Saturday, July 25, 2009

ನಾನು, ನೀನು ಮತ್ತು ಅವನು

ಒಂದು ಕತೆ ಬರೆಯುವಾಗ ಅಥವಾ ಓದುವಾಗ, ಕತೆ ಹೇಳುತ್ತಿರುವ ನಿರೂಪಕ ಯಾರು ಎಂಬುದು ನಮಗೆ ಮುಖ್ಯವಾಗುತ್ತದಾ? ಮುಖ್ಯವಾಗಬೇಕಾ? ನಾನು ಹೇಳುತ್ತಿರುವುದು ಕತೆಗಾರನಲ್ಲ, ಬರೆಯುವ ವ್ಯಕ್ತಿಯ ಹೆಸರೂ ಅಲ್ಲ. ಕತೆಯನ್ನು ಉತ್ತಮ ಅಥವಾ ಪ್ರಥಮ ಪುರುಷದಲ್ಲಿ ಬರೆಯುವುದು, ಬರೆದುದನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯ?

ಬಹಳ ಕತೆ, ಕಾದಂಬರಿಗಳು ಪ್ರಥಮ ಅಥವಾ ಉತ್ತಮ ಪುರುಷದಲ್ಲಿ ಬರೆಯಲ್ಪಟ್ಟಿರುತ್ತವೆ, ನಿರೂಪಿಸಲ್ಪಟ್ಟಿರುತ್ತವೆ. ಪ್ರಥಮ ಪುರುಷದಲ್ಲಿ ಬರೆದ ಕತೆಗಳು ಮುಖ್ಯವಾಗಿ ಲೇಖಕನಿಗೆ ಮುಖ್ಯನಿರೂಪಕನಾಗಿ ಎಲ್ಲ ಪಾತ್ರಗಳನ್ನೂ "ಅವನು" "ಅವಳು" ಎಂದು ನಿರಪೇಕ್ಷವಾಗಿ ನೋಡುವ, ಬರೆಯುವ ಸಾಧ್ಯತೆಗಳನ್ನು, ಸ್ವಾತಂತ್ರ್ಯವನ್ನು ಕೊಟ್ಟಿರುತ್ತದೆ. ಇದು ಸಾಧ್ಯತೆಯೂ ಹೌದು, ಜವಾಬ್ದಾರಿಯೂ ಹೌದು, ಮಿತಿಯೂ ಹೌದು. ಯಾವುದೇ ಒಬ್ಬ ಲೇಖಕನೂ ತನ್ನ ಸುತ್ತಲಿನ ಪ್ರಪಂಚವನ್ನು ತನ್ನದೇ ಆದ ದೃಷ್ಟಿಯಿಂದ ನೋಡುತ್ತಿರುವುದರಿಂದ ಯಾವುದೇ ಪಾತ್ರವನ್ನು ಆತ ಚಿತ್ರಿಸುತ್ತಿದ್ದಾಗ ಅವನ ಪೂರ್ವಗ್ರಹಗಳ, ನಂಬಿಕೆಗಳ ಛಾಪು ಆಯಾ ಪಾತ್ರಗಳ ಮೇಲೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಿದ್ದೇ ಇರುತ್ತವೆ. ನಂಬಿಕೆಗಳನ್ನು ಪೂರಾ ತೊರೆದು ಪಾತ್ರಗಳನ್ನು ತಾವಾಗಿಯೇ ಆಯಾ ಪಾತ್ರಗಳ ಶಕ್ತಿಗೆ ಅನುಸಾರವಾಗಿ ಬೆಳೆಸುವುದು ಒಂದು ದೊಡ್ಡ ಸವಾಲು. ಪ್ರಪಂಚದ ಅತಿದೊಡ್ಡ ಕಾದಂಬರಿಕಾರರ ಜಾಣ್ಮೆ ತಾವು ಪಾತ್ರಗಳ ಹೊರಗಿದ್ದುಗೊಂಡು ತಾವು ಕಂಡದ್ದನ್ನು ಪಾತ್ರಗಳ ಮೂಲಕ ಅತ್ಯಂತ ಸಮರ್ಥವಾಗಿ ನಿರೂಪಿಸುವುದರಲ್ಲಿ ವ್ಯಕ್ತವಾಗಿದೆ. ಹೀಗೆ ಹೊರಗೆ ನಿಂತು ಕಾಣುವುದೂ ಒಂದೇ ಆಯಾಮದಲ್ಲಿದ್ದಾದುದರಿಂದ ಪೂರಾ ನಿರಪೇಕ್ಶವಾಗಿ ಈ ಪಾತ್ರಗಳನ್ನು ನೋಡುವುದು, ಚಿತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾವಾಗ ನಿರೂಪಕ ತಾನೇ ಸೃಷ್ಟಿಕರ್ತ ಎಂದುಕೊಂಡು ಈ ಪಾತ್ರಗಳನ್ನು ಶೂನ್ಯದಿಂದ ಸೃಷ್ಟಿಸುವ ಕೆಲಸದಲ್ಲಿ ತೊಡಗುತ್ತಾನೋ ಆಗ ನಿರಪೇಕ್ಷತೆ ಹೊರಟುಹೋಗುತ್ತದೆ. ಯಾವಾಗ ಈ ಸೃಷ್ಟಿ ಲೇಖಕನ ಅನುಭವದ ವಿಸ್ತ್ರುತ ಪ್ರಕ್ರಿಯೆಯಾಗುತ್ತದೆಯೋ, ಆಗ ಆತನಿಗೆ ಈ ಪಾತ್ರಗಳ ಸೃಷ್ಟಿ, ಸ್ಥಿತಿ, ಲಯದ ಮೇಲೆ ಎಷ್ಟು ಹಕ್ಕಿರುತ್ತದೋ ಅಷ್ಟೇ ಈ ಪಾತ್ರಗಳ ಸ್ವತಂತ್ರ ಅಸ್ತಿತ್ವದ ಬಗ್ಗೆ ಕಾಳಜಿಯೂ ಇರುತ್ತದೆ.

ಓದುಗರಾದ ನಮ್ಮ ಅದೃಷ್ಟವೆಂದರೆ ಪ್ರಪಂಚದ ಮುಖ್ಯ ಕಾದಂಬರಿಗಳೆಲ್ಲ ಈ ರೀತಿ ಪ್ರಥಮ ಪುರುಷದಲ್ಲಿಯೇ ನಿರೂಪಿತವಾಗಿರುವುದು.

ಅದೇ ಉತ್ತಮ ಪುರುಷ ನಿರೂಪಣೆಯಲ್ಲಿ ಲೇಖಕನೇ ಒಂದು ಪಾತ್ರವಾಗಿಬಿಟ್ಟಿರುವುದರಿಂದ ಈ "ನಾನು" ಇಲ್ಲಿ ಅನೇಕ ಸ್ತರದಲ್ಲಿ ಕೆಲಸ ಮಾಡುತ್ತದೆ. ತೇಜಸ್ವಿಯವರ "ಕರ್ವಾಲೋ" ಶಾಂತಿನಾಥ ದೇಸಾಯರ ಸಂಬಂಧ" ಇಂತ ಕಾದಂಬರಿಗಳಲ್ಲಿ ಈ ನಿರೂಪಣೆ ಅಥೆಂಟಿಸಿಟಿಯ ಜತೆ ಒಂದು ಆಪ್ತತೆಯನ್ನೂ ಕೊಡುತ್ತದೆ. ಕುಂವೀಯವರ ಕತೆಗಳಲ್ಲಂತೂ ನಿರೂಪಕ ಸೃಷ್ಟಿಕರ್ತನೇ ಆಗಿಬಿಟ್ಟಿರುತ್ತಾನೆ. ಈ ಆಪ್ತತೆ ಯಾಕೆಂದರೆ, ಇಲ್ಲಿ ಕತೆಯ ನಿರೂಪಕನಿಗೂ ಮತ್ತೆ ಬರಹಗಾರನಿಗೂ ನಡುವೆ ಒಂದು ಗ್ಯಾಪ್ ಇದೆ ಎಂದು ನಾವು ಭಾವಿಸುವುದಿಲ್ಲ. ಹಾರುವ ಓತಿಯಾಗಲೀ, ಮಂದಣ್ಣನಾಗಲೀ ಅಥವಾ ಕರ್ವಾಲೋರವರಾಗಲೀ ಎಲ್ಲರೂ ತೇಜಸ್ವಿಯವರ ಜತೆಗೇ ಸಂವಹಿಸುತ್ತಿದ್ದಾರೆ ಎಂಬ ಭಾವನೆಯಲ್ಲಿಯೇ ನಾವು ಕತೆ ಓದುತ್ತೇವೆ. ಕೊನೆಗೆ ಕತೆ ಮುಗಿದಾಗಲೂ, ಈ ಹಾರುವ ಓತಿಯ ಒಂದು ಮಿಂಚಿನ ದರ್ಶನವಾಗಿ ಮಂದಣ್ಣನ ಕೈಯನ್ನು ಸಣ್ಣಗೆ ಸ್ಪರ್ಶಿಸಿ ನಂತರ ಈ ಸೃಷ್ಟಿಯ ಅನಂತತೆಯಲ್ಲಿ ಮಾಯವಾದ ಈ ವಿಸ್ಮಯವನ್ನು ನಿರೂಪಿಸುವ ನಿರೂಪಕ ಬೇರಲ್ಲ, ತೇಜಸ್ವಿಯವರು ಬೇರೆ ಅಲ್ಲ ಎಂದು ನಮಗನಿಸುತ್ತದೆ. ಕತೆಯ ಗಟ್ಟಿತನ ಹಾಗೂ ಉತ್ತಮ ಪುರುಷದ ನಿರೂಪಣೆ ಒಂದಕ್ಕೊಂದು ಪೂರಕವಾಗಿ ಮಾಡುವ ಅನುಕೂಲ ಇದು. ಇದೇ ಅನುಭವ ಕತೆಯಲ್ಲಿ ಇಂಥವನಿಗೊಬ್ಬನಿಗಾಯಿತು ಎಂದು ತೇಜಸ್ವಿಯವರು ಬರೆದಿದ್ದರೆ ಇದರ ದಿವ್ಯ ಅನುಭವ ಪ್ರಾಯಶಃ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಇದನ್ನೇ ಕಾರಂತರ "ಅಳಿದ ಮೇಲೆ" ಹಾಗೂ "ಬೆಟ್ಟದ ಜೀವ"ದ ನಿರೂಪಕನಿಗೂ ಹೇಳಬಹುದು. (ಕಾರಂತರ ಈ ಕಾದಂಬರಿಗಳಲ್ಲಿ ನಿರೂಪಕನ ಹೆಸರೂ ಶಿವರಾಮ ಎಂದೇ ನಿರೂಪಿತವಾಗಿದ್ದು ಅದಕ್ಕೆ ಒಂದು ರೀತಿ ಆತ್ಮಕಾಥಾನಕ ರೂಪವನ್ನೂ ಕೊಟ್ಟಿಬಿಡುತ್ತದೆ). ಇದೇ ಮಾತನ್ನು ನಾವು ಬಹಳಷ್ಟು ಬರಹಗಾರರ ವಿಷಯದಲ್ಲಿಯೂ ಹೇಳಬಹುದು.

ಸಲ್ಮಾನ್ ರಶ್ದೀಯ "ಮಿಡ್‌ನೈಟ್ಸ್ ಚಿಲ್ಡ್ರನ್" ನ ಇಡೀ ಕಾದಂಬರಿ ಉತ್ತಮ ಪುರುಷದಲ್ಲಿಯೇ ನಿರೂಪಿತವಾಗಿದೆ. ಇಲ್ಲಿ ಸಲೀಮ್ ಸೈನಾಯಿ ಅನ್ನುವ ನಿರೂಪಕ ತನ್ನ ಕತೆಯಿರಲಿ, ತನ್ನ ಅಜ್ಜಿ, ಅಜ್ಜರಿಂದ ಹಿಡಿದು ಎಲ್ಲರ ಕತೆಯನ್ನೂ ಉತ್ತಮ ಪುರುಷದಲ್ಲಿಯೇ ಮಾಡುತ್ತಾನೆ. ಆದರೆ, ಇಲ್ಲಿ ಪಾತ್ರಗಳು ತಮ್ಮ ಕತೆಯನ್ನು ಹೇಳುವುದಿಲ್ಲ. ಬದಲಿಗೆ ನಿರೂಪಕ ಎಲ್ಲವನ್ನೂ "ನನ್ನಜ್ಜಿ, ನನ್ನಜ್ಜ, ಅಕ್ಕ, ಅಮ್ಮ" ಎಲ್ಲರ ಕತೆಯನ್ನೂ ಹೇಳುತ್ತಾ ಹೋಗುತ್ತಾನೆ. ಇಲ್ಲಿ ಆಯಾ ಪಾತ್ರಗಳ ಜತೆ ಅವನ ಸಂಬಂಧ "ನನ್ನಜ್ಜ" ಎಂದು ಹೇಳುವ ಬದಲು ಆತನ ನಿಜವಾದ ಹೆಸರಾದ "ಆಡಮ್ ಸೈನಾಯ್" ಎಂದು ಹೇಳಿದ್ದರೆ ಕಥೆಗೆ ಬೇರೆ ಆಯಾಮಗಳು ಒದಗಿಬರುತ್ತಿತ್ತು ಎಂದು ಹೇಳಲಾಗುವುದಿಲ್ಲ. ಇದೇ ಸಮಸ್ಯೆ ತೇಜಸ್ವಿಯವರ ಮಾಯಾಲೋಕದಲ್ಲಿಯೂ ಇದೆ. ಅಲ್ಲಿಯೂ ನಿರೂಪಕನ ಅನುಪಸ್ಥಿತಿಯಲ್ಲಿ ಆಗುವ ಘಟನೆಗಳನ್ನೂ ನಿರೂಪಕ ಹೇಳುವುದರಿಂದ ಉತ್ತಮ ಪುರುಷ ನಿರೂಪಣೆಯ ಪ್ರತಿ ಸಾಧ್ಯತೆಯನ್ನು ಕಾದಂಬರಿಕಾರ ಇಲ್ಲಿ ಉಪಯೋಗಿಸಿಕೊಂಡಿದ್ದಾನೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ, ಇಲ್ಲಿ ನಿರೂಪಕನ ಹೊರತಾಗಿಯೂ ಆಯಾ ಪಾತ್ರಗಳು ಸ್ವತಂತ್ರವಾಗಿ ಜೀವಿಸಿದ್ದಾವೆ. ರಶ್ದೀಯಂತೂ ತಾನು ಹೇಗೆ ಹುಟ್ಟಿದೆ ಎಂಬುದಿರಲಿ, ತನ್ನಪ್ಪ ಅಮ್ಮನ ಪ್ರೇಮಪ್ರಕರಣಗಳು, ತಾನು ಅಮ್ಮನ ಗರ್ಭದಲ್ಲಿ ಭ್ರೂಣವಾಗಿದ್ದು, ಹುಟ್ಟಿದ್ದು ಎಲ್ಲವನ್ನೂ ಹೇಳುತ್ತಾ ಹೋಗುತ್ತಾನೆ. ಇದು ಅತಿವಾಸ್ತವತೆಯನ್ನು ಕೊಡುತ್ತದೆ ಹೊರತು ನಿಜವಾದ ಉತ್ತಮ ಪುರುಷದ ನಿರೂಪಣೆಯ ಅನುಕೂಲವನ್ನು ಕೊಡುವುದಿಲ್ಲ.

ನಿಜವಾಗಿ ಉತ್ತಮ ಪುರುಷದ ಸವಾಲಿರುವುದೆಂದರೆ ತಮ್ಮ ವೈಯುಕ್ತಿಕ ಅನುಭವದಾಚೆಯ ಪಾತ್ರಗಳ ಕಥೆಯನ್ನು ನಿರೂಪಿಸುವುದಾಗ ಅದನ್ನು "ನನ್ನ ಕತೆ"ಯೆನ್ನುವ ಹಾಗೆ ಹೇಳುವುದು. ಇದಕ್ಕೆ ಉತ್ತಮ ಉದಾಹರಣೆ, ಲಂಕೇಶರ "ಅಕ್ಕ" ಹಾಗೂ ಇತ್ತೀಚೆಗೆ ಬಂದ ಅರವಿಂದ ಅಡಿಗನ "ವೈಟ್ ಟೈಗರ್" ಕೊಳೆಗೇರಿಯ ಕ್ಯಾತ ಅಥವಾ ಕೃಷ್ಣ ಎಂಬ ಹುಡುಗ ತನ್ನ ಕಥೆಯನ್ನು "ಅಕ್ಕ" ಕಾದಂಬರಿಯಲ್ಲಿ ಹೇಳುತ್ತಾ ಹೋಗುತ್ತಾನೆ. ಹಾಗೆಯೇ, ಬಲರಾಮ್ ಹಲವಾಯಿ ಎಂಬ ಬಿಹಾರದ ಕೀಳುಜಾತಿಯ ವ್ಯಕ್ತಿಯೊಬ್ಬ ತನ್ನ ಕಥೆಯನ್ನು ಹೇಳುವುದನ್ನು ಇಂಗ್ಲಿಶಿನಲ್ಲಿ ಬರೆಯುತ್ತಾ ಹೋಗುತ್ತಾನೆ, ಅರವಿಂದ ಅಡಿಗ. ಎರಡೂ ಕಥನದಲ್ಲಿ ಮುಖ್ಯವೆನಿಸುವುದು ಏನೆಂದರೆ, ಬರಹಗಾರ ತಾನು ಕಂಡ ಲೋಕವನ್ನು ತನ್ನದೇ ಲೋಕವೆಂಬಂತೆ ಹೇಳುತ್ತಿದ್ದಾನೆ. ಇಲ್ಲಿ ಮುಖ್ಯವಾಗಿ ಕಂಡುಬರುವುದು ನಿರೂಪಕನಿಗೆ ಮತ್ತು ಬರಹಗಾರನಿಗೆ ನಡುವೆ ಇರುವ ಗ್ಯಾಪ್. ಈ ಗ್ಯಾಪ್ ಅನ್ನು ಕಾಪಾಡಿಕೊಳ್ಳದಿದ್ದರೆ ಬರಹಗಾರನ ಕಾಳಜಿಗಳು ನಿರೂಪಕನ ಕಾಳಜಿಗಳೂ ಆಗಿಬಿಡುತ್ತವೆ. ಇದರಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ.

"ಅಕ್ಕ" ಕಾದಂಬರಿಯ ನಿರೂಪಕ ಕೊಳೆಗೇರಿಯ ಹುಡುಗ. ಆತ ಹಿಂದೆಂದೋ ಆಗಿರುವ ತನ್ನ ಕತೆಯನ್ನು, ಕೇವಲ ನೆನಪಿನಿಂದ ಮಾತ್ರ ಹೇಳುತ್ತಿದ್ದಾನೆ, ಅಲ್ಲ ಬರೆಯುತ್ತಿದ್ದಾನೆ. ಯಾಕೆ ಬರೆಯುತ್ತಿದ್ದಾನೆ ಹೇಗೆ ಬರೆಯುತ್ತಿದ್ದೇನೆ ಅನ್ನುವುದಕ್ಕೆ ಸಮಜಾಯಿಷಿಗಳನ್ನು ಕತೆಯ ಆರಂಭದಲ್ಲಿಯೇ ಕೊಡುತ್ತಾನೆ, ಆತ- "ನಂದು ಕೆಟ್ಟ ತಲೆ ಸಾರ್. ಅದರ ತುಂಬಾ ಒಂದಕ್ಕೊಂದು ತಗುಲಿಕೊಂಡು ಕಿತ್ತಾಡೋ ಐಟಂಗಳೇ. ನಾನು ನಾಲ್ಕು ಸಾಲು ಬರೆದರೆ ಒಂದು ಬೈಗುಳ ಬರುತ್ತೆ. ಅದಕ್ಕೇ ನಾನು ಬರೆದುಬಿಟ್ರೆ ಕನ್ನಡಮ್ಮನಿಗೆ ನೋವಾದೀತು ಅಂತ ಸುಮ್ಮನೇ ಇದ್ದೆ. ಆದ್ರೆ ಜೀವ ತಡೀಲಿಲ್ಲ ಸಾರ್. .ನನ್ನ ಮಾತೂ ಹಂಗೇಯ. ಯೋಚಿಸಿ ನೋಡಿದ್ರೆ ಅದು ಮಾತೇ ಅಲ್ಲ. ನರಸಿಂಹ ಮೇಸ್ತ್ರಿ, ಖಡವಾ ಇಂತವ್ರನೆಲ್ಲಾ ಬಯ್ದರೆ ಅದು ಬಯ್ಗಳ. ನಮ್ಮ ಪದ್ದಿ, ಮಾದೇವಿ, ಸಂಪೂರ್ಣಮ್ಮನ್ನ ಬೈದರೆ ಅದು ಬೈಗುಳ ಅಲ್ಲ. ಇದು ದಯವಿಟ್ಟು ತಮ್ಮ ಗಮನದಿಲ್ಲರಲಿ. ನಾನು ಬೈದದ್ದು ಬೈದಂಗಲ್ಲ ಅನ್ನಿಸಿದರೆ ಕತೆಯ ಮಜಾ ಕೆಡುತ್ತಲ್ವಾ ಸಾರ್. ... ನಾನು ತುಂಬಾ ಅವಸರದೋನು. ಒಂದು ಹೇಳೋಕೆ ಹೋಗಿ ಎರಡು ಹೇಳೋದೂ ಈ ಅವಸರದಲ್ಲೇ. ಅದು ಅಪಾಯವಿಲ್ಲ. ಎರಡು ಹೇಳಬೇಕಾದಾಗ ಒಂದೇ ಹೇಳಿ ಕಂಬಿ ಕಿತ್ತೋದು ನನ್ನ ಚಾಳಿ. ಆವಾಗ ನೀವು ಕಲ್ಪಿಸಿಕೊಳ್ಳಬೇಕಾಗುತ್ತೆ. ಸಾಹಿತ್ಯ ಅಂದ್ರೆ ಅದೇ ಅಂತ ಮೈಸೂರುಕಡೆ ಸಾಹಿತಿಗಳು ಈಚೆಗೆ ಹೇಳ್ತಿದ್ದಾರಂತೆ. ಒಮ್ದು ಸೀನ್ ಕೊಟ್ರೆ ಎರಡು ಸೀನ್ ನಿಮ್ಮ ತಲೇಲಿ ಬಂದ್ರೆ ನಂಗೂ ಒಳ್ಲೇದು, ನಿಮಗೂ ಮಜಾ."

ಓದುಗನಿಗೆ ಇಂಥಾ ಒಂದು ಕಾದಂಬರಿಯಿಂದ ಏನನ್ನು ನಿರೀಕ್ಷಿಸಬಹುದು ಅನ್ನುವುದನ್ನು ತಮ್ಮ ಪೀಠಿಕೆಯಂತಿರುವ ಮೊದಲ ಅಧ್ಯಾಯದಲ್ಲಿಯೇ ಹೇಳುತ್ತಾರೆ, ಲಂಕೇಶ್. ಇದರಲ್ಲಿ ಕ್ಯಾತ ತಾನು ಕೊಳೆಗೇರಿಯಲ್ಲಿದ್ದಾಗಿನ ಬದುಕನ್ನು ಕೇವಲ ನೆನಪಿನಿಂದ ಮಾತ್ರ ಹೇಳುತ್ತಿರುವಾಗ ಘಟನೆಗಳ ತುಣುಕಷ್ಟೇ ನಮ್ಮ ಮುಂದೆ ಇಡಬಹುದು. ಅದನ್ನು ಜೋಡಿಸಿಕೊಂಡು, ಖಾಲಿ ಇದ್ದಲ್ಲಿ ತುಂಬಿಸಿಕೊಂಡು ಮಧ್ಯೆ ಊಹಿಸಿಕೊಂಡು ನಮಗೆ ಬೇಕಂತೆ ಕಥೆ ಕಟ್ಟಿಕೊಳ್ಳುವ ಜವಾಬ್ದಾರಿ ಓದುಗರದ್ದು ಕೂಡ. ಇಲ್ಲಿ ಲಂಕೇಶರು ತಮ್ಮ ಅರಿವಿಗೆ ಬಂದ ಕೊಳೆಗೇರಿಯ ಬದುಕನ್ನು ಮಾತ್ರ ಅನಾವರಣ ಮಾಡಲಿಕ್ಕೆ ಈ ಉತ್ತಮ ಪುರುಷ ನಿರೂಪಣೆ ಮಾತ್ರವಲ್ಲ, ನೆನಪಿನಾಳದಿಂದ ಕತೆಯನ್ನು ಹೆಕ್ಕಿಕೊಳುವ ತಂತ್ರವನ್ನೂ ಬಹಳ ಜಾಣತನದಿಂದ ಉಪಯೋಗಿಸಿಕೊಂಡಿದ್ದಾರೆ. ಲಂಕೇಶರ ಅರಿವಿಗೆ ಬರದ ಕೊಳೆಗೇರಿಯ ಇನ್ನೊಂದು ರೂಪ ಕ್ಯಾತನಿಗೂ ಬಂದಿಲ್ಲ, ಅಥವಾ ಅದನ್ನು ಆತ ಹೇಳಲು ಮರೆತಿದ್ದಾನೆ.

ಹಾಗೆ ನೋಡಿದರೆ, ಲಂಕೇಶರ "ಮುಸ್ಸಂಜೆಯೆ ಕಥಾ ಪ್ರಸಂಗ" ಲಂಕೇಶರಿಗೆ ತೀರ ಪರಿಚಯವಿರುವ ಲೋಕ. ಅವರು ಹುಟ್ಟಿ ಬೆಳೆದ ಕೊನಗವಳ್ಳಿಯನ್ನೇ ಹೋಲುವ ಕಂಬಳ್ಳಿಯಂಥ ಊರಿನ ಬಗ್ಗೆ ಬರೆಯಬೇಕಾದರೆ ಉತ್ತಮ ಪುರುಷದ ನಿರೂಪಣೆಯನ್ನು ಮಾಡಿದ್ದರೆ ನಿರೂಪಣೆಗೆ ಒಂದು ಆಪ್ತತೆ ಸಿಕ್ಕುತ್ತಿತ್ತೇನೋ. ಆದರೆ ಲಂಕೇಶರಿಗೆ ಈ ಬಗೆಯ ನಿರೂಪಣೆಯ ಬಗ್ಗೆ ಸಂಶಯವಿದೆ. ತಮ್ಮ ಪರಿಚಿತ ಲೋಕವನ್ನು ಉತ್ತಮ ಪುರುಷದಲ್ಲಿ ಹೇಳಿದಾಗ ಈ ನಿರೂಪಕ ಮತ್ತು ನಾಯಕನ ನಡುವಿನ ಬಿರುಕನ್ನು ನಿಭಾಯಿಸುವುದು ತೀರ ದುಸ್ಸಾಧ್ಯವೆಂದು ಅವರಿಗೆ ಅರಿವಿದೆ. ಆದ್ದರಿಂದಲೇ ಇಲ್ಲಿ "ಕ್ಯಾತ" ನ ಲೋಕದಲ್ಲಿ ಪರಕಾಯ ಪ್ರವೇಶ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲಲ್ಲಿ ಕ್ಯಾತನ ಬದಲಾಗಿ ಲಂಕೇಶ್ ಬರಹಗಾರನಾಗಿ ಇಣುಕಿದರೂ ಬಹುಮಟ್ಟಿಗೆ ಈ ರೀತಿಯ ನಿರೂಪಣೆ ಲಂಕೇಶರ ಸಹಾಯಕ್ಕೆ ಬರುತ್ತದೆ.

ಹಾಗೆಂದು ಇಡೀ ಕಾದಂಬರಿ ಬರೇ ಉತ್ತಮ ಪುರುಷದಲ್ಲಿ ನಿರೂಪಿತವಾಗಿಲ್ಲ. ಕ್ಯಾತ ತನ್ನ ಕಥೆಯನ್ನು ಹೇಳುತ್ತಿರುವಾಗ ಅಲ್ಲಲ್ಲಿ ಅವನನ್ನು ನಾನು ಎಂದು ಹೇಳಿಕೊಳ್ಳದೇ ಕ್ಯಾತ ಎಂದೇ ಕರಕೊಳ್ಳುತ್ತಾನೆ. ಈ ಕೆಳಗಿನ ಸಾಲುಗಳನ್ನು ನೋಡಿದರೆ ಇದು ಇನ್ನೂ ಸ್ಪಷ್ಟವಾಗಬಹುದು.
"ಬಲು ಜೋರಾಗಿದ್ದಾಳಲ್ಲ ಪದ್ದಿ ಅಂತ ಮನಸ್ಸಿನಲ್ಲೇ ಮೆಚ್ತಾ ಕಾರಿನ ಮೂಲೇಲಿ ಕೂತ ಕ್ಯಾತ."
"ಯೋಚ್ನೆ ಮಾಡ್ತಾ ಮಾಡ್ತಾ ಕ್ಯಾತನಿಗೆ ಒಂತರಾ ಆಯಿತು"

ಕತೆಯನ್ನು ನಮಗೆ ಹೇಳುತ್ತಿರುವ ಕ್ಯಾತ ಮತ್ತು ಕತೆಯಲ್ಲಿರುವ ಕ್ಯಾತನಿಗೂ ನಡುವೆ ಒಂದು ಗ್ಯಾಪ್ ಇದೆ ಅನ್ನುವುದನ್ನು ನಮಗೆ ಸೂಚಿತವಾಗಿಸುತ್ತಾರೆ. ಈ ಪ್ರಥಮ-ಉತ್ತಮ ಪುರುಷದ ನಡುವಿನ ಜಿಗಿತ ಎಷ್ಟು ಸಲೀಸಾಗಿ ನಡೆಯುತ್ತದೆಯೆಂದರೆ ಅದು ಕಥೆಯ ಓಟಕ್ಕೆ ಎಲ್ಲೂ ಭಂಗವನ್ನು ತರುವುದೇ ಇಲ್ಲ. ಮತ್ತೆ "ನನ್ನಂತವನ ಕತೆ ಕೇಳೋಕೆ ನೀವೇನು ನನ್ನಂಗೆ ಕ್ಯಾತನಾ ಸರ್" ಎಂದು ಮತ್ತೆ ಮತ್ತೆ ಕೇಳುವ ನಿರೂಪಕ ಕ್ಯಾತ ಬಹಳ ಬಾರಿ ತನ್ನ ಮತ್ತು ತನ್ನ ವಾಚಕವರ್ಗಕ್ಕಿರುವ ಬಿರುಕನ್ನು ಹೇಳುತ್ತಲೇ ಇರುತ್ತಾನೆ.

ಉತ್ತಮ ಪುರುಷದ ನಿರೂಪಣೆಯ ಮುಖ್ಯ ಸಮಸ್ಯೆ ಅಥವಾ ತಪ್ಪುಗ್ರಹಿಕೆಯೆಂದರೆ- ಬರಹಗಾರ ಮತ್ತು ಓದುಗ ಇಬ್ಬರೂ ಕತೆಯ ನಿರೂಪಕನನ್ನೇ ಕತೆಯ ಬರಹಗಾರ ಎಂದು ತಿಳಿಯುವುದು. ಇದು ಬಹಳಷ್ಟು ಮಟ್ಟಿಗೆ ಸತ್ಯವಾದರೂ, ನಾವ್ಯ್ ಅರಿಯಬೇಕಾದ ಸತ್ಯವೆಂದರೆ ಕಥೆಯ ನಿರೂಪಕನೇ ಬೇರೆ, ಬರಹಗಾರನೇ ಬೇರೆ. ಇವರಿಗಿರುವ ಮುಖ್ಯ ವ್ಯತ್ಯಾಸವೆಂದರೆನಿರೂಪಕನಿಗೆ ಕತೆ ಅಥವಾ ಕಾದಂಬರಿಯ ಹೊರಗೆ ಎಂತ ಅಸ್ತಿತ್ವವೂ ಇಲ್ಲ, ಆದರೆ, ಬರಹಗಾರನಿಗೆ ಈ ಕತೆಯ ಹೊರಗೂ ರಕ್ತ, ಮಾಂಸ ತುಂಬಿದ ಅಸ್ತಿತ್ವವಿದೆ. ಈ ಗ್ಯಾಪ್ ಅನ್ನು ನಿಭಾಯಿಸುವುದು ಬಹಳ ಕಷ್ಟಕರವಾದ ವಿಷಯ,

ಈ ವ್ಯತ್ಯಾಸವನ್ನು ಬಹಳ ಪಳಗಿದ ಬರಹಗಾರರೂ ರೂಢಿಸಿಕೊಳ್ಳುವುದು ಕಷ್ಟ. ಹಾಗಾಗಿಯೇ ಕತೆ ಹಾಗೂ ಪ್ರಬಂಧಗಳು ಕೆಲವೊಮ್ಮೆ ಒಂದೇ ಮಾದರಿಯಲ್ಲಿ ಕಾಣುತ್ತವೆ.

ಕತೆಗಳನ್ನು ಉತ್ತಮ ಪುರುಷದಲ್ಲಿ ಬರೆಯುವುದು ಎಷ್ಟು ಕಷ್ಟವೋ, ಪ್ರಬಂಧಗಳನ್ನು ಉತ್ತಮ ಪುರುಷದ ಹಂಗಿಲ್ಲದೇ ಬರೆಯುವುದೂ ಅಷ್ಟೇ ಕಷ್ಟ. ಆಗಲೇ ಅವಕ್ಕೆ ನುಡಿಚಿತ್ರಗಳ, ಹೆಚ್ಚು ಹೆಚ್ಚು ಪ್ರತಿಮೆಗಳನ್ನು ಉಪಯೋಗಿಸಿ ಲಿರಿಕಲ್ ಆಗುವ, ಅಥವಾ ಮ್ಯೂಸಿಂಗ್‌ಗಳ ರೂಪ ಕೊಟ್ಟಾಗ ಸಾಧ್ಯ ಅನಿಸುತ್ತದೆ. ಇದರ ಉತ್ತಮ ಉದಾಹರಣೆ ಜಯಂತರ "ಬೊಗಸೆಯಲ್ಲಿ ಮಳೆ"

2 comments:

  1. ಅಬ್ಬಬ್ಬಾ, ಗುರು, ತುಂಬಾ ಗಂಭೀರವಾದ ಗಹನವಾದ ವಿಚಾರ. ನನ್ ತಲೆಯೊಳಗೆ ಅರ್ಧಂಬರ್ಧ ಮಾತ್ರ ಕೂತಿದೆ.

    ReplyDelete