Wednesday, October 14, 2009

ಅಧಿಕಾರ- ಅಂತರ ಮಾಪಕ

೧೯೯೦ ರ ಜನವರಿ ತಿಂಗಳಲ್ಲಿ ಕೆರಿಬಿಯನ್‌ನ ‘ಏವಿಯಂಕ ಏರ್‌ಲೈನ್’ನ ವಿಮಾನವೊಂದು ನ್ಯೂಯಾರ್ಕಿನ ಲಾಂಗ್ ಐಲ್ಯಾಂಡಿನ ಬಳಿ ಒಂದು ಎಸ್ಟೇಟಿನ ಬಳಿ ಅಪಘಾತಕ್ಕೀಡಾಗಿತ್ತು. ಕಾರಣ ಬಹಳ ಸರಳವಾಗಿತ್ತು-ವಿಮಾನದಲ್ಲಿ ಇಂಧನ ಮುಗಿದುಹೋಗಿತ್ತಂತೆ. ಅಂದು ನ್ಯೂಯಾರ್ಕಿನ ಜಾನ್ ಎಫ್ ಕೆನಡಿ ವಿಮಾನನಿಲ್ದಾಣದಲ್ಲಿ ಕೆಟ್ಟ ಹವೆ, ವಿಪರೀತ ವಿಮಾನಜಂಗುಳಿ ಮತ್ತು ರನ್‌ವೇ ಅಭಾವದಿಂದ ಬಹಳಷ್ಟು ವಿಮಾನಗಳನ್ನು ಸರಿಯಾದ ಸಮಯದಲ್ಲಿ ಇಳಿಸಲಾಗಲಿಲ್ಲ. ಬಹಳಷ್ಟು ವಿಮಾನಗಳು ಗಾಳಿಯಲ್ಲಿ ಹಾರಾಡುತ್ತಾ ತಮ್ಮ ಸರದಿಗಾಗಿ ಕಾಯುತ್ತಿದ್ದವು. ಆ ಸಮಯದಲ್ಲಿ ಹಾಗೇ ಹಾರಾಡುತ್ತಿದ್ದ ಏವಿಯಂಕ ವಿಮಾನವು ತನ್ನಲ್ಲಿ ಉಳಿದಿದ್ದ ಇಂಧನವನ್ನೆಲ್ಲ ಉರಿಸಿ ಖಾಲಿಯಾಯಿತು. ಪೈಲಟ್ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದ್ದರೆ ಇದೇ ಇಂಧನವನ್ನು ಉಪಯೋಗಿಸಿಕೊಂಡು ಈ ವಿಮಾನ ಹತ್ತಿರವಿದ್ದ ಬಾಸ್ಟನ್ ಅಥವಾ ಫಿಲಡೆಲ್ಫಿಯಾದಲ್ಲಿ ಬಹಳ ಸುಲಭವಾಗಿ ಲ್ಯಾಂಡ್ ಆಗಬಹುದಾಗಿತ್ತು. ಆದರೆ, ಹಾಗೆ ಆಗಲಿಲ್ಲ.

ವಿಮಾನದ ಪೈಲಟ್ ನ್ಯೂಯಾರ್ಕಿನ ಏರ್ ಟ್ರಾಫಿಕ್ ಕಂಟ್ರೋಲರ‍್ಗಳಿಗೆ ತನ್ನ ವಿಮಾನದಲ್ಲಿ ಇಂಧನದ ಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿದೆ ಎಂಬ ವಿಷಯವನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಸುವುದರಲ್ಲಿ ಎಡವಿದ್ದ. ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ಭಾಶೆಯಲ್ಲಿ ಈ ಪೈಲಟ್ ಹೇಳಿದ ‘We are running out of gas’ ಅಂಥಾ ದೊಡ್ದ ವಿಷಯವೇ ಅಲ್ಲ. ಯಾಕೆಂದರೆ, ಎಲ್ಲ ವಿಮಾನಗಳಲ್ಲಿಯೂ ಲ್ಯಾಂಡ್ ಆಗುವ ಮುನ್ನ ಸಾಮಾನ್ಯವಾಗಿ ಇಂಧನ ಮುಗಿಯುವ ಮಟ್ಟಕ್ಕೆ ಬಂದಿರುತ್ತದೆ. ‘ತಾನು ಈಗ ಲ್ಯಾಂಡ್ ಆಗದಿದ್ದರೆ ವಿಮಾನಕ್ಕೆ ತೊಂದರೆಯಾಗುವ ಸಂಭವವಿದೆ. ಈಗ ಕೆಳಗಿಳಿಯಲೇ ಬೇಕು’ ಎಂದು ಅಧಿಕಾರಯುತವಾಗಿ ಆ ಪೈಲಟ್ ಹೇಳಿರಲಿಲ್ಲ. ನಂತರ ಈ ವಿಮಾನಕ್ಕೆ ರನ್‌ವೇ ಸಿಕ್ಕಿ ಅದು ನೆಲಕ್ಕೆ ಮುಟ್ಟುವ ಮುನ್ನ ವಿಮಾನದ ನಾಲ್ಕೂ ಇಂಜಿನ್‌ಗಳೂ ಸ್ಥಗಿತಗೊಂಡಿದ್ದವು. ವಿಮಾನ ನಿಲ್ದಾಣದ ಪಕ್ಕದಲ್ಲಿದ್ದ ಯಾವುದೋ ಒಂದು ಎಸ್ಟೇಟಿನಲ್ಲಿ ಅಪಘಾತಕ್ಕೊಳಗಾಯಿತು. ಎಪ್ಪತ್ಮೂರು ಜನ ಸ್ಥಳದಲ್ಲಿಯೇ ಸತ್ತರು.

ಮಾಲ್ಕಮ್ ಗ್ಲಾಡ್‌ವೆಲ್ ಎಂಬ ಬೆಸ್ಟ್‌ಸೆಲ್ಲರ್ ಸಾಹಿತಿಯೊಬ್ಬ ಬರೆದಿರುವ ‘The Outliers’ ಎನ್ನುವ ಪುಸ್ತಕದಲ್ಲಿ ಇಂಥ ಅಪಘಾತಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋಗುತ್ತಾನೆ. ‘ಮೇಲಣ ಅಧಿಕಾರಿಗಳ ನಿರ್ಣಯವನ್ನು ಕೊಂಚವೂ ಪ್ರಶ್ನಿಸಬಾರದೆಂಬ ಸಂಸ್ಕೃತಿಯಲ್ಲಿ ಬೆಳೆದುಬಂದ ಈ ಕೊಲಂಬಿಯನ್ ಪೈಲಟ್ಟುಗಳು ನ್ಯೂಯಾರ್ಕಿನ ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ನಿರ್ಣಯವನ್ನು ಪ್ರಶ್ನಿಸಲಾಗದೇ ಅಥವಾ ತಮ್ಮ ತುರ್ತನ್ನೂ ಅವರಿಗೆ ಸ್ಪಷ್ಟವಾದ ಪದಗಳಲ್ಲಿ ಸಂವಹಿಸಲಾಗದೇ ಇದ್ದುದೇ ಈ ಅಪಘಾತಕ್ಕೆ ಮೂಲ ಕಾರಣ’ ಎಂದು ನಿರ್ಧರಿಸುತ್ತಾನೆ.

ಇದೇ ನಿಟ್ಟಿನಲ್ಲಿ ಇಂಥ ವಿಮಾನಾಪಘಾತದ ಸಂಸ್ಕೃತಿಯನ್ನು ವಿಶ್ಲೇಷಿಸುತ್ತಾ “ ಕೆಲವೊಂದು ವಿಮಾನಗಳಲ್ಲಿ ಪೈಲಟ್ಟು-ಕೋಪೈಲಟ್ಟುಗಳ ಸಂಬಂಧ ಬಹಳ ಬೇರೆಯಾಗಿರುತ್ತದೆ. ಕೋ ಪೈಲಟ್ಟುಗಳು ಬಹಳಷ್ಟು ಬಾರಿ ಪೈಲಟ್ಟುಗಳಿಗೆ ಊಟ ಬಡಿಸುತ್ತಾರೆ, ಒಂದೇ ಹೋಟೆಲಿನಲ್ಲಿ ಉಳಿದುಕೊಳ್ಳುವುದಿಲ್ಲ. ಕೆಲವೊಮ್ಮೆ ಆತನಿಗೆ ವಿಸ್ಕಿ ಬೇಕಿದ್ದರೆ ಅದನ್ನು ತಂದುಕೊಟ್ಟು ಪೂರೈಸುತ್ತಾನೆ. ತನಗೆ ಕುಡಿಯಬೇಕೆನ್ನಿಸಿದರೆ ಮರೆಯಲ್ಲಿ ಹೋಗಿ ಕೈಮುಚ್ಚಿ ಕುಡಿಯುತ್ತಾನೆ. ಇದು ಧಣಿ-ಆಳಿನ ಸಂಬಂಧ’ ಎನ್ನುತ್ತಾನೆ.

ಏವಿಯಂಕ ವಿಮಾನದ ಕಾಕ್‌ಪಿಟ್‌ನಲ್ಲಿ ಆಡಿರಬಹುದಾದ ಸಂಭಾಷಣೆಯನ್ನು ಆಧರಿಸಿ ಗ್ಲಾಡ್‌ವೆಲ್ ಈ ತೀರ್ಮಾನಕ್ಕೆ ಬರಬಹುದು. ಕಾಕ್‌ಪಿಟ್ನಲ್ಲಿರುವ ಕೊ ಪೈಲಟ್ ಮತ್ತು ಫ್ಲೈಟ್ ಇಂಜಿನಿಯರ್ ಇಬ್ಬರಿಗೂ ತಮ್ಮ ವಿಮಾನ ಅಪಾಯಕಾರಿಯಾಗಿ ಹಾರಾಡುತ್ತಿದೆ ಎಂದು ಗೊತ್ತಿದ್ದರೂ ಪೈಲಟ್ಟಿನ ನಿರ್ಣಯವನ್ನು ಪ್ರಶ್ನಿಸುವ ಹಕ್ಕಿಲ್ಲ, ಎಂದು ತಿಳಿದಿದ್ದರೇ? ಹಾಗೆಯೇ, ಆ ಪೈಲಟ್ಟೂ ಕೂಡ ಅಷ್ಟೇ. ತನಗಿಂತ ಮೇಲಣ ಆಫೀಸರ್ ಎಂದು ಭಾವಿಸಿರುವ ನ್ಯೂಯಾರ್ಕಿನ ಏರ್‌ಟ್ರಾಫಿಕ್ ಕಂಟ್ರೋಲರುಗಳ ನಿರ್ಣಯವನ್ನು ಪ್ರಶ್ನಿಸುವುದಿರಲಿ, ತನ್ನ ತುರ್ತನ್ನೂ ಅವರಿಗೆ ತಲುಪಿಸಲಾಗಲಿಲ್ಲ. ಒಂದು ಘಟ್ಟದಲ್ಲಿ ‘ನನಗೆ ಸ್ಪಾನಿಶ್ ದುಭಾಷಿ ಬೇಕು’ ಎಂದು ಕೇಳಿದ್ದನಂತೆ.

ಆ ಕಾಕ್‌ಪಿಟ್ಟಿನ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳೋಣ. ಸ್ಪಾನಿಶ್ ಭಾಶೆಯನ್ನು ಮಾತಾಡುತ್ತಿರುವ ಇಬ್ಬರು ಪೈಲಟ್ಟುಗಳು, ವಿಮಾನದಲ್ಲಿ ಇಂಧನ ಮುಗಿದಿದೆ ಎಂದು ಎಲ್ಲರಿಗೂ ಗೊತ್ತಿದೆ. ತನ್ನ ವಿಮಾನ ಅಪಾಯದಲ್ಲಿದೆ ಎಂದು ಗೊತ್ತಿದ್ದ ಕ್ಯಾಪ್ಟನ್ ಇದನ್ನು ತನ್ನ ಮೇಲಧಿಕಾರಿಗಳಿಗೆ ಹೇಳಲಾಗದೇ ಇದ್ದುದಕ್ಕೆ ಕಾರಣವೇನಿರಬಹುದು. ಒಂದು, ಪರಿಣಾಮಕಾರಿಯಾಗಿ ಇಂಗ್ಲಿಶ್ ಭಾಷೆಯನ್ನು ಬಳಸುವುದು ಆತನಿಗೆ ಸಾಧ್ಯವಾಗಿಲ್ಲ. ಎರಡನೆಯದು ಅಧಿಕಾರಯುತವಾದ ಅಮೆರಿಕನ್ ಉಚ್ಚಾರದಲ್ಲಿ ‘I am asking you a direct question. Do you consider your situation as emergency or priority? ಎಂದು ಕೇಳಿದಾಗ ತನ್ನ ಜತೆಗಿರುವ ಕೈಕೆಳಗಿನ ಅಧಿಕಾರಿಗಳ ಮುಂದೆ ತನ್ನ ಮ್ಯಾಚಿಸ್ಮೋವನ್ನು ಬಿಡಲಾಗದೆ ‘ಪ್ರಯಾರಿಟಿ’ಎಂದು ಹೇಳಿದ್ದಾನೆ. ಇಡೀ ವಿಮಾನದಲ್ಲಿರುವ ಜೀವಗಳ ಜವಾಬ್ದಾರಿ ತನ್ನದು ಎಂದು ಗೊತ್ತಿದ್ದಾಗಲೂ ತಾನು ಕೊಲಂಬಿಯನ್, ಕಂದು ಬಣ್ಣದವ, ಬಿಳೀ ಬಣ್ಣದ ಇಂಗ್ಲಿಶ್ ಮಾತಾಡುವ ಜಗತ್ತಿನ ಅತಿದೊಡ್ಡ ವಿಮಾನನಿಲ್ದಾಣದ ಏರ‍್ಟ್ರಾಫಿಕ್ ಕಂಟ್ರೊಲರ್ ಜತೆ ಮಾತಾಡುತ್ತಿದ್ದೇನೆ ಎನ್ನುವ ಅಂಶ ಅವನ ಬಾಯನ್ನು ಕಟ್ಟಿಹಾಕಿದೆ. ತನ್ನ ತುರ್ತನ್ನೂ ಸಂವಹಿಸಲಾಗದೇ ಹೋಗಿದ್ದಾನೆ.

* * *

ಇದನ್ನು ಮಾಲ್ಕಮ್ ಗ್ಲಾಡ್‌ವೆಲ್ ‘ಅಧಿಕಾರ-ಅಂತರ- ಮಾಪಕ’ ಎಂದು ಕರೆಯುತ್ತಾನೆ. (Power distance index). ಶ್ರೇಣೀಕೃತ ಸಂಸ್ಕೃತಿಯಲ್ಲಿ ಮೇಲಧಿಕಾರಿಯ ಜತೆ ಕೆಳಗಿನ ಅಧಿಕಾರಿ ಅಥವಾ ಒಂದು ಸಂಸಾರದ ಮುಖ್ಯಸ್ಥನ ಜತೆ ಸಂಸಾರದ ಇನ್ನಿತರರು ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನು ಕೆಳಗಿನಿಂದ ನೋಡುವ ಮಾಪಕ ಇದು. ಈ ಸೂಚಿ ಹೆಚ್ಚಿದ್ದಷ್ಟೂ ಅಧಿಕಾರಗಳ ನಡುವಿನ ಅಂತರವೂ ಹೆಚ್ಚಿರುತ್ತದೆ. ಜರ್ಮನಿಯಲ್ಲಿ ಈ ಮಾಪಕ ೩೫ರಷ್ಟಿದ್ದರೆ, ಕೆಲವೊಂದು ಅರಬ್ ರಾಷ್ಟ್ರಗಳಲ್ಲಿ ಇದು ೮೦ರಷ್ಟು ಇದೆ. ಅಮೆರಿಕಾದಲ್ಲಿ ಇದು ೪೦ರ ಸಮೀಪದಲ್ಲಿದೆ. ಭಾರತ, ಪಾಕಿಸ್ತಾನ, ಕೊರಿಯಾ, ಚೀನಾ ಮುಂತಾದ ಏಷಿಯಾದ ದೇಶಗಳಲ್ಲಿ ಇದು ಹೆಚ್ಚಾಗಿದ್ದರೆ, ಜಪಾನ್, ಸಿಂಗಪೂರ್, ಜರ್ಮನಿ, ಅಮೆರಿಕ, ಇಂಗ್ಲೆಂಡುಗಳಲ್ಲಿ ಇದು ಕಡಿಮೆ ಇದೆ.

ಇದನ್ನು ನಾವು ದಿನನಿತ್ಯದ ವ್ಯವಹಾರದಲ್ಲಿಯೂ ಮತ್ತು ನಾವು ಉಪಯೋಗಿಸುವ ಭಾಷೆಯಲ್ಲಿಯೂ ಕಾಣಬಹುದು. ಇಂಗ್ಲಿಷಿನಲ್ಲಿ ಮರ್ಯಾದಾಸೂಚಕ ಬಹುವಚನವಿಲ್ಲ. ಅಂದರೆ, ಕನ್ನಡದಲ್ಲಿದ್ದಂತೆ ನೀನು, ನೀವು, ತಾವುಗಳ ಅಂತರ ಇಂಗ್ಲಿಶ್ ಭಾಶೆಯಲ್ಲಿಲ್ಲ. ಇಲ್ಲಿ ಮೇಲಧಿಕಾರಿಗಳು ಮತ್ತು ಕೆಳಗಿನ ಅಧಿಕಾರಿಗಳು ಇಬ್ಬರೂ ಒಂದೇ ಪ್ರತ್ಯಯವನ್ನು ಉಪಯೋಗಿಸಿ ಮಾತಡುತ್ತಾರೆ. ಹೆಚ್ಚೆಂದರೆ, ಮಿಸ್ಟರ್, ಡಾಕ್ಟರ್ ಎಂಬ ನಾಮಪೂರ್ವ ವಿಶೇಷಣಗಳನ್ನು ಉಪಯೋಗಿಸಿದರೆ ಅಥವಾ ಕೊನೆಯ ಹೆಸರನ್ನು ಉಪಯೋಗಿಸಿದಾಗ ಅದು ಮರ್ಯಾದೆಯನ್ನು ಸೂಚಿಸುವಂತಾಗುತ್ತದೆ. (ಎ ಕೆ ರಾಮಾನುಜನ್ ರವರ ಸಂಸ್ಕಾರದ ಇಂಗ್ಲಿಶ್ ತರ್ಜುಮೆಯಲ್ಲಿ ‘You have to respect me . Call me in Pleural. (ಮರ್ಯಾದೆ ಕೊಟ್ಟು ಮಾತನಾಡು,ಬಹುವಚನದಲ್ಲಿ ಕರೆ) ಎಂಬ ಉಪಯೋಗ ಅನೇಕ ಇಂಗ್ಲಿಶ್ ಓದುಗರಿಗೆ ಗೊಂದಲವನ್ನುಂಟುಮಾಡಿತ್ತಂತೆ.

ಅಂದರೆ, ಭಾಷೆಯ ಉಪಯೋಗ ಕೂಡ ಈ ಶ್ರೇಣೀಕೃತ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಏ. ಏನೋ, ಏನ್ರೀ, ಏನಪ್ಪಾ, ಏನ್ಸಾರ್ ಹೀಗೆ ಒಬ್ಬ ವ್ಯಕ್ತಿ ತನ್ನ ಅಂತಸ್ತಿಗನುಗುಣವಾಗಿ ಜನರನ್ನು ಸಂಭೋದಿಸುವುದು ಈ ಅಂತರ ಮಾಪಕ ಹೆಚ್ಚಾಗಿರುವ ದೇಶಗಳಲ್ಲಿ ನಾವು ಕಾಣಬಹುದು. ಕನ್ನಡ ಕೂಡ ಇದಕ್ಕೆ ಹೊರತಲ್ಲ.

ಕಾಕ್‌ಪಿಟ್ಟಿನಲ್ಲಿದ್ದ ಇಬ್ಬರೂ ಅಮೆರಿಕನ್ನರಾಗಿದರೆ ಕೊಪೈಲಟ್ ‘Hey.. listen here, buddy. We need to land this flight.. like right now’ ಎಂದು ಹೇಳುತ್ತಿದ್ದನೇ.

ಬಹುಶಃ ಹೌದು

* * *

ನಾನು ಕೆಲಸ ಮಾಡುತ್ತಿರುವ ಕಡೆ ಅನೇಕ ಬೇರೆಬೇರೆ ದೇಶಗಳಿಂದ ಅಮೆರಿಕಾಕ್ಕೆ ವಲಸೆಬಂದಿರುವ ಕುಟುಂಬಗಳಿವೆ. ಮಿನೆಸೊಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೊಮಾಲಿಯಾದಿಂದ ರಾಜಕೀಯ ಸಂತ್ರಸ್ತರ ಕೋಟಾದಡಿಯಲ್ಲಿ ಜನ ವಲಸೆ ಬಂದಿದ್ದಾರೆ. ಅವರಿಗೆ ಒಂದಕ್ಷರವೂ ಇಂಗ್ಲಿಶ್ ಬರುವುದಿಲ್ಲ. ಆದರೆ ಮಿನೆಸೊಟದಲ್ಲಿ ಇವರ ಹಕ್ಕುಗಳನ್ನು ಸರಿಯಾಗಿ ಅವರಿಗೆ ತಿಳಿಯಪಡಿಸುವ ಅನೇಕ ರಾಜಕೀಯ ಅಥವಾ ಎನ್ಜೀಓ ತರದ ಸಂಸ್ಥೆಗಳಿದ್ದಾವೆ. ಯಾವುದೇ ಆರೋಗ್ಯವಿಮೆ ಇವರಿಗಿಲ್ಲವಾದರಿಂದ ಇವರ ಸಣ್ಣಪುಟ್ಟ ಕಾಯಿಲೆಗಳಿಗೂ ಇವರು ಅತಿ ದುಬಾರಿಯಾದ ಎಮೆರ್ಜೆನ್ಸಿ ಡಿಪಾರ್ಟ್‌ಮೆಂಟನ್ನೇ ಅವಲಂಬಿಸಿರುತ್ತಾರೆ. (ಇವರಿಗೆ ಎಲ್ಲ ಆಸ್ಪತ್ರೆಗಳಲ್ಲಿಯೂ ಸೇವೆ ಪುಕ್ಕಟೆ ಎನ್ನುವುದು ಒಂದು ಅಂಶ) ಅಷ್ಟೇ ಅಲ್ಲ, ಮಗುವಿಗೆ ಸಣ್ಣಗೆ ನೂರು ಡಿಗ್ರಿ ಜ್ಚರ ಬಂದರೂ ಇವರು ಆಂಬುಲೆನ್ಸನ್ನು ಕರೆಯುತ್ತಾರೆ. (ಆಸ್ಪತ್ರೆಗೆ ಬರಲು ಇವರ ಬಳಿ ಕಾರಿಲ್ಲದೇ ಇರುವುದೂ ಇದಕ್ಕೆ ಕಾರಣವಾಗಿರಬಹುದು)

ಬರೇ ಬಿಳೀವರ್ಣದ ಪ್ಯಾರಮೆಡಿಕ್‌ಗಳು, ನರ್ಸುಗಳು ತುಂಬಿರುವ ಆಸ್ಪತ್ರೆಗೆ ಮಗುವನ್ನೂ ಅಮ್ಮನನ್ನೂ ಆಂಬುಲೆನ್ಸಿನಲ್ಲಿ ಕರಕೊಂಡು ಬರಲಾಗುತ್ತದೆ. ಆಸ್ಪತ್ರೆಗಾಗಲೀ, ಆಂಬುಲೆನ್ಸಿಗಾಗಲೀ ಇವರು ನಯಾಪೈಸೆ ಕೊಡಲಾರರು ಎಂಬುದು ಎಲ್ಲರಿಗೂ ಗೊತ್ತು. ಮತ್ತು ಇವರೆಲ್ಲರ ಈ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ತಮ್ಮ ತೆರಿಗೆಯ ಹಣದಿಂದ ಎಂಬ ಅಂಶ ಬಿಳಿಯ ಪ್ಯಾರಮೆಡಿಕ್ ಮತ್ತು ನರ್ಸುಗಳನ್ನೂ ಆಗಾಗ್ಗೆ ರೊಚ್ಚಿಗೇಳಿಸುತ್ತದೆ. ‘bloddy, my tax dollars are at works, here’ ಎಂದು ಕೆಲವೊಮ್ಮೆ ಖುಲ್ಲಂಖುಲ್ಲ ಮಾತಾಡುತ್ತಾರೆ. ಆದರೆ, ನನ್ನನ್ನು ನೋಡಿದಾಕ್ಷಣ ಅವರಿಗೆ ಒಮ್ಮೊಮ್ಮೆ ತಬ್ಬಿಬ್ಬಾಗುತ್ತದೆ. ಕೆಲವರಿಗೆ ನನ್ನ ರಾಷ್ಟ್ರೀಯತೆಯೂ ಗೊತ್ತಿಲ್ಲ. ಆದರೂ, ನಾನು ಅವರಿಗಿಂತ ಹೆಚ್ಚು ಸೊಮಲಿಯಾಕ್ಕೆ ಹತ್ತಿರವೆಂದು ತಿಳಿದು ಕೆಲವೊಮ್ಮೆ ಕ್ಷಮೆ ಕೋರಿದ್ದಾರೆ.

ಇಲ್ಲಿ ಬರೇ ಅಧಿಕಾರ-ಅಂತರ ಮಾತ್ರ ಬರುವುದಿಲ್ಲ. ಈ ಅಧಿಕಾರ-ಅಂತರ ಸೂಚಿ ಹೆಚ್ಚಿರುವ ಭಾರತ ಮೂಲದವನಾದ ನಾನು ಮೇಲಿನ ಅಧಿಕಾರಿಗಳಿಗೆ ಮರ್ಯಾದೆಯನ್ನು ಕೊಡುವುದನ್ನೇನೋ ಕಲಿತಿದ್ದೇನೆ. ಆದರೆ, ನನ್ನ ಕೈಕೆಳಗಿರುವ ಕೆಲಸಗಾರರಿಂದ ಅದೇ ಮರ್ಯಾದೆಯನ್ನು ಪಡೆಯುವುದನ್ನು ನನ್ನ ಸಂಸ್ಕೃತಿ, ಪರಂಪರೆ ನನಗೆ ಕಲಿಸಿರಬೇಕು, ಅಲ್ಲವೇ? ಯಾಕೆಂದರೆ, ಆಸ್ಪತ್ರೆಯ ನಮ್ಮ ಡಿಪಾರ್ಟ್‌ಮೆಂಟಿನ ಬಾಸ್ ನಾನು. ಏನಿಲ್ಲದಿದ್ದರೂ ಈ ಪ್ಯಾರಮೆಡಿಕ್ ವೃತ್ತಿಪರವಾಗಿ ನಡಕೊಂಡಿಲ್ಲವೆಂದು ಅವನನ್ನು ಎಚ್ಚರಿಸುವುದು ನನ್ನ ಕರ್ತವ್ಯ ಮತ್ತು ಹೊಣೆಗಾರಿಕೆ ಕೂಡ.

ಆದರೆ, ಈ ಅಧಿಕಾರವೆನ್ನುವುದು ಬರೇ ಓದು ಅಥವಾ ಕೆಲಸದ ಅನುಭವದಿಂದ ಬರುವುದಿಲ್ಲ. ಅದೊಂದು ಮನಸ್ಥಿತಿ. ನನ್ನ ಕಂದು ಬಣ್ಣ, ಇಂಗ್ಲಿಷ್ ಉಚ್ಚಾರ ಮನಸ್ಸಿನ ಯಾವುದೋ ಮೂಲೆಯಲ್ಲಿ ಒಂದು ಕೀಳರಿಮೆಯನ್ನು ನನ್ನಲ್ಲಿ ಮೂಡಿಸಿಟ್ಟಿದೆಯಾ ಎಂದು ಅನುಮಾನವಾಗುತ್ತದೆ. ಅದು ನಾನಾಗೇ ಮೂಡಿಸಿಕೊಂಡಿದ್ದಲ್ಲ. ನಿಜ ಹೇಳಬೇಕೆಂದರೆ ನಾನು ಆ ಪ್ಯಾರಮೆಡಿಕ್‌ಗೆ ‘ನಿನ್ನ ವರ್ತನೆ ಉಚಿತವಾದದ್ದಲ್ಲ’ ಎಂದು ಹೇಳಿದ್ದರೆ ಆತ ಗ್ಯಾರಂಟಿ ‘ಸಾರಿ’ ಕೇಳುತ್ತಿದ್ದ. ಆದರೆ, ಸುತ್ತ ಕೆಲಸಮಾಡುತ್ತಿರುವ ಬಿಳೀ ಮಧ್ಯಮವರ್ಗ ಮತ್ತು ನಾನು ಉತ್ತಮ ಜೀವನ ಶೈಲಿಯನ್ನು ಹುಡಕೊಂಡು ಅಮೆರಿಕೆಗೆ ಬಂದಿದ್ದೇನೆ ಎಂದು ನನ್ನೊಳಗೆ ಇರುವ ಸುಪ್ತವಾದ ಒಂದು ಭಾವನೆ, ಕೀಳರಿಮೆ ನನ್ನ ಅಧಿಕಾರವಾಣಿಯನ್ನು ಕಿತ್ತುಕೊಂಡಿದೆ.

* * *

ಕೆಲವು ದಿನಗಳ ಹಿಂದೆ ಹೀಗೇ ಆಯಿತು. ಮೂರುವರ್ಷದ ಸೊಮಾಲಿ ಮಗುವೊಂದು ವಾಂತಿ ಮಾಡುತ್ತಿದೆಯೆಂದು ಅದರಮ್ಮ ಆಸ್ಪತ್ರೆಗೆ ಕರಕೊಂಡು ಬಂದಿದ್ದಳು. ಪರೀಕ್ಷೆ ಮಾಡಿದ ತಕ್ಷಣ ಮಗುವಿಗೆ ಏನೂ ತೊಂದರೆಯಿಲ್ಲವೆಂದು ನನ್ನ ವೈದ್ಯಬುದ್ಧಿ ಹೇಳಿತು. ನಾನು ಹೋಗಿ ಆಕೆಗೆ ‘ನಿನ್ನ ಮಗುವಿಗೆ ಏನೂ ತೊಂದರೆಯಿಲ್ಲ. ಅರಾಮಾಗಿ ಮನೆಗೆ ಕರಕೊಂಡು ಹೋಗು’ ಎಂದು ಹೇಳಿದೆ. ಆಕೆ, ದುಭಾಶಿಯೊಬ್ಬಳ ಮೂಲಕ ‘ಮಗುವಿಗೆ ನಾನು ಎಕ್ಸ್ ರೇ ಯಾಕೆ ಮಾಡುತ್ತಿಲ್ಲ? ಐವಿ ಯಾಕೆ ಹಾಕುತ್ತಿಲ್ಲ? ರಕ್ತಪರೀಕ್ಷೆ ಯಾಕೆ ಮಾಡುತ್ತಿಲ್ಲ?’ ಹೀಗೇ ಅನೇಕ ಪ್ರಶ್ನೆಗಳನ್ನು ಕೇಳಿದಳು. ನಾನು ರೋಸಿಹೋಗಿ ‘ಮಗುವಿಗೆ ಏನೂ ತೊಂದರೆಯಿಲ್ಲ. ನೀನು ಸುಮ್ಮನೆ ಹೀಗೆ ಸಣ್ಣ್ನಸಣ್ಣದಕ್ಕೆಲ್ಲಾ ಆಸ್ಪತ್ರೆಗೆ ಕರಕೊಂಡು ಬರುವುದನ್ನು ನಿಲ್ಲಿಸು’ ಎಂದು ಕೊಂಚ ಗದರಿದಹಾಗೇ ಹೇಳಿ ಆಕೆಯನ್ನು ಮನೆಗೆ ಕಳಿಸಿದೆ.

ಮನೆಗೆ ಬರುತ್ತಾ ನನಗೆ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಇದೇ ಒಂದು ಬಿಳಿಯ ಮಗು ಇದೇ ಪರಿಸ್ಥಿತಿಯಲ್ಲಿ ಬಂದಿದ್ದರೆ ನಾನು ಇದೇ ರೀತಿ ಮಾಡುತ್ತಿದ್ದೆನಾ ಎಂದು. ಪ್ರಾಯಶಃ ಮಗುವಿನ ಅಮ್ಮ ಏನು ಕೇಳುತ್ತಾಳೋ ಎಲ್ಲವನ್ನೂ ಮಾಡಿ ಕಳಿಸುತ್ತಿದ್ದನೇನೋ? ಸೊಮಾಲಿ ಮಗುವಿನ ಅಮ್ಮನಿಗೆ ಭಾಷೆ ಬರದಿರುವುದು ಮತ್ತು ನಾನು ಮತ್ತು ಆಕೆ ಇಬ್ಬರೂ ಹೊರಗಿನಿಂದ ಅಮೆರಿಕಾಕ್ಕೆ ಬಂದಿರುವುದರಿಂದ ನಾನು ನನ್ನ ಸಹಜ ಅಧಿಕಾರಯುತವಾದ ಭಾಷೆಯಲ್ಲಿ ನನ್ನ ಕೆಲಸವನ್ನು ಮಾಡಿದ್ದೆ. ಬಹುಷಃ ಆಕೆ ಸೊಮಾಲಿ ಎಂದು ನಾನು ನನ್ನ ಅಧಿಕಾರವನ್ನು ಹೆಚ್ಚಾಗಿಯೇ ಉಪಯೋಗಿಸಿದ್ದನೇನೋ.

ಆದರೆ, ಆಕೆಯೂ ನನ್ನ ಹಾಗೆ ಅಮೆರಿಕಾಕ್ಕೆ ಬಂದು ಇಲ್ಲಿಯೇ ನೆಲಸುವ ಪ್ರಯತ್ನದಲ್ಲಿರುವವಳಲ್ಲವೇ? ಆಕೆ ಬಿಡಲಿಲ್ಲ. ಮತ್ತೆ ಮಗುವನ್ನು ಕರಕೊಂಡು ಬಂದಳು. ಬಂದವಳೇ ‘ಮಗು ಒಂದು ತೊಟ್ಟೂ ನೀರು ಕುಡಿಯುತ್ತಿಲ್ಲ. ನೀನು ಐವಿ ಹಾಕಲೇಬೇಕು’ ಎಂದು ಗಲಾಟೆ ಮಾಡಹತ್ತಿದಳು. ಮತ್ತೆ ಮಗುವನ್ನು ಕೂಲಂಕಶವಾಗಿ ಪರೀಕ್ಷೆಮಾಡಿ, ಮಗುವಿಗೆ ಏನೂ ತೊಂದರೆಯಿಲ್ಲದಿದ್ದರೂ- ಒಂದು ಐವಿಹಾಕಿ ಒಂದು ಲೀಟರ್ ಸಲೈನ್ ಕೊಟ್ಟರೆ ನನ್ನ ಗಂಟೇನೂ ಹೋಗುವುದಿಲ್ಲ, ಎಂದು ನಿರ್ಧರಿಸಿ ಮಗುವನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡುವಾ ಎಂದು ಆಸ್ಪತ್ರೆಯಲ್ಲಿ ಈ ಮಗುವನ್ನು ನೋಡಿಕೊಳ್ಳುವ ಡಾಕ್ಟರಿಗೆ ಫ಼ೋನಾಯಿಸಿದೆ.

ಆದರೆ, ಏನು ಮಾಡಿದರೂ ಮೈಕೈ ತುಂಬಿಕೊಂಡು ಗುಂಡುಗುಂಡಾಗಿದ್ದ ಆ ಮಗುವಿಗೆ ಐವಿ ಹಾಕಲು ಆಸ್ಪತ್ರೆಯ ಯಾವ ನರ್ಸಿಂದಲೂ ಸಾಧ್ಯವಾಗಲಿಲ್ಲ. ಮಗುವನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿ ಆ ಆಸ್ಪತ್ರೆಯ ಡಾಕ್ಟರುಗಳಿಗೆ ಫೋನು ಮಾಡಿ ಎಲ್ಲವನ್ನೂ ಸಜ್ಜುಗೊಳಿಸಿ ಅಮ್ಮನ ಜತೆ ಮಾತಾಡಲು ಹೋದೆ.

ಅಷ್ಟರಲ್ಲಿ ಆ ಮಗುವಿನ ಅಪ್ಪ ಬಂದಿದ್ದ. ಆತನಿಗೆ ಕೊಂಚ ಇಂಗ್ಲಿಶ್ ಬರುತ್ತಿತ್ತು. ‘ನಾಳೆ ಬೆಳಗಾದರೆ ನನ್ನದು ಮತ್ತು ನನ್ನ ಹೆಂಡತಿಯದು ಸಿಟಿಜನ್‌ಶಿಪ್ ಸಂದರ್ಶನ ಇದೆ. ಮಗುವನ್ನು ಆಸ್ಪತ್ರೆಗೆ ಯಾಕೆ ಅಡ್ಮಿಟ್ ಮಾಡಬೇಕು? ಮಗು ಆರಾಮಾಗೇ ಇದೆಯಲ್ಲ’ ಎಂದು ಕೇಳಿದಾಗ ನಾನು ಹೆಚ್ಚು ಮಾತಾಡದೇ ಮಗುವಿನ ತಾಯಿಯ ಮುಖನೋಡಿದೆ. ‘ನನ್ನ ಪ್ರಕಾರ ಮಗುವಿಗೆ ವಾಂತಿ ನಿಲ್ಲಲು ಒಂದೆರಡು ಮಾತ್ರೆಕೊಟ್ಟು ಮನೆಗೆ ಕರಕೊಂಡು ಹೋದರೆ ಸಾಕು. ಆದರೆ, ನಿನ್ನ ಹೆಂಡತಿ ನನ್ನ ಮಾತು ಕೇಳಬೇಕಲ್ಲ. ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕಂತೆ. ಇಲ್ಲಿ ಈ ಆಸ್ಪತ್ರೆಯಲ್ಲಿರುವವರೆಲ್ಲ ನಿನ್ನ ಮಗುವಿಗೆ ಐವಿ ಹಾಕಲು ಪ್ರಯತ್ನಪಟ್ಟು ಸೋತಿದ್ದೇವೆ. ನಿನ್ನ ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರಕೊಂಡು ಹೋಗಬೇಕು. ನಾನು ಎಲ್ಲ ಸಜ್ಜುಗೊಳಿಸಿದ್ದೇನೆ’ ಎಂದು ಹೇಳಿದೆ.

ಗಂಡಹೆಂಡತಿ ಸುಮಾರು ಹೊತ್ತು ಮಾತಾಡಿಕೊಂಡು ನಂತರ ಮಗುವನ್ನು ಆ ಆಸ್ಪತ್ರೆಗೆ ಕರಕೊಂಡು ಹೋಗುತ್ತೇನೆಂದು ಹೇಳಿ ಕರಕೊಂಡು ಹೋದರು.

ಮಾರನೆಯ ದಿನ ನಾನು ಆಸ್ಪತ್ರೆಗೆ ಬಂದಾಗ ನನ್ನ ಮೈಲ್‌ಬಾಕ್ಸಿನಲ್ಲೊಂದು ಸಣ್ನ ನೋಟಿತ್ತು’ ನೀನು ಕಳಿಸಿದ ಆ ಮಗು ನಮ್ಮ ಆಸ್ಪತ್ರೆಗೆ ಬರಲಿಲ್ಲ.’

ಆಕೆಯ ಮನೆಗೆ ಫೋನುಮಾಡಿದಾಗ ಮಗುವಿನ ಅಮ್ಮ ಫೋನು ತೆಗೆದುಕೊಂಡಳು. ಹಿಂದೆ ಮಗು ಜೋರಾಗಿ ಕೂಗುತ್ತಾ ಆಟವಾಡುತ್ತಿರುವುದು ಕೇಳಿಸುತ್ತಿತ್ತು. ನನ್ನ ಧ್ವನಿಯನ್ನು ಕೇಳಿದ ಕೂಡಲೇ ಫೋನು ಡಿಸ್‌ಕನೆಕ್ಟ್ ಆಯಿತು.

ಇಲ್ಲಿ ಯಾರ ಯಾರ power distance index ಗಳು ಹೇಗೆ ಕೆಲಸ ಮಾಡಿವೆ ನೋಡೋಣ. ಇಂಗ್ಲೀಷು ಮಾತಾಡಬಲ್ಲ ಗಂಡು ಡಾಕ್ಟರಾದ, ನಾನು ಇಂಗ್ಲಿಷು ಮಾತಾಡಲಾರದ ಸೊಮಾಲಿ ಹೆಣ್ಣು ಮಗಳ ಮೇಲೆ ನನ್ನ ಅಧಿಕಾರವನ್ನು ಉಪಯೋಗಿಸಿದ್ದೇನೆ. ಮಗುವಿನ ಆರೋಗ್ಯ ಇಲ್ಲಿ ಇಶ್ಯೂ ಅಲ್ಲವೇ ಅಲ್ಲ ಅನ್ನುವುದನ್ನು ನಾವೆಲ್ಲರೂ ಗಮನಿಸಬಹುದು. ಮಗು ಆರಾಮಾಗಿಯೇ ಇದೆ. ನಾನು ಮೊದಲು ಅಡ್ಮಿಟ್ ಮಾಡೊಲ್ಲ ಎಂದೆ. ನಂತರ ಮನೆಗೆ ಹೋದ ಆ ಸೊಮಾಲಿ ಹೆಂಗಸು ‘ನಾನೇನು ಬೇರೆಯವರಿಗಿಂತ ಕಡಿಮೆ.’ ಎಂದು ನಿರ್ಧರಿಸಿ ಮತ್ತೆ ಬಂದಳು. ನಾನು ಕೊಂಚ್ವ ಮಣಿದು ಅಡ್ಮಿಟ್ ಮಾಡಲು ನಿರ್ಧರಿಸಿದರೆ ಆ ಮಗುವಿಗೆ ಐವಿ ಹಾಕುವವರು ಯಾರೂ ಇಲ್ಲ, ನಮ್ಮ ಆಸ್ಪತ್ರೆಯಲ್ಲಿ. ಬೇರೆ ಕಡೆ ಹೋಗಬೇಕೆಂದು ನಿರ್ಧರಿಸಿದ್ದನ್ನು ಬಂದು ಪೂರಕ್ಕೆ ಪೂರ ನಿಲ್ಲಿಸಿದ್ದು ಮನೆಯ ಯಜಮಾನ ಮಗುವಿನ ಅಪ್ಪ. ಕೊನೆಗೂ ಗೆದ್ದದ್ದು ಮಗುವಿನ ಕುಟುಂಬದ ಶ್ರೇಣೀಕೃತ ವ್ಯವಸ್ಥೆಯೇ? ಮಗುವಿಗೆ ಐವಿ ಬೇಕಾ ಬೇಡವಾ ಎಂಬುದು ಡಾಕ್ಟರಲ್ಲದ ಆ ಆಪ್ಪನಿಗೆ ಗೊತ್ತಿಲ್ಲ. ಆದರೂ ಆತ ನಿರ್ಧರಿಸಿದ್ದ, ಮಗುವಿಗೆ ಹೀಗೇ ಮಾಡಬೇಕೆಂದು.

ಇದೇ ಒಂದು ಮಧ್ಯಮವರ್ಗದ ಬಿಳಿಯ ಅಮ್ಮ ಬಂದಿದ್ದರೆ ಏನಾಗುತ್ತಿತ್ತು. ಹೊಂಗೂದಲುಗಳ, ಚ್ಯೂಯಿಂಗ್‌ಗಮ್ ಅಗಿದುಕೊಂಡು ಮಾತಾಡುವ ಅಮ್ಮ ಮಗುವನ್ನು ಕರಕೊಂಡು ಬರುತ್ತಿದ್ದಳು. ‘The baby is obviously dehydrated. She hasn’t eaten or drunk in the last two days.’ ಎಂದು ಮೊದಲ ಬಾರಿಗೇ ನನ್ನನ್ನು ಚಿತ್ತುಮಾಡುಬಿಡುತ್ತಿದ್ದಳು. ನಂತರ ನಾನು ಮಾತಾಡುವ ಹೊತಿಗೆ ಆಕೆಯ ಸೆಲ್‌ಫೋನಿಗೆ ಎರಡು ಕಾಲ್‌ಗಳು ಬರುತ್ತಿದ್ದವು. ‘ನಾನು ಡಾಕ್ಟರ ಹತ್ತಿರ ಈಗ ಮಾತಾಡುತ್ತಾ ಇದೀನಿ. ಇಲ್ಲ. ಇಲ್ಲ. ಮಗು ಮನೆಗೆ ಬರುವ ಪರಿಸ್ಥಿತಿಯಲ್ಲಿಲ್ಲ. ಇಲ್ಲೇ ಇರ್ತೇವೆ. ಇವತ್ತು’ ಎಂದು ಅಕೆ ಗಂಡನ ಜತೆ ಮಾತಾಡುತ್ತಾಳೆ. ನಮಗ್ಯಾರಿಗೂ ಐವಿ ಹಾಕಲಾಗದಿದ್ದರೆ, ಆಕೆ ‘ಬೇರೆ ಏನೂ ದಾರಿಯೇ ಇಲ್ಲವಾ, ಆಸ್ಪತ್ರೆ ಯಾಕೆ ನಡೆಸುತ್ತಿದ್ದೀರಿ, ನೀವುಗಳು. ಒಂದು ಮಗುವಿಗೆ ಐವಿ ಹಾಕಲು ಬರದಿದ್ದರೆ’ ಎನ್ನುವ ಅರ್ಥದಲ್ಲಿ ಮಾತಾಡುತ್ತಾಳೆ. ನಾನು ಇನ್ನೂ ಕಷ್ಟಪಟ್ಟೋ ಅಥವಾ ಸರ್ಜನ್ನನ್ನೋ, ಅಥವಾ ಮಕ್ಕಳ ತಜ್ಞರನ್ನೋ ಕಾಡಿಬೇಡಿ ಹೇಗೋ ಮಾಡಿ ಐವಿ ಹಾಕುತ್ತೇವೆ. ಹಾಕಲಾಗದಿದ್ದರೆ ಬೇರೆ ಆಸ್ಪತ್ರೆಗೆ ಆಂಬುಲೆನ್ಸಿನಲ್ಲಿ ಸಾಗಿಸುತ್ತೇವೆ.

ಅಧಿಕಾರ ನಮ್ಮ ನಡುವಣ ಅಂತರವನ್ನು ಉಳಿಸುತ್ತದೆ. ಬಣ್ಣ, ಇಂಗ್ಲಿಷ್ ಭಾಶೆ, ಲಿಂಗ, ವಯಸ್ಸು ಇವೆಲ್ಲ ಯಾರು ಹೆಚ್ಚು ಶಕ್ತಿಶಾಲಿ, ಯಾರಿಗೆ ಏನು ಬೇಕು ಎಂಬುದನ್ನು ನಿರ್ಧರಿಸುತ್ತದೆ.

ಮಗುವಿನ ಆರೋಗ್ಯ ರೋಗಿಗೂ, ಡಾಕ್ಟರಿಗೂ ಮುಖ್ಯವಾಗುವುದೇ ಇಲ್ಲ.

2 comments:

  1. ಡಾಕ್ಟರೇ, ಇದನ್ನೆಲ್ಲ ಓದಿ ಗಾಬರಿ ಹತ್ತಿತಲ್ಲ! ನಾವು ನಮ್ಮ ಹರಕುಪರಕು ಇಂಗ್ಲಿಷ್ ಕಚ್ಚಿಕೊಂಡು ಆಸ್ಪತ್ರೆಗೆ ಹೋದಾಗ ನಮಗೆ ಸಿಗುವ ಟ್ರೀಟ್ಮೆಂಟ್ ಕೂಡಾ ಹೀಗೇನಾ?

    ನೀವು ಹೇಳಿದ್ದು ನಿಜ, ಗುರು. ಅಧಿಕಾರ-ಅಂತರ-ಮಾಪಕ ನಮ್ಮಗಳ ನಡುವೆ ಸದಾ ವ್ಯವಸ್ಥಿತ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಕೆಲವಾರು ಸಂದರ್ಭಗಳಲ್ಲಿ ನಾವು ನಮ್ಮ ಮಾತು ಕಳೆದುಕೊಳ್ಳಬೇಕಾಗುತ್ತದೆ, ಬರೀ ಬಣ್ಣದ ದೆಸೆಯಿಂದ. ತಣ್ಣಗೆ ನಡೆಯುವ ವ್ಯವಹಾರವಿದು. ಸತ್ಯ.

    ReplyDelete
  2. Complex material, well written. Thanks for raising the debate of this kind, which is unheard in mainstream media.

    ReplyDelete