Monday, February 22, 2010

ಮಾಸ್ತಿ ಎಂಬ ಕೆಟಲಿಸ್ಟ್.

ಮಾಸ್ತಿಯವರ ಕಥಾಸಾಹಿತ್ಯ ನನಗೆ ಮತ್ತು ನನ್ನ ಪೀಳಿಗೆಯವರಿಗೆ ಎಷ್ಟು ಸಂಗತವಾಗುತ್ತದೆ ಎನ್ನುವುದನ್ನು ಅರ್ಥೈಸುವುದು ಅಷ್ಟು ಸುಲಭದ ಕೆಲಸವಲ್ಲ. ಮೌಖಿಕ-ಶ್ರವ್ಯ ಪರಂಪರೆಯ ಕಥನಕ್ರಮ ಎಂದು ಲಿಖಿತ ಕ್ರಿಯೆಯಾಯಿತೋ ಅಲ್ಲಿಗೆ ಮಾಸ್ತಿ ಪರಂಪರೆ ಬೇರೆ ಒಂದು ಮಗ್ಗುಲನ್ನು ಪಡೆದುಕೊಂಡಿತು ಎಂದು ನನಗನಿಸುತ್ತದೆ. ವೈಶಂಪಾಯನನು ಜನಮೇಜನರಾಯನಿಗೆ ಹೇಳಿರಲಿ, ಟಾಂಗಾ ಹುಸೇನ್ ಸಾಬಿ ಮಾಸ್ತಿಯವರಿಗೆ ನಲವತ್ತೈದು ವರ್ಷದ ಹಿಂದೆ ಹೇಳಿದ ಕಥೆಯಿರಲಿ, ಸೌದೆ ಅಂಗಡಿ ಸುಬ್ಬಯ್ಯನವರಾಗಲೀ ಅಥವಾ ಅವರ ಮಿತ್ರ ಲಾಯರೊಬ್ಬರಾಗಲೀ ಹೇಳಿದ ಕಥೆಯನ್ನು ನಮಗೆ ಮುಟ್ಟಿಸುವುದು ಪುಣ್ಯದ ಕೆಲಸ ಎಂದು ಮಾಸ್ತಿಯವರು ಎಂದಿಗೂ ಭಾವಿಸಿದ್ದರು. ಮತ್ತು ಅದನ್ನೇ ಅವರು ಮಾಡಿದ್ದರು, ಕೂಡ.

ಮಾಸ್ತಿಯವರ ಬಾದಶಹನ ನ್ಯಾಯ, ಶ್ರೀಕೃಷ್ಣನ ಅಂತಿಮ ದರ್ಶನ, ಕುಚೇಲನ ಮರಿಮಗ ಅಥವಾ ಅರ್ವಾಚೀನ ಆಂಗ್ಲಶಕುಂತಲೆ ಇಂತಹ ಕತೆಗಳನ್ನು ಮೊಟ್ಟಮೊದಲ ಬಾರಿಗೆ ಓದಿದಾಗ ಪ್ರಾಮಾಣಿಕವಾಗಿ ಬಂದ ನೆನೆಪೆಂದರೆ ನಮ್ಮಜ್ಜ ತಾವು ಕೇಳಿದ, ತಾವು ಓದಿದ ಅಥವಾ ಯಾವುದೋ ವರ್ತಮಾನಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಕೂಡ ಚಿಕ್ಕಮಕ್ಕಳಿಗೂ ಅರ್ಥವಾಗುವಂತೆ ಸೊಗಸಾಗಿ ಹೇಳುತ್ತಿದ್ದುದು. ಅಜ್ಜ ಹೇಳಿದ ಮಹಾಭಾರತದ ಪ್ರಸಂಗಗಳಾಗಲೀ, ಮಾಸ್ಟರ್ ಹಾಚಿಕಾರನ್ ಆಗಲೀ, ಸ್ಯಾಂಕೊ ಪ್ಯಾಂಜ಼ನ ಕತೆಯಾಗಲೀ ‘ನೀರೊಳಗಿರ್ದುಂ ಬೆಮರ್ದಂ’ ಅಥವಾ ‘ದ ಮೋಸ್ಟ್ ಅನ್‌ಕೈಂಡೆಸ್ಟ್ ಕಟ್ ಆಫ಼್ ಅಲ್’ ಆಗಲೀ ನನ್ನ ತಲೆಯೊಳಗೆ ಮೂರುದಶಕಗಳ ನಂತರವೂ ಅಳಿಯದೇ ಕೂತಿರುವುದು ಪ್ರಾಯಶಃ ಆ ಕತೆಗಳು, ಆ ವಾಕ್ಯಸರಣಿಗಳು ನನ್ನೊಳಗೇ ಅನುರಣಿಸುವ ಗುಣವನ್ನು ಹೊಂದಿರುವುದರಿಂದ ಅಥವಾ ಅದೇ ಕತೆಗಳನ್ನು ನಾನು ನನ್ನ ಸ್ನೇಹಿತರಿಗೂ ನನ್ನ ಮಕ್ಕಳಿಗೂ ಮತ್ತೆ ಮತ್ತೆ ಹೇಳಬಹುದಾಗಿರುವುದರಿಂದ. ಅಲ್ಲಿಇಂಥದ್ದು ಕತೆಯಾಗಬಲ್ಲದು, ಇಂಥದ್ದು ಕತೆಯಾಗಬಾರದು ಎನ್ನುವ ಒಂದು ಹೊರೆಯಿರುತ್ತಿರಲಿಲ್ಲ. ಕತೆ ಹೇಳುವಾತನಿಗೆ ತನ್ನ ಅನುಭವವನ್ನು ಅಥವಾ ತಾನು ಕಂಡ ಅಥವಾ ಕೇಳಿದ ಘಟನೆಯನ್ನು ಇನ್ನೊಬ್ಬರಿಗೆ ಹಂಚಿಕೊಂಡು ಅದನ್ನು ಮುಂದಕ್ಕೆ ದಾಟಿಸುವುದಷ್ಟೇ ಮುಖ್ಯವಾಗಿತ್ತು.

ಮಾಸ್ತಿಯವರು ಮಾಡಿದ್ದೂ ಇದೇ. ಅವರೇ ಹೇಳಿದಂತೆ ‘ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯ’ ಆಶಯ ಅವರ ಕಥಾಪ್ರಪಂಚದುದ್ದಕ್ಕೂ ಕೆಲಸಮಾಡಿದೆ. ಇದು ಬಹಳ ಪುಣ್ಯದ ಕೆಲಸ. ಅಂದರೆ ಜತೆಯ ಜೀವವನ್ನು ಸಹಾನುಭೂತಿಯಿಂದ ನೋಡುವುದಷ್ಟೇ ಅಲ್ಲ ಅದನ್ನು ಅಷ್ಟೇ ಸಹಾನುಭೂತಿಯಿಂದ ಮತ್ತೊಬ್ಬರಿಗೆ ತಲುಪಿಸುವುದನ್ನು ಒಂದು ಪುಣ್ಯದ ಕೆಲಸ ಎಂದು ಅವರು ನಂಬಿದ್ದರು. ಮಾಸ್ತಿಯವರು ಇಲ್ಲಿ ಒಂದು ರಾಸಾಯನಿಕ ಕ್ರಿಯೆಯಲ್ಲಿಯ ಕೆಟಲಿಸ್ಟಿನ ಹಾಗೆ ಕ್ರಿಯೆಯ ಅಂದಗೆಡದಂತೆ, ಬಣ್ಣಗೆಡದಂತೆ ಆದರೆ ಕೇಳುಗನನ್ನೂ ಮನಸಿನಲ್ಲಿ ಇಟ್ಟುಕೊಂಡು ಕತೆ ಹೇಳುತ್ತಿದ್ದರು. ಕತೆ ಹೇಳುವುದೇ ಕೇಳುವುದಕ್ಕೋಸ್ಕರ ಎನ್ನುವ ಎಚ್ಚರ ಅವರಲ್ಲಿ ಎಂದಿಗೂ ಜೀವಂತವಾಗಿರುತ್ತಿತ್ತು. ಅವರಲ್ಲಿನ ಕಲಾವಿದ ಕೆಟಲಿಸ್ಟ್‌ನ ಕೆಲಸವನ್ನು ಮಾತ್ರ ಮಾಡುತ್ತಿದ್ದ.

ಒಂದು ಉದಾಹರಣೆಯ ಮೂಲಕ ನೋಡಿದರೆ, ತತ್‌ಕ್ಷಣಕ್ಕೆ ಆಚಾರ್ಯವಂತ ಅಯ್ಯಂಗಾರ್ರು ಕತೆ ನೆನಪಿಗೆ ಬರುತ್ತದೆ. ಒಬ್ಬ ಸಂಪ್ರದಾಯಸ್ಥ ಅಯ್ಯಂಗಾರರು ಒಬ್ಬ ಕ್ರಿಶ್ಚಿಯನ್ ನರ್ಸೊಬ್ಬಳ ಜತೆ ಮದುವೆ ಇತ್ಯಾದಿ ಬಂದನಗಳಿಲ್ಲದೆ ಒಂದೇ ಸೂರಿನಡಿ ಗಂಡಹೆಂಡಿರಂತೆಯೇ ಬದುಕುತ್ತಿದ್ದುದನ್ನು ಮಾಸ್ತಿಯವರು ಇದೊಂದು ದೊಡ್ಡವಿಷಯವೇ ಅಲ್ಲವೇನೋ ಅನ್ನುವಂತೆ ಬರೆಯುತ್ತಾರೆ. ಅಂತದೇ ವಸ್ತುವನ್ನೊಳಗೊಂಡ ನಂತರದ ಪೀಳಿಗೆಯ ಕತೆಗಾರರ ಕತೆಗಳು ಸುಮ್ಮಸುಮ್ಮನೆ ಸಂಕೀರ್ಣವಾಗಿಬಿಟ್ಟವಾ ಎಂದೆನಿಸಬಹುದು. ಆದರೆ, ಈ ಕೆಟಲಿಸ್ಟನ ಮಾದರಿ, ರೂಪಕ, ಅರ್ಥವನ್ನು ಇನ್ನೂ ಒಂದಿಷ್ಟು ಹಿಂಜಿದಲ್ಲಿ ಕೆಟಲಿಸ್ಟು ರಾಸಾಯನಿಕ ಕ್ರಿಯೆಯಲ್ಲಿ ಪಾಲುಗೊಳ್ಳದೇ ಕ್ರಿಯೆಯ ಉತ್ಕರ್ಷವನ್ನು ಹೆಚ್ಚಿಸುತ್ತದೆ ಎಂದೂ ಭಾವಿಸಬಹುದು. ಆಗ ಮಾಸ್ತಿಯವರ ಈ ಜತೆಯಲ್ಲ್ಲಿನ ಜೀವವನ್ನು ಸಹಾನುಭೂತಿಯಿಂದ ನೋಡುವ ಕ್ರಿಯೆ ಆ ಸಹಾನುಭೂತಿಯೊಂದನ್ನು ಬಿಟ್ಟು ಆ ಜೀವಿಯ ಬೇರೆ ಯಾವ ಮಗ್ಗುಲನ್ನೂ ನೋಡದ, ಸೆರೆಹಿಡಿಯದ ಕೆಲವೊಮ್ಮೆ ಮನುಷ್ಯಭಾವನೆಗಳ ಸುಲಭೀಕೃತ ಪರಿಜು ಮಾತ್ರವೇನೋ ಎಂದನಿಸಬಹುದು. ಮಾಸ್ತಿಯವರಿಗೆ ಕೇಳುಗ ಬಹಳ ಮುಖ್ಯವಾಗಿರುವುದರಿಂದ ವಿವಾಹೇತರ ಸಂಬಂಧಗಳು, ಹಾದರ, ಇನ್‌ಸೆಸ್ಟ್ ಇಂಥವುಗಳನ್ನು ಹೇಳುವಾಗ ಕೂಡ ಅವುಗಳನ್ನು ಅನುಭವಿಸುತ್ತಿರುವ ಜತೆಜೀವಿಗಳ ಮೇಲಿನ ಕಂಪ್ಯಾಶನ್ ಮಾತ್ರ ಮುಖ್ಯವಾಗುತ್ತದೆ. ಇದರಿಂದ ಮಾಸ್ತಿ ಅನ್ನುವ ಜೀವಕ್ಕೆ ಆದ ಅನುಭವವೇನು, ಆ ಜೀವ ಈ ಜತೆಜೀವಿಗಳನ್ನು ಸಹಾನುಭೂತಿಯಿಂದ ನೋಡುವುದು, ಬರೆಯುವುದು ಬಿಟ್ಟರೆ ಇನ್ನೇನೂ ಮಾಡಲಾರದೇ ಹೋಯಿತೇ ಎಂದು ಅನುಮಾನ ಬರಬಹುದು.

ನಮ್ಮ ಪೀಳಿಗೆಯವರನ್ನು ಹಿಡಿದು ನಂತರ ಬರೆದ ಅನೇಕ ಕತೆಗಾರರು ಮಾಡಿದ್ದೇನೆಂದರೆ ಈ ರಾಸಾಯನಿಕ ಕ್ರಿಯೆಯನ್ನೇ ಬಹಳ ಸಂಕೀರ್ಣಗೊಳಿಸಿದ್ದು. ಕತೆಯನ್ನು ಹೇಳದೇ ಬರೇ ಬರೆಯತೊಡಗಿದ್ದು. ಈ ಲೇಖನಿ, ಕಾಗದಗಳು ಒಂದು ರೀತಿ ಕತೆಗಾರ ನೇರವಾಗಿ ಕೇಳುಗನನ್ನು ಮುಂದೆ ಕೂರಿಸಿಕೊಂಡು ಕತೆಹೇಳಬೇಕಾದಾಗ ಇರಬೇಕಾದ ಮಾಡೆಸ್ಟಿ ಮತ್ತು ಇನ್‌ಹಿಬಿಷನ್‌ಗಳನ್ನು ತೆಗೆದುಹಾಕಿಬಿಡುತ್ತದೆ. ಎಂದು ಈ ಕ್ರಿಯೆ ಸಂವಾದಿಯಾಗುವುದಿಲ್ಲವೋ ಅಂದು ಕತೆಗಾರನಿಗೆ ನಾನು ನನ್ನ ಓದುಗನಿಗೆ ಬರೆದದ್ದಕ್ಕೆಲ್ಲಾ ಅಕೌಂಟಬಲ್ ಆಗಬೇಕಿಲ್ಲ ಅನ್ನುವ ತುಂಟತನವೊಂದು ತಿಳಿದೋ, ತಿಳಿಯದೋ ಕೆಲಸ ಮಾಡಲು ಶುರುಮಾಡುತ್ತದೆ. ಆಗಾಗ ಅಮೂರ್ತವಾಗುತ್ತೇವೆ, ಪೋಲಿಯಾಗುತ್ತೇವೆ, ಸ್ವಗತವೆಲ್ಲವೂ ಮಾತಾಗುತ್ತದೆ. ಕೇಳಲಾರದ್ದನ್ನು ಓದಿ ತಿಳಿಯುತ್ತಾನೆ ಎನ್ನುವುದು ಅರಿವಾದ ತಕ್ಷಣ ಹೇಳಲಾರದ್ದು ಬರೆಯಲ್ಪಡುತ್ತದೆ. ಮಾಸ್ತಿಯವರ ಜತೆಯಲ್ಲಿನ ಜೀವಿಗಳೇ ನಾವಾಗಿದ್ದೇವೆ, ಹಾಗಾಗಿ ಈ ಜತೆಯ ಜೀವಿ ತನ್ನ ಕತೆಯನ್ನು ತಾನೇ ಹೇಳಿಕೊಂಡಾಗ ಏನಾಗಬಹುದು ಎನ್ನುವುದಕ್ಕೆ ನಂತರದ ಕತೆಗಳು ಸಾಕ್ಷಿಯಾಗಿ ನಿಂತಿವೆ.

ಇಲ್ಲಿ ಏನಾಗಿದೆ ಎಂದರೆ ಕೆಟಲಿಸ್ಟ್ ರಾಸಾಯನಿಕ ಕ್ರಿಯೆಯ ವೇಗವನ್ನು ಉತ್ಕರ್ಷಿಸುವುದಷ್ಟೇ ಅಲ್ಲ ಒಂದು ಹತೋಟಿಯಲ್ಲಿಟ್ತಿರುತ್ತಿತ್ತು. ಈ ಕ್ರಿಯೆಯ ಅಂತ್ಯದ ಬಗ್ಗೆ ಒಂದು ಜವಾಬ್ದಾರಿಯಿರುತ್ತಿತ್ತು, ಹೆಚ್ಚುಕಮ್ಮಿಯಾದರೆ ಆಸ್ಫೋಟವಾಗುತ್ತದೇನೋ ಅನ್ನುವ ಹೆದರಿಕೆಯಿರುತ್ತಿತ್ತೇನೋ.

ಇನ್ನೊಂದು ಮುಖ್ಯವಾದ ಬದಲಾವಣೆಯೆಂದರೆ ಮಾಸ್ತಿಯವರಿಗೆ ಎಂಥವನ್ನೂ ಕತೆಮಾಡುವ ಬಗ್ಗೆ ನಂಬಿಕೆಯಿದ್ದದ್ದು. ಬೇಬಿಲೋನನ ಕುಮಾರಿಯಾಗಲೀ, ಕಿಂಗ್ ಲಿಯರ್ ಆಗಲೀ ಅಥವಾ ಇಂಗ್ಲೆಂಡಿನ ಯಾವುದೋ ಪತ್ರಿಕೆಯಲ್ಲಿ ಬಂದ ಸುದ್ದಿಯಾಗಲೀ ಅದನ್ನು ಕತೆಯಾಗಿ ಮಾಸ್ತಿಯವರು ಹೇಳುತ್ತಿದ್ದರು. ವ್ಯಕ್ತಿಚಿತ್ರಗಳು, ಲಲಿತಪ್ರಬಂದಗಳು, ನುಡಿಚಿತ್ರಗಳು ಅಥವಾ ಹರಟೆಗಳೆಂದು ಈಗಿನ ಪರಿಭಾಶೆಯಲ್ಲಿ ವರ್ಗೀಕರಿಸಬಲ್ಲುವುದೆಲ್ಲಾ ಮಾಸ್ತಿಯವರ ಕೈಯಲ್ಲಿ ಕತೆಯಾಗಿರುವುದು ನಂತರ ಬರೆದವರಿಗೆ ಅದು ಸಾಧ್ಯವಾಗದಿರುವುದು ಒಂದು ವಿಶೇಷ. ಇದಕ್ಕೆ ಕಾರಣ ಮತ್ತೆ ಕತೆಗೆ ಸ್ವ- ಸ್ವರೂಪವನ್ನು ನಾವು ಕತೆಗಾರರು ಅವಲಂಬಿಸಿರುವುದು. ಅಂದರೆ, ನನ್ನ ಜೀವನದಲ್ಲಿ ನನಗೆ ಗಾಡವಾಗಿ ತಟ್ಟದೇ ಇರದಿದ್ದನ್ನು ನಾನು ಕತೆಮಾಡಲಾಗುವುದಿಲ್ಲ ಎನ್ನುವ ಪರಿಕಲ್ಪನೆಯಲ್ಲಿ ನಾವಿರುವುದು. ಈ ಗಾಢವಾಗಿ ತಟ್ಟುವ ಕ್ರಿಯೆಯಲ್ಲಿ ಭೌತಿಕವಾಗಿ ನಾವಿಲ್ಲದೇ ಹೋದರೆ ಅದು ಅನುಭವಶೂನ್ಯವಾದದ್ದು ಎನ್ನುವ ಪೂರ್ವಗ್ರಹವನ್ನು ಮತ್ತು ನಂಬಿಕೆಯನ್ನು ನಾವು ಬೆಳೆಸಿಕೊಂಡಿರುವುದು. ಕೆಲವೊಮ್ಮೆ ನಮ್ಮ ಗಟ್ಟಿ ಚರ್ಮಕ್ಕೆ ಬಹಳಷ್ಟು ಗಾಢವಾಗಿ ತಟ್ಟುವುದೇ ಇಲ್ಲ. ಈ ತಟ್ಟುವ ಕ್ರಿಯೆಗೆ ದೇಶ-ಕಾಲದ ಸಾಮೀಪ್ಯವನ್ನು ನಾವು ಬಯಸುವುದರಿಂದ ಕುಚೇಲನಾಗಲೀ, ಕಿಂಗ್ ಲಿಯರ್ ಅಗಲೀ, ಬೆಬಿಲೋನಿಯವಾಗಲೀ ಇಂಗ್ಲೆಂಡ್ ಆಗಲೀ ಇಂದು ಕಥಾವಸ್ತುವಾದರೆ ಹೆಚ್ಚುಕಮ್ಮಿ ಬಾಲಿಶವೆನಿಸಿಕೊಳ್ಳುವಷ್ಟು ಸತ್ಯವಾಗಿದೆ.

2 comments:

  1. ಗುರು ಪ್ರಸಾದ್ ಅವರೇ, ಮಾಸ್ತಿಯವರ ಬಗ್ಗೆ ತುಂಬಾ ಚನಾಗಿ ವಿವರಿಸಿದ್ದೀರಾ, ಮಾಸ್ತಿಯವರ ವಿಶೇಷತೆಯೇ ಹಾಗೆ,
    ಅವರ ಬಗ್ಗೆ ಇನ್ನು ಹೆಚ್ಚಿನ ವಿವರಗಳನ್ನು ಬರೆಯಿರಿ, ದನ್ಯವಾದಗಳು.

    ReplyDelete
  2. ಮಾಸ್ತಿಯವರ ಬರಹಗಳು ಮನುಷ್ಯ ಸಂಬಂಧಗಳಲ್ಲಿ ನಂಬಿಕೆ ನಶಿಸುತ್ತಿರುವ ಈ ಕಾಲದಲ್ಲಿ, ಹಣ ಅಧಿಕಾರಗಳೆ ಮುಖ್ಯವಾಗುತ್ತಿರುವ ದಿನಗಳಲ್ಲಿ, ಮನುಷ್ಯತ್ವ ಉಳಿಸಿಕೊಳ್ಳಲು ಹೆಣಗಬೇಕಾಗಿರುವ ಈ ಪ್ರಕ್ಷುಬ್ದ ಸಂದರ್ಭದಲ್ಲಿ, ಮನುಷ್ಯತ್ವ ಉಳಿಸಿಕೊಳ್ಳಲು ಬೇಕಾದ ನಂಬಿಕೆಯನ್ನು ಧೈರ್ಯವನ್ನು, ಸ್ಥೈರ್ಯವನ್ನು ಕೊಡುತ್ತಿದೆ. ಬ್ಲಾಗ್ ಲೋಕದಲ್ಲಿ ಸಮಯೋಚಿತವಾಗಿ ಈ ಲೇಖನ ಮೂಡಿಬಂದಿದೆ.
    ಮಾಸ್ತಿಯವರು ನಮ್ಮ ಸಂಸ್ಕ್ರತಿಯನ್ನು ಎತ್ತಿ ಹಿಡಿಯುತ್ತಾರೆ. ಜನರ ಆಚರಣೆಗಳಿಗಿಂತ ಮನುಷ್ಯ ಸಂಬಂಧಗಳ ಮೇಲೆ ಅವರಿಗೆ ಜಾಸ್ತಿ ನಂಬಿಕೆ. ಮನುಷ್ಯನ ವಿವೇಕವೇ ಅವರ ಕಥೆಗಳ ಪ್ರಮುಖ ಸೆಲೆ. ಹಾಗೆ ಮನುಷ್ಯನನ್ನೇ ದೇವರಾಗಿಸುತ್ತರೆ.
    ಅವರ ಕಾವ್ಯಗಳಿಗೆ ಅಷ್ಟೊಂದು ಗಮನ ಸಿಕ್ಕಿಲ್ಲ (ಗೌಡರ ಮಲ್ಲಿ, ರಾಮ ನವಮಿ ಅವರಲ್ಲಿಯ ಶ್ರೇಷ್ಟ ಕವಿತ್ವಕ್ಕೆ ಉತ್ತಮ ಉದಾಹರಣೆಗಳು).
    ಅಪಾಯವನ್ನು ಎದುರಿಸಲಾರದ ಬರಹಗಾರ, ದೊಡ್ಡ ಲೇಖಕನೂ ಆಗಲಾರ. ಅವರು ತಮ್ಮ ೮೦ ನೇ ವಯಸ್ಸಿನಲ್ಲಿ ಬರೆದ "ಆಚಾರವಂತ ಅಯ್ಯಂಗಾರ್ರು" ಅದರಲ್ಲಿ ಬರುವ ಅಯ್ಯಂಗಾರ್ರು ಮತ್ತು ಕ್ರಿಶ್ಚ್ಯನ್ ನರ್ಸ್ ನಡುವಿನ ಸಂಬಂಧ ಒಂದು ಸ್ಯಾಂಪಲ್ ಆಗಿ ಸ್ವೀಕರಿಸಿದರೂ ಸಾಕು, ಅವರೆಂತಹ ಅಪಾಯಗಳನ್ನು ಮೀರಿ ಮಾನವೀಯತೆಯನ್ನು ಎತ್ತಿಹಿಡಿದರು ಎಂಬ ಅರಿವಾಗುತ್ತದೆ. ಅದಕ್ಕೆ "ಮಾಸ್ತಿ ಕನ್ನಡದ ಆಸ್ತಿ". ಇಂತಹ ಬರಹಗಳು ಮುಂದೆಯೂ ಬರಲಿ.

    ReplyDelete