Saturday, July 11, 2009

ಸಾಹಿತ್ಯವೆಂಬ ಚಪ್ಪೆಹುಳು

ಪ್ರತಿಯೊಬ್ಬ ಬರಹಗಾರನೂ ಒಂದಲ್ಲ ಒಂದು ಬಾರಿ ಈ ಪ್ರಶ್ನೆಗೆ ಉತ್ತರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಾನೇಕೆ ಬರೆಯುತ್ತೇನೆ? ಬರೆಯುವುದರಿಂದ ನನಗಾಗುವ ಲಾಭವೇನು? ಬರೆಯದೇ ಇದ್ದರೆ ನಷ್ಟವೇನು. ಬರಹವೆನ್ನುವುದು ಚಟವಾ, ಪ್ರೀತಿಯಾ. ಹಣಕ್ಕಾಗಿಯಾ? ಖ್ಯಾತಿ, ಪ್ರಶಸ್ತಿಗಳಿಗಾಗಿಯಾ.

ನಾವು ಒಬ್ಬೊಬ್ಬರೂ ಒಂದೊಂದು ಉತ್ತರವನ್ನು ಕೊಡಬಹುದು. ಆದರೆ, ಬರೆಯುವ ಪ್ರತಿಯೊಬ್ಬರಿಗೂ ಗೊತ್ತು, ತಾವು ಬರೆಯುವುದು ತಮ್ಮ ಬರವಣಿಗೆಯ ಮೇಲಿನ ಪ್ರೀತಿಗಾಗಿ. ಕೇವಲ ಪ್ರೀತಿಯಿಂದ ಮಾತ್ರ ಎಂತದೂ ಸೃಷ್ಟಿಯಾಗಬಹುದು.ನಾನು ಹಣಕ್ಕಾಗಿ ಬರೆಯುತ್ತೇನೆ, ನನ್ನ ಓದುಗರಿಗಾಗಿ ಬರೆಯುತ್ತೇನೆ, ನನಗೋಸ್ಕರ ಬರೆದುಕೊಳ್ಳುತ್ತೇನೆ, ಬರೆಯುವುದನ್ನು ಬಿಟ್ಟರೆ ನನಗೇನೂ ಬರುವುದಿಲ್ಲ ಎನ್ನುವವರೂ ನಿಜವಾಗಿ ಬರೆಯುವುದು ಬರವಣಿಗೆಯ ಮೇಲಿನ ಪ್ರೀತಿಯಿಂದ ಮಾತ್ರ. ಈ ಪ್ರೀತಿ ಇಲ್ಲದ ಮೇಲೆ ಬರವಣಿಗೆಗೆ ಯಾವ ಅರ್ಥವೂ ಇಲ್ಲ. ದುಡ್ಡು ಮಾಡಲು ಅನೇಕ ವಿಧಾನಗಳಿದ್ದಾವೆ. ಬರವಣಿಗೆಯಿಂದ ದುಡ್ಡು ಮಾಡುವವರೂ ಕೂಡ ಇದಕಿಂತ ಹೆಚ್ಚು ದುಡ್ಡನ್ನು ನಾನು ಬೇರೆ ಕೆಲಸ ಮಾಡುವುದರಿಂದ ಗಳಿಸಬಹುದು. ಅದು ಅವರಿಗೂ ಗೊತ್ತಿದೆ. ಆದರೂ ಬರೆಯುತ್ತಾ ಹೋಗುತ್ತಾರೆ. ಬೇಕಾದಷ್ಟು ದುಡ್ಡು ಮಾಡಿದ ಮೇಲೂ ಬರೆಯುತ್ತಾಲೇ ಹೋಗುತ್ತಾರೆ. ಬರವಣಿಗೆಯಿಂದ ಒಂದು ನಯಾಪೈಸ ಗಳಿಸದಿದ್ದವರೂ ಬರೆಯುತ್ತಾ ಹೋಗುತ್ತಾರೆ. ಈ ಬರವಣಿಗೆ ಕೊಡುವ ಇಷ್ಟಾನಿಷ್ಟಗಳ ಜತೆಗೆ. ಬರವಣಿಗೆಯಿಂದ ದುಡ್ಡುಮಾಡಿದವರೂ, ಕೀರ್ತಿ ಪಡೆದವರೂ ಪ್ರಶಸ್ತಿ ಪಡೆದುಕೊಂಡವರೂ, ವಾದವಿವಾದಗಳಿಗೆ ಸಿಲುಕಿದವರೂ ಒಪ್ಪಿಕೊಳ್ಳುವುದು ಒಂದು ಸಾರ್ವತ್ರಿಕ ಸತ್ಯವನ್ನು-ಸ್ವರತಿಯೆನ್ನಿಸಿದರೂ ಸರಿ, ಇವರ ಬರವಣಿಗೆಯ ಮೇಲೆ ಇವರಿಗೆ ಅಂತರಾಳದಲ್ಲಿ ಬಹಳ ಪ್ರೀತಿಯಿದೆ. ಬರವಣಿಗೆಯ ಫಲಕ್ಕಿಂತಾ ಬರೆಯುವ ಕ್ರಿಯೆಯನ್ನು ಇವರು ಅಪಾರವಾಗಿ ಮೋಹಿಸುತ್ತಾರೆ.

ಡಿ ಆರ್ ನಾಗರಾಜ್‌ರವರು ಹೇಳಿದ್ದರು "ಅಳಿಸಲಾಗದ ಲಿಪಿಯನ್ನು ಬರೆಯಲೂ ಬಾರದು" ಇದು ಬರವಣಿಗೆಯ ಪ್ರೀತಿಯ ಜತೆಗೆ ಅದಕ್ಕಿರಬೇಕಾದ ಶ್ರಮ, ಪರಿಶ್ರಮ ಮತ್ತು ಶ್ರದ್ಧೆ ಎಷ್ಟು ಮುಖ್ಯ ಎಂಬುದನ್ನು ಸೂಚಿಸಬಹುದು. ಆದರೆ, ಈ ಅಳಿಸಲಾಗದ್ದನ್ನು ಬರೆಯುವಾಗಲೂ ಬರಹಗಾರ ಅದನ್ನು ಪ್ರೀತಿಯಿಂದಲೇ ಬರೆದಿರುತ್ತಾನೆ. ಅಳಿಸಲಾಗದ್ದು ಎಂದು ಗೊತ್ತಾಗುವುದು ಬರೆದನಂತರ ತಾನೇ. ನಂತರ ಓದುಗರು ಸ್ವೀಕರಿಸಲಿಲ್ಲ ಅಥವಾ ಕೆಟ್ಟ ವಿಮರ್ಶೆಗಳು ಬಂದವು- ಇದನ್ನು ಬರೆಯಬಾರದಿತ್ತು ಅನಿಸಬಹುದು, ಆದರೂ ಆ ಸಮಯದಲ್ಲಿ ಪಿಚ್ಚೆನಿಸಿದರೂ ಕೊಂಚ ಹಿಂದೆ ಹೋಗಿ ನೋಡಿದಾಗ ಆ ರೀತಿ ಬರೆಯುವಾಗಲೂ ಅದರ ಮೇಲೆ ಪ್ರೀತಿಯಿದ್ದೇ ಇರುತ್ತದೆ. ಹಾಗೆ ಬವಂತಕ್ಕೋ, ಅಥವಾ ಇನ್ನಿತರ ಒತ್ತಡಕ್ಕೋ ಸಿಕ್ಕಿ ಬರೆದರೆ ಅದರಲ್ಲಿ ಬರಹಗಾರ ತನ್ನನ್ನು ಪೂರ್ತಿ ತೊಡಗಿಸಿಕೊಳ್ಳದಿರುವುದು ಗೊತ್ತಾಗಿಹೋಗುತ್ತದೆ. ಯಾಕೆಂದರೆ ಪ್ರೀತಿಯ ಸತ್ಯಕ್ಕೆ ಆ ಶಕ್ತಿ ಇರುತ್ತದೆ.

ಆದರೂ ಎಲ್ಲರೂ ಇಂಥ ಒಲ್ಲದ ಕೆಲಸವನ್ನು ಒಂದಲ್ಲ ಒಂದು ದಿನ ಮಾಡಿರುವವರೇ ಅಲ್ಲವೇ? ಇದು ಬಹುಶಃ ಮಾಗುವ ಕ್ರಿಯೆ, ಕಾಯುವ ಕ್ರಿಯೆ.

ರಿಲ್ಕೆ ಹೇಳುತ್ತಾನೆ ಒಬ್ಬ ಯುವಕವಿಗೆ "ನೀನು ಬರೆಯಲೇ ಬೇಕೇ, ಯಾಕೆ ಎಂಬ ಕಾರಣವನ್ನು ಹುಡುಕಿಕೊ, ಬರೆಯಲೇಬೇಕೆಂಬ ಆಸೆ ಹೃದಯದ ಆಳದಲ್ಲಿ ಬೇರುಬಿಟ್ಟಿದೆಯೋ, ಬರೆಯುವ ಅವಕಾಶ ನಿನಗೆ ದೊರೆಯದಿದ್ದರೆ ಸಾಯುತ್ತೀಯೋ- ನೋಡಿಕೋ." ಅಂದರೆ ಬರೆಯದೇ ಬದುಕುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆಯನ್ನು ನಾವು ನಮಗೇ ಕೇಳಿಕೊಂಡರೆ ಅದಕ್ಕೆ ಉತ್ತರ ಹೌದು, ಬದುಕಬಲ್ಲೆವು ಎಂಬ ಉತ್ತರ ಎಲ್ಲೋ ಅಂತರಾಳದಲ್ಲಿ ದೊರಕಿದರೂ. ಬರೆಯದೇ ಇರಬಲ್ಲೆ ಎಂದು ಅನಿಸಿದರೆ ಬರೆಯುವುದು ನಿಷ್ಪ್ರಯೋಜನಕಾರಿ.

ಬಹಳ ದೊಡ್ಡ ಮಾತು. ಬರವಣಿಗೆಯನ್ನು ಚಳುವಳಿಗಳ ಉಪೋತ್ಪನ್ನಗಳು ಅಂದುಕೊಂಡ ಇಸಮ್ಮುಗಳಿಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದನ್ನೇ ಮಾಸ್ತಿಯವರು ಸ್ವಲ್ಪ ಬೇರೆ ರೀತಿ "ಬರವಣಿಗೆ ಒಂದು ಪುಣ್ಯದ ಕೆಲಸ"ವೆಂದು ಹೇಳಿದ್ದರು. ಯಾವ ಕೆಲಸ ಮಾಡುವುದರಿಂದ ಪುಣ್ಯ ಬರುತ್ತದೆಂದು ನಾವು ತಿಳಿಯುತ್ತೇವೋ, ಬರೇ ಪುಣ್ಯದ ಕೆಲಸವನ್ನು ಮಾತ್ರ ಮಾಡುವುದು ನಮ್ಮ ಗುರಿಯಾಗುತ್ತದೆಯೋ ಆ ಕೆಲಸವನ್ನು ಬಹಳ ಪ್ರೀತಿಯಿಂದ ಮಾಡುತ್ತೇವೆ. ಆ ಕೆಲಸಕ್ಕೆ ಒಂದು ಪಾವಿತ್ರ್ಯ ಬಂದುಬಿಡುತ್ತದೆ. ಮುಖ್ಯವಾಗಿ ಈ ಕೆಲಸ ಮಾಡಿದರೆ ಪುಣ್ಯ ಬರುತ್ತದೆಯೆಂಬ ನಂಬಿಕೆ ಇರಬೇಕು. ಆ ನಂಬಿಕೆಯೇ ಇಲ್ಲದಿದ್ದರೆ ನಂಬದ ದೇವರಿಗೆ ಮಾಡುವ ಪೂಜೆ, ಪುನಸ್ಕಾರಗಳಂತೆ ಬರೇ ಹೊರಮೈನ ರಿಚುಯಲ್‌ಗಳು ಮಾತ್ರ ಇವಾಗಿ ಹೂರಣವಿಲ್ಲದ ಬರಹಗಳನ್ನು ಮಾತ್ರ ಬರೆಯಲಾಗಬಹುದು. ತನ್ನ ಸ್ವಂತ ಪ್ರಾಣವನ್ನು ಉಳಿಸಿಕೊಳ್ಳುವ ಮತ್ತು ಅಂತ ಪುಣ್ಯದ ಕೆಲಸವಾಗುವ ಮಹಿಮೆಯಿರುವ ಬರವಣಿಗೆಯನ್ನು ಬರಹಗಾರ ಬರೆಯುವಾಗ ಅದು ಪ್ರೀತಿಯಿಲ್ಲದೇ ಹೇಗೆ ಸಾಧ್ಯ. ಆದ್ದರಿಂದ ಅದರಲ್ಲಿ ಹಣ,ಖ್ಯಾತಿ ಮತ್ತು ಮುಖ್ಯವಾಗಿ ಚಟವನ್ನಾಗಿ ಮಾಡಿಕೊಳ್ಳುವ ಗುಣ ಹೊರಟುಹೋಗುತ್ತದೆ.

* * * *

ಇಂಥ ಬರವಣಿಗೆ ಯಥಾರ್ಥ ಪುಣ್ಯದ ಕೆಲಸವಾಗುವಾಗ ಬರಹಗಾರ ತಾನು ಬರವಣಿಗೆಯನ್ನು ಪೂರಾ ಆಸ್ಥೆಯಿಂದ ಮಾಡಬಲ್ಲೆ ಅಥವಾ ಇದನ್ನು ನಾನು ವೃತ್ತಿಯಾಗೋ, ಪ್ರವೃತ್ತಿಯಾಗೋ ಸ್ವೀಕರಿಸಬಲ್ಲೆ ಎಂದು ಅರ್ಥಮಾಡಿಕೊಳ್ಳುವುದು ಯಾವ ಘಟ್ಟದಲ್ಲಿ? ಈ ಬರವಣಿಗೆ ಬೇಡುವ ಸವಾಲುಗಳನ್ನು ಸ್ವೀಕರಿಸಲು ಸಿದ್ಧವಾಗುವುದು ಯಾವಾಗ?. ಜೀವನದಲ್ಲಿ ಬರೆಯದೇ ಬದುಕಿರಲಾರೆ ಎಂದು ಆತ ಅರ್ಥ ಮಾಡಿಕೊಳ್ಳುವುದು ಯಾವಾಗ?

ಅನೇಕ ಮಹಾನುಭಾವರು ಅನೇಕ ರೀತಿ ವ್ಯಾಖ್ಯಾನಿಸುತ್ತಾರೆ. ಆದರೆ, ಎಲ್ಲರೂ ಒಪ್ಪುವುದು ಒಂದು ಸ್ಪಷ್ಟ ವಿಷಯವನ್ನು. ಬರವಣಿಗೆ ಒಂದು ಜೀವನ ಶೈಲಿ. ಒಬ್ಬ ವ್ಯಕ್ತಿ ತಾನು ಇಂಜಿನಿಯರ್, ಡಾಕ್ಟರ್, ಲಾಯರ್ ಆಗುತ್ತೇನೆಂಬ ವೃತ್ತಿಪರ ಆಯ್ಕೆಗಳನ್ನಾಗಲೀ, ಸ್ಟ್ರೈಟ್, ಗೇ ಎಂಬ ಜೀವನಶೈಲಿಯ ಆಯ್ಕೆಗಳನ್ನಾಗಲೀ, ಇಂಥಾ ಊರಲ್ಲಿ ಇರುತ್ತೇನೆ ಅಥವಾ ಇರುವುದಿಲ್ಲ ಎಂಬ ಆಯ್ಕೆಗಳನ್ನಾಗಲೀ ಮಾಡಿಕೊಳ್ಳುವುದು ಸುಮಾರು ಪಡ್ಡೆ ವಯಸ್ಸು ಮುಗಿದು ಇನ್ನೇನು ಎಳೇ ವಯಸ್ಕನಾಗುತ್ತಿದ್ದಾಗ. ಮೀಸೆ ಚಿಗುರುತ್ತಿದ್ದಾಗ. ಕನಸುಗಳು ಅರಳುತ್ತಿದ್ದಾಗ. ಸರಿಸುಮಾರು ಇಂಥ ವಯಸ್ಸಿನಲ್ಲಿಯೇ ಆತನಲ್ಲಿ ಅವನಿಗೆ ಈ ಬರವಣಿಗೆಯ ಶಕ್ತಿ ಇದೆ ಎಂಬ ಅರಿವಿನ ಮಿಂಚು ಕೊಂಚವಾದರೂ ಆಗಿರುತ್ತದೆ. ಅಂದರೆ ಈ ಎಳೇ ವಯಸ್ಸಿನಲ್ಲಿಯೇ ಆತ ಎಂತದೋ ದೊಡ್ಡದನ್ನು ಬರೆದುಬಿಡುತ್ತಾನೆ ಎಂದಲ್ಲ. ಆತ ಆಗಷ್ಟೇ ಅಲ್ಲ ಜೀವನಪೂರ್ತಿ ಏನನ್ನೂ ಬರೆಯದೇ ಇರಲೂಬಹುದು. ಎಷ್ಟೋ ಜನ ತಮ್ಮ ಇಳಿವಯಸ್ಸಿನಲ್ಲಿ ಬರೆದು ದೊಡ್ಡದಾದದ್ದನ್ನು ಸಾಧಿಸಿರುವುದೂ ಇದೆ.

ಆದರೆ, ಈ ಬರವಣಿಗೆಗೆ ಬೇಕಾದ ಸೂಕ್ಷ್ಮತೆ, ವಿವರಗಳನ್ನು ಮನದಟ್ಟುಮಾಡಿಕೊಳ್ಳುವ ಕಲೆ-ಒಟ್ಟಾರೆ ಪ್ರಪಂಚದ ಗ್ರಹಿಕೆ ಎಲ್ಲವೂ ಬೇರೆಯೇ ಆಗಿರುತ್ತದೆ. ಈತ ಆ ಘಟ್ಟದಲ್ಲಿಯೇ ಲೋಕವನ್ನು ತನ್ನ ಕವಿಯ ದೃಷ್ಟಿಯಿಂದಲೋ, ಇಲ್ಲವೇ ಕಾದಂಬರಿಕಾರನ ದೃಷ್ಟಿಯಿಂದಲೋ, ವಿಮರ್ಶಕನಾಗಿಯೋ ನೋಡುತ್ತಿರುತ್ತಾನೆ. ಆತನ ಪ್ರತಿ ಯೋಚನೆ, ತಲ್ಲಣ, ತವಕಗಳು, ಪ್ರೀತಿ, ದ್ವೇಶ, ಸಿಟ್ಟು, ಮದುವೆ, ಮಕ್ಕಳು, ಸಂಸಾರ, ಸಾವು ಎಲ್ಲವೂ ಆತನ ಬರವಣಿಗೆಗೆ ಪೂರಕವಾಗಿಯೇ ಇರುತ್ತದೆ.

ಇದನ್ನೇ ಪೆರುವಿನ ಸ್ಪಾನಿಶ್ ಬರಹಗಾರ ಮಾರಿಯೋ ವಾರ್ಗಾಸ್ ಇಯೋಸ ಬಹಳ ಚೆನ್ನಾಗಿ ವಿವರಿಸುತ್ತಾನೆ. ಕವಿ ರಿಲ್ಕೆ ಒಬ್ಬ ಯುವ ಕವಿಗೆ ಬರೆದ ಪತ್ರಗಳ ಹಾಗೆ ತನ್ನ ಕಲ್ಪಿತ ಬರಹದ ಆಶಯಗಳನ್ನೆಲ್ಲಾ ಆತ ಒಬ್ಬ್ಬ ಯುವ ಕಾದಂಬರಿಕಾರನಿಗೆ ಪತ್ರ ಬರೆದು ಹೇಳಿದ್ದಾನೆ. (Letters to a young novesist) ಆತ ಹೇಳುವ ರೂಪಕಗಳು ಬಹಳ ಅರ್ಥಪೂರ್ಣವಾಗಿವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ಯಾರಿಸ್‌ನಲ್ಲಿ ಹೆಂಗಸರು ತಾವು ತೆಳ್ಳಗೆ ಸುಂದರವಾಗಿ ಕಾಣಲೆಂದು ಚಪ್ಪೆಹುಳುವನ್ನು ನುಂಗಿಬಿಡುತ್ತಿದ್ದರಂತೆ. ಈ ಚಪ್ಪೆಹುಳು ಒಂದು ಪರಾವಲಂಬಿ ಜೀವಿ. ಇದು ತಿಂದವರ ಹೊಟ್ಟೆಯಲ್ಲಿ ಉಳಿದುಕೊಂಡು ಆ ವ್ಯಕ್ತಿಯ ಆಹಾರದ ಮೇಲೆಯೇ ತನ್ನ ಜೀವ ಹಿಡಿದುಕೊಂಡಿರುತ್ತದೆ. ಆ ವ್ಯಕ್ತಿ ತಿನ್ನುತ್ತಿದ್ದದ್ದನ್ನೆಲ್ಲಾ ತಾನು ತಿನ್ನುತ್ತಿತ್ತಂತೆ. ಈಗಿನ "ಸ್ಟಮಕ್ ಸ್ಟೇಪ್ಲಿಂಗ್" "ಬ್ಯಾಂಡಿಂಗ್" ಆಪರೇಷನ್ನುಗಳ ಚಾರಿತ್ರಿಕ ಪಳೆಯುಳಿಕೆ ಈ ಚಪ್ಪೆಹುಳು. ಮನುಷ್ಯನಲ್ಲಿ ಪರಾವಲಂಬಿಯಾಗಿ ಉಳಿದುಕೊಂಡು ಆತನ ಆಹಾರವನ್ನೆಲ್ಲ ಅದರ ಸತ್ವವನ್ನೆಲ್ಲಾ ಹೀರಿಕೊಂಡು ತಾನು ಪುಷ್ಟಿಕರವಾಗಿ ಬೆಳೆದುಬಿಡುತ್ತದೆ. ಈಕೆ ಎಷ್ಟು ತಿನ್ನುತ್ತಾಳೋ ಅದು ಅಷ್ಟು ಬೆಳೆಯುತ್ತದೆ. ಆದರೆ ಆ ಹೆಂಗಸರು ತೆಳ್ಳಗೆ ಉಳಿಯಿತ್ತಿದ್ದರಂತೆ.

ಇಯೋಸ ಹೇಳುವುದೂ ಇಷ್ಟೇ. ಈ ಸಾಹಿತ್ಯವನ್ನು ನನ್ನ ಪ್ರವೃತ್ತಿಯನ್ನಾಗಿ ತೆಗೆದುಕೊಂಡು ಬಿಡುತ್ತೇನೆ ಎಂದು ನಿರ್ಧರಿಸಿರುವವರು ಬಹಳ ಮುಂಚೆಯೇ ಈ ರೀತಿ ಸಾಹಿತ್ಯವೆಂಬ ಚಪ್ಪೆಹುಳವನ್ನು ನುಂಗಿಬಿಡಬೇಕು. ಇದು ನಮ್ಮೆಲ್ಲ ಜೀವನಾನುಭವಗಳು, ಓದು, ಬರಹ, ಗ್ರಹಿಕೆ, ಸಿಟ್ಟು, ಕಾಮ, ಪ್ರೀತಿ, ಸಾವು, ವಿರಹ ಎಲ್ಲವನ್ನೂ ತನ್ನೊಳಗೆ ನುಂಗಿಕೊಂಡು ತಾನು ಸಂತುಷ್ಟವಾಗಿ ಬೆಳೆಯುತ್ತದೆ. ನಿಜವಾಗಿ ಹೇಳುವುದೆಂದರೆ ಬರಹಗಾರ ತನ್ನ ಪ್ರತಿಯೊಂದು ಅತಿ ಕ್ಷುಲ್ಲಕ ಅನುಭವವನ್ನೂ ಅನುಭವವನ್ನೂ ಈ ಅವನ ಚಪ್ಪೆಹುಳಕ್ಕೇ ಉಣಿಸುತ್ತಿರುತ್ತಾನೆ.

ನಾನು ಬರೆದದ್ದನ್ನು ಮಾತ್ರ ಓದಿ, ನನ್ನ ಜೀವನ ನನ್ನ ಸ್ವಂತ ವಿಷಯ, ನಾನು ಜೀವಿಸಿದ ಹಾಗೆ ನೀವು ಜೀವಿಸುವುದು ಬೇಡ ಎಂದು ಬರಹಗಾರ ಅನ್ನುವುದು ಇಲ್ಲಿ ಕೊಂಚ ತಕರಾರಿನ ಮಾತಾಗುತ್ತದೆ. ಅಲ್ಲಿ ಮುಚ್ಚಿಟ್ಟುಕೊಳ್ಳುವ ಮಾತಿಲ್ಲ. ಬರಹ ಬದುಕಿಗೆ ಕನ್ನಡಿಯಾಗುತ್ತದೆ. ಬರವಣಿಗೆ ಒಂದು ಜೀವನ ಶೈಲಿ, ಅದೊಂದು ಹವ್ಯಾಸವಲ್ಲ, ಆಟವಲ್ಲ, ಸಮಯ ಕಳೆಯುವ ಮನರಂಜನೆಯಲ್ಲ, ಬರಹಗಾರ ಬರೆಯುವುದಕ್ಕೋಸ್ಕರ ಜೀವಿಸುತ್ತಾನೆ, ಜೀವಿಸುವುದಕ್ಕಾಗಿ ಬರೆಯುವುದಿಲ್ಲ. ಆದ್ದರಿಂದ ಬದುಕಿಗೂ ಬರಹಕ್ಕೂ ವ್ಯತ್ಯಾಸವಿಲ್ಲ. ಬರೆದಂತೆ ಬದುಕದವನು ಅಥವಾ ಬದುಕಿದಂತೆ ಬರೆಯದವನು ಬರಹಕ್ಕೆ ಅಥವಾ ತನ್ನ ಬದುಕಿಗೆ-ಎರಡರಲ್ಲಿ ಒಂದಕ್ಕೆ ಮೋಸಮಾಡಿಕೊಳ್ಳುತ್ತಿರುತ್ತಾನೆ.

ಕೆಟ್ಟ ಬರವಣಿಗೆಗಿಂತ ಕೆಟ್ಟ ಬದುಕು ಮೇಲಾ? ಕೆಟ್ಟ ಬದುಕಿಗಿಂತಾ ಕೆಟ್ಟ ಬರವಣಿಗೆ ಮೇಲಾ. ಒಂದು ಐಡಿಯಲ್ ಸಮಾಜದಲ್ಲಿ ಇದು ಸುಂದರ ಕಲ್ಪನೆ.

ನಾವೆಲ್ಲರೂ ಸಾಮಾನ್ಯ ಮನುಷ್ಯರು. ನಮ್ಮೆಲ್ಲರ ಬದುಕಿನ ಜಂಜಾಟದ ಮಧ್ಯವೇ ಬರೆದುಕೊಂಡೂ ಹೋಗುತ್ತಿದ್ದೇವೆ. ಆಗ ಈ ಮಹಾನುಭವರ ಹೇಳಿಕೆಗಳೆಲ್ಲ ನಮಗೆಷ್ಟು ಸಂಗತವಾಗುತ್ತದೆ ಎಂದು ಕೇಳಿಕೊಂಡಾಗ ನಾವು ನಿರಾಶರಾಗಬೇಕಿಲ್ಲ. ಯಾಕೆಂದರೆ, ನಾನೊಬ್ಬ ಬರಹಗಾರ ಎಂಬುದನ್ನು ನಿಸ್ಸಂದೇಹವಾಗಿ ಒಪ್ಪಿಕೊಂಡರೆ ಬರಹಕ್ಕೆ ಬದ್ಧತೆ ಬರುತ್ತದೆ. ನಾನೊಬ್ಬ ಡಾಕ್ಟರು, ನಾನೊಬ್ಬ ಇಂಜಿನಿಯರು ಅಥವಾ ನಾನೊಬ್ಬ ಲಾಯರು ಎಂಬಷ್ಟು ಸುಲಭವಾಗಿ ನಾವು ನಾನೊಬ್ಬ ಬರಹಗಾರ ಎಂಬುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಅದನ್ನು ಒಪ್ಪಿಕೊಳ್ಳುವಷ್ಟು ಪ್ರೀತಿಯಿದ್ದರೆ ಸಾಕು ಈ ಚಪ್ಪೆಹುಳವನ್ನು ಕೊಂಚವಾದರೂ ನಾವು ನುಂಗಲು ಪ್ರಯತ್ನಮಾಡಬಹುದು.

ಈ ಬರವಣಿಗೆ ಎಂಬ ಮಾತು ಬಹಳಮಟ್ಟಿಗೆ ಸೃಜನಶೀಲ ಸೃಷ್ಟಿಕ್ರಿಯೆಗೆ ಮಾತ್ರ ಅನ್ವಯವಾಗುತ್ತದಾ. ಉಳಿದ ಪ್ರಕಾರಗಳ ಗತಿಯೇನು? ಉದಾಹರಣೆಗೆ ಈ ಅಂಕಣ ಬರೆಯಲು ಸಹ ಇಂತಹ ಬರವಣಿಗೆಯನ್ನು ಪ್ರೀತಿಸುವುದು ಬೇಡವಾ? ಅಥವಾ ಇದೊಂದು ವಾರವಾರ ನಡೆಯುವ ಪ್ರೀತಿ ರುಟೀನ್ ಆದ ಸಂಸಾರವಾ?

ನಿಯಮಿತವಾಗಿ ಬರೆಯುವ ಈ ಕೆಲಸದ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಆ ಪ್ರೀತಿಯ ಪ್ರಾಡಕ್ಟ್ ಒಂದು ಘಟ್ತದಲ್ಲಿ ಸಂಸಾರಸುಖದಂತೆ ತನ್ನ ಮಸಾಲೆಗಳನ್ನು ಕಳಕೊಂಡು ಹಳತಾಗಬಹುದಲ್ಲವೇ? ಬರಹಗಾರನಿಗೆ ಅವನ ಬರಹದ ಮೇಲೆ ಪ್ರೀತಿಯಿರಬಹುದು. ಅದೇ ಪ್ರೀತಿ ಓದುಗರಿಗೂ ಅವನ ಬರಹದ ಮೇಲೆ ಇರಬೇಕಲ್ಲ.

ಹಾಗಾಗಿ ಅಂಕಣ ಎಂಬ ಈ ಬಂಧ ಕೊನೆಗೂ ಅನಿವಾರ್ಯವಾಗಿ ಅಂಕಣಕಾರನಿಗೂ ಓದುಗನಿಗೂ ಡೈವೊರ್ಸಿನಲ್ಲಿ ಕೊನೆಗೊಳ್ಳುವ ಸಂಬಂಧವೇ. ಇದಕ್ಕೆ ಯಾರೂ ಹೊರತಲ್ಲ. ಇಲ್ಲಿನ ಸಂಸಾರ ಅಲ್ಪಾಯುಷಿ. ಅದು ಎಷ್ಟುಕಾಲ ಬದುಕುತ್ತದೆಂಬುದು ಅವರವರ ಶಕ್ತಿಗೆ, ಸಾಮರ್ಥ್ಯಕ್ಕೆ ಬಿಟ್ಟಿದ್ದು. ಆದರೆ, ಅಂಕಣ ಬರೆಯುವ ಮೊದಲೇ ಈ ಒಡಂಬಡಿಕೆ ನೇರವಾಗಿದ್ದರೆ, ಇದನ್ನು ಇಬ್ಬರೂ ಅರ್ಥಮಾಡಿಕೊಂಡಿದ್ದರೆ ಪ್ರೀತಿಯ ಅಂತ್ಯ ಅಷ್ಟು ಕಷ್ಟಕರವಾಗಲಾರದು. ಕೊನೆಗೆ ಘನತೆಯಿರುತ್ತದೆ. ಕೊನೆಗೊಳ್ಳುತ್ತದೆ, ಕೊನೆಗೊಳ್ಳಲೇಬೇಕು

...ಪ್ರೀತಿ ಚಟವಾಗುವ ಮುನ್ನ

4 comments:

 1. ನಮಸ್ಕಾರ ಗುರು,
  ಬರವಣಿಗೆ ನನ್ನ ಗೀಳು ಅಂತ ಹೇಳಿಕೊಳ್ಳುತ್ತಿದ್ದ ಮಾತನ್ನು ಈಗ ಪುನರ್ವಿಮರ್ಶೆ ಮಾಡಿಕೊಳ್ಳಬೇಕಾಗಿದೆ, ನಿಮ್ಮ ಲೇಖನ ಓದಿದ ಮೇಲೆ.

  ಬರೆಯಲು ಶುರು ಮಾಡಿದ ಸಮಯದಲ್ಲಿ ಅದು ನನಗೆ ಅನಿವಾರ್ಯವೇ ಆಗಿತ್ತು. ಬರೆಯದಿದ್ದರೆ ಆಗಿನ ಬದುಕಿಗೆ ಅರ್ಥವೇ ಇರಲಿಲ್ಲ. ಅದೊಂದೇ ನನ್ನನ್ನು ಮುನ್ನಡೆಸಿದ ದೀಪವಾಗಿದ್ದಿತು. ಈಗ ಅಂಥ ತೀವ್ರ ಅನಿವಾರ್ಯತೆ ಇಲ್ಲದಿದ್ದರೂ ಬರೆಯದಿರಲಾರೆ. ಹಾಗಾದರೆ ಬರವಣಿಗೆ ನನಗೆ ಎಷ್ಟು ಪ್ರೀತಿಪಾತ್ರ? ಎಷ್ಟು ಅನಿವಾರ್ಯ? ಕೇಳಿಕೊಳ್ಳಬೇಕಾಗಿದೆ. ಧನ್ಯವಾದ, ಪ್ರಶ್ನೆಗಳನ್ನು ಹುಟ್ಟಿಸಿದ್ದಕ್ಕೆ; ಉತ್ತರಗಳ ದಾರಿಗೆ ಕೈ ಮಾಡಿದ್ದಕ್ಕೆ.

  ReplyDelete
 2. Namaste Sir,
  Nimma blog/ barahagaLu bahaLa chennAgive.
  DhanyavAda.

  Nalme,
  Chetana TeerthahaLLi

  ReplyDelete
 3. ಪ್ರತಿಕ್ರಿಯೆಗೆ, ಮೆಚ್ಚುಗೆಗೆ ಧನ್ಯವಾದಗಳು.
  ಗುರು

  ReplyDelete
 4. ವಾಹ್,,, ತುಂಬ ಚೆನ್ನಾಗಿ ಇದೆ.. ವಿಮರ್ಶೆ.....
  ಪ್ಯಾರಿಸಿನ ಹೆಂಗಸರು ಚಪ್ಪೆಹುಳುವನ್ನು ತಿಂದು ಸಣ್ಣಗಗುವ ವಿಷಯ ಮಜಾ ಇದೆ.....ಹೀಗೂ ಇತ್ತ ?

  ReplyDelete