Tuesday, February 24, 2009

ಮೈನಸ್ ೨೫-ಒಂದು ಪ್ರಾರ್ಥನೆ.

ಹೊರಗಿನ ತಾಪಮಾನ ಮೈನಸ್ ೨೫ ಫಾರನ್ ಹೈಟ್. ಅಂದರೆ ಮೈನಸ್ ೩೨ ಡಿಗ್ರಿ ಸೆಂಟಿಗ್ರೇಡ್. ಉಸಿರಾಡುವಾಗ ಮೂಗಿನ ಹೊಳ್ಳೆಗಳಲ್ಲಿ ಗಟ್ಟಿಗಟ್ಟುವ ಬರ್ಫದ ಗಡ್ಡೆ. ಸುಳಿರ್ಗಾಳಿ ಹೊಡೆದು ಇನ್ನೂ ನಲವತ್ತು ಡಿಗ್ರಿ ಕಮ್ಮಿಯಾದಾಗ ಕಣ್ಣಿಂದ ಹೊರಬರುವ ನೀರೂ ಹೆಪ್ಪುಗಟ್ಟಿರುತ್ತದೆ. ನಾಲ್ಕು ಕೈಗವಸುಗಳ ಮೂಲಕವೂ ಒಳನುಗ್ಗಿ ಕೈ,ಕಾಲ್ಬೆರಳುಗಳ ತುದಿಗಳು ನೀಲಿಗಟ್ಟಿವೆ. ನಿಜವಾಗಿಯೂ ಇಲ್ಲಿನ ಚಳಿಗಳು unforgiving.

ಹೊರಗೆ ಬಿಳೀ ಮೌನ. ಮೌನಕ್ಕೆ ಬಣ್ಣವಿರುತ್ತದೆಯೇ ಎಂದು ಕೇಳುವವರು ಒಮ್ಮೆ ಸಮಶೀತೋಷ್ಣವಲಯಕ್ಕಿಂತ ಮೇಲೆ ಹೋದಾಗ ಗೊತ್ತಾಗುತ್ತದೆ. ನೀರವ ಮೌನ, ಸ್ಮಶಾನ ಮೌನಗಳು ಮೌನವನ್ನು ಗೊತ್ತಿಲ್ಲದ ವಿಭಕ್ತಿಯಲ್ಲಿ ವಿಶೇಷಣವನ್ನಿರಿಸಿ ಭಯತರಿಸಿದರೆ, ಈ ಬಿಳೀ ಮೌನ ತನ್ನ ಬಣ್ಣದಿಂದಲೇ ತನ್ನತ್ತ ಸೆಳೆಯುತ್ತದೆ. ವಿಂಟರ್ ವಂಡರ್‍ಲ್ಯಾಂಡಿನ ಈ ದಿನಗಳಲ್ಲಿ ಹೊರಗೆ ಬರಲು ಹಿಮಕರಡಿಗಳಿಗೂ ಪೆಂಗ್ವಿನ್‌ಗಳಿಗೂ ಎದೆ ಗಟ್ಟಿಯಿರಬೇಕು. ಅಕಸ್ಮಾತ್ ಹೋದರೆ ಹೆಪ್ಪುಗಟ್ಟುತ್ತಾವೋ ಏನೋ?

ತುಂಬಿದ ನಯಾಗರವನ್ನು ಅಮ್ಮನಿಗೆ ತೋರಿಸಲೆಂದು ಕರಕೊಂಡು ಹೋದಾಗ ಅದೇನನ್ನಿಸಿತೋ ಸೀದಾ ನಡೆದು ಪಕ್ಕದಲ್ಲಿದ್ದ ಬ್ಯಾಕ್‌ವಾಟರಿನ ತಟಕ್ಕೆ ನಡೆದು, ಚಪ್ಪಲಿ ತೆಗೆದು ಕಾಲುತೊಳೆದು, ಎರಡು ಹನಿಯನ್ನು ತಲೆಯಮೇಲೆ ಪ್ರೋಕ್ಷಣೆ ಮಾದಿಕೊಂಡುಬಿಟ್ಟಿದ್ದಳು. ಎಲ್ಲರೂ ಏ, ಹೇ ಎಂದು ಕೂಗಿದಾಗ ಸೆಕ್ಯುರಿಟಿ ಸ್ಕ್ವಾಡಿನವರು ಬಂದು ಪಕ್ಕಕ್ಕೆ ಕರಕೊಂಡು ಹೋಗಿ, ಕೆಳಗೆ ಬಿದ್ದರಾಗಬಹುದಾದ ಅಪಾಯವನ್ನು ನಯವಾಗಿ ವಿವರಿಸಿದಾಗ ಅಮ್ಮ ಸಂಕೋಚದಿಂದ 'ನೀರೆಂದರೆ ಒಂತರಾ ಸೆಳೆತ ಕಣೋ. ಕೆಲವರಿಗೆ ತುಂಬಿದ ನೀರನ್ನು ನೋಡಿದರೆ ಮುಟ್ಟಬೇಕು, ಕಾಲು ತೊಳೆದುಕೊಳ್ಳಬೇಕು ಅನ್ನಿಸುತ್ತದ್ದೆ. ಇಂಥಾ ಚೆನ್ನಾಗಿರುವ ನೀರನ್ನು ಮುಟ್ಟಿನೋಡದಿದ್ದರೆ ಹೇಗೆ?' ಎಂದು ಕೇಳಿದ್ದಳು.

ಈ ಕೊರೆಯುವ ಛಳಿಯೂ ಹಿಮಗಡ್ಡೆಯೂ ಸೆಳೆತವೇ ಮನುಷ್ಯನಿಗೆ. ಹೊರಗೆ ನೋಡಿದರೆ, ಬರೇ ದಿಗಂತದವರೆಗೂ ಬರೇ ಶ್ವೇತವರ್ಣ. ಅಲ್ಲಿ ಕಾಣಿಸುತ್ತಿದ್ದಾನೆ, ಒಬ್ಬನೇ ಒಬ್ಬ. ಮೊಳೆಗಳಿರುವ ಶೂಗಳನ್ನು ಕಾಲಿಗೆ ಹಾಕಿ, ಕಾಲಿನ ಕೆಳಗಿನ ಮಂಜುಗೆಡ್ಡೆಯನ್ನು ತರೆಯುತ್ತಾ, ಒಡೆಯುತ್ತಾ ಕಣ್ಣೆರಡು ಮಾತ್ರ ಕಾಣಿಸುವಂತೆ ಇಡೀ ಮೈಯನ್ನು ಅಂಡರ್ವೇರಿನ ಹೊರಗೆ ಐದೈದು ಪದರಗಳಿಂದ ಮುಚ್ಚಿಕೊಂದು ಒಬ್ಬನೇ ಓಡುತ್ತಿದ್ದಾನೆ. ಕಾಣಿಸುವ ಅನತಿದೂರದ ತನಕ ಇನ್ನೊಂದು ಕಾಗೆಯೂ ಇಲ್ಲ. ಪಕ್ಕದ ಬೀದಿಯಲ್ಲಿ ಕಂಬೋಡಿಯಾದ 'ನಿಲೆ' ತನ್ನ ಮಗಳ ಜತೆ ಸೇರಿ ದೊಡ್ಡ ಮಗಚುವ ಕೈಯಿಂದ ಹಿಮವನ್ನು ಬಳಿದು ಪಕ್ಕಕ್ಕೆ ಹಾಕುತ್ತಿದ್ದಾನೆ. ಸುಲಭಕ್ಕೆ ಮಣಿಯದ ಬರ್ಫ ನೆಲಗಟ್ಟಿದೆ. ಕರಕರನೆ ಕೆರೆದು ಉಪ್ಪು ಮರಳನ್ನು ಹಾಕಿದರೂ ಹೊರಗೆ ಬರದು.

ಮಕ್ಕಳಿಗೆ ಸ್ಕೂಲಿಗೆ ರಜ. ಇದೊಂತರಾ ಆರ್ಕ್ಟಿಕ್ ತುರ್ತಂತೆ. ಮನೆಯಲ್ಲಿ ಟೀವಿಯ ಮುಂದೆ ಅಗಿಷ್ಟಿಕೆಯನ್ನು ಹಚ್ಚಿಕೊಂಡು ಕೂತಿಯಾವೆ.

ಪಕ್ಕದ ಬೀದಿಗೆ ಬಂದ ಮೈಸೂರು ಅಂಕಲ್ ತಮ್ಮ ಪತ್ನಿಯೊಂದಿಗೆ ವಾಕಿಂಗ್ ಹೋಗಲು ಪ್ರಯತ್ನವನ್ನೇನೋ ನಡೆಸಿದ್ದಾರೆ. ಮಕ್ಕಳು ಮನೆಯಲ್ಲಿಲ್ಲವೇನೋ. ಲಕ್ಷಣವಾಗಿ ಸೀರೆಯುಟ್ಟು, ತಲೆಗೊಂದು ಮಂಕಿಕ್ಯಾಪ್ ಮತ್ತು ಮಫ್ಲರ್, ಕಾಲಿಗೆ ಹಾಕಿದ ಪೂಮ ಶೂಗಳು,ಹಾಕಿದ್ದ ಉಣ್ಣೆಯ ಮುಖಕವಚದಿಂದ ಸಣ್ಣಗೆ ಕಾಣುತ್ತಿರುವ ಗಟ್ಟಿ ಸ್ಟಿಕ್ಕರಂತಾಗಿರುವ ಕೇವಲ ಕೆಲ ಸಮಯದ ಹಿಂದೆ ಬೇಸ್‌ಮೆಂಟಿನ ದೇವರಮನೆಯಲ್ಲಿ ಕುಂಕುಮಾರ್ಚನೆ ಮಾಡಿ ನೊಸಲಿಗೆ ಹಚ್ಚಿದ ಹುಡಿಗುಂಕುಮ. ಒಂದು ಹೆಜ್ಜೆ ಮುಂದಿಟ್ಟರೆ ಎರಡು ಹೆಜ್ಜೆ ಹಿಂದಿಡುವ ಹಾಗೂ ಬಿದ್ದು ಕಾಲು ಮುರಿದುಕೊಂಡರೆ ವಿಮಾ ಕಂಪೆನಿಗಳು ಕವರ್ ಮಾಡದ ಕಾಯಿಲೆಗಳು ನೆನಪು.

ಇನ್ನೆರಡು ನಿಮಿಷದ ನಂತರ ನೋಡಿದಾಗ ಇಬ್ಬರೂ ವಾಪಸ್ಸು ತಮ್ಮ ಮನೆಗೆ ಸ್ವಸ್ಥ ತೆರಳುತ್ತಿರುವುದನ್ನು ನೋಡಿ ಏನೋ ಸಮಾಧಾನ. ಮೈಸೂರಿನ ಚಳಿಯಲ್ಲಿಯೇ ವಾಕಿಂಗ್ ಹೋಗದ ಈ ದಂಪತಿಗಳನ್ನು ಮನೆಯೊಳಗೆ ಇರಿಸಿಕೊಳ್ಳದಾರದಷ್ಟು ಮೌನವೇ ಮನೆಯೊಳಗೆ. ಆದರೆ, ಆ ಮೌನಕ್ಕೆ ಈ ಮೌನ ಉತ್ತರವಲ್ಲ ಎನ್ನುವುದರ ಪ್ರಮಾಣೀಕರಣ. ಸಾಕ್ಷಿಸಮೇತ.
* * *
ಈ ಹಿಮದ ಮಧ್ಯೆ ಒಂದು ಪುಟ್ಟ ಚರ್ಚು. ಕಳೆದೆರಡು ವರ್ಷಗಳಿಂದ ಕಾರಣಾಂತರಗಳಿಂದ ಚರ್ಚಿನ ಬಜೆಟ್‌ನಲ್ಲಿ ಖೋತಾ, ಈ ವರ್ಷದ ಪೂಜೆ ಪುನಸ್ಕಾರಗಳಿಗೆ ಅವಕಾಶವಿಲ್ಲ. ಭಾನುವಾರದ ಚರ್ಚಿನ ಕಾರ್ಯಗಳಿರಲಿ ಆ ಚರ್ಚಿನಲ್ಲಿ ಸತ್ತವರ ಅಂತ್ಯಕಾರ್ಯಗಳೂ ನಡೆಯದಿರುವಂತ ಪರಿಸ್ಥಿತಿ.

ಚರ್ಚಿನ ಕಟ್ಟಡ ಸಾವಿರದ ಎಂಟುನೂರರದ್ದಂತೆ. ಲಂಡನ್ನಿನ ಬಿಗ್‌ಬಿನ್‌ಅನ್ನು ಹೋಲುವ ಈ ಕಟ್ಟಡ ಕಟ್ಟಿಸಿದ್ದು ಸಾವಿರದ ಎಂಟನೂರರಲ್ಲಾದರೂ ಈಗ ಸರಕಾರದ ಸ್ವಾಮ್ಯದಲ್ಲಿರುವ ಆ ಕಟ್ಟಡಕ್ಕೆ ಚರ್ಚಿನ ಆಡಳಿತ ಮಂಡಳಿ ಪ್ರತಿತಿಂಗಳೂ ಬಾಡಿಗೆ ಕೊಡಬೇಕಿತ್ತು. ಸಲ್ಲಬೇಕಾಗಿದ್ದ ಬಾಡಿಗೆ ಸಲ್ಲದೇ ಇದ್ದುದರಿಂದ ಸರಕಾರ ಚರ್ಚಿನ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಂಡು ಚರ್ಚನ್ನು ಬಾಡಿಗೆಗಿಟ್ಟಿದ್ದಾರಂತೆ. ಜೀಸಸ್ ಬಡವನಾಗಿದ್ದಾನೆ.

ಗುಜರಾತಿ ವ್ಯಾಪಾರಿಗಳು, ವೈದ್ಯರುಗಳು ಮತ್ತು ಇನ್ನೊಂದಿಷ್ಟು‌ಐಟಿಬಿಟಿ ಮಂದಿ ಸೇರಿ 'ಕಟ್ಟೋಣ ನಾವು ಗುಡಿಯೊಂದನು' ಎಂದರು. ಬಿಕರಿಗಿದ್ದ ಚರ್ಚನ್ನು ಮಾರ್ಕೆಟ್ ದರದಲ್ಲಿ ಖರೀದಿಸಲಾಯಿತು. ಶೇಕಡಾ ನಾಲ್ಕು ಬಡ್ಡಿಗೆ ಬ್ಯಾಂಕೂ ಸಾಲಕೊಟ್ಟಿತು. ತಿಂಗಳ ಬಾಡಿಗೆ, ಎಲಕ್ಟ್ರ್ರಿಸಿಟಿ ಖರ್ಚು ಮತ್ತು ಹೊರಗೆ ಮಂಜು ತೆಗೆಯುವ, ಹುಲ್ಲುಕತ್ತರಿಸುವ ಖರ್ಚನ್ನು ಲೆಕ್ಕಹಾಕಿ ತಿಂಗಳಿಗೆ ಇಂತಿಷ್ಟು ಖರ್ಚು ಬರಬಹುದು ಎಂದು ನಿರ್ಧರಿಸಲಾಯಿತು. ಓಂ ಎಂದು ಶುರುವಾದ ಎರಡು ಗಂಟೆಯ ಪವರ್‍ಪಾಯಿಂಟ್ ಪ್ರೆಸೆಂಟೇಶನ್ ಆಯವ್ಯಯಗಳನ್ನು ಒಪ್ಪಿಸಿದ ಮೇಲೆ ದೇವಸ್ಥಾನದ ಬೈಲಾಗನ್ನು ಮಾಡಿ ಸಹಿ ಹಾಕಿ ದೇವಸ್ಥಾನ ಶುರುವಾಗಿತ್ತು.
ಆದರೆ, ಸಿಟಿ ಕೋಡಿನ ಪ್ರಕಾರ ೧೮೦೦ರ ಈ ಕಟ್ಟಡದ ಹೊರರೂಪ ಯಾವರೀತಿಯಲ್ಲಿಯೂ ಬದಲಾಗಬಾರದು. ನಗರದ ಕಾನೂನಿನ ರೀತ್ಯಾ ಒಳಗೆ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು, ಬೇಕಿದ್ದರೆ.

ಶಿಲುಬೆ ಕೆಳಗಿಳಿಯಿತು. ತಿರುಪತಿಯಿಂದ ಬಂದ ಅರ್ಚಕರು ಸೇರಿ ವಾಸ್ತುಹೋಮ, ಪುಣ್ಯಾಹಗಳನ್ನು ಮಾಡಿಯಾಯಿತು. ಪೂರ್ವಾಭಿಮುಖವಾಗಿ ವೆಂಕಟರಮಣ, ಅಮೃತಶಿಲೆಯ ಗಣಪತಿ, ಸಂತೋಷಿಮಾ, ಸಾಯಿಬಾಬ, ಲಕ್ಷ್ಮೀ ಸರಸ್ವತಿಯರ ಪ್ರತಿಷ್ಠಾಪನೆಯಾಯಿತು. ಸಮುದಾಯವನ್ನು ಒಗ್ಗೂಡಿಸಲು ಸಂಜೆ ಕರ್ನಾಟಕ ಸಂಗೀತ, ವಿಷ್ಣು ಸಹಸ್ರನಾಮ, ಬಾಲ ಗೋಕುಲ, ಹಿಂದೀ ಪಾಠ ಇತರೇ ಎಲ್ಲ ಶುರುವಾಯಿತು.

ಉಹೂ ಗಿಟ್ಟಲಿಲ್ಲ. ಆರು ತಿಂಗಳಾದರೂ ಬ್ಯಾಂಕಿಗೆ ಸಾಲಕಟ್ಟುವಷ್ಟೂ ದುಡ್ಡು ಹುಟ್ಟಲಿಲ್ಲ. ಮತ್ತೆ ದೇವರುಗಳೆಲ್ಲಾ ದಿವಾಳಿಯಾಗುವ ಪರಿಸ್ಥಿತಿ. ಯಾರೋ ಸೂಚಿಸಿದರು. ಕೆಳಗಿನ ನೆಲಮಾಳಿಗೆಯನ್ನು ಸ್ವಲ್ಪ ಸರಿಮಾಡಿದರೆ, ಅದು ಸಮುದಾಯಭವನವಾಗುತ್ತದೆ. ಆಗ ಅದರ ಬಾಡಿಗೆಯಿಂದ ಸ್ವಲ್ಪ ದೇವರುಗಳು ಉಳಿಯಬಹುದೇನೋ.

ನೆಲಕ್ಕೆ ಮರದ ರಿಪೀಸುಗಳನ್ನು ಹಚ್ಚಿ, ಗೋಡೆಗೆ ಬಣ್ಣ ಹಚ್ಚಿ, ಹೀಟರಿನ ಗಾಳಿಯನ್ನು ಕೆಳಕ್ಕೆ ಬಾಗಿಸಿ, ಒಂದಿಷ್ಟು ಅಳ್ಳಕಗೊಳಿಸಿ ಸುಮಾರು ಇನ್ನೂರು ಜನರ ಸಣ್ಣ ಕಾರ್ಯಕ್ರಮ ನಡೆಯಬಲ್ಲ ಸಮುದಾಯ ಭವನ ಆರಂಭವಾಗಿದೆ, ಈಗತಾನೇ.

ಇಂದು ಅಲ್ಲಿ ರೇಷ್ಮಾ ಮತ್ತು ಅನೂಷ ಅವಳಿಗಳ ಮೊದಲ ವರ್ಷದ ಹುಟ್ಟುಹಬ್ಬ. ಮುಸ್ತಾಫ ಮತ್ತು ಇಂದಿರಾರ ಮೊದಲ ಕರುಳ
ಕುಡಿಗಳು ಅವು. ಬೇಸ್‌ಮೆಂಟಿನಲ್ಲಿ ಅರೆಚಂದ್ರ ಮತ್ತು ನಕ್ಷತ್ರದ ಸಣ್ಣ ಚಿತ್ರಪಟ. ಕೇಕಿನಲ್ಲಿ ಮೊಟ್ಟೆಯಿದ್ದರೂ ಪರವಾಗಿಲ್ಲ ಊಟ ವೆಜಿಟೇರಿಯನ್ ಆಗಲೇಬೇಕೆಂಬ ನಿಯಮಗಳು ಗುಡಿಯ ಬೈಲಾ ದಲ್ಲಿವೆ. 'ಅಸ್ಸಲಾಮ್ ವಾಲೇಖುಮ್' ಗಳ ನಡುವೆ ಮಕ್ಕಳು ಕೇಕನ್ನು ಕತ್ತರಿಸಿವೆ. ಖುದಾ ಹಫೀಜ್

ಇಂದು ಹಿಮಪಾತವಾಗದಿರಲಿ. ಒಂದು ವೇಳೆ ಆದರೂ ಚರ್ಚು, ದೇವಸ್ಥಾನಗಳು ಮುಚ್ಚಿಹೋಗದಿರಲಿ. ವರ್ತಮಾನದ ಈ ಸಂತಸದ ಘಳಿಗೆಯನ್ನು ನೋಡಿ ಸುಖಿಸಿದ ದೇವರುಗಳು ಮುಂದೆಂದೋ ಆಗುವ ಉತ್ಖನನದ ನಂತರ ಜಗಳವಾಡದಿರಲಿ.

1 comment:

  1. ನಿಮ್ಮ ಕತೆಗಳಲ್ಲಿ ಜೀವಂತಗೊಳ್ಳಬೇಕಿದ್ದ ಈ ಎಲ್ಲ ವಿವರಗಳು ಮತ್ತು ನೀವು ಹೇಳದಿದ್ದರೂ ಹೇಳಿದಂತಿರುವ ಸಂಗತಿಗಳನ್ನು ಇಲ್ಲಿ ಓದಿ ಖುಶಿಯೂ ಆಗುತ್ತಿದೆ, ಸ್ವಲ್ಪ ದುಃಖವೂ ಆಗುತ್ತಿದೆ ಗುರು. ಏನಿದ್ದರೂ ಬರೆದಿರುವುದು ಚೆನ್ನಾಗಿದೆ, ನಿಮ್ಮ ಜೊತೆ ಹೀಗಾದರೂ ಒಂದಿಷ್ಟು ಮಾತನಾಡುವುದು (ಅಂದರೆ ನಿಮ್ಮ ಮಾತು ಕೇಳುವುದು) ಸಾಧ್ಯವಾಗಿರುವುದು ನನಗಂತೂ ತುಂಬ ಸಂತೋಷದ ಸಂಗತಿ.

    ReplyDelete