"ದೊಡ್ದ ಪರದೆಯಲ್ಲಿ ಒಂದು ರೇಸ್ ಅಂಕಣ. ಆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂದರವಾದ ಹುಡುಗಿಯೊಬ್ಬಳ ಮೇಲೆ ನಿಧಾನವಾಗಿ ಕ್ಯಾಮೆರಾ ನಿಲ್ಲುತ್ತದೆ. ಹಿಂದಿನಿಂದ ಗಾಯವಾದ ತೋಳಿಗೊಂದು ಸ್ಲಿಂಗ್ ಹಾಕಿಕೊಂಡಿರುವ ಉದ್ದಕೂದಲಿನ ಶಾಹಿದ್ ಕಪೂರ್ ನಿಧಾನವಾಗಿ ಬಂದು "ಬ್ಲೂ ಥಂಡರ್" ಎನ್ನುತ್ತಾನೆ. ಆಕೆ, ಸುಮ್ಮನೆ ಮಾದಕವಾಗಿ ನಗುತ್ತಾಳೆ. ಆಗ ಗಾಳಿಯಲ್ಲಿ ಒಂದು ನೋಟು ಹಾರಿಕೊಂಡು ಬರುತ್ತದೆ. ಅದನ್ನು ಹಿಂಬಾಲಿಸಿಕೊಂಡು ಹೋಗಿತ್ತಾನೆ. ನಿಧಾನವಾಗಿ ಆ ದೃಶ್ಯ ಇನ್ನೊಂದು ದೃಶ್ಯದೊಂದಿಗೆ ಲೀನವಾಗುತ್ತದೆ. ಅಲ್ಲಿ ಒಂದು ಟೆಲಿಫೋನು ಬೂತಿನಂತ ಡಬ್ಬದ ಮೇಲೆ "ಚಾರ್ಲೀಸ್ ಡ್ರೀಮ್ಸ್" ಎಂದು ಬರೆದಿದೆ. ಮೇಲಿಂದ ನಿಧಾನವಾಗಿ ದುಡ್ಡು ಮಳೆಯೋಪಾದಿಯಲ್ಲಿ ಕೆಳಗೆ ಬೀಳುತ್ತಿದೆ. ಚಾರ್ಲಿಯ ಕನಸು ಏನು ಎಂಬುದು ಆತನಿಗಲ್ಲ ನಮಗೂ ಸ್ಪಷ್ಟವಾಗಿದೆ.
"ತೊದಲುವ ಶಾಹಿದ್ ಕಪೂರನಿಗೆ ಗೊತ್ತಿರುವ ರಹಸ್ಯ ಭ್ರಷ್ಟ ಪೋಲೀಸನೊಬ್ಬನಿಗೆ ಬೇಕಾಗಿದೆ. ಆದರೆ ಈ ಉಗ್ಗನಿಗೆ ಇಂಥ ಅತಂಕದ ಸನ್ನಿವೇಶಗಳಲ್ಲಿ ತೊದಲಾಟ ಇನ್ನೂ ಜಾಸ್ತಿಯಾಗುತ್ತದೆ. ಈ ಪೊಲೀಸನಿಗೆ ಇವನಿಂದ ತನಗೆ ಬೇಕಾದ ಮಾಹಿತಿಯನ್ನು ಪಡಕೊಳ್ಳಲು ಸಮಯವಿರುವುದು ಮಾರನೆಯ ದಿನ ಎಂಟರ ತನಕ ಮಾತ್ರ. "ಇವನಿಗೆ ಹೀಗೇ ಬಿಟ್ಟರೆ ಇವನ ಹೆಸರು ಹೇಳುವುದಕ್ಕೇ ಬೆಳಿಗ್ಗೆ ಎಂಟರತನಕ ತಗೋತಾನಪ್ಪಾ" ಎಂದುಕೊಂಡು ಅವನ ಹತ್ತಿರ ಬಂದು "ಏಕ್ ಗಾನಾ ಗಾವ್" ಎಂದು ಹಾಡು ಹೇಳಲಿಕ್ಕೆ ಹೇಳುತ್ತಾನೆ. ಯಾಕೆಂದರೆ, ಹಾಡು ಹೇಳಬೇಕಾದರೆ ತೊದಲುವುದಿಲ್ಲವಲ್ಲಾ. ಈತ ತನಗೆ ಗೊತ್ತಿರುವ ರಹಸ್ಯವನ್ನು "ಕಬೀ ಕುಶಿ ಕಬೀ ಗಮ್" ರಾಗದ ಮೂಲಕ ಮೂಲಕ ಹೇಳಿ ಮುಗಿಸುತ್ತಾನೆ.
ವಿಶಾಲ ಭಾರದ್ವಾಜನ ಹೊಸ ಚಿತ್ರ ಕಮೀನೆ ಚಿತ್ರದ ಕೆಲವು ದೃಶ್ಯಗಳಿವು. ಸಿನೆಮಾ ಪ್ರಪಂಚದಲ್ಲಿ ಬಹಳ ವರ್ಷಗಳಿಗೊಮ್ಮೆ ನಟರ ಆಯ್ಕೆ, ನಟನೆ. ಚಿತ್ರಕಥೆ, ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಒಂದಕ್ಕೊಂದು ಪೂರಕವಾಗಿ ವ್ಯಾಪಾರಿ ಚೌಕಟ್ಟಿನೊಳಗೇ ಒಂದು ನೋಡಬಹುದಾದ ಚಿತ್ರ ತಯಾರಾಗುತ್ತದೆ. ಇಂಥ ಒಂದು ಚಿತ್ರ ಕಮೀನೆ.
ಶೇಕ್ಸ್‌ಪಿಯರನ ನಾಟಕಗಳಾದ ಮ್ಯಾಕ್‌ಬೆತ್ ಮತ್ತು ಒಥೆಲೊ ವನ್ನು ಸಿನೆಮಾದ ಸಮಕಾಲೀನಕ್ಕೆ ಅಳವಡಿಸಿ ಮಕ್‌ಬೂಲ್ ಮತ್ತು ಓಂಕಾರ ಎಂಬ ಸಿನೆಮಾಗಳನ್ನು ನಿರ್ದೇಶಿಸಿದ್ದ ವಿಶಾಲ್ ಭಾರದ್ವಾಜ್, ಮಕಡೀ ಮತ್ತು ಬ್ಲೂ ಅಂಬ್ರೆಲಾ ಎಂಬ ನವಿರು ನಿರೂಪಣೆಯ ಸಿನೆಮಾಗಳನ್ನು ನಿರ್ದೇಶಿಸಿದ್ದಾನೆ. ಈತನ ಪಕ್ಕಾ ವ್ಯಾಪಾರೀ ಸಾಹಸ ‘ಕಮೀನೆ’ ಕ್ವಿಂಟಿನ್ ಟರಂಟಿನೋ, ಗೈ ರಿಚೀಗಳ ಕಲ್ಟ್ ಸಿನೆಮಾಗಳ ಸಾಲಿಗೆ ಸೇರಬಹುದಾದ ಸಿನೆಮಾ. ಅತಿ ಬಿಗಿಯಾದ ಚಿತ್ರಕಥೆ, ನಿರೂಪಣೆಯಲ್ಲಿನ ಬಿಗಿ ಮತ್ತು ಪಾತ್ರಗಳಿಗೆ ಬೇಕಾದ ನಟರ ಆಯ್ಕೆ ಮತ್ತು ಆ ನಟರುಗಳಿಂದ ಸರಿಯಾದ ನಟನೆ ತೆಗೆಯುವುದರಲ್ಲಿ ವಿಶಾಲ್ ಭಾರದ್ವಾಜ್ ಯಶಸ್ವಿಯಾಗಿದ್ದಾನೆ. ಬಾಲಿವುಡ್ಡಿನ ಎಲ್ಲ ಬಾಯ್ ಮೀಟ್ಸ್ ಗರ್ಲ್ ಫಾರ್ಮುಲಾಗಳನ್ನು ಮುರಿದು, ಒಂದು ಬುದ್ಧಿವಂತ ಸಿನೆಮಾವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾನೆ. ಇದರ ಮೂಲಕ ತನ್ನದೇ ಆದ ಒಂದು ಛಾಪನ್ನು ಅನ್ನು ಆತ ಬಾಲಿವುಡ್‌ನಲ್ಲಿ ಮೂಡಿಸಿದ್ದಾನೆ..
ತೊಂಭತ್ತರ ದಶಕದ ಮಧ್ಯದಲ್ಲಿ ಶುರುವಾದ ಮಲ್ಟಿಪ್ಲೆಕ್ಸ್ ನೋಡುಗರ ಸಿನೆಮಾದ ಕಲ್ಟ್ ಬಾಲಿವುಡ್ಡಿಗೆ ಬೇರೆಯೇ ಒಂದು ಸೊಗಡನ್ನು ಕೊಟ್ಟಿತು. ಮನಮೋಹನ ದೇಸಾಯಿ, ಪ್ರಕಾಶ್ ಮೆಹ್ರ, ಸುಭಾಶ್ ಗೈಗಳ ಅತಿರಂಜಿತವಾದ ಮೆಲೊಡ್ರಾಮ, ಪ್ರೀತಿ, ಪ್ರೇಮ, ಕಳೆದು ಹೋದ ಅಣ್ಣ ತಮ್ಮಂದಿರ ಸ್ಲೋ ಮೋಷನ್‌ನ ಮಿಲನಗಳ ಭಾರದಲ್ಲಿ sಸೊರಗಿದ್ದ ಬಾಲಿವುಡ್‌ಗೆ ಬದಲಾವಣೆ ಬೇಕಿತ್ತು. ಆಗ ಈ ಹೀರೋಗಳನ್ನು ವೈಭವೀಕರಿಸದೆ, ದೊಡ್ಡ ದೊಡ್ದ ಸೆಟ್ ಗಳನ್ನು ಹಾಕದೆ, ಕಡಿಮೆ ಬಜೆಟ್‌ನಲ್ಲಿ ನಿರೂಪಣೆಯ ಜಾಣ್ಮೆಯಿಂದ ವಸ್ತುವಿಷಯಗಳ ಆಯ್ಕೆಯ ವೈವಿಧ್ಯದಿಂದ ತಾಜಾ ಸಿನೆಮಾಗಳು ತಯಾರಾಗತೊಡಗಿದವು. ರಾಹುಲ್ ಭೋಸ್, ರನ್ವೀರ್ ಶೌರಿ, ಸಂಜಯ್ ಸೂರಿ, ರಜತ್ ಕಪೂರ್ ಮುಂತಾದ ನಟರುಗಳು ಹೀರೋಗಳಾಗತೊಡಗಿದರು. ಯಾವಾಗ ನಾಯಕನಟನಿಗೆ ಇಮೇಜಿನ ಭಾರವಿಲ್ಲದೆಯೇ ಹೋಯಿತೋ, ಆಗ ವಸ್ತುವಿನಲ್ಲಿ ವೈವಿಧ್ಯ ಮತ್ತು ಹೊಸ ಪ್ರಯೋಗಗಳು ನಡೆಯತೊಡಗಿದವು. ಜತೆಗೆ ಜಾಗತೀಕರಣದ ಹೊಳೆಯಲ್ಲಿ ಹೊರಗಿನಿಂದ ಹೂಡಿದ ಬಂಡವಾಳ ಮತ್ತು ಜಾಗತಿಕ ವಿತರಣಾ ವ್ಯವಸ್ಥೆಯಿಂದ ಇಂಥ ಸಿನೆಮಾಗಳಿಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಾಗಿ, ಸಿನೆಮಾಗಳ ನಿರ್ಮಾಣದ ವೈವಿಧ್ಯ ಬಹುಮುಖಿಯಾಗಿತ್ತು. ಹಾಗಾಗಿ ಪಕ್ಕಾ ವ್ಯಾಪಾರಿ ಸಿನೆಮಾಗಳು ತಾವು ಇವಕ್ಕಿಂತ ಬೇರೆ ಎಂದು ತೋರಿಸಲು ಮೂವತ್ತರಿಂದ ನಲವತ್ತು ಕೋಟಿ ರೂಪಾಯಿಗಳನ್ನು ಸುಲಭವಾಗಿ ಒಂದು ಸಿನೆಮಾಕ್ಕೆ ಬಂಡವಾಳ ಹಾಕುವ ವ್ಯವಸ್ಥೆ ಶುರುವಾಯಿತು. ಹಿಂದೀ ಸಿನೆಮಾಗಳ ಹಾಡುಗಳಷ್ತೇ ಅಲ್ಲ, ಇಡೀ ಸಿನೆಮಾಕ್ಕೆ ಸಿನೆಮಾ ದಕ್ಷಿಣ ಆಫ್ರಿಕ, ಅಮೆರಿಕಾ ಇಂಗ್ಲೆಂಡುಗಳಲ್ಲಿ ಚಿತ್ರೀಕರಣವಾಗಲು ಶುರುವಾಯಿತು.
ಈ ರೀತಿಯ ಬಹಳಷ್ಟು ಸಿನೆಮಾಗಾಳು ಮೊದಲವಾರದಲ್ಲಿಯೇ ಹಾಕಿದ್ದ ಬಂಡವಾಳವನ್ನು ವಾಪಸ್ಸು ಪಡೆದು, ಗಲ್ಲಾಪಟ್ಟಿಗೆಂiಲ್ಲಿಯೂ ದುಡ್ಡು ಮಾಡಿಕೊಳ್ಳಹತ್ತಿದವು. ಯಾರಿಗೂ ತಮ್ಮ ಚಿತ್ರವನ್ನು ನೂರುದಿನಗಳು, ಇಪ್ಪತೈದುವಾರಗಳ ಕಾಲ ಓಡಿಸುವ ಇರಾದೆಯಿರಲಿಲ್ಲ. ಮೊದಲ ಮೂರುದಿನಗಳಲ್ಲಿ ಆದಷ್ಟು ಪ್ರಿಂಟುಗಳನ್ನು ಹಾಕಿ, ಎರಡು ಮೂರುವಾರಗಳಲ್ಲಿ ದುಡ್ಡು ಮಾಡುವ ಅನೇಕರು ಇಲ್ಲಿ ಬಂಡವಾಳ ಹೂಡಹತ್ತಿದರು. ಅದರ ಪರಿಣಾಮ ಈಗ "ಕಮೀನೆ" ಯಂಥ ಸಿನೆಮಾವನ್ನು ಮಾಡಿ ಕೂಡ ದುಡ್ಡು ಮಾಡಬಹುದು ಎಂಬ ನಂಬಿಕೆಯನ್ನು ರಾನಿ ಸ್ಕ್ರೂವಾಲನಂಥ ನಿರ್ಮಾಪಕರುಗಳಿಗೆ ಕೊಟ್ಟದ್ದು..
ಬಾಲಿವುಡ್ ಕ್ವಿಂಟನ್ ಟರಂಟಿನೊನಂಥ ನಿರ್ದೇಶಕರಿಂದ ಪ್ರಭಾವಿತವಾದದ್ದು ಹೊಸದೇನಲ್ಲ. ೨೦೦೨ರಲ್ಲಿ ಬಿಡುಗಡೆಯಾದ ಸಂಜಯ್ ಗುಪ್ತಾ ನಿರ್ದೇಶನದ "ಕಾಂಟೆ" ಟರಂಟಿನೋನ "ರೆಸರ್‌ವಾಯ್ರ್ ಡಾಗ್ಸ್" ಚಿತ್ರದಿಂದ ಸ್ಫೂರ್ತಿಪಡೆದದ್ದು. ತನ್ನ ವಿಶಿಷ್ಟ ನಿರೂಪಣೆ ಮತ್ತು ಪಾತ್ರಚಿತ್ರಣಗಳಿಂದ ರೆಸರ್ವಾಯ್ರ್ ಡಾಗ್ಸ್ ಟರಂಟಿನೋನನ್ನು ತನ್ನ ಮೊದಲ ಸಿನೆಮಾದಲ್ಲಿಯೇ ಅತಿ ಎತ್ತರಕ್ಕೆ ಕರೆದೊಯ್ದಿತ್ತು. ಈತ ಕ್ರೈಮ್ ಚಿತ್ರಗಳನ್ನು ಮಾಡಿದರೂ ಈತನ ಹೆಸರು ನೆನಪುಳಿಯುವುದು ಈತ ಮೂರರ ಜತೆ ನಾಲ್ಕನೆಯದು ಎನ್ನಿಸುವಂಥ ಮತ್ತೊಂದು ಕ್ರೈಮ್ ಸಿನೆಮಾ ಮಾಡಿದ್ದರಿಂದಲ್ಲ. ಇವನಿಗೆ ಕ್ರೈಮ್‌ಗಿಂತ ಈ ಕ್ರಿಮಿನಲ್‌ಗಳ ಪಾತ್ರಚಿತ್ರಣ ಬಹಳ ಮುಖ್ಯ. ಆದರೆ, "ಕಾಂಟೆ" ಈ ಸಿನೆಮಾ ಕ್ಷಣಗಳನ್ನು ನಕಲುಮಾಡಲು ಹೋಗಿ ದಯನೀಯವಾಗಿ ಸೋತಿತ್ತು. ನೇರವಾದ ನಿರೂಪಣೆಯಿಲ್ಲದ, ಕತೆ ಹಿಂದುಮುಂದಾಗಿ, ಅಡ್ಡಾದಿಡ್ಡಿಯಾಗಿ ಸರಿದು ಕೊನೆಗೆ ಎಲ್ಲ ಸಡಿಲ ತುದಿಗಳೂ ಒಂದೆಡೆ ಸೇರಿಕೊಂಡು ಗಂಟುಹಾಕಿಕೊಳ್ಳುವುದು ಈತನ ಸಿನೆಮಾಗಳ ಸಾಮಾನ್ಯ ಲಕ್ಷಣ. ಕತೆ ಕಗ್ಗಂಟಾಗಲು, ಹಲವಾರು ವಿಕ್ಷಿಪ್ತ ವೈವಿಧ್ಯಮಯ ಪಾತ್ರಗಳ ಅನ್ವೇಷಣೆಯಲ್ಲಿರುವ ಈ ಚಿತ್ರಗಳಿಗೆ ಈ ಕ್ರೈಮ್ ಪ್ರಪಂಚ ಹುಲುಸಾದ ಸಾಮಗ್ರಿಗಳನ್ನು ಒದಗಿಸಿಕೊಡುತ್ತದೆ. ಬರೇ ಸಾಂಸಾರಿಕತೆ ಅಥವಾ ಪ್ರೇಮಕಥೆಯಲ್ಲಿ ಈ ನಿರೂಪಣೆಯ ಸಾಧ್ಯತೆಗಳ ವೈವಿಧ್ಯವನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ.
ಕಮೀನೆಯ ನಿರ್ದೇಶಕ ವಿಶಾಲ್ ಭಾರ್ದ್ವಾಜ್ ಬಾಲಿವುಡ್ ಕಂಡ ಅಪರೂಪದ ಪ್ರತಿಭೆ. ಈತ ಸಂಗೀತ ನಿರ್ದೇಶನ ಮಾಡಿಕೊಂಡು, ಹಾಡು ಹೇಳಿಕೊಂಡು, ಕೆಲವೊಂದು ಸಾಕ್ಷ್ಯಚಿತ್ರಗಳನ್ನು ಮಾಡಿಕೊಂಡು ಇದ್ದ. ಈತ "ಸತ್ಯ" "ಮಾಚೀಸ್" "ಯು ಮಿ ಔರ್ ಹಮ್" ಮತ್ತಿತರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದನೆಂದು ಈಗ ಹೇಳಿದರೆ ಯಾರೂ ನಂಬಲಿಕ್ಕಿಲ್ಲ. ಪೋಲಿಶ್ ನಿರ್ದೇಶಕ ಕ್ರಿಸ್ಟಾಫ್ ಕಿಸ್ಲೋಸ್ಕಿಯ ನಿರ್ದೇಶನದ ಚಿತ್ರ ಟೆಲಿಡ್ರಾಮಗಳನ್ನು ನೋಡಿ ಪ್ರಭಾವಿತನಾಗಿ ಈತನೂ ಸಿನೆಮಾ ಮಾಡಬೇಕೆಂದು ನಿರ್ಣಯಿಸಿ "ಮಕಡೀ" ಎಂಬ ಒಂದು ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ. ನಂತರ, ಶೇಕ್ಸಪಿಯರನ ನಾಟಕಗಳನ್ನು ಕ್ರೈಮ್ ಪ್ರಪೆಂಚದ ಹಿನ್ನೆಲೆಯಲ್ಲಿ ಆಧುನಿಕೀಕರಿಸಿ ಮಕ್‌ಬೂಲ್ ಮತ್ತು ಓಂಕಾರ ಎಂಬ ಸಿನೆಮಾಗಳನ್ನು ಚಿತ್ರಿಸಿದ. ಓಂಕಾರ ಈತ ವ್ಯಾಪಾರೀ ಸಿನೆಮಾಗಳನ್ನೂ ಬಹಳ ವಿಭಿನ್ನವಾಗಿ ಮಾಡಿಕೊಟ್ಟೂ ದುಡ್ಡುಮಾಡಬಹುದು ಎನ್ನುವ ನಂಬಿಕೆಯನ್ನು ಸಿನೆಮಾ ನಿರ್ಮಾಪಕರಲ್ಲಿ ಕೊಟ್ಟಿತು. ಪರಿಣಾಮವೇ, ಇಂದಿನ ಕಮೀನೆ.
ಮೇಲಿನೋಟಕ್ಕೆ ಚದುರಿದ ಚಿತ್ರಗಳಂತೆ ಕಾಣುವ ಈ ಚಿತ್ರದ ಕಥೆ ಹೇಳಲು ಸುಲಭವಲ್ಲ. ಹಾಗೆ ನೋಡುತ್ತಾ ಹೋದರೆ, ಕತೆಯಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಚಾರ್ಲಿ ಮತ್ತು ಗುಡ್ಡು ಅನ್ನುವ ತೊದಲುವ ಮತ್ತು ಉಗ್ಗುವ ಇಬ್ಬರು ಅವಳಿಗಳು, ಇಬ್ಬರ ಹಾದಿಯೂ ಬೇರೆ. ಒಬ್ಬ ಮುಂಬಯಿಯ ಭೂಗತ ಸಾಮ್ರಾಜ್ಯದಲ್ಲಿ ಸಣ್ಣ ಗ್ಯಾಂಗ್‌ಸ್ಟರ್. ಇನ್ನೊಬ್ಬ ಯಾವುದೋ ಒಂದು ಸಣ್ಣ ಎನ್‌ಜೀಓದಲ್ಲಿ ಕೆಲಸ ಮಾಡುತ್ತಾನೆ. ಆದರೆ, ಇಬ್ಬರ ಆಯ್ಕೆಗಳೂ ಬೇರೆಯಾಗಿರುವುದರಿಂದ ಇಬ್ಬರೂ ಪರಸ್ಪರರನ್ನು ದ್ವೇಷಿಸುತ್ತಾರೆ. ಚಾರ್ಲಿ ರೇಸಿನಲ್ಲಿ ಬಾಜಿ ಕಟ್ಟುವವ. ಯಾವುದೋ ರೇಸಿನಲ್ಲಿ ಮೋಸದಿಂದ ದುಡ್ಡು ಕಳಕೊಂಡ ಎನ್ನುವ ಕಾರಣದಿಂದ ಆ ಜ್ಯಾಕಿಯನ್ನು ಹೆದರಿಸಿ ತನ್ನ ದುಡ್ಡನ್ನು ವಾಪಸ್ಸು ಪಡೆದುಕೊಳ್ಳುವ ಪ್ರಯತ್ನದಲ್ಲಿ ಆತ ತನ್ನ ಇತರ ಗ್ಯಾಂಗ್‌ಸ್ಟರ್‍ಗಳ ಸಹಾಯವನ್ನು ಪಡೆಯುತ್ತಾನೆ. ಆದರೆ, ನಂತರವಾಗುವ ಹಲ್ಲಾಗುಲ್ಲಾಗಳ ಸರಣಿಯಲ್ಲಿ ಸುಳ್ಳು, ಮೋಸ, ವಂಚನೆಗಳ ಜಾಲದಲ್ಲಿ ತಮಗೆ ಅರಿವಾಗದ ಕಾರಣಗಳಿಂದ ಇಬ್ಬರೂ ಸಿಕ್ಕಿಬೀಳುತ್ತಾರೆ. ನಂತರ, ಮಾಮೂಲೀ ಫ಼ಾರ್ಮ್ಯುಲಾದಂತೆ ಅಣ್ಣತಮ್ಮಂದಿರಿಬ್ಬರೂ ಈ ಜಗತ್ತಿನಲ್ಲಿ ತಮಗಿರುವುದೇ ತಾವಿಬ್ಬರು ಎನುವುದನ್ನು ಅರಿತುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕಳಕೊಂಡಿದ್ದ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.
ಇದು ಸ್ಥೂಲವಾಗಿ ಚಿತ್ರಕಥೆ. ಇಷ್ಟೇನಾ, ಇದು ಮಾಮೂಲೀ ಬಾಲಿವುಡ್ ಕಥೆ ಎಂದು ಮೂಗುಮುರಿದರೆ ಒಂದು ಅದ್ಭುತ ಸಿನೆಮಾ ಅನುಭವವನ್ನು ಕಳೆದುಕೊಳ್ಳುತ್ತೀರಿ, ಆದರೆ ಮೊದಲೇ ಹೇಳಿಬಿಡುತ್ತೇನೆ. ಇಂಥಹ ಸಿನೆಮಾ ನೋಡುವುದಕ್ಕೆ ಬೇರೆ ಮನಸ್ಥಿತಿಯಿರಬೇಕು. ರಕ್ತಪಾತ, ಹಿಂಸೆ, ಸ್ಫೋಟಗಳು, ತೀರ ಕಚ್ಛಾ ಎನಿಸುವ ಭಾಷೆ ಮತ್ತು ಕೆಲವೊಮ್ಮೆ ವಿಕೃತ ಎನ್ನುವ ಈ ಪಾತ್ರಗಳ ನಡವಳಿಕೆ. ಇವನ್ನೆಲ್ಲಾ ಸಹಿಸಿಕೊಳ್ಳುವ ಇವುಗಳ ಆಚೆಯ ಆ ಪಾತ್ರಗಳನ್ನು ಮತ್ತು ಸಿನೆಮಾ ಮಾಡುವುದರ ಕುಸುರಿಯ ಬಗ್ಗೆ ನಿಮಗೆ ಆಸಕ್ತಿಯಿದ್ದರೆ ನಿಮಗೆ ಈ ಚಿತ್ರ ಇಷ್ಟವಾಗಬಹುದು. ಮುಖ್ಯವಾಗಿ ವ್ಯಾಪಾರೀ ಸಿನೆಮಾಗಳ ಚೌಕಟ್ಟಿನಲ್ಲಿ ಕಮೀನೆ ಮನಸೆಳೆಯುವುದು ಇದರ ಬಿಗಿಯಾದ ಚಿತ್ರಕಥೆಯಿಂದ ಮತ್ತು ಪ್ರತಿಯೊಬ್ಬರಿಂದ ನಿರ್ದೇಶಕ ತೆಗೆದಿರುವ ನಟನೆಯಿಂದ. ಚಿತ್ರದ ಮುಖ್ಯ ಪಾತ್ರಗಳಾದ ಶಾಹೀದ ಕಪೂರ್ ಮತ್ತು ಪ್ರಿಯಾಂಕ ಚೋಪ್ರ ಇರಲಿ, ಈ ಚಿತ್ರದ ಯಾವ ಪಾತ್ರವನ್ನೂ ಸೊರಗಲು ಬಿಟ್ಟಿಲ್ಲ, ವಿಶಾಲ್ ಭಾರದ್ವಾಜ್. ಮಹಾರಾಷ್ಟ್ರ ಮರಾಠರಿಗೆ ಮಾತ್ರ ಎನ್ನುವ ರಾಜಕಾರಣಿ- ವಿಲನ್ ಅನ್ಮೋಲ್ ಗುಪ್ತೆ (ತಾರೇ ಜಮೀನ್ ಪರ್ ಖ್ಯಾತಿ), ಪಿಸ್ತೂಲಿನ ವ್ಯೂಫೈಂಡರ್ ಸರಿಯಿದೆಯೇ ಎಂದು ಜನ ಕೂತಿರುವ ರೂಮಿನಲ್ಲಿಯೇ ಪರೀಕ್ಷಿಸುವ ಬಂಗಾಲಿಬಾಬುಗಳು, ಕೊಕೈನ್ ಸ್ಮಗ್ಲರ್ ತಾಶಿ, ಪೋಲೀಸರು ಭ್ರಷ್ಟರಾಗುವುದೂ ಎಷ್ಟು ಕಷ್ಟ ಅನಿಸುವಂತೆ ಮಾಡುವ ಇನ್ಸ್‌ಪೆಕ್ಟರ್ , ಹೀಗೆ ಅನೇಕ ಕ್ಯಾರಿಕೇಚರಿಶ್ ಪಾತ್ರಗಳು ನಮ್ಮಮುಂದೆ ಬೆಳೆಯುತ್ತಲೇ ಹೋಗುತ್ತವೆ. ನಿರ್ದೇಶಕನ ಜಾಣ್ಮೆಯಿರುವುದು ತಾನೊಂದು ಬಿಗಿಯಾದ ಒಗಟಿನಂತಹ ಚಿತ್ರಕಥೆಯನ್ನು ಬರೆದಿಟ್ಟು ಅದರಲ್ಲಿ ಈ ಪಾತ್ರಗಳು ತಂಪಾಡಿಗೆ ತಾವು ಹರಿಯಬಿಟ್ಟಿದ್ದಾನೆ. ಎಲ್ಲ ಪಾತ್ರಗಳಿಗೂ ಪರದೆಯ ಮೇಲೆ ಸಮಾನ ಅವಕಾಶವಿದೆ. ಅನೇಕ ಬೇರೆಬೇರೆ ಸ್ತರಗಳ ಕಥೆಗಳು ತಾನಾಗಿಯೇ ಒಂದುಗೂಡುತ್ತವೆ, ಒಂದು ಕಥೆಗೂ ಇನ್ನೊಂದು ಕಥೆಗೂ ಇರುವ ಸಂಂಧವೇನು ಎನ್ನುವುದನ್ನು ಕೂಡ ಆ ಕಥೆಗಳೇ ಪಾತ್ರಗಳೇ ಕಂಡುಕೊಳ್ಳುತ್ತವೆ. ಈ ಆಡ್‌ಬಾಲ್ ಅನ್ನಿಸುವಂಥ ಪಾತ್ರಗಳು ಆಡುವ ಮಾತುಗಳು, ಅವರುಗಳ ಪ್ರಪಂಚ, ಸ ಕ್ಕೆ ಫ ಎಂದು ಉಚ್ಚರಿಸುವ ಚಾರ್ಲಿ ಸೊಫಿಯಗೆ ಈತ ಅನ್ನುವುದು ಫಫಿಯ) ಕಥೆ ಹೇಳುತ್ತಾ ಹೋಗುತ್ತಾನೆ. ಇಲ್ಲಿ ವ್ಯಕ್ತವಾಗುವ ಡಾರ್ಕ್ ಹ್ಯೂಮರ್, (ಕನ್ನಡದಲ್ಲಿ ಇದಕ್ಕೆ ವಕ್ರ ಹಾಸ್ಯವೆನ್ನಬಹುದೇನೋ), ಅನ್ಯೋಕ್ತಿಗಳು, ತೊದಲು, ಉಗ್ಗುಗಳನ್ನು ಹಾಸ್ಯಮಾಡುವ ಪಾಪಪ್ರಜ್ಞೆಯಿಲ್ಲದ ಮನುಷ್ಯ ಪ್ರಜ್ಞೆ ಇವೆಲ್ಲವೂ ನಿಮಗೆ ಖುಷಿ ಕೊಡುವಂತಿದ್ದರೆ ನೀವು ಈ ಸಿನೆಮಾ ನೋಡಿ.
ಇಂಥ ಸಿನೆಮಾಗಳು, ಕ್ರೈಮ್ ಕೇಪರ್‍ಗಳ ನಿರ್ದೇಶಕರುಗಳಿಗೆ ನೋಡುಗರ ಬಗೆ ಕ್ಲೀಶೆಯಾದ ನಂಬಿಕೆಯೊಂದಿದೆ. ಪ್ರೇಕ್ಷಕರುಗಳಿಗೆ ಪ್ರತೀ ಫ್ರೇಮನ್ನೂ ಅರ್ಥಮಾಡಿಸಬೇಕು, ಅದಕ್ಕಾಗಿ ಕೈತುತ್ತು ಹಾಕಬೇಕು, ಪ್ಲಾಟನ್ನು ಹೆಚ್ಚು ಜಗ್ಗಾಡಿದರೆ ಅಥವಾ ತೀರ ಅಮೂರ್ತ ಮಾಡಿದರೆ ಜನಕ್ಕೆ ಅರ್ಥವಾಗುವುದಿಲ್ಲ, ಎಂಬುದು. ಆದರೆ, ಈ ನಂಬಿಕೆಗಳನ್ನೆಲ್ಲ ವಿಶಾಲ್ ಭರದ್ವಾಜ ಗಾಳಿಗೊಗೆದಿದ್ದಾನೆ. ಇಲ್ಲಿ ಯಾರಿಗೂ ಅನವಶ್ಯಕವಾದ ಫ್ಲಾಶ್‌ಬ್ಯಾಕ್‌ಗಳಿಲ್ಲ. ಯಾರಿಗೂ ಚರಿತ್ರೆಯಿಲ್ಲ. ಎಲ್ಲರೂ ಇವತ್ತಿಗಾಗಿ ಅಥವಾ ನಾಳೆಗಾಗಿ ಬದುಕುತ್ತಿರುವವರು. ಇವರಿಗೆ ಇದರ ಬಗ್ಗೆ ಯಾವತ್ತೂ ಪಾಪಪ್ರಜ್ಞೆಯೂ ಇಲ್ಲ. ಹೀಗೆ ಬದುಕುವುದೇ ಅವರಿಗಿರುವ ಆಯ್ಕೆ.
ಚಾಕೊಲೇಟ್ ಪ್ರೇಮಕಥೆ, ಮೆಲೊಡ್ರ್ಯಾಮ, ಅಥವಾ ಅಣ್ನ-ತಂಗಿಯರ ಸೆಂಟಿಮೆಂಟು, ಅಥವಾ ವಿಧೇಯ ನಮ್ರ ಭಾಷೆ ಇವೆಲ್ಲವನ್ನೂ ಅಪೇಕ್ಷಿಸುವ ಕರಣ ಜೋಹರನ ಅಭಿಮಾನಿಗಳಿಗಲ್ಲ, ಈ ಸಿನೆಮಾ.
ಮಕಬೂಲನ ಸಿನೆಮಾದ ಚಿತ್ರಕತೆಯನ್ನು ವಿಶಾಲನ ಜತೆ ಬರೆದಿದ್ದ ಅಬ್ಬಾಸ್ ಟೈರ್‍ವಾಲ ಎಂಬಾತ ಹೇಳಿದ್ದ "ಕಬೀ ಕುಷೀ ಕಭಿ ಗಮ್" ನಂತ ಸಿನೆಮಾ ಮಾಡುವಂಥ ದುಡ್ಡಿನ ಹತ್ತನೇ ಒಂದು ಭಾಗವನ್ನು ಕೂಡ "ದಿಲ್ ಚಾಹ್ತ ಹೈ" ನಂತಹ ಚಿತ್ರಗಳು ಮಾಡಲಾಗುವುದಿಲ್ಲ, ಎಂದು. ನಿಜವಿರಬಹುದು. ಆದರೆ, ಈ "ದಿಲ್ ಚಾಹ್ತ ಹೈ" ನ ಯಶಸ್ಸು ಮುಂದಿನ ಪೀಳಿಗೆಯ ಸಿನೆಮಾಗಳಾದ "ಆಮೀರ್" "ಎ ವೆನ್ಸ್ಡೇ" "ಮುಂಬೈ ಮೇರೀ ಜಾನ್" "ರಾಕ್ ಆನ್" " ಲಕ್ ಬೈ ಚಾನ್ಸ್" ಗಳು ಈ ಮಲ್ಟಿಪ್ಲೆಕ್ಸ್ ಎಂಬ ನಂಬುಗಸ್ಥ ಕಲ್ಟ್ ಅನ್ನು ತಯ್ಯಾರುಮಾಡಿರುವುದು ಬಾಲಿವುಡ್ಡಿನ ಹೆಗ್ಗಳಿಕೆ. ಈ ಕಲ್ಟ್ ಬೆಳೆಯುತ್ತಿರುವುದು ಸಿನೆಮಾಸಕ್ತರ ಪಾಲಿಗೆ ಹಬ್ಬ. ಬುದ್ದಿವಂತ ಸಿನೆಮಾಗಳಿಗಾಗಿ ಅಮೊರೊಸ್ ಪೆರೊಸ್, ಬೆಬೆಲ್ ಗಳಿಗಾಗಲೀ ಅಥವಾ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗಾಗಲೀ ಹೋಗಬೇಕಾಗಿಲ್ಲ.
ಹೋಗಿ, ಕಮೀನೆ ನೋಡಿಬನ್ನಿ.
Subscribe to:
Post Comments (Atom)
Waw! very nice review
ReplyDeleteನಿಮ್ಮಿಂದ ಇಷ್ಟು ಹೊಗಳಿಸಿಕೊಂಡ ಸಿನೆಮಾ ನೋಡಲೇಬೇಕೆನ್ನಿಸಿದೆ ಗುರು. Thanks.
ReplyDelete