Tuesday, February 9, 2010

ಇಲ್ಲಿ ಸಾವಧಾನವೂ ಅವಸರವೇ

ಶಾಂತಿನಾಥ ದೇಸಾಯಿಯವರು ತಮ್ಮ ಕೊನೆಯ ಕಾದಂಬರಿ ‘ಓಂ ಣಮೋ’ ವನ್ನು ಮೂಗಿನ ನಾಳದಲ್ಲಿ ಆಕ್ಸಿಜನನ್ನು ಇಟ್ತುಕೊಂಡೇ ಬರೆದರಂತೆ. ಅನೇಕ ವರ್ಷಗಳೇ ಬರೆದರೂ ಕೊನೆಯ ಪರಿಜನ್ನು ಪೂರಕ್ಕೆ ಪೂರ ಯಾವಾಗ ಏನಾಗಿಬಿಡುತ್ತದೆಯೋ ಎಂಬ ಅನಿಶ್ಚತತೆಯಲ್ಲಿಯೇ ಬರೆಯಬೇಕಾಗಿ ಬಂತಂತೆ. ಹಾಗೆಯೇ ಎ ಎನ್ ಮೂರ್ತಿರಾಯರು ಚಿಕ್ಕಂದಿನಲ್ಲಿದ್ದಾಗ ಯಾವುದಾದರೂ ಪುಸ್ತಕ ದೊರೆತರೆ ಪುಸ್ತಕ ಓದಿ ಮುಗಿಸುವ ತನಕ ಸಮಾಧನವಿರುತ್ತಿರಲಿಲ್ಲವಂತೆ. ಕಾರಣ ಆ ಪುಸ್ತಕ ಇನ್ನೊಮ್ಮೆ ಸಿಗುವುದಿಲ್ಲವೆಂಬ ಹೆದರಿಕೆ. ಪುಸ್ತಕವನ್ನು ದುಡ್ಡು ಕೊಳ್ಳುವ ತಾಕತ್ತಿರಲಿಲ್ಲ.

ಓದು, ಬರೆಹ ಅನಿವಾರ್ಯವಾಗಿತ್ತು,

* * *

ಕಲೆಯೆಂಬುದು ಒಂದು ಕಾಲದಲ್ಲಿ ಸಾವಧಾನದ ಕ್ರಿಯೆಯಾಗಿತ್ತು. ಹವ್ಯಾಸವಾಗಿತ್ತು. ನಮ್ಮ ವಿರಾಮದ ಸಮಯವನ್ನು ಅದು ತುಂಬುತ್ತಿತ್ತು. ದೈನಿಕಕ್ಕೆ ಜಡ್ಡುಗಟ್ಟಿದ ಮನಸ್ಸು ಒಂದು ಪುಸ್ತಕ ಓದುವುದರಿಂದಲೋ, ಸಿನೆಮಾ ನೋಡುವುದರಿಂದಲೋ ಅಥವಾ ಒಂದು ನಾಟಕ ನೋಡುವುದರಿಂದಲೋ ಮುದಗೊಳ್ಳುತ್ತಿತ್ತು. ಸಿನೆಮಾ ನೋಡುವ ಕ್ರಿಯೆ ಒಂದು ಕುಟುಂಬದ ಇವೆಂಟ್ ಆಗುತ್ತಿತ್ತು. ಮೇಲಾಗಿ ಕಲೆಗೆ, ಸಂಸ್ಕೃತಿಗೆ ಒಂದು ಪ್ರಾದೇಶಿಕತೆ ಇತ್ತು. ಬರೇ ರಾಜಕುಮಾರನ ಸಿನೆಮಾ ಮಾತ್ರ ನೋಡಿ, ಕಾರಂತರ ಅಥವಾ ತ್ರಿವೇಣಿಯವರುಗಳ ಕಾದಂಬರಿಗಳನ್ನು ಓದಿ ಸಂತಸ ಪಡುವ ಕಾಲವಿತ್ತು. ಅಜ್ಞಾನ ವರವಂತೆ.

ನಾವು ಎಂದು ನಮ್ಮನ್ನು ನಾವು ಇಡೀ ಜಗತ್ತಿಗೆ, ಅನೇಕ ಸೃಜನಶೀಲ ಸಾಧ್ಯತೆಗಳಿಗೆಗೆ ತೆರೆದಿಟ್ಟುಕೊಂಡೆವೋ ಅಂದಿನಿಂದ ಶುರುವಾಯಿತು, ಈ ಸಾವಧಾನದಲ್ಲಿ ನಡೆಯಬೇಕಾದ ಕ್ರಿಯೆಗಳು ಒಂದು ರೀತಿ ತಹತಹದ ವಿಷಯವಾಗಿಬಿಟ್ಟವು.

ಈಗ ಮನರಂಜನೆಯೆನ್ನಿ, ವಿರಾಮದ ಓದೆನ್ನಿ, ಸಿನೆಮಾ ಎನ್ನಿ ಪ್ರತಿಯೊಂದರಲ್ಲೂ ವೈವಿದ್ಯಕ್ಕೇ ಪ್ರಾಧಾನ್ಯ. ಈತ ಬೇರೆ ರೀತಿ ಬರೆಯುತ್ತಾನೆ, ಹೊಸಾ ತರಾ ಚಿತ್ರಿಸಿದ್ದೇವೆ, ಎನ್ನುವ ಮಾತುಗಳನ್ನು ನಾವು ಬಹಳ ಕೇಳುತ್ತೇವೆ. ಮುದ್ರಣ ಕ್ರಾಂತಿಯಿಂದ ಪುಸ್ತಕಗಳ ಹಿಂಡುಹಿಂಡೇ ದೊರಕುತ್ತಿವೆ. ಪತ್ರಿಕ ಕಛೇರಿಯ ಸಾದರ-ಸ್ವೀಕಾರ ವಿಭಾಗಕ್ಕೆ ಬಂದುಬೀಳುವ ಪುಸ್ತಕಗಳ ಹೊರೆಯನ್ನು ಸುಮ್ಮನೇ ಕಣ್ಣಾಡಿಸಲೂ ಯಾರಿಗೂ ಸಮಯವಿಲ್ಲ. ಹಾಗಾಗಿ ‘ಒಳ್ಳೆಯ’ ಓದಿನ ಪ್ರಿಸ್ಕ್ರಿಪ್ಷನ್‌ಗೆಂದು ಓದುಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕದಂಗಡಿಯವರು ಒದಗಿಸುವ ಟಾಪ್-೧೦ ಅಥವಾ ಅಚ್ಚುಮೆಚ್ಚು ವಿಭಾಗಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಅಲ್ಲಿನ ಬೆಸ್ಟ್‌ಸೆಲ್ಲರ್‌ಗಳಿಗೆ ಮಾಪಕ ಯಾವುದು ಎನ್ನುವುದು ಬ್ರಹ್ಮರಹಸ್ಯ.

ಹವ್ಯಾಸವಾಗಿದ್ದ ಓದು ಅವಶ್ಯಕತೆ ಮತ್ತು ಅನಿವಾರ್ಯತೆ ಮತ್ತು ಚಟ ಹೇಗಾಗಿದೆ ಎನ್ನುವುದನ್ನು ನಾವು ಒಮ್ಮೆ ನೋಡಬೇಕಾಗಿದೆ. ಇದು ದೇಸಾಯರ ಅಥವಾ ಮೂರ್ತಿರಾಯರ ಅನಿವಾರ್ಯತೆಗಿಂತ ಭಿನ್ನವಾದದ್ದು ಎಂಬುದನ್ನೂ ನಾವು ಅರಿಯಬೇಕಾಗಿದೆ.

* * *

ಒಂದೇ ನಿಟ್ಟಿನ ಓದು, ಸಾವಧಾನದ ಓದು, ಧ್ಯಾನ ಇರಲಿ, ಓದಿಗೆ ಪುಸ್ತಕ ಬೇಕು ಎನ್ನುವ ನಮ್ಮ ನಂಬಿಕೆಯನ್ನೇ ನಾವು ಮತ್ತೆ ಪರಿಶೀಲಿಸಿ ನೋಡಬೇಕಾಗಿದೆ. ನಾನು ಡ್ರೈವ್ ಮಾಡುತ್ತಿದ್ದಾಗ ಆದಷ್ಟು ಈ ‘ಕೇಳು ಪುಸ್ತಕ’ ಗಳಿಗೆ ಶರಣಾಗುತ್ತೇನೆ. ದುರದೃಷ್ಟವಾತ್, ಕನ್ನಡ ಪುಸ್ತಕಗಳು ಇನ್ನೂ ಆಡಿಯೋ ರೂಪದಲ್ಲಿ ಸಿಗುತ್ತಿಲ್ಲ. ಕಾರಿನಲ್ಲಿ ಸಲ್ಮಾನ್ ರಶ್ದಿ, ಹೆಮಿಂಗ್ವೇ, ಓರ್ವೆಲ್, ಡಾಕ್ಟೊರೋ, ಓಶೊ, ಪಮುಕ್ ಗಳ ಜತೆ ಒನ್ ಆನ್ ಒನ್ ಆಗಲು ಪ್ರಯತ್ನ ಮಾಡುತ್ತೇನೆ. ಈ ನನ್ನ ಸಾಹಿತ್ಯಸಮಯ ಮೊಬೈಲಿನ ಮಿತ್ರರ ಸಂಭಾಷಣೆಯಿಂದ ತುಂಡಾಗುತ್ತದೆ. (ಯಾವುದೋ ಒಬ್ಬ ಕಮೆಡಿಯನ್ ಹೇಳಿದ್ದ. ಕಾರಿನಲ್ಲಿ ಹೋಗುತ್ತಾ ಮೊಬೈಲಿನಿಂದ ಮಾಡುವ ಫೋನಿನ ಸಂಭಾಷಣೆ ಸಂವಹನದ ಅತ್ಯಂತ ಕೀಳುರೂಪವೆಂದು. ಕಾರಿನಿಂದ ಯಾರಿಗಾದರೂ ಫೋನು ಮಾಡಿದರೆ, ‘ನನಗೆ ಮನೆಯಲ್ಲಿ ಮಾತಾಡಲು ಸಮಯವಿಲ್ಲ, ಆದ್ದರಿಂದ ಡ್ರೈವ್ ಮಾಡುತ್ತಾ ನಿನ್ನ ಜತೆಗೆ ಸಂಭಾಷಿಸುತ್ತೇನೆ’ ಎಂದರ್ಥವಂತೆ. ಆದರೆ, ಇದು ಎಷ್ಟು ಅನಿವಾರ್ಯವಾಗಿದೆಯೆಂದರೆ ಇದು ತಪ್ಪೆಂದು ಯಾರಿಗೂ ಅನಿಸುವುದಿಲ್ಲವೇನೋ?) ಎಲ್ಲರೂ ಮಲಗಿರುವ ಕಾಲದಲ್ಲಿ ನಾನು ಕೆಲಸ ಮಾಡುವುದರಿಂದ (ಮತ್ತು ಡ್ರೈವ್ ಮಾಡುವುದರಿಂದ) ಕೆಲವೊಮ್ಮೆ ಕತ್ತಲ ನೀರವದಲ್ಲಿ ಈ ಆಡಿಯೋ ಪುಸ್ತಕಗಳ ಜತೆಗೆ ಏಕಾಂತ ಸಿಗುತ್ತದೆ.

ಆದರೆ, ಈ ಓದು ಕೂಡ ಕಾಲನಿರ್ಣಯಿತ. ಅಂದರೆ, ನಾನೆಷ್ಟು ಕಾಲ ಡ್ರೈವ್ ಮಾಡುತ್ತೇನೋ ಅಷ್ಟು ಕಾಲ ಮಾತ್ರ ನಾನೀ ಪುಸ್ತಕ ಕೇಳಬಹುದು. ಸಂಸಾರಸ್ಥನಾದ ನಾನು ಮನೆಯಲ್ಲಿ ಮಕ್ಕಳೊಂದಿಗೆ ಒಂದಿಷ್ಟು ಸಮಯ ಕಳೆಯಬೇಕಲ್ಲವೇ? ಹಾಗಾಗಿ ಮನೆಯ ಗರಾಜಿನ ಬಾಗಿಲು ತೆಗೆದ ತಕ್ಷಣ ಈ ನನ್ನ ಇಂಗ್ಲಿಶ್ ಗೆಳೆಯರು ಪಾಸ್ ಮೋಡಿನಲ್ಲಿ ಮಾರನೆಯ ದಿನದ ತನಕ ಸ್ವಸ್ತವಾಗಿ ಗ್ಲವ್ ಬಾಕ್ಸ್ ಸೇರುತ್ತಾರೆ.

ನಂತರದ ಮನೆಯ ಓದಿಗೆ, ಮಕ್ಕಳೊಂದಿಗಿರಲು ಬಲವಂತವಾಗಿ ಸಮಯವನ್ನು ‘ಮಾಡಿಕೊಳ್ಳಬೇಕು’. ವಿರಾಮದ, ಸಾವಧಾನದ ಓದಿಗೆ ಸಮಯವನ್ನು ‘ಮಾಡಿಕೊಳ್ಳಬೇಕು’ ಎನ್ನುವುದೇ ಒಂದು ದೊಡ್ಡ ವಿರೋಧಾಭಾಸವಲ್ಲವೇ. ಅದರೆ ಇಲ್ಲಿ ನಾನು ಮಹಾತ್ಮಾ ಗಾಂಧಿಯವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತೇನೆ. ಅವರು ಹೇಳಿದ್ದರು ‘ಮಾಡುತ್ತಿರುವ ಕೆಲಸ ಬಿಟ್ಟು ಇನ್ನೊಂದು ಕೆಲಸ ಮಾಡಿದರೆ ಅದೇ ವಿರಾಮ’ ಎಂದು. ನಾನೂ ಹಾಗೇ, ಡ್ರೈವ್ ಮಾಡುತ್ತಿರುವಾಗ ಕೇಳುತ್ತಿದ್ದ ಕಾಫ್ಕಾ ಹುಳುವಾಗುವುದಕ್ಕೆ ಬಿಟ್ಟು ಮನೆಗೆ ಬಂದು ಮಗನ ಹೋಮ್‌ವರ್ಕಿನಲ್ಲಿ ನೆರವಾಗುತ್ತೇನೆ. ಹನ್ನೆರಡಕ್ಕೆ ಎರಡು ಸೇರಿಸಿದರೆ ಎಷ್ಟು ಎನ್ನುವುದನ್ನು ಮಗ ಮಾಡಬಲ್ಲ ಎಂಬ ನಂಬಿಕೆಯಿಂದ ಅವನ ಪಕ್ಕದಲ್ಲಿಯೇ ಶ್ರೀಧರ ಬಳಗಾರರನ್ನೋ, ಹುಳಿಯಾರರನ್ನೋ ಓದುತ್ತಾ ಕೂರುತ್ತೇನೆ. ಮಗಳು ಡ್ಯಾನ್ಸ್ ಕ್ಲಾಸಿಗೆ ಡ್ರಾಪ್ ಕೇಳುತ್ತಾಳೆ. ಮಗ ನಾನೂ ಬರುತ್ತೇನೆಂದು ಹಟ ಮಾಡುತ್ತಾನೆ. ಸರಿ ಎಂದು ಇಬ್ಬರಿಗೂ ಕೂಡಿಸಿ ಕಾಫ್ಕಾನನ್ನು ಮತ್ತೆ ಆನ್ ಮಾಡುತ್ತೇನೆ. ಮಕ್ಕಳಿಬ್ಬರೂ ‘ಓ’ ಎಂದು ಮುಖ ಮಾಡುತ್ತಾರೆ. ಮೂರೂ ಜನಕ್ಕೆ ಮೂಡಿದ್ದರೆ ಯಾವುದೋ ಹಾಡನ್ನು ಕೇಳುತ್ತೇವೆ. ಇಲ್ಲದಿದ್ದರೆ ಒಂದೇ ಐಪಾಡಿನ ಎರಡು ಕಿವಿಗಳನ್ನು ತಮ್ಮ ಒಂದೊಂದು ಕಿವಿಗಳಿಗೆ ಸಿಕ್ಕಿಸಿಕೊಂಡು ‘ಐ-ಶೇರ್’ ಪದವನ್ನು ಸಾರ್ಥಕಗೊಳಿಸುತ್ತಾವೆ, ಮಕ್ಕಳು. ಮಕ್ಕಳಿಬ್ಬರೂ ಕ್ಲಾಸಿನೊಳಗೆ ಹೋದಾಗ ಪಾರ್ಕಿಂಗ್ ಲಾಟಿನಲ್ಲಿ ಕಾಫ್ಕನನ್ನು ಆರಿಸಿ ಮತ್ತೆ ಹುಳಿಯಾರರಿಗೆ ವರ್ಗವಾಗುತ್ತೇನೆ. ಡೇವಿಡ್ ಸಾಹೇಬರಿಗೂ ಕಾಫ್ಕಾನ ಅಪ್ಪನಿಗೂ ಕೊಂಚ ಕನ್‌ಫ್ಯೂಸ್ ಆಗಿ ಮತ್ತೆ ಕತೆಯನ್ನು ಮೊದಲಿಂದ ಓದಲು ಶುರುಮಾಡುತ್ತೇನೆ.

ಮನೆಗೆ ಬಂದರೆ ಮತ್ತೆ ಸಾವಧಾನವಾಗಿ ಊಟ ಮಾಡಬೇಕು. ಆದರೆ, ನನ್ನ ಈ ಸಾವಧಾನಕ್ಕಿರುವ ಸಮಯ ಹದಿನೈದು ನಿಮಿಷ. ಮಕ್ಕಳಿಗೆ ಕನಿಷ್ಠ ಎಂಟರಿಂದ ಹತ್ತು ಗಂಟೆ ನಿದ್ದೆ ಬೇಕು. ಮಲಗುವುದಕ್ಕೆ ಕನಿಷ್ಠ ಒಂದು ಗಂಟೆ ಮುಂಚೆ ಊಟ ಮಾಡಬೇಕು. ಕೊಂಚವಾದರೂ ಟೀವಿ ನೋದಬೇಕು. ಹೆಂಡತಿಯ ಆಫೀಸಿನ ಲ್ಯಾಪ್‌ಟಾಪಿನಲ್ಲಿ ಬೆಂಗಳೂರಿನ ಆಫೀಸಿಗೆ ಆಗ ಬಂದ ಸುಧೀರ ಪಾಪ್ ಅಪ್ ಆಗಿ ‘ಒಂದ್ನಿಮಿಷ ಬಂದೆ.ನೀವುಗಳು ಶುರುಮಾಡಿ’ ಎಂದು ಹೇಳಿಸಿದ್ದಾನೆ.

ಪಾಳಿಗಳನ್ನು ಬದಲಿಸಿ ಕೆಲಸ ಮಾಡುವ ನನಗೆ ಕುಟುಂಬದ ಜತೆಗೆ ಊಟಮಾಡಲು ಸಮಯ ಸಿಗುವುದು ವಾರದಲ್ಲಿ ಒಂದೋ ಎರಡೋ ದಿನ ಮಾತ್ರ. ಟೀವಿಯಲ್ಲಿ ಸಾರೆಗಮ ಪ ಲಿಟಲ್ ಚ್ಯಾಂಪ್ಸ್ ಶುರುವಾಗುವ ಮುನ್ನ ಊಟ ಮಾಡಿಬಿಡಬೇಕು. ಇಲ್ಲವಾದರೆ ಯಥಾರ್ಥ್ ರಸ್ತೋಗಿಯ ಹಾಡು ಕೇಳಲು ನನ್ನ ಐದು ವರ್ಷದ ಮಗನೂ ಊಟ ಬಿಟ್ಟು ನೇರ ಟೀವಿಯ ಮುಂದೆ ಹೋಗಿ ಬಿಡುತ್ತಾನೆ. ಈ ಟೀವಿಯ ಮಕ್ಕಳು ಯಾವುದಕ್ಕೆ ಲಿಪ್ ಸಿಂಕಿಸುತ್ತವೆ ಯಾವುದನ್ನು ಹಾಡಿವೆ ಎಂಬ ಬಾಲಿವುಡ್ಡಿನ ಧುನ್‌ಗಳ ಚರ್ಚೆಯೇ ನಮ್ಮ ಕುಟುಂಬವನ್ನು ಒಂದೆಡೆ ಒಂದು ಗಂಟೆ ಒಟ್ಟಿಗೆ ಕೂಡಿಸುವುದು ಎನ್ನುವುದು ಹದಿನಾರಾಣೆ ಸತ್ಯ.

ಊಟ ಮುಗಿಸಿ ಹೆಂಡತಿಯ ಅಡುಗೆಮನೆಯ ಕೆಲಸದಲ್ಲಿ ಕೊಂಚ ಸಹಾಯ ಮಾಡಿದ ನಂತರ ನನ್ನ ಸ್ಟಡಿಯಲ್ಲಿ ಮಗಳು ಡೆಸ್ಕ್‌ಟಾಪಿನ ಮುಂದೆ ಹೋಮ್‌ವರ್ಕಿಗೆಂದು ಪ್ರತಿಷ್ಟಾಪಿಸಿರುತ್ತಾಳೆ. ಒಬಾಮಾನ ಕಾಸ್ಟ್ ಕಟಿಂಗ್ ನಲ್ಲಿ ಪುಸ್ತಕಗಳೆಲ್ಲ ಪೇಪರ್ಲೆಸ್ ಆಗಿ ಮನೆಯಲ್ಲಿ ಎಷ್ಟು ಜನ ಇದ್ದೇವೋ ಅಷ್ಟಕ್ಕೂ ಜಾಸ್ತಿ ಕಂಪ್ಯೂಟರುಗಳು ಬೇಕಾಗಿವೆ. ಪಿಡಿಎಫ್ ನಲ್ಲಿ ಕಂಟ್ರೊಲ್ ಅಲ್ಟ್ ಎಫ್ ಒತ್ತುತ್ತಾ ಬೇಕಾದ್ದನ್ನು ಮಾತ್ರ ಓದುತ್ತಾ ಓದುವ ಕ್ರಿಯೆಯೇ ಹ್ರಸ್ವವಾಗಿದೆ. ಇದೇ ಈಗಿನ ಶೈಲಿ ಎಂದುಕೊಂಡು ಸುಮ್ಮನಾಗುತ್ತೇನೆ.

ಐದು ವರ್ಷದ ಮಗ ಮಲಗಲಿಕ್ಕೆ ಮುಂಚೆ ಕತೆ ಹೇಳೆಂದು ಪೀಡಿಸುತ್ತಾನೆ. ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಲು ಮಹಾಭಾರತದ ಅಮರ ಚಿತ್ರಕತೆಯ ಪುಸ್ತಕವನ್ನು ತೆಗೆಯುತ್ತೇನೆ. ಭೀಮನ ಚಿತ್ರವನ್ನು ನೋಡಿ ‘ಡ್ಯಾಡಿ, ಭೀಮನಿಗೂ ಘಜನಿಯ ತರ ಸಿಕ್ಸ್ ಪ್ಯಾಕ್ ಇತ್ತಾ’ ಎಂದು ಕೇಳುವ ಮಗನಿಗೆ ‘ಹೌದು ಪುಟ್ಟಾ’ ಎಂದು ಹೇಳದೇ ವಿಧಿಯಿಲ್ಲ. ‘ಅಶ್ವತ್ಥಾಮೋ ಹತಃ ಕುಂಜರಃ’ ಎನ್ನುವುದನ್ನು ಅವನಿಗೆ ಅರ್ಥ ಮಾಡಿಸಲು ‘’An elephant named Ashvathama is dead’ ಎಂದು ನಾನು ಕೂಗಿ ವಾಕ್ಯದ ಮೊದಲ ಭಾಗಕ್ಕೆ ಟೀವಿಯ ಧ್ವನಿಯನ್ನು ಜಾಸ್ತಿ ಮಾಡಿ ದ್ರೋಣನನ್ನು ಸಾಯಿಸುವ ಮೂಲಕ ಅವತ್ತಿನ ಅಧ್ಯಾಯವನ್ನು ಮುಗಿಸುತ್ತೇನೆ.

ನಾನು ಒಬ್ಬನೇ ನೋಡುವ ಸಿನೆಮಾಗಳೆಂದು ನಾನೇ ಪ್ರತ್ಯೇಕಿಸಿಕೊಂಡ ಒಂದಿಷ್ಟು ಇರಾನೀ, ಫ್ರೆಂಚ್ ಸಿನೆಮಾಗಳ ಡಿವಿಡಿಗಳನ್ನು ಇವತ್ತು ನೋಡಲೇ ಬೇಕೆಂದು ಕೂರುತ್ತೇನೆ. ಕಿಯರೊಸ್ತಾಮಿ, ರೇ, ಕುರಸೋವ, ಟರಂಟಿನೋ, ಎಲ್ಲರೂ ಇಂಟರ್ನೆಟ್ಟಿನ ಡಿವಿಡಿ ಬಾಡಿಗೆಯ ಅಂಗಡಿಯಲ್ಲಿ ನನ್ನನ್ನು ನೋಡು ಎಂದು ದುಂಬಾಲು ಬಿದ್ದಿದ್ದಾರೆ. ಮುಗಿಸಲೇ ಬೇಕು ಎಂದು ಕೂತು ಒಂದು ಸಿನೆಮಾವನ್ನು ಪೂರ್ತಿ ನೋಡುತ್ತೇನೆ. ಮುಗಿಸಿದ ತಕ್ಷಣ ಡಿವಿಡಿಯನ್ನು ಪೋಸ್ಟ್ ಮಾಡಿದರೆ ಮಾರನೆಯ ದಿನವೇ ‘ರನ್ ಲೋಲ್ ರನ್’ ಬರುತ್ತಾಳೆ. ಶ್ಯಾಮ್ ಬೆನೆಗಲ್‌ರ ಹೊಸ ಚಿತ್ರ ನೋಡೆಂದು ಹೇಳಿದ ಗೆಳೆಯನಿಗೆ ಫೋನು ಮಾಡಿದಾಗ ಮಾತಾಡಲೆಂದಾದರೂ ಅ ಸಿನೆಮಾವನ್ನು ನೋಡಲೇ ಬೇಕಾಗಿದೆ. ಆಮೀರ್ ಖಾನನ ೩ ಈಡಿಯಟ್ಸ್ ನೋಡದೇ ಇದ್ದರೆ ಸಿನೆಮಾ ಬಫ್ ಆಗುವುದು ಸಾಧ್ಯವಿಲ್ಲವಾದ್ದರಿಂದ ಅದನ್ನೂ ಥಿಯೇಟರಿನಲ್ಲಿ ನೋಡುತ್ತೇನೆ. ಇದನ್ನು ಚೇತನ್ ಭಗತ್ ಬರೆದನಾ ಎಂದು ಅವನನ್ನೂ ಓದುತ್ತೇನೆ.

ಹೋದ ತಿಂಗಳು ಕಾನ್‌ಫರೆನ್ಸಿಗೆಂದು ಮೂರು ಗಂಟೆಯ ವಿಮಾನದಲ್ಲಿ ಮಯಾಮಿ ಬೀಚಿಗೆ ಹೋಗಿದ್ದೆ. ಎಂದೋ ಓದಿದ್ದ ಕಾರಂತರ ಚೋಮನ ದುಡಿ ಯನ್ನು ಒಂದೇ ಏಟಿಗೆ ವಿಮಾನದಲ್ಲಿ, ಹೋಟೆಲಿನ ರೂಮಿನಲ್ಲಿ ಓದಿದ್ದೆ. ಸತ್ತ ಎಮ್ಮೆಯನ್ನು ಹರಿದು ತಿನ್ನುವ ಚೋಮನ ಕುಟುಂಬದ ಕತೆಯನ್ನು ಓದಲು ನನಗೆ ಪ್ರಶಸ್ತವಾದ ಸ್ಥಳ ಮೂವತ್ತು ಸಾವಿರದಡಿಗಳ ಮೇಲಿನ ಏಕಾಂತ. ಬಹಳವಾಗಿ ಮನಕ್ಕೆ ತಾಕಿದ್ದ ಈ ಕಾದಂಬರಿ ಈಗ ಬಹು ರೊಮ್ಯಾಂಟಿಕ್ ಅನಿಸುತ್ತದೆ. ಅದಕ್ಕೆ ಮಯಾಮಿಯನ್ನು ನಿಂದಿಸುತ್ತೇನೆ.

ಇಲ್ಲಿ ಓದು ಸಿನೆಮಾ ಹವ್ಯಾಸವೇ, ಅವಶ್ಯಕತೆಯೇ ಅಥವಾ ಅನಿವಾರ್ಯವೇ ಎಂದು ನನಗೆ ನಾನೇ ಕೇಳಿಕೊಳ್ಳುತ್ತೇನೆ. ಎಷ್ಟೇ ಇಲ್ಲವೆಂದು ಹೇಳಿಕೊಳ್ಲಬೇಕೆಂದರೂ ಮೊದಲು ಹವ್ಯಾಸವಾಗಿದ್ದ ಸಿನೆಮಾ, ಓದು ಈಗ ಅನಿವಾರ್ಯವಾಗಿದೆ. ನಾನೆಂದೂ ವೃತ್ತಿಪರ ಬರಹಗಾರನಾಗಲಾರೆ ಎಂಬ ಅರಿವು ನನಗಿದ್ದರೂ ಈ ಓದು ನನ್ನ ಜೀವನದ ಪ್ರಮುಖ ಅವಶ್ಯಕತೆಯಾಗಿ ನಂತರ ಕಾಲಕ್ರಮೇಣವಾಗಿ ಅನಿವಾರ್ಯವಾಗಿರುವುದಕ್ಕೆ ಕಾರಣಗಳೇನು ಎಂದು ಯೋಚಿಸಬೇಕಾಗಿದೆ? ಹೀಗೆ ಅನಿವಾರ್ಯವಾಗುವುದರ ಅವಶ್ಯಕತೆ ಎಷ್ಟಿದೆಯೆನ್ನುವುದೂ ಪ್ರಶ್ನಾತ್ಮಕ.

ನಾನೇ ಅವಶ್ಯಕ, ಅನಿವಾರ್ಯ ಎಂದಂದುಕೊಂಡು ಓದಿದ ಎಷ್ಟು ಪುಸ್ತಕಗಳನ್ನು ಓದಿ ಪ್ರಾಮಾಣಿಕವಾಗಿ ಆನಂದ ಪಟ್ಟಿದ್ದೇನೆ ಎಂದು ನಾನೇ ಪ್ರಶ್ನಿಸಿಕೊಳ್ಳುತ್ತೇನೆ? ಮೊದಲು ನನಗೆ ಬೇಕಾದ್ದು ಓದುವ ಸ್ವಾತಂತ್ರ್ಯವಿತ್ತು. ಈಗ ಆ ಸ್ವಾತಂತ್ರ್ಯ ನನಗಿದೆಯೇ? ಲೈಬ್ರರಿಯ ಬುಕ್‌ಕ್ಲಬ್ಬಿನ ಚರ್ಚೆಗೆಂದು ಕೆಲವೊಂದು ಪುಸ್ತಕ ಓದಬೇಕಾಗಿದೆ, ಪತ್ರಿಕೆಗೆ ಬರೆಯಬೇಕೆಂದು ಯಾವುದೋ ಪುಸ್ತಕವನ್ನೂ ಓದಬೇಕಾಗಿದೆ, ಸ್ನೇಹಿತನ ಜತೆ ಸಂಭಾಶಿಸಲು ಇಷ್ಟವೋ ಇಲ್ಲವೋ ಯಾವುದೋ ಪೊಲಿಶ್ ಸಿನೆಮಾ ನೋಡಬೇಕಾಗಿದೆ. ಸಂಸಾರದ ಸ್ವಾಸ್ಥ್ಯಕ್ಕೆ ಇನ್ನೊಂದು ಸಿನೆಮಾ ನೋಡಬೇಕಾಗಿದೆ.

ಅನಿವಾರ್ಯವೆಂದು ಅನಿಸಿದ್ದರಿಂದ ಯಾವುದನ್ನೂ ಬಿಡದೇ ಮಾಡಲೇಬೇಕಾಗಿದೆ ಎಂಬ ಒಂದು ಒತ್ತಡವನ್ನು ನಮಗೆ ನಾವೇ ವಿಧಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಜೀವನ ಫಾಸ್ಟ್ ಫಾರ್ವರ್ಡ್ ಮೋಡಿನಲ್ಲಿದ್ದಂತೆ ಅಥವಾ ಹೈವೇಯಲ್ಲಿ ಒಂದು ಲೇನಿನಲ್ಲಿಯೇ ಹೋಗದ ಕಾರು ತನ್ನ ಪಕ್ಕದ ಕಾರುಗಳನ್ನು ದಾಟಲು ಲೇನಿನಿಂದ ಲೇನಿಗೆ ಹಾರುತ್ತಿದ್ದಂತೆ ಭಾಸವಾಗಿದೆ.

ಇದಕ್ಕೆ ಸಮಾಧಾನವೆಂದರೆ ದೀರ್ಘ ಓದು ಅಥವಾ ಮರು ಓದು. ಒಂದು ‘ಮರಳಿ ಮಣ್ಣಿಗೆ’ ಅಥವಾ ಒಂದು ‘ಮಲೆಗಳಲ್ಲಿ ಮದುಮಗಳು’ ಓದಿಗೆ ಎಂಥ ಡಿಕಂಡಿಷನಿಂಗ್ ಶಕ್ತಿಯಿದೆಯೆಂದರೆ ಓದು ಚಟವಲ್ಲ, ಅದು ಅನಿವಾರ್ಯವೂ ಅಲ್ಲ ಅದೊಂದು ಯಾವತ್ತೂ ಆನಂದಿಸಬಲ್ಲ ಅನುಭೂತಿ ಎನ್ನುವ ಭಾವವನ್ನು ಕೊಡುತ್ತದೆ. ಮತ್ತೆ ಮತ್ತೆ ಈ ಪುಸ್ತಕಗಳನ್ನು ಓದುವುದರಿಂದ ಓದು ಯಾವತ್ತೂ ಚಟವಲ್ಲ ಎಂದೆಸುತ್ತದೆ.

ಒಳ್ಲೆಯ ಬರವಣಿಗೆ ಎನ್ನುವುದರ ಒಳ್ಳೆಯತನವನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕಾಗಿದೆ.

2 comments:

  1. kaginele guru sahebare, lekhana chennagide !

    ReplyDelete
  2. ಸರ್ ನಿಮ್ಮ ಲೇಖನ ಚೆನ್ನಾಗಿದೆ ಏನಾದ್ರೂ ಹೊಸಾದು ಹೇಳ್ತಿರ್ತೀರಾ ಖುಷಿಯಾಗುತ್ತದೆ, ಬಿಡದೇ ಓದಿಸಿಕೊಂಡ ಪುಸ್ತಕಗಳು
    ಹಲವಾರಿದ್ವು ಈಗ ಅಂಥವಿಲ್ಲ ಅಂತಲ್ಲ ಆದರೆ ಕೆಲಸದ ಜಂಜಡದ ಮಧ್ಯೆ ಆಗಾಗ ಬ್ರೆಕ್ ತಗೊಂಡು ಮತ್ತೆ ರಿಫ್ರೆಶ್ ಆಗಿ ಓದುವುದೂ
    ಮಜಾನೇ ಏನಂತೀರಿ...

    ReplyDelete