಸ್‌ಕನ್ನಡ.ಕಾಮ್‌ನ ಆದ್ಯತೆಗಳು ಈಗ ಸಂಪೂರ್ಣವಾಗಿ ಬೇರೆಯಾಗಿದೆ.

ಒಂದು ಪತ್ರಿಕೆ ನೆಲಕಚ್ಚುವುದರ ವಿಷಯದಲ್ಲಿ ಪತ್ರಿಕೆಯ ಆಡಳಿತವರ್ಗಕ್ಕೆ ಒಂದು ಹೊಣೆಗಾರಿಕೆ ಇರಬೇಕಲ್ಲವೇ? ಇಲ್ಲಿ ಹೊಣೆಗಾರಿಕೆಯೆಂದರೆ ಬರೇ ಆರ್ಥಿಕವಾದದ್ದಷ್ಟೇ ಅಲ್ಲ, ಸಾಂಸ್ಕೃತಿಕ ಜವಾಬ್ದಾರಿ ಎಷ್ಟಿರಬೇಕು? ಬರೇ ಬಾಟಮ್‌ಲೈನ್ ನೋಡುತ್ತಾ ಈ ಪತ್ರಿಕೆಯಿಂದ ನಮಗೆ ಲಾಭವಿಲ್ಲವೆಂದು ಇಡೀ ಪತ್ರಿಕೆಯನ್ನು ನಿಲ್ಲಿಸಿದರೆ ಅದನ್ನು ಓದುವ ವರ್ಗದ ಆಶಯಗಳನ್ನು ಬಲಿಕೊಟ್ಟಂತೆ. ಆದ್ದರಿಂದ ಒಂದು ಪತ್ರಿಕೆಯನ್ನು ಕಟ್ಟಿ ಬೆಳೆಸುತ್ತಿರುವಾಗ ಅದರ ವ್ಯವಸ್ಥಾಪಕ ಮಂಡಳಿ ಅದರ ಸೃಜನಶೀಲ ಸಂಪನ್ಮೂಲಗಳನ್ನು ಬೆಳೆಸುವುದರ ಜತೆಗೆ ಆ ಪತ್ರಿಕೆ ತನ್ನನ್ನು ತಾನು ಪೋಷಿಸಿಕೊಂಡು ಹೇಗೆ ಬೆಳೆಯಬಲ್ಲದೆನ್ನುವುದಕ್ಕೆ ರೂಪುರೇಷೆಗಳನ್ನು ಹಾಕಿಕೊಳ್ಳುವುದು ಬಹಳ ಅವಶ್ಯ. ಇಲ್ಲದಿದ್ದರೆ ಓದುಗವರ್ಗವನ್ನು ಬೆಳೆಸುವುದರ ಖುಷಿಯ ಜತೆಗೆ ಅದನ್ನು ಸಾಯಿಸುವುದರ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ.

ಕೆಂಡಸಂಪಿಗೆಯಂತ ಪತ್ರಿಕೆ ಶುರುವಾಗಿ ಬೆಳೆದಾಗ ಅದೊಂದು ಪತ್ರಿಕೆಯಾಗಿ ಉಳಿಯುವುದಿಲ್ಲ. ಒಂದು ಸಮುದಾಯದ ಆಶಯವಾಗುತ್ತದೆ. ಮುಖವಾಣಿಯಾಗುತ್ತದೆ. ತಾನೇ ಒಂದು ಸಮುದಾಯವಾಗುತ್ತದೆ. ತಾನೂ ಬೆಳೆಯುವುದರ ಜತೆಗೆ ತನ್ನನ್ನು ಬೆಳೆಸುತ್ತಿರುವ ಸಮುದಾಯವನ್ನೂ ಬೆಳೆಸುತ್ತದೆ.

ಹಾಗೆಯೇ ತಾನು ಸಾಯುವುದರ ಜತೆಗೆ ಈ ಸಮುದಾಯವನ್ನೂ ಅದರ ಆಶಯವನ್ನೂ ಸಾಯಿಸುತ್ತದೆ.

ಕನ್ನಡದ ಬಹಳಷ್ಟು ಲಿಟ್ ಮ್ಯಾಗಜೀನುಗಳು ಒಂದು ನಿರ್ದಿಷ್ಟ ಸಮುದಾಯದ ಮುಖವಾಣಿಯೆನ್ನುವುದು ಒಂದು ರೀತಿ ನಿಜ. ಎಲ್ಲವೂ ಸಮಷ್ಟಿಯ ಸಂಸ್ಕೃತಿ, ಸಾಹಿತ್ಯದ ಪೋಷಣೆಯ ಹೆಸರಲ್ಲೇ ಪ್ರಾರಂಭವಾದರೂ ಎಲ್ಲೋ ಒಂದು ಕಡೆ ಅವು ತಮ್ಮದೇ ಆದ ಒಂದು ಓದುಗವರ್ಗವನ್ನು ಸೃಷ್ಟಿಸಿಕೊಳ್ಳುತ್ತವೆ. ಹಾಗೆ ಸೃಷ್ಟಿಮಾಡಿದ ಓದುಗ ವರ್ಗಕ್ಕೆ ತಾನೇ ಬೆಳೆಸಿದ ಸಂವೇದನೆಯಿಂದಲೋ ಅಥವಾ ಅದೇ ಸಂವೇದನೆಯಿರುವ ಓದುಗರು ಮಾತ್ರ ಆ ಪತ್ರಿಕೆಗಳನ್ನು ಓದುತಾರೋ, ಓದುಗರೂ, ಪತ್ರಿಕೆಯೂ ಪರಸ್ಪರರ ಆಶಯಕ್ಕೆ ಧೋರಣೆಗೆ ಪರಸ್ಪರ ಪೂರಕವಾಗಿ ಕೆಲಸ ಮಾಡಿರುತ್ತಾರೆ. ಆ ಆಶಯಗಳು, ನಂಬಿಕೆಗಳು ತನ್ಮೂಲಕ ಒಂದು ಚಳುವಳಿಯೇನಾದರೂ ಸೃಷ್ಟಿಯಾಗಿದ್ದಲ್ಲಿ ಅವುಗಳೆಲ್ಲದರ ನಿರ್ಗಮನದ ಜತೆಗೆ ಆ ಪತ್ರಿಕೆಯ ಆಯಸ್ಸೂ ಮುಗಿದಿರುತ್ತದೆ. ನಂತರ ಪತ್ರಿಕೆ ಇರಬೇಕೆಂದು ಯಾರೂ ಕೇಳುವುದೂ ಇಲ್ಲ. ಮುಚ್ಚಿಹೋಯಿತೆಂದು ಯಾರೂ ದುಃಖಿಸುವುದೂ ಇಲ್ಲ. ಇದೊಂದು ಪತ್ರಿಕೆಯ ಸ್ವಾಭಾವಿಕ ಮರಣ. ಅಂದರೆ ಪ್ರತೀ ಪತ್ರಿಕೆಗೂ ಒಂದು ನಿರ್ದಿಷ್ಟ ಆಶಯವಿದೆ, ಆಯಸ್ಸಿದೆ ಎಂದು ನಂಬಿದ ಸಂಪನ್ಮೂಲ ವ್ಯಕ್ತಿಗಳಿರುವವರೆಗೆ ಅದರ ಸಾವೂ ಕೂಡ ಅರ್ಥಪೂರ್ಣವಾಗುತ್ತದೆ. ಅದರ ಬದುಕು ಮಾತ್ರ ಮುಖ್ಯವಾಗುತ್ತದೆ.

ಹಾಗೆಯೇ ಕೆಂಡಸಂಪಿಗೆಯೂ ಒಂದು ಸಮುದಾಯದ ಮುಖವಾಹಿನಿಯಾಗಿತ್ತೆಂಬುದನ್ನು ನಾವು ಗಮನದಲ್ಲಿದಬೇಕು. ಈ ಸಮುದಾಯ ಬಹುಸಂಖ್ಯಾತವೇನಲ್ಲ. ಬದಲಾದ ಜೀವನ ಶೈಲಿ, ಮೌಲ್ಯಗಳು, ಭೌಗೋಳಿಕ ರೇಖೆಯನ್ನು ಮೀರಿದ ಡಯಾಸ್ಪೊರಕ್ಕೆ ಹಾಗೆಯೇ ಎಲ್ಲದಕ್ಕೂ ಸಾಮಾನ್ಯವಾದ ನಮ್ಮ ಅವಸರ, ಧಾವಂತಕ್ಕೆ ಒಂದು ಅರ್ಥಪೂರ್ಣತೆಯನ್ನು ತಂದಿತ್ತು. ಹಾಗೆ ನೋಡಿದರೆ ಈ ಅಂತರ್ಜಾಲವೆನ್ನುವುದೇ ಒಂದು ಅವಸರದ ಓದಿಗೆ ಪ್ರಶಸ್ತವಾದ ತಾಣ. ಇಲ್ಲಿ ನಾವು ಅಂತರ್ಜಾಲವನ್ನು ಸರ್ಪ್ ಮಾಡುತ್ತೇವೆ, ಬ್ಲಾಗುಗಳನ್ನು ಸ್ಕ್ರೋಲಿಸುತ್ತೇವೆ. ಒಂದು ತಾಣದಿಂದ ಇನ್ನೊಂದು ತಾಣಕ್ಕೆ ಜಿಗಿಯುತ್ತೇವೆ. ನಮ್ಮ ಅಟೆಂಶನ್ ಸ್ಪಾನ್ ಕೇವಲ ಸೆಕೆಂಡುಗಳಲ್ಲಿ ಅಳತೆಮಾಡಲ್ಪಡುವ ಈ ಲೋಕದಲ್ಲಿ ಪ್ರತಿದಿನ ಬೆಳಿಗ್ಗೆ ಹದಿನೈದು ನಿಮಿಷವಾದರೂ ನಮ್ಮನ್ನು ಕೆಂಡಸಂಪಿಗೆ.ಕಾಮ್ ಎಂಬ ತಾಣ ತನ್ನ ಮುಂದೆ ಕೂರಿಸಿಕೊಳ್ಳಲು ಸಫಲವಾಗಿತ್ತು. ಕೆಲವೊಮ್ಮೆ ಸ್ಕ್ರೋಲಿಸುತ್ತಾ, ಮಗದೊಮ್ಮೆ ಓದುತ್ತಾ, ಆಗಾಗ ಕಮೆಂಟಿಸುತ್ತಾ, ಬಹಳಬಾರಿ ಬರೇ ಕಮೆಂಟುಗಳನ್ನು ಮಾತ್ರ ಓದುತ್ತಾ, ಕಮೆಂಟಿಗೊಂದು ಕಮೆಂಟಿಸುತ್ತಾ, ಒಮ್ಮೆ ಓದಲಿಕ್ಕಾಗದನ್ನು ಮತ್ತೆ ಮಧ್ಯಾಹ್ನವೋ, ಸಂಜೆಯೋ ಓದಲಿಕ್ಕೆ ಮತ್ತೆ ಮತ್ತೆ ತನ್ನ ಬಳಿ ಬರುವಂತೆ ಮಾಡಲೂ ಸಫಲವಾಗಿತ್ತು.

ಆದರೆ, ಸೃಜನಶೀಲತೆಯೆನ್ನುವುದು ಬರೇ ಬೌದ್ಧಿಕತೆಯ ಮಟ್ಟದಲ್ಲಿ ನಿಂತುಬಿಟ್ಟರೆ ಆಗುವುದೇ ಹೀಗೆ. ವ್ಯವಹಾರದಲ್ಲಿ ಕ್ರಿಯೇಟಿವ್ ಆಗದಿದ್ದಲ್ಲಿ ಇಂಥ ಅಕಾಲ ಮರಣಗಳು ಬರಬಹುದೇನೋ? ಈ ಅಂತರ್ಜಾಲದ ಜಾಲತಾಣವನ್ನು ನಿರ್ವಹಿಸಿಕೊಂಡು ಹೋಗುವುದರ ಲೊಜಿಸ್ಟಿಕ್ಸ್ ನನಗೆ ಗೊತ್ತಿಲ್ಲ, ಈಗಂತೂ ಕಾಸಿಗೊಂದು ಕೊಸರಿಗೊಂದು ಬ್ಲಾಗುಗಳು ಇರುವ ಈ ಕಾಲದಲ್ಲಿ ಇಂಥ ಒಂದು ಸೈಟು ತನ್ನ ಉಳಿಕೆಯನ್ನು ಸೃಜನಶೀಲವಾಗಿ ಗ್ರಹಿಸಲಿಲ್ಲವಲ್ಲ ಎನ್ನುವ ವ್ಯಥೆಯಿದೆ. ಇದಕ್ಕೆ ಬೇಕಾದ ಜಾಹಿರಾತುಗಳು ಸಿಗಲಿಲ್ಲವೇ? ಹೂಡಿಕೆದಾರರಿಲಿಲ್ಲವೇ? ಎಲ್ಲವೂ ವೇದ್ಯ. ಆದರೆ, ಯಾಕಾಗಲಿಲ್ಲ.

ಅಂತರ್ಜಾಲವೆನ್ನುವುದೇ ಒಂದು ಮಿಥ್ಯಾಪ್ರಪಂಚ. ಇಲ್ಲಿ ಎಲ್ಲವೂ ವರ್ಚುಯಲ್. ಪತ್ರಿಕೆ ಪ್ರಿಂಟಾಗಿದ್ದರೆ ಎಷ್ಟು ಖರ್ಛಾಗಿದೆ ಎನ್ನುವ ಲೆಕ್ಕವಾದರೂ ಸಿಗುತ್ತದೆ. ಆದರೆ, ಬರೇ ಹಿಟ್‌ಗಳನ್ನು ನಂಬಿಕೊಂಡು ಇದರ ಮೇಲೆ ಬಂಡವಾಳ ಹೂಡುವ ಜಾಹಿರಾತು ಹೂಡುವ ಮಂದಿ ಸಿಗಲಿಲ್ಲವೇ?

ಬಲ್ಲವರು ಯಾರೋ ಹೇಳಿದ್ದರು. ನಾವು ಯಾವುದೇ ವೆಬ್‌ತಾಣವನ್ನು ಕ್ಲಿಕ್ಕಿಸಿದರೆ ಸಾಕು ಅದನ್ನು ನಾವು ಓದುತ್ತಿದ್ದೇವೆ ಎಂತಲೇ ಅರ್ಥ. ಇದಕ್ಕೆ ಹತ್ತಿರವಾದ ಹೋಲಿಕೆಯೆಂದರೆ ಅಂಗಡಿಯಿಂದ ಒಂದು ಪುಸ್ತಕವನ್ನು ಖರೀದಿಸಿ ತಂದರೆ ಆಯಿತು, ಅದನ್ನು ಓದಿದಂತೆಯೇ. ಪುಸ್ತಕವ್ಯಾಪಾರಿಗೆ ನೀವು ಆ ಪುಸ್ತಕವನ್ನು ಓದುತ್ತೀರೋ ಇಲ್ಲವೋ ಅನ್ನುವುದು ಮುಖ್ಯವಾಗುವುದೇ ಇಲ್ಲ.

ನಾನೂಹಿಸಿಕೊಳ್ಳುವ ಕಾರಣ ಬಹಳ ಸರಳ. ತಪ್ಪಿರಲೂ ಬಹುದು. ಸಂಪನ್ಮೂಲದ ಕೊರತೆಯಿದ್ದರೂ ಇರಬಹುದು. ಕನ್ನಡದ ಬಹಳಷ್ಟು ಈ ತರದ ಸೃಜನಶೀಲ ಚಟುವಟಿಕೆಗಳು ನಡೆಯುವುದು ಲಾಭವನ್ನು ನೆಚ್ಚಿಕೊಂಡು ಅಲ್ಲ ಎನ್ನುವುದು ಪ್ರಾಯಶಃ ನಮಗೆಲ್ಲ ಗೊತ್ತಿರುವ ವಿಷಯ. ಎಲ್ಲಿಯವರೆಗೆ ಲಾಭ, ನಷ್ಟಗಳ ಮೊಬಲಗು ಸರಿಹೋಗುತ್ತದೆಯೋ ಅಲ್ಲಿಯವರೆಗೆ ಇದು ನಡಕೊಂಡು ಹೋಗಬೇಕು. ಆದರೆ ಈ ಲಾಭ ನಷ್ಟಗಳ ಲೆಕ್ಕಚುಕ್ಕಿಗ ಬೇರೆ ವ್ಯಾಪಾರಿಯಾಗಿ, ಈ ಸೃಜನಶೀಲ ಸಂಪನ್ಮೂಲ ಬೇರೆಯಾಗಿದ್ದಲಿ, ಈ ಎರಡೂ ಶಕ್ತಿಗಳು ಸಮಾನಾಂತರವಾಗಿ ಕೆಲಸ ಮಾಡಲು ಶುರುಮಾಡುತ್ತವೆ. ಕ್ರಿಯೇಟಿವ್ ಟೀಮ್ ಹೆಚ್ಚು ಕ್ರಿಯಾಶೀಲವಾದಲ್ಲಿ ತಾಣದ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಓದುಗವರ್ಗದಲ್ಲಿ ಮೂಡಿಸಲಾಗುತ್ತದೆ. ಆದರೆ, ಯಾವ ಕಾರಣದಿಂದ ಈ ಪತ್ರಿಕೆ ನಿಂತರೂ ಕೆಲವಾದರೂ ಓದುಗರಿಗೆ ‘ಛೆ ಐ ವಾಸ್ ಟೇಕನ್ ಫಾರ್ ಅ ರೈಡ್’ ಎಂಬ ಭಾವನೆ ಬಂದಲ್ಲಿ ಅನುಮಾನವೇನಿಲ್ಲ. ಜಯಂತ ಕಾಯ್ಕಿಣಿಯವರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಭಾವನಾ’ ನಿಂತಾಗ ಕೂಡ ಪತ್ರಿಕೆಯ ಓನರ‍್ಮಂದಿಯ ಬಾಟಮ್‌ಲೈನಿನ ಲೆಕ್ಕವನ್ನು ನೋಡಿ ಓದುಗರಿಗೆ ಮೈ ಉರಿದುಹೋಗಿತ್ತು.

ಆದರೆ, ಯಾರ ಮೈ ಉರಿದುಹೋಗುತ್ತದೆ ಅನ್ನುವುದೂ ಇಲ್ಲಿ ಮುಖ್ಯ. ಬಹಳಷ್ಟು ಮಂದಿ ಕನ್ನಡದ ಓದುಗರು, ಬರಹಗಾರರು ತಂಪಾಡಿಗೆ ತಾವು ಓದಿ ಖುಷಿಪಡುವವರು. ಪತ್ರಿಕೆ ಇದ್ದರೆ ಓದುತ್ತೇವೆ, ಇಲ್ಲವಾ ಇನ್ನೇನಾದರೂ ಓದುತ್ತೇವೆ ಎನ್ನುವ ಧೋರಣೆ ಯಿರುವವರು, ಮತ್ತು ಒಂದು ಪತ್ರಿಕೆ ಬರೆ ಪತ್ರಿಕೆಯಾಗಿ ಉಳಿದು ನಿಮ್ಮ ಜೀವನಶೈಲಿಯ ಯಾವ ಭಾಗವೂ ಆಗದೇ ಇದ್ದಲ್ಲಿ ಅದರ ಉಳಿವು ಅಸಾಧ್ಯ.
ಇದರ ಪರಿಣಾಮವೆಂದರೆ, ಇನ್ನಾರಾದಾರೂ ಕನ್ನಡದಲ್ಲಿ ಒಂದು ವೆಬ್ ಪತ್ರಿಕೆಯನ್ನು ಶುರುಮಾಡುತ್ತೀವೆಂದರೆ ಅದನ್ನು ಹೇಗೆ ನಂಬುವುದು ಎನ್ನುವ ಪರಿಸ್ಥಿತಿ ಬಂದು ಹೋಗಿದೆ. ಅಸಂಖ್ಯಾತ ಬ್ಲಾಗುಗಳು ಮತ್ತು ಮುದ್ರಣದಲ್ಲಿ ಲಭ್ಯವಿರುವ ಪತ್ರಿಕೆಗಳ ಅಂತರ್ಜಾಲ ಆವೃತ್ತಿಗಳನ್ನು ಬಿಟ್ಟರೆ ಅಂತರ್ಜಾಲ ಕ್ಕೇ ಎಕ್ಸ್‌ಕ್ಲ್ಯೂಸಿವ್ ಆದ ಒಂದು ಸದಭಿರುಚಿಯ ಪತ್ರಿಕೆ ಕನ್ನಡದಲ್ಲಿ ಬರುತ್ತದೆ ಎಂದರೆ ಅದರ ಬಗ್ಗೆ ನಂಬುವುದೇ ಅಸಾಧ್ಯವೇನೋ ಎಂಬ ಪರಿಸ್ಥಿತಿ ಬಂದು ಕೂತಿದೆ.

ಇದಕ್ಕೆ ಬರೇ ಕೆಂಡಸಂಪಿಗೆಯ ವ್ಯವಸ್ಠಾಪಕರನ್ನು ದೂರಿದಲ್ಲಿ ತಪ್ಪಾಗುತ್ತದೆ. ಇದರಲ್ಲಿ ನಮ್ಮ ಪಾಲೂ ಇದೆ ಎಂದು ನಂಬಿದಲ್ಲಿ ಮಾತ್ರ ಏನಾದರೂ ಅರ್ಥಪೂರ್ಣವಾಗಿ ಮಾಡಬಹುದು.

2 comments:

  1. ಕೆಂಡಸಂಪಿಗೆಯ ಹಠಾತ್ ಮರಣ ನೋವಿನ ಸಂಗತಿ. ಆದರೆ ಕೆಂಡಸಂಪಿಗೆಯ ಮರಣದಲ್ಲಿ ಓದುಗರ ಪಾತ್ರವಿದೆ ಅನ್ನುವುದರಲ್ಲಿ ನನಗೆ ಸಹಮತವಿಲ್ಲ. ಓದುಗರ ಮುಂದೆ ಸಂಪಾದಕರು ಯಾವತ್ತೂ ತಮ್ಮ ಬವಣೆಯನ್ನು ತೆರೆದಿಟ್ಟಿದ್ದೇ ಇಲ್ಲ. ನಮಗೆ ಯಾವ ಆಯ್ಕೆಯನ್ನೂ ನೀಡದೆ ತಾವೇ ನಿರ್ಧಾರ ತೆಗೆದುಕೊಂಡು ಈಗ ಓದುಗರೆಡೆ ಕೈ ತೋರುವುದು ಏಕೆ? ಆಕಸ್ಮಾತ್ ಚಂದಾ ನೀಡಬೇಕಿದ್ದಲ್ಲಿ ಆಸಕ್ತ ಓದುಗರು ಖಂಡಿತಾ ಸಹಕರಿಸುತ್ತಿದ್ದೆವು.

    ReplyDelete
  2. ಮೇಲಿನ ಪ್ರತಿಕ್ರಿಯೆಗೆ ನನ್ನ ಸಹಮತ.

    ReplyDelete