Friday, August 7, 2009

ಪಂಡಿತ ಪಾಮರರ ನಡುವಿನ ತೂಗು ಸೇತುವೆ

ನಮ್ಮ ಸೃಜನಶೀಲ ಸಂವೇದನೆಗಳನ್ನು ಹುಟ್ಟಿಸುವುದು ಯಾವುದು? ಬೆಳೆಸುವುದು ಯಾವುದು. ಈ ಸಂವೇದನೆಗಳ ಹುಟ್ಟಿಗೂ ಬೆಳವಣಿಗೆಗೂ ಒಂದು ಸಾವಯವ ಸಂಬಂಧವಿದೆಯಾ? ಈ ಹುಟ್ಟು ಮತ್ತು ಬೆಳವಣಿಗೆ ಒಂದು ಪ್ರಯತ್ನಪೂರ್ವಕ ಕ್ರಿಯೆಯಾ? ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳುವುದು "ಸೃಜನ" ಹೇಗೆ ಆಗುತ್ತದೆ.

ಹುಟ್ಟಾ ಯಾರೂ ಸಾಹಿತಿಯಾಗುವುದಿಲ್ಲ. ಆದರೆ, ಈ ಬರೆಯುವ ಗೀಳು ಹೇಗೋ ಶುರುವಾಗುತ್ತದೆ.

"ಪೂರ್ತಿಯೊಣಗದ ಚಡ್ಡಿ ಹಸಿಹಸಿ
ಸಿಕ್ಕಿಸಿಕೊಂಡು ಬೂರಸು ಕೊಡೆಯೆತ್ತಿ
ಜುಳುಜುಳು ಕೆಸರು ತಂಪುಪಾದ॒
ಹೆಗಲಿಗಂಟಿದ ಪಾಟಿಚೀಲ... ಹೊತ್ತು
ಶಾಲೆ ಹೊರಟ ಕೇರಿಹಿಂಡು ಹಿಂಡು

ದಾರಿಯಿಕ್ಕೆಲದಲ್ಲೂ ಗಟಾರ ಕೊಚ್ಚುತ್ತಿರುವ
ಥಂಡಾ ಥಂಡಾ ಚಾ-
ನಿನ್ನೇತನಕ ಹಾರಾಡುತ್ತಿದ್ದ ಟೂರಿಂಗ್
ಟಾಕೀಸಿನ ತಂಬು ಒಮ್ಮೆಗೇ ಸ್ತಬ್ಧ"

ಈ ತರ. ಮುಗ್ಢತೆ, ಬೆರಗು, ನಮ್ಮ ಪ್ರಪಂಚದ ಸಣ್ಣಸಣ್ಣ ಆದರೆ ಗಟ್ಟಿವಿವರಗಳು ಮತ್ತು ನಮ್ಮನ್ನು ಕಾದ, ಪೊರೆದ ಭಾವಗಳ ನೆನವರಿಕೆಯಿಂದ ಹುಟ್ಟಬಹುದು, ಮೊದಮೊದಲ ಕವಿತೆ. ಇಲ್ಲಿ ಬುದ್ಧಿವಂತಿಕೆಯಿಲ್ಲ, ನೋಡಿದ್ದನ್ನು ಪ್ರಾಮಾಣಿಕವಾಗಿ ಸುಮ್ಮನೇ ಹಂಚಿಕೊಳ್ಳಬೇಕೆನ್ನಿಸಿದೆ. ಸಂಭ್ರಮದ ವಿವರಗಳನ್ನು ಹೇಳಬೇಕೆನಿಸಿದೆ.

ಆದರೆ, ಇದು ಹೇಗೆ ಶುರುವಾಯಿತು ಎನ್ನುವುದು ನಮಗೆ ಯಾಕೆ ಮುಖ್ಯವಾಬೇಕು?

* * *

ಸಾಹಿತಿಗಳೆಂದರೆ ಬೇರೆ ಯಾವುದೋ ಲೋಕದವರು ಅಥವಾ ಬೇರೆ ಯಾರಿಗೂ ಗೊತ್ತಿರದದ್ದು ಇವರಿಗೆ ಗೊತ್ತಿರುವುದರಿಂದಲೇ ಅವರು ಏನನ್ನೋ ಸೃಷ್ಟಿಸಬಲ್ಲರು ಎಂಬ ಭಾವನೆ ನಮ್ಮಲ್ಲಿರುವುದನ್ನು ನಾವು ನೋಡುತ್ತೇವೆ. ಹಾಗಾಗಿಯೇ ಒಬ್ಬ ಕವಿಯನ್ನು ಜಾಗತೀಕರಣದ ಹಪಾಪಿಗಳ ಬಗ್ಗೆ ಒಂದು ಲೇಖನ ಬರೆದುಕೊಡಿ ಎಂತಲೋ ಅಥವಾ ಒಬ್ಬ ಕತೆಗಾರನನ್ನು ಅಮೆರಿಕಾದ ಎಕಾನಮಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂತಲೋ ಕೇಳುವ ಪರಿಪಾಠ ನಮ್ಮಲ್ಲಿದೆ. ಇವರು ಸಾಹಿತಿಗಳಲ್ಲವೇ? ಇಷ್ಟು ಚೆನ್ನಾಗಿ ಕತೆ ಬರೆಯುತ್ತಾರೆ ಇವರಿಗೆ ಎಲ್ಲ ವಿಷಯವೂ ಗೊತ್ತಿರಲೇಬೇಕು, ಅಲ್ಲವೇ? ಅದು ಹಾಗಿರಲಿ ಹೀಗೆ ಕೇಳಿದ ತಕ್ಷಣ ಕವಿ ಅಥವಾ ಬರಹಗಾರ ಎನ್ನಿಸಿಕೊಂಡವನು ಕೂಡ ಹೇಗೋ ಒಂದಿಷ್ಟು ವಿಷಯ ಸಂಗ್ರಹಿಸಿಕೊಂಡು ಬರೆದುಬಿಡಬಹುದು ಎಂದುಕೊಂಡು ಬರೆಯುವ ರೂಢಿಯೂ ನಮ್ಮಲ್ಲಿದೆ.

ಇಲ್ಲಿ ಸೃಜನಶೀಲ ಸಾಹಿತ್ಯಕ್ಕೂ ಚಿಂತನ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ಬರೆಯುವವರು ಅರ್ಥಮಾಡಿಕೊಳ್ಳಬೇಕು. ಸೃಜನಶೀಲ ಬರವಣಿಗೆಗೆ ಬೇಕಾದ ನಮ್ಮ ಸಂವೇದನೆಗಳನ್ನು ಗಟ್ಟಿಯಾಗಿ ಬೆಳೆಸುವುದು ನಮ್ಮ ಬಾಲ್ಯ. ಬಾಲ್ಯದಲ್ಲಿ ನಾವು ಅಣ್ಣಾವ್ರ ಸಿನೆಮಾ ನೋಡಿರುತ್ತೇವೆಯೋ, ಲಿಂಡಾ ಗುಡ್‌ಮನ್, ಟಾಮ್ ಸಾಯರ್ ಓದಿರುತ್ತೇವೆಯೋ, ಭೈರಪ್ಪನವರ ಕಾದಂಬರಿಗಳನು ಓದಿರುತ್ತೇವೋ ಅಥವಾ ಗಂಗಾಧರ ಚಿತ್ತಲರನ್ನು ಓದಿರುತ್ತೇವೆಯೋ ಅನ್ನುವುದು ಅವರವರಿಗೆ ಬಿಟ್ಟಿದ್ದು. ಆದರೆ ನಮ್ಮ ಸೃಜನಕ್ರಿಯೆಯನ್ನು ರೂಪಿಸುವುದು ಮುಖ್ಯವಾಗಿ ಬಾಲ್ಯದ ಈ ಓದು ಮತ್ತು ನಾವು ಬೆಳೆದ ಪರಿಸರ. ನಂತರದ ನಮ್ಮ ಓದು,ಅನುಭವಗಳು ಇದನ್ನು ಪೋಷಿಸಬಹುದು ಅಥವಾ ಪೂರಾ ಒಡೆದು ಚೂರುಚೂರು ಮಾಡಬಹುದು ( ಈ ಛಿದ್ರಕ ಕ್ರಿಯೆಯೇ ಸೃಜನವಾಗಬಹುದು). ಆದರೆ ಈ ಸೃಜನಕ್ರಿಯೆಯ ಮೂಲ ಧಾತು ಮತ್ತು ನೆಲೆಗಟ್ಟು ಮಾತ್ರ ಬಾಲ್ಯವೇ.

ಬೆಳೆಯುತ್ತಾ ಬೆಳೆಯುತ್ತಾ ಇದ್ದಕ್ಕಿದ್ದಹಾಗೆ ನಾವು ನಮ್ಮ ಓದಿನ ಬಗ್ಗೆ, ನಮ್ಮ ಸಂವೇದನೆಗಳ ಬಗ್ಗೆಯೇ ಕ್ರಿಟಿಕಲ್ ಆಗುತ್ತೇವೆ. ನಮ್ಮ ಓದು, ಗ್ರಹಿಕೆ ಸರಿಯಿದೆಯೇ ಎಂದು ನೋಡಿಕೊಳ್ಳಲು ಡಿ ಆರ್ ನಾಗರಾಜ್‌ರನ್ನು ಓದುತ್ತೇವೆ, ಜಿಡ್ಡು ಕೃಷ್ಣಮೂರ್ತಿಯವರನ್ನು ಓದುತ್ತೇವೆ, ಆಶೀಸ್ ನಂದಿ, ಅಮಾರ್ತ್ಯ ಸೇನ್ ಇನ್ನೂ ಹೀಗೇ ಇನ್ನೊಂದಿಷ್ಟು ಜನ ಬುದ್ಧಿವಂತರನ್ನು ಓದಿ ನಮ್ಮ ಸಂವೇದನೆಗಳು ಚೂಪಾಗಿದೆ ಎಂದುಕೊಳ್ಳುತ್ತೇವೆ. ಟ್ರಿಕಲ್ ಡೌನ್ ಎಕನಾಮಿಕ್ಸ್, ಪೋಸ್ಟ್ ಮಾಡ್ರನಿಸಮ್, ಜಾಗತೀಕರಣ, ಗ್ಲೋಬಲ್ ವಾರ್ಮಿಂಗ್, ಡಿಕನ್‌ಸ್ಟ್ರಕ್ಷನ್-ಹೀಗೆ ಜಗತ್ತಿನ ಎಲ್ಲ ಉಸಾಬರಿಗಳ ಬಗ್ಗೆ ಮಾತಾಡಲು ತೊಡಗುತ್ತೇವೆ. ಇಲ್ಲವೇ ಬರೆಯಲೂ ತೊಡಗುತ್ತೇವೆ.

ಸೃಜನಶೀಲ ಬರಹ ಮತ್ತು ಸೃಜನೇತರ ಬರಹಕ್ಕೆ ಇರುವ ವ್ಯತ್ಯಾಸವನ್ನು ಒಬ್ಬ ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಸಮಸ್ಯೆ ಬರುವುದು ಕತೆ ಕಾದಂಬರಿ ಕವನ ಬರೆದುಕೊಂಡಿದ್ದವ ಇದ್ದಕ್ಕಿದ್ದ ಹಾಗೆ ಈ "ನಾನ್ ಫಿಕ್ಷನ್" ಅನ್ನುವ ಪ್ರಕಾರಕ್ಕೆ ಕೈಯಾಡಿಸಿದಾಗ. ಪ್ರಬಂಧ ಬರೆಯುವಾಗ ಆತನ ಕಥನಕ್ರಿಯೆ ಜಾಗ್ರತವಾಗಿಬಿಡುತ್ತದೆ. ಕಥೆ ಬರೆಯುವಾಗ ವೈಚಾರಿಕತೆ ತಲೆ ಹಾಕುತ್ತದೆ. ಕಥೆ, ಕಾದಂಬರಿಗಳಲ್ಲಿ ವೈಚಾರಿಕತೆ ಇರಬಾರದೆಂದಲ್ಲ. ಅದು ಕಥೆಯ ಭಾಗವಾಗಿ ಬಂದರೆ ಓದುವುದಕ್ಕೆ ಕಿರಿಕಿರಿಯಾಗುವುದಿಲ್ಲ. ಆದರೆ, ಕತೆಯ ಮುಖ್ಯವಾಹಿನಿಯನ್ನು ಬಿಟ್ಟು ಈ ವೈಚಾರಿಕತೆ ತನ್ನಂತಾನೇ ನಿಂತುಬಿಟ್ಟರೆ ರಸ್ತೆಯ ಮಧ್ಯೆ ಒಂದು ದೊಡ್ಡ ಕಲ್ಲು ಅಡ್ಡ ಬಂದಂತೆ ಭಾಸವಾಗುತ್ತದೆ. ಕಥನ ಕುತೂಹಲಿಗಳು ಇದನ್ನು ಬಳಸಿಕೊಂಡು ಮುಂದೆ ಹೋಗುತ್ತಾರೆ. ಈ ಕಲ್ಲಿನ ಶಿಲ್ಪ ಅಂದವಿದೆಯೆಂದು ಅದನ್ನು ಅನುಭವಿಸುವವರು ಅದನ್ನೇ ನೋಡುತ್ತಾ ಮೈಮರೆಯುತ್ತಾ ನಿಂತರೂ ಅದು ಕತೆಯ ಓಟಕ್ಕೆ ಅಥವಾ ಆ ಕಲ್ಲಿನ ಸೌಂದರ್ಯಕ್ಕೆ ಒಟ್ಟು ತಡೆಯನ್ನೇ ಉಂಟುಮಾಡುತ್ತದೆ.

ಇದು ಯಾಕೆ ಮುಖ್ಯವಾಗಬೇಕು? ಸೃಜನಶೀಲ ಬರವಣಿಗೆ ಭಾವಪ್ರಪಂಚಕ್ಕೆ ಮಾತ್ರ ಸೇರಿರಬೇಕು. ಸೃಜನೇತರ ಬರವಣಿಗೆ ಬುದ್ಧಿಮತ್ತೆಗೆ, ಮತ್ತು ಅಧ್ಯಯನ ಮಾಡಿ ಬರೆದದ್ದಾಗಬೇಕು ಎಂದು ಪಂಡಿತರು ವಿವೇಚಿಸುತ್ತಾರೆ. ಅಂದರೆ, "ಸಂಸ್ಕಾರ" ‘ಭಾರತೀಪುರ" ಭಾವಪ್ರಪಂಚದ ಬರವಣಿಗೆಗಳು (ಅವುಗಳ ವೈಚಾರಿಕತೆಯ ನಡುವೆಯೂ). ರುಜುವಾತು, ಸನ್ನಿವೇಶ, ಪೂರ್ವಾಪರ- ಅಧ್ಯಯನಶೀಲ ಬರವಣಿಗೆಗಳು.

ಈ ಭಾವಪ್ರಪಂಚದಲ್ಲಿ ನಮ್ಮ ದೈನಿಕ ಖಯಾಲಿಗಳು ಎಷ್ಟರ ಮಟ್ಟಿಗೆ ತಮ್ಮ ಪ್ರಭಾವವನ್ನು ಬೀರಿರುತ್ತವೆ? ಚಿಕ್ಕಂದಿನಲ್ಲಿ ನಾವು ನೋಡಿದ ಅಣ್ಣಾವ್ರ ಸಿನೆಮಾ, ಓದಿದ ಜನಪ್ರಿಯ ಕಾದಂಬರಿಗಳು, ಚಂದಮಾಮ, ಬಾಲಮಿತ್ರ, ಡುಂಡಿರಾಜರ ಚುಟುಕಗಳು ಇವೆಲ್ಲ ನಮ್ಮ ಭಾವಪ್ರಪಂಚದಲ್ಲಿಲ್ಲವೇ? ಆದರೆ ಅವು ನಮ್ಮ ಸೃಜನಕ್ರಿಯೆಯಲ್ಲಿ ಬರೇ ಕನ್ನಡ ಭಾಷೆಯ, ಸಂಸ್ಕೃತಿಯ ಪರಿಚಯವನ್ನು ಮಾಡುವುದಕ್ಕಷ್ಟೇ ಸೀಮಿತವಾಗಿವೆ ಎಂದು ಹೇಳಬಹುದೇ? ಈಗಲೂ ನೋಡಿ ನಕ್ಕು ಸುಮ್ಮನಾಗುವ ಬಾಲಿವುಡ್ಡಿನ ಫ್ಲಿಲಿಕ್‌ಗಳು ಅಥವಾ ತಲೆಯಾಡಿಸುವ ಧುನ್‌ಗಳು ನಾವು ಬರೆಯುವುದರ ಮೇಲೆ ಪರಿಣಾಮ ಮಾಡುತ್ತದೆಯಾ? ಅಥವಾ ಇಲ್ಲಿ "ಹುಡುಕಾಟ" "ಶೋಧ" ಇಲ್ಲ ಎಂಬ ನೆಪದಿಂದ ನಮ್ಮ ಸಾಹಿತ್ಯಿಕ ಮನಸ್ಸು ಪ್ರಯತ್ನಪೂರ್ವಕವಾಗಿ ಇವುಗಳ ಪ್ರಭಾವವನ್ನು ತಡೆಯುತ್ತಿದೆಯೇ?

ನಾನು ಕಾಲೇಜಿನಲ್ಲಿದ್ದಾಗ ಅನಂತಮೂರ್ತಿಯವರ, ಲಂಕೇಶರ ಬರಹಗಳನ್ನು ಓದುವವರ ಅಥವಾ ಎ.ಕೆ. ರಾಮನುಜನ್, ಅಡಿಗರ, ಬೇಂದ್ರೆಯವರ ಕವಿತೆಗಳನ್ನು ಓದಿಕೊಳ್ಳುತ್ತಾ ಕೂತವರದ್ದು ಒಂದು ಬೇರೆಯೇ ಗುಂಪು ಇತ್ತು. ಇವರು ಅಲ್ಪಸಂಖ್ಯಾತರಷ್ಟೇ ಅಲ್ಲ. ವಾರಕ್ಕೆರಡು ರಾಜ್‌ಕುಮಾರ್, ಅಮಿತಾಬ್ ಬಚ್ಚನ್, ಚಿರಂಜೀವಿ ಇತ್ಯಾದಿ ಸಿನೆಮಾ ನೋಡುವ ಮತ್ತು ಯಂಡಮೂರಿ, ಸಿಡ್ನಿ ಶೆಲ್ಡನ್, ಆರ್ಥರ್ ಹೈಲಿ ಓದುವವರ ಮುಖ್ಯವಾಹಿನಿ ಇವರುಗಳನ್ನು ಯಾವುದೋ ಗ್ರಹದ ಪ್ರಾಣಿಗಳಂತೆ ನೋಡುತ್ತಿತ್ತು. ಇವರನ್ನು ಬಿಟ್ಟರೆ ಕನ್ನಡ ಸಾಹಿತ್ಯ ಇಷ್ಟ ಎಂದು ಹೇಳುವ ಪಡ್ಡೆಗಳ ಸಾಹಿತ್ಯಿಕ ಓದು ಮುಕ್ಕಾಲುವಾಸಿ ವಿಶೇಷಾಂಕಗಳ ಕಥೆಗಳಿಗೆ ಮಾತ್ರ ಸೀಮಿತವಾಗಿತ್ತು. ನಾನು ಈ ಸಮಯದಲ್ಲಿಯೇ "ಶಿಕಾರಿ"ಯನ್ನು ಓದಿದ್ದೆ. ಅದು ನನಗೆ ತುಂಬಾ ಇಷ್ಟವಾಗಿದೆ ಎಂದು ನಾನು ಪ್ರಾಮಾಣಿಕೆವಾಗಿ ಹೇಳಿಕೊಳ್ಳಲೂ ಆಗ ನನಗೆ ಪ್ರಿಯವಾಗಿದ್ದ ಜನಪ್ರಿಯ ಚಿತ್ರಗಳು, ಯಂಡಮೂರಿ ಸಾಹಿತ್ಯಗಳ ಗೋಡೆ ನನ್ನನ್ನು ತಡೆಯುತ್ತಿತ್ತು. ಆದರೆ ಶಿಕಾರಿ ಓದಿದಮೇಲೆ ಈ ಅಂಬರೀಶ, ರಾಜ್‌ಕುಮಾರನ ಸಿನೆಮಾಗಳನ್ನು ನೋಡುವುದರಲ್ಲಿ ಅರ್ಥವಿಲ್ಲ ಎನಿಸಿ ಮತ್ತೆ ಚಿತ್ತಾಲರ ಎಲ್ಲಾ ಕೃತಿಗಳನ್ನೂ ಓದಿಕೊಂಡು ಕೂತಿದ್ದೆ. ತಮಾಷೆಯೆಂದರೆ ಆಗ ಕಾಲೇಜಿನಲ್ಲಿದ್ದ ಈ ಸಾಹಿತ್ಯಿಕ ಗುಂಪು ತಮ್ಮ ಸುತ್ತ ಏನೋ ಒಂದು ಪ್ರಭೆಯನ್ನು ಇಟ್ಟಿಕೊಂಡು ಓಡಾಡಿದವರಂತೆ ಓಡಾಡುತ್ತಿದ್ದರು. ಯಾವಾಗಲೂ ಕಾಸರವಳ್ಳಿಯವರನ್ನು ಮಾತ್ರ ಚರ್ಚಿಸುವ ಇವರುಗಳೊಂದಿಗೆ ನಾನು ಅಮಿತಾಬ್ ಬಚ್ಚನ್ ಅಥವಾ ರಾಜ್‌ಕುಮಾರರ ಸಿನೆಮಾಗಳನ್ನು ನೋಡುತ್ತೇನೆ ಎಂದು ಹೇಳುವುದೂ ಒಂದು ನಾಚಿಕೆಪಡುವ ಸಂಗತಿಯಾಗಿತ್ತು.

ಜನಪ್ರಿಯ ಮತ್ತು ಗಂಭೀರ ಎಂಬುದರ ಈ ಬೇರೆ ಲೋಕಗಳನ್ನು ಸಮಾನವಾಗಿ ಮೆಚ್ಚಿಕೊಂಡು ಅನುಭವಿಸುವುದು ಬಹಳ ಕಷ್ಟವಾಗಿತ್ತು. ಅಂದರೆ ಕನ್ನಡದ ಬಗ್ಗೆ ಆಸಕ್ತಿಯನ್ನುಂಟುಮಾಡಿದಂತೆ ಮಾಡಿದ ಈ ಅಣ್ಣಾವ್ರ ಚಿತ್ರಗಳನ್ನು ನಮ್ಮನ್ನು "ಬೌದ್ಧಿಕ"ವಾಗಿ ಬೆಳೆಸುತ್ತಿರುವ "ಶಿಕಾರಿ"ಯಂತ ಪ್ರಪಂಚಕ್ಕಾಗಿ ಬಿಟ್ಟುಕೊಡಬೇಕಾಗಿತ್ತು. ನವ್ಯದ ಕಾವ್ಯ, ಕಾದಂಬರಿಗಳನ್ನು ಓದಿದವರಿಗೆ ಈ ಜನಪ್ರಿಯ ಮಾದರಿಗಳು ತಿರಸ್ಕರಿಸುವುದಕ್ಕೆ ಅಥವಾ ವ್ಯಂಗ್ಯಕ್ಕೆ ಒಂದು ರೂಪಕವಾಗಿದ್ದವೇ ಹೊರತು ಇವುಗಳಿಂದ ನಾವು ಪಡಕೊಂಡಿದ್ದೆಷ್ಟು ಎಂದು ಯೋಚಿಸುವ ಸಾವಧಾನವೂ ಇರಲಿಲ್ಲ ಎಂಬುದು ಅರ್ಥವಾಗುತ್ತದೆ. ಸಾಹಿತ್ಯವೆಂದರೆ ಒಂದು ಶ್ರೀಮಧ್ಗಾಂಭೀರ್ಯವಿರಬೇಕು ಮತ್ತು ಹಾಗೆ ಬರೆಯದಿದ್ದರೆ ಅಥವಾ ಹಾಗೆ ಬರೆದದ್ದನ್ನು ಓದದಿದ್ದರೆ ಸಾಹಿತ್ಯವನ್ನು ಓದುವುದು ನಿಷ್ಪ್ರಯೋಜನಕಾರಿ ಎಂಬ ತಿಳುವಳಿಕೆಯಿತ್ತು.

ಆದರೆ ಒಂದು ಮಾತ್ರ ನಿಜ. ಸಿಗರೇಟು ಸೇದಬೇಕೋ ಇಲ್ಲವೋ ಅನ್ನುವುದರಿಂದ ನಮ್ಮ ಕಲ್ಪಿತ ಸಂಸಾರ ಹೇಗಿರಬೇಕು, ಇನ್ನಿತರ ಈಗ ತೀರ ಐಡಿಯಲ್ ಅನ್ನುವಂತ "ಮೌಲ್ಯ"ಗಳನ್ನು ನಮಗೆ ಕಲಿಸಿದ್ದು ಅಣ್ಣಾವ್ರ ಸಿನೆಮಾಗಳೇ ಹೊರತು ನಂತರ ನಾವೋದಿದ ಕಾದಂಬರಿಗಳಲ್ಲ. ಆದರೆ, ಇದನ್ನು ಒಪ್ಪಿಕೊಳ್ಳುವುದು ಆಗ "ಕೂಲ್" ಆಗಿರಲಿಲ್ಲ.

ಈ ನಮ್ಮ ಗ್ರಹಿಕೆಯನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಿದ್ದು "ಲಂಕೇಶ್ ಪತ್ರಿಕೆ." ಪತ್ರಿಕೆಯಲ್ಲಿ ಹೆಮಿಂಗ್ವೇಯ ಗದ್ಯದ ಪಕ್ಕದಲ್ಲಿಯೇ ತುಂಟಾಟವಿರುತ್ತಿತ್ತು. ಬೋದಿಲೇರ, ನೀಲುಗಳು ಜತೆಜತೆಗೇ ಓದಿಸಿಕೊಳ್ಳುತ್ತಿದ್ದವು. ಸಿನೆಮಾ ಲೇಖನಗಳನ್ನೂ ಪಂಡಿತರೂ ಪಾಮರರೂ ಓದಿಕೊಳ್ಳುವಂತೆ ಬರೆಸಲಾಗುತ್ತಿತ್ತು. ತಮ್ಮ ರಾಜಕೀಯ ಮತ್ತು ಸಾಹಿತ್ಯಿಕ ನಿಲುವುಗಳನ್ನು ಬಿಂಬಿಸಲು ಒಂದು ವೇದಿಕೆಯನ್ನಾಗಿ ಪತ್ರಿಕೆಯನ್ನು ಲಂಕೇಶರು ಬಹಳ ಚೆನ್ನಾಗಿ ಉಪಯೋಗಿಸಿಕೊಂಡರು. ಆದರೆ, ಆದರೆ ಇಲ್ಲಿಯೂ ಜಾಣ-ಜಾಣೆಯರಿಗೆ ಮತ್ತು ಕೋಣ-ಕೋಣೆಯರಿಗೆ ಬೇರೆಬೇರೆ ತಿನಿಸುಗಳನ್ನು ಉಣಿಸಲಾಗುತ್ತಿತ್ತು. ಗುಂ ಬಂ ಎಂದು ಬರೆದ ಲಂಕೇಶರು ವೈಲ್ಡ್ ಸ್ಟ್ರಾಬೆರಿಯ ಬಗ್ಗೆಯೂ ಬರೆದು ತಮಗೆ ಬೇಕಾದ ಬೇರೆ ಬೇರೆ ನಿಟ್ಟಿನ ಓದುಗರನ್ನು ಸೃಷ್ಟಿಸಿಕೊಂಡರು. ಈ ಓದುಗರೇ ಮುಂದೊಂದು ದಿನ ಗ್ರಾಜ್ಯುಯೇಟ್ ಆಗಿ ಟೀಕೆ-ಟಿಪ್ಪಣಿಯ ಎಲ್ಲ ಭಾಗಗಳನ್ನು, ಹುಳಿಮಾವಿನ ಮರವನ್ನೂ ಓದುವಷ್ಟು ಜಾಣರಾದರು. ಇಲ್ಲಿ ಗಮನಿಸುವ ವಿಷಯವೆಂದರೆ ಲಂಕೇಶರು ತಮ್ಮ ಭಾಷೆಯ ಮೋಡಿಯಿಂದ ತಮಗೆ ಅರಿವಿದ್ದ ವಿಷಯವನ್ನು ತಿಳಿಸುತ್ತಾ ಓದುಗರ ಅರಿವನ್ನು ವಿಸ್ತರಿಸುವ ಕೆಲಸವನ್ನು ಮಾಡಿದರು. ಹಾಗಾಗಿ ತಮ್ಮ ಬರಹಗಳನ್ನು ಜನಪ್ರಿಯಗೊಳಿಸಿದರು. ಎಂದೂ ಅವರು ಕ್ಲೀಷೆಯನ್ನು ಒಪ್ಪಲಿಲ್ಲ.

ಜನಪ್ರಿಯ ಸಂಸ್ಕೃತಿಯನ್ನು ಅದರ ಎಲ್ಲ ಕ್ಲೀಶೆಗಳ ನಡುವೆ ಅದೇ ಡೆಮೊಕ್ರೆಟಿಕ್ ಎಂದು ಒಪ್ಪಿಕೊಂಡು ಅವುಗಳನ್ನೇ ರೂಪಕಗಳಾಗಿಸಿ ಅದರಿಂದಲೇ ತಮ್ಮ ಕಥನಪ್ರಪಂಚವನ್ನು ಶೋಧಿಸಿಕೊಂಡಿದ್ದು ಜಯಂತ. ಬಸ್ಸು, ಕಾರು, ಚ್ಯೂಯಿಂಗ್ ಗಮ್ಮು, ಬಟನ್ ಮೊಲ, ಚಾಳ್, ಇಂಕು, ಲಗ್ನಪತ್ರಿಕೆ, ಮಕ್ಕಳ ಪುಸ್ತಕಗಳ ಬೈಂಡು, ಬತ್ತಾಸು, ಜಡೆ, ನವಿಲುಗರಿ ಅಮಿತಾಬ್ ಬಚ್ಚನ್, ಮಿಥುನ್, ಶಾರೂಕ್ ಖಾನ್, ಅಮೀರ್ ಖಾನ್‌ಗಳ ಕಥೆ ಬರೆದೂ ಗೆಲ್ಲಬಹುದು ಎಂದು ಪೂರ್ಣಪ್ರಮಾಣದಲ್ಲಿ ತೋರಿಸಿದವರು ಜಯಂತ್. ಗೊತ್ತಿದ್ದೋ ಗೊತ್ತಿಲ್ಲದೆಯೋ ಭಾರವಾದ ರೂಪಕಗಳನ್ನು ಅವರು ಎಂದಿಗೂ ಉಪಯೋಗಿಸಲಿಲ್ಲ. ಅಷ್ಟೇ ಅಲ್ಲ, ಕ್ಷುದ್ರಜೀವಿಗಳ ಮೂಲಕವೇ ಈ ಜಗತ್ತನ್ನು ಹುಡುಕಹೊರಟ ಅವರಿಗೆ ಬೇಕಾದ್ದು ಸಿಕ್ಕಿದ್ದು ರಸ್ತೆಬದಿಯಲ್ಲಿ, ಗೋಕರ್ಣದಲ್ಲಿ ಕೋಟಿತೀರ್ಥದಲ್ಲಿ, ಮುಂಬಯಿಯ ಟೀವಿ ಶೋಗಳಲ್ಲಿ, ಸರ್ಕಸ್ಸುಗಳಲ್ಲಿ, ಬಸ್ಸಿನಲ್ಲಿ, ರೈಲ್ವೇ ಸ್ಟೇಷನ್‌ನಲ್ಲಿ. ಜಯಂತರನ್ನು ಓದಿ ಪ್ರಭಾವಿತರಾದವರು ಮತ್ತು ಅವರಂತೇ ಬರೆಯಬೇಕೆಂದು ಪ್ರಯತ್ನಮಾಡಿದವರು ಕೂಡ ಇದೇ ಮಾದರಿಯನ್ನು ವಿಸ್ತರಿಸಿ ಸಣ್ಣಸಣ್ಣ ಸತ್ಯಗಳ ಖುಷಿಯಿಂದ ಮತ್ತು ಅದನ್ನು ಹುಡುಕುವ ಸಂಭ್ರಮವನ್ನೇ ಕತೆಮಾಡಿದ್ರು. ಬೌದ್ಧಿಕತೆಯ ವಿರೋಧಿಗಳಿವರು ಎಂದೆನಿಸಿದರೂ ಪ್ರಾಮಾಣಿಕತೆ ಇಲ್ಲಿ ಎದ್ದು ಕಾಣುತ್ತಿತ್ತು.

ಆದರೆ ಸಮಸ್ಯೆಯೆಂದರೆ ಈ ತರದ ಲಿರಿಕಲ್ ಪ್ರಜ್ಞೆ ತನ್ನೆಲ್ಲ ರೂಪಕ ಶಕ್ತಿಯನ್ನು ಕಲ್ಪಿತ ಪ್ರಪಂಚಕ್ಕೆ ಹೊಂದಿಸಿಕೊಂಡುಬಿಟ್ಟಿರುವುದರಿಂದ ಮತ್ತು ಧಾರೆಯೆರೆದುಬಿಟ್ಟಿರುವುದರಿಂದ ಈ ತಥಾಕಥಿತ ನಾನ್ ಫಿಕ್ಷನ್‌ಗಳಿಗೆ ಈ ಮಾದರಿಯ ಬರವಣಿಗೆಗಳು ಹೊಂದಿಕೊಳ್ಳುತ್ತಾವಾ ಎನ್ನುವುದು ಒಂದು ತುಂಟ ಯೋಚನೆ. ಎಲ್ಲವೂ ಮೀಮಾಂಸೆಯಾಗಬೇಕೆಂದಿಲ್ಲ. ಜಯಂತರು ಎಂದಿಗೂ ತಮ್ಮ "ಬೊಗಸೆಯಲ್ಲಿ ಮಳೆ" ಯನ್ನು ನಾನ್ ಫಿಕ್ಷನ್ ಎಂದು ಹೇಳಿಕೊಂಡಿಲ್ಲ. ಮ್ಯೂಸಿಂಗ್ಸ್ ಎಂದಿದ್ದಾರೆ, ನುಡಿಚಿತ್ರಗಳು ಎಂದಿದ್ದಾರೆ. ಆದರೂ ಅದನ್ನು ಆ ಕೆಟಗರಿಗೆ ಸೇರಿಸುವುದರಿಂದ ನಮ್ಮ ಆ ಪುಸ್ತಕದ ಎಷ್ಟೋ ಲೇಖನಗಳು ( ಉದಾಹರಣೆಗೆ ಮಾತಿರದ ನಲುಮೆ, ರಾತ್ರಿಯ ಹೆದ್ದಾರಿಗೊಂದು ಅಲ್ಪವಿರಾಮ, ಬಸ್ ನಂಬರ್ ೩೦೨ ಒಂದು ಅಭಯರಾಗ) ಕಥೆಯಾಗುವುದನ್ನು ಮೊಟಕುಮಾಡಿಕೊಂಡು ಕಾಲಮ್ ಆಗಿಬಿಟ್ಟವಾ ಎಂದು ದುರಾಸೆಯ ಕಥನಕುತೂಹಗಳಿಗೆ ಕೊಂಚ ನಿರಾಸೆಯಾಗುತ್ತದೆ.

ಆದರೆ ಜಯಂತರು ನಮ್ಮನ್ನು ಬೆಳೆಸಿದ ಈ ಜನಪ್ರಿಯ ಸಂಸ್ಕೃತಿಯನ್ನು ಎಂದೂ ನಿರಾಕರಿಸುವುದಿಲ್ಲ. ಬದಲಿಗೆ ಅವರಿಗೆ ಇದನ್ನು ಇನ್ನೂ ಬೆಳೆಸಲಾಸೆ. ಇದಕ್ಕೆ ಸಾಕ್ಷಿಯೆನ್ನುವಂತೆ ಅವರ ಸಿನೆಮಾ ಸಾಹಿತ್ಯ ಮೂಡಿ ಬರುತ್ತಿದೆ. "ಕರೆದಂತಾದರೂ ಹೋಗಬೇಡಿ ಆ ಕಡೆ, ವಿಥ್ ಇದೀರಿ, ನೋಡ್ಕಳಿ ಫ್ಯಾಮಿಲಿ" ಎಂದು ಬರೆಯುವ ಬೆರಳುಗಳೇ "ಪುಟಗಳ ನಡುವಿನ ನವಿಲೇ" ಕೂಡ ಬರೆಯುತ್ತವೆ. ಆದರೆ ಒಂದು ಕವನ ಸಂಕಲನ ಸೇರಿದರೆ ಇನ್ನೊಂದು ಚಿತ್ರಗೀತೆಯಾಗುತ್ತದೆ. ನನಗೆ ತಿಳಿದ ಮಟ್ಟಿಗೆ ತಮ್ಮ ಯಾವುದೇ ಕವನವನ್ನೂ ಅವರು ಚಿತ್ರಕ್ಕೆ ಅಳವಡಿಸಿಕೊಳ್ಳಲು ಬಿಟ್ಟಿಲ್ಲ. ಚಿತ್ರಕ್ಕಾಗಿಯೇ ಬೇರೆ ಬರೆಯುತ್ತಾರೆ. ತಮ್ಮ ಖಯಾಲಿ, ಕಾಳಜಿಗಳನ್ನು ಯಾರಿಗೆ ಎಷ್ಟು ಮುಟ್ಟಿಸಬೇಕು ಅನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಮತ್ತಿನ್ನೊಂದೆಂದರೆ ಅವರ ಈ ಧೈರ್ಯ ಅವರ ನಂತರದ ಬರಹಗಾರರಿಗೆ "ಅನಿಸುತಿದೆ ಯಾಕೋ ಇಂದು" ಅನ್ನು ಹಾಡಿಕೊಂಡೇ "ತೊಟ್ಟಿಲಂಗಡಿಯಲ್ಲಿ ಬಂಬು ಕೂಡ ಅಗ್ಗ" ಕೂಡ ಓದಿಕೊಳ್ಳಬಹುದು ಎನ್ನುವ ಧೈರ್ಯವನ್ನು ಕೊಟ್ಟಿದೆ.

2 comments:

  1. ಗುರು,
    ಸೃಜನಶೀಲ ಬರವಣಿಗೆ ಮತ್ತು ಸಿನೆಮಾದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
    waiting for more in depth anaylsis.
    - ಕೇಶವ

    ReplyDelete
  2. ಗುರು, ಮತ್ತೊಂದು ತರ್ಕಮಯ ವಿಚಾರಭರಿತ ಲೇಖನ. ನಿಮ್ಮ ಬರವಣಿಗೆಯನ್ನು ಮೆಚ್ಚದೆ ಹೇಗಿರಲಿ ಅಂತ ಕೇಳಿಕೊಳ್ಳುವ ಹಾಗಿದೆ. ವೈಚಾರಿಕತೆ ಮತ್ತು ಸೃಜನಶೀಲತೆ- ಕ್ರಿಯಾಶೀಲ ಮನಸ್ಸಿನ ಎರಡು ಮುಖಗಳು, ಅಲ್ವಾ? ಈ ಕ್ರಿಯಾಶೀಲ ಮನಸ್ಸು ಭಾವುಕವಾಗಿರಲೂಬಹುದು. ಅಂಥ ಭಾವುಕ ಕ್ರಿಯಾಶೀಲ ಮನದೊಡೆಯ ಜಯಂತ್.

    ReplyDelete