Sunday, June 28, 2009

ಕಾವ್ಯನಾಮಗಳ ಕಾರ್ಯಕಾರಣ

ಒಬ್ಬ ವ್ಯಕ್ತಿ ಕಾವ್ಯನಾಮದಿಂದ ಯಾಕೆ ಬರೆಯುತ್ತಾನೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ? ಅಂಬಿಕಾತನಯದತ್ತ, ಕಾವ್ಯಾನಂದ, ಮುದ್ದಣ, ಚದುರಂಗ, ಎಂಬ ಹೆಸರುಗಳು ಆಯಾ ವ್ಯಕ್ತಿಗಳ ನಿಜವಾದ ಹೆಸರುಗಳ ಅಸ್ತಿತ್ವದ ಜತೆಗೂ ಯಾಕೆ ಪ್ರಚಲಿತವಾಗಿರುತ್ತದೆ? ಎರಿಕ್ ಬ್ಲೇರ್ ಯಾಕೆ ಜಾರ್ಜ್ ಆರ್ವೆಲ್ ಆಗುತ್ತಾನೆ? ಜಾನಕಿ ವೈದೇಹಿ ಯಾಕೆ ಆಗುತಾರೆ? ತಮ್ಮ ಹುಟ್ಟುಹೆಸರುಗಳ ಜತೆಜತೆಗೂ ಕಾವ್ಯನಾಮಗಳೂ ಉಳಿದುಕೊಳ್ಳುವುದು ಹೇಗೆ?

ಈ ಕಾವ್ಯನಾಮ ಅನ್ನುವುದು ಮೇಲುನೋಟಕ್ಕೆ ವ್ಯಾವಹಾರಿಕ ಅಥವಾ ಕಾರ್ಯಕಾರಣ ಅನಿವಾರ್ಯ ಅನಿಸಬಹುದು. ಒಬ್ಬ ವ್ಯಕ್ತಿ ತನ್ನ ಅನಾಮಿಕತೆಯನ್ನು ಉಳಿಸಿಕೊಳ್ಳುವ ಜರೂರು ಹಲವಾರಿರಬಹುದು. ಕೆಲವರಿಗೆ ತಾವು ಕೆಲಸ ಮಾಡುವ ಸಂಸ್ಥೆಗೆ ನಿಷ್ಠನಾಗಿ ಇರುವ ಜವಾಬ್ದಾರಿಯೂ ಇರಬಹುದು. ಇನ್ನೂ ಹಲವರು ಅನೇಕ ಪ್ರಕಾರಗಳಲ್ಲಿ ಬರೆಯತೊಡಗಿದಾಗ ಆಯಾ ಪ್ರಕಾರಕ್ಕೆ ಬೇಕಾದ ಅಂಕಿತನಾಮಗಳನ್ನು ಇಟ್ಟುಕೊಳ್ಳುವುದು ಸಹಜವೂ ಅನಿಸಬಹುದು.

ಡಾನಾಲ್ಡ್ ವೆಸ್ಟ್‌ಲೇಕ್ ಅನ್ನುವ ಅನೇಕ ಕ್ರೈಮ್ ಥ್ರಿಲ್ಲರ್‌ಗಳನ್ನು ರೆಯುವ ಕಾದಂಬರಿಕಾರನೊಬ್ಬ ತಾನು ಬೇರೆಬೇರೆ ಹೆಸರಿನಲ್ಲಿ ಏಕೆ ಬರೆದೆ ಎಂದು ಸಮಾಜಾಯಿಷಿಗಳನ್ನು ಸ್ವಾರಸ್ಯಕರವಾಗಿ ಸಮರ್ಥಿಸಿಕೊಳ್ಳುತ್ತಾನೆ. "ನಾನು ಬರೆಯಲು ಶುರುಮಾಡಿದ ಹೊಸತರಲ್ಲಿ ಬರಹವನ್ನು ಬಹಳ ಪ್ರೀತಿಸುತ್ತಿದ್ದೆ. Like any new lover I used to do it a lot ,ಒಂದೇ ಸಂಚಿಕೆಯಲ್ಲಿ ನನ್ನ ಎರಡು ಅಥವಾ ಮೂರು ಕಥೆಗಳು ಪ್ರಕಟವಾಗಲು ಶುರುವಾದಾಗ ಸಂಪಾದಕರಿಗೆ ಬೇರೆಬೇರೆ ಹೆಸರಿನಲ್ಲಿ ನನ್ನ ಬರಹಗಳನ್ನು ಪ್ರಕಟಿಸುವುದು ಅನಿವಾರ್ಯವಾಯಿತು. ಅವರಿಗೆ ಅದು ಅಷ್ಟು ಕಷ್ಟ ಅಥವಾ ಕೂಡದು ಅನಿಸಲೇ ಇಲ್ಲ. ಒಟ್ಟು ಸ್ವಾರಸ್ಯಕರವಾದ ಕತೆಯಿದ್ದು ಆಯಾ ಹೆಸರಿಗೂ ಮತ್ತು ಶೈಲಿಗೂ ಇದ್ದ ಸಂಬಂಧದ ಎಳೆ ಮುಂದುವರೆಯುತ್ತಾ ಹೋದರೆ ಸಾಕಾಗಿತ್ತು"

ಆತ ಕೊಡುವ ಇನ್ನೊಂದು ಕಾರಣ ಇನ್ನೂ ಕುತೂಹಲಕರವಾಗಿದೆ. ಅವನ ಪ್ರಕಾರ ಇದೊಂದು ಮಾರುಕಟ್ಟೆಯ ತಂತ್ರ. ಕಾರುಕಂಪೆನಿಗಳ ಮಾರುಕಟ್ಟೆಯ ಸ್ಟ್ರಾಟೆಜಿಯಷ್ಟೇ ತರ್ಕಬದ್ಧವಾದದ್ದು. ಉದಾಹರಣೆಯನ್ನು ನಮ್ಮ ಸಂದರ್ಭಕ್ಕೆ ಸಮೀಕರಿಸಿಕೊಂಡರೆ ಸ್ಥೂಲವಾಗಿ ಹೀಗೆ ಹೇಳಬಹುದೇನೋ-ಟಾಟಾ ಕಂಪೆನಿಯವರೇ ಸಫಾರಿಯನ್ನೂ ಮಾಡುವುದು ಸುಮೋವನ್ನೂ ಮಾಡುವುದು, ಇಂಡಿಕಾ, ಇಂಡಿಗೋ,ನ್ಯಾನೋಗಳನ್ನೂ ಮಾಡುವುದು. ಹಾಗೆಯೇ ಟೊಯೋಟಾದವರೇ ಲ್ಯಾಂಡ್ ಕ್ರುಯ್‌ಸರ್ ಅನ್ನೂ ಮಾಡುತ್ತಾರೆ, ಕರೋಲಾವನ್ನೂ ಮಾಡುತ್ತಾರೆ. ಬೇರೆಬೇರೆ ಕಾರುಗಳನ್ನು ಬೇರೆಬೇರೆ ವರ್ಗದ ಜನ ಉಪಯೋಗಿಸುತ್ತಿದ್ದರೂ ಗ್ರಾಹಕರೆಲ್ಲರಿಗೂ ಇದರ ತಯಾರಕ ಟೊಯೋಟ ಕಂಪೆನಿಯೇ ಎಂದು ಗೊತ್ತಿರುತ್ತದೆ. ತಮಗೆ ಬೇಕಾದನ್ನು ಕಂಪೆನಿ ಕೊಟ್ಟಿರುವುದರಿಂದ ಎಲ್ಲರೂ ಆದಷ್ಟು ಈ ಕಂಪೆನಿಗೆ ನಿಷ್ಟರಾಗಿರುತ್ತಾರೆ. ಟೊಯೋಟಾ ಕಂಪೆನಿಗೂ ಎರಡೂ ವರ್ಗದ ಗ್ರಾಹಕರನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ. ಇಬ್ಬರನ್ನೂ ತೃಪ್ತಿಪಡಿಸಲು ತಮ್ಮ ಪ್ರಯತ್ನವನ್ನು ಕಂಪೆನಿ ಕೂಡ ಮಾಡುತ್ತಿದೆ. ಗ್ರಾಹಕರೂ ಖುಷಿಯಾಗಿದ್ದಾರೆ. ಇದೊಂದು ರೀತಿಯ ಗೆಲ್ಲು-ಗೆಲ್ಲು ಸನ್ನಿವೇಶ.

ಆಗ ಟೊಯೋಟಾ ಕಂಪೆನಿಯವರು ತಮ್ಮ ಕರೋಲಾ, ಕ್ಯಾಮ್ರಿ ಅಥವಾ ಲ್ಯಾಂಡ್ ಕ್ರೂಸರ್‌ಗಳ ಜನಪ್ರಿಯತೆಯನ್ನು ನಂಬಿ ಇದ್ದಕ್ಕಿದ್ದಹಾಗೆ ಲೆಕ್ಸಸ್‌ನ ಅರ್ ಎಕ್ಸ್ ೩೩೦ ಯಂತಹ ಒಂದು ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡುತ್ತಾರೆ. ಈ ರೀತಿಯ ತಂತ್ರ ಬೇರೊಂದು ಗುಂಪಿನ ಗ್ರಾಹಕವರ್ಗವನ್ನೇ ಸೃಷ್ಟಿಸುತ್ತದೆ. ತನ್ನ ಬೇರೆ ಉತ್ಪನ್ನಗಳ ಗುಣಮಟ್ಟದಿಂದ ಜನಪ್ರಿಯವಾಗಿರುವ ಟೊಯೋಟಾದವರದ್ದೇ ಕಾರೆಂದು ಮಿನಿಮಮ್ ಗ್ಯಾರಂಟಿ ಲೆಕ್ಸಸ್ಸಿಗೆ ಇದ್ದೇ ಇರುತ್ತದೆ.

ಆದರೆ ಟೊಯೋಟಾ ಕಂಪೆನಿಯವರಿಗೂ ಗೊತ್ತು, ತಮ್ಮ ಕಂಪೆನಿಯ ಉಳಿಗಾಲವಿರುವುದು ಹೆಚ್ಚುಹೆಚ್ಚು ಕರೋಲ ಬ್ರಾಂಡನ್ನು ಮಾರಿದಾಗ ಮಾತ್ರ ಎಂದು. ಈ ಹೊಸಾ ಕಾರು ತಮ್ಮ ಶ್ರೀಮಂತ ಗ್ರಾಹಕರ ತೃಪ್ತಿಗೆ ಮಾತ್ರ.

ಡಾನಲ್ಡ್ ಬರೆಯುವುದು ಥ್ರಿಲ್ಲರ್‌ಗಳನ್ನು. ಶುದ್ಧ, ಉದ್ದಾಮ ಸಾಹಿತಿಗಳು ಇವನನ್ನು ಸಾಹಿತಿ ಎಂದೂ ಒಪ್ಪಿಕೊಳ್ಳುವುದಿಲ್ಲ. ಇರಲಿ, ನನಗೆ ಕುತೂಹಲವೆನಿಸಿದ್ದು ಈತನ ನಾನಾ ರೀತಿಯ ಪರಕಾಯ ಪ್ರವೇಶ. ಈತ ಅರವತ್ತರ ದಶಕದಲ್ಲಿ ಬೇರೆಬೇರೆ ಹೆಸರುಗಳಲ್ಲಿ ಸಣ್ಣಕತೆಗಳನ್ನು ಬರೆಯುತ್ತಿದ್ದ. ನಂತರ ಈತನಿಗೆ ಒಂದು ಕಾದಂಬರಿಯನ್ನು ಬರೆಯಬೇಕು ಅನ್ನಿಸಿದಾಗ ರಿಚರ್ಡ್ ಸ್ಟಾರ್ಕ್ ಎಂಬ ಹೆಸರಿನಲ್ಲಿ "ದಿ ಹಂಟರ್" ಎಂಬ ಹೆಸರಿನ ಕಾದಂಬರಿಯನ್ನು ಬರೆದು ಗೋಲ್ಡ್ ಮೆಡಲ್ ಎಂಬ ಆಗಿನ ಒಂದು ಪ್ರಸಿದ್ಧ ಪ್ರಕಾಶನ ಸಂಸ್ಥೆಗೆ ಕಳಿಸಿದ್ದನಂತೆ. ಆದರೆ, ಆ ಪ್ರಕಾಶನ ಸಂಸ್ಥೆಯವರು ಈ ಕಾದಂಬರಿಯನ್ನು ತಿರಸ್ಕರಿಸಿದರು. ಇದರ ಕೇಂದ್ರ ಪಾತ್ರದ ಹೆಸರು ಪಾರ್ಕರ್ ಎಂದು. ಇದೇ ಪುಸ್ತಕವನ್ನು ಪಾಕೆಟ್ ಬುಕ್ಸ್ ಎಂಬ ಪ್ರಕಾಶನ ಸಂಸ್ಥೆ ಕಾದಂಬರಿಯನ್ನಾಗಿ ಪ್ರಕಟಿಸಿದ್ದೇ ಅಲ್ಲದೇ , ಪಾರ್ಕರನನ್ನೇ ಕೇಂದ್ರಪಾತ್ರವಾಗಿಟ್ಟುಕೊಂಡು ವರ್ಷಕ್ಕೆ ಮೂರು ಕಾದಂಬರಿ ಬರೆದುಕೊಡುತ್ತೀರಾ ಎಂದು ಕೇಳಿದರಂತೆ. ಆದರೆ ಆ ಪ್ರಕಾಶನ ಸಂಸ್ಥೆಯ ಒಂದು ಕರಾರೆಂದರೆ ಈ ಪಾರ್ಕರ್ ಸರಣಿಯ ಕಾದಂಬರಿಗಳೆಲ್ಲಾ ರಿಚರ್ಡ್ ಸ್ಟಾರ್ಕ್ ಎಂಬುವವನ ಹೆಸರಿನಲ್ಲಿಯೇ ಬರೆಯಬೇಕು ಎಂದು. ಈತ ಅದೇ ಹೆಸರಲ್ಲಿ ಅನೇಕ ಜನಪ್ರಿಯ ಕಾದಂಬರಿಗಳನ್ನು ಬರೆದ. (ಹಾಲಿವುಡ್ಡಿನ ಬ್ಲಾಕ್‌ಬಸ್ಟರ್ "ಪಾಯಿಂಟ್ ಬ್ಲಾಂಕ್" ಎನ್ನುವ ಸಿನೆಮಾ ಇವನ ಕಾದಂಬರಿಯನ್ನೇ ಅದರಿಸಿದ್ದು. ನಂತರ ಇತ್ತೀಚಿನ ದಿನಗಳಲ್ಲಿ ಮೆಲ್ ಗಿಬ್ಸನ್ ಇದೇ ಕಾದಂಬರಿಯನ್ನು ರ‍್ಯಾನ್ಸಮ್ ಎಂಬ ಹೆಸರಲ್ಲಿ ತಯಾರಿಸಿದ್ದ)

ಹನ್ನೆರಡು ವರ್ಷ ರಿಚರ್ಡ್ ಸ್ಟಾರ್ಕ್ ಎನ್ನುವ ಹೆಸರಿನಲ್ಲಿ ಈತ ಎಷ್ಟು ಬರೆದಿದ್ದ ಎಂದರೆ ಈತ ತನ್ನ ಹೆಸರಿಗಿಂತಲೂ ರಿಚರ್ಡ್ ಸ್ಟಾರ್ಕ್ ಎಂಬ ಹೆಸರಿನಲ್ಲಿಯೇ ಎಲ್ಲ ಕಡೆ ಪರಿಚಿತನಾಗಿದ್ದ. ಈತ ಎಲ್ಲಿಗೆ ಹೋದರೂ ಪಾಯಿಂಟ್ ಬ್ಲಾಂಕ್ ಬರೆದ ರಿಚರ್ಡ್ ಸ್ಟಾರ್ಕ್ ನಾನೇ ಎಂದು ಪರಿಚಯಮಾಡಿಕೊಳ್ಳುವ ಅನಿವಾರ್ಯತೆ ಇವನಿಗೆ ಬಂದಿತ್ತು.

ಎಲ್ಲ ಸೃಜನಶೀಲ ಕ್ರಿಯೆಯಂತೆ ರಿಚರ್ಡ್ ಸ್ಟಾರ್ಕನ ಬರವಣಿಗೆಗೂ ಒಂದು ಮಿತಿಯಿತ್ತು. ಈತನ ಹೀರೋ ಪಾರ್ಕರ್ ಬಡವಾಗಹತ್ತಿದ್ದ. ಸ್ಟಾರ್ಕ್ ತನ್ನ ಬರವಣಿಗೆಯ ಮಜಾ ಕಳೆದುಕೊಂಡಿದ್ದ. ನಂತರ ಇನ್ನು ಬರೆಯಲಾರೆ ಎನ್ನಿಸಿದಾಗ ರಿಚರ್ಡ್ ಸ್ಟಾರ್ಕ್ ಎನ್ನುವ ಹೆಸರಿನಲ್ಲಿ ಬರೆಯುವುದನ್ನು ಈತ ನಿಲ್ಲಿಸಿದ.

ಇಷ್ಟು ಹೊತ್ತಿಗೆ ವೆಸ್ಟ್‌ಲೇಕ್‌ನ ಹೆಸರು ಬೇರೇ ಇನ್ನಿತರ ಬರಹಗಳಿಂದ ಜನಪ್ರಿಯವಾಗಿತ್ತು. ಅಷ್ಟೇ ಅಲ್ಲ ಇನ್ನೂ ಬೇರೆಬೇರೆ ಹೆಸರುಗಳಲ್ಲಿ ಈತ ಬರೆಯುವುದನ್ನು ಮುಂದುವರೆಸಿದ್ದ. ಆದರೆ ಸ್ಟಾರ್ಕ್ ತನ್ನ ಬರಹದ ಹದವನ್ನು ಕಳೆದುಕೊಂಡಿದ್ದ. ಆಗ ಏವನ್ ಅನ್ನುವ ಪ್ರಕಾಶನ ಸಂಸ್ಥೆ ಈ ಸ್ಟಾರ್ಕ್ ಬರೆದ ಕಾದಂಬರಿಗಳನ್ನು ಪ್ರಕಟಿಸಲು ಮುಂದಾಯಿತು. ಆದರೆ ಅವರು ವೆಸ್ಟ್‌ಲೇಕ್ ನ ಮೂಲಹೆಸರಿನಲ್ಲಿಯೇ ಪ್ರಕಟಿಸುತ್ತೇವೆ ಎಂದು ಹಟಹಿಡಿದಿದ್ದರು. ಅವರ ಪ್ರಕರ ಸ್ಟಾರ್ಕ್‌ನ ಹೆಸರಿನ ಜಾದೂ ಮುಗಿದಿತ್ತು ಅದೇ ಪಾರ್ಕರ್ ಸರಣಿಯ ಕಾದಂಬರಿಗಳು ವೆಸ್ಟ್‌ಲೇಕ್‌ನ ಹೆಸರಲ್ಲಿ ಪ್ರಕಟಿಸಲ್ಪಟ್ಟವು.

ನಂತರ ಹದಿನೈದು ವರ್ಷಗಳ ನಂತರ ಯಾವುದೋ ಒಂದು ಪಾರ್ಕರ್ ಪಾತ್ರವಿರುವ ಚಿತ್ರಕ್ಕೆ ಚಿತ್ರಕತೆ ಬರೆದ ವೆಸ್ಟ್‌ಲೇಕ್‌ಗೆ ಆ ಚಿತ್ರದ ನಿರ್ದೇಶಕ ಈ ಚಿತ್ರದ ಚಿತ್ರಕತೆಗಾರನ ಹೆಸರನ್ನು ರಿಚರ್ಡ್ ಸ್ಟಾರ್ಕ್ ಎಂದೇ ಹಾಕಬೇಕು ಎಂದು ಒತ್ತಾಯಿಸಿದ. ಏಕೆಂದರೆ ಪಾರ್ಕರ್ ಸರಣಿಯ ಕಾದಂಬರಿಗಳು ಸ್ಟಾರ್ಕನ ಹೆಸರಿನ ಜತೆಗೆ ಥಳಕು ಹಾಕಿಕೊಂಡುಬಿಟ್ಟಿಯಾಗಿತ್ತು. ಆದರೆ ಒಂದು ಸಣ್ಣ ತೊಂದರೆಯಿತ್ತು. ಹಾಲಿವುಡ್ ಚಿತ್ರಕ್ಕೆ ಚಿತ್ರಕತೆ ಬರೆಯುವವರ"ರೈಟರ್ಸ್ ಗಿಲ್ದ್" ಅನ್ನುವ ಬರಹಗಾರರ ಸಂಘದ ಸದಸ್ಯರಾಗಬೇಕು. ಅದಕ್ಕೆ ವೆಸ್ಟ್‌ಲೇಕ್ ಸದಸ್ಯನಾಗಿದ್ದನೇ ಹೊರತು ಸ್ಟಾರ್ಕ್ ಅಲ್ಲ. ಹೀಗೆ ಯಾವ ಜನಪ್ರಿಯ ಹೆಸರಿನಲ್ಲಿ ಆತ ಈ ಪಾರ್ಕರ್ ಎಂಬ ಪಾತ್ರವನ್ನು ಸೃಷ್ಟಿಸಿದ್ದನೋ ಅದೇ ಹೆಸರಿನಲ್ಲಿ ಈತ ತನ್ನದೇ ಸಿನೆಮಾಕ್ಕೆ ಚಿತ್ರಕತೆ ಬರೆಯಲಾಗಲಿಲ್ಲವಂತೆ. (ನಂತರ ಈ ಸಣ್ಣ ತೊಡಕನ್ನು ಆತ ಹೇಗೋ ನಿವಾರಿಸಿಕೊಂಡ)

ಒಬ್ಬ ವ್ಯಕ್ತಿ ತಾನು ಬರೆದ ಬರಹಗಳ, ಕಾದಂಬರಿಗಳ ಮೇಲೆ ಹಕ್ಕು ಸಾಧಿಸಲು ಒದ್ದಾಡಬೇಕಾಗಿತ್ತು. ಈತ ಹೇಳುತ್ತಾನೆ. "ಕೆಲವೊಮ್ಮೆ ನನಗನಿಸುತ್ತದೆ, ನನಗೆ ನಾನು ರಿಚರ್ಡ್ ಸ್ಟಾರ್ಕ್ ಎಂದುಕೊಂಡಿದ್ದಾಗ ಮಾತ್ರ ಆ ಪಾರ್ಕರ್ ಪಾತ್ರವನ್ನು ಸೃಷ್ಟಿಸಲಾಗುತ್ತಿತ್ತೇನೋ. ಹೆಚ್ಚು ಹೆಚ್ಚು ವೆಸ್ಟ್‌ಲೇಕ್ ನಾನಾಗುತ್ತಿದ್ದಾಗ ಈ ಸ್ಟಾರ್ಕ್ ಅನ್ನುವ ಬರಹಗಾರನೊಳಗೆ ನನಗೆ ಪರಕಾಯ ಪ್ರವೇಶ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ, ನಾನು ಹೆಚ್ಚು ಸ್ಟಾರ್ಕ್ ಆಗಿದ್ದಾಗ ಬಹಳ ಸಮಯ ನನ್ನ ಹೀರೋ ಪಾರ್ಕರನ ಜತೆ ಕಾಲ ಕಳೆಯುತ್ತಿದ್ದ ಕಾರಣವೇನೋ, ನಾನು ವೆಸ್ಟ್‌ಲೇಕ್ ಆಗಲು ಸಾಧ್ಯವೇ ಆಗಲಿಲ್ಲ. ಒಂದರ ಅಸ್ತಿತ್ವವನ್ನು ಪಡೆಯಲು ಇನ್ನೊಂದನ್ನು ಕೊಲ್ಲಬೇಕಾಗಿತ್ತು."

ಬರಹವನ್ನೇ ವೃತ್ತಿಮಾಡಿಕೊಂಡವರಿಗೆ ಈ ಅಂಕಿತನಾಮಗಳು, ಕಾವ್ಯನಾಮಗಳು ಹೀಗೆ ಕೆಲವೊಮ್ಮೆ ಅನಿವಾರ್ಯವಾಗಬಹುದು. ಮೊದಲೇ ಹೇಳಿದಹಾಗೆ ಅನೇಕ ವ್ಯಾವಹಾರಿಕ ಕಾರಣಗಳು ಇಲಿ ಮುಖ್ಯವಾಗಬಹುದು. ಆದರೆ ತನ್ನ ಅಸ್ಮಿತೆಯನ್ನೇ ಮರೆಸುವ ಎರಡೆರಡು ಆತ್ಮಗಳನ್ನು ಜೀವಿಸುವ ಈ ವೆಸ್ಟ್‌ಲೇಕನ ಕತೆ ಒಂದು ವಿಚಿತ್ರ ಎನಿಸಬಹುದು. ಇನ್ನೂ ರೋಚಕವಾದ ವಿಷಯವೆಂದರೆ ವೆಸ್ಟ್‌ಲೇಕೇ ಸ್ಟಾರ್ಕ್ ಎನ್ನುವುದು ಬಹಳ ಜನಕ್ಕೆ ಗೊತ್ತಿತ್ತು.

ಶ್ರೀನಿವಾಸ, ಕಾವ್ಯಾನಂದ, ಚದುರಂಗ, ಶ್ರೀರಂಗ-ಈ ಕಾವ್ಯನಾಮಗಳು ಹೇಗೆ ಬಂದ ಸಂದರ್ಭ ನನಗೆ ಗೊತ್ತಿಲ್ಲ. ಆದರೆ ಈ ರೀತಿಯ ಅಸ್ಮಿತೆಯ ಪ್ರಶ್ನೆ ಈ ಕಾವ್ಯನಾಮಗಳನ್ನಿಟ್ಟುಕೊಂಡವರನ್ನು ಕಾಡಿತ್ತೋ ಇಲ್ಲವೋ ಎನ್ನುವುದೂ ನನಗೆ ಗೊತ್ತಿಲ್ಲ. ಮಾಸ್ತಿಯವರಿಗೆ ಶ್ರೀನಿವಾಸ ಎಂಬ ಹೆಸರು ಕತೆ ಬರೆಯುವ ತುರ್ತಿಗೆ ಇನ್ನೊಂದು ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಬೇಕೆನ್ನುವ ಜರೂರಿಗಾಗಿ ಸೃಷ್ಟಿಯಾಯಿತು ಅನ್ನಿಸುವುದಿಲ್ಲ. (ಇದು ನನ್ನ ತಪ್ಪುಗ್ರಹಿಕೆಯಾಗಿದ್ದರೆ ಕ್ಷಮಿಸಿ) ಇದು ಭಾವನಾತ್ಮಕವಾಗಿ ಮುಖ್ಯವಾಗಿತ್ತು ಎಂದು ಮಾತ್ರ ನನಗೆ ಅನಿಸುತ್ತದೆ. ಹಾಗೆಯೇ ಕೂಡಸಂಗಮದೇವ, ಗಿರಿಧರ ಗೋಪಾಲ, ಪುರಂದರ ವಿಠಲ ಎನ್ನುವ ಕಾವ್ಯನಾಮಗಳು ಭಕ್ತಿಭಾವಗಳ ತುರ್ತೇ ಹೊರತು ಮೇಲೆ ಹೇಳಿದ ವ್ಯಾವಹಾರಿಕ ತುರ್ತಲ್ಲ.

ಕಾವ್ಯನಾಮಗಳನ್ನಿಟ್ಟುಕೊಂಡು ಬರೆಯುವುದರ ಚರಿತ್ರೆ ಬಹಳ ಹಳೆಯದು. ಹೆಂಗಸರು ಅಪರಾಧ ತನಿಖೆಗಳ ಬಗ್ಗೆ ಬರೆಯುವಾಗ ಅಥವಾ ತಮ್ಮನ್ನು ಗಂಡು ವಿಮರ್ಶಕರು ಸ್ವಲ್ಪ ಗಂಭೀರವಾಗಿ ಪರಿಗಣಿಸಲಿ ಎಂದೂ ತಮ್ಮ ನಿಜನಾಮದಲ್ಲಿ ಬರೆಯುತ್ತಿದ್ದ ಕಾಲ ಒಂದಿತ್ತು. ಔಟ್ ಆಫ್ ಆಫ್ರಿಕಾದಂತ ಕಾದಂಬರಿ ಬರೆದ ಕ್ಯಾರೆನ್ ಬ್ಲಿಕ್ಸೆನ್ ಅಥವಾ ಜನಪ್ರಿಯ ಹ್ಯಾರಿ ಪಾಟರ್ ಸರಣಿ ಬರೆದ ಜೆ.ಕೆ. ರೌಲಿಂಗ್ (ಹೆಣ್ಣು ಅಥವಾ ಗಂಡು ಎಂದು ಗೊತ್ತಾಗದೇ ಇರಲು ಈಕೆ ಜೆ.ಕೆ. ಎಂಬ ಇನಿಶಿಯಲ್‌ಗಳನ್ನು ಬಳಸಿದ್ದಳು) ಕೂಡ ಇದಕ್ಕೆ ಅಪವಾದವಲ್ಲ. ಹಾಗೆಯೇ ಪ್ರೇಮಕಥೆಗಳನ್ನು ಗಂದಸರು ಬರೆಯಬೇಕಾದರೆ ಹೆಣ್ಣು ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದ ನಿದರ್ಶನಗಳೂ ಇವೆ.

ಸದ್ಯ ಕನ್ನಡದಲ್ಲಿ ಜೋಗಿ ಎಂಬ ಹೆಸರಿನಲ್ಲಿ ಬರೆಯುತ್ತಿರುವ ಗಿರೀಶ್ ರಾವ್‌ರವರ ನದಿಯ ನೆನಪಿನ ಹಂಗು ಕಾದಂಬರಿಯಲ್ಲಿ ಕಾದಂಬರಿಯ ನಾಯಕ ರಘುನಂದನ "ಮನುಷ್ಯನಿಗೆ ಒಂದು ಹಂಬಲವಿರುತ್ತೆ. ಅಜ್ಞಾತವಾಗಿ ಉಳಿಯುವುದು ಅವನಿಗೆ ಆಗದ ಕೆಲಸ. ತಾನು ತಾನಾಗಿಯೇ ಪ್ರಕಟಗೊಳ್ಳಬೇಕು ಎನ್ನುವ ಅದಮ್ಯ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ" ಎಂದು ಒಂದು ಸಂದರ್ಭದಲ್ಲಿ ಸ್ವಗತಪಡುತ್ತಾನೆ. ಇದು ನನಗೆ ಯಾಕೆ ನೆನಪಾಗುತ್ತಿದೆಯೆಂದರೆ ಜೋಗಿಯವರು ಬೇರೆಬೇರೆ ಹೆಸರುಗಳಿಂದ ಬರೆಯುತ್ತಿದ್ದಾಗಲೇ ಅವರ ಜಾನಕಿ ಕಾಲಂ ಪುಸ್ತಕ ಪ್ರಕಟವಾಯಿತು. ಅದರ ಪುಟ್ಟ ಪರಿಚಯದಲ್ಲಿ "ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಸಾಹಿತಿ ಈಗ ಇಂvಪ್ಪಲ್ಲಿ ವಾಸಿಸುತ್ತಿದ್ದಾರೆ ಎಂಬ ಇತ್ಯೋಪರಿಗಳಿಂದ ಮುಕ್ತವಾಗುವ ಹಂಬಲ ಮತ್ತು ಅನಿವಾರ್ಯತೆಯ ಕಾರಣಗಳಿಂದ ಪರಿಚಯವನ್ನು ಜಾನಕಿ ಎಂಬಲ್ಲಿಗೆ ಸೀಮಿತಗೊಳಿಸಲಾಗಿದೆ" ಎಂದು ಬರೆಯುತ್ತಾರೆ. ಹೀಗೆ ಬರೆಯುವಾಗ ನಾವು ಕೇವಲ ಬರಹದಿಂದ ಮಾತ್ರ ಬರಹಗಾರನನ್ನು ಪ್ರೀತಿಸುತ್ತೇವೆ. ಸಾಹಿತಿಯ ನಿಜವಾದ ಅಸ್ಮಿತೆ ಯಾರಿಗೂ ಗೊತ್ತಿರದ ಕಾರಣ ಬರಹ ಮತ್ತು ಓದುಗನ ನಡುವೆ ಈ "ಸಾಹಿತಿ" ಎನ್ನುವ ಮಾನುಷಿಕ ಫ್ಯಾಕ್ಟರ್ ಅಳಿಸೇ ಹೋಗುತ್ತದೆ. ಸಾಹಿತಿಗೂ ತನ್ನನ್ನು ಮತ್ತು ತನ್ನ ಲೇಖಕರನ್ನು ಬಂಧಿಸುವುದು ತನ್ನ ಬರಹಗಳು ಮಾತ್ರ ಎಂಬ ಅರಿವು ಮಾತ್ರ ಇದ್ದಾಗ ಬರಹಕ್ಕೆ ಒಂದು ವಿಚಿತ್ರ ಅಗೋಚರ ಆಪ್ತತೆ ಬಂದುಬಿಡುತ್ತದೆ. ಆಗ ಜಾನಕಿ ಯಾರು ಅನ್ನುವುದು ಮುಖ್ಯವಾಗುವುದೇ ಇಲ್ಲ. ಜಾನಕಿಯನ್ನು ಜನ ಪ್ರೀತಿಸಿದ್ದು ಇದೇ ಕಾರಣಕ್ಕೆ.

ಬಹಳ ವರ್ಷಗಳ ಕೆಳಗೆ ಸುಧಾ ವಾರಪತ್ರಿಕೆಯ"ನೀವು ಕೇಳಿದಿರಿ?" ವಿಭಾಗದ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಿದ್ದರು ಎಂಬುದನ್ನು ಬಹಳ ಗುಪ್ತವಾಗಿಡುತ್ತಿದ್ದರು. ಉತ್ತರಿಸುವ ವ್ಯಕ್ತಿ ಸತ್ತಾಗ ಮಾತ್ರ ಆ ವ್ಯಕ್ತಿಯ ಪರಿಚಯವನ್ನು ಬಹಿರಂಗಪಡಿಸುತ್ತಿದ್ದರು. ಒಂದಿಷ್ಟುಕಾಲ ಜಿ ಪಿ ರಾಜರತ್ನಂರವರು ಈ ವಿಭಾಗಕ್ಕೆ ಉತ್ತರ ಕೊಡುತ್ತಿದ್ದರು. ಒಂದು ವಾರ ಯಾರೋ ಪ್ರಶ್ನಿಸಿದ್ದರು "ನೀವು ಸತ್ತಾಗ ಮಾತ್ರ ನೀವು ಯಾರು ಎಂದು ನಮಗೆ ಗೊತ್ತಾಗುತ್ತದೆ. ನೀವು ಯಾವಾಗ ಸಾಯುತ್ತೀರಿ?" ರಾಜರತ್ನಂರವರೂ ತುಂಟತನದಿಂದ ಏನೋ ಉತ್ತರಿಸಿದ್ದರು. ಆದರೆ ಮುಂದಿನವಾರವೇ ರಾಜರತ್ನಂರವರು ತೀರಿಕೊಂಡಿದ್ದು ತೀರ ಆಕಸ್ಮಿಕವಾದರೂ ಈ ಪ್ರಶ್ನೆಯನ್ನು ಕೇಳಿದವರ ಪಾಡು ಹೇಗಾಗಿರಬೇಡ. ಬಹಳ ನೊಂದುಕೊಂಡು ನಂತರ ಪ್ರಶ್ನೆ ಕೇಳಿದವರು ಒಪ್ಪೋಲೆಯನ್ನು ಬರೆದಿದ್ದರು. ಪಾಪ, ಇದರಲ್ಲಿ ಅವರ ತಪ್ಪೇನೂ ಇರಲಿಲ್ಲ.

ಈ ಕಾವ್ಯನಾಮಗಳ ಮೇಲೆ ನನ್ನ ಗೌರವ ಈಗ ಇನ್ನೂ ಜಾಸ್ತಿಯಾಗಿದೆ. ಒಂದು ಕಾಲದಲ್ಲಿ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಇಟ್ಟುಕೊಂಡ ಹೆಸರನ್ನು ಜನಪ್ರಿಯವಾದ ಮೇಲೆ ಮುಚ್ಚಿಟ್ಟುಕೊಳ್ಳುವುದು ಇನ್ನೂ ದೊಡ್ದ ಕೆಲಸ. ಅದು ಕೆಲವೊಮ್ಮೆ ದುಸ್ತರ ಕೂಡ.

Saturday, June 13, 2009

ಕೇವಲ ಬರಹಗಾರ

ಶಾಂತಾರಾಮ್ ಎನ್ನುವ ಬೃಹತ್ ಕಾದಂಬರಿ ಬರೆದ ಗ್ರೆಗರಿ ಡೇವಿಡ್ ರಾಬರ್ಟ್ಸ್ ಆ ಕಾದಂಬರಿಯ ಶುರುವಿನಲ್ಲಿ ಬರೆಯುತ್ತಾನೆ. ‘ನಾನೊಬ್ಬ ಹುಟ್ಟು ಬರಹಗಾರ. ಕೇವಲ ರಹಗಾರ. ಎಂಥ ವಿಷಮ ಪರಿಸ್ಥಿಯಲ್ಲಿಯೂ ನಾನು ಬರೆಯುತ್ತಲೇ ಇದ್ದೆ. ಜೈಲಿನಲ್ಲಿರಲಿ, ಜೈಲಿನಿಂದ ತಪ್ಪಿಸಿಕೊಳ್ಳುವಾಗಲಿರಲಿ, ಅಥವಾ ಲಿಯೊಪೊಲ್ಡ್ ಕೆಫೆಯಲ್ಲಿ ಕೂತು ಮಾಫಿಯಾದವರೊಂದಿಗೆ ವ್ಯವಹಾರ ಕುದುರಿಸುತ್ತಿರಲಿ, ಯಾರನ್ನಾದರೂ ಹೇಗೆ ಮುಗಿಸಬೇಕೆಂದು ಪ್ಲಾನ್ ಮಾಡುತ್ತಿರಲಿ, ನಾನು ಬರೆಯುತ್ತಲೇ ಇರುತ್ತಿದ್ದೆ. ರೆಸ್ಟುರೆಂಟಿನಲ್ಲಿಡುವ ಟಿಶ್ಯೂ ಪೇಪರಿನ ಹಿಂದೆ, ಜೈಲಿನಲ್ಲಿ ಗೋಡೆಗಳ ಮೇಲೆ, ಟಾಯ್ಲೆಟ್ ಪೇಪರುಗಳ ಮೇಲೆ ಬರೆಯುತ್ತಲೇ ಇದ್ದೆ. ಬರೆಯದೇ ಇರದ ದಿನವೇ ಇಲ್ಲ. ಬರೆಯದೇ ಇರದೇ ನನಗೇ ಬದುಕಲಿಕ್ಕೇ ಬರುವುದಿಲ್ಲ.

ಈ ಗ್ರೆಗರಿ ಡೇವಿಡ್ ರಾಬರ್ಟ್ಸ್‌ನ ಚರಿತ್ರೆ ಗೊತ್ತಿಲ್ಲದವರಿಗೆ ಈತನ ಒಂದು ಪುಟ್ಟ ಪರಿಚಯ- ಈತ ಆಸ್ಟ್ರೇಲಿಯಾದಲ್ಲಿ ಒಬ್ಬ ಅಪರಾಧಿ. ಮಾದಕವಸ್ತುಗಳ ಚಟಕ್ಕಾಗಿ ಜನರನ್ನು, ಬಾಂಕುಗಳನ್ನು ಸುಲಿದಾತ. ಆ ತಪ್ಪಿಗಾಗಿ ಆತನಿಗೆ ಜೈಲು ಶಿಕ್ಷೆಯಾಗಿತ್ತು. ಆಸ್ಟ್ರೇಲಿಯಾದ ಜೈಲಿನಿಂದ ತಪ್ಪಿಸಿಕೊಂಡು ಮುಂಬಯಿಗೆ ಬಂದು ಅಲ್ಲಿ ಕೂಡ ಅನೇಕ ಅಕ್ರಮ ವ್ಯವಹಾರಗಳನ್ನು ನಡಿಸಿದ್ದ. ಮುಂಬಯಿಯಲ್ಲಿ ಕೆಲಕಾಲ ಕೊಳೇಗೇರಿಯಲ್ಲಿಯೇ ಜೀವಿಸಿದ್ದ. ಕೊಳೆಗೇರಿಯಲ್ಲೊಮ್ಮೆ ಬೆಂಕಿ ಬಿದ್ದಾಗ ಆತ ಅಲ್ಲಿಯವರ ಜೀವ ಉಳಿಸುವ ಸಲುವಾಗಿ ಒಂದಿಷ್ಟು ಜನರಿಗೆ ಪ್ರಥಮ ಚಿಕಿತ್ಸೆಯನ್ನು ಮಾಡಿದ್ದರಿಂದ ಅವನನ್ನು ಆ ಕೊಳೆಗೇರಿಯ ಜನ ಡಾಕ್ಟರೆಂದೇ ತಿಳಿದಿದ್ದರು. ಅಲ್ಲಿನವರಿಗೆ ಡಾಕ್ಟರಿಕೆ ಮಾಡುತ್ತಲೇ ಜತೆಜತೆಯಾಗಿ ಮುಂಬೈ ಮಾಫಿಯಾಕ್ಕೆ ಕೂಡ ಆತ ಕೆಲಸ ಮಾಡಿದ. ನಂತರ ಒಂದು ದಿನ ಆತನನ್ನು ಜರ್ಮನಿಯಲ್ಲಿ ಬಂಧಿಸಲಾಯಿತು. ಆತ ಅಲ್ಲಿ ಮತ್ತು ಆಸ್ಟ್ರೇಲಿಯಾಕ್ಕೆ ಹೋಗಿ ತನ್ನ ಶಿಕ್ಷೆಯನ್ನು ಪೂರ್ಣಗೊಳಿಸಿ ಬಂದ. ಈಗ ಮುಂಬಯಿಯಲ್ಲಿ ಒಂದು ಮಲ್ಟಿಮೀಡಿಯಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾನೆ. ತನ್ನ ಜೀವನಕ್ಕೆ ಸಂಬಂಧಪಟ್ಟ ಘಟನೆಗಳನ್ನಾಧರಿಸಿ ಆತ ಒಂದು ಬೃಹತ್ ಕಾದಂಬರಿಯನ್ನು ಬರೆದಿದ್ದಾನೆ. ಆ ಪುಸ್ತಕದ ಹೆಸರೇ ಶಾಂತಾರಾಮ್.

ನನಗೆ ಮುಖ್ಯ ಅನಿಸಿದ್ದು ಈತನ ರೋಚಕ ಚರಿತ್ರೆಗಿಂತ ಈತ ಪ್ರತಿಪಾದಿಸುವ ‘ನಾನೊಬ್ಬ ಹುಟ್ಟು ಬರಹಗಾರ’ ಅನ್ನುವ ಪ್ರಮೇಯ. ಈತನಿಗೆ ಒಬ್ಬ ಸಾಹಿತಿಗೆ ಬೇಕಾದ ಯಾವ ಪೂರ್ವ ಸಿದ್ಧತೆಗಳ ಹಂಗಿಲ್ಲ. ಎಲ್ಲ ಉದ್ದಾಮ ಸಾಹಿತಿಗಳು ಪ್ರತಿಪಾದಿಸುವ ಕನಿಷ್ಠ ಓದೂ ಇಲ್ಲದೇ ಬರೆಯುವ ಗುಣ ಹೇಗೆ ಬರುತ್ತದೆ ಎಂಬ ಅಚ್ಚರಿಗೆ ಈತ ಉತ್ತರ. ತಮ್ಮ ಜೀವನವನ್ನು ಬರೆಯುತ್ತಲೇ ಪ್ರೀತಿಸುವ ಮತ್ತು ಬರೆದದ್ದೆಲ್ಲಾ ಸಾಹಿತ್ಯವಾಗಬೇಕು ಅನ್ನುವ ಪ್ರಲೋಭನೆಯಿಲ್ಲದೇ ಸುಮ್ಮನೇ ಬರೆಯುವುದೇ ತಮ್ಮ ಧರ್ಮ, ಬರೆಯದಿದ್ದರೆ ಸಾಧ್ಯವೇ ಇಲ್ಲ ಎನ್ನುವ ಒಂದು ಗುಂಪಿನ ಇರುವಿಕೆಯ ಬಗ್ಗೆ ಅನೇಕರಿಗೆ ನಂಬಿಕೆಯಿದೆ. ಭಾಷೆಯ ಮೇಲಿನ ಪ್ರಭುತ್ವಕ್ಕಾಗಿ ಅಥವಾ ಕಲ್ಪಿತ ಬರಹದ ವ್ಯಾಕರಣಕ್ಕಾದರೂ ಒಂದಿಷ್ಟು ಕ್ಲಾಸಿಕ್‌ಗಳಲ್ಲದಿದ್ದರೂ ಸಮಕಾಲೀನ ಪಲ್ಪ್ ಫಿಕ್ಷನ್ ನನ್ನಾದರೂ ಓದಿರಬೇಕಲ್ಲವಾ ಅನ್ನುವ ಅನುಮಾನವನ್ನೂ ಈತ ಸಮರ್ಥವಾಗಿ ಇದರಲ್ಲಿ ನಿವಾರಿಸಿಕೊಂಡಿದ್ದಾನೆ.

ಲಿಪಿಯೇ ಇಲ್ಲದಿದ್ದಾಗ ಸಾಹಿತ್ಯ ಇರಲಿಲ್ಲವೇ. ಬರೇ ಬಾಯಿಂದ ಬಾಯಿಗೆ ಹರಿದು ಬಂದ ಸೋಬಾನೆ ಪದಗಳು, ಮಲೆಮಾದೇಶ್ವರ, ಮುಂಟೇಸ್ವಾಮಿ, ಮೈಲಾರಲಿಂಗ ಸ್ವಾಮಿಯ ಪದಗಳು, ವಚನಗಳು ಇವಕ್ಕೆಲ್ಲ ಸಾಹಿತ್ಯಿಕ ಗುಣವಿಲ್ಲವೇ? ಇವರೆಲ್ಲ ಎಂಥ ಓದಿದ್ದರು? ಜೀವನಾನುಭವ ಮಾತ್ರದಿಂದ ಸಾಹಿತ್ಯ ಹುಟ್ಟುವುದಿಲ್ಲವೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಬಹಳ ಸುಲಭವಲ್ಲ. ಸ್ವಲ್ಪ ಸುಲಭೀಕರಿಸಿ ಹೇಳಿದರೆ ನಮ್ಮ ಜನಪದ ಅಥವಾ ಮೌಖಿಕ, ಶ್ರವ್ಯ ಸಾಹಿತ್ಯ ಯಾವತ್ತೂ ಬರೆಯಬೇಕೆಂದು, ತಾವು ಬರೆದದ್ದೆಲ್ಲಾ ಸಾಹಿತ್ಯವಾಗಬೇಕೆಂದು ಬರೆಸಿಕೊಂಡದ್ದಲ್ಲ. ಅಲ್ಲಿದ್ದ ಬೇಕಾದಷ್ಟು ಕಥನ, ಇತಿಹಾಸ, ಪುರಾಣಗಳಲ್ಲಿ ನಂತರ ನಾವು ಸಾಹಿತ್ಯಿಕ ಗುಣಗಳನ್ನು ಹುಡುಕಿಕೊಂಡೆವು. ಆದರೆ, ಈಗ ಬರೆಯುತ್ತಿರುವ ನಮಗೆ ಸಾಹಿತಿ ಅನಿಸಿಕೊಳ್ಳಲು ಇಷ್ಟಪಡುವವರಿಗೆ ಈ ಹೆಚ್ಚು ಓದಿರದವರು ಬರೆಯುವ ‘ಸ್ಪಾಂಟೇನಿಯಸ್ ಬರವಣಿಗೆ’ ಎಷ್ಟು ಪ್ರಸ್ತುತ?. (ಇಲ್ಲಿ ಓದು ಎಂದರೆ ಸಾಹಿತ್ಯದ ಓದು ಮಾತ್ರ)

ಮುಖ್ಯವಾದ ಒಂದು ಪ್ರಮೇಯವೆಂದರೆ ಎಲ್ಲ ಸಾಹಿತಿಗಳು ಬಹಳಷ್ಟು ಓದಿಕೊಂಡಿರುತ್ತಾರೆ ಎಂದು ನಾವು ತಿಳಿದುಕೊಳ್ಳುವುದು.. ಆದರೆ, ನಮಗೆ ಆಶ್ಚರ್ಯ ಬರುವಹಾಗೆ ಎಷ್ಟೋಜನ ಉದ್ದಾಮ ಸಾಹಿತಿಗಳು ಸಿಕ್ಕಾಪಟ್ಟೆ ಓದಿಯೇನೂ ಇರುವುದಿಲ್ಲ. ಬಹಳ ಓದಿಕೊಂಡಿರುವಾತ ಬರೆಯುವುದೇ ಬೇರೆ. ಓದಿದಾತ ತನ್ನ ಓದಿನಿಂದ ಮುಗ್ಢತೆಯನ್ನು ಕಳೆದುಕೊಂಡು ಬುದ್ಧಿವಂತನಾಗಿಬಿಟ್ಟರೆ ತಕ್ಷಣ ಆತನೊಳಗಿನ ಕಲ್ಪನೆಗಳು ಕರಗಿ, ರೂಪಕಗಳು ಎರವಲಾಗಿ ಆತನೊಳಗಿನ ‘ಕಲ್ಪಿತ’ ಸಾಹಿತಿ ನಾಶವಾಗುತ್ತಾನೇನೋ? ಮತ್ತೊಂದು ಸಮಸ್ಯೆಯೆಂದರೆ, ಸಾಹಿತಿ ಬುದ್ಧಿವಂತನಾಗಿಬಿಟ್ಟರೆ ಮತ್ತು ಆತನಿಗೆ ಜನಕ್ಕೆ ಹಿತವಾಗಿ ಬಳಸಲು ಬೇಕಾದ ಭಾಷೆಯೊಂದು ಇದ್ದುಬಿಟ್ಟರೆ ಆತ ಹೇಳುವುದೇ ವೇದವಾಕ್ಯವಾಗಿಬಿಡುತ್ತದೆ ಮತ್ತು ಆತ ಪ್ರವಾದಿಯ ರೀತಿ ಎಲ್ಲವನ್ನೂ ಹೇಳಲಿಕ್ಕೆ ತೊಡಗುತ್ತಾನೆ. ಇದು ಓದಿನ ಸೈಡ್ ಎಫೆಕ್ಟ್.

ಹಾಗಾದರೆ, ಬುದ್ಧಿವಂತರು- ಸಾಹಿತ್ಯವನ್ನು ಹೆಚ್ಚು ಓದಿಕೊಂಡಿರುವವರು ಫಿಕ್ಷನ್ ಬರೆಯುವುದು ತಪ್ಪಾ? ಎ ಕೆ ರಾಮಾನುಜನ್‌ರವರ ‘ಬುದ್ಧಿವಂತನಿಗೆ ಕನಸು ಬಿದ್ದರೆ’ ಎಂಬ ಪುಟ್ಟ ಕವನದ ಈ ಸಾಲುಗಳನ್ನು ನೋಡೋಣ.

..ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ
ಮನುಷ್ಯನೋ
ಚಿಟ್ಟೆಯೋ
ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು ರಾತ್ರಿಯ ಕನಸೋ

ತಿಳಿಯದೆ ಭ್ರಮೆ ಹಿಡಿಯಿತು.

ಕನಸೂ ತರ್ಕಬದ್ಧವಾಗಿ ಬೀಳಬೇಕೆಂದು ಹಟಹಿಡಿದರೆ ಇಂತ ತಾಪತ್ರಯಗಳು ಉಂಟಾಗಬಹುದು.

ಒಬ್ಬ ಬರಹಗಾರನ ಕಸಬುದಾರಿಕೆಗೆ ಬೇಕಾದ ಮೂಲಭೂತವಾದ ಅವಶ್ಯಕತೆಗಳ ಬಗ್ಗೆ ಅಮೆರಿಕಾದ ಸಾಹಿತಿ ಜೇಮ್ಸ್ ಮಿಶೆನರ್ ಹೇಳುತ್ತಾನೆ.
೧. ಯಾವ ಭಾಷೆಯಲ್ಲಿ ಬರೆಯುತ್ತೀಯೋ ಆ ಭಾಷೆಯಲ್ಲಿ ಆದಷ್ಟು ಪ್ರಾವೀಣ್ಯತೆಯನ್ನು ಪಡೆದುಕೋ- ಅದರ ಸಮೃದ್ಧಿ ಮತ್ತು ಭಾಷೆಯ ವೈವಿಧ್ಯದ ಕಡೆ ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು.
೨. ನಂತರ ನಿನ್ನದೇ ಆದ ಒಂದು ಭಾಷೆಯನ್ನು ರೂಢಿಸಿಕೋ, ಬೀದಿಯ ಲಿಂಗೋ ಅನ್ನು ಹಿಡಿದು ಕನಿಷ್ಠ ಮೂರು ಬೇರೆಬೇರೆ ಸಾಮಾಜಿಕ ಸ್ತರದಲ್ಲಿ ನಿನ್ನ ಭಾಷೆ ಪಳಗಿರಬೇಕು.
೩. ಸಾಹಿತ್ಯ ಎತ್ತಕಡೆ ಸಾಗುತ್ತಿದೆ ಎಂದು ನಿನಗೆ ಪರಿಚಯ ಮಾಡಿಸುವ ಕೆಲವಾದರೂ ನಿನ್ನ ಸಮಕಾಲೀನರ ಕೃತಿಗಳನ್ನು ಓದು. ನಾನು ಕ್ಲಾಸಿಕ್ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದನಾದ್ದರಿಂದ ಡಾಂಟೆ, ಬಾಲ್ಜಾಕ್, ಡಿಕನ್ಸ್, ಎಲಿಯಟ್, ದೊಸ್ತೋವ್ಸ್ಕಿ ಇತರರನ್ನು ಓದಿದ್ದೆ. ಆದರೆ ಸಾಹಿತಿಯಾಗಲು ಅವರನ್ನು ಓದಲೇಬೇಕಾದ ಅಗತ್ಯವಿಲ್ಲ. ಸಾಹಿತ್ಯದ ಚರಿತ್ರೆ ಗೊತ್ತಿದ್ದರೆ ಒಳ್ಳೆಯದು ಆದರೆ ಅದರಲ್ಲಿಯೇ ಮುಳುಗಿಹೋಗಬೇಕಿಲ್ಲ.
೪. ನಿನ್ನ ಪುಸ್ತಕವನ್ನು ಪ್ರಕಾಶಿಸಲು ನಿನಗೆ ಸಹಾಯ ಮಾಡಬಲ್ಲ ಎಲ್ಲರ ಜತೆ ಆದಷ್ಟು ಸಂಪರ್ಕವನ್ನಿಟ್ಟುಕೋ.
ಎಲ್ಲ ಕಸಬಿನಲ್ಲಿಯೂ ಕೆಲಸ ಕಲಿಯಲು ಸಿದ್ಧತೆ ಮಾಡಿಕೊಂಡಂತೆ ತಾನೇನು ಬರೆಯಬೇಕು ಎಂದು ನಿರ್ಧರಿಸಿದಾತ ಅದರಲ್ಲಿ ಕಲಿಯಬೇಕಾದ ಕಸಬುದಾರಿಕೆಯನ್ನು ಮತ್ತು ಪುಸ್ತಕ ಪ್ರಕಟಿಸಲು ಬೇಕಾದ ವ್ಯವಹಾರ ಜ್ಞಾನವನ್ನು ಈತ ಹೇಳುತ್ತಿದ್ದಾನೆ. ಕನ್ನಡದ ಸಂದರ್ಭದಲ್ಲಿ ಇವು ಕೊಂಚ ಬೇರೆಯಾಗಬಹುದು.

ಅನಂತಮೂರ್ತಿಯವರು ತಮ್ಮ ಒಂದು ಲೇಖನದಲ್ಲಿ ‘ಯಾವುದೇ ಸಾಹಿತಿಗೆ ಮುಖ್ಯವಾಗಿ ಪ್ರಸ್ತುತವಾಗುವುದು ಆತನ ಕಾಲದ ಹಿಂಚುಮುಂಚಿನ ಸುಮಾರು ನಾಲ್ಕು ಅಥವಾ ಐದು ದಶಕದ ಸಾಹಿತ್ಯ ಮಾತ್ರ.’ ಎಂದು ಉಲ್ಲೇಖಿಸಿದ್ದಾರೆ. ಇದೇ ವಾದವನ್ನು ಕೊಂಚ ಬೇರೆಯಾಗಿ ಮಂಡಿಸಿದರೆ ಒಬ್ಬನೇ ಸಾಹಿತಿ ಸುಮಾರು ಆರು ದಶಕಗಳಷ್ಟು ಕಾಲ ಸಕ್ರಿಯವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡರೆ ಆತನ ಆರಂಭಿಕ ಬರವಣಿಗೆ ಆತನಿಗೇ ಕೊನೆಗೆ ಪ್ರಸ್ತುತವಾಗದೇ ಹೋಗಬಹುದು. ಹಾಗಾಗಿ ಆಳವಾದ ಓದು ಅನ್ನುವುದು ಒಬ್ಬ ಬರಹಗಾರನಿಗೆ ಮುಖ್ಯವಾಗಿ ಫಿಕ್ಷನ್ ಬರಹಗಾರನಿಗೆ ಅಷ್ಟು ಅವಶ್ಯವಿಲ್ಲ ಎನ್ನಿಸುವ ಅಭಿಪ್ರಾಯ ಅಷ್ಟು ಅಸಾಧುವಾದುದಲ್ಲ. ಓದು ಒಬ್ಬ ಬರಹಗಾರನಿಗೆ ಕಸುಬನ್ನು ಕಲಿಸಿಕೊಡಲು ಮಾತ್ರ. ನಂತರ ಬರಹಗಾರ ತನ್ನನ್ನು ಶೋಧಿಸಿಕೊಳ್ಳುವುದು ಬರೆಯುತ್ತಾ ಹೋದಾಗ ಮಾತ್ರ. ಒಬ್ಬ ವೈದ್ಯನಿಗೆ ಮೆಡಿಕಲ್ ಕಾಲೇಜಿನಲ್ಲಿ ಡಾಕ್ಟರಿಕೆಯ ಮೂಲಭೂತ ಮಂತ್ರವನ್ನು ಮಾತ್ರ ಹೇಳಿಕೊಟ್ಟಿರುತ್ತಾರೆ. ಆತ ವೈದ್ಯನಾದ ಮೇಲೆ ಆತ ತನ್ನ ಕೆಲಸವನ್ನು ಮಾಡುತ್ತಾ ಕಲಿಯುತ್ತಾನೆ, ಕಲಿಯುತ್ತಾ ಮಾಡುತ್ತಾನೆ. ಹೀಗೇ ಬೆಳೆಯುತ್ತಾನೆ.

ಕುಂದೇರ ಇದಕ್ಕೆ ಒಪ್ಪುವುದಿಲ್ಲ. ಆತ ಪ್ರತಿಪಾದಿಸುವ ‘ಸಾಹಿತಿಯ ಮರಣ’ದ ಕಾನ್ಸೆಪ್ಟಿನಲ್ಲಿ ಆತ ಹೇಳುವುದು ಒಬ್ಬ ಸಾಹಿತಿ ಯಾವಾಗ ಓದುವುದನ್ನು ನಿಲ್ಲಿಸುತ್ತಾನೋ ಆಗ ಆತ ಸತ್ತ ಎಂದು ತಿಳಿದುಕೊಳ್ಳಿ ಎಂದು ಹೇಳುತ್ತಾನೆ. ಆತನಿಗೆ ಓದಿಲ್ಲದ ಯಾವ ಬರಹವೂ ಪ್ರಸ್ತುತವಾಗುವುದಿಲ್ಲ. ಈತನ ಬರಹಗಳನ್ನೇ ನೋಡಿದರೆ ಅರ್ಥವಾಗುತ್ತದೆ. ಅವನಿಗೆ ತನ್ನ ಓದುಗನ ಬುದ್ಧಿಮತ್ತೆಯ ಬಗ್ಗೆ ಬಹಳ ನಂಬಿಕೆ. ತನ್ನ ಬರಹ ಎಲ್ಲರಿಗೂ ಪ್ರಸ್ತುತವಗಬೇಕೆಂಬ ಪ್ರಲೋಭನೆಯೂ ಇವನಿಗಿಲ್ಲ.

ನಾನು ಈ ಸಂದರ್ಭದಲ್ಲಿ ಅರ್ಥೈಸಿಕೊಂಡಿರುವುದೆಂದರೆ -ಓದಿಕೊಂಡಿರುವ ಬರಹಗಾರರು ಮತ್ತು ಕೇವಲ ಬರಹಗಾರರು ಎಂಬ ಎರಡು ಪ್ರಬೇಧಗಳಿವೆಯೇನೊ. ಮೊದಲ ಗುಂಪಿನವರು ಬಹಳ ಓದಿಕೊಂಡಿರುತ್ತಾರೆ. ಅವರಿಗೆ ಶ್ರೇಷ್ಠವಾದುದ್ದನ್ನೆಲ್ಲಾ ಓದುವ ಆಸೆ ಅದಮ್ಯವಾಗಿದೆ. ಆದರೆ ಇವರಿಗೆ ಬರೆಯುವ ಗುಣ ಹುಟ್ಟಿನಿಂದಲೂ ಇದೆ. ಕೆಲವರಿಗೆ ಬರಹ ಅವರ ಓದಿನ ಉಪೋತ್ಪನ್ನವೂ ಆಗಿರಬಹುದು. ಅಂದರೆ ತಾವು ಓದಿದ್ದನ್ನು ಇನ್ನೊಬ್ಬರಿಗೆ ಅರ್ಥಮಾಡಿಸಲೂ ಇವರು ಬರೆಯಬಹುದು. ಇವರು ಓದಿರುವ ಪುಸ್ತಕಗಳು, ಮೆಚ್ಚಿನ ಲೇಖಕರ ಭಾಷೆ ಇವರ ಬರವಣಿಗೆಯ ಮೇಲೆಯೂ ಪ್ರಭಾವ ಬೀರಿರುತ್ತದೆ. ಅದನ್ನೆಲ್ಲಾ ಮೀರುವ ಆಸೆಯಿಂದ ಇವರು ಬರೆಯುತ್ತಿರುತ್ತಾರೆ ಎಂದು ಹೇಳಿದರೆ ಕೊಂಚ ಮಹತ್ವಾಕಾಂಕ್ಷೆಯಷ್ಟೇ ಹೊರತು ಉತ್ಪ್ರೇಕ್ಷೆಯೇನಲ್ಲ. ಆದರೆ ಆ ನಿಟ್ಟಿನಲ್ಲಿ ಇವರ ನೆಲೆಯಿರುವುದರಿಂದ ಇವರ ಕೃತಿಗಳು ಅತಿ ಜಾಗರೂಕವಾಗಿ ಬರೆದಿದ್ದಾಗಿರುತ್ತದೆ. ಪ್ರತಿ ವಿವರಗಳಿಗೂ ಮಹತ್ವವಿರುತ್ತವೆ. ಪ್ರತಿಯೊಂದು ಸಾಲೂ ಲೆಕ್ಕವಿಟ್ಟು ಬರೆದಿರುತ್ತದೆ. ಹಾಗೆಯೇ ಪರಿಷ್ಕರಣವೂ ಚೆನ್ನಾಗಿಯೇ ಆಗಿರುತ್ತದೆ. ಬಹುಶಃ ಕುಂದೇರ, ಪಮುಕ್, ಕುಟ್ಜೀ ಮುಂತಾದವರು ಈ ಗುಂಪಿಗೆ ಸೇರಿದವರು.

ಎರಡನೇ ಗುಂಪಿನವರು ಕೇವಲ ಬರಹಗಾರರು, ಗ್ರೆಗರಿಯಂತೆ ಹುಟ್ಟು ಬರಹಗಾರರು. ಇವರು ಓದಿಗಿಂತ ತಮ್ಮ ಬರಹದ ಮೇಲೆಯೇ ಹೆಚ್ಚಿನ ನಂಬಿಕೆಯನ್ನಿಟ್ಟುಕೊಂಡವರು. ತಮ್ಮ ಸ್ವಾಭಾವಿಕ ಶೈಲಿ ಮತ್ತು ಜೀವನಾನುಭವದ ಮೇಲೆ ಇವರಿಗೆ ಎಲ್ಲಿಲ್ಲದ ಆತ್ಮವಿಶ್ವಾಸವಿದೆ. ಅವರು ತಮ್ಮ ಬರಹದಲ್ಲಿ ಎಷ್ಟು ಮಗ್ನರಾಗಿದ್ದಾರೆ ಅಥವಾ ಎಷ್ಟು ಪ್ರಾಲಿಫಿಕ್ ಆಗಿ ಬರೆಯುತ್ತಾರೆ ಎಂದರೆ ಅವರಿಗೆ ತಮ್ಮ ಬರಹವನ್ನೇ ಇನ್ನೊಮ್ಮೆ ಮತ್ತೆ ತಿದ್ದ್ದುವ ತಾಳ್ಮೆಯಿಲ್ಲ. ತಮ್ಮ ಸ್ಪಾಂಟೆನಿಯಿಟಿಯ ಬಗ್ಗೆ ಅವರಿಗೆ ಅಪಾರ ವಿಶ್ವಾಸ. ಹೆಚ್ಚಿನ ಬೌದ್ಧಿಕತೆ ಇವರಿಗೆ ಬೇಕಿಲ್ಲ. ಜೀವನದ ಸಣ್ಣ ಸಣ್ಣ ಘಟನೆಯ ವಿವರಗಳನ್ನು ಇವರು ಗಮನಿಸುತ್ತಿರುತ್ತಾರೆ ಮತ್ತು ಈ ವಿವರಗಳನ್ನು ಅಕ್ಷರದ ಕುಸುರಿಯಲ್ಲಿ ನೇಯುವ ಪರಿಣಿತಿ ಇವರಲ್ಲಿದೆ.

ಓದುಗರು ಎರಡೂ ರೀತಿಯ ಬರಹಗಳನ್ನೂ ಇಷ್ಟಪಟ್ಟಿರುತ್ತಾರೆ. ಮುಖ್ಯವಾಗಿ ಈ ಎರಡು ಪ್ರಬೇಧಗಳ ಬಗ್ಗೆ ಯಾವ ಓದುಗನಿಗೂ ಆಸಕ್ತಿಯೇನಿಲ್ಲ. ಯಾರಿಗೆ ಯಾವುದು ಇಷ್ಟ ಎನ್ನುವುದೂ ಬಹಳ ಕಷ್ಟ. ಆದರೆ ಈ ಎರಡೂ ಗುಂಪಿನ ಬರಹಗಾರರು ತಮ್ಮ ಗುಣಗಳನ್ನು ತೀರ ಎಕ್ಸ್‌ಕ್ಲ್ಯೂಸಿವ್ ಎಂದು ತಿಳಕೊಂಡು ಓದಿಕೊಂಡು ಬರೆಯುವವರ ಕೃತಿಗಳನ್ನು ಬೌದ್ಧಿಕತೆಯ ಭಾರದಿಂದ ಅಳೆಯುವುದು ಮತ್ತು ಸ್ಪಾಂಟೇನಿಯಸ್ ಲೇಖಕರನ್ನು ಬೌದ್ಧಿಕತೆಯನ್ನು ವಿರೋಧಿಸುವವರು, ಜೀವನಪ್ರೀತಿಯ ಹೆಸರಲ್ಲಿ ಕ್ಯಾಂಡಿಫ್ಲಾಸ್ ಬರಹಗಳನ್ನು ನಮ್ಮಮುಂದೆ ಇಡಿಸುವವರು ಎಂದು ಟೀಕಿಸಲು ತೊಡಗಿದಾಗ ಗೊಂದಲ ಶುರುವಾಗುತ್ತದೆ. ಎಲ್ಲರೂ ಕನಿಷ್ಠ ಸಾಹಿತ್ಯ ಕೃಷಿಗೆ ಎಷ್ಟು ಬೇಕೋ ಅಥವಾ ಕಸಬುದಾರಿಕೆಯನ್ನು ಕಲಿಸಲು ಬೇಕಾಗುವಷ್ಟಾದರೂ ಓದಿಕೊಂಡಿಯೇ ಇರುತ್ತಾರೆ. ಹಾಗೆಯೇ ಸಿಕ್ಕಾಪಟ್ಟೇ ಓದಿರುವವನೂ ಬರೇ ತನ್ನ ಓದಿನ ಆಧಾರದ ಮೇಲೆ ಮಹತ್ವದ ಕೃತಿಗಳನ್ನು ರಚಿಸಲಾಗುವುದಿಲ್ಲ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಇದಕ್ಕೆ ಉತ್ತಮ ಉದಾಹರಣೆ. ಟಾಲ್‌ಸ್ಟಾಯ್ ಮಾದರಿಯ ಕಥನ ಶೈಲಿ ಇದು ಅನ್ನಿಸಿದರೂ ಒಬ್ಬ ಹುಟ್ಟು ಬರಹಗಾರನಿಗೆ ಇರಬೇಕಾದ ಸ್ವಾಭಾವಿಕತೆ, ಸರಳತೆ, ಪಾತ್ರಗಳ ಆಳಕ್ಕಿಳಿಯುವ ಗುಣ ಮತ್ತು ಅಪ್ಪಟ ಜೀವನಾನುಭವ ಎಲ್ಲವೂ ಇದರಲ್ಲಿ ಅಡಕವಾಗಿದೆ.

ಅಂದರೆ, ಓದೂ ಬರಹವೂ ಜತೆಜತೆಗೇ ಸಾಗುವ ಪಯಣ. ಒಂದನ್ನು ಬಿಟ್ಟು ಇನ್ನೊಂದರ ಅಸ್ತಿತ್ವ ಬಡವಾಗುತ್ತದೆ-ಬರಹಗಾರನಿಗೆ.

Tuesday, June 2, 2009

ನೈಸ್ ಕತೆಗಾರರ ತಳಿ

ಸಾಹಿತ್ಯವನ್ನು ಅಕೆಡಿಮಿಕ್ ಆಗಿ ಓದದ, ಆದರೆ ಕೇವಲ ಆಸಕ್ತಿಯಿಂದ ಮಾತ್ರ ಸಾಹಿತ್ಯವನ್ನು ಓದಿ ಕತೆಗಳನ್ನು ಬರೀತಿರೋರ ಗುಂಪು ಅಧಿಕವಾಗುತ್ತಾ ಇರುವ ಈ ಕಾಲದಲ್ಲಿ ಕತೆಗಾರನಿಗೆ ಸಾಹಿತ್ಯವನ್ನು ಮತ್ತು ತನ್ನ ಪರಂಪರೆಯನ್ನು ಓದುವ ಜವಾಬ್ದಾರಿ ಎಷ್ಟಿರಬೇಕು? ನಮ್ಮನ್ನು ಯಾರ ಪರಂಪರೆಗೂ ಸೇರಿಸಬೇಡಿ ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಪರಿಪರಿಯಾಗಿ ಎಷ್ಟೇ ಕೇಳಿಕೊಂಡರೂ ಈ ಕನ್ನಡದಲ್ಲಿ ಬರೆಯುವ ಕ್ರಿಯೆಯೇ ಇವರನ್ನು ಒಂದು ಪರಂಪರೆಗೆ ಸೇರಿಸಿಬಿಟ್ಟಿದೆ. ಈ ಪರಂಪರೆ ಇಲ್ಲಿಂದಲೇ ಸುರುವಾಯಿತು ಎಂದು ಹೇಳಿಕೊಳ್ಳುವುದು ಹುಂಬತನವಾಗುತ್ತದೆಯಾದ್ದರಿಂದ ಒಂದು ಜೀನ್‌ಪೂಲ್‌ಗೆ ಸೇರಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಆದರೆ, ಕಾಲಕಾಲಕ್ಕೆ ತಕ್ಕಂತೆ ಈ ಜೀನ್‌ಪೂಲ್‌ನಲ್ಲಿ ಕಾಲಸಹಜವಾದ ಮ್ಯುಟೇಶನ್‌ಗಳಾಗುತ್ತಿವೆ ಎಂದು ಮಾತ್ರ ನಾವು ಹೇಳಿಕೊಳ್ಳಬಹುದು. ಇದು ಈಗ ಸೃಷ್ಟಿಯಾದ ಪರಂಪರೆ ಖಂಡಿತಾ ಅಲ್ಲ.

ಈ ಮ್ಯುಟೇಶನ್‌ನ ಹೊಸತಳಿಯೆಂದರೆ ಕುಂವೀಯವರ ಭಾಷೆಯಲ್ಲಿ ಹೇಳಬೇಕಾದರೆ ‘ನೈಸ್ ಕತೆಗಾರರು’ ಕೊಂಚ ಅತಿರೇಕದಲ್ಲಿ ಈ ತಳಿಯನ್ನು ವಿವರಿಸುವುದೆಂದರೆ ಡಿಸೈನರ್ ಪ್ಯಾಂಟು ಶರಟು ಹಾಕಿಕೊಂಡು, ಮಲ್ಟಿನ್ಯಾಷನಲ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ, ದೇಶ ವಿದೇಶ ಪ್ರವಾಸಮಾಡುತ್ತಾ, ಏರ್‍ಪೋರ್ಟಿನ ಲೌಂಜಿನಲ್ಲಿ, ಕೆಲವೊಮ್ಮೆ ವಿಮಾನದ ಪ್ರಯಾಣದ ನಡುವೆ ಇವರು ಕತೆ ಬರೆಯುವವರು. ವಿಮರ್ಶಕರ ಪರಿಭಾಷೆಯಲ್ಲಿ ಹೇಳಬೇಕೆಂದರೂ ‘ನಗರ ಕೇಂದ್ರಿತ’ಕತೆಗಾರರು ಅನ್ನುವ ಪದಪುಂಜವೂ ಇವರುಗಳನ್ನು ವಿವರಿಸಲು ಸಾಧ್ಯವಿಲ್ಲ. ಇವರ ರೂಪಕಗಳೂ ಭಾಷೆಗಳೂ ಹೊಸದು, ಕಥಾ ವಸ್ತುವಿನ ಆಯ್ಕೆ ಪ್ರಾಯಶಃ ಸಾಂಪ್ರದಾಯಿಕ ಅನ್ನೋ ಕನ್ನಡ ಕತೆಗಳಿಗಿಂತ ಬೇರೆ. ಧ್ಯಾನಸ್ಥ ಸ್ಥಿತಿ ಅಥವಾ ಬೌದ್ಧಿಕತೆ ಇಂತ ಪದಗಳ ಬಗ್ಗೆಯೇ ಬಹಳ ಜನಕ್ಕೆ ನಂಬಿಕೆಯಿಲ್ಲ.

ಇದೇ ಕಾರಣಕ್ಕೋ ಏನೋ,ಬೇರೆ ಯಾರಿಗೂ ಯಾವಕಾಲದಲ್ಲಿಯೂ ಇಲ್ಲದ ಒಂದು ಎಚ್ಚರಿಕೆ ಅವರಿಗೆ ಬೇಕಾಗುತ್ತದೇನೋ ಅಂತ ನನಗೆ ಅನುಮಾನ. ಸಾರಾಸಗಟಾಗಿ ಜನಪದ ಹಿನ್ನೆಲೆಯಲ್ಲಿರೋ ಅಥವಾ ಸಾಂಪ್ರದಾಯಿಕವಾಗಿ ಡಿಫೈನ್ ಆದ ಕನ್ನಡದ ಲೋಕದಲ್ಲಿ ನಡೆಯೋ ಕಥೆಗಳಿಗಿಂತ ಇವು ರೂಪಕಶಕ್ತಿಯಲ್ಲಿ, ಭಾಷೆಯಲ್ಲಿ ಮತ್ತು ವಿನ್ಯಾಸ, ನೇಯ್ಗೆಯಲ್ಲಿ ಬೇರೆಯಾದರೂ ಕೆಲಸ ಮಾಡುತ್ತಾ ಇರೋ ಮನಸ್ಸು ಮಾತ್ರ ಕನ್ನಡದ್ದು. ಆದರೆ ನಮ್ಮ ಮನಸ್ಸು ಕನ್ನಡದ್ದು ಅನ್ನುವುದನ್ನು ಅಗಾಗ ಇವರುಗಳು ಈ ಗೋಚಾರಗಳಲ್ಲಿ ಪುರಾವೆಗಳನ್ನೊದಗಿಸಿ ತೋರಿಸಬೆಕಾಗಿದೆ.

ನಮ್ಮಲ್ಲಿರೋ ಈ ನೈಸ್ ಕತೆಗಾರರ ಕೆಲವು ಸಾಮಾನ್ಯ ಗುಣಗಳನ್ನು ಗಮನಿಸಬಹುದು. ಅವರು ಎಲ್ಲೇ ಈಗ ಇರಲಿ, ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಓದಿರುತ್ತಾರೆ. ಕನ್ನಡ ಪುಸ್ತಕಗಳನ್ನು ಓದಿಯೋ, ಅಥವಾ ಕನ್ನಡದ ನಾಟಕಗಳನ್ನು ನೋಡಿಯೋ ಶಾಲಾದಿನಗಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಕತೆ ಬರೆಯಲು ರೂಢಿಸಿಕೊಂಡವರು ಬಹಳಷ್ಟು ತಮ್ಮ ಹಿರಿಯ ಲೇಖಕರನ್ನು ನೋಡಿ ಅವರ ಶೈಲಿಗೆ ಮನಸೋತು ಅವರ ಹಾಗೆ ಬರೆಯಬೇಕು ಅಂತ ಒಂದು ಮಟ್ಟದಲ್ಲಾದರೂ ಅಂದುಕೊಂಡು ಬರವಣಿಗೆಯನ್ನು ಶುರುಮಾಡಿ ನಂತರ ಬರೆಯುತ್ತಾ ಹೋಗಿ ಅವರದೇ ಶೈಲಿಯನ್ನು ರೂಢಿಸಿಕೊಂಡವರು. ಮುಖ್ಯವಾಗಿ ಇಲ್ಲಿ ಕತೆ ಅಥವಾ ಬರವಣಿಗೆ ಇಲ್ಲಿ ಬಹಳಷ್ಟು ಜನರ ವೃತ್ತಿಯಲ್ಲ. (ಕೆಲವೊಬ್ಬರನ್ನು ಬಿಟ್ಟು) ಬಹಳಷ್ಟು ಜನ ಯಾವ ಯುನಿವರ್ಸಿಟಿಯಲ್ಲಿಯೂ ಇಲ್ಲ. ಅವರ ಕಥೆಗೆ ಬೇಕಾದ ವಸ್ತುವನ್ನು ತಮ್ಮ ಬಾಲ್ಯದಿಂದ ಅಥವಾ ತಾವು ಈಗ ಆಯ್ದುಕೊಂಡ ವೃತ್ತಿಬದುಕು ಅಥವಾ ಇಂದಿನ ಅವರ ಲೋಕದಿಂದ ಹೆಕ್ಕಿಕೊಂಡವರು.

ಇಲ್ಲಿನ ಈ ಮೆಟಮಾರ್ಫಸಿಸ್ ಕ್ರಿಯೆಯಲ್ಲಿ ಮೂರು ಗುಣಗಳನ್ನು ಗಮನಿಸಬಹುದು. ಒಂದು ಹೊಸಲೋಕದ ಕುರಿತು ಬೆರಗು- ಅಂದರೆ ಉತ್ತರಕನ್ನಡದ ಯಾವುದೋ ಸಣ್ಣ ಊರಲ್ಲಿಯೋ ಬೆಳೆದ ವ್ಯಕ್ತಿ ಬೆಂಗಳೂರು, ಬಾಂಬೆ, ಡೆಲ್ಲಿ, ಅಮೆರಿಕಾ, ಇಂಗ್ಲೆಂಡು ಮತ್ತು ಬೇರೆಕಡೆ ಹೋದಾಗ ಯಾವುದೇ ವ್ಯಕ್ತಿ ಎದುರಿಸೋ ಸಾಮಾನ್ಯ ಬೆರಗು, ಆ ಬೆರಗು ಹುಟ್ಟಿಸೋ ಕತೆಗಳು ಬಹಳ ಇಂಪ್ರೆಶನಿಸ್ಟಿಕ್. ಇವು ನಿಜವಾದ ಭಾವನೆಗಳಲ್ಲ. ಹೊಸಲೋಕದ ಬೆರಗನ್ನು ಮಾತ್ರ ಅಕ್ಷರಗಳಲ್ಲಿ ಹಿಡಿದಿಡೋ ಆಸೆಯಿಂದ ಕೆಲವು ಕತೆಗಳು ಬರೆಯಲ್ಪಡುತ್ತವೆ. ಅದೂ ನಾವು ಕೆಲಸ ಮಾಡೋ ಪ್ರಪಂಚ ನಾವು ಬೆಳೆದ ಪ್ರಪಂಚಕ್ಕಿಂತಾ ಸಂಪೂರ್ಣವಾಗಿ ಬೇರೆಯಾಗಿದ್ದಾಗ ( ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ) ಆಗ ಈ ಬೆರಗಿನಿಂದ ಹೊರಗೆ ಬರಲು ಬಹಳಷ್ಟ ಕಾಲವೇ ಬೇಕಾಗುತ್ತದೆ. ನಂತರದ ಘಟ್ಟ, ಎರಡೂ ಪ್ರಪಂಚವನ್ನು ತುಲನಾತ್ಮಕವಾಗಿನೋಡೋದು. ಈ ಕಳೆದೆರಡು ದಶಕಗಳ ಪಲ್ಲಟ ನಮ್ಮಲ್ಲಿ ಸೃಷ್ಟಿಸಿರೋ ಒಂದು ಸಾಂಸ್ಕೃತಿಕ ಮತ್ತು ಸೋಷಿಯಾಲಜಕಿಲ್ ಗ್ಯಾಪ್ ಒದಗಿಸಿರೋ ತುಲನಾತ್ಮಕ ಶಕ್ತಿ ಅಸಾಧ್ಯವಾದದ್ದು. ನಾವು ಊಟ ಮಾಡೋದರಿಂದ ಹಿಡಿದು ಮಾತನಾಡುವ, ನಿಂತುಕೊಳ್ಳುವ ಬಾಡಿ ಲಾಂಗ್ವೇಜುಗಳು ಕೂಡ ಇಪ್ಪತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತ ಬಹಳ ಬೇರೆಯಾಗಿವೆ. ಬೇಕಾದರೆ ಈಗ ನಲವತ್ತರ ಸುಮಾರಿನಲ್ಲಿರೋರು ಹದಿನೈದು ವರ್ಷದ ಹಿಂದಿನ ಮದುವೆಯ ಫೋಟೋವನ್ನು ಒಮ್ಮೆ ನೋಡಿಕೊಂಡರೆ ನಾನು ಹೇಳುತ್ತಾ ಇರೋ ಈ ಪಲ್ಲಟ ಅಂದರೆ ಏನು ಎಂದು ಕೊಂಚ ಸ್ಪಷ್ಟವಾಗಬಹುದು. ಈ ನಮ್ಮಲ್ಲಾಗಿರುವ ವ್ಯಕ್ತಿತ್ವದ ಬದಲಾವಣೆ ನೈಜವಾಗಿ ಆಗಿದೆಯೋ ಅಥವಾ ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ನಾವು ನಮ್ಮ ಮೇಲೆ ಆರೋಪಿಸಿಕೊಳ್ಳುತ್ತಾ ಇದೀವಾ ಅನ್ನೋದು ಒಂದು ದೊಡ್ಡ ಪ್ರಶ್ನೆ. ಅಂದರೆ, ನಮ್ಮ ಸಮಾಜದ ಈ ಪಲ್ಲಟ ಅಥವಾ ಸಾಂಸ್ಕೃತಿಕ ಬದಲಾವಣೆ ವ್ಯಕ್ತಿಯಿಂದ ಆಗುತ್ತಾ ಇದೆಯೋ ಅಥವಾ ವೈಸ್ ವರ್ಸಾ ನೋ ಅನ್ನೋದು ಒಂದು ದೊಡ್ದ ಪ್ರಶ್ನೆ.

ಕೆಲವು ತಿಂಗಳ ಯಾರದೋ ಒಂದು ಮದುವೇಗೆ ಹೋಗಿದ್ದೆ. ಧಾರೆ ಇತರೇ ಕಾರ್ಯಕ್ರಮಗಳು ಮುಗಿದಮೇಲೆ ಹೆಣ್ಣು ಒಪ್ಪಿಸೋ ಕಾಯುಕ್ರಮದ ಸಂದರ್ಭಕ್ಕೂ ಒಂದಿಷ್ಟು ಜನ ರೆಡಿಯಾಗ್ತಾ ಇದ್ದರು. ನಾನು ಹೇಳೋದು ಸಿನಿಕವಾಗಿ ಕಾಣಬಹುದು ಆದರೆ ಆ ಕಾರ್ಯಕ್ರಮಕ್ಕೆ ಅಂತಲೇ ಜನ ಸಿದ್ಧರಾಗುತ್ತಿದ್ದರು. ಅಂದರೆ, ಒಂದಿಷ್ಟು ಜನ ಹೆಂಗಸರು ತಮ್ಮ ಮೇಕಪ್ ಅನ್ನು ಬಿಚ್ಚಿಟ್ಟು “ಈಗ ಅಳೋ ಕಾರ್ಯಕ್ರಮ’ ಎಂದಂದು ಹೆಣ್ಣು ಒಪ್ಪಿಸಿ ಅರ್ಧಗಂಟೆ ಅತ್ತು ನಂತರ ರಿಸೆಪಷನ್‌ಗೆ ರೆಡಿಯಾದರು. ಒಂದಿಷ್ಟು ಜನ ಹುಡುಗರು ಬೆಟ್ ಕಟ್ತಾ ನಿಂತಿದ್ದರು ‘ ನಾನು ಈಗ ಹೇಳ್ತೀನಿ ನೋಡು ಈ ಆಂಟಿ ಅಳ್ತಾರೆ’ ಎಂತ. ಅಲ್ಲದೆ ಇಂತಿಂಥ ಗಂಡಸರೂ ಅಳ್ತಾರೆ ಅನ್ನೋದನ್ನು ಹುಡುಗರು ಮುಂಚೇನೇ ಊಹಿಸಿಕೊಳ್ಳುತ್ತಾ ನಿಂತಿದ್ದರು. ಯಾರೋ ಬೆಟ್ ಕೂಡ ಕಟ್ಟಿದ್ದರಂತೆ. ಹೀಗೆ ಅಳೋ ಕ್ರಿಯೇನೂ ಪ್ರೋಗ್ರಾಮ್ಡ್ ಆದಾಗ ನಮ್ಮ ಸಂವೇದನೆಗಳು ನಮ್ಮದಾ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಈ ರೀತಿ ನಾವೇ ಬೆಳೆಸಿಕೊಂಡ ವ್ಯಕ್ತಿತ್ವದ ಆಚೆ ನಿಂತು ನಮ್ಮನ್ನೇ ನೋಡಿಕೊಳ್ಳುವುದು ಮತ್ತು ಆ ವ್ಯಕ್ತಿತ್ವದ ಪರಿಧಿಯ ಒಳಗೆ ನಿಂತುಕೊಂಡು ಅದೇ ಜಗತ್ತನ್ನು ನೋಡೋದು ಮತ್ತೆ ಹೊರಗಿನ ಜಗತ್ತನ್ನು ಮತ್ತೆ ಬಾಲ್ಯವನ್ನು ನೋಡೋದು ಪ್ರಾಯಶಃ ಮುಂದಿನ ಘಟ್ಟ. ಆಗ ಬಾಲ್ಯ ಬಹಳ ಸುಂದರವಾಗಿ ಕಾಣುತ್ತಾ ಹೋಗುತ್ತೆ. ನಾವು ನಿಂತಿರೋ ಜಗತ್ತು ನಮ್ಮದಲ್ಲ ಅಥವಾ ನಮ್ಮದಲ್ಲದ ಜಗತ್ತಿನಲ್ಲಿ ನಾವು ಸೇರಿಕೊಂಡಿದ್ದೇವೆ ಅನ್ನೋ ಅನುಮಾನ ಬಂದಾಗ ಇವು ನಮ್ಮ ಸದ್ಯದ ಬದುಕಿನ ಬಗ್ಗೆ ಸಿನಿಕತನ ಮತ್ತು ನಿರಾಕರಣೆ, ಬಾಲ್ಯದ ಬಗ್ಗೆ ಅತಿಯಾದ ಪ್ರೀತಿ, ಬಾಲ್ಯದಲ್ಲಿ ನಾವು ಕಂಡ ಪಾತ್ರಗಳನ್ನು ತೀರ ನಾಟಕೀಯ ಮಾಡೋದು, ಪ್ರಾಮಾಣಿಕತೆಯ ಅಂಚಿನವರೆಗೂ ಹೋಗಿ ನಿಂತು ಫಿಕ್ಶನಲ್ ಯಾವುದು ಯಾವುದಲ್ಲ ಅನ್ನೋದನ್ನು ನೋಡೋದು ಶುರುವಾಗುತ್ತೆ. ಈ ಎಲ್ಲಾ ಭಾವನೆಗಳ ಮಿಶ್ರಣ ಒಂದು ರೀತಿಯ ಹೊಸಾ ಸಂವೇದನೆಯನ್ನು ನಮ್ಮ ಈ ನೈಸ್ ಕತೆಗಾರರಲ್ಲಿ ಸೃಷ್ರಿಸಿದೆ. ಕೆಲವರು ಏನು ಮಾಡಿದರೂ ಬಾಲ್ಯ ಬಿಟ್ಟು ಹೊರಗೆ ಬರೋಲ್ಲ ಅಂತ ಹಟ ಮಾಡ್ತಾ ಅಲ್ಲಿಯೇ ನಿಂತಿದ್ದಾರೆ. ಇನ್ನು ಕೆಲವರು ನಾನು ನೋಡ್ತಾ ಇರೋ ಈ ವರ್ತಮಾನವೇ ಸತ್ಯ ಎಂದು ತಿಳಕೊಂಡು ವರ್ತಮಾನವನ್ನು ಮಾತ್ರ ಬರೆಯೋದು. ಒಟ್ಟು ಎಲ್ಲರೂ ತಮ್ಮ ತಮ್ಮ ಸಣ್ಣ ಕೀ ಹೋಲ್ ಗಳ ಮೂಲಕ ಪ್ರಪಂಚವನ್ನು ನೋಡಿದಾಗ ಒಂದು ವಿಭಿನ್ನ ಕಥಾಲೋಕ ಸೃಷ್ಟಿಯಾಗುತ್ತದೆ.

ಈ ನೈಸ್ ಕತೆಗಾರರನ್ನು ಕನ್ನಡ ವಿಮರ್ಶಾವಲಯ ನೋಡುತ್ತಾ ಇರುವ ದೃಷ್ಟಿ ಕೂಡ ಬಹಳ ಕುತೂಹಲಕರವಾಗಿದೆ. ನಮ್ಮ ಪಲ್ಲಟಗಳು ನೈಸ್ ಕತೆಗಾರರನ್ನು ಸೃಷ್ಟಿಸಿದಂತೆ ನೈಸ್ ವಿಮರ್ಶಕರ ತಳಿ ಇನ್ನೂ ಸೃಷ್ಟಿಯಾಗಿಲ್ಲ. ಅಥವಾ ಈ ಪಲ್ಲಟ, ಬೆರಗುಗಳು ನೇರವಾಗಿ ವಿಮರ್ಶಕರನ್ನು ತಟ್ಟಿಲ್ಲ. ಹಾಗಾಗಿ ವಿಮರ್ಶಕರು ಒಂದು ತಳಿ ಹಿಂದೆ ಉಳಿದುಬಿಟ್ಟಿದ್ದಾರೆ. ನಮ್ಮ ವಿಮರ್ಶಕರಿಗಿರುವ ವಿಮರ್ಶೆಯ ಪಾಂಡಿತ್ಯದ ಬಗ್ಗೆ ನಾನು ಬಹಳ ಗೌರವವನ್ನಿಟ್ಟುಕೊಂಡೇ ನಾನು ಈ ಮಾತು ಹೇಳುತ್ತಿದ್ದೇನೆ. ಆದರೆ, ನನಗೆ ಪ್ರಾಮಾಣಿಕವಾಗಿ ಅನ್ನಿಸಿರುವುದೇನೆಂದರೆ ಹೊಸ ಭಾಷೆ, ಹೊಸ ಕಥಾವಸ್ತು, ಹೊಸ ನೇಯ್ಗೆ ಮತ್ತು ಈ ಹೊಸ ವೇಗ ಎಲ್ಲವೂ ವಿಮರ್ಶಕರಿಗೂ ಕೂಡ ಹೊಸದು. ಸಾಂಪ್ರದಾಯಿಕ ಥೀಮುಗಳನ್ನು ಭಾಷೆಯಲ್ಲಿ ಮತ್ತು ವಸ್ತುವಿನಲ್ಲಿ ಮುರಿದಾಗ ವಿಮರ್ಶಕರಿಗೆ ಈ ತಳಿಯಜತೆ ಒಂದು ರೀತಿ ‘ಲವ್ ಹೇಟ್’ ಸಂಬಂಧ ಶುರುವಾಗಿದೆ. ಕೆಲವೊಮ್ಮೆ ಅವುಗಳ ಪರಿಯನ್ನು ಸುಖಿಸುತ್ತಾ, ಸ್ವಾದಿಸುತ್ತಾ ಕೆಲವೊಮ್ಮೆ ಆರಾಧಿಸುತ್ತ ಒಂದು ರೀತಿ ‘ಸ್ಟಾಕ್‌ಹೋಮ್ ಸಿಂಡ್ರೋಮ್’ ಗೆ ಬಲಿಯಾಗಿದ್ದಾರೆ, (Preacher becoming the choir)ಇಲ್ಲವೇ ಈ ಭಾಷೆಯ ಒಗರನ್ನು, ಒರಟುತನವನ್ನು ಮತ್ತು ಕಥಾವಸ್ತುವಿನ ನಿರ್ಭಿಡೆಯನ್ನು ಪೋಸ್ಟ್ ಮಾಡ್ರನ್ ಫೋಸಿನ ಡೋಂಗೀ ವಿನ್ಯಾಸಗಳು ಎಂದು ರಿಜೆಕ್ಟ್ ಮಾಡುತ್ತಾರೆ. ಎರಡೂ ತುದಿಗಳು ಈ ಬರಹಗಾರರಿಗೆ ನ್ಯಾಯವನ್ನೊದಗಿಸುವುದಿಲ್ಲ. ಇದಕ್ಕೆ ಕಾರಣ ಕೊಡುವುದು ಬಹಳ ಕಷ್ಟ. ವಿಮರ್ಶೆ ಅಕೆಡಿಮಿಕ್ ಆಗಿ, ಮಾಸ್ತರುಗಳಿಂದಲೇ ಮಾಡಲ್ಪಡಬೇಕು ಎಂದು ಈ ನೈಸ್ ಮಂದಿ ಕೈಕಟ್ಟಿ ಕೂತಿರುವುದೂ ಒಂದು ಮುಖ್ಯ ಕಾರಣವಿರಬಹುದು.

ಈ ಗೋಚಾರಫಲ ಎಂದರೆ ಏನು ಎಂದು ನನಗೆ ಇಂದು ಸರಿಯಾಗಿ ಅರ್ಥವಾಗಿಲ್ಲ. ಕೆಲವೊಂದು ಸಭೆಗಳಲ್ಲಿ ಕತೆಗಾರರ ಗುಂಪುಗಾರಿಕೆ ಮತ್ತು ಕೆಲವರನ್ನು ಮಾತ್ರ ಸಾಹಿತಿಗಳೆಂದು ಬಿಂಬಿಸಲು ವ್ಯವಸ್ಥಿತವಾದ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪವನ್ನು ನಾವು ಕೇಳುತ್ತೇವೆ. ಇದನ್ನು ಹೆಚ್ಚು ಗಿಂಜದೇ ಹೇಳುವುದೆಂದರೆ, ಬರೇ ಸಾಹಿತ್ಯಕ್ಷೇತ್ರದಲ್ಲಲ್ಲ, ಯಾವತ್ತೂ ಎಲ್ಲ ಕ್ಷೇತ್ರದಲ್ಲಿಯೂ ಸಮಾನಮನಸ್ಕರ ಒಂದು ಗುಂಪಿದ್ದೇ ಇರುತ್ತದೆ. ಇದು ಯಾವಾಗ ಗುಂಪುಗಾರಿಕೆಯಾಗುತ್ತದೆಯೋ ಆಗ ಗುಂಪಿನ ಶಕ್ತಿ ಅರ್ಥಹೀನವಾಗುತ್ತದೆ.

ಮತ್ತೆ ಮೊದಲ ಪ್ರಶ್ನೆಗೆ ಬಂದರೆ, ನಮ್ಮನ್ನು ಪರಂಪರೆಗೆ ಸೇರಿಸಬೇಡಿ ಎಂದು ನಾವು ಕೇಳುವುದು ಪ್ರಾಯಶಃ ಪರಂಪರೆಯ ಬಗೆಗಿರುವ ಅಜ್ಞಾನದಿಂದಲೇ ಇರಬಹುದು. ಹೆಚ್ಚು ಓದಿಕೊಂಡಿರದ ಕನ್ನಡದ ಹಿಂದಿನ ಲೇಖಕರ ಜತೆ ನಿಲ್ಲಿಸಿದಾಗ ಅಥವಾ ಇವರ ಪರಂಪರೆಯ ಲೇಖಕ ಎಂದು ಯಾರಾದರೂ ಹೇಳಿದಾಗ ‘ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟಿಬಿಡಿ’ ಎಂದು ಹೇಳುವುದು ನಮ್ಮ ದೌರ್ಬಲ್ಯವನ್ನು ಸಮರ್ಥಿಸಿಕೊಳ್ಳಲು ಮಾತ್ರವೇ ಇದ್ದಿರಬಹುದು. ಆದರೆ, ಕನ್ನಡದಲ್ಲಿ ಬರೆಯುತ್ತಿರುವುದರಿಂದ ನಾವೆಲ್ಲರೂ ಒಂದು ಪರಂಪರೆಗೆ ಸೇರಿದ್ದೇವೆ, ಅನ್ನಿಸುತ್ತದೆ. ಅದರಲ್ಲಿ ಉಡಾಳನಾಗಿ ಉಳಿಯುತ್ತೇವೋ ಅಥವಾ ವಂಶವೃಕ್ಷದೊಳಗೆ ಹಸನಾದ ಚಿಗುರಾಗುತ್ತೇವೋ ಅನ್ನುವುದು ಮಾತ್ರ ನಮ್ಮ ಕೈಯಲ್ಲಿ ಇದೆ.