Sunday, March 8, 2009

ಹೆರೊಯಿನ್, ಗೇಮ್ ಶೋ ಮತ್ತು ಪ್ರಶಸ್ತಿ.

ಮಾದಕವಸ್ತುಗಳ ವ್ಯಸನಿಯಾತ. ಆತನೇನು, ಅದೊಂದು ರೀತಿಯ ಕಲ್ಟ್. ತೊಂಭತ್ತರ ದಶಕದಲ್ಲಿ ಹೆರೊಯಿನ್ ಅನ್ನುವ ‘ವಸ್ತು’ವಿಗೆ ವ್ಯಸನಿಗಳಾದವರು ಎಷ್ಟು ಮಂದಿಯೋ. ಇದಕ್ಕಾಗಿ ಅವರು ತಮ್ಮ ಮನೆ ಮಠ ಕಳಕೊಳ್ಳುತ್ತಾರೆ, ಅತಿ ಹೀನವಾದ ಕಳ್ಳತನಗಳನ್ನು ಮಾಡುತ್ತಾರೆ. ಕಾನೂನನ್ನು ಮುರಿಯುವುದು ಚಟವಾಗುತ್ತದೆ. ವ್ಯಸನವೆಂಬುದೇ ವ್ಯಸನವಾಗುತ್ತದೆ. ಕೊನೆಗೆ, ಒಂದು ದಿನ ತನ್ನ ವ್ಯಸನದಿಂದ ‘ಕೋಲ್ಡ್ ಟರ್ಕಿ’ ಮುಕ್ತವಾಗಲು ಆತ ಪ್ರಯತ್ನಿಸುತ್ತಾನೆ. ಆದರೆ ಅಷ್ಟು ದಿನ ಈ ವಸ್ತುಗಳಿಗೆ ಒಗ್ಗಿದ್ದ ಆ ದೇಹಕ್ಕೆ ಮತ್ತೆ ಮತ್ತೆ ಹೆರೊಯಿನ್ ಬೇಕೆನಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಅವನ ಕೂದಲು ನಿಮಿರುತ್ತದೆ, ಆಕಳಿಕೆ, ಹೊಟ್ಟೆಯಲ್ಲಿ ಸಂಕಟ, ಕಣ್ಣಲ್ಲಿ ನೀರು, ಮೈಕೈ ನೋವು.. ಮತ್ತು ಬೇಧಿ. ಆಗ ಅವನ ಇನ್ನೊಬ್ಬ ಗೆಳೆಯ ಈತನ ಕಷ್ಟ ನೋಡಲಾರದೇ ಓಪಿಯಮ್‌ನ ಎರಡು ಸಪಾಸಿಟರಿ (ಮಲದ್ವಾರದ ಮೂಲಕ ಇಟ್ಟುಕೊಳ್ಳುವ ಔಷಧಿ) ಯನ್ನು ಕೊಡುತ್ತಾನೆ. ಈತ ಅದನ್ನು ಸಮರ್ಪಕವಾಗಿ ಉಪಯೋಗಿಸುತ್ತಾನೆ, ಕೂಡ. ಆದರೆ ಬೇಧಿಯನ್ನು ತಡಕೊಳ್ಳಲಾರದೇ ಅಲ್ಲಿಯೇ ಇದ್ದ ಟಾಯ್ಲೆಟ್ಟೊಂದಕ್ಕೆ ನುಗ್ಗುತ್ತಾನೆ. ಅದು ಇಡೀ ಎಡಿನ್‌ಬರೋ ಪ್ರಾಂತ್ಯದಲ್ಲಿಯೇ ಇರುವ ಅತೀ ಹೊಲಸು ಟಾಯ್ಲೆಟ್ಟು. ಗೋಡೆ, ನೆಲವೆಲ್ಲಾ ಮಲದಿಂದ ಗಲೀಜು. ಒಳಗೆ ಹೋದರೆ ವಾಕರಿಕೆ ಬರುವಷ್ಟು ಅಸಹ್ಯ. ಅಲ್ಲಿ ತನ್ನ ಕೆಲಸ ಪೂರೈಸಿದ ಮೇಲೆ ಗೊತ್ತಾಗುತ್ತದೆ, ಆತನಿಗೆ ತಾನು ಬೇಧಿಯೊಂದಿಗೆ ಕಳಕೊಂಡದ್ದು ತನ್ನ ಸಪಾಸಿಟರಿಗಳನ್ನು ಕೂಡ ಎಂದು. ತಕ್ಷಣ ಏನೂ ಯೋಚಿಸದೇ ಆ ಮಲದಿಂದ ತುಂಬಿರುವ ಆ ಟಯ್ಲೆಟ್ ಬೌಲಿನಲ್ಲಿ ಇಳಿದು ಈಜುತ್ತಾ ತನ್ನ ಸಪಾಸಿಟರಿಯನ್ನು ತೆಗೆದುಕೊಂಡು ನಿಧಿ ಸಿಕ್ಕಷ್ಟೇ ಖುಷಿಯಿಂದ ‘ನೌ ಐ ಅಮ್ ರೆಡಿ’ ಅನ್ನುತ್ತಾನೆ. ಆತನ ಅಂಗಾಂಗವೆಲ್ಲವೂ ‘ಶೈಟ್ಸ್’

ಇದು ೧೯೯೬ರಲ್ಲಿ ಬಿಡುಗಡೆಯಾದ ‘ಟ್ರೈನ್‌ಸ್ಪಾಟಿಂಗ್’ ಎನ್ನುವ ಈ ಚಿತ್ರದ ಒಂದು ದೃಶ್ಯ. ಇವಾನ್ ಮೆಕ್‌ಗ್ರಿಗರ್ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕ ಸ್ಲಮ್‌ಡಾಗ್ ಖ್ಯಾತಿಯ ಡ್ಯಾನಿ ಬೊಯ್ಲ್. ಈ ಚಿತ್ರ ಬ್ರಿಟಿಶ್ ಫಿಲ್ಮ್ ಸೊಸೈಟಿಯಿಂದ ಸಾರ್ವಕಾಲಿಕ ಶ್ರೇಷ್ಠ ೧೦೦ ಬ್ರಿಟಿಶ್ ಸಿನೆಮಾಗಳಲ್ಲಿ ಒಂದು ಎಂದು ದಾಖಲೆಯಾಗಿದೆ.

ಇದೇ ಡ್ಯಾನಿ ಬೊಯ್ಲ್‌ನ ಸ್ಲಮ್ ಡಾಗ್ ಮಿಲಿಯೇನರ್ ಚಿತ್ರದಲ್ಲಿ ಒಬ್ಬ ಕೊಳೆಗೇರಿಯ ಹುಡುಗ ಅಮಿತಾಬ್ ಬಚ್ಚನ್‌ನನ್ನು ನೋಡುವ ಮತ್ತು ಆತನ ಒಂದು ಹಸ್ತಾಕ್ಷರವನ್ನು ಪಡೆಯುವ ಸಲುವಾಗಿ ತಾನು ಕೂತಿದ್ದ ಮಲದ ಗುಂಡಿಯ ಹೊಲಸಲ್ಲಿ ಹಾರಿ ಮೈಯೆಲ್ಲಾ ಮಲವಾದರೂ ಅದನ್ನು ಲೆಕ್ಕಿಸದೇ ಸೀದಾ ಹಾಗೆಯೇ ಹೋಗಿ ಅಮಿತಾಬನ ಹಸ್ತಾಕ್ಷರವನ್ನು ಪಡೆದು ಧನ್ಯೋಸ್ಮಿ ಅನ್ನುತ್ತಾನೆ.

ಇಂಥ ಚಿತ್ರಕ ದೃಶ್ಯಗಳು ಕಲೆಗೆ, ಚಿತ್ರದ ಆಶಯಕ್ಕೆ ಪೂರಕವಾಗಿದೆ ಅನ್ನಿಸದೇ ಬಲವಂತವಾಗಿ ತುರುಕಲಾಗಿದೆ ಅನ್ನಿಸಿದರೆ ಅಲ್ಲಿಗೆ ನಿರ್ದೇಶಕ ಸೋಲುತ್ತಾನೆ. ಟ್ರೈನ್‌ಸ್ಪಾಟಿಂಗ್‌ನ ಹಸಿಹಸಿ ಕಾಮಕೇಳಿಗಳೂ, ಅಲ್ಲಿಯ ಪಾತ್ರಗಳ ಭಾಷೆ, ಮಾದಕ ವಸ್ತುಗಳನ್ನು ನೇರ ನಾಡಿಗೇ ಶೂಟ್ ಮಾಡಿಕೊಳ್ಳುವ ಈ ಜಂಕಿಗಳ ಕೊಳಕು ಸಿರಿಂಜು ಮತ್ತು ಸೂಜಿಗಳು, ಅವರ ಅಜಾಕರೂಕತೆಯಿಂದ ಸಾಯುವ ಅವರದೇ ಯಾರದೋ ಒಂದು ಮಗು -ಇವೆಲ್ಲ ಅವರ ಬದುಕಿನ ಒಂದು ಭಾಗ. ವ್ಯಸನವೇ ಮುಖ್ಯವಾದವನಿಗೆ ದಿನಾ ಬೆಳಿಗ್ಗೆ ಯಾಕೆ ಏಳಬೇಕು ಅಂದರೆ ಮತ್ತೊಂದು ಶಾಟ್ ಹೆರೊಯಿನ್‌ಗೆ ಅನ್ನುವುದೇ ಸತ್ಯ. ಸಾಮಾನ್ಯ ಮನುಷ್ಯನಿಗೆ ಅಸಹ್ಯ ತರುವ ಈ ದೃಶ್ಯಗಳು ಆ ಜಂಕಿಗಳ ಜಗತ್ತಿನ ದೈನಿಕ. ನಿರ್ದೇಶಕ ಆದಷ್ಟೂ ವಾಸ್ತವಕ್ಕೆ ಬದ್ಧನಾಗಲು ಪ್ರಯತ್ನಿಸಿದ್ದಾನೆ.

ಟ್ರೈನ್‌ಸ್ಪಾಟಿಂಗ್ ಪ್ರಾಯಶಃ ಸ್ಲಮ್‌ಡಾಗಿಗಿಂತ ಉತ್ತಮ ಚಿತ್ರ, ಆದರೆ ಅದನ್ನು ನೋಡುವುದಕ್ಕೆ ಬೇರೆಯೇ ಮನಸ್ಥಿತಿ ಬೇಕು. ಸ್ಲಮ್‌ಡಾಗ್ ಚಿತ್ರದಲ್ಲಿ ಮಲದಲ್ಲಿ ಬಿದ್ದ ಹುಡುಗನ ನೋಡಿದಾಗ ಒಂದು ಕ್ಷಣ ‘ಶೀ’ ಅನಿಸಿದರೂ ನಂತರವೇ ಇಡೀ ಸನ್ನಿವೇಶದ ಮುಗ್ಧತೆ ಮನಸ್ಸಿಗೆ ಪರಿಣಾಮಕಾರಿಯಾಗಿ ತಟ್ಟುತ್ತದೆ. ಅದೇ ಟ್ರೈನ್‌ಸ್ಪಾಟಿಂಗ್‌ನಲ್ಲಿ ಮಲದಲ್ಲಿ ಬಿದ್ದ ವ್ಯಸನಿಯನ್ನು ನೋಡಿ ಅಸಹ್ಯವಾಗುತ್ತದೆ. ಆದರೆ ಆ ವ್ಯಸನಿಗೆ ಅದು ಅನಿವಾರ್ಯ. ಹೆಚ್ಚು ಕಮ್ಮಿ ಒಂದೇ ಸನ್ನಿವೇಶವನ್ನು ಬೇರೆಬೇರೆ ರೀತಿಯಲ್ಲಿ ಆತ್ಯಂತಿಕವಾಗಿ ಉಪಯೋಗಿಸಿಕೊಂಡಿರುವುದು ನಿರ್ದೇಶಕನ ಜಾಣತನವನ್ನು ತೋರುತ್ತದೆ. ಇಲ್ಲಿ ಇಂಗ್ಲೆಂಡ್ ಭಾರತಗಳು ಸಾಂದರ್ಭಿಕ ಅಷ್ಟೇ.

ಈಗ ಸ್ಲಮ್ ಡಾಗ್ ಎಂಟು ಆಸ್ಕರ್‍ಗಳನ್ನು ಪಡೆದು ಈ ವರ್ಷದ ಅತ್ಯುತ್ತಮ ಚಿತ್ರ ಎಂದು ಹೇಳಲ್ಪಟ್ಟಿದೆ. ಪಶ್ಚಿಮದ ಮಾಧ್ಯಮಗಳು ಈ ಚಿತ್ರವನ್ನು ಹಾಡಿ ಹೊಗಳಿವೆ. ಡ್ಯಾನಿ ಬಾಯ್ಲ್, ಅನಿಲ್ ಕಪೂರ್, ದೇವ್ ಪಟೇಲ್ ಮತ್ತು ಫ್ರೀಡಾರಿಗೆ ಸಂದರ್ಶನ ಕೊಟ್ಟು ಸಾಕಾಗಿದೆ. ಕೊಳೆಗೇರಿಯ ಮಕ್ಕಳು ಲಾಸ್ ಏಂಜಲೀಸ್‌ಗೆ ಹೋಗಿ ರೆಡ್ ಕಾರ್ಪೆಟ್ ಮೇಲೆ ನಡೆದಾಗಿದೆ. ರಹಮಾನ್ ‘ಜೈ ಹೋ’ ಎಂದಿದ್ದಾನೆ.

ಇಂಡಿಯಾದ ಮಾಧ್ಯಮಗಳು ಅಷ್ಟೊಂದೇನೂ ಉದಾರವಾಗಿಲ್ಲ, ಕೊಳೆಗೇರಿಯ ಜೀವನವನ್ನು ವೈಭವೀಕರಿಸಿ ಭಾರತದ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ ಎಂದು ಆಕ್ಷೇಪಣೆ ತೆರೆಯಲಾಗಿದೆ. ರಾಷ್ಟ್ರಿಯಾತಾವಾದಿಗಳು ಇದು ಅಪ್ಪಟ ದೇಶದ್ರೋಹ ಎಂದಿದ್ದಾರೆ. ಶ್ಯಾಮ್ ಬೆನೆಗಲ್ ಕೂಡ ‘ನಾನು ಗಾಂಧಿಯನ್ನು ಕುರಿತು ಚಿತ್ರ ಮಾಡಿದ್ದೆ. ನನಗೆ ಒಂದೂ ಆಸ್ಕರ್ ಸಿಗಲಿಲ್ಲ. ಗಾಂಧಿಯ ಬಗ್ಗೆ ಚಿತ್ರ ಮಾಡಿದ ಆಟೆನ್‌ಬರೋಗೆ ಸಿಕ್ಕ ಆಸ್ಕರ್‍ಗಳನ್ನು ನೋಡಿ’ ಎಂಬಂತ ಹೇಳಿಕೆಗಳನ್ನು ಇದೇ ಸಂದರ್ಭದಲ್ಲಿ ಕೊಟ್ಟಿದ್ದಾನೆ.

ಇದು ಹೊರಗಿನವರ ಚಿತ್ರ. ಡ್ಯಾನಿ ಬೊಯ್ಲ್ ಮತ್ತು ದೇವ್ ಪಟೇಲ್ ಇಬ್ಬರೂ ಬ್ರಿಟಿಷ್ ಪ್ರಜೆಗಳು. ಬರೆದ ವಿಕಾಸ್ ಸ್ವರೂಪ್ ಪ್ರೆಟೋರಿಯಾದಲ್ಲಿರುವ ಭಾರತೀಯ ಹೈ ಕಮಿಷನರ್. ಇಲ್ಲಿನ ತಂತ್ರಜ್ಞರೂ ಹೊರಗಿನವರೇ. ನಮ್ಮ ರಹಮಾನ್ ಮತ್ತು ಇತರೇ ತಂತ್ರಜ್ಞರು ಇನ್ನೂ ಒಳ್ಳೆ ಕೆಲಸವನ್ನು ಬೇರೆ ಚಿತ್ರಗಳಲ್ಲಿ ಮಾಡಿದ್ದಾರೆ. ಆದರೆ, ಬೇರೆಯೇ ಕಾರಣಗಳಿಂದ ಅವರುಗಳಿಗೆ ಈ ಜಾಗತಿಕ ಪ್ರಶಸ್ತಿ ಸಿಕ್ಕಿದೆ. ಹೊರಗಿನ ನೋಟ ಹೊರಗಿನವರಿಗೆ ಇಷ್ಟವಾಗಿದೆ ಆದ್ದರಿಂದ ಹೊರಗಿನವರು ಕೊಡುವ ಆಸ್ಕರ್ ಪ್ರಶಸ್ತಿಯೂ ಇದಕ್ಕೆ ಸಿಕ್ಕಿದೆ ಅನ್ನುವುದೂ ಒಂದು ವಾದ.

ಆದರೆ, ಟ್ರೈನ್‌ಸ್ಪಾಟಿಂಗ್‌ಗೆ ಯಾಕೆ ಇಂಥ ಪ್ರಶಸ್ತಿಗಳು ಬರಲಿಲ್ಲ, ಬರುವುದೂ ಇಲ್ಲ. ಯಾಕೆಂದರೆ, ಸ್ಲಮ್‌ಡಾಗಿನಲ್ಲಿರುವ ಜೋಪಡಿಯ ಹುಡುಗನೊಬ್ಬ ಕೋಟ್ಯಾಧಿಪತಿಯಾಗುವ ಫೀಲ್‌ಗುಡ್ ಅಂಶ ಇಲ್ಲಿಲ್ಲ. ಟ್ರೈನ್‌ಸ್ಪಾಟಿಂಗ್ ಕಟು ವಾಸ್ತವವಾದಿ ಚಿತ್ರ.
ಈ ಹೊತ್ತಿನಲ್ಲಿ ನನಗೆ ನೆನಪಿಗೆ ಬರುವುದು ಲಂಕೇಶರ ‘ಅಕ್ಕ’ ಇದು ಕ್ಯಾತ ಅಥವಾ ಕೃಷ್ಣ ಅನ್ನುವ ಕೊಳೆಗೇರಿಯ ಹುಡುಗ ಮುಂದೊಂದು ದಿನ ಹೇಳಿಕೊಳ್ಳುವ ತನ್ನದೇ ಕತೆ. ಲಂಕೇಶರ ಕಾದಂಬರಿಯ ಪಾತ್ರಗಳಾದ ದೇವೀರಿ, ಪದ್ದಿ, ಖಡವಾ, ನಾಗ್ಯಾಗಳಿಗೆ ಸ್ಲಮ್‌ಡಾಗ್‌ನ ಜಮಾಲನಂತೆ ಮಹತ್ತರವಾದ ಆಕಾಂಕ್ಷೆಗಳಿದ್ದರೂ ಇಲ್ಲಿಂದ ಮುಕ್ತಿಯೇ ಇಲ್ಲ. ಅದಕ್ಕೆ ದಾರಿಗಳೂ ಇಲ್ಲ. ಹಾಗೆಯೇ ಕೊಳೆಗೇರಿಯ ಇನ್ನೊಂದು ಚಿತ್ರಣ ಕನ್ನಡದ ‘ಸ್ಲಮ್ ಬಾಲ’ ಅನ್ನುವ ಚಿತ್ರದಲ್ಲಿ ಯಥೋಚಿತವಾಗಿ ನಿರೂಪಣೆಯಾಗಿದೆ. ಅಗ್ನಿ ಶ್ರೀಧರರ ‘ದಾದಾಗಿರಿಯ ದಿನಗಳು’ ಪುಸ್ತಕದ ಕೆಲವು ಭಾಗಗಳನ್ನು ಆಧರಿಸಿ ನಿರ್ಮಿಸಿರುವ ಈ ಚಿತ್ರ ೨೦೦೮ರ ಬೆಂಗಳೂರಿನ ಕೊಳೆಗೇರಿಗಳ ಭೂಗತ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಕೊಳೆಗೇರಿಯಲ್ಲಿರುವ ರೌಡಿಗಳ ಬಗ್ಗೆ ಮತ್ತು ಅಲ್ಲಿಂದ ಹೊರಗೆ ಬರುವುದು ಎಷ್ಟು ದುಸ್ಸಾಧ್ಯ ಅನ್ನುವ ಬಗ್ಗೆ ಅಥವಾ ಅಲ್ಲಿನ ಕೂಪ ಎಷ್ಟು ಬಲವಾಗಿದೆ ಎಂತಲೇ ಹೇಳುತ್ತಾ‌ಇಂದಿನ ಕೊಳೆಗೇರಿಗಳೂ ಸಹ ಹೇಗೆ ಚದರಡಿಗೆ ಬೆಲೆ ಕೇಳುತ್ತಾ ಬೆಳೆದಿವೆ ಅನ್ನುವ ವಾಸ್ತವ ಚಿತ್ರಣ ಕೊಡುತ್ತದೆ. ಇವೂ ಕೂಡ ಟ್ರೈನ್‌ಸ್ಪಾಟಿಂಗ್‌ನಷ್ಟೇ ವಾಸ್ತವ. (ಸಿನೆಮ್ಯಾಟಿಕ್ ಅಂಶಗಳನ್ನು ನಾನು ಹೋಲಿಸುತ್ತಿಲ್ಲ)

ಸ್ಲಮ್‌ಡಾಗ್‌ನ ಕಲಾವಂತಿಕೆಯ ಬಗ್ಗೆ ಯಾವ ಸಂದೇಹ ಇಲ್ಲದಿದ್ದರೂ ಇದು ಮುಂದಿಡುವ ಒಬ್ಬ ಕೊಳೆಗೇರಿಯ ಹುಡುಗ ತನ್ನ ಬದುಕಿನಿಂದಲೇ ಈ ಸ್ಪರ್ಧೆಯನ್ನು ಯನ್ನು ಗೆಲ್ಲುವ ಪ್ರಶ್ನೆಗಳಿಗೆ ಉತ್ತರ ಹೇಳುವಷ್ಟು ವಿವೇಕವನ್ನು ಪಡೆದಿರುವ ಅಂಶ ಒಂದು ಧನಾತ್ಮಕ ಫ್ಯಾಂಟಸಿಯ ರೂಪಕವಾಗಬಹುದೇ ಹೊರತು ವಾಸ್ತವದಲ್ಲಿ ಅಲ್ಲ. ಇಂಥಾ ರೂಪಕಗಳ ಬಗ್ಗೆಯೂ ನಂಬಿಕೆ ಲಂಕೇಶರಿಗಾಗಲೀ ಅಗ್ನಿ ಶ್ರೀಧರ್‌ರಿಗಾಗಲೀ ಇಲ್ಲ. ಹಾಗಾಗಿ ಕೊಳೆಗೇರಿಗಳ ನೈತಿಕ ಸಾಮಾಜಿಕ ಅಥವಾ ದೈನಿಕದ ಉದ್ಧಾರದ ಕೆಲಸವನ್ನು ತಮ್ಮ ಕೃತಿಗಳು ಮಾಡುತ್ತವೆ ಅನ್ನುವ ನಂಬಿಕೆಯೂ ಅವರಿಗಿಲ್ಲ. ಟ್ರೈನ್‌ಸ್ಪಾಟಿಂಗ್ ಚಿತ್ರಿಸುವಾಗ ಪ್ರಾಯಶಃ ಡ್ಯಾನಿ ಬಾಯ್ಲ್‌ಗೂ ಇರಲಿಲ್ಲವೇನೋ. ಅವರ ಬದುಕನ್ನು ನಮ್ಮ ಮುಂದೆ ಇಡುವುದಷ್ಟೇ ಇವರ ಕೆಲಸ.

ಅನುಭವಜನ್ಯವಾಗಿ ಬರಲೀ ಅಥವಾ ಅದೊಂದು ಕಲ್ಪಿತ ಕಥೆಯಾಗಲೀ, ವಾಸ್ತವವಾದೀ ಲೇಖಕರುಗಳ/ನಿರ್ದೇಶಕರುಗಳ ಈ ಕ್ರೀಟಿಕಲ್ ಇನ್‌ಸೈಡರ್ ಗುಣ ಸ್ಲಮ್‌ಡಾಗ್ ಗಿರುವ ಒಂದು ಸಾಧ್ಯತೆಯನ್ನೇ ಅನುಮಾನದಿಂದ ನೋಡುತ್ತದೆ. ಇಲ್ಲಿ ಯಾವ ರೀತಿಯ ಸಿನೆಮ್ಯಾಟಿಕ್ ಜಸ್ಟೀಸ್‌ಗೆ ಜಾಗವಿಲ್ಲ. ಅಕ್ಕ ಕಾದಂಬರಿಯಲ್ಲಿ ಕ್ಯಾತ ಅನಾಥಾಶ್ರಮದ ಲೆಕ್ಕದ ಪುಸ್ತಕ ಮಾತ್ರ ಬರೆಯುತ್ತಾನೆ, ದೇವೀರಿ ಸೂಳೆಯಾಗುತ್ತಾಳೆ. ಪದ್ದಿ ಮೇಕಪ್ ಮಾಡಿಕೊಂಡು ಹೊಸಾ ಸಿನೆಮಾದ ಅವಕಾಶಕ್ಕಾಗಿ ಕಾಯುತ್ತಿದ್ದಾಳೆ. ಸ್ಲಮ್‌ಬಾಲ ತಾನು ನಂಬಿದ ಪೋಲೀಸ್ ಅಧಿಕಾರಿಯಿಂದಲೇ ಹತನಾಗುತ್ತಾನೆ. ಇಲ್ಲಿ ಕ್ಯಾತ ದೇವೀರಿಯರಿಗೆ ಕಾಮನೆಗಳು, ಆಕಾಂಕ್ಷೆಗಳು ಇವೆಯೇ ಹೊರತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯಾವುದೇ ಮಾರ್ಗವಿಲ್ಲ. ಪ್ರಾಯಶಃ ಅದು ವಾಸ್ತವ ಕೂಡ,

ಈಗ ನಾವು ಸ್ಲಂಡಾಗ್ ಮಿಲಿಯನೇರ್ ಅನ್ನು ನೋಡುತ್ತಿರುವುದೂ, ಕೊಂಡಾಡುತ್ತಿರುವುದೂ ಕೂಡ ಇಂಥದೇ ಒಂದು willing suspension of disbelief ನಲ್ಲಿಯೇ ಅಲ್ಲವಾ? ಅಥವಾ ಈ ಚಿತ್ರ ನಮ್ಮ ಮುಂದಿಡುವ ಇಚ್ಛಾಶಕ್ತಿ ಅಥವಾ ಹೋಪ್‌ಗೆ ನಿರ್ದೇಶಕನ ಅಥವಾ ಚಿತ್ರದ ಇತರೇ ಅವಗುಣಗಳನ್ನು ಮರೆಸಿಬಿಡುವ ಶಕ್ತಿ ಇದೆಯಾ?

ಅಥವಾ ಡ್ಯಾನಿ ಸರಿಯಾದ ಸಮಯದಲ್ಲಿ ಸರಿಯಾದ ಕಡೆ ಸರಿಯಾದ ಸಿನೆಮಾ ನಿರ್ಮಿಸುವ ಜಾಣನಾ?

1 comment:

  1. "ಟ್ರೈನ್‌ಸ್ಪಾಟಿಂಗ್" ಮೂವಿ ನೋಡ್ತಾ ಇದ್ರೆ ವಾ೦ತಿ ಬರುವ ಹಾಗೆ ಆಗುತ್ತದೆ. ಡ್ರಗ್ಸ್ ಅಡಿಕ್ಟ್ ಸಿನೆಮಾಗಳಲ್ಲಿ "ರಿಕ್ವೀಮ್ ಫೋರ್ ಡ್ರೀಮ್" ಕೂಡ ತು೦ಬಾ ಸ್ಟ್ರೋ೦ಗ್ ಆಗಿದೆ.

    ReplyDelete