Saturday, June 13, 2009

ಕೇವಲ ಬರಹಗಾರ

ಶಾಂತಾರಾಮ್ ಎನ್ನುವ ಬೃಹತ್ ಕಾದಂಬರಿ ಬರೆದ ಗ್ರೆಗರಿ ಡೇವಿಡ್ ರಾಬರ್ಟ್ಸ್ ಆ ಕಾದಂಬರಿಯ ಶುರುವಿನಲ್ಲಿ ಬರೆಯುತ್ತಾನೆ. ‘ನಾನೊಬ್ಬ ಹುಟ್ಟು ಬರಹಗಾರ. ಕೇವಲ ರಹಗಾರ. ಎಂಥ ವಿಷಮ ಪರಿಸ್ಥಿಯಲ್ಲಿಯೂ ನಾನು ಬರೆಯುತ್ತಲೇ ಇದ್ದೆ. ಜೈಲಿನಲ್ಲಿರಲಿ, ಜೈಲಿನಿಂದ ತಪ್ಪಿಸಿಕೊಳ್ಳುವಾಗಲಿರಲಿ, ಅಥವಾ ಲಿಯೊಪೊಲ್ಡ್ ಕೆಫೆಯಲ್ಲಿ ಕೂತು ಮಾಫಿಯಾದವರೊಂದಿಗೆ ವ್ಯವಹಾರ ಕುದುರಿಸುತ್ತಿರಲಿ, ಯಾರನ್ನಾದರೂ ಹೇಗೆ ಮುಗಿಸಬೇಕೆಂದು ಪ್ಲಾನ್ ಮಾಡುತ್ತಿರಲಿ, ನಾನು ಬರೆಯುತ್ತಲೇ ಇರುತ್ತಿದ್ದೆ. ರೆಸ್ಟುರೆಂಟಿನಲ್ಲಿಡುವ ಟಿಶ್ಯೂ ಪೇಪರಿನ ಹಿಂದೆ, ಜೈಲಿನಲ್ಲಿ ಗೋಡೆಗಳ ಮೇಲೆ, ಟಾಯ್ಲೆಟ್ ಪೇಪರುಗಳ ಮೇಲೆ ಬರೆಯುತ್ತಲೇ ಇದ್ದೆ. ಬರೆಯದೇ ಇರದ ದಿನವೇ ಇಲ್ಲ. ಬರೆಯದೇ ಇರದೇ ನನಗೇ ಬದುಕಲಿಕ್ಕೇ ಬರುವುದಿಲ್ಲ.

ಈ ಗ್ರೆಗರಿ ಡೇವಿಡ್ ರಾಬರ್ಟ್ಸ್‌ನ ಚರಿತ್ರೆ ಗೊತ್ತಿಲ್ಲದವರಿಗೆ ಈತನ ಒಂದು ಪುಟ್ಟ ಪರಿಚಯ- ಈತ ಆಸ್ಟ್ರೇಲಿಯಾದಲ್ಲಿ ಒಬ್ಬ ಅಪರಾಧಿ. ಮಾದಕವಸ್ತುಗಳ ಚಟಕ್ಕಾಗಿ ಜನರನ್ನು, ಬಾಂಕುಗಳನ್ನು ಸುಲಿದಾತ. ಆ ತಪ್ಪಿಗಾಗಿ ಆತನಿಗೆ ಜೈಲು ಶಿಕ್ಷೆಯಾಗಿತ್ತು. ಆಸ್ಟ್ರೇಲಿಯಾದ ಜೈಲಿನಿಂದ ತಪ್ಪಿಸಿಕೊಂಡು ಮುಂಬಯಿಗೆ ಬಂದು ಅಲ್ಲಿ ಕೂಡ ಅನೇಕ ಅಕ್ರಮ ವ್ಯವಹಾರಗಳನ್ನು ನಡಿಸಿದ್ದ. ಮುಂಬಯಿಯಲ್ಲಿ ಕೆಲಕಾಲ ಕೊಳೇಗೇರಿಯಲ್ಲಿಯೇ ಜೀವಿಸಿದ್ದ. ಕೊಳೆಗೇರಿಯಲ್ಲೊಮ್ಮೆ ಬೆಂಕಿ ಬಿದ್ದಾಗ ಆತ ಅಲ್ಲಿಯವರ ಜೀವ ಉಳಿಸುವ ಸಲುವಾಗಿ ಒಂದಿಷ್ಟು ಜನರಿಗೆ ಪ್ರಥಮ ಚಿಕಿತ್ಸೆಯನ್ನು ಮಾಡಿದ್ದರಿಂದ ಅವನನ್ನು ಆ ಕೊಳೆಗೇರಿಯ ಜನ ಡಾಕ್ಟರೆಂದೇ ತಿಳಿದಿದ್ದರು. ಅಲ್ಲಿನವರಿಗೆ ಡಾಕ್ಟರಿಕೆ ಮಾಡುತ್ತಲೇ ಜತೆಜತೆಯಾಗಿ ಮುಂಬೈ ಮಾಫಿಯಾಕ್ಕೆ ಕೂಡ ಆತ ಕೆಲಸ ಮಾಡಿದ. ನಂತರ ಒಂದು ದಿನ ಆತನನ್ನು ಜರ್ಮನಿಯಲ್ಲಿ ಬಂಧಿಸಲಾಯಿತು. ಆತ ಅಲ್ಲಿ ಮತ್ತು ಆಸ್ಟ್ರೇಲಿಯಾಕ್ಕೆ ಹೋಗಿ ತನ್ನ ಶಿಕ್ಷೆಯನ್ನು ಪೂರ್ಣಗೊಳಿಸಿ ಬಂದ. ಈಗ ಮುಂಬಯಿಯಲ್ಲಿ ಒಂದು ಮಲ್ಟಿಮೀಡಿಯಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾನೆ. ತನ್ನ ಜೀವನಕ್ಕೆ ಸಂಬಂಧಪಟ್ಟ ಘಟನೆಗಳನ್ನಾಧರಿಸಿ ಆತ ಒಂದು ಬೃಹತ್ ಕಾದಂಬರಿಯನ್ನು ಬರೆದಿದ್ದಾನೆ. ಆ ಪುಸ್ತಕದ ಹೆಸರೇ ಶಾಂತಾರಾಮ್.

ನನಗೆ ಮುಖ್ಯ ಅನಿಸಿದ್ದು ಈತನ ರೋಚಕ ಚರಿತ್ರೆಗಿಂತ ಈತ ಪ್ರತಿಪಾದಿಸುವ ‘ನಾನೊಬ್ಬ ಹುಟ್ಟು ಬರಹಗಾರ’ ಅನ್ನುವ ಪ್ರಮೇಯ. ಈತನಿಗೆ ಒಬ್ಬ ಸಾಹಿತಿಗೆ ಬೇಕಾದ ಯಾವ ಪೂರ್ವ ಸಿದ್ಧತೆಗಳ ಹಂಗಿಲ್ಲ. ಎಲ್ಲ ಉದ್ದಾಮ ಸಾಹಿತಿಗಳು ಪ್ರತಿಪಾದಿಸುವ ಕನಿಷ್ಠ ಓದೂ ಇಲ್ಲದೇ ಬರೆಯುವ ಗುಣ ಹೇಗೆ ಬರುತ್ತದೆ ಎಂಬ ಅಚ್ಚರಿಗೆ ಈತ ಉತ್ತರ. ತಮ್ಮ ಜೀವನವನ್ನು ಬರೆಯುತ್ತಲೇ ಪ್ರೀತಿಸುವ ಮತ್ತು ಬರೆದದ್ದೆಲ್ಲಾ ಸಾಹಿತ್ಯವಾಗಬೇಕು ಅನ್ನುವ ಪ್ರಲೋಭನೆಯಿಲ್ಲದೇ ಸುಮ್ಮನೇ ಬರೆಯುವುದೇ ತಮ್ಮ ಧರ್ಮ, ಬರೆಯದಿದ್ದರೆ ಸಾಧ್ಯವೇ ಇಲ್ಲ ಎನ್ನುವ ಒಂದು ಗುಂಪಿನ ಇರುವಿಕೆಯ ಬಗ್ಗೆ ಅನೇಕರಿಗೆ ನಂಬಿಕೆಯಿದೆ. ಭಾಷೆಯ ಮೇಲಿನ ಪ್ರಭುತ್ವಕ್ಕಾಗಿ ಅಥವಾ ಕಲ್ಪಿತ ಬರಹದ ವ್ಯಾಕರಣಕ್ಕಾದರೂ ಒಂದಿಷ್ಟು ಕ್ಲಾಸಿಕ್‌ಗಳಲ್ಲದಿದ್ದರೂ ಸಮಕಾಲೀನ ಪಲ್ಪ್ ಫಿಕ್ಷನ್ ನನ್ನಾದರೂ ಓದಿರಬೇಕಲ್ಲವಾ ಅನ್ನುವ ಅನುಮಾನವನ್ನೂ ಈತ ಸಮರ್ಥವಾಗಿ ಇದರಲ್ಲಿ ನಿವಾರಿಸಿಕೊಂಡಿದ್ದಾನೆ.

ಲಿಪಿಯೇ ಇಲ್ಲದಿದ್ದಾಗ ಸಾಹಿತ್ಯ ಇರಲಿಲ್ಲವೇ. ಬರೇ ಬಾಯಿಂದ ಬಾಯಿಗೆ ಹರಿದು ಬಂದ ಸೋಬಾನೆ ಪದಗಳು, ಮಲೆಮಾದೇಶ್ವರ, ಮುಂಟೇಸ್ವಾಮಿ, ಮೈಲಾರಲಿಂಗ ಸ್ವಾಮಿಯ ಪದಗಳು, ವಚನಗಳು ಇವಕ್ಕೆಲ್ಲ ಸಾಹಿತ್ಯಿಕ ಗುಣವಿಲ್ಲವೇ? ಇವರೆಲ್ಲ ಎಂಥ ಓದಿದ್ದರು? ಜೀವನಾನುಭವ ಮಾತ್ರದಿಂದ ಸಾಹಿತ್ಯ ಹುಟ್ಟುವುದಿಲ್ಲವೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಬಹಳ ಸುಲಭವಲ್ಲ. ಸ್ವಲ್ಪ ಸುಲಭೀಕರಿಸಿ ಹೇಳಿದರೆ ನಮ್ಮ ಜನಪದ ಅಥವಾ ಮೌಖಿಕ, ಶ್ರವ್ಯ ಸಾಹಿತ್ಯ ಯಾವತ್ತೂ ಬರೆಯಬೇಕೆಂದು, ತಾವು ಬರೆದದ್ದೆಲ್ಲಾ ಸಾಹಿತ್ಯವಾಗಬೇಕೆಂದು ಬರೆಸಿಕೊಂಡದ್ದಲ್ಲ. ಅಲ್ಲಿದ್ದ ಬೇಕಾದಷ್ಟು ಕಥನ, ಇತಿಹಾಸ, ಪುರಾಣಗಳಲ್ಲಿ ನಂತರ ನಾವು ಸಾಹಿತ್ಯಿಕ ಗುಣಗಳನ್ನು ಹುಡುಕಿಕೊಂಡೆವು. ಆದರೆ, ಈಗ ಬರೆಯುತ್ತಿರುವ ನಮಗೆ ಸಾಹಿತಿ ಅನಿಸಿಕೊಳ್ಳಲು ಇಷ್ಟಪಡುವವರಿಗೆ ಈ ಹೆಚ್ಚು ಓದಿರದವರು ಬರೆಯುವ ‘ಸ್ಪಾಂಟೇನಿಯಸ್ ಬರವಣಿಗೆ’ ಎಷ್ಟು ಪ್ರಸ್ತುತ?. (ಇಲ್ಲಿ ಓದು ಎಂದರೆ ಸಾಹಿತ್ಯದ ಓದು ಮಾತ್ರ)

ಮುಖ್ಯವಾದ ಒಂದು ಪ್ರಮೇಯವೆಂದರೆ ಎಲ್ಲ ಸಾಹಿತಿಗಳು ಬಹಳಷ್ಟು ಓದಿಕೊಂಡಿರುತ್ತಾರೆ ಎಂದು ನಾವು ತಿಳಿದುಕೊಳ್ಳುವುದು.. ಆದರೆ, ನಮಗೆ ಆಶ್ಚರ್ಯ ಬರುವಹಾಗೆ ಎಷ್ಟೋಜನ ಉದ್ದಾಮ ಸಾಹಿತಿಗಳು ಸಿಕ್ಕಾಪಟ್ಟೆ ಓದಿಯೇನೂ ಇರುವುದಿಲ್ಲ. ಬಹಳ ಓದಿಕೊಂಡಿರುವಾತ ಬರೆಯುವುದೇ ಬೇರೆ. ಓದಿದಾತ ತನ್ನ ಓದಿನಿಂದ ಮುಗ್ಢತೆಯನ್ನು ಕಳೆದುಕೊಂಡು ಬುದ್ಧಿವಂತನಾಗಿಬಿಟ್ಟರೆ ತಕ್ಷಣ ಆತನೊಳಗಿನ ಕಲ್ಪನೆಗಳು ಕರಗಿ, ರೂಪಕಗಳು ಎರವಲಾಗಿ ಆತನೊಳಗಿನ ‘ಕಲ್ಪಿತ’ ಸಾಹಿತಿ ನಾಶವಾಗುತ್ತಾನೇನೋ? ಮತ್ತೊಂದು ಸಮಸ್ಯೆಯೆಂದರೆ, ಸಾಹಿತಿ ಬುದ್ಧಿವಂತನಾಗಿಬಿಟ್ಟರೆ ಮತ್ತು ಆತನಿಗೆ ಜನಕ್ಕೆ ಹಿತವಾಗಿ ಬಳಸಲು ಬೇಕಾದ ಭಾಷೆಯೊಂದು ಇದ್ದುಬಿಟ್ಟರೆ ಆತ ಹೇಳುವುದೇ ವೇದವಾಕ್ಯವಾಗಿಬಿಡುತ್ತದೆ ಮತ್ತು ಆತ ಪ್ರವಾದಿಯ ರೀತಿ ಎಲ್ಲವನ್ನೂ ಹೇಳಲಿಕ್ಕೆ ತೊಡಗುತ್ತಾನೆ. ಇದು ಓದಿನ ಸೈಡ್ ಎಫೆಕ್ಟ್.

ಹಾಗಾದರೆ, ಬುದ್ಧಿವಂತರು- ಸಾಹಿತ್ಯವನ್ನು ಹೆಚ್ಚು ಓದಿಕೊಂಡಿರುವವರು ಫಿಕ್ಷನ್ ಬರೆಯುವುದು ತಪ್ಪಾ? ಎ ಕೆ ರಾಮಾನುಜನ್‌ರವರ ‘ಬುದ್ಧಿವಂತನಿಗೆ ಕನಸು ಬಿದ್ದರೆ’ ಎಂಬ ಪುಟ್ಟ ಕವನದ ಈ ಸಾಲುಗಳನ್ನು ನೋಡೋಣ.

..ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ
ಮನುಷ್ಯನೋ
ಚಿಟ್ಟೆಯೋ
ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು ರಾತ್ರಿಯ ಕನಸೋ

ತಿಳಿಯದೆ ಭ್ರಮೆ ಹಿಡಿಯಿತು.

ಕನಸೂ ತರ್ಕಬದ್ಧವಾಗಿ ಬೀಳಬೇಕೆಂದು ಹಟಹಿಡಿದರೆ ಇಂತ ತಾಪತ್ರಯಗಳು ಉಂಟಾಗಬಹುದು.

ಒಬ್ಬ ಬರಹಗಾರನ ಕಸಬುದಾರಿಕೆಗೆ ಬೇಕಾದ ಮೂಲಭೂತವಾದ ಅವಶ್ಯಕತೆಗಳ ಬಗ್ಗೆ ಅಮೆರಿಕಾದ ಸಾಹಿತಿ ಜೇಮ್ಸ್ ಮಿಶೆನರ್ ಹೇಳುತ್ತಾನೆ.
೧. ಯಾವ ಭಾಷೆಯಲ್ಲಿ ಬರೆಯುತ್ತೀಯೋ ಆ ಭಾಷೆಯಲ್ಲಿ ಆದಷ್ಟು ಪ್ರಾವೀಣ್ಯತೆಯನ್ನು ಪಡೆದುಕೋ- ಅದರ ಸಮೃದ್ಧಿ ಮತ್ತು ಭಾಷೆಯ ವೈವಿಧ್ಯದ ಕಡೆ ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು.
೨. ನಂತರ ನಿನ್ನದೇ ಆದ ಒಂದು ಭಾಷೆಯನ್ನು ರೂಢಿಸಿಕೋ, ಬೀದಿಯ ಲಿಂಗೋ ಅನ್ನು ಹಿಡಿದು ಕನಿಷ್ಠ ಮೂರು ಬೇರೆಬೇರೆ ಸಾಮಾಜಿಕ ಸ್ತರದಲ್ಲಿ ನಿನ್ನ ಭಾಷೆ ಪಳಗಿರಬೇಕು.
೩. ಸಾಹಿತ್ಯ ಎತ್ತಕಡೆ ಸಾಗುತ್ತಿದೆ ಎಂದು ನಿನಗೆ ಪರಿಚಯ ಮಾಡಿಸುವ ಕೆಲವಾದರೂ ನಿನ್ನ ಸಮಕಾಲೀನರ ಕೃತಿಗಳನ್ನು ಓದು. ನಾನು ಕ್ಲಾಸಿಕ್ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದನಾದ್ದರಿಂದ ಡಾಂಟೆ, ಬಾಲ್ಜಾಕ್, ಡಿಕನ್ಸ್, ಎಲಿಯಟ್, ದೊಸ್ತೋವ್ಸ್ಕಿ ಇತರರನ್ನು ಓದಿದ್ದೆ. ಆದರೆ ಸಾಹಿತಿಯಾಗಲು ಅವರನ್ನು ಓದಲೇಬೇಕಾದ ಅಗತ್ಯವಿಲ್ಲ. ಸಾಹಿತ್ಯದ ಚರಿತ್ರೆ ಗೊತ್ತಿದ್ದರೆ ಒಳ್ಳೆಯದು ಆದರೆ ಅದರಲ್ಲಿಯೇ ಮುಳುಗಿಹೋಗಬೇಕಿಲ್ಲ.
೪. ನಿನ್ನ ಪುಸ್ತಕವನ್ನು ಪ್ರಕಾಶಿಸಲು ನಿನಗೆ ಸಹಾಯ ಮಾಡಬಲ್ಲ ಎಲ್ಲರ ಜತೆ ಆದಷ್ಟು ಸಂಪರ್ಕವನ್ನಿಟ್ಟುಕೋ.
ಎಲ್ಲ ಕಸಬಿನಲ್ಲಿಯೂ ಕೆಲಸ ಕಲಿಯಲು ಸಿದ್ಧತೆ ಮಾಡಿಕೊಂಡಂತೆ ತಾನೇನು ಬರೆಯಬೇಕು ಎಂದು ನಿರ್ಧರಿಸಿದಾತ ಅದರಲ್ಲಿ ಕಲಿಯಬೇಕಾದ ಕಸಬುದಾರಿಕೆಯನ್ನು ಮತ್ತು ಪುಸ್ತಕ ಪ್ರಕಟಿಸಲು ಬೇಕಾದ ವ್ಯವಹಾರ ಜ್ಞಾನವನ್ನು ಈತ ಹೇಳುತ್ತಿದ್ದಾನೆ. ಕನ್ನಡದ ಸಂದರ್ಭದಲ್ಲಿ ಇವು ಕೊಂಚ ಬೇರೆಯಾಗಬಹುದು.

ಅನಂತಮೂರ್ತಿಯವರು ತಮ್ಮ ಒಂದು ಲೇಖನದಲ್ಲಿ ‘ಯಾವುದೇ ಸಾಹಿತಿಗೆ ಮುಖ್ಯವಾಗಿ ಪ್ರಸ್ತುತವಾಗುವುದು ಆತನ ಕಾಲದ ಹಿಂಚುಮುಂಚಿನ ಸುಮಾರು ನಾಲ್ಕು ಅಥವಾ ಐದು ದಶಕದ ಸಾಹಿತ್ಯ ಮಾತ್ರ.’ ಎಂದು ಉಲ್ಲೇಖಿಸಿದ್ದಾರೆ. ಇದೇ ವಾದವನ್ನು ಕೊಂಚ ಬೇರೆಯಾಗಿ ಮಂಡಿಸಿದರೆ ಒಬ್ಬನೇ ಸಾಹಿತಿ ಸುಮಾರು ಆರು ದಶಕಗಳಷ್ಟು ಕಾಲ ಸಕ್ರಿಯವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡರೆ ಆತನ ಆರಂಭಿಕ ಬರವಣಿಗೆ ಆತನಿಗೇ ಕೊನೆಗೆ ಪ್ರಸ್ತುತವಾಗದೇ ಹೋಗಬಹುದು. ಹಾಗಾಗಿ ಆಳವಾದ ಓದು ಅನ್ನುವುದು ಒಬ್ಬ ಬರಹಗಾರನಿಗೆ ಮುಖ್ಯವಾಗಿ ಫಿಕ್ಷನ್ ಬರಹಗಾರನಿಗೆ ಅಷ್ಟು ಅವಶ್ಯವಿಲ್ಲ ಎನ್ನಿಸುವ ಅಭಿಪ್ರಾಯ ಅಷ್ಟು ಅಸಾಧುವಾದುದಲ್ಲ. ಓದು ಒಬ್ಬ ಬರಹಗಾರನಿಗೆ ಕಸುಬನ್ನು ಕಲಿಸಿಕೊಡಲು ಮಾತ್ರ. ನಂತರ ಬರಹಗಾರ ತನ್ನನ್ನು ಶೋಧಿಸಿಕೊಳ್ಳುವುದು ಬರೆಯುತ್ತಾ ಹೋದಾಗ ಮಾತ್ರ. ಒಬ್ಬ ವೈದ್ಯನಿಗೆ ಮೆಡಿಕಲ್ ಕಾಲೇಜಿನಲ್ಲಿ ಡಾಕ್ಟರಿಕೆಯ ಮೂಲಭೂತ ಮಂತ್ರವನ್ನು ಮಾತ್ರ ಹೇಳಿಕೊಟ್ಟಿರುತ್ತಾರೆ. ಆತ ವೈದ್ಯನಾದ ಮೇಲೆ ಆತ ತನ್ನ ಕೆಲಸವನ್ನು ಮಾಡುತ್ತಾ ಕಲಿಯುತ್ತಾನೆ, ಕಲಿಯುತ್ತಾ ಮಾಡುತ್ತಾನೆ. ಹೀಗೇ ಬೆಳೆಯುತ್ತಾನೆ.

ಕುಂದೇರ ಇದಕ್ಕೆ ಒಪ್ಪುವುದಿಲ್ಲ. ಆತ ಪ್ರತಿಪಾದಿಸುವ ‘ಸಾಹಿತಿಯ ಮರಣ’ದ ಕಾನ್ಸೆಪ್ಟಿನಲ್ಲಿ ಆತ ಹೇಳುವುದು ಒಬ್ಬ ಸಾಹಿತಿ ಯಾವಾಗ ಓದುವುದನ್ನು ನಿಲ್ಲಿಸುತ್ತಾನೋ ಆಗ ಆತ ಸತ್ತ ಎಂದು ತಿಳಿದುಕೊಳ್ಳಿ ಎಂದು ಹೇಳುತ್ತಾನೆ. ಆತನಿಗೆ ಓದಿಲ್ಲದ ಯಾವ ಬರಹವೂ ಪ್ರಸ್ತುತವಾಗುವುದಿಲ್ಲ. ಈತನ ಬರಹಗಳನ್ನೇ ನೋಡಿದರೆ ಅರ್ಥವಾಗುತ್ತದೆ. ಅವನಿಗೆ ತನ್ನ ಓದುಗನ ಬುದ್ಧಿಮತ್ತೆಯ ಬಗ್ಗೆ ಬಹಳ ನಂಬಿಕೆ. ತನ್ನ ಬರಹ ಎಲ್ಲರಿಗೂ ಪ್ರಸ್ತುತವಗಬೇಕೆಂಬ ಪ್ರಲೋಭನೆಯೂ ಇವನಿಗಿಲ್ಲ.

ನಾನು ಈ ಸಂದರ್ಭದಲ್ಲಿ ಅರ್ಥೈಸಿಕೊಂಡಿರುವುದೆಂದರೆ -ಓದಿಕೊಂಡಿರುವ ಬರಹಗಾರರು ಮತ್ತು ಕೇವಲ ಬರಹಗಾರರು ಎಂಬ ಎರಡು ಪ್ರಬೇಧಗಳಿವೆಯೇನೊ. ಮೊದಲ ಗುಂಪಿನವರು ಬಹಳ ಓದಿಕೊಂಡಿರುತ್ತಾರೆ. ಅವರಿಗೆ ಶ್ರೇಷ್ಠವಾದುದ್ದನ್ನೆಲ್ಲಾ ಓದುವ ಆಸೆ ಅದಮ್ಯವಾಗಿದೆ. ಆದರೆ ಇವರಿಗೆ ಬರೆಯುವ ಗುಣ ಹುಟ್ಟಿನಿಂದಲೂ ಇದೆ. ಕೆಲವರಿಗೆ ಬರಹ ಅವರ ಓದಿನ ಉಪೋತ್ಪನ್ನವೂ ಆಗಿರಬಹುದು. ಅಂದರೆ ತಾವು ಓದಿದ್ದನ್ನು ಇನ್ನೊಬ್ಬರಿಗೆ ಅರ್ಥಮಾಡಿಸಲೂ ಇವರು ಬರೆಯಬಹುದು. ಇವರು ಓದಿರುವ ಪುಸ್ತಕಗಳು, ಮೆಚ್ಚಿನ ಲೇಖಕರ ಭಾಷೆ ಇವರ ಬರವಣಿಗೆಯ ಮೇಲೆಯೂ ಪ್ರಭಾವ ಬೀರಿರುತ್ತದೆ. ಅದನ್ನೆಲ್ಲಾ ಮೀರುವ ಆಸೆಯಿಂದ ಇವರು ಬರೆಯುತ್ತಿರುತ್ತಾರೆ ಎಂದು ಹೇಳಿದರೆ ಕೊಂಚ ಮಹತ್ವಾಕಾಂಕ್ಷೆಯಷ್ಟೇ ಹೊರತು ಉತ್ಪ್ರೇಕ್ಷೆಯೇನಲ್ಲ. ಆದರೆ ಆ ನಿಟ್ಟಿನಲ್ಲಿ ಇವರ ನೆಲೆಯಿರುವುದರಿಂದ ಇವರ ಕೃತಿಗಳು ಅತಿ ಜಾಗರೂಕವಾಗಿ ಬರೆದಿದ್ದಾಗಿರುತ್ತದೆ. ಪ್ರತಿ ವಿವರಗಳಿಗೂ ಮಹತ್ವವಿರುತ್ತವೆ. ಪ್ರತಿಯೊಂದು ಸಾಲೂ ಲೆಕ್ಕವಿಟ್ಟು ಬರೆದಿರುತ್ತದೆ. ಹಾಗೆಯೇ ಪರಿಷ್ಕರಣವೂ ಚೆನ್ನಾಗಿಯೇ ಆಗಿರುತ್ತದೆ. ಬಹುಶಃ ಕುಂದೇರ, ಪಮುಕ್, ಕುಟ್ಜೀ ಮುಂತಾದವರು ಈ ಗುಂಪಿಗೆ ಸೇರಿದವರು.

ಎರಡನೇ ಗುಂಪಿನವರು ಕೇವಲ ಬರಹಗಾರರು, ಗ್ರೆಗರಿಯಂತೆ ಹುಟ್ಟು ಬರಹಗಾರರು. ಇವರು ಓದಿಗಿಂತ ತಮ್ಮ ಬರಹದ ಮೇಲೆಯೇ ಹೆಚ್ಚಿನ ನಂಬಿಕೆಯನ್ನಿಟ್ಟುಕೊಂಡವರು. ತಮ್ಮ ಸ್ವಾಭಾವಿಕ ಶೈಲಿ ಮತ್ತು ಜೀವನಾನುಭವದ ಮೇಲೆ ಇವರಿಗೆ ಎಲ್ಲಿಲ್ಲದ ಆತ್ಮವಿಶ್ವಾಸವಿದೆ. ಅವರು ತಮ್ಮ ಬರಹದಲ್ಲಿ ಎಷ್ಟು ಮಗ್ನರಾಗಿದ್ದಾರೆ ಅಥವಾ ಎಷ್ಟು ಪ್ರಾಲಿಫಿಕ್ ಆಗಿ ಬರೆಯುತ್ತಾರೆ ಎಂದರೆ ಅವರಿಗೆ ತಮ್ಮ ಬರಹವನ್ನೇ ಇನ್ನೊಮ್ಮೆ ಮತ್ತೆ ತಿದ್ದ್ದುವ ತಾಳ್ಮೆಯಿಲ್ಲ. ತಮ್ಮ ಸ್ಪಾಂಟೆನಿಯಿಟಿಯ ಬಗ್ಗೆ ಅವರಿಗೆ ಅಪಾರ ವಿಶ್ವಾಸ. ಹೆಚ್ಚಿನ ಬೌದ್ಧಿಕತೆ ಇವರಿಗೆ ಬೇಕಿಲ್ಲ. ಜೀವನದ ಸಣ್ಣ ಸಣ್ಣ ಘಟನೆಯ ವಿವರಗಳನ್ನು ಇವರು ಗಮನಿಸುತ್ತಿರುತ್ತಾರೆ ಮತ್ತು ಈ ವಿವರಗಳನ್ನು ಅಕ್ಷರದ ಕುಸುರಿಯಲ್ಲಿ ನೇಯುವ ಪರಿಣಿತಿ ಇವರಲ್ಲಿದೆ.

ಓದುಗರು ಎರಡೂ ರೀತಿಯ ಬರಹಗಳನ್ನೂ ಇಷ್ಟಪಟ್ಟಿರುತ್ತಾರೆ. ಮುಖ್ಯವಾಗಿ ಈ ಎರಡು ಪ್ರಬೇಧಗಳ ಬಗ್ಗೆ ಯಾವ ಓದುಗನಿಗೂ ಆಸಕ್ತಿಯೇನಿಲ್ಲ. ಯಾರಿಗೆ ಯಾವುದು ಇಷ್ಟ ಎನ್ನುವುದೂ ಬಹಳ ಕಷ್ಟ. ಆದರೆ ಈ ಎರಡೂ ಗುಂಪಿನ ಬರಹಗಾರರು ತಮ್ಮ ಗುಣಗಳನ್ನು ತೀರ ಎಕ್ಸ್‌ಕ್ಲ್ಯೂಸಿವ್ ಎಂದು ತಿಳಕೊಂಡು ಓದಿಕೊಂಡು ಬರೆಯುವವರ ಕೃತಿಗಳನ್ನು ಬೌದ್ಧಿಕತೆಯ ಭಾರದಿಂದ ಅಳೆಯುವುದು ಮತ್ತು ಸ್ಪಾಂಟೇನಿಯಸ್ ಲೇಖಕರನ್ನು ಬೌದ್ಧಿಕತೆಯನ್ನು ವಿರೋಧಿಸುವವರು, ಜೀವನಪ್ರೀತಿಯ ಹೆಸರಲ್ಲಿ ಕ್ಯಾಂಡಿಫ್ಲಾಸ್ ಬರಹಗಳನ್ನು ನಮ್ಮಮುಂದೆ ಇಡಿಸುವವರು ಎಂದು ಟೀಕಿಸಲು ತೊಡಗಿದಾಗ ಗೊಂದಲ ಶುರುವಾಗುತ್ತದೆ. ಎಲ್ಲರೂ ಕನಿಷ್ಠ ಸಾಹಿತ್ಯ ಕೃಷಿಗೆ ಎಷ್ಟು ಬೇಕೋ ಅಥವಾ ಕಸಬುದಾರಿಕೆಯನ್ನು ಕಲಿಸಲು ಬೇಕಾಗುವಷ್ಟಾದರೂ ಓದಿಕೊಂಡಿಯೇ ಇರುತ್ತಾರೆ. ಹಾಗೆಯೇ ಸಿಕ್ಕಾಪಟ್ಟೇ ಓದಿರುವವನೂ ಬರೇ ತನ್ನ ಓದಿನ ಆಧಾರದ ಮೇಲೆ ಮಹತ್ವದ ಕೃತಿಗಳನ್ನು ರಚಿಸಲಾಗುವುದಿಲ್ಲ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಇದಕ್ಕೆ ಉತ್ತಮ ಉದಾಹರಣೆ. ಟಾಲ್‌ಸ್ಟಾಯ್ ಮಾದರಿಯ ಕಥನ ಶೈಲಿ ಇದು ಅನ್ನಿಸಿದರೂ ಒಬ್ಬ ಹುಟ್ಟು ಬರಹಗಾರನಿಗೆ ಇರಬೇಕಾದ ಸ್ವಾಭಾವಿಕತೆ, ಸರಳತೆ, ಪಾತ್ರಗಳ ಆಳಕ್ಕಿಳಿಯುವ ಗುಣ ಮತ್ತು ಅಪ್ಪಟ ಜೀವನಾನುಭವ ಎಲ್ಲವೂ ಇದರಲ್ಲಿ ಅಡಕವಾಗಿದೆ.

ಅಂದರೆ, ಓದೂ ಬರಹವೂ ಜತೆಜತೆಗೇ ಸಾಗುವ ಪಯಣ. ಒಂದನ್ನು ಬಿಟ್ಟು ಇನ್ನೊಂದರ ಅಸ್ತಿತ್ವ ಬಡವಾಗುತ್ತದೆ-ಬರಹಗಾರನಿಗೆ.

3 comments:

  1. ಗುರು, ಹಿಂದಿನ ಅಂಕಣದಂತೆಯೇ ಇದನ್ನು ಓದಿ ಅಪಾರ್ಥಿಸಿಕೊಂಡಿದ್ದರೆ, ಅಥವಾ ಉಪಾರ್ಥಿಸಿಕೊಂಡಿದ್ದರೆ ತಪ್ಪು ನನ್ನ ಓದಿನದಷ್ಟೇ. ನೀವೇನೇ ಅನ್ನಿ- ಇಲ್ಲಿನ ಎಲ್ಲ ‘ಸಾಹಿತ್ಯಿಕ’ ಬರಹಗಳು ನನ್ನೆದುರು ಸವಾಲಾಗಿ ನಿಲ್ಲುತ್ತವೆ. ನನ್ನನ್ನು ಕುರಿತೇ ಬರೆದಿದ್ದೀರೋ, ನನ್ನ ಸಲುವಾಗೇ ಬರೆದಿರುವುರೋ ಅಂತ ಕಾಡುತ್ತದೆ. ನಿಮಗೆ ಗೊತ್ತು, ತಪ್ಪು ನನ್ನದೇ.

    ಇರಲಿ, ನಿಮ್ಮ ‘ಓದು’ಗಳ ಹರವನ್ನು ಕುರಿತು ಈರ್ಷ್ಯೆಯಾಗುತ್ತದೆ. ಲಜ್ಜೆಯೂ ಆಗುತ್ತಿದೆ. -ವಸ್ತಾರೆ

    ReplyDelete
  2. ನಂಗೂ ಓದ್ತಿರಬೇಕಾದ್ರೆ ವಸ್ತಾರೆಯವರೇ ನೆನಪಾಗ್ತಿದ್ರು. ಕೆಳಗೆ ನೋಡಿದ್ರೆ ಅವರೇ ಕಮೆಂಟಿಸಿದ್ದಾರೆ!

    ಓದದೇ ಅದು ಹೇಗೆ ಬರೀಲಿಕ್ಕೆ ಸಾಧ್ಯ ಅಂತ ನಂಗಂತೂ ಅರ್ಥ ಆಗಲ್ಲ.

    ReplyDelete
  3. ಓದದೇ ಬರೆಯೋಕೆ ಸಾಧ್ಯವಿಲ್ಲ ಅಂತನ್ನುವ ವಾದಕ್ಕೆ ಸಾಕಷ್ಟು ಪ್ರತಿವಾದವಾಗಿ ಇರುವುದೇ ನಮ್ಮ ಜನಪದ ಸಾಹಿತ್ಯ, ಶರಣ ಸಾಹಿತ್ಯ. ದಾಸ ಸಾಹಿತ್ಯದಲ್ಲಿಯೂ ಬಹಳಷ್ಟು ಜನ ದಾಸರು ವಿದ್ವಾಂಸರಲ್ಲ, ಸಾಹಿತ್ಯಿಕ ಅಭ್ಯಾಸ ಮಾಡಿದವರಲ್ಲ. ಅವರವರ ಅನುಭವ-ಅನುಭಾವಗಳನ್ನು ಭಾಷೆಯ ಮೂಲಕ ಭಟ್ಟಿ ಇಳಿಸಿದವರು. ಇವಿಷ್ಟೇ ಉದಾಹರಣೆಗಾಳು ಸಾಕು-ಬರವಣಿಗೆಗೆ ಪ್ರತಿಭೆಯೇ ಮೂಲ, ಪಾಂಡಿತ್ಯ ಮಾತ್ರವಲ್ಲ. ಪಾಂಡಿತ್ಯ ಪ್ರತಿಭೆಗೆ ಒತ್ತಾಸೆಯಾಗಬಹುದು, ಅಲ್ಲವೆಂದಲ್ಲ.

    ಗುರು, ವಾದಗಳನ್ನು ಒರೆಗೆ ಹಚ್ಚುವ ನಿಮ್ಮ ಶೈಲಿ ಮತ್ತು ನಿಮ್ಮ ಓದಿನ ಆಳ-ಅಗಲಗಳ ಬಗ್ಗೆ ಎರಡು ಮಾತಿಲ್ಲ. ಶರಣು.

    ReplyDelete