Saturday, April 4, 2009

ಭರಿಸಲಾಗದ ಇರವಿನ ಹಗುರ

‘ನಮ್ಮ ವಿಜ್ಞಾನ, ಕಲೆಯಾಗಲೀ ಅಥವಾ ತತ್ವಶಾಸ್ತ್ರದಂತಹ ಮಾನವಿಕ ಶಾಸ್ತ್ರಗಳಾಗಲೀ ಮಾನವನ ಕೂಸಾಗಿಯೇ ಹುಟ್ಟಿದರೂ ಭಸ್ಮಾಸುರನಂತೆ ಅವನನ್ನು ಮೀರಿ ಬೆಳೆದಿವೆ. ವಿಪರ್ಯಾಸವೆಂದರೆ ಈ ವಿಷಯಗಳನ್ನು ಮನುಷ್ಯ ಹೆಚ್ಚುಹೆಚ್ಚು ಅರ್ಥಮಾಡಿಕೊಂಡಷ್ಟೂ ಪ್ರಪಂಚವನ್ನು ಮತ್ತು ತನ್ನನ್ನು ಸ್ಪಷ್ಟವಾಗಿ ಅರಿತುಕೊಳ್ಳ್ಳಲಾಗುತ್ತಿಲ್ಲ. ಅಷ್ಟೇ ಅಲ್ಲ, ಆಧುನಿಕ ಮನುಷ್ಯ ಚರಿತ್ರೆ, ವಿಜ್ಞಾನ, ರಾಜಕೀಯ ಮತ್ತು ತಂತ್ರಜ್ಞಾನದ ಶಕ್ತಿ ಬೆಳೆದಂತೆಲ್ಲಾ ಅವುಗಳ ಮೇಲೆ ತನ್ನ ನಿಯಂತ್ರಣವನ್ನು ಕಳಕೊಂಡಿದ್ದಾನೆ. ಎಲ್ಲವಕ್ಕೂ ತನ್ನನ್ನು ಅರ್ಪಿಸಿಕೊಂಡು ಈ ಶಕ್ತಿಗಳನ್ನು ಹೇಗೆ ಬೆಳೆಯಲಿಕ್ಕೆ ಬಿಟ್ಟಿದ್ದಾನೆಂದರೆ ಇವುಗಳು ಮನುಷ್ಯನನ್ನು ತೀರ ಕುಬ್ಜನನ್ನಾಗಿಸಿವೆ. ಮನುಷ್ಯ ತಾನೇ ಅವೆಲ್ಲದರೊಳಗೊಂದಾಗಿ ಹೋಗಿಬಿಟ್ಟಿದ್ದಾನೆ. ಆದರೆ ಈ ಶಕ್ತಿಗಳಿಗೆ ಮನುಷ್ಯನ ಇರವಿನ ಬಗ್ಗೆ ಆಸಕ್ತಿಯಾಗಲೀ, ಬೆಲೆಯಾಗಲೀ ಇಲ್ಲ. ಮಾನವನ ಇರವನ್ನು ಈ ಶಕ್ತಿಗಳು ಮರೆತೇ ಬಿಟ್ಟಿವೆ. ಈ ಮಾನವನ ಇರವು ‘ತೀರ ಹಗುರ’ ಭರಿಸಲಾಗದಷ್ಟು ಹಗುರ.’

ಹುಟ್ಟುವುದೊಂದೇ ಸಾರಿ, ಸಾಯುವುದೊಂದೇ ಸಾರಿ. ನಡುವೆ ಇರುವುದೊಂದೇ ಬದುಕು. ಯಾವುದೂ ಪುನರಾವರ್ತಿತವಾಗುವುದಿಲ್ಲ. ಆದ್ದರಿಂದ ಈ ಬದುಕಿಗೆ ಅಂಥ ಮಹತ್ವವನ್ನು ಕೊಡುವುದರಲ್ಲಿ ಅರ್ಥವಿಲ್ಲ. ನಮ್ಮ ನಿರ್ಣಯಗಳಿಗೂ ಮತ್ತು ಅದಕ್ಕೆ ಪೂರಕವಾದ ಯಾವ ಕ್ರಿಯೆಗಳಿಗೂ ಅಷ್ಟೊಂದು ಪ್ರಾಮುಖ್ಯ ಕೊಡಬೇಕಾಗಿಲ್ಲ. ಆದ್ದರಿಂದ ಈ ಜೀವನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ತೀರ ಹಗುರವಾಗಿ, ಲಘುವಾಗಿ ಬಿಡುಬೀಸಾಗಿ ಬದುಕಬಹುದು. ಆದರೆ ಹೀಗೆ ಅಮುಖ್ಯವಲ್ಲದ ಅಷ್ಟೇನೂ ಗಂಭೀರವಲ್ಲದ ತೀರ ಹಗುರವಾದ ನಮ್ಮ ನಿರ್ಣಯಗಳು ರೂಪಿಸುವ ನಮ್ಮ ಜೀವನ, ನಮ್ಮ ಅಸ್ತಿತ್ವ ದುರ್ಭರ. ಅದೇ ಭರಿಸಲಾಗದಷ್ಟು ಭಾರ. ಅಂದರೆ ಯಾವುದು ಹಗುರವಾಗಿರಬೇಕೆಂದುಕೊಂಡಿದ್ದೇವೋ ಅದೇ ಭಾರ.

ಈ ವಿರೋಧಾಭಾಸಗಳು ಅನ್ನುವಂತೆ ಕೂಡಿದ ತಾತ್ವಿಕ ನೆಲೆಗಟ್ಟಿನ ಮೇಲೆ ತನ್ನ ಕಾದಂಬರಿಗಳನ್ನು, ಪಾತ್ರಗಳನ್ನು ರೂಪಿಸುತ್ತಾನೆ, ಚೆಕ್ ಮೂಲದ ಈಗ ಫ್ರೆಂಚ್ ಭಾಷೆಯಲ್ಲಿ ಬರೆಯುತ್ತಿರುವ ಕಾದಂಬರಿಕಾರ ಮಿಲನ್ ಕುಂದೇರ.

ನಮ್ಮ ಅರಿವನ್ನು ನಮ್ಮ ಮನದಂತರಾಳದ ನೋವು, ನಲಿವು ಅಥವಾ ನಮ್ಮ ಚಿಂತನಾಶಕ್ತಿ ಮೂಡಿಸುತ್ತದಾ ಅಥವಾ ನಮ್ಮ ಸುತ್ತಲೂ ನಡೆಯುವ ದೈನಂದಿನ ಘಟನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆಯಾ? ಹಾಗೆಯೇ ನಾವು ಬರೆಯುವುದು ಇಂಥದ್ದು ಮತ್ತು ಹೀಗೆ ಅನ್ನುವುದನ್ನು ನಿರ್ಧರಿಸುವುದು ನಮ್ಮ ಆಂತರಿಕ ತಲ್ಲಣವೋ ಅಥವಾ ನಮ್ಮ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳಾ? ಹೀಗೆ ನಮ್ಮ ನಿಯಂತ್ರಣದಲ್ಲಿರದೇ ನಮ್ಮ ಸಾಕ್ಷಿಪ್ರಜ್ಞೆ ರೂಪಿಸದೇ ಇರುವ ನಮ್ಮ ಅರಿವು ನಮ್ಮದಾ? ಮನುಷ್ಯ ಸೃಷ್ಟಿಸಿದ ಈ ಕಂಪ್ಯೂಟರ್, ಸಿನೆಮಾ, ಯಾರೋ ಬರೆದ ಪುಸ್ತಕಗಳು, ಯಾರೋ ಹೇಳಿದ ಮಾತುಗಳನ್ನು ಕೇಳಿಕೊಂಡು ನಮ್ಮ ಪ್ರಜ್ಞೆ ರೂಪಿತವಾದಲ್ಲಿ ಅಂತ ಅಸ್ತಿತ್ವ ಎಷ್ಟು ಲಘುವಾದದ್ದು ಅದೇ Unbearable lighness of being.

ಇಂಥ ಅನೇಕ ತಾತ್ವಿಕ ಪ್ರಶ್ನೆಗಳನ್ನು ಕಾದಂಬರಿ ಬರೆಯುವ ಮೊದಲೇ ಹಾಕಿಕೊಂಡು ರೂಪಿಸುವಾಗ ಕಾದಂಬರಿ ತಾನು ಕಾಣದಿದ್ದನ್ನು ಶೋಧಿಸಲು ಸಾಧ್ಯವಾಗುತ್ತದಾ? ಹಾಗೆ ಗಮ್ಯ ಗೊತ್ತಿರುವುದು ತಪ್ಪಾ? ಕುಂದೇರನ ಉತ್ತಮ ಕೃತಿಯೆಂದು ಬಿಂಬಿತವಾಗಿರುವ, ಆಧುನಿಕ ಕ್ಲಾಸಿಕ್ ಎಂದೇ ಕರೆಯಲ್ಪಡುವ Unbearable lighness of being. ನಲ್ಲಿ ಈ ಆಶಯದ ಪಾತ್ರಗಳನ್ನೇ ಚಿತ್ರಿಸುತ್ತಾನೆ. ಮುಖ್ಯ ಭೂಮಿಕೆಯಲ್ಲಿರುವ ಟೊಮಸ್ ಒಬ್ಬ ವೈದ್ಯ, ತನ್ನ ಕೆಲಸದ ಮೇಲೆ ಆತನಿಗೆ ಎಷ್ಟು ಶ್ರದ್ಧೆಯಿದೆಯೋ ಅಷ್ಟೇ ಲಂಪಟ, ಆತ. ಆತನಿಗೆ ಕಾಮ ಮತ್ತು ಪ್ರೀತಿ ಎರಡು ಬೇರೆಬೇರೆ ಕ್ರಿಯೆಗಳು. ಆತ ತನ್ನ ಹೆಂಡತಿ ಟೆರೆಜಳನ್ನು ಪ್ರೀತಿಸುತ್ತಾನೆ ಆದರೆ ಬೇರೆ ಎಲ್ಲರನ್ನೂ ಕಾಮಿಸುತ್ತಾನೆ. ವಿಚಿತ್ರವೆಂದರೆ, ಆತನ ಹೆಂಡತಿ ಟೆರೆಜ ಅವನ ವಿರುದ್ಧ ಸಿಟ್ಟಿಗೇಳದೇ ಮತ್ತು ಹಾಗೆ ಸಿಟ್ಟಿಗೇಳಲಿಕ್ಕಾಗದ ತನ್ನ ದೌರ್ಬಲ್ಯವನ್ನು ಒಂದು ವ್ಯಸನವನ್ನಾಗಿ ಮಾಡಿಕೊಳ್ಳುತ್ತಾಳೆ, ಅದು ಅವಳಿಗೆ ಒಂದು ಹುತಾತ್ಮತೆಯನ್ನು ಕೊಡುತ್ತದೆ. ಈ ದೌರ್ಬಲ್ಯದ ವ್ಯಸನವೊಂದು ಬಹಳ ಪ್ರಬಲವಾದದ್ದೆಂದು ಹೇಳುತ್ತಾನೆ, ಕುಂದೇರ. ಆ ದೌರ್ಬಲ್ಯ ಒಂದು ಅರ್ಪಣಾಭಾವವನ್ನು ಕೊಡುತ್ತದೆ. ಇದಕ್ಕೆ ವಿರುದ್ಧವಾಗಿ ಟೊಮಸ್‌ನ ಗೆಳತಿ ಸಬ್ರೀನಾಳ ಪಾತ್ರವನ್ನು ಆಧುನಿಕ ಹೆಣ್ಣಾಗಿ ಅಭಿಪ್ರಾಯ ಸ್ವಾತಂತ್ರ್ಯವುಳ್ಳ ಒಬ್ಬ ಚಿತ್ರಕಾರಳಾಗಿ ಸೃಷ್ಟಿಸುತ್ತಾನೆ, ಕುಂದೇರ.

ಹೀಗೆ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕಾದಂಬರಿಯನ್ನು ಬರೆಯಬೇಕಾದಾಗ ಅದಕ್ಕೆ ಅನುಗುಣವಾಗಿ ಪಾತ್ರಗಳನ್ನೂ ಸೃಷ್ಟಿಸಬೇಕಾಗುತ್ತದೆ. ತನ್ನ ಲಘುತ್ವದ ಸಿದ್ಧಾಂತವನ್ನು ಬಿಂಬಿಸಲೆಂದೇ ಕಾಮ,ಲಂಪಟತನ ಇವುಗಳ ಪ್ರತಿಪಾದಕನಾಗಿ ಒಂದು ಪಾತ್ರವನ್ನು ಸೃಷ್ಟಿಸಬೇಕಾಗುತ್ತದೆ. ನಂತರ ಅದಕ್ಕೆ ವಿರುದ್ಧವಾದ ಪಾತ್ರ ಬೇಕಾಗುತ್ತದೆ. ಆಗ ಟೆರೆಜಾ ಸೃಷ್ಟಿಯಾಗುತ್ತಾಳೆ, ಆದರೆ ಅವಳು ಶಕ್ತಿಶಾಲಿಯಾದರೆ ಕಾದಂಬರಿಯ ಮೂಲ ಆಶಯಕ್ಕೆ ಹೊಡೆತ ಬೀಳುತ್ತದೆ. ಆದ್ದರಿಂದ ಅವಳು ತನ್ನ ದೌರ್ಬಲ್ಯವನ್ನು ಪ್ರೀತಿಸುತ್ತಾಳೆ. ಇಂತಹ ಪಾತ್ರವನ್ನು ಮತ್ತು ವ್ಯಸನವನ್ನು ವಿವರಿಸುತ್ತಾ ಕುಂದೇರಾ ಇದನ್ನು ತನ್ನ ಪ್ರಬಂಧ Dialogue on the art of novel ನಲ್ಲಿ ‘ವರ್ಟಿಗೊ’ (ತಡೆಯಲಾಗದ ಪಾತಳಿಗೆ ಬೀಳುವ ಮತ್ತು) ಎನ್ನುತ್ತಾನೆ. ಆಗ ಸ್ತ್ರೀತ್ವ, ನೈತಿಕತೆ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಲೆಂದೇ ಇನ್ನೊಂದು ಪಾತ್ರ ಸೃಷ್ಟಿಯಾಗುತ್ತದೆ. ಇದು ಒಂದು ರೀತಿ ಲಾ ಆಫ್ ಆವರೇಜಿಂಗ್- ಕರಿಬಿಳಿ ಪಾತ್ರಗಳನ್ನು ನೇರವಾಗಿ ಸೃಷ್ಟಿಸದೇ ಕಂದಿನ ಛಾಯೆಗೆ ಅಕ್ಕಪಕ್ಕ ಸೃಷ್ಟಿಸಿ ಎರಡೂ ಒಂದೇ ಅಂತ ನಂಬಿಸುವುದು, ಹಾಗೇ ಸೂಕ್ಷ್ಮವಾಗಿ ನೊಡಿದರೆ ಎರಡೂ ಬೇರೆ ಅಂತ ಕೂಡ ಅನ್ನಿಸಬೇಕು.

ಕುಂದೇರನಿಗೆ ಈ ಬದುಕಿನ ಪರಿಪೂರ್ಣತೆಯ ಬಗ್ಗೆ ನಂಬಿಕೆಯಿಲ್ಲ. ಆತನ ಪಾತ್ರಗಳನ್ನು ಚಿತ್ರಿಸುವಾಗ ಆತನಿಗೆ ಪಾತ್ರಗಳ ಹೊರರೂಪಗಳ ಬಗ್ಗೆ ಅಷ್ಟು ಆಸಕ್ತಿಯಿಲ್ಲ. ಅಷ್ಟೇ ಅಲ್ಲ ಅವುಗಳ ಅಂತರಂಗದ ಕಾಳಜಿಗಳ ಬಗ್ಗೆಯೂ ಇವನಿಗೆ ಆಸಕ್ತಿಯಿದೆಯೇ ಇಲ್ಲವೇ ಎಂದು ಅನುಮಾನ ಬರುತ್ತದೆ. ತನ್ನ ಕಾದಂಬರಿಯ ಕೇಂದ್ರಪಾತ್ರಗಳು ನೋಡುವುದಕ್ಕೆ ಹೇಗಿದೆ ಅನ್ನುವುದನ್ನೂ ಆತ ವರ್ಣಿಸುವುದಿಲ್ಲ. ಕಾದಂಬರಿಯನ್ನು ಓದಿದ ಮೇಲೆಯೂ ಒಂದು ಖಾಲಿಭಾವ ಉಳಕೊಂಡರೆ ಅದು ಉದ್ದೇಶಪೂರ್ವಕವಾದದ್ದೇ ಎಂದು ಆತ ವಾದಿಸುತ್ತಾನೆ. ಒಂದು ಉತ್ತಮ ಓದು ಒಬ್ಬ ಉತ್ತಮ ಓದುಗನನ್ನೂ ಆಶಿಸುತ್ತದೆ ಅನ್ನುವುದು ಆತನ ವಾದ. ಈತನ ಪಾತ್ರಗಳನ್ನು ಇರಲಿ ಈತನ ಒಂದು ಕಾದಂಬರಿಯನ್ನು ಮಾತ್ರ ಓದಿದರೆ ಏನೂ ಅರ್ಥವಾಗದು. ಒಂದೊಂದು ಕಾದಂಬರಿಯೂ ಒಂದೊಂದು ಥೀಮನ್ನು ಪ್ರತಿಬಿಂಬಿಸುವುದರಿಂದ ಇವನ ಕಾದಂಬರಿಗಳು ಇನ್ನೂ ಬೆಳೆಯುವ ಹಂತದಲ್ಲಿಯೇ ಪೂರ್ಣವಾಗಿಬಿಡುತ್ತವೆ. ಈತ ಜೀವನ ಪೂರ ಬರೆದರೂ ಎಲ್ಲವೂ ಒಂದೇ ಕಾದಂಬರಿಯ ಪಾತ್ರಗಳಾಗಬಹುದು.

ಆಧುನಿಕ ಮನುಷ್ಯನ ಬದುಕನ್ನು ಈತ ಸರಳ ಎಂದು ಎಲ್ಲಿಯೂ ನಂಬುವುದಿಲ್ಲ. ಈತನ ಒಂದು ಕಾದಂಬg The book of Laughter and forgetting ನ ಏಳು ಅಧ್ಯಾಯಗಳೂ ಒಂದೊಂದು ಬೇರೆಯೇ ಕಾದಂಬರಿಯಾಗಬಹುದು ಎಂದು ವಾದಿಸಿದವರಿಗೆ ‘ನಾನು ಹಾಗೆ ಮಾಡಿದ್ದರೆ ಆಧುನಿಕ ಮನುಷ್ಯನ ಬದುಕನ್ನು ತೀರ ಸರಳೀಕರಿಸಿದ ಹಾಗಾಗಿಬಿಡುತ್ತಿತ್ತು ಅಂದಿದ್ದಾನೆ. ಒಂದೊಂದು ಪುಸ್ತಕವೂ ಒಂದೊಂದು ಗುಣವನ್ನು ಪ್ರತಿಪಾದಿಸಿದಲ್ಲಿ ಇಡೀ ಪುಸ್ತಕ ಒಬ್ಬ ಮನುಷ್ಯನಾಗಬಹುದು.’ ಅನ್ನುವುದು ಅವನ ವಾದ.

ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯನ್ನು ನಾನು ಓದಿದಾಗ ಆದದ್ದು ಒಂದು ಪರಿಪೂರ್ಣ ಅನುಭವ. ಆದರೆ ಕುಂದೇರನ ನಾನು ಓದಿರುವ ಯಾವುದೇ ಪುಸ್ತಕದಲ್ಲಿಯೂ ಈ ಅನುಭವ ಸಿಕ್ಕಿಲ್ಲ. ಒಂದು ಸಮುದಾಯದ ಕತೆಗೆ ಈ ಸಿದ್ಧಾಂತಗಳ ಭಾರವಿಲ್ಲ. ಗುತ್ತಿ, ಪೀಂಚಲು, ತಿಮ್ಮಿ, ತಿಮ್ಮಪ್ಪ ಹೆಗಡೆ, ಐತು, ಸಣ್ಣಬೀರ, ದೊಡ್ಡಬೀರ, ಪುಟ್ಟಬೀರ, ಧರ್ಮು, ಹುಲಿಯ, ಇಂಥ ಅಸಂಖ್ಯ ಪಾತ್ರಗಳಲ್ಲಿ ಯಾವುದೇ ಪಾತ್ರಗಳು ಪರಿಪೂರ್ಣವೋ ಇಲ್ಲವೋ ಎಂದು ಅಕೆಡಿಮಿಕ್ ವಿಮರ್ಶಕರು ತಲೆಕೆಡಿಸಿಕೊಳ್ಳಬಹುದೇನೋ. ಆದರೆ, ಇವರ ತೀರ ಸಾಮಾನ್ಯ ಬದುಕಿನ ಅಸಾಮಾನ್ಯ ಕ್ಷಣಗಳನ್ನು ಆ ದೇಶ, ಕಾಲದ ಸೊಡರಿನಲ್ಲಿ ಕುವೆಂಪು ಹಿಡಿದು ಕೇವಲ ಒಂದೇ ಕಾದಂಬರಿಯಿಂದ ಮನುಕುಲದ ಚಿತ್ರಣವನ್ನು ನಮ್ಮಮುಂದೆ ಹಿಡಿದಿದ್ದಾರೆ. ಕುಂದೇರನನ್ನು ಓದಿದಾಗ ಅವನನ್ನು ಓದುತ್ತಿದ್ದೇವೆ ಅನ್ನುವ ಎಚ್ಚರ ಪ್ರತಿಕ್ಷಣದಲ್ಲಿಯೂ ನನಗೆ ಇತ್ತು. ಮತ್ತು ಅವನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವನದೇ ವ್ಯಾಖ್ಯೆಗಳನ್ನೂ ಓದಬೇಕಾಯಿತು. ಆದರೆ ಮಲೆಗಳಲ್ಲಿ ಓದುತ್ತಿದ್ದಾಗ ಕುವೆಂಪುರವರು ನನ್ನ ಮನಸ್ಸಿನಿಂದ ಮರೆಯಾಗಿದ್ದರು. ಅಲ್ಲಿ ಗುತ್ತಿಯಿದ್ದ, ತಿಮ್ಮಿಯಿದ್ದಳು, ಮಲೆನಾಡಿತ್ತು, ಜನರ ರಾಗ, ದ್ವೇಷಗಳಿತ್ತು, ಶತಮಾನದ ಹಿಂದೆ ಹೋಗಿದ್ದೆ. ಕುವೆಂಪು ಮರೆಯಾಗಿ ಗೆದ್ದಿದ್ದರು.

ಮಹಾಕಾದಂಬರಿಗಳ ಓದಿನ, ಮತ್ತು ನೆನಪಿನ ಶಕ್ತಿಯ ಬಗ್ಗೆ ಕುಂದೇರನ ವಾದವೊಂದಿದೆ. ಕಾದಂಬರಿಯ ವಸ್ತು ಮತ್ತು ವಾಸ್ತು ಹಂದರದಲ್ಲಿ ಸಂಕೀರ್ಣವಾದಂತೆ ಅದರ ಗಾತ್ರವೂ ದೊಡ್ದದಾಗುತ್ತ ಹೋಗುತ್ತದೆ. ಪ್ರತಿಪಾತ್ರಗಳನ್ನೂ ಪರಿಪೂರ್ಣಗೊಳಿಸಲು ಹೋದಾಗ ಈ ಸಮಸ್ಯೆ ಏಳುತ್ತದೆ. ಮುಖ್ಯವಾಗಿ ಟಾಲ್‌ಸ್ಟಾಯ್ ಅಥವಾ ಹೋಮರನನ್ನು ಕುರಿತು ಈ ಮಾತನ್ನು ಆತ ಹೇಳಿರಬಹುದಾಗಿದ್ದರೂ ನಮ್ಮ ‘ಮಲೆಗಳಲ್ಲಿ.. ‘ಗೂ ಅದನ್ನು ವಿಸ್ತರಿಸಬಹುದು. ಅವನ ವಾದ, ಒಂದು ದೊಡ್ಡ ಅರಮನೆಯ ವಾಸ್ತುಶಿಲ್ಪದ ಸಂಕೀರ್ಣತೆಯನ್ನು ಒಂದೇಸಾರಿ ಹೇಗೆ ಅನುಭವಿಸಲು ಸಾಧ್ಯವಿಲ್ಲವೋ ಹಾಗೆಯೇ ಕಾದಂಬರಿಯನ್ನು ಓದಿ ಮುಗಿಸಿದಾಗ ಕಾದಂಬರಿ ಹೇಗೆ ಶುರುವಾಯಿತು ಅನ್ನುವುದೇ ಮರೆತುಹೋಗಿದ್ದರೆ ಕಾದಂಬರಿ ಲೇಖಕನ ಪರಿಕಲ್ಪನೆಯಲ್ಲಿ ಸಂಪೂರ್ಣವಾಗಿದ್ದರೂ ಓದುಗ ಈ ಪಾತ್ರಗಳ ಸಂಬಂಧಗಳಲ್ಲಿ ಕಳೆದುಹೋಗಿರುತ್ತಾನೆ. ಅವನು ಇದನ್ನು ವಿವರಿಸುವುದು ನಮ್ಮ ನೆನಪಿನ ಶಕ್ತಿಯ ಮಿತಿಯಿಂದ. ಒಬ್ಬ ಸಾಮಾನ್ಯ ಓದುಗನಿಗೆ ಎಂಟುನೂರ ಪುಟದ ಕಾದಂಬರಿಗಳನ್ನು ಜೀವನದಲ್ಲಿ ಎಷ್ಟು ಬಾರಿ ಓದಲು ಸಾಧ್ಯ ಎನ್ನುವವರಿಗೆ ಇವನ ವಾದ ಸರಿ ಎನ್ನಿಸಲೂ ಬಹುದು. ಅದಕ್ಕೇ ಏನೋ, ಆತನ ಎಲ್ಲ ಕಾದಂಬರಿಗಳೂ ಸೇರಿ ಒಂದು ಕತೆಯಾಗಬಹುದು ಎನ್ನುವ ಹಲವರ ವಾದ ಸರಿಯೇನೋ..

ನಾನು ಕುಸುಮಬಾಲೆಯನ್ನು ಓದಿದಾಗ ಅಲ್ಲಿನ ಪಾತ್ರಗಳ ಹೆಸರುಗಳನ್ನು ಮತ್ತು ಅವುಗಳ ಸಂಬಂಧಗಳನ್ನು ಒಂದು ರೀತಿಯ ವಂಶವೃಕ್ಷದಂತೆ ಒಂದು ಹಾಳೆಯಲ್ಲಿ ಬರೆದುಕೊಂಡಿದ್ದೆ. ಮಾರ್ಕ್ವೆಜ್‌ನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸೊಲಿಟ್ಯೂಡ್’ ನಲ್ಲಿ ಕಾದಂಬರಿಯ ಶುರುವಿನಲ್ಲಿ ಒಂದು ವಂಶವೃಕ್ಷವಿದೆ. ಗ್ರಾಮಾಯಣದ ಹೊಸ ಮುದ್ರಣದಲ್ಲಿ ಪಾತ್ರಗಳ ಪರಿಚಯವಿದೆ. ಪಮುಕನ ‘ಮೈ ನೇಮ್ ಈಸ್ ರೆಡ್’ ನಲ್ಲಿ ಆಟೊಮನ್ ಸಾಮ್ರಾಜ್ಯದ ನಕ್ಷೆಯಿದೆ.

ವಿಸ್ತಾರವಾದ ಓದಿಗೆ ನಮಗೆ ಸಮಯವಿಲ್ಲದೆ ಕಾದಂಬರಿಯನ್ನು ಪೂರಾ ಅನುಭವಿಸಬೇಕಾದಾಗ ಹೀಗೆ ಅಡ್ಡದಾರಿಗಳನ್ನು ಹಿಡಿದರೆ ಅದು ನಮ್ಮ ತಪ್ಪೋ ಅಥವಾ ಕೃತಿಕಾರನ ತಪ್ಪೋ? ಹೀಗೆ ಹಗುರವಾಗಿ ಜೀವಿಸುವುದನ್ನಲ್ಲವೇ ಕುಂದೇರ ಕರೆದದ್ದು ‘ಅನ್‌ಬೇರಬಲ್’ ಎಂದು.

No comments:

Post a Comment