ನವೆಂಬರ್ ಆರು, ೨೦೦೮ರಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ಹಿಂದಿನ ದಿನವಷ್ಟೇ ಅಮೆರಿಕಾದ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು. ಬರಾಕ್ ಹುಸೇನ್ ಒಬಾಮ ತನ್ನ ಪ್ರತಿಸ್ಪರ್ಧಿ ಮೆಕೇನನ್ನು ಭಾರಿ ಅಂತರದಿಂದ ಸೋಲಿಸಿದ್ದ. ಶಿಕಾಗೋದ ಗ್ರಾಂಟ್ ಪಾರ್ಕಿನಲ್ಲಿ ಎರಡೂವರೆಲಕ್ಷ ಜನರ ಮುಂದೆ ತನ್ನ ವಿಜಯವನ್ನು ಸಂಭ್ರಮಿಸಿದ್ದ. ಹೆಂಡತಿ ಮಿಶೇಲ್ ಮತ್ತು ಮಕ್ಕಳಾದ ಮಲಿಯ ಮತ್ತು ತಾಶಾರ ಜತೆಗೆ ವೇದಿಕೆಯಮೇಲೆ ಓಡಿಯಾಡಿ ಖುಷಿಪಟ್ಟಿದ್ದ. ಅತ್ತ ಫೀನಿಕ್ಸಿನಲ್ಲಿ ಜಾನ್ ಮಕೇನ್ ವೀರೋಚಿತವಾಗಿ ತನ್ನ ಸೋಲನ್ನೊಪ್ಪಿಕೊಂಡಿದ್ದ.
ಅಮೆರಿಕಾ ಬದಲಾವಣೆಗೆ ಸಿದ್ಧವಿದೆ ಎಂದು ಪ್ರಪಂಚಕ್ಕೆ ತೋರಿಸಿತ್ತು
ಮಾರನೆಯ ದಿನ ಆಸ್ಪತ್ರೆಗೆ ಕೆಲಸಕ್ಕೆ ಬಂದಾಗ ಒಂದು ರೀತಿಯ ದಿವ್ಯ ಮೌನ. ಯಾರೂ ಮಾತಾಡುತ್ತಿಲ್ಲ. ಒಬಾಮಾ ಗೆದ್ದ ಸಂಭ್ರಮವನ್ನು ವಾಟರ್ ಕೂಲರ್ ಮಾತುಕತೆಯಾಗಿಯಾದರೂ ಸಿಕ್ಕವರೊಂದಿಗೆ ಗಾಸಿಪ್ ಮಾಡುವುದರ ‘ಪೊಲಿಟಿಕಲ್ ಕರೆಕ್ಡೆಡ್‌ನೆಸ್’ ಬಗ್ಗೆ ಯೋಚಿಸುತ್ತಿದ್ದೆ. ಬರೇ ಕಕೇಶಿಯನ್ನರ ನಡುವೆ ಒಬ್ಬನೇ ನನ್ನಂತವನು ಸೇರಿಕೊಂಡುಬಿಟ್ಟಾಗ ಇಂತಹ ಕೆಟ್ಟ ಪಿರಿಪಿರಿಯನ್ನು ನಾನು ಅನುಭವಿಸಿದ್ದೇನೆ. ಇಂಗ್ಲಿಷ್ ಅರ್ಥವಾಗದ ಗುಜರಾತಿಗಳೋ ಮೆಕ್ಸಿಕನ್ನರೋ ರೋಗಿಗಳು ಬಂದಾಗ ದುಭಾಶಿಗಳನ್ನು ಆಸ್ಪತ್ರೆಗೆ ಕರೆಸುವ ಕಿರಿಕಿರಿಯನ್ನು ತಡೆಯದೆ ಎಷ್ಟೋ ಜನ ನನ್ನ ಸಹಕೆಲಸಗಾರರು ನನ್ನ ಮುಂದೆಯೇ ‘ಈ ಜನಕ್ಕೆ ಇಂಗ್ಲಿಶ್ ಕಲಿಯಲು ಏನು ಬಂದಿರುವುದು, ರೋಗ?’ ಎಂದು ಗೊಣಗಿ, ನನ್ನನ್ನು ನೋಡಿ ತಕ್ಷಣ ಎಚ್ಚತ್ತುಕೊಂಡು ‘ಸಾರಿ’ ಎಂದು ತುಟಿಕಡಿದುಕೊಳ್ಳುತ್ತಾರೆ. ಇಂತಹ ರೇಸಿಸ್ಟ್ ಕಮೆಂಟುಗಳಿಂದ ನನಗಾದ ಅಸಹನೆಯನ್ನು ನಾನು ಕೊಂಚ ತೋರಿಸಿಕೊಂಡಲ್ಲಿ ‘ಹೇ ನಾವಿಲ್ಲಿ ರೇಸ್ ಬಗ್ಗೆ ಮಾತಾಡುತ್ತಿಲ್ಲ, ಡಾಕ್ಟರ್. ಇಂಗ್ಲಿಶನ್ನು ಕಲಿಯದೇ ಇರುವ ಕಾರಣ ಆಗುವ ಅನನುಕೂಲ ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಮತ್ತು ದುಭಾಷಿಗಳಿಗೆ ಕೊಡಬೇಕಾದ ಸಂಬಳದಿಂದ ಆಸ್ಪತ್ರೆಗೆ ಹಾಗೂ ತೆರಿಗೆದಾರನಿಗಾಗುವ ಖರ್ಚನ್ನಷ್ಟೇ ಗಮನದಲ್ಲಿಟ್ಟುಕೊಂಡರೂ ಇದು ಸರಿ ಅನ್ನಿಸುವುದಿಲ್ಲ ಅಲ್ಲವೇ ಅಂದು ‘You do not worry doc, You are pretty much white’ ಎಂದು ನನ್ನನ್ನು ಸಮಾಧಾನಪಡಿಸಿಯೂ ಇದ್ದಾರೆ. ನಾನು ನಕ್ಕು ನನ್ನ ಕೆಲಸವನ್ನು ಮುಂದುವರೆಸುತ್ತಾ, ನನ್ನ ವೃತ್ತಿಯ ವತಿಯಿಂದ ನನ್ನ ಬಣ್ಣಕ್ಕೆ ದೊರೆತಿರುವ ‘ಟೂ ಶೇಡ್ ಲೈಟ್’ ಅನ್ನು ಕೊಂಚ ಖುಷಿಯಿಂದಲೇ ಸ್ವೀಕರಿಸಿದ್ದೇನೆ.
ಆದರೆ, ಅಂದು ಮಧ್ಯಾಹ್ನ ಹನ್ನೆರಡಾದರೂ ಇಡೀ ಜಗತ್ತೇ ಮಾತಾಡುತ್ತಿರುವ ಈ ಚಾರಿತ್ರಿಕ ವಿಜಯದ ಬಗ್ಗೆ ಹಾಹೂ ಎಂದೂ ಅನ್ನದಿದ್ದಾಗ ನಾನು ಕೆಲಸ ಮಾಡುತ್ತಿರುವುದು ಇಂತಾ ರೆಡ್‌ನೆಕ್‌ಗಳ ಜತೆಗಾ ಅನ್ನುವ ಅನುಮಾನ ಜಾಸ್ತಿಯಾಗುತ್ತಾ ಹೋಗಿತ್ತು. ಇಡೀ ಜಗತ್ತೇ ಸಂಭ್ರಮಿಸುತ್ತಿದೆ ಅನ್ನುವ ಮತ್ತು ಟೀವಿ ಚಾನೆಲ್‌ಗಳ ಬಿತ್ತರಿಕೆ ಬರೀ ಭ್ರಮೆಯಾ ಅನ್ನಿಸಿತ್ತು.
ಸಂಜೆ ಏಳುಗಂಟೆಗೆ ಪಾಳಿಬದಲಿಸುವ ಸಮಯ. ಆಗತಾನೇ ಬಂದ ನರ್ಸೊಬ್ಬಳು ತನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತಲೇ ಇದ್ದಳು. ಆದರೆ, ನನ್ನನ್ನು ಕಾಡಿದಂತೆ ಅವಳಿಗೂ ಈ ಸೂತಕದ ವಾತಾವರಣ ಕಾಡಿತೇ ಗೊತ್ತಿಲ್ಲ-ಒಂದೈದು ನಿಮಿಷ ತಡೆಯುವಷ್ಟು ತಡೆದು- ‘ವೆಲ್, ನಾನು ಬಂದಂದಿನಿಂದ ನೋಡುತ್ತಲೇ ಇದ್ದೇನೆ. ಯಾರೂ ಏನೂ ಮಾತಾಡುತ್ತಿಲ್ಲ. ನಾನೇ ಮಾತಾಡುತ್ತೇನೆ. ನಾನು ಶಿಕಾಗೋದವಳು. ಒಬಾಮ ಗೆದ್ದಿದ್ದಾನೆ. ಅಷ್ಟಕ್ಕಾದರೂ ಖುಷಿಪಡಲೇಬೇಕು ಅಂದವಳೇ ‘ಒಬಾಮ, ಒಬಾಮ..’ ಎಂದು ತನ್ನ ವಿಜಯದ ಸೂಚಕದಂತೆ ಒಂದು ಸಣ್ಣ ಟ್ವಿಸ್ಟ್ ಅನ್ನು ಮಾಡಿ, ‘ಹುರ್ರೇ’ ಅಂದು ನನಗೆ ಹೈಫೈ ಮಾಡಿ ಮತ್ತೆ ತನ್ನ ಕೆಲಸದಲ್ಲಿ ನಿರತಳಾದಳು.
ನಾನು ನೋಡಿದ ಈ ಒಂದು ಪ್ರಹಸನ ಇಡೀ ಅಮೆರಿಕಾವನ್ನು ಪ್ರತಿನಿಧಿಸುತ್ತದೆ ಎಂದು ಹೇಳುವುದು ಸರಿಯಲ್ಲವೇನೋ? ಹೀಗೇಕೆ? ಎಂದು ಒದ್ದಾಡುತ್ತಿದ್ದ ನನ್ನ ತಳಮಳವನ್ನರಿತುಕೊಂಡಂತೆ ಆ ಸಂಜೆ ಆ ನರ್ಸು ಹೇಳಿದಳು. ‘ಒಬಾಮಾ ಗೆದ್ದುದಕ್ಕೆ ಬಹಳ ಮಂದಿ ನಿಜವಾಗಿಯೂ ಖುಷಿಪಟ್ಟಿದ್ದಾರೆ. ಒಬಾಮಾ ಅನ್ನುವುದು ಒಂದು ಶಕ್ತಿಯಾಗಿ ಈ ಚುನಾವಣೆಯಲ್ಲಿ ಹೊರಬಂದಿದೆ. ಈ ದೇಶ ಕರಿ ಮತ್ತು ಬಿಳಿ ಎಂದು ಧ್ರುವೀಕೃತವಾದಷ್ಟು ಬೇರೆ ಎಲ್ಲಿಯೂ ಆಗಿಲ್ಲ. ಜೆಸ್ಸಿ ಜ್ಯಾಕ್‌ಸನ್ ನೋಡು. ತನ್ನ ಕರಿಯ ಓಟುಗಳ ಬೆಂಬಲದಿಂದಲೇ ಗೆಲ್ಲುತ್ತೇನೆ ಎಂದು ತಿಳಿದು ಅದನ್ನೇ ತನ್ನ ಪ್ರಚಾರದ ಅಸ್ತ್ರವಾಗಿ ಮಾಡಿಕೊಂಡಿದ್ದ. ಹ್ಯಾಲಿ ಬೆರ್ರಿಗೆ ಆಸ್ಕರ್ ಬಂದರೆ ‘ಬಣ್ಣದ ಹುಡುಗಿ’ಯ ಯಶಸ್ಸಿದು ಎಂದು ಎಲ್ಲರೂ ಬೀಗುತ್ತಾರೆ. ಆದರೆ, ಒಬಾಮ ಹಾಗೆ ಮಾಡಲಿಲ್ಲ, ಎಂದೂ ತನ್ನ ಮೈಬಣ್ಣವನ್ನು ಚುನಾವಣಾ ಪ್ರಣಾಳಿಕೆಯಾಗಿ ಬಳಸಿಕೊಳ್ಳಲಿಲ್ಲ. ಹವಾಯಿಮೂಲದ ಅಮ್ಮ, ಕೀನ್ಯಾದ ಮೂಲದ ಅಪ್ಪ, ಅಪ್ಪ ಸತ್ತಾಗ ಅಮ್ಮ ಮದುವೆಯಾದದ್ದು ಇಂಡೊನೇಷ್ಯಾದ ಮೂಲದ ವಿದ್ಯಾರ್ಥಿಯೊಬ್ಬನನ್ನು. ‘ನಮ್ಮ ಮನೆಯ ಹಬ್ಬದೂಟಗಳು ವಿಶ್ವಸಂಸ್ಥೆಯ ಊಟದಮನೆಯನ್ನು ನೆನಪು ಮಾಡುತ್ತದೆ’ ಎಂದು ತನ್ನ ವೈವಿಧ್ಯ ‘ವರ್ಣರಂಜಿತ’ ಭೂತದ ಒಬಾಮಾನನ್ನು ಕಂಡು ಕರಿಯ ಪ್ರಜೆಗಳೂ ಈತ ತಮ್ಮ ಜನಾಂಗವನ್ನು ಪ್ರತಿನಿಧಿಸುವಷ್ಟು ಕರಿಯನೇ? (Is he black enough?)ಎಂದು ಅನುಮಾನ ಪಟ್ಟಿದ್ದೂ ನಿಜ. ಈಗ ಒಬಾಮಾನನ್ನು ಇಷ್ಟಪಡುವ ನಮಗೂ ಇವನ ಗೆಲುವಿನ ಬಗ್ಗೆ ಒಂದು ಚೂರೂ ಅನುಮಾನವಿಲ್ಲದವರಿಗೂ ಈಗ ದೇಶದ ಮೊದಲ ಕುಟುಂಬವಾಗಿ ಒಬ್ಬ ಕರಿಯಮನುಷ್ಯನನ್ನು ಒಪ್ಪಿಕೊಳ್ಳಲು ಕಣ್ಣುಗಳು ಏಕ್‌ದಂ ನಿರಾಕರಿಸುತ್ತವೆ. ಅವನ ಗಟ್ಟಿ ಉಚ್ಚಾರವನ್ನು ಕೇಳಲು ಕಿವಿಗಳು ನಿರಾಕರಿಸುತ್ತವೆ. ಬಯಸಿ, ಬಯಸಿ ಮನೆ ಬದಲಾಯಿಸಿದರೂ, ಮನೆಯನ್ನು ನಿನಗೆ ಬೇಕಾದ ಹಾಗೆ ಕಟ್ಟಿದ್ದರೂ ಮತ್ತು ಆ ಮನೆ ಕಟ್ಟುವುದು ಈಗ ತೀರ ಅವಶ್ಯಕ ಅನ್ನಿಸಿದ್ದರೂ ಆ ಮನೆಯಲ್ಲಿ ಇರುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ನೋಡು, ಹಾಗೆಯೇ, ಇದೂ ಕೂಡ. ಎಲ್ಲ ಸರಿಹೋಗುತ್ತದೆ, ನೋಡು’ ಎಂದಳು.
ಚುನಾವಣೆಯ ಮುಂಚಿದ್ದುದು ಈ ಚುನಾವಣೆಯನ್ನು ಒಬಾಮಾ ಗೆದ್ದಲ್ಲಿ ಇದೊಂದು ಚಾರಿತ್ರಿಕ ವಿಜಯವಾಗುತ್ತದೆ ಅನ್ನುವ ದೊಡ್ಡ ಕನಸು, ಹಂಬಲ. ರಿಪಬ್ಲಿಕನ್ನರ ಯುದ್ಧನೀತಿ ಮತ್ತು ಸೋತು ಸುಣ್ಣವಾಗಿದ್ದ ಅಮೆರಿಕಾದ ಆರ್ಥಿಕ ನೀತಿ ಬಯಸಿದ್ದು ಬದಲಾವಣೆಯನ್ನು. ಈ ಬದಲಾವಣೆಗೆ ಒಬಾಮಾ ಮಾದರಿಯಾಗಿ ಕಂಡದ್ದು ಆಶ್ಚರ್ಯವೇನೂ ಅಲ್ಲ. ಯಾವುದೇ ರೀತಿ ನೋಡಿದರೂ ಮೆಕೇನ್ ಒಬಾಮಾನಿಗಿಂತಲೂ ಮುತ್ಸದ್ದಿ ರಾಜಕಾರಣಿ ಅನ್ನುವುದರಲ್ಲಿ ಸಂಶಯವಿರಲಿಲ್ಲ. ಆದರೆ, ತನ್ನ ಅಸ್ಖಲಿತ ವಾಕ್ಚಾತುರ್ಯದಿಂದ ಮತ್ತು ಜನ ಬಯಸುತ್ತಿರುವ ‘ಬದಲಾವಣೆ’ಯ ಪ್ರತಿನಿಧಿಯಾಗಿ ತನ್ನ ಚುನಾವಣಾ ಪ್ರಣಾಳಿಕೆಗಳ ಅನನ್ಯತೆಯಿಂದ ಒಬಾಮಾ ಗೆದ್ದ.
ಒಬಾಮಾ ಚುನಾವಣೆಯಲ್ಲಿ ಗೆದ್ದಿದ್ದು ಒಂದು ದೊಡ್ಡ ಬಜೆಟ್ ಸಿನೆಮಾ ತನ್ನೆಲ್ಲ ಪ್ರಚಾರತಂತ್ರಗಳನ್ನುಳಿಸಿಕೊಂಡು ಬಿಡುಗಡೆಗೆ ಸಿದ್ಧವಾದಂತೆ ಇತ್ತು. ರಾಜಕೀಯ ಪಂಡಿತರ ಪ್ರಕಾರ ಈತನ ಈವರೆಗಿನ ರಾಜಕೀಯ ಸಾಧನೆಗಳು ಹೇಳಿಕೊಳ್ಳುವಂತದ್ದೇನೂ ಇಲ್ಲದಿದ್ದರೂ, ಚುನಾವಣೆಯನ್ನು ಗೆಲ್ಲಲು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದ. ಈತನ ಚುನಾವಣಾಪ್ರಣಾಳಿಕೆಗಳು ಮತ್ತು ಚುನಾವಣೆಯನ್ನು ಗೆಲ್ಲುವ ಪ್ರಚಾರಕ್ರಿಯೆ ಗೆದ್ದಿದೆ. ಬರೇ ಗೆಲ್ಲುವುದಷ್ಟೇ ಸಾಧನೆಯಾಗಿದ್ದ ಕಾಲ ಮುಗಿದಿದೆ. ಒಂದು ಚರಿತ್ರೆಯನ್ನು ಮಾಡಿಯಾಗಿದೆ. ಚುನಾವಣೆ ಗೆದ್ದನಂತರದ ತನ್ನ ಶಿಕಾಗೋದಾ ಭಾಷಣದಲ್ಲಿ ‘ತನ್ನ ಗುರಿ ಮುಟ್ಟಲು ಒಂದು ವರ್ಷ ಆಗಬಹುದು, ತನ್ನ ಆಡಳಿವತಾವಧಿ ಪೂರಾ ಬೇಕಾದರೂ ಬೇಕಾಗಬಹುದು, ಅಥವಾ ಇನ್ನೊಂದು ಬಾರಿ ಅಧಿಕಾರಕ್ಕೆ ಬರಬೇಕಾದರೂ ಪರವಾಗಿಲ್ಲ. ಆದರೆ, ಗುರಿ ಸಾಧಿಸುವುದು ಮಾತ್ರ ಗ್ಯಾರಂಟಿ’ ಎಂದಿದ್ದ ಒಬಾಮಾ. ಅಧಿಕಾರಕ್ಕೆ ಬಂದ ಹದಿನಾರು ತಿಂಗಳಲ್ಲಿ ಇರಾಕಿನಿಂದ ಅಮೆರಿಕಾದ ಸೇನೆಯನ್ನು ವಾಪಸ್ಸು ಕರೆಸಿಬಿಡುತ್ತೇನೆ ಅಂದಿದ್ದಾತ ಈಗ ‘ಆ ಪ್ರಕ್ರಿಯೆಯನ್ನು ಸ್ವಲ್ಪ ರೀಫೈನ್ ಮಾಡಬೇಕಾಗಿದೆ’ ಎಂದು ಜಾಣತನದಿಂದ ಫೀಲ್ಡಿಗಿಳಿದ ರಾಜಕಾರಣಿಯಂತೆ ಮಾತಾಡಿದ್ದ.
ಒಬಾಮಾನ ಮುಂದಿರುವ ಸವಾಲು ಕಠಿಣವಾದದ್ದು ಅನ್ನುವುದರಲ್ಲಿ ಅನುಮಾನವೇನಿಲ್ಲ. ದೊಡ್ಡ ದೊಡ್ಡ ಬ್ಯಾಂಕುಗಳ ಕುಸಿತ, ರಿಯಲ್ ಎಸ್ಟೇಟ್ ಸೋಲು, ಸತ್ತ ಕುದುರೆಗೆ ಛಡಿ ಬಡಿದಂತೆ ಬಡಿದು ಉದ್ದೀಪಿಸಲು ಉತ್ತೇಜನಾ ಪ್ಯಾಕೇಜ್ ಅನ್ನು ಉಪಯೋಗಿಸಲು ಪ್ರಯತ್ನ ಪಡುತ್ತಿರುವ ಕಾರ್ ಕಂಪೆನಿಗಳು, ದಿನೇದಿನೇ ಹೆಚ್ಚಾಗುತ್ತಿರುವ ನಿರುದ್ಯೋಗ, ಈ ಉತ್ತೇಜನಾ ಪ್ಯಾಕೇಜಿನ ದುರುಪಯೋಗ ಮುಂತಾದುವುಗಳಿಂದ ಅಮೆರಿಕಾ ಬಸವಳಿದಿದೆ.
ಆದರೆ, ಈಗ ಸಿನೆಮಾ ಬಿಡುಗಡೆಯಾಗಿದೆಯಷ್ಟೇ. ಇದು ಅಂತಿಂತ ಸಿನೆಮಾ ಅಲ್ಲ. ವರ್ಣರಂಜಿತ ದೊಡ್ಡ ಬಜೆಟ್ ಸಿನೆಮಾ. ಸಿನೆಮಾದ ಯಶಸ್ಸನ್ನು ಕಾದುನೋದಬೇಕಷ್ಟೇ. ಈಗ ಈ ಒಬಾಮಾನ ‘ಉತ್ತೇಜನಾ ಪ್ಯಾಕೆಜ್’ಗೆ ಸಿಕ್ಕಿರುವ ಪ್ರತಿಕ್ರಿಯೆ ನಮ್ಮ ಗಾಂಧಿನಗರದ ನಿರ್ಮಾಪಕರು ‘ಅಮೋಘ ಎರಡನೇ ವಾರ’ ಎಂದು ಹೇಳಿಕೊಳ್ಳುವ ಸಿನೆಮಾದ ಯಶಸ್ಸಿನ ಮಾಪಕದಂತೆಯೇ ಇದೆ. ಯಾರಿಗೂ ಯಾವುದೂ ಸ್ಪಷ್ಟವಿಲ್ಲ.
ಒಬಾಮ ಎಂತಹ ಆಡಳಿತಗಾರ ಅನ್ನುವುದು ಅಷ್ಟು ಸ್ಪಷ್ಟವಾಗಿಲ್ಲದಿರಬಹುದು. ಆದರೆ ಆತ ಚಾಣಾಕ್ಷ ರಾಜಕಾರಣಿಯೆನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲದಿದ್ದರೆ ಸ್ಟೇಟ್ ಸೆನೆಟರ್ ಆದ ಕೆಲವೇ ವರ್ಷಗಳಲ್ಲಿ ಅಮೆರಿಕಾದಂತ ದೇಶದ ಅಧ್ಯಕ್ಷನಾಗುವುದು ಅಷ್ಟು ಸುಲಭವಲ್ಲ. ಆದರೆ, ಅವನ ಗೆಲುವು ಸೋಲುಗಳು ಅವನ ಬಣ್ಣದಿಂದ ನಿರ್ಧರಿತವಾಗದಿರುವುದರ ಮೇಲೆ ಅಮೆರಿಕದ ಪ್ರಜಾತಂತ್ರದ ಮತ್ತು ವರ್ಣಸಹಿಷ್ಣುತೆಯ ಗೆಲುವಿದೆ.
ಸಿನೆಮಾ ಬಿಡುಗಡೆಯಾದಾಗ ಯಶಸ್ಸಿನ ಬಗ್ಗೆ ಅನುಮಾನವಿದ್ದರೂ ಬಿಡುಗಡೆಯಾದ ದಿನದ ಸಂಭ್ರಮಕ್ಕೆ, ಖುಷಿಗೆ ಬರವೇ?
Saturday, March 21, 2009
Subscribe to:
Post Comments (Atom)
No comments:
Post a Comment